Friday, October 9, 2020

ಹುಡುಕಾಟದ ತಲ್ಲಣಗಳು

 


ಅಂದು ಭಾನುವಾರ ಲಗುಬಗೆಯಿಂದ ತಿಂಡಿ ತಿನಸುಗಳ ಮುಗಿಸಿ ಅಡುಗೆ ಕೋಣೆಯಿಂದ ಲಾಗೌಟಾಗಿ ಹೊರ ಬಂದೆ . ಮಧ್ಯಾಹ್ನ  ಹನ್ನೆರಡರ ಸಮಯಕ್ಕೆ ನನ್ನ ಅಚ್ಚುಮೆಚ್ಚಿನ  ರಿಯಾಲಿಟಿ ಷೋ  ಮರುಪ್ರಸಾರಕ್ಕೆ  ಕ್ಷಣಗಣನೆಯಾಗುತ್ತಿತ್ತು    ನನ್ನ ಕಣ್ಣುಗಳು ಮಾತ್ರ ಕಾತುರದಿಂದ ಅತ್ತಿತ್ತ ನೋಡುತ್ತಾ  ಮತ್ತೆ ನಮ್ಮನೆಯಲ್ಲೂ ಅದೆ ಸೀನು ರಿಪೀಟ್ ಆಗುತಿತ್ತು .“ ಛೆ! ನನ್ನ ಕನ್ನಡಕ ಹುಡುಕೋಗಾದ್ರು ಇನ್ನೊಂದು ಕನ್ನಡಕ ಇರಬೇಕಿತ್ತು , ಬೆಳಿಗ್ಗೆ ಇಲ್ಲೇ ಎಲ್ಲೋ ಇಟ್ಟಿದ್ದೆ ಹಾಳಾದ್ದು ಸರಿಯಾದ ಟೈಮಿಗೆ ಸಿಗಲ್ಲ “  ಎಂದು ಪಾಪದ್ದು ! ನನ್ನ ಕನ್ನಡಕ ದೋಷಾರೋಪಣೆ ಮಾಡಿಸಿಕೊಂಡು ಯಾವ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿತ್ತೋ ಏನೋ , ಅಂತೂ ಇಂತು ಎಜಮಾನರ  ಕಣ್ಣಿಗೆ (ಅಪರೂಪವಾಗಿ) ಗೋಚರಿಸಿ ನನ್ನ ಬಾಯಿಗೆ ಬ್ರೇಕ್ ಬಿದ್ದು ವಾತಾವರಣ ಶಾಂತವಾಯಿತು !

ಬಳಸಿದ ಸಾಮಾನು ,ವಸ್ತುಗಳನ್ನು  ಕೆಲಸವಾದ  ಬಳಿಕ ಅದದೆ  ಜಾಗಕ್ಕೆ ಸೇರಿಸುವ  ಕ್ರಮವನ್ನು ನಮ್ಮ ತಂದೆಯವರು  ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದನ್ನು  ಬಾಲ್ಯದಿಂದಲೇ ನೋಡುತ್ತಾ ಬಂದಿದ್ದೇನೆ . ಅವರ ಸ್ಟೇಷನರಿ ಡಬ್ಬದಿಂದ ಒಂದು ಗುಂಡು ಸೂಜಿ ಕೆಳಗಿಳಿದು ಬಂದು ಬಳಸದೆ ಬಿಸಾಡಿದ್ದು ಕಂಡರೂ  ಸಾಕು  ಅದನ್ನು ಮುತುವರ್ಜಿಯಿಂದ ಮಗುವಿನಂತೆ ಹಿಡಿದುಕೊಂಡು ಮಹಡಿ ಮೇಲಿರುವ  ಅವರ ಕೋಣೆಗೆ ಸಾಗಿ ಐವತ್ತು  ವರ್ಷದ ಇತಿಹಾಸವಿರುವ ಅವರ ಮೇಜಿನ ಮೂರನೆಯ ಡ್ರಾಯರಿನಲ್ಲಿರುವ ಡಬ್ಬಕ್ಕೆ ಸೇರಿಸಿ,  ಕಳೆದುಕೊಳ್ಳುವ ಆತಂಕದಲ್ಲಿದ್ದ ಆ ಗುಂಡು ಸೂಜಿಯ  ಸ್ಥಾನ/ಮಾನಗಳನ್ನು ಕಾಪಾಡುತ್ತಿದ್ದರು ಎಂದರೆ ನೀವು ನಂಬಲೇಬೇಕು !

ಅಷ್ಟೇ ಅಲ್ಲ  ಪ್ರಮುಖ ಪತ್ರಿಕಾ ಕಟ್ಟಿಂಗುಗಳು , ೮೩ನೆ ಇಸವಿಯ ತಾವುಕೊಂಡ ಮಿಕ್ಸರ್ ಗ್ರೈಂಡರ್ಗಳ   ಬ್ರೋಶರ್ಗಳಿಂದ  ಹಿಡಿದು  ಪೈಂಟ್ ಸಾಮನುಗಳು , ಪ್ಲಂಬರ್ ಪೆಟ್ಟಿಗೆ , ಸ್ಕ್ರೂ ಡ್ರೈವರ್ ಬಾಕ್ಸ್ ಎಂದೆಲ್ಲ ವ್ಯವಸ್ಥ್ತಿತವಾಗಿ ವಸ್ತುಗಳನ್ನು ಅಚ್ಚುಕಟ್ಟಾಗಿ  ಇಟ್ಟು ಬೇಕೆಂದಾಗ ತಕ್ಷಣಕ್ಕೆ ಅವುಗಳನ್ನು ಒದಗಿಸುವ ರೀತಿಗೆ ಮೆಚ್ಚಿ(ಬೆಚ್ಚಿ)  ಅಮ್ಮ ತಮ್ಮ ಸೂಜಿ ದಾರದ ಡಬ್ಬಿ ಸಹ ಅವರ ಸುಪರ್ಧಿಗೆ ನೀಡಿ ಹಾಯಾಗಿದ್ದದ್ದು ಅನಿಸುತ್ತದೆ .ಮೈಲುಗಟ್ಟಲೆ ಹಬ್ಬಿಹೋದ ಅಪ್ಪನ  ಶಿಸ್ತು ಪರಿಪಾಲನೆಯಲ್ಲಿ  ಒಂದು ಇಂಚಿನಷ್ಟೇ  ಮಕ್ಕಳಿಗೆ ಬಳುವಳಿಯಾಗಿ ಹಂಚಿ ಹೋಗಿದೆಯೇನೋ ಎನ್ನುವ ಭಾವನೆ ನನ್ನದು . ಇನ್ನು ಏಳೇಳು ಜನ್ಮಕ್ಕೂ ಅವರಂತ ಶಿಸ್ತು ನನಗೆ ಬಂದೀತು ಎನ್ನುವ ಭರವಸೆ ನನಗಿಲ್ಲ .

