Monday, August 31, 2020

ಕೊರೊನಾ ಕಾಲದ ಮದುವೆ

 


ಕೊರೊನಾ  ಕಾಲದ ವಿವಾಹ

======================

ಕಾಲಾಯ ತಸ್ಮೆ ನಮಃ ಎಂದು ಈ ಕೊರೊನಾ  ದುರಿತ ಕಾಲದ ಹೊಸ  ಜೀವನ ಕ್ರಮಕ್ಕೆ “ ಅಯ್ಯೋ ಏನ್ ಕರ್ಮ ಬಂತಪ್ಪಾ “ ಎಂದು ನಿಟ್ಟುಸಿರಿನಿಂದಲೆ  ಹೊಂದಿಕೊಳ್ಳುತ್ತಿದ್ದೇವೆ .ನಮ್ಮ ನಿತ್ಯದ ಚಟುವಟಿಕೆಗಳು ,ಮಕ್ಕಳ ಶಿಕ್ಷಣ , ಸಭೆ ಸಮಾರಂಭ, ಸುತ್ತಾಟ, ವಾಕಿಂಗು,  ಜಿಮ್, ಎಲ್ಲದಕ್ಕೂ ಹಲವಾರು ನಿರ್ಬಂಧಗಳನ್ನು ವಿಧಿಸಿ ಸರ್ವಾಂತರ್ಯಾಮಿಯಾಗಿ ಅಟ್ಟಹಾಸಗೈಯ್ಯುತ್ತಿರುವ ಕೊರೊನ ತಣ್ಣಗೆ ಮನೆಯಲ್ಲೆ  ಕೂರೋಣ ಅನ್ನುವಂತೆ ಮಾಡಿದೆ .  

ಇನ್ನು ಇದರ ಭೀತಿಯಿಂದ ಇಡಿ ದೇಶವೆ ಲಾಕ್ ಡೌನ್ ಆಗಿ ಎಲ್ಲಾ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಿತ್ತು .  ಹಾಗಾಗಿ ಮೊದಲೆ ನಕ್ಕಿಯಾದ  ಮದುವೆ ಸಮಾರಂಭಗಳನ್ನು ಲಾಕ್ ಡೌನ್ ನಿಯಮಗಳಿಗನುಸಾರವಾಗಿ  ಹೇಗಪ್ಪಾ ಮಾಡುವುದು ಎನ್ನುವು ಚಿಂತೆ  ಗೊಂದಲ ಬಹಳಷ್ಟು   ಕುಟುಂಬದವರನ್ನು ಕಾಡಿತ್ತು .ಏನೇ ಅನ್ನಿ ಒಂದು ಗಂಡಿಗೊಂದು ಹೆಣ್ಣು ಎಂದು ಅವರನ್ನು  ದಾಂಪತ್ಯ ಜೀವನದಲ್ಲಿ ಬೆಸೆಯುವಂತೆ ಮಾಡುವ ಮದುವೆ ಸ್ವರ್ಗದಲ್ಲೇ ಮೊದಲೆ ನಿಶ್ಚಯವಾಗಿರುತ್ತದೆ .ಆದರೆ ಅ ಬ್ರಹ್ಮಗಂಟನ್ನು (ಬಿಗಿಯಾಗಿ ) ಹಾಕಿದ ಆ  ಬ್ರಹ್ಮ ತನ್ನ ಕೆಲಸ ಮುಗಿಯಿತು , ಇನ್ನು  ಮದುವೆಯನ್ನು ಯಾವ ಕಾಲದಲ್ಲಾದರೂ   ಮಾಡಿಕೊಳ್ಳಿ ಎಂದು ಕೈ ತೊಳೆದುಕೊಂಡು ಬಿಟ್ಟಿರುತ್ತಾನೆ! . ಹಾಗಾಗಿ  ವಿವಾಹ  ಮುಹೂರ್ತಗಳು ಆರೋ ಎಂಟೋ ತಿಂಗಳ ಕೆಳಗೆ ಪೂರ್ವ ನಿರ್ಧಾರಿತವಾಗಿದ್ದು,  ಜೋಡಿಗಳು ತಮ್ಮ ಆಸೆಯಂತೆ ಅದ್ಧೂರಿಯಾಗಿ  “marry “  ಆಗಲೂ ಬಿಡದಂತಾ ಮಹಾಮಾರಿ ದಾಳಿಯಿಡುತ್ತದೆ ಎಂದು   ಯಾರು ಸಹ ಕನಸು-ಮನಸಿನಲ್ಲೂ ಸಹ ಎಣಿಸಿರಲಿಕ್ಕಿಲ್ಲ !

ಇಂಥ ಒಂದು ಗೊಂದಲದ ಪರಿಸ್ಥತಿ ಪೂನಾದಲ್ಲಿದ್ದ ನನ್ನ ಕಸಿನ್ ಸರಳಾ ಮನೆಯಲ್ಲೂ ಉಂಟಾಗಿತ್ತು .ಅವಳ ಏಕೈಕ ಸುಪುತ್ರಿಯ ಮದುವೆಗೆ ಎಷ್ಟೆಲ್ಲಾ ತಯಾರಿ ನಡೆಸಿ  ಅದ್ಧೂರಿಯಾಗಿ ಮಾಡುವ ಕನಸು ಕಂಡಿದ್ದಳು .ಈ ಕಡೆ ಹೆಣ್ಣಿನ ಕಡೆ ಬಳಗದವಳಾಗಿ ನಾನು ಸಹ ಅವರಿಗಿಂತ ಜೋರಾಗಿ ಮದುವೆಯಲ್ಲಿ ಮಿಂಚಲು ದುಪ್ಪಟ್ಟು  ರೇಟು ತೆತ್ತು ನವೀನ ಮಾದರಿ ಡೀಸೈನರ್ ಬ್ಲೌಸು  , ಒಡವೆಗಳನ್ನು ಸೆಟ್ ಮಾಡಿಕೊಂಡು ಕುಳಿತಿದ್ದೆ .  

ಆಗಲೆ ಕೊರೊನ ವಕ್ಕರಿಸಿ ಲಾಕ್ ಡೌನ್ ಶುರುವಾಗಿ  ಪಯಣ ನಿಷೇಧ ಜಾರಿಯಾಗಿ  ಮದುವೆಯಲ್ಲಿ ಪಾಲ್ಗೊಳ್ಳುವ  ಉಮೇದಿನಲ್ಲಿ  ಆಗಸದಲ್ಲಿ ಹಾರಾಡುತ್ತಿದ್ದ ನನ್ನ ಮೂಡು ಸರ್ರೆಂದು ಗ್ರೌಂಡ್ ಜೀರೋಗೆ ಇಳಿಯಿತು! . ಗ್ರೌಂಡು ಬಿಡಿ ಆಕಾಶ ಮಾರ್ಗದಲ್ಲಿ ಹಾರಿ ಹೋಗಲೂ ಸಾಧ್ಯವಿರಲಿಲ್ಲ .ಆಗಿನ ಪರಿಸ್ಥತಿಯಲ್ಲಿ ಮನೆಯಲ್ಲಿದ್ದವರೇ ಮಹಾಶೂರ ಹೊರಗೆ ಬಿದ್ದರೆ ಹರೋಹರ ಎನ್ನುವಂತಿತ್ತು  , ಮದುವೆಗೆ  ನೂರಾರು ಜನನ್ನು ಆಹ್ವಾನಿಸಿ ಗ್ರ್ಯಾಂಡಾಗಿ ಮಾಡುವ ಕನಸು ಕಂಡಾಕೆಗೆ ಸರ್ಕಾರದ ಮಾರ್ಗಸೂಚಿಗನುಸಾರವಾಗಿ  ವಧು- ವರನ ಕಡೆಯವರು ತಲಾ ಇಪ್ಪತ್ತೈದೇ ಮಂದಿಯನ್ನು ಆಹ್ವಾನಿಸುವ ಷರತ್ತು ಮಾತ್ರ ಆಕೆಗೆ ದೊಡ್ಡ ಸವಾಲಾಯಿತು . ಅದೆ ಊರಿನಲ್ಲಿದ್ದ ಆಕೆಯ  ಹತ್ತಿರದ ನೆಂಟರಲ್ಲಿ   ಎಲ್ಲರೂ ಪರಮಾಪ್ತರೆ ! ಯಾರನ್ನು ಕರೆಯುವುದು ಯಾರನ್ನು ಬಿಡುವುದು ಎನ್ನುವ ಗೊಂದಲದಲ್ಲಿದ್ದಾಗ “  ಸರಳಾ! ಒಂದು ಕೆಲಸ ಮಾಡು .ನಿಮ್ಮೂರಿನಲ್ಲಿ ಇರುವ ಬಂಧುಗಳ ಹೆಸರನ್ನೆಲ್ಲ ಲಿಸ್ಟ್ ಮಾಡಿ  ಲಕ್ಕಿ  ಡಿಪ್ ಎತ್ತಿ ಬಿಡು “ ಎಂದು ನಾನು ಬಿಟ್ಟಿ ಸಲಹೆ ಕೂಡ ಕೊಟ್ಟಿದ್ದೆ!  ಅಂತೂ ಗುರು ಹಿರಿಯರ ಆಶೀರ್ವಾದ ಅಷ್ಟೇ ಅಲ್ಲ ಜಿಲ್ಲಾಧಿಕಾರಿಯ ಅನುಮತಿಯೊಂದಿಗೆ  ಹಳೆಯ ಕಾಲದ ಮದುವೆಗಳಂತೆ ಮನೆಯ ಮುಂದೆ ಚಪ್ಪರ ಹಾಕಿ ಬಾಗಿಲಿಗೆ ಮಾವಿನ ತೋರಣ ಹೂವಿನಲಂಕಾರದೊಂದಿಗೆ  ಬ್ಯಾಂಡ್ ಬಾಜಾ ಬಾರಾತ್ಗಳ ಅಬ್ಬರವಿಲ್ಲದ ಸರಳವಾಗಿ  ಮದುವೆ ಕಾರ್ಯವನ್ನು ಮಾಡಲು ತೀರ್ಮಾನಿಸಿದರು . ನವ ಜೋಡಿಗಳು ಪ್ರೀ  ವೆಡ್ಡಿಂಗ್ ಶೂಟಿಗಾಗಿ ಮಾಡುವ ಖರ್ಚನ್ನು ಬಡ ಕಾರ್ಮಿಕರ ಊಟೋಪಚಾರಕ್ಕೆ ದೇಣಿಗೆ ನೀಡಿ ಮಾದರಿಯಾದರು .

ಇನ್ನು  ಮದುವೆಯ ದಿನ  “ ಅಯ್ಯೋ ಎಂಥ ಚಂದದ ಸಮಾರಂಭ ಕೈ ತಪ್ಪಿ ಹೋಯಿತಲ್ಲ “ ಎಂದು ನನಗೆ ಒಂದು ಕ್ಷಣ ಅನಿಸಿದರೂ   ಮುಂಜಾನೆಯಿಂದಲೇ ಆರಂಭವಾದ ಸಂಭ್ರಮದ ಕಾರ್ಯಕ್ರಮವನ್ನು ಮನೆಯಲ್ಲೆ ಕುಳಿತು ಆನ್ ಲೈನಿನಲ್ಲೇ  ನೋಡಿ ಕಣ್ಣು ತುಂಬಿಕೊಳ್ಳುತ್ತಾ ಸ್ನಾನ ಮಾಡುವುದನ್ನೂ ಮರೆತು ಕುಳಿತಿದ್ದೆ ! .ಹನ್ನೆರೆಡು ಗಂಟೆಯ ಅಭಿಜಿನ್ ಮುಹೂರ್ತದಲ್ಲಿ ಕೈಯಲ್ಲಿ ಇಟ್ಟುಕೊಂಡ ಅಕ್ಕಿಕಾಳನ್ನು ಲ್ಯಾಪ್ಟಾಪ್ ತಲೆಯ ಮೇಲೆ ಹಾಕಿ ವಧು ವರರನ್ನು ಅಶೀರ್ವದಿಸಿದ್ದಾಯಿತು . ಅಲ್ಲಿ ಘಮಘಮಿಸುವ ಭೂರಿ ಭೋಜನವಾದರೆ ಅಂದು ವರ್ಕ್ ಫ್ರಂ ಹೋಂನಲ್ಲಿದ್ದ ಎಜಮಾನರೆ ಗೊಣಗಿಕೊಂಡು ಅನ್ನಾ  ಸಾರು ಮಾಡಿ  ನನ್ನನ್ನು ಊಟಕ್ಕೆಬ್ಬಿಸಿದ್ದರು .!

ಅದೊಂದು ಕಾಲವಿತ್ತು (ಈಗ ನಾಲ್ಕೈದು   ತಿಂಗಳ ಕೆಳಗಷ್ಟೇ ) .ನಮ್ಮ ಬಂಧು ಮಿತ್ರರ ವೈಭವೋಪೇತ ವಿವಾಹ ದೃಶ್ಯಾವಳಿಗಳು ಕಣ್ಣ ಮುಂದೆ ಕುಣಿದು ಕೆಲ ಹೊತ್ತು  ಫ್ಲಾಶ್ ಬ್ಯಾಕಿನಲ್ಲಿ ಸುತ್ತಾಡಿದ ಮನಸ್ಸು  ಪ್ರಫುಲ್ಲವಾಯಿತು . ಈ ಕೊರೊನ ವಕ್ಕರಸಿದಾಗಿನಿಂದ ನಮ್ಮ ಕೈ ಅಡುಗೆಯನ್ನೆ ತಿಂದು ನಮ್ಮ  ನಾಲಿಗೆ ಬದಲಾವಣೆ ಕೇಳುತ್ತಿವೆ .ಹೋಟಲ್  ಪಾರ್ಟಿಗಳಿಗೆ ಕೊಕ್ಕೆ ಬಿದ್ದು  ಒಂದು ಮದುವೆ ಊಟವಾದರೂ  ಸವಿಯುವ ಆಸೆ ಸಣ್ಣಗೆ ಗರಿ ಬಿಚ್ಚುತ್ತಿತ್ತು . ಆದರೆ ಸಂಘಜೀವಿಯಾಗಿದ್ದ ನಮ್ಮನ್ನು ಈ ಮಹಾಮಾರಿ  ಏಕಾಂಗಿಯಾಗಿಯನ್ನಾಗಿ ಮಾಡುವುದಷ್ಟೇ ಅಲ್ಲದೆ ಹೊರಗೆ ಹೋದರೂ ಸಹ ಒಬ್ಬರೊಬ್ಬರ  ಅಂಗಿ ತಾಕದಂತೆ ದೂರ ನಿಲ್ಲುವ ಪರಿಸ್ಥತಿ ಬಂದೆರಗಿದೆ .!

“ಇವನಾರವ ಇವನಾರವ ಎಂದು ಎಣಿಸದಿರಯ್ಯ , ಇವ ನಮ್ಮವ ಇವ ನಮ್ಮವನೆಂದು ಎಣಿಸಯ್ಯ “ ಎಂದು ಪೂಜ್ಯ  ಬಸವಣ್ಣವರು ಎಲ್ಲರನ್ನು ಸಮಾನರಂತೆ , ತಮ್ಮವರೆಂದೆ ಆತ್ಮೀಯ ಭಾವದಲ್ಲಿ ನೋಡುವ ವಿಶಾಲ ದೃಷ್ಟಿ ಬೆಳೆಸಿಕೊಳ್ಳಲು  ಹಿತ -ವಚನ ನುಡಿದಿದ್ದರು .ಆದರೆ ಈಗ ನಮ್ಮ ಆಪ್ತ ವಲಯದವರನ್ನೇ ಶಂಕಿತನೋ ಸೊಂಕಿತನೋ ಎಂದು ಸಂದೇಹದಿಂದ  ನೋಡುವ ವೈರಸ್ ಯುಗ ಸೃಷ್ಟಿಯಾಗಿರುವುದು ಮಾತ್ರ ಅತಿ ದುರದೃಷ್ಟಕರ .

ಇರಲಿ ಮತ್ತೆ  ವಿವಾಹ ವಿಷಯಕ್ಕೆ ಬಂದರೆ  ಶ್ರಾವಣ ಮಾಸದಿಂದ  ಭರ್ಜರಿ ಮದುವೆ ಸೀಸನ್ ಆರಂಭವಾದರೂ ಕೊರೊನ ಭಾರತದಿಂದ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಮರಳಿದ ನಂತರವಷ್ಟೆ ಮನೆಯ ಮಂಗಳ ಕಾರ್ಯಗಳನ್ನು  ಮಾಡಲು ನಿರ್ಧರಿಸಿ  , ನಿಗದಿಯಾದ ಮದುವೆ ದಿನಾಂಕಗಳನ್ನು ಮುಂದಕ್ಕೆ ಹಾಕಿದ ಎಷ್ಟೋ ಕುಟುಂಬಗಳು  ಒಂದೆಡೆಯಾದರೆ “ಕೊರೊನ ಸೆ  ಮತ್ ಡರೋನಾ “ ಎಂದು  ನಿಶ್ಚಯಿಸಿದ ದಿನಾಂಕದಲ್ಲೇ ಸರ್ಕಾರದ ನಿಯಮಗಳಿಗನುಸಾರವಾಗಿ ಕೆಲ  ನವ ಜೋಡಿಗಳು ಸಂತೋಷದಿಂದಲೆ ಸಿಂಪಲ್ಲಾಗಿ ಮದುವೆ ಕಾರ್ಯಗಳನ್ನಾಚರಿಸಿಕೊಂಡು  ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ . ಲಾಕ್ ಡೌನ್ ಸಮಯದಲ್ಲಿ ಉತ್ತರದ ಭಾರತದಲ್ಲಿ ಜರುಗಿದ ಒಂದು ಸರಳ ವಿವಾಹದಲ್ಲಿ ಕುಟುಂಬದ ಸದಸ್ಯರೆಲ್ಲ  ಸಾಮಾಜಿಕ  ಅಂತರ ಕಾಯ್ದುಕೊಂಡು , ಮಾಸ್ಕಧಾರಿಗಳಾದ ವಧು-ವರರು ಆರು ಅಡಿ  ಅಂತರದಿಂದಲೆ ನಿಂತು ದೊಣ್ಣೆ ಸಹಾಯದಿಂದ (ದೊಣ್ಣೆ ನಾಯಕ ನಾಯಕಿಯಾರಾಗಿ ) ವರಮಾಲೆಗಳನ್ನು ಬದಲಾಯಿಸ್ಕೊಂಡು ಸುದ್ದಿಯಾಗಿದ್ದರು .!

ಮೊದಲಿಂದಲೂ ಮದುವೆ ಮನೆಯ ಕಾರ್ಯಕ್ರಮ ಎಂದರೆ ಅವರಷ್ಟೇ ಸಂಭ್ರಮ ಖುಷಿಯಿಂದ ಪಾಲ್ಗೊಳ್ಳುವ ನನ್ನ ಸ್ವಭಾವಕ್ಕೆ  ಇಂಥಹ ದಿಗ್ಬಂಧನ ಕಾಲದಲ್ಲೆ ಬೇರೆ ಊರುಗಳಲ್ಲಿ ಜರುಗಿದ  ನನ್ನ ನೆಂಟರ ಎರಡು ಮೂರು ವಿವಾಹಗಳು  ಕೈ ತಪ್ಪಿಹೋಗಿದ್ದು ಬಹಳ ಬೇಸರ ತರಿಸಿತ್ತು . ಹ್ಯಾಂಗರಿನಲ್ಲಿದ್ದ ನನ್ನ ರೇಶಿಮೆ ಸೀರೆಗಳಿಗೂ  ಸಹ ಕತ್ತಲ ಕಪಾಟಿನಲ್ಲಿ ನೇತಾಡಿ ಸಾಕಾಗಿತ್ತು  .ಇಂತಹ ಸಮಯದಲ್ಲಿ ಬೆಳಕಿನ ಆಶಾ ಕಿರಣವೊಂದು ತೂರಿ ಬಂದಿತ್ತು .!

ನನ್ನ ಅತ್ಯಾಪ್ತ ಬಾಲ್ಯ ಸ್ನೇಹಿತೆ ಮೀರಾ  ತನ್ನ  ಮಗನ ವಿವಾಹ ಸಮಾರಂಭಕ್ಕಾಗಿ  ಆಹ್ವಾನಿಸಿ  ನಮ್ಮನ್ನು ವೀಐಪಿ  ಲೆವೆಲ್ಲಿಗೆ ಏರಿಸಿಬಿಟ್ಟಳು ! . ಕಾರಣ ವಧು ಹಾಗು ವರನ ಕಡೆಯವರಿಗೆ ತಲಾ ಇಪ್ಪತ್ತೈದೇ ಮಂದಿಯನ್ನು ಸೇರಿಸಿ ಮಾಡುವ ಮದುವೆಯಲ್ಲಿ ವರನ ಕಡೆಯಿಂದ ನಮಗೂ ಆಹ್ವಾನ  ಸಿಕ್ಕಿದ್ದು ನಮ್ಬಿಬ್ಬರ ಅಮೂಲ್ಯ ಸ್ನೇಹಕ್ಕೊಂದು ನಿದರ್ಶನೆವೆ ಸರಿ !  ನಮ್ಮನ್ನು  ಆಹ್ವಾನಿಸಿ ತಮ್ಮ ಬಂಧು ಮಿತ್ರರಲ್ಲಿ ಯಾರಿಬ್ಬರ ಆಮಂತ್ರಣಕಕ್ಕೆ   ಕೊಕ್ಕೆ ಹಾಕಿದ್ದಳೋ ಏನೋ ಪಾಪ .!  

ಮೀರಾ  ಎಜಮಾನರು , ಅಷ್ಟೇ ಅಲ್ಲ ಹೊಸ ಅಳಿಯ ದೇವರು ಕೂಡಾ  ವೈದ್ಯರು . ಅವರ ಅಪಾರ್ಟ್ಮೆಂಟ್ನಲ್ಲಿದ್ದ ಪಾರ್ಟಿ ಹಾಲಿನಲ್ಲೆ  ಮದುವೆ ಸಮರೋಪ  ಏರ್ಪಡಿಸಲಾಗಿತ್ತು , ಮೊದಲೇ ವೈದ್ಯ ಕುಟುಂಬದ ಮದುವೆ  ಹಾಗಾಗಿ ಆಸ್ಪತ್ರೆ ವಾತಾವರಣ ನೆನಪಿಸುವಂತೆ  ಅತಿ ಎಚ್ಚರಿಕೆಯ ನಿಯಮಾವಳಿಗಳನ್ನು  ಪಾಲಿಸಲಾಗಿತ್ತು  .

ಚಂದದ ಅಲಂಕಾರದಲ್ಲಿ ನಗು ಮುಖದ ತರುಣಿಯರು ಗುಲಾಬಿ ಹಿಡಿದ ಸ್ವಾಗತಿಸುವ ದೃಶ್ಯಗಳ ಬದಲು ಪ್ರವೇಶ ದ್ವಾರದಲ್ಲಿ ಹಣೆಗೆ ಪಿಸ್ತೂಲ್ ಹಿಡಿದ ಗನ್ ಮ್ಯಾನ್ಗಳಂತೆ ನೀಲಿ ಸುರಕ್ಷಾ ಗೌನಿನಲ್ಲಿ (ಪೀಪೀಯಿ) ಸನ್ನದ್ಧರಾದ ವೈದ್ಯ ಲೋಕವೇ ಅಲ್ಲಿ ಹಾಜರಿದ್ದು ಮೊದಲು ದೇಹದ ತಾಪಮಾನ ಪರೀಕ್ಷಿಸುವ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡು   ತಣ್ಣನೆಯ ಜೂಸಿಗಾಗಿ  ಹಿಡಿದ ಕೈ ಮೇಲೆ ಒಂದು ಹನಿ ಸ್ಯಾನಿಟೈಸರ್ ಉಜ್ಜಿಕೊಂಡು  ಕೈ ತೊಳೆದು ಒಳಗೆ  ಬಾ ಆಮಂತ್ರಿತನೆ “ ಎನ್ನುವ ಎಚ್ಚರಿಕೆಯ  ಸ್ವಾಗತ ಕ್ರಮಗಳನ್ನು ಮಾಡಿಸಿಕೊಳ್ಳುತ್ತಾ ಒಳಗಡಿ ಇಟ್ಟೆವು ! .

ಸರಳವಾದ ಸಮಾರಂಭದಲ್ಲಿ ವೇದಿಕೆಯ ಮೇಲೆ ಬೀಗರು ಬಂಧು ಮಿತ್ರರು ಒಂದಡಿ ಅಂತರ ಕಾಯಿದು ಕೊಂಡೆ ಸರಭರ ಓಡಾಡುತ್ತಿದ್ದರೆ,  ವಧು ವರರು ತಮ್ಮ ಉಡುಪಿಗೆ ಮ್ಯಾಚ್ ಆಗುವಂತ ಚಂದದ ಕುಸುರಿ ವಿನ್ಯಾಸದ   ಮಾಸ್ಕ್ ಧರಿಸಿ ತಮ್ಮ ವದನಾರವಿಂದಗಳನ್ನು ಅರ್ಧದಷ್ಟು ಮರೆಮಾಚಿ ಕಣ್ಣುಗಳ ಭಾಷೆಯಲ್ಲೇ ಮಾತನಾಡುತ್ತ ಕುಳಿತಿದ್ದರು . ಆರಡಿ ದೂರದಲ್ಲಿ  ಕುಳಿತ  ಶಾಸ್ತ್ರಿಗಳ ಮಂತ್ರ ಪಠನೆ ಒಮ್ಮೊಮ್ಮೆ ಜೋರಾಗಿ ಬಾಯಿಂದ ಮಾಸ್ಕ್ ಜಾರಿ  ಮತ್ತೆ ಅಡ್ಜೆಸ್ಟ್ ಆಗಿ ಕೂರುತಿತ್ತು . 

ತಾಳಿ ಕಟ್ಟುವ ವೇಳೆಗೆ ಸರಿಯಾಗಿ  ವಾಲಗ,  ಶೆಹನಾಯಿ, ಡೋಲುಗಳು ಉತ್ತರ ಹಾಗು ದಕ್ಷಿಣ ಭಾರತದ ಜುಗಲಬಂದಿ  ವಾದ್ಯ ಸಂಗೀತದಂತೆ ಜೋರಾಗಿ ಲೌಡ್ ಸ್ಪೀಕರಿನಲ್ಲಿ  ಮೊಳಗಿದವು ! ನಾವುಗಳು ಕೈಯಲ್ಲಿ ಹಿಡಿದ ಮಂತ್ರಾಕ್ಷತೆಯನ್ನು ದೂರದಿಂದಲೆ ರೊಯ್ಯನೆ ನವ  ಜೋಡಿಗಳ ಮೇಲೆ ಬೀಸಿ ಆಶೀರ್ವಾದಿಸಿದೆವು . 

ವರಮಾಲೆಯನ್ನು ಬದಲಾಯಿಸಿಕೊಳ್ಳುವ ಮುಖ್ಯ ಶಾಸ್ತ್ರದ ನಂತರ ಪಬ್ಲಿಕ್ ಡೀಮಾಂಡ್ ಮೇರೆಗೆ   ವಧು-ವರರು ಮತ್ತೆ ನವೀನ  ಮಾಸ್ಕಗಳನ್ನು ಒಬ್ಬರಿಗೊಬ್ಬರಿ ತೊಡಿಸಿದಾಗ . ವೀಡಿಯೋ ಕ್ಯಾಮರಾಗಳು, ಮೊಬೈಲ್ಗಳು  ಏಕಕಾಲಕ್ಕೆ ಕ್ಲಿಕ್ಕಿಸಿ ಹರ್ಷೋಲ್ಲಾಸದ ಕೂಗು ಹಾಕಿ  ಚಪ್ಪಳೆಗಳನ್ನು ಹೊಡೆದು ನಾವೆಲ್ಲ ಈ ನವೀನ  ಮಾಸ್ಕ್ ಧಾರಣೆ ಸಂಪ್ರದಾಯಕ್ಕೆ ತುಂಬು ಮನಸ್ಸಿನಿಂದ ಸ್ವಾಗತಿಸಿದೆವು !.

ಅಷ್ಟರಲ್ಲಿ ಭೋಜನಶಾಲೆಯಿಂದ ಘಮ ಘಮಿಸುವ ರಸದೌತಣದ ಮೂಗಿಗೆ ಸುವಾಸನೆ ಅಡರಿ   ತನ್ನಷ್ಟಕ್ಕೆ  ತಾನೆ   ನಮ್ಮ ಕಾಲುಗಳು ಊಟದ ಮೇಜಿನತ್ತ  ಸಾಗಿ (ಒಂದಡಿ ಅಂತರದಲ್ಲಿ ಹಾಕಿದ   )ಎಲೆ ಹಿಡಿದು ಕುಳಿತ್ತಿದ್ದೆವು .ನೀರಿನ ಬಾಟಲ್ ಜೊತೆಗೆ ಪುಟ್ಟ ಸ್ಯಾನಿಟೈಸರ್ ಕೂಡಾ ಕೂತಿತ್ತು. ಅಂತೂ ಪಟ್ಟಾಗಿ ಬ್ಯಾಂಡ್ ಬಾರಿಸಲು ನಮ್ಮ ಬಾಯಿಗಳು ಮಾಸ್ಕ್ ಮುಕ್ತವಾದವು .ತರಾವರಿ ಪಕ್ವಾನಗಳನ್ನು ಆನಂದದಿಂದ  ಸವಿಯುತ್ತಿರುವಾಗ  ಇವರ ಮುಖ ವಿಚಿತ್ರವಾಗಿ ಮಾಡಿ ನನ್ನತ್ತ ನೋಡಿದರು . ಅವರ ರಾಜ್ಕುಮಾರ್ ಮೂಗು ಏನೋ ಸೂಚನೆ ಕೊಟ್ಟಂತೆ ಅನಿಸಿತು. ಆದರೆ ಕ್ಷಣಾರ್ಧದಲ್ಲೇ  ಜೋರಾದ

 “ ಆಕ್ಷೀ “ ಎನ್ನುವ ಅನಾಹುತ ನಡದೆ ಹೋಯಿತು ! ಇಷ್ಟು ಸಾಲದೆಂಬಂತೆ ಪುಳಿಯೋಗರೆಯಲ್ಲಿದ್ದ ಒಣಮೆಣಸಿನ  ಖಾರ ಏರಿ ನಾನು ಖೊಕ್ ಖೊಕ್ ಎಂದು ಕೆಮ್ಮಿದ್ದು , ಇಂತ  ಎಡವಟ್ಟುಗಳು ಏಕಕಾಲಕ್ಕೆ ನಡೆದಾಗ  ನಮ್ಮ ಅಕ್ಕಪಕ್ಕದವರು ಅಕ್ಷರಶಃ  ನಮ್ಮನ್ನು ಬಾಂಬ್ ಇಟ್ಟ ಉಗ್ರವಾದಿಗಳಂತೆ ಭಯದಿಂದ ನೋಡಿದರು  . ಅವರ ವಿಲಕ್ಷಣ ನೋಟಗಳಿಗೆ ನನಗಂತೂ ನಾಚಿಕೆಯಿಂದ  ಭೂಮಿ ಬಾಯಿ ಬಿಡಬಾರದೆ ಎನಿಸಿತು . ಪಾಪ ಮಜ್ಜಿಗೆ ಅನ್ನಕ್ಕೂ ಕಾಯದೆ ನನ್ನ ಪಕ್ಕ ಕುಳಿತ ಅಜ್ಜಾ ಅಜ್ಜಿ ಲಗುಬಗನೆ ಮಾಸ್ಕ್ ಏರಿಸ್ಕೊಂಡು ಮೆಲ್ಲಗೆ ಪರಾರಿ ಆಗಿಬಿಡೋದೇ !?.

“ ದೇವರೇ ಏನ್ ಕಾಲ ಬಂತಪ್ಪ  ! ಅಯ್ಯೋ ! ಮೈ ಕ್ಯಾ ಕರೋನಾ “ ಎನ್ನುವಂತಾಗಿ ಇವರ ಮೂಗಿನ ಕಡೆ ಸಿಟ್ಟಿನಿಂದ ನೋಡಿದೆ. ಅವರು ಸಹ ಅದೇ ನೋಟವನ್ನು ವಾಪಸ್ ಕೊಟ್ಟರು .! ಛೆ ಪಾಪ ! ನಮ್ಮಿಂದಾಗಿ  ಆ ವೃದ್ದ ದಂಪತಿಗಳು   ಸರಿಯಾಗಿ ಊಟ ಸಹ ಮಾಡಲಿಲ್ಲವಲ್ಲ ಎನ್ನುವ  ಅಪರಾಧಿ  ಪ್ರಜ್ಞೆಯಿಂದ ಬೇಗನೆ ಊಟ ಮುಗಿಸಿ ಹೊರ ನಡೆದೆವು  .

ಮುಖಗವಸು ಕೈಗವಸು ಹಾಕಿದ  ವ್ಯಕ್ತಿಯೊಬ್ಬರು ತಟ್ಟೆ ಹಿಡಿದು ನಿಂತಿದ್ದರು .ಪಾನ್ ಸವಿಯುವ ಆಸೆಯಲ್ಲಿ  ನಾನು ಆ ಕಡೆ ನುಗ್ಗಿದ್ದಾಗ ತಟ್ಟೆಯಲ್ಲಿದ್ದ  ಸುಗಂಧ ಭರಿತವಾದ ನಾನಾ  ಬಗೆಯ  ಸ್ಯಾನಿಟೈಸರಗಳು ! ಮೊದಲೇ ವೈದ್ಯ ಕುಟುಂಬದ ಮದುವೆ ಸಮಾರಂಭ . ಸೋಪಿನನಲ್ಲೊಮ್ಮೆ ಸ್ಯಾನಿಟೈಸರನಲ್ಲೊಮ್ಮೆ ನಮ್ಮ ಕೈಗಳನ್ನು ತೊಳೆಸಿ ಕೊರೊನ ಮುಕ್ತ ಹಸ್ತಲಾಘವಕಾಗಿ ನಮ್ಮನ್ನು  ತಯಾರು ಮಾಡಿದ್ದರು  .

ನವದಂಪತಿಗಳು  ಮತ್ತೆ ಉಡುಪು ಬದಲಾಯಿಸಿ ( ಮ್ಯಾಚಿಂಗ್ ಮಾಸ್ಕ್ , ಗ್ಲೌಸ್ )  ಧರಿಸಿ  ಆರಕ್ಷತೆಗೆ  ಸೋಫಾಸೀನರಾಗಿದ್ದರು . ಆನ್ಲೈನಿನಲ್ಲೇ  ಉಡುಗೊರೆ ಕೊಟ್ಟ ಬಹಳಷ್ಟು ಮಂದಿ ಸರತಿ ಸಾಲಿನಲ್ಲಿ  (ಅಂತರ ಕಾಪಾಡಿಕೊಳ್ಳುತ್ತ ) ಶುಭ ಹಾರೈಸಿದರು . ಕೆಲವು ಮಂದಿ ನಿರ್ಗಮಿಸಿದ ಬಳಿಕ ಹುಡುಗ ಹುಡುಗಿಯರ  ಸ್ನೇಹಿತರ ದಂಡು ನಗು ಗಲಾಟೆಯೆಬ್ಬಿಸುತ್ತ , ಅವರವರ  ವೇಳೆಗನುಸಾರವಾಗಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಬರುವಂತೆ ಆಗಮಿಸಿದರು .. ಕೆಲವು ಉತ್ಸಾಹಿಗಳು   ಕೊರೊನ ಕಾಲವನ್ನೇ ಮರೆತು ಮಾಮೂಲಿನಂತೆ ವಧು ವರರ ಕೈ ಕುಲಕಲು ಧಾವಿಸಿದಾಗ    ವೈದ್ಯ ಲೋಕದ ಅಪರಾವತಾರದಂತೆ ನಿಂತ ಹಿರಿ  (ಕಿರಿ ಕಿರಿ ) ಬೀಗರು ಅವರನ್ನು  ಎಚ್ಚರಿಸಿ ಹಿಂದಕ್ಕೆ ಕಳಿಸಿದಾಗಂತೂ ನನಗೆ ನಗು ತಡೆಯಲಾಗಲ್ಲಿಲ್ಲ  !.

ಉತ್ಸವ ಮೂರ್ತಿಗಳಂತೆ ಕಣ್ಣಲ್ಲೇ ನಗುತ್ತಾ ನಿಂತ ನವ ಜೋಡಿಗಳು ಹಿರಿಯರಿಗೆ  ನಮಸ್ಕಾರ ಮುದ್ರೆ, ಗೆಳಯರಿಗೆ ಅಪ್ಪಿಕೊಳ್ಳುವಂತೆ ಅಭಿನಯ  , ತೀರ ಆಪ್ತರಿಗೆ ಗಾಳಿಯಲ್ಲೆ ಫ್ರೆಂಚ್ ಕಿಸ್ಗಳನ್ನು ರವಾನಿಸುತ್ತ ನಾನಾ ಭಾವಾಭಿವ್ಯಕಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸುತ್ತಿರುವುದನ್ನು ನಾವು ಕಣ್ಣತುಂಬ ನೋಡಿಕೊಂಡು ದೂರದಿಂದಲೆ ಶುಭ ಹಾರೈಸಿ  ಮೀರಾಳಿಗೂ ಬಾಯಿತುಂಬಾ ಶುಭಾಶಯಗಳನ್ನು ತಿಳಿಸಿ    ತಾಂಬೂಲ ಇಟ್ಟ ಟೇಬಲ್ ಬಳಿ ನಡೆದೆವು . ಕವರಿನಲ್ಲಿ ಎಲೆ ಅಡಿಕೆ ತೆಂಗಿನಕಾಯಿ ಜೊತೆ ಮಹಿಳೆಯರಿಗೆಲ್ಲ ಚಂದದ ಮಾಸ್ಕ್ ಇಟ್ಟಿದ್ದನ್ನು ಕಂಡು “ ರೀ ಈ ಪರ್ಪಲ್ ಕಲರ್ ಮಾಸ್ಕ್ ಎಷ್ಟು ಚೆನ್ನಾಗಿದೆ ನೋಡ್ರಿ . ಇದಕ್ಕೆ ಮ್ಯಾಚ್ ಆಗುವಂತ ಸೀರೆ ತೊಗೋಬೇಕು  “ ಎಂದಾಗ ಇವರು ನಗುತ್ತಾ  “ ಅಯ್ಯೋ! ಇನ್ನು ಇದೊಂದು ಬಾಕಿ ಇತ್ತು ನೋಡು , ಆದರೆ  ನಾವೇನು ಪಾಪ ಮಾಡಿದ್ವಿ ?ನಿಮಗೆಲ್ಲ ಮಾಸ್ಕು , ಗಂಡಸರಿಗೆ ಒಂದು ಜೊತೆ ಗ್ಲೌಸಾದರೂ  ಉಡುಗೊರೆ ಕೊಡ ಬಹುದಿತ್ತಲ್ಲ  “ ತಮಾಷೆ ಮಾಡಿದರು .ಒಟ್ಟಿನಲ್ಲಿ  ಕೊರೊನಾ ಮಹಾಮಾರಿ  ಮದುವೆ ಹಾಗು ಇತರ ಶುಭ ಸಮಾರಂಭಗಳ  ಹೆಸರಿನಲ್ಲಿ ಆಗುತ್ತಿದ್ದ   ಆಡಂಬರ, ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೂ ಇಂತಾ ಕಾರ್ಯಕ್ರಮಗಳು  ಸುಲಲಿತವಾಗಿ ಹಾಗು ಸುರಕ್ಷಿತವಾಗಿ ಆಚರಿಸುವ ವಿಧಾನಕ್ಕೆ ನಾಂದಿ ಹಾಡುತ್ತಿದೆ . ಆದರೆ  “ ಹೆಜ್ಜೆ ಹೆಜ್ಜೆಗೂ ಸೊಂಕು ತಟ್ಟುವ ಭೀತಿಯಿಂದ ಇಡಿ ವಿಶ್ವಕ್ಕೆ  ಮಂಕು  ಬಡಿಸುತ್ತಿರುವ ಈ   ಕೊರೊನಾ ವೈರಿ ತೊಲಗಿ  ಜಗತ್ತು ಸಹಜ ಸ್ಥತಿಗೆ ಮರಳುವುದೆಂದೋ  “ ಎಂದು ನಿಟ್ಟುಸಿರಿಡುತ್ತ   ಮುನ್ನೆಡೆದೆವು. !

ಆರತಿ ಘಟಿಕಾರ್

 

 

 

 

 

 

 

2 comments :

  1. ಮದುವೆಯಂತೂ ಆಯಿತಲ್ಲ; ಇನ್ನು ಅವರ mask-ಚಂದ್ರಕ್ಕಾಗಿ ನಮ್ಮ ಶುಭಾಶಯಗಳು.

    ReplyDelete
  2. haha ಹೌದು ಸರ್ , ಆಗಲಾದರೂ ಮಾಸ್ಕ್ ನಿಂದ ಮುಕ್ತರಾಗುವ ಅವಕಾಶ ಸಿಗಲಿ ಎನ್ನುವ ಹಾರೈಕೆ ಅವರಿಗೆ .

    ReplyDelete