Friday, August 7, 2020

ದೇವತೆಗಳ ಜೂಮ್ ಮೀಟಿಂಗು

 

ಕೊರೊನಾ ಸೋಂಕಿನ  ಭೀತಿಯಿಂದ ರಾಷ್ಟ್ರಾದ್ಯಂತ ಲಾಕ್ ಡೌನ್ ಜಾರಿಯಾಗಿ   ಮೂರು ತಿಂಗಳು ಎಲ್ಲಾ ಗುಡಿ- ಗುಂಡಾರ, ದೇವಾಲಯ, ಧಾರ್ಮಿಕ  ಕ್ಷೇತ್ರಗಳನ್ನು ಮುಚ್ಚಲಾಗಿತ್ತು . ಹಾಗಾಗಿ ಇಷ್ಟು ದೀರ್ಘ ಕಾಲ  ದೇವರ ದರ್ಶನದಿಂದ ದೂರಾಗಿ ಭಕ್ತ ಕೋಟಿಗೆ ಒಂದು ರೀತಿಯ ಬೇಸರ ನೋವು ಕಾಡುವುದು ಸಹಜ . ಕಾರಣ ಇಂತಹದೊಂದು ಮಹಾಮಾರಿ ಹುಟ್ಟಿಕೊಂಡು , ಜನ ಸಮುದಾಯಕ್ಕೆ ಸೋಂಕು ಹರಡಿಸುವ ಭಯ ಹುಟ್ಟಿಸಿ, ಅನ್ಯತಾ ಶರಣಂ ನಾಸ್ತಿ  ಎಂದು ನಂಬಿದ್ದ ದೇವರ ದರ್ಶನಕ್ಕೂ ಅಡ್ಡಿ  ಆಗಿದ್ದು  ಭಾರತದ ಇತಿಹಾಸದಲ್ಲೆ ಮೊದಲು ಎನ್ನಬಹುದು .  

ಇನ್ನು ಒಂದು ಸೆಕೆಂಡು ಸಹ ಬ್ರೇಕ್ ಇಲ್ಲದಂತೆ, ಆಶೀರ್ವಾದಿಸಲೆತ್ತಿದ   ಕೈಗಳನ್ನು ಕೆಳಗಿಳಿಸಲೂ ಪುರುಸೊತ್ತಾಗದಂತೆ  ಅಸಂಖ್ಯಾತ  ಭಕ್ತರು ಕೈಮುಗಿದು ತನ್ಮತೆಯಿಂದ ಕಣ್ಣು ಮುಚ್ಚಿ  ಇಡುತ್ತಿದ್ದ ಬೇಡಿಕೆಗಳು ,ಕೆಲವೊಮ್ಮೆ ಡೀಮ್ಯಾಂಡು, ದೂರುಗಳು ಎಲ್ಲವನ್ನು ಆಲಿಸಿ ಸುಸ್ತಾಗಿದ್ದ  ದೇವಾನುದೇವತೆಗಳಿಗೆ ಈ ಲಾಕ್ದೌನ್ನಿಂದಾಗಿ  ಎರಡು ತಿಂಗಳು ಸಂಪೂರ್ಣ ವಿಶ್ರಾಮ ಒದಗಿ ಭಕ್ತರ  ಕಾಟವಿಲ್ಲದೆ ಹಾಯಾಗಿದ್ದರು  .ಈ ಅಪರೂಪದ ರಜೆ ಪ್ರಾಪ್ತಿಯಾದ  ಖುಷಿಯಲ್ಲಿ ಎರಡು ತಿಂಗಳು  ಬೇಸಿಗೆ ರಜಾ ಸಿಕ್ಕ  ಮಕ್ಕಳಂತೆಯೆ ಭಗವಂತನೂ ಕುಣಿದು ಕುಪ್ಪಳಿಸಿರಬಹುದು!.

ಲಾಕ್ ಡೌನ್ ಸಮಯದಲ್ಲಿ  ಜನಸಾಮನ್ಯರ ಓಡಾಟ , ಸುತ್ತಾಟ ಎಲ್ಲದಕ್ಕೂ ಕಡಿವಾಣ ಬಿದ್ದು , ಒಬ್ಬರನೊಬ್ಬರು  ಭೇಟಿಯಾಗಲು ಅವಕಾಶವಿಲ್ಲದೆ ಬರೀ ಮೊಬೈಲು ವಾಟ್ಸಾಪ್  , ಜೂಮ್ ವೀಡಿಯೋಗಳಲ್ಲಿ ತಮ್ಮ ಕಷ್ಟ ಸುಖ ಹಂಚಿಕೊಂಡು ಕುಟುಂಬ ಸಮೇತರಾಗಿ ಮನೆಯಲ್ಲೇ ಉಳಿದು ಧಾಕಲೆಯನ್ನೇ  ಸೃಷ್ಟಿಸಿದರು . ಬೇಸರ ಕಳೆಯಲು ತಮ್ಮ ಅಭಿರುಚಿಗೆ ತಕ್ಕಂತೆ ನಾನಾ ಕಾರ್ಯದಲ್ಲಿ ತೊಡಗಿಕೊಂಡರು , ಮಕ್ಕಳು ಹೊಸ ಹೊಸ  ಸಾಹಸಗಳನ್ನು ಮಾಡಿದರು .

ಅತ್ತ ದೇವರುಗಳೆಲ್ಲ   ಕೆಲ ದಿನ ಕೆಲಸದ ಒತ್ತಡದಿಂದ  ವಿಶ್ರಾಂತಿ  ಪಡೆದ ನಂತರ ದೇಗುಲದ ತುಂಬೆಲ್ಲಾ ತುಂಬಿಕೊಂಡಿರುತ್ತಿದ್ದ ತಮ್ಮ ಪ್ರೀತಿಯ ಭಕ್ತರ ದರ್ಶನ, ಪೂಜೆ ಪುನಸ್ಕಾರ ಅಭಿಷೇಕ, ಹೋಮ ಹವನಗಳಿಲ್ಲದೆ ಅವರಿಗೂ   ಬೇಸರ ಕಾಡತೊಡಗಿತು  . ಅದ್ಧೂರಿಯಾಗಿ ನಡೆಯುತ್ತಿದ್ದ  ಧಾರ್ಮಿಕ ಚಟುವಟಿಕೆಗಳು , ರಥೋತ್ಸವಗಳು  ಎಲ್ಲದಕ್ಕೂ  ಅಡ್ಡಿಯಾಗಿ  ಭಕ್ತ ಸಮೂಹವಿಲ್ಲದ ದೇವಾಲಯ ಭಣಗುಟ್ಟುತ್ತ,  ಗರ್ಭಗುಡಿಯಲ್ಲಿ ದೇವನೊಬ್ಬನೆ ಒಂಟಿಯಾಗಿರುವ ಪರಿಸ್ಥತಿ ಎದುರಾಯಿತು .

 ಭೂಲೋಕದ ಜನರಂತೆಯೆ ದೇವತೆಗಳೂ  ಸಹ ಜೂಮ್ ವೀಡಿಯೋ  ಮೀಟಿಂಗ್ ಮಾಡಿಕೊಂಡು ಲಾಕ್ ಡೌನ್ ಸಮಯದಲ್ಲಿ ತಮ್ಮ   ಕಷ್ಟ ಸುಖ ಹಂಚಿಕೊಳ್ಳಲು ನಿರ್ಧರಿಸಿದರು . ವೆಂಕಟೇಶ , ಗಣೇಶ , ರಾಮ, ಕೃಷ್ಣ ,ಲಕ್ಷ್ಮಿ ಪಾರ್ವತಿ ಇತ್ಯಾದಿ ದೇವಾನುದೇವತೆಗಳ  ಮೀಟಿಂಗನ್ನು ತ್ರಿಲೋಕ ಸಂಚಾರಿಗಳಾದ  ನಾರದರೆ ಏರ್ಪಡಿಸಿ ಎಲ್ಲರೂ ಒಟ್ಟು ಸೇರಿ  ಮುಕ್ತವಾಗಿ  ಚರ್ಚಿಸುವ ಅವಕಾಶವನ್ನು ಕಲ್ಪಿಸಿದರು !.

ಸಂಕಷ್ಟ ಚತುರ್ಥಿ , ಗಣ ಹೋಮ ಎಂದೆಲ್ಲಾ ಆಗಾಗ ಭಕ್ತರು ಅರ್ಪಿಸುತ್ತಿದ್ದ ಕಡಬು ಮೋದಕಗಳನ್ನು  ಸವಿಯದೆ ಗಣೇಶನ ನಾಲಿಗೆ ಕೆಟ್ಟು ಹೋಗಿತ್ತು . ಹಾಗಾಗಿ  ಪ್ರಥಮ ಪೂಜೆಯನ್ನು ಸ್ವೀಕರಿಸುವ  ಗಣೇಶನೆ  ಆರಂಭದಲ್ಲಿ ಮಾತನಾಡಿ ಬೆಲ್ಲಾ- ಕಡಬು ಮೋದಕಗಳ ನೈವೇದ್ಯವಿಲ್ಲದ  ಊಟವೆ ರುಚಿಸದೆ ( ಬೋರಾಗಿ ) ಈ ವರ್ಷ ತನ್ನ (ಗಣೇಶ ) ಹಬ್ಬಕ್ಕಾದರೂ ಈ ಮಾಹಾಮಾರಿಯನ್ನು ತೊಲಗಿಸಬೇಕು ಎಂದು ಡಿಮ್ಯಾಂಡು ಮಾಡಿದ . ಮಾರ್ಚ/ಏಪ್ರಿಲ್  ತಿಂಗಳೆಂದರೆ  ಪರೀಕ್ಷಾ ಕಾಲ. ವಿದ್ಯಾರ್ಥಿಗಳು   ಗುಂಪು ಗುಂಪಾಗಿ ಗಣೇಶನ  ಗುಡಿಗೆ ಹೋಗುವುದು  ವಾಡಿಕೆ , ಉತ್ತಮ ಅಂಕಗಳಿಂದ ಪಾಸ್ ಮಾಡು ದೇವಾ ಎನ್ನುವ ಬೇಡಿಕೆ! ಆದರೆ ಲಾಕಡೌನಿಂದಾಗಿ ಶಾಲೆ ಕಾಲೇಜುಗಳು ಬಂದಾಗಿ ಬರೀ ಆನ್ ಲೈನುಗಳಲ್ಲೆ ಪಾಠ ಹೇಳಿಸಿಕೊಂಡು ತನಗೆ ಇಪ್ಪತ್ತೊಂದು ದೀರ್ಘದಂಡ ನಮಸ್ಕಾರ ಸಹ ಹಾಕದೆ ಮಕ್ಕಳು ಪಾಸಾಗುವು ಲಕ್ಷಣಗಳಿದ್ದ ಈ ಹೊಸ ಶಿಕ್ಷಣ ಪದ್ದತಿ ಗಣೇಶನಿಗೆ ಸಖೇದಾಶ್ಚರ್ಯ ಉಂಟು  ಮಾಡಿತ್ತು . ಮುಖ್ಯವಾಗಿ ಪ್ರಿಯ ವಿದ್ಯಾರ್ಥಿಗಳ ದರ್ಶನ ಭಾಗ್ಯದಿಂದ ಗಣಪನೆ ವಂಚಿತನಾಗಿದ್ದ .

ಆಂಜನೇಯ ಸ್ಕ್ರೀನಿನ ಮೇಲೆ ಕಡಬು ಮೋದಕಗಳ  ಚಿತ್ರವನ್ನು  ಹಾಕಿ ಕೊಂಚ ಕೀಟಲೆ ಮಾಡಿದಾಗ ಗಣಪ ಕಿರು ನಗೆ ನಕ್ಕು ಪವನ ಪುತ್ರನೊಡನೆ  ಕುಶಲೋಪರಿಗಳ ವಿನಿಮಯ ಮಾಡಿಕೊಂಡು , ಗಂಭೀರವಾಗಿ ಕುಳಿತ ಇತರ ದೇವತೆಗಳಿಗೆ ಮಾತನಾಡಲು ಅನುವು  ಮಾಡಿಕೊಟ್ಟ . ಸಂಕಟಮೋಚನ ಹನುಮಾನ ಎಲ್ಲರಿಗೂ ನಮಸ್ಕರಿಸಿ “ ಪಾಪ !ಈ ಮಾನವರು ಕೊರೊನಾ ಸೋಂಕಿಗೆ ಭಯಭೀತರಾಗಿ  ಮನೆಯೆಲ್ಲೆ ಸಿಲುಕಿಕೊಂಡಿದ್ದಾರೆ  . ಅವರಿಗೆ ನನ್ನಂತೆ ಹಾರುವ ಶಕ್ತಿಯಿದ್ದಿದ್ದರೆ ಹಾರಿಕೊಂಡಾದರೂ ಹೊರಗೆಲ್ಲಾ ಸುತ್ತಾಡಿ  ಲಾಕ್ದೌನ್ ಬೇಸರ ನೀಗಿಸಿಕೊಳ್ಳಬಹುದಿತ್ತು  . ನನ್ನ ಭಕ್ತರ  ದರ್ಶನ ಭಾಗ್ಯವಿಲ್ಲದೆ ನನಗೂ ಬೇಸರವಾಗಿದೆ ,ಶನಿವಾರಗಳಂದು  ನನಗೆ ಪ್ರೀತಿಯಿಂದ ಅರ್ಪಿಸುತ್ತಿದ್ದ  ವಡೆ ಹಾರ ,ವಿಳೇದೆಲೆ, ತುಳಸಿ ಹಾರಗಳನ್ನು ಹಾಕಿಸಿಕೊಂಡು ಅವರ ಕಷ್ಟ ಕೋಟಲೆಗಳನ್ನು ಶಮನ  ಮಾಡ್ತಾ ಹಾಯಾಗಿದ್ದೆ . ಇನ್ನು ಮುಂದಿನ ದಿನಗಳಲ್ಲಿ ದೇಗುಲ ತೆರೆದರೂ ದೇವರ ಮೇಲಿನ ಭಕ್ತಿಗಿಂತಲೂ  ಕೊರೊನಾ  ಮೇಲಿನ ಭಯವೇ ಹೆಚ್ಚಾಗಿ  ಭಕ್ತರು ದೇವಾಲಯದ ಕಡೆ  ಬರದಿದ್ದರೆ ಏನಪ್ಪಾ ಗತಿ  “ ಅಂಜನೇಯನ ದನಿಯಲ್ಲಿ ಸಣ್ಣ ಆತಂಕವಿತ್ತು

 “ ಹಾಗಾಗುವುದು ಅಸಂಭವ  ! ಸಂಕಟ ಬಂದಾಗ ವೆಂಕಟರಮಣ ! ಎಂದು ಜನ ತಮ್ಮ  ಕಷ್ಟ ಕಾಲಕ್ಕೆ ನಮ್ಮನ್ನೇ ಅಲ್ಲವೆ ನೆನೆಯುವುದು!? ಅವರ ರಾಶಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಗಂಟೆ ಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಪಡೆಯುತ್ತಾರೆ,ಚಿಂತಿಸದಿರು  “ ದಿನಕ್ಕೆ ಲಕ್ಷಗಟ್ಟಲೆ ಜನರಿಂದ  ಕಿಕ್ಕಿರಿಯುವ ತಿರುಪತಿಯ ಲಾರ್ಡ್  ಬಾಲಾಜಿ ಆಶ್ವಾಸನೆಯಿತ್ತ  .

“ ಖಂಡಿತ ! ಬಡವ ಬಲ್ಲಿದ ಎಂಬ ಬೇಧವಿಲ್ಲದೆ ನೂಕುನುಗ್ಗಲಿದ್ದರೂ ಭಕ್ತಾದಿಗಳು ನಿನ್ನ ದರ್ಶನಕ್ಕೆ ಬಂದೆ ಬರುತ್ತಾರೆ .ಅಷ್ಟೇ  ಏಕೆ , ಕೆಲ ರಾಜಕಾರಣಿಗಳು , ಬ್ಯುಸಿನೆಸ್ಸ್ಮೆನ್ನುಗಳು ತಾವು ಮಾಡಿದ ಹಗರಣ/ಗೊಲ್ಮಾಲಗಳಿಗೆ ಪ್ರಾಯಶ್ಚಿತ್ತವಾಗಿ   (ಕಪ್ಪು ಹಣದಿಂದಲೆ  ಮಾಡಿಸಿದ )  ಕಪ್ಪ- ಕಾಣಿಕೆ, ಕಿರೀಟ ಪ್ರಭಾವಳಿಗಳನ್ನು  ಅರ್ಪಿಸಲು ನಿನ್ನಂತ ವೀಐಪಿ  ದೇವರೇ ಬೇಕಲ್ಲ    ಗಣಪತಿ ತಮಾಷೆ ಮಾಡಿದ.

“ ಆಗ ಗುಂಪಿನಲ್ಲಿ ಗೋವಿಂದಾ  ಎಂದು ನಿನ್ನ  ನಾಮಸ್ಮರಣೆ ಮಾಡುತ್ತಾ ಬರುತ್ತಿದ್ದ ಭಕ್ತರಿಗೆ  ಈಗ  ಗ್ರೂಪಿನಲ್ಲಿದ್ದರೆ (ಹರ ಹರ ) ಗೋವಿಂದಾ ಆಗುವ ಸ್ಥ್ತಿತಿ  ಸೃಷ್ಟಿಯಾಗಿದೆಯಲ್ಲಾ ಲಾರ್ಡ್  ಬಾಲಾಜಿ! ? ಎಂದ ಆಂಜನೇಯ ಹಾಗು  ಗಣಪತಿಯರ ಕೀಟಲೆಯ  ಬಾಯಿ ಮುಚ್ಚಿಸಲು ತಿರುಪತಿ ಲಾಡು ಬಂದು ಬಿತ್ತು.!

ತನ್ನ ಮುದ್ದು ಪುತ್ರನ  ತಮಾಷೆಗೆ ತಾಯಿ ಪಾರ್ವತಿ ಹಸನ್ಮುಖಿಯಾದಳು  . ಹಬ್ಬ ಹರಿದಿನ ಮಂಗಳವಾರ ಶುಕ್ರವಾರಗಳಂದು  ಬನಶಂಕರಿ ದೇವಿ , ಮೂಕಾಂಬಿಕ , ದುರ್ಗಾ ಪರಮೇಶ್ವರಿ , ಮುಂತಾದ ಶಕ್ತಿ ದೇವತೆಗಳಿಗೆ ಸೀರೆ ಉಡಿ ತುಂಬಿ  ನಿಂಬೆ ಹಣ್ಣಿನ ದೀಪ ಹಚ್ಚಿ  ಭಕ್ತಿಯಿಂದ ಪೂಜಿಸುತ್ತಿದ್ದ ಮಾಹಿಳೆಯರು ಈ ಕೊರೊನಾ  ಕಾಲದಲ್ಲಿ  ನಮ್ಮ ದರ್ಶನಕ್ಕೂ  ಬರದಂತಾಗಿದೆ,  “ ಎಂದು ದೇವಿಯರ  ಪರವಾಗಿ ಮಾತನಾಡುತ್ತಾ  . “ ಈ ದುರಿತ ಕಾಲದಲ್ಲಿ ಜನ ಎಷ್ಟು ಭಯಭೀತರಾಗಿದ್ದಾರೆಂದರೆ ಸಾಮನ್ಯವಾಗಿ ಧನ , ಧಾನ್ಯ, ಸಂಪತ್ತು ಸಮೃದ್ಧಿಗಾಗಿ ಬೇಡುತ್ತಿದ್ದ ಭಕ್ತರ ದಂಡು  ಪಾಪ ! ಇತ್ತೀಚಿಗೆ ನನ್ನಲ್ಲೂ ಆರೋಗ್ಯ ಭಾಗ್ಯಕ್ಕಾಗೇ ಮೊರೆಯಿಡುತ್ತಿದ್ದಾರೆ .”  ಲಕ್ಷ್ಮಿ ದೇವಿಯೂ ದನಿಗೂಡಿಸಿದಳು  .

“ ಈ ನಡುವೆ ಎಲ್ಲಾ ಕಡೆಯೂ ಸಾಮಾಜಿಕ ಅಂತರ , ಮಾಸ್ಕ್ , ಸ್ಯಾನಿಟೈಸರ್ , ಕ್ವಾರೆಟೈನ್ನ್ಗಳ ಮಾತೆ ಕೇಳಿ ಕೇಳಿ (ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸಗಳಂತೆ ) ತಲೆ ಚಿಟ್ ಹಿಡಿದಿದೆ”  . ಇಷ್ಟು ಹೊತ್ತೂ ತಪ್ಪಸ್ಸಿನಲ್ಲಿರುವಂತೆ  ಕುಳಿತ ಸೃಷ್ಟಿಕರ್ತ  ಬ್ರಹ್ಮ ಮೌನ ಮುರಿದ   ಈ ದುರಿತ ಕಾಲ  ನರ ಮನುಷ್ಯರು ಭೂಮಿಯ ಮೇಲೆ ತಾವು ಮಾಡುತ್ತಿರುವ ಅನ್ಯಾಯ ಅನಾಚಾರಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಕಾಲವಾಗಿದೆ

ಬ್ರಹ್ಮನ ಗಂಭೀರ ನುಡಿಗಳಿಗೆ  ಗಣೇಶ  ಬ್ರೇಕ್ ಕೊಡುತ್ತ ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವ ಹಾಗೆ  ಗೋಬಿ ಮಂಚೂರಿ ಮಾಡುವಂತೆ ಗೂಬೆ ಮಂಚೂರಿ ಮಾಡಿ ತಿಂದು ತೇಗಿ ಇಡಿ ವಿಶ್ವಕ್ಕೆ ಈ  ಪರಿಯ ಕಂಟಕ ತಂದಿದ್ದಲ್ಲದೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಮುಖ ಮುಚ್ಚಿ (ಮಾಸ್ಸ್ಕ್ ಧಾರಿಗಳಾಗಿ ) ಓಡಾಡುವ ಹಾಗಾಗಿದೆ !.”

“ ಸತ್ಯವಾದ ಮಾತು ವಿನಾಯಕ ! ಮನುಷ್ಯ ಪ್ರಾಣಿಗಳ ಅಂಗಾಂಗಳನ್ನು ರಚನೆ ಮಾಡುವಾಗ ಕಿವಿಗಳ ಪಾತ್ರ ಎಷ್ಟು ಮುಖ್ಯವಾಗಿತ್ತು (ಮಾಸ್ಕ್ ಹಾಕಿಕೊಳ್ಳಲು)  ಅಲ್ಲವೇ ಬೃಹ್ಮ್ಮಾಜಿ !?  “ಎನ್ನುತ್ತಾ  ಹನುಮಂತನೂ   ಹಾಸ್ಯದ  ಕಚಗುಳಿಯಿಟ್ಟಾಗ ಬೃಹ್ಮನ ಮುಖಕಮಲದಲ್ಲೂ ಕಿರುನಗೆ ಮಿಂಚಿತು!.

ಅರೆ ನಿಮೀಲಿತ ನೇತ್ರಧಾರಿಯಾಗಿ ಶಾಂತ ಮುದ್ರೆಯಲ್ಲಿದ್ದ  ಶಿವ “ ಕಾಲಾಯ ತಸ್ಮೆ ನಮಃ !  ಈ ಮನುಷ್ಯ ಜೀವಿಗಳು ಒಮ್ಮೊಮ್ಮೆ  ದೇವತೆಗಳ ಹಾಗೆ  ತಾವೂ ಸಹ ಅಮರರು ಎಂಬ ಭ್ರಮೆಯಲ್ಲಿ ತೇಲಾಡಿಕೊಂಡಿರುತ್ತಾರೆ .ಅವರ ಬೊಗಸೆಯಲ್ಲಿ  ಹಿಡಿದಷ್ಟೇ ಆಯಸ್ಸು ಪ್ರಾಪ್ತಿ ಎನ್ನುವುದು ಮರೆತು   ಹೆಣ್ಣು ಹೊನ್ನು ಮಣ್ಣುಗಳ ದುರಾಸೆಯಲ್ಲಿ ಮುಳಿಗೇಳುತ್ತಿದ್ದಾರೆ. ಪರಿಸರ ವಿನಾಶಕ್ಕೆ  ಕಾರಣವಾಗುತ್ತಿದ್ದಾರೆ . ಪಶು ಪಕ್ಷಿಗಳ ಜೊತೆಗಿನ   ಅಮಾನವೀಯ ನಡವಳಿಕೆ  ಅಕ್ಷಮ್ಯ ಅಪರಾಧ !, ಪ್ರಕೃತಿ ಮಾತೆಯೊಂದಿಗೆ ಸಾಮರಸ್ಯದಿಂದಿರದೆ ಅಗೌರವದಿಂದ ನಡೆದುಕೊಂಡರೆ ಆಕೆಯ ಮುನಿಸಿಗೆ ತುತ್ತಾಗಬೇಕಾಗುತ್ತದೆ . ಇದು ಇಡಿ ಜಗತ್ತಿಗೆ ಒಂದು ಪಾಠವಾಗಿ  ಪರಿಣಮಿಸಲಿದೆ “ ಎಚ್ಚರಿಕೆಯ ನುಡಿಗಳನ್ನು ಹೇಳಿದ .

 ಎಲ್ಲರ ಮಾತುಗಳನ್ನು ತನ್ಮತೆಯಿಂದ ಆಲಿಸುತ್ತಿದ್ದ  ಕೃಷ್ಣ ಪರಮಾತ್ಮ ಸ್ಕ್ರೀನಿನ ಮೇಲೆ ಪ್ರತ್ಯಕ್ಷನಾಗಿ    ಮನುಕುಲ ಅನುಭವಿಸುತ್ತಿರುವ ಈ ವಿಷಮ  ಪರಿಸ್ಥಿತಿಗೆ ಅರಿತೋ ಅರಿಯದೆಯೋ ಅವರು ಮಾಡಿದ ಪಾಪ ಕರ್ಮಗಳೆ ಕಾರಣ . ದುಷ್ಟ ಶಕ್ತಿಯ ಸಂಹಾರಕ್ಕಾಗಿ ನಾನು ಸಂಭವಾಮಿ ಯುಗೇ ಯುಗೇ ಎಂದು ಗೀತೆಯಲ್ಲಿ ನುಡಿದಿದ್ದೇನೆ . ಚೀನಾ ದೇಶದಲ್ಲಿ  ಉಗಮವಾದ ಕೊರೊನಾ ವೈರಿ  ಚೀನಾ ವಸ್ತುವಿನಂತೆ ಬಹಳ ಕಾಲ ಇರದೆ ನಾಶವಾಗಲಿದೆ “ ಎಂದು ಮುಗುಳ್ನಕ್ಕಾಗ ದೇವಾನುದೇವತೆಗಳು ಅವನ  ಅರ್ಥಗರ್ಭಿತ ನುಡಿ ಮುತ್ತುಗಳಿಗೆ ತಲೆ ತೂಗಿದರು . ನಾರದರು ” ನಾರಾಯಣ ನಾರಾಯಣ” ಎನ್ನುತ್ತಾ ಜೂಮ್ ವೀಡಿಯೋ ಮೀಟಿಂಗನ್ನು ಸಮಾಪ್ತಿಗೊಳಿಸಿದರು .

ಲಾಕ್ಡೌನ್ ಮುಕ್ತ ಭಾರತದಲ್ಲಿ  ಭಕ್ತಾದಿಗಳು ಎಂದಿನಂತೆ  ದೇವರ ದರ್ಶನ  ಪಡೆದು ಪುನೀತರಾಗಲಿ ಎಂದು ಎಲ್ಲಾ ದೇವಾನುದೇವತೆಗಳು ಭಕ್ತ ಕೋಟಿಯನ್ನು   ಆಶೀರ್ವದಿಸಿ ಮಾಸ್ಕ್ ಧಾರಿ ಅರ್ಚಕರಿಂದ ಪೂಜಾರ್ಚನೆ ,ಅಭಿಷೇಕ  , ಥರ್ಮಲ್ ಸ್ಕ್ರೀನಿಂಗ್ , ಸ್ಯಾನಿಟೈಸರ್  ಸೇವೆ ಮಾಡಿಸಿಕೊಂಡು  ವೈರಾಣು ಮುಕ್ತರಾಗಿ (ಶುದ್ಧರಾದ   ) ಭಕ್ತರ ದರ್ಶನ ಸ್ವೀಕರಿಸಲು  ಸಜ್ಜಾದರು .

ಆರತಿ ಘಟಿಕಾರ್

2 comments :

  1. ದೇವತೆಗಳ ಕಷ್ಟ, ಸುಖಗಳನ್ನು ಅರಿಯುವ ನಿಮ