ಇನ್ನು ನಾನು ಹೆಚ್ಚಾಗಿ ಹುಡುಕಾಡುವ ವಸ್ತು ನನ್ನ ಕನ್ನಡಕವೆ ಎಂದು  ಹೇಳಲು ನನಗಾವ ಸಂಚೋಚವೂ ಇಲ್ಲ ಬಿಡಿ  ! ಅವಶ್ಯಕತೆಗನುಸಾರವಾಗಿ  ಅಲೆಮಾರಿ ಜನಾಂಗದಂತಿರುವ ಇದನ್ನು ಒಂದು  ಕಡೆ ಸ್ಥಾಪಿಸಿ ಗುಡಿ ಕಟ್ಟಲಂತೂ ಸಾಧ್ಯವೆ ಇಲ್ಲ  ಎನ್ನುವುದು ನನ್ನ ಸಮಜಾಯಿಷಿ . ಇನ್ನು  ಬೇಕೆಂದಾಗ ಕಣ್ಣಿಗೆ  ಬೀಳದೆ ವಿನಾಕಾರಣ ಬೈಗುಳ  ತಿನ್ನುವ  ಈ ಹುಡುಕಾಟದ  ಪಟ್ಟಿಗೆ ಇತರ ವಸ್ತುಗಳೊಂದಿಗೆ  ನಮ್ಮ ಮನೆಯ ಎರಡು ರೀಮೊಟ್ಗಲೂ  ಸೇರಿಕೊಳ್ಳುತ್ತವೆ .

ಡಿಶ್ ಹಾಗು ಟೀವೀ ರೀಮೋಟುಗಳನ್ನು  ಅವಳಿ -ಜವಳಿಗಳಂತೆ   ಟೀಪಾಯಿ ಮೇಲೆ  ಒಟ್ಟಿಗೆ ಇಡುವುದು ನನ್ನ ಅಭ್ಯಾಸ . ಇದು ದಿನ ಕಳೆದಂತೆ ಮನೆಯ ಸದಸ್ಯರ ಕೈಯಲ್ಲಿ ಹ್ಯಾಂಡ್ ಬಾಲಿನಂತೆ ಆಡಿಸಿಕೊಂಡು ನನ್ನ ಮಗನ ದಿಂಬಿನ ಕೆಳಗೆ ಒಮ್ಮೊಮ್ಮೆ ಬಚ್ಚಿಟ್ಟುಕೊಂಡಿರುತ್ತದೆ ! ಎಜಮಾನರ ಚಾಳೀಸು , ನನ್ನ ಅಡುಗೆ ಮನೆ ಕತ್ತರಿ ಇವುಗಳಿಗೆ ಆಗಾಗ ಕಾಲು ಹುಟ್ಟಿ ಬರುವುದು , ಮತ್ತೆ ನಾವು ಊಹಿಸಲಾರದ ನಿಗೂಡ  ಜಾಗಳಲ್ಲಿ ಇವು ಕಾಣಿಸಿಕೊಳ್ಳುವುದು ನಮ್ಮನೆಯಲ್ಲಿ ನಡೆಯುವ  ಸಾಮಾನ್ಯ  ದೃಶ್ಯ .

ಏನೇ ಅನ್ನಿ  ಈ ಸಣ್ಣ ಪುಟ್ಟ ವಸ್ತುಗಳನ್ನು   ಹುಡುಕುವುದು ಒಂದು ರೀತಿ ನಡೆಯಲು ಕಲಿಯುತ್ತಿರುವ ವರ್ಷದ ಕಂದ ಬಿದ್ದು ಎದ್ದು ಮತ್ತೆ ಪುಟ್ಟ ಹೆಜ್ಜೆ ಹಾಕುವಂತೆ , ಗೋಡೆ ಹಿಂದೆ ಬಚ್ಚಿಟ್ಟುಕೊಂಡು ಕಣ್ಣ ಮುಚ್ಚಾಲೆ ಆಡುವ  ಪುಟಾಣಿ ಹುಡುಗರನ್ನು ಹುಡುಕುವಂತೆಯೆ ಥೇಟ್ ಎನ್ನುವ ಅನಿಸಿಕೆ ನನ್ನದು , ಕಾರಣ ಈ ಹುಡುಕಾಟ ಖಚಿತತೆಯ  ಚೌಕಟ್ಟಿನಲ್ಲೇ ಸಾಗಿ ಹುಡುಕಿಯೆ ತೀರುತ್ತೇನೆ ಎನ್ನುವ ಮನೋಭಾವದಲ್ಲಿ ಸಾಗುವಂತದ್ದು. ಕತ್ತೆ ತಪ್ಪಿಸಿಕೊಂಡರೆ  ಮೋಟು ಗೋಡೆಯ ಹಿಂದೆ ಅನ್ನೋಲ್ವೆ ಹಾಗೆ  !. 

ಆದರೆ ಈ ಸೀಮಿತ ಹುಡುಕಾಟಗಳ ಮುಖ್ಯ ಕಾರಣ ನಾವುಗಳು ಆಡುವ ( ಅಶಿಸ್ತಿನ ) ಹುಡುಗಾಟವೆ  ಎನ್ನಬಹುದು   . ಆದರೆ ನನ್ನ ಕಣ್ಣುಗಳು ಮಾತ್ರ ಯಾವ ಸ್ಕಾನಿಂಗ ಮಶೀನಿಗೂ ಕಮ್ಮಿ ಇಲ್ಲ ಎನ್ನುವುದು  ನಮ್ಮ ಎಜಮಾನರ ಅಂಬೊಣಿಕೆ . ಅವರು ಅಲ್ಲಿ ಇಲ್ಲಿ  ಮರೆತಿಟ್ಟ  ಸಾಮನುಗಳನ್ನು ನಾನು ಶೆರ್ಲಾಕ್ ಹೋಮ್ಸ್ನಂತೆ  ಕೆಲವೊಮ್ಮೆ ಕೂತಲ್ಲೇ ಅದರ ಜಾಗವನ್ನು ಊಹಿಸಿ ಇವರ ಪರದಾಟಕ್ಕೆ ಬ್ರೇಕ್ ಹಾಕಿದ್ದಿದೆ  ! ಆಗೆಲ್ಲ ಅವರ ಮನದಲ್ಲಿ ಮೂಡಿರಬಹುದಾದ  ಮೆಚ್ಚುಗೆ /ಶಭಾಶಗಿರಿಯನ್ನೂ ಸಹ ನನಗೆ ಊಹಿಸಲು ಬಿಟ್ಟು ಬಿಡುತ್ತಾರೆ ಅನ್ನಿ  .

ಇನು  ಅಕಸ್ಮಾತಾಗಿ  ನಮ್ಮ ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ,ಫ್ರಿಡ್ಜು  , ಲ್ಯಾಪ್ಟಾಪ್ ,ವಾಶಿಂಗ್ ಮಶೀನುಗಳು ಕೆಟ್ಟು ರಿಪೇರಿಗೆ ಬಂದಾಗ ನಮ್ಮ ಮನೆಯಲ್ಲಿ ಹುಡುಕಾಟದ ಸಂಚಲನವೇ ಸೃಷ್ಟಿಯಾಗುವುದುಂಟು . ಅವು ವರ್ಷದ ಒಳಗಿನ ಕೂಸುಗಳಾಗಿದ್ದರಂತೂ ಅದರ  ರಶೀದಿ, ಬಿಲ್ಲು ವಾರಂಟಿ ಕಾರ್ಡುಗಳಿಗೆ ಚಿನ್ನದಷ್ಟೇ ಡೀಮ್ಯಾಂಡು .!

ಆಗೆಲ್ಲ ವಿಶ್ವಾಸದ ಬುಗ್ಗೆಯಾಗಿ ಕ್ಷಣಾರ್ಧದಲ್ಲೇ ಅದರ ಬಿಲ್ಲು  ಹುಡುಕಿ ತರುವೇನೆಂದು ತಮ್ಮ ಕೋಣೆಗೆ ಬಾಣದಂತೆ  ಧಾವಿಸುವ  ಎಜಮಾನರ ಹುಡುಕಾಟ ಸ್ವಲ್ಪ ಹೊತ್ತಿನ ನಂತರ ಬೃಹತ್ ಕಾರ್ಯಾಚರಣೆಯ ರೂಪ ಪಡೆದುಕೊಳ್ಳುತ್ತದೆ  . ಕಾರಣ ಆರಂಭ ಶೂರತ್ವ ಮೆರೆದು ಇಂಥ ಬಿಲ್ಲು ರಶೀದಿ ಗ್ಯಾರೆಂಟಿ ಕಾರ್ಡುಗಳನ್ನು  ಅತಿ ಜಾಗರೂಕವಾಗಿ ಇಟ್ಟುಕೊಳ್ಳುವ ಜವಾಬ್ದಾರಿಯನ್ನು  ಅವರೆ  ಹೊತ್ತುಕೊಂಡಿದ್ದರೂ ಅವಶ್ಯಕತೆ ಎದುರಾದಾಗಲೆ   ಮಹಾಭಾರತದ ಕರ್ಣಾರ್ಜುನ ಯುದ್ಧದಲ್ಲಿ  ಕರ್ಣ ದಿವ್ಯಾಸ್ತ್ರವನ್ನು  ಪ್ರಯೋಗಿಸುವ ಮಂತ್ರ ಮರೆತಂತೆ  “ ಎಲ್ಲಾ ರಶೀದಿಗಳನ್ನು ಒಂದು ಕಡೆ ಸರಿಯಾಗಿ ಇಟ್ಟಿದ್ದೆ  , ಆದರೆ ಇವತ್ತೆ ಅದು ನೆನಪಾಗ್ತಾ ಇಲ್ಲಾ ಕಣೆ “ ಎನ್ನುವ ಸಬೂಬು ಕೊಟ್ಟು ಪಾರಾಗಲು ನೋಡುತ್ತಾರೆ.

ಏನೇ ಅನ್ನಿ ಗ್ಯಾರೆಂಟಿ ಕಾರ್ಡ್ಗಳು ಸಿಗುವ ಗ್ಯಾರೆಂಟಿ ಇಲ್ಲದಿದ್ದರೂ  ಈ ಬೃಹತ್ ಶೋಧಕಾರ್ಯದ ಅಂಗವಾಗಿ  ಬ್ರಹ್ಮಾಂಡದಂತೆ ಬಾಯ್ತೆರೆದುಕೊಂಡ ಬ್ರೀಫ್ಕೇಸುಗಳು  , ಫೈಲುಗಳು , ಚಲ್ಲಾಪಿಲ್ಲಿಯಾಗಿ ಹರಡಿಕೊಂಡ  ರಾಶಿ ಪೇಪರುಗಳಿಗೆ  ನಮ್ಮ ಮಂಚವೆ  ವೇದಿಕೆಯಾಗಿ ಅವರ ಕಪಾಟು ಸಹ ಸ್ವಚ್ಛ ಅಭಿಯಾನದಲ್ಲಿ ಪಾಲ್ಗೂಂಡು ಧನ್ಯತಾ ಭಾವದಲ್ಲಿ ಬೀಗುತ್ತದೆ . ಆದರೆ  ತಾಸು ಗಟ್ಟಲೆ ಕಳೆದರೂ  ಇದು ಅಂತಿಮ ಘಟ್ಟ ತಲುಪುವ ಸೂಚನಯೆ ಸಿಗದಾಗ   ರವಿ ಕಾಣದನ್ನು  ಕವಿ ಕಂಡ ಎಂಬಂತೆ (ಎಜಮಾನರ  ನಾಮಧ್ಯೇಯ  ರವಿ ಆಗಿರುವುದರಿಂದ ಮತ್ತು  ನಾನು ಸ್ವಯಂ ಘೋಷಿತ ಕವಿಯಾದ್ದರಿಂದ )  ಆ ಸರ್ಚ್ ಆಪರೇಶನ್ನಲ್ಲಿ ನಾನೂ ಯಥಾ ಶಕ್ತಿ ಕೈ ಜೋಡಿಸಿ  ( ನನ್ನ ) ಬುದ್ಧಿ ಮತ್ತು ಕಣ್ಣುಗಳ  ಚುರುಕಾಗಿ   ನಡೆಸುವ ಮಂಥನದಲ್ಲಿ ನಮ್ಮ ಅದೃಷ್ಟಕ್ಕೊ ಏನೋ ಹಿಂದೆ  ಎಷ್ಟೋ   ಬಾರಿ  ಹುಡುಕಿ ಸಿಗದೆ ಇದ್ದ ಹತ್ತು ಹಲವಾರು ಬಿಲ್ಲುಗಳು , ವಾರೆಂಟಿ ಕಾರ್ಡುಗಳು , ಹಳೆ ಫೋಟೋಗಳು , ಸಾಲು ಸಾಲು (ಬಚ್ಚಿಟ್ಟ ) ಡೈರಿಗಳು ಮೇಲೆದ್ದು,  ಅಚ್ಚರಿ ಹುಟ್ಟಿಸುವುದೂ ಉಂಟು  ! ಆಗೆಲ್ಲ   ಕಳೆದು ಹೋದ ಮಾಲು ಹುಡುಕಿ ಕೊಟ್ಟ  ಪೋಲಿಸಪ್ಪನನ್ನು  ನೋಡುವಂತೆ ಇವರು ನನ್ನನ್ನು ಕೃತಾರ್ಥ ಭಾವದಲ್ಲಿ ಕಂಡಾಗ  ನನ್ನ ಈ ಸರ್ಚ್ ಎಂಜೀನ್ ಪ್ರತಿಭೆಗೆ  ನಾನೆ ಬೆನ್ನು ತಟ್ಟಿಕೊಳ್ಳುವಷ್ಟು ಆನಂದ ಉಕ್ಕಿ ಬರುತ್ತದೆ .

ಇನ್ನು ಶಿಸ್ತು ಹಾಗು ಮರೆವು ಇವೆರಡೂ ಗುಣ ಲಕ್ಷಣಗಳು  ಜಂಟಿಯಾಗಿ ನಮ್ಮ ಮೇಲೆ ಆವಾಹನೆ ಮಾಡಿಕೊಂಡರಂತೂ ಮುಗಿಯಿತು ! ಸದಾ ಏನಾದರೊಂದು ಹುಡುಕಾಟದಲ್ಲಿ ನಾವು  ಕ್ರಿಯಾಶೀಲರಾಗಿ ಇರುತ್ತೇವೆ  ಎನ್ನುವ ಸಕಾರಾತ್ಮಕ ಚಂತನೆ ನನ್ನದು  .

 ಈ ವಿಷಯದಲ್ಲಿ ನನ್ನ ಮಕ್ಕಳಿಬ್ಬರೂ ಅಪ್ಪನನ್ನೆ  ಹೋಲುತ್ತಾರೆ  . “ ನಥಿಂಗ್ ಈಸ್ ಲಾಸ್ಟ್ ಟಿಲ್ ಮಾಮ್ ಕಾಂಟ್ ಫೈಂಡ್ ಇಟ್ “ ಎನ್ನುವ ಉಕ್ತಿಯಂತೆ  ಅಮ್ಮ ಹುಡುಕುವವರೆಗೂ ಯಾವುದೆ ವಸ್ತು ಕಳೆಯಲು ಸಾಧ್ಯವಿಲ್ಲ  ಎಂದು  ಅಮ್ಮನ ಹುಡುಕುವ  ಪ್ರತಿಭೆಯನ್ನು ಬಲವಾಗಿ ನಂಬಿಕೊಂಡು ಹಾಯಾಗಿರುವ ಮಕ್ಕಳಿವರು .

ಪುಸ್ತಕ, ಪೆನ್ನು , ಬೆಲ್ಟು . ಇಯರ್  ಫೋನು , ಕಾಲೇಜು ಐಡೆಂಟಿಟಿ ಕಾರ್ಡು  ಒಂದೆ ಎರಡೇ ,! ಇವುಗಳಲ್ಲಿ  ಯಾವುದಾದರೂ ಒಂದನ್ನು ನನ್ನ ಸುಪುತ್ರರು  ಹುಡುಕಾಡುವ ದೃಶ್ಯ ಸದಾ ಇದ್ದೆ ಇರುತ್ತದೆ . (ಸರಿಯಾಗಿ ) ಇಟ್ಟ ಜಾಗದಿಂದಲೆ ತನ್ನಂತಾನೆ ಅವು  ಕಣ್ಮರೆಯಾಗಿವೆ  ಎನ್ನುವುದವರ  ಗೊಣಗಾಟ,!  ಅವರ ಬೇಕಾಬಿಟ್ಟಿಯ  ಹುಡುಕಾಟಕ್ಕೆ ನನಗೆ ಸಿಟ್ಟು ಉಕ್ಕಿ   “ ಹೌದೌದು ಅವಕ್ಕೂ  ವಸ್ತು ದೋಷ ಬಡಿದು  ನೀವು ನೈರುತ್ಯಕ್ಕೆ ಇಟ್ಟದ್ದು ದಿಕ್ಕು ಬದಲಿಸಿ ಆಗ್ನೇಯ ದಿಕ್ಕಿಗೆ  ಹೋಗಿರಬೇಕು ಆಲ್ವಾ,? ಬರೀ ಕೂತ  ಕಡೆಯಲ್ಲೇ ಕಣ್ಣು ಆಕಡೆ ಈಕಡೆ  ತಿರುಗಿಸಿ ಸಿಗ್ತಾ ಇಲ್ಲ ಅಂತ ಕೈ ತೊಳೆಕೊಂಡು ಬಿಡ್ತ್ತೀರಿ ! ನಾನಿದ್ದೀನಲ್ಲ  ಹುಡುಕಿ ಕೊಡೋಕೆ  “ ನನ್ನ ಕೂಗಾಟ ಅಡುಗೆ ಮನೆಯಿಂದಲೆ ಪ್ರತಿಧ್ವನಿಸುತ್ತದೆ ..

ಏನೇ ಅನ್ನಿ  ಆ ಹುಸಿ ಕೋಪದಲ್ಲೂ ಅಮ್ಮಂದಿರಿಗೆ  ಮಾಂತ್ರಿಕ ಶಕ್ತಿ ಉಕ್ಕಿ ಹರಿದು ಕಣ್ಣಾ ಮುಚ್ಚೆ ಕಾಡೆಗೂಡೆ ಆಡುತ್ತಿದ್ದ ವಸ್ತುಗಳು  ಕ್ಷಣಾರ್ಧದಲ್ಲಿ ಅವಳ ಕೈಲ್ಲಿರುತ್ತದೆ .ಹಾಗಾಗಿಯೆ ಮಕ್ಕಳ ರಬ್ಬರು, ಪೆನ್ಸಿಲ್ , ನೋಟ್ ಬುಕ್ಕಿನಿಂದ ಹಿಡಿದು  ಬೆಳೆದ ಹುಡುಗರ ಸೈಲೆಂಟಾದ  ಮೊಬೈಲು, ಪರ್ಸು, ಗಾಡಿ ಕೀ, ಹೆಣ್ಣು ಮಕ್ಕಳ ಕಿವಿಯೋಲೆ, ಕ್ಲಿಪ್ಪು ಕಾಲೇಜಿಗೆ ಹೊರಡುವ ಸಮಯಕ್ಕೆ ಮ್ಯಾಚಿಂಗ್ ದುಪಟ್ಟಾ ಅಂತೆಲ್ಲಾ  ಹುಡುಕಿ ಕೊಡಲು ಅಮ್ಮನೆ ಬೇಕು .

ನಾವು ದುಬೈ ನಿವಾಸಿಗಳಾಗಿದ್ದಾಗ ಪ್ರತಿ ಬಾರಿ ಮಾಲು ಇತರ ಕಡೆ ಸುತ್ತಾಡಲು ಹೋದಾಗ ಐದಾರು ಅಂತಸ್ತಿನ  ಪಾರ್ಕಿಂಗ್ ಏರಿಯಾದಲ್ಲಿ ನಮ್ಮ ಕಾರು ಪಾರ್ಕ್ ಮಾಡುತ್ತಿದ್ದ ಜೋನು ,ಬ್ಲಾಕುಗಳನ್ನು ನೆನಪಿಟ್ಟುಕೊಳ್ಳುವುದು ಎಷ್ಟೋ ಬಾರಿ  ನಮ್ಮಂತ ಮರೆಗುಳಿಗಳ ನೆನಪಿನ ಶಕ್ತಿಗೆ ಒಂದು ಸವಾಲೆ ಆಗಿರುತಿತ್ತು .ಉದಾ “ಬಿ” ಬ್ಲಾಕ್ ಅಥವಾ ವೆಲ್ವೆಟ್ ಜೋನಿನ ೩೬ನೆ ನಂಬರಿನ  ಸ್ಥಳದಲ್ಲಿ  ಪಾರ್ಕ್ ಮಾಡಿದ್ದರೆ ನಮ್ಮ ಮಾಲ್ ಅಲೆದಾಟ/ಶಾಪಿಂಗ್ ಭರಾಟೆಯೆಲ್ಲ ಮುಗಿದು ಪಾರ್ಕಿಂಗ್ ತಾಣಕ್ಕೆ ಬಂದಾಗಲೆ “ಕಾರ್ ಕಾರ್ ಎಲ್ನೋಡಿ  ಕಾರ್” ಎನ್ನುವಂತಿರುವ ಕಾರೂರಿನ ನಡುವೆ ನಿಂತು ಮತ್ತೆ ನಮ್ಮ ನೆನಪುಗಳನ್ನು ಕೆದಕುತ್ತಿದ್ದೆವು . ನಾನು “ಎ “ ಬ್ಲಾಕ್ ಎಂದೋ ಮಕ್ಕಳು ವೆಲ್ವೆಟ್ ಅಲ್ಲ ಪರ್ಪಲ್ ಜೋನ್ ಎಂದೋ ಇವರಿಗೆ ಗೊಂದಲ ಹುಟ್ಟಿಸಿ  ಕೊನೆಗೆ ನಮ್ಮ ಕಾರು ಅಲ್ಲಿಂದಲೇ ಗೋಚರಿಸಿ ಉಸ್ಸಪ್ಪ ಎಂದು ನಿಟ್ಟುಸಿರು ಬಿಡುತಿದ್ದದ್ದೂ ಉಂಟು . ಒಮ್ಮೆ ಜಗತ್ತಿನ ಅತಿ ದೊಡ್ಡ ಮಾಲು ಎಂಬ ಹೆಗ್ಗಳಿಕೆಯಿದ್ದ ದುಬೈ ಮಾಲಿಗೆ ಸುತ್ತಾಡಲು ಹೋದಾಗ ನಮ್ಮ  ಕಾರು ಪಾರ್ಕ್ ಮಾಡಿದ ಜಾಗ ಮರೆತು ದೊಡ್ಡ ಫಜೀತಿಯಾಗಿ ನಾವು ದಂಪತಿಗಳು ಬೇರೆ ಬೇರೆ ಪಾರ್ಕಿಂಗ್ ಮಹಡಿಯಲ್ಲಿ ನಮ್ಮ ಕಾರಿಗಾಗಿ ಗಂಟೆಗಟ್ಟಲೆ ಅಲೆದಾಡಿ ಕೊನೆಗೆ  ಎಜಮಾನರಿಗೇ ಹುಡುಕಲು  ಮುಕ್ತ ಅವಕಾಶ ಮಾಡಿಕೊಟ್ಟು ನಾನು ಟಾಕ್ಸಿ ಹಿಡಿದು  ಮನೆಗೆ ಹೋಗಿದ್ದೆ .

ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ವಸ್ತುಗಳನ್ನು ಎಲ್ಲೋ ಇಟ್ಟು ಹುಡುಕಾಡುವ ಬೇಜವಾಬ್ದಾರಿ ಮಂದಿಗೆ ಮಾಲು , ಸಿನಿಮಾ ಥೇಟರು  , ವಿಮಾನ ನಿಲ್ದಾಣಗಳಲ್ಲಿ ಕಂಡು ಬರುವ ಲಾಸ್ಟ್ ಅಂಡ್ ಫೌಂಡ್ ಸೆಕ್ಷನ್ಗಳೆ  ಆಪದ್ಬಾಂಧವ ಎನ್ನಬಹುದು  !

ಹೀಗೆ ಒಂದಿಲ್ಲೊಂದು ವಸ್ತುವಿಗಾಗಿ ಹುಡುಕುವ ನಮ್ಮ ಜೀವನಕ್ರಮಕ್ಕೆ ನನ್ನ ಮರೆವಿನ ಪರಮಾವಧಿಗೆ ಹೇಳಿ ಮಾಡಿಸಿದಂತ ಒಂದು ಅಪರೂಪದ  ಪ್ರಸಂಗವನ್ನಿಲ್ಲಿ ನೆನೆಯಲೇಬೇಕು . ಆಗ ಲ್ಯಾಂಡ್ಲೈನಗಳು  ಬೇಡಿಕೆ ಇದ್ದ ಕಾಲದಲ್ಲಿ  ದುಬೈಯಲ್ಲಿ ಈ  ಕರೆ ಬಿಲ್ಕುಲ್ ಉಚಿತವಾಗಿದ್ದು  ನಾವು ಗೆಳತಿಯರು ಒಮ್ಮೆ ಕಾರ್ಡ್ಲೆಸ್ಸ್ ಫೋನ್  ಹಿಡಿದರೆ ಸಾಕು ಮೈ ಮರೆತು ತಾಸುಗಟ್ಟಲೆ ಹರಟುತ್ತ (ಅದರ ಚಾರ್ಜ್ ತೀರುವವರೆಗೂ ) ಮನೆಗೆಲಸವನ್ನು ಒಂದೇ ಕೈಯಲ್ಲಿ  ಮಾಡುವ ನಿಪುಣತೆಯನ್ನು ಪಡೆದವರಾಗಿದ್ದೆವು  . ಒಮ್ಮೆ  ಯಾರಿಗೋ ತಕ್ಷಣ ಕರೆ ಮಾಡಬೇಕೆಂದಾಗ  ನಮ್ಮನೆ  ಕಾರ್ಡ್ಲೆಸ್ ಫೋನ್  ಗಾಯಬ್ ಆಗಿಬಿಟ್ಟಿತು ! . ಆಗ ಮೊಬೈಲ್ ಸಹ ಇಲ್ಲದ ಕಾಲವಾದರಿಂದ ಮನೆಯ ಅಷ್ಟೂ ಮೂಲೆಗಳನ್ನು ಹುಡುಕಿ “ ಹೋದೆಯಾ ದೂರ ಓ ಜೊತೆಗಾರ , ಕರೆ ಮಾಡಲು ಬಂದಾಗ “ ಎಂದು ಇದು ಹೋದದ್ದಾರೂ ಎಲ್ಲಿಗೆ ಎಂದು ಆಶ್ಚರ್ಯಚಿಕತಳಾಗಿದ್ದಾಗ   “ಟ್ರಿನ್ ಟ್ರಿನ್ “ ಎನ್ನುವ ಇಂಪಾದ ಕರೆ ಕೇಳಿಸಿತು. ದ್ವನಿ ಬಂದ ದಿಕ್ಕಿನಲ್ಲಿ ಧಾವಿಸಿ ನೋಡಿದರೆ ನಮ್ಮ ಫ್ರಿಡ್ಜಿನೊಳಗೆ ಒಂದು ಹೊರೆ ಸೊಪ್ಪಿನ ಹಿಂದೆ ತಣ್ಣಗೆ ನಡುಗುತ್ತ ಟ್ರಿಣಗುಟ್ಟುತ್ತಾ ಕುಳಿತ ನನ್ನ  ಕಾರ್ಡ್ಲೆಸ್ ಫೋನು !   ಈ ಮಟ್ಟದ ಮರೆವಿಗೆ ಹಣೆ ಚಚ್ಚಿಕೊಂಡು  ಈ ಅಪರೂಪದ ಪ್ರಸಂಗದ  ತನಿಖೆಗೆ ನಾನೆ ಇಳಿದಾಗ ಫೋನು ಸ್ಟಾಂಡಿನ ಮೇಲೆ   ಟೊಮಾಟೊ ಕಟ್ಟಿಂಗ್  ಟ್ರೆ ಚಾಕುಗಳ ತಂಡ  ನನಗಾಗಿ  ದಾರಿ ಕಾಯುತ್ತಿರುವುದು  ಕಂಡಿತು  ! ಹೀಗೂ  ಉಂಟೆ ಎಂದು ನೀವು ಸಖೇದಾಶ್ಚರ್ಯದಿಂದ ಏರಿಸಿದ ಹುಬ್ಬುಗಳನ್ನು ದಯವಿಟ್ಟು ಇಳಿಸಿ . ಏಕೆಂದರೆ ಇತರ ವಸ್ತುಗಳನ್ನು ಹೇಗೆ ಇಡಲಿ ನನ್ನ ಅಡುಗೆ ಮನೆಯಲ್ಲಿ ಸಾಮನು ,ಪದಾರ್ಥಗಳನ್ನು ಬಹಳ ಅಚ್ಚುಕಟ್ಟಾಗಿ ಹೊಸ ರೀತಿಯಿಂದ ಜೋಡಿಸಿಟ್ಟುಕೊಳ್ಳುವು ನನ್ನದೆ ನಿಯಮಕ್ಕೆ ಬದ್ಧಳಾಗಿ   ಎಷ್ಟೇ ಮನೆ ಬದಲಾಯಿಸಿದರೂ ಅಡುಗೆ ಕೋಣೆಯ ಅಂದದ ಜೋಡಣೆಗೆ ನಾನಾ ಐಡಿಯಾ ಸಾಹಸಗಳನ್ನು  ಮಾಡುತ್ತಿದ್ದೆ   ಅಕಸ್ಮಾತಾಗಿ ಬಂದವರು ಅಡುಗೆಮನೆ ಅಂದವನ್ನು  ಹೊಗಳಿದರಂತೂ ಉತ್ಸಾಹ ಏರಿ   ನಾಲ್ಕು ಕೈ ಇದ್ದವರಂತೆ ಅವರಿಗೆ ಉಪಚಾರ ಮಾಡಿಬಿಡುತ್ತಿದ್ದೆ  ಅಷ್ಟೇ ಅಲ್ಲ ಚಂದವಾಗಿ  ಜೋಡಿಸಿದ ಅಡುಗೆ ಮನೆ ಒಡತಿಯರಿಗೆ ನನ್ನ ಮುಕ್ತ ಕಂಠದ ಹೊಗಳಿಕೆ ಇದ್ದೆ ಇರುತ್ತಿತ್ತು  . ಅಂದಹಾಗೆ ಅಡುಗೆ ಮನೆ ಎಂದಾಗ ಎಜಮಾನರ ಸೋದರತ್ತೆ ತಕ್ಷಣ ನೆನಪಾಗಿ ಬಿಡುತ್ತಾರೆ .

ನಮ್ಮ ವಾರ್ಷಿಕ ರಜೆಗೆ  ಬೆಂಗಳೂರಿಗೆ ಬಂದಾಗ ಈ ಸೋದರತ್ತೆಯ ಮನೆಯಲ್ಲಿ ನಮಗೆಲ್ಲ ಆತ್ಮೀಯವಾದ ಆದರಾತಿಥ್ಯವಿರುತಿತ್ತು   . ಮಕ್ಕಳೆಲ್ಲ ಅಮೇರಿಕಾದಲ್ಲಿ ನೆಲೆಸಿ ಮನಯಲ್ಲಿಬ್ಬರೆ ವಾಸಿಸುವ ಹಿರಿಯ ನಾಗರೀಕ ದಂಪತಿಗಳು .ಮೊದಲ ಬಾರಿ ಅವರ ಮನೆಗೆ  ಭೇಟಿ ಕೊಟ್ಟ ಸಂಭ್ರಮಕ್ಕೆ  ಖುಷಿಯಿಂದ ಟೀ ಜೊತೆ ನನ್ನ ಮಗನಿಗಿಷ್ಟವಾದ ಈರುಳ್ಳಿ ಪಕೋಡ ಮಾಡುವೆ ಎಂದು ನಮ್ಮ ಬಾಯಲ್ಲೂ ನೀರುರಿಸಿದರು . ಎಷ್ಟೊತ್ತಾದರೂ  ಪಕೋಡಾ ಸುಗಂಧ ಮೂಗಿಗಡರದೆ ನಾನೆ ಅಡುಗೆ ಕೋಣೆಯಲ್ಲಿ ಇಣುಕಿದರೆ ಅಸ್ತ್ಯವ್ಯಸ್ಥವಾಗಿ ಹರಡಿಕೊಂಡ ಡಬ್ಬಗಳ ನಡುವೆ ಕಡಲೆ ಹಿಟ್ಟಿನ  ಡಬ್ಬ ಹುಡುಕುವುದರಲ್ಲಿ  ಅತ್ತೆಯವರು ಕಳೆದು ಹೋಗಿದ್ದರು .! “ ಅಯ್ಯೋ ಇಲ್ಲೇ ಈ ನೀಲಿ ಡಬ್ಬದಲ್ಲಿ  ಇಟ್ಟಿದ್ದು ನೆನಪಿದೆ ಕಣೆ ,ಎಲ್ಲೋಯ್ತೋ ಏನೋ, ಶ್ರೀನಿವಾಸ ! ಎಲ್ಲಿದ್ದೆಯೋ ?ನೀನಾದರೂ ಹುಡುಕಿಕೊಡಪ್ಪ !  “ ಎಂದು ಆ ತಿಮ್ಮಪ್ಪನನ್ನೂ ಇಂಥ ಚಿಲ್ಲರೆ ಕೆಲ್ಸಕ್ಕೆ ಕರೆದರೆ  ಅವನು ಬಂದಾನೆಯೇ ? ಅಂತೂ ಅದು ಸಿಗುವ ಸೂಚನೆ ಸಿಗದೆ ಸೋಲೊಪ್ಪಿಕೊಂಡು ಮಗನ ಮುಂದೆ ಟೀ ಬಿಸ್ಕೆಟ್  ಹಿಡಿದರು. ಏನೋ ಪಾಪ! ವಯಸ್ಸಾಗಿ  ಸಾಮಾನು ಅಲ್ಲಿ ಇಲ್ಲಿ ಇಟ್ಟು ಮರೆಯುವುದು ಸ್ವಾಭಾವಿಕವೆಂದು ನಾನು .”ಅತ್ತೆ !ಇರಲಿ ಬಿಡಿ  ನೀವು ರೆಸ್ಟ್ ಮಾಡಿ , ರಾತ್ರಿಯೂಟಕ್ಕೆ ನಾನು ಪುಲಾವ್  ಮಾಡುವೆ “  ಎಂದು ಘೋಷಿಸಿ ಬಿಟ್ಟೆ .!“ ಒಹ್ ಒಳ್ಳೇದಾಯಿತು ಪುಲಾವಿಗೆ ಬೇಕಾದ ಸಾಮಗ್ರಿ ಎಲ್ಲಾ (ಹುಡುಕಿ) ತೊಗೊಳಮ್ಮ   ಎಂದು ಸಂತೋಷದಿಂದ  ಅಡುಗೆ ಕೋಣೆಯನ್ನು  ನನ್ನ ಸುಪರ್ಧಿಗೋಪ್ಪಿಸಿ  ನಿಶ್ಚಿಂತೆಯಿಂದ ಕುಳಿತರು . ನಂತರ ನನ್ನ ಅವಸ್ಥೆ ಹೇಳ ತೀರದು .ಪುಲಾವಿಗೆ ಬೇಕಾದ ಯಾಲಕ್ಕಿ ಸಿಗದೇ ಅನ್ಲಕ್ಕಿಯಾಗಿ ,ಚಕ್ಕೆ ಚಾಲುಕ್ಯ ದೇಶಕ್ಕೂ , ಲವಂಗ  ವಂಗ ದೇಶದಲ್ಲೆಲ್ಲೋ ಹೋಗಿ ನೆಲೆಸಿದ್ದು ಒಂದಾದರೂ ಮಸಾಲೆ ಸಾಮನು ಸಿಗದೇ ಚಿತ್ರಾನ್ನ ಮಾಡಿ ಮಂಗಳ ಹಾಡಿದ್ದೆ .!

ಹೀಗೆ ನಾನು ಎಲ್ಲೇ ಹೋದರು ಹುಡುಕಾಡುವುದು  ತಪ್ಪುವುದಿಲ್ಲ .ಆದರೆ ಜೀವನದ ಕೆಲವು  ಹುಡುಕಾಟಗಳು ಇಷ್ಟು ಸರಳವಾಗಿರದೆ ಅರ್ಥಮಾಡಿಕೊಳ್ಳಲು ವರ್ಷಗಳೇ ಕಳೆಯಬಹುದು . ಬಾಳಿನ  ಪ್ರತಿ ಹಂತದಲ್ಲೂ ಪ್ರೀತಿ ಪ್ರೇಮ ಸುಖ ಸಂತೋಷಗಳನ್ನು ಅರಸುತ್ತ ಸಾಗುವ ನಮಗೆ ಅದರೊಟ್ಟಿಗೆ ಬಂದೆರಗುವ ತವಕ ತಲ್ಲಣಗಳಿಗೆ   ಒಗ್ಗಿಕೊಳ್ಳದೆ ವಿಧಿಯಿಲ್ಲ .ಇವು  ಸಾರ್ವತ್ರಿಕ ಹುಡುಕಾಟಗಳಾದರೆ ವಸ್ತುಗಳನ್ನು ಎಲ್ಲೋ ಮರೆತು ಹುಡುಕಾಡುವ  ರಗಳೆಗಳು , ನಮ್ಮ ಮರೆವು ಅಶಿಸ್ತಿನ ಗುಣ ಸ್ವಭಾವಗಳ ಪರಿಣಾಮವಾಗಿ ಅಗತ್ಯವಾದ ಭೌತಿಕ ವಸ್ತುಗಳು ಕಣ್ಮರೆಯಾಗಿ ಭೂತ ಚೇಷ್ಟೆಯಾಡುತ್ತ ತಲ್ಲಣವನ್ನೇ ಸೃಷ್ಟಿಸಿಬಿಡುತ್ತದೆ  . ಆ ಸಂದರ್ಭದಲ್ಲಿ  ಹುಡುಕುವ ಕಲೆಗಾರಿಕೆಯನ್ನು  ನಮ್ಮ ಕಣಕಣದಲ್ಲೂ ಹರಿಸಿಕೊಳ್ಳುವ ಗುಣಗಳನ್ನೂ  ನಾವೆ ಬೆಳೆಸಿಕೊಳ್ಳಬೇಕು. ಅಯ್ಯೋ ! ಈ ಲೇಖನ ಬರೀತಾ ಇರೋ ಸಮಯಕ್ಕೆ ಸರಿಯಾಗಿ ನನ್ನ ಲ್ಯಾಪ್ ಟಾಪಿನ ಚಾರ್ಜ  ಖಾಲಿಯಾಗ್ತಾ ಇದೆಯಲ್ಲಪ್ಪ ! ನನ್ನ ಚಾರ್ಜರ್ ಇಲ್ಲೆ ಎಲ್ಲೊ ಇಟ್ಟಿದು ಸಹ ಕಾಣ್ತಾ ಇಲ್ಲ    !ಇನ್ನು  ಅದನ್ನು ಹುಡುಕಲು ಹೋಗಬೇಕಾಗಿದ್ದರಿಂದ ನನ್ನ “ಹುಡುಕಾಟದ ತಲ್ಲಣಗಳು” ಲೇಖನವನ್ನು ಇಲ್ಲಿಗೇ ಮುಕ್ತಾಯ ಗೊಳಿಸುತ್ತಿದ್ದೇನೆ.

ಆರತಿ ಘಟಿಕಾರ್

 

 

 

 

 


1 comment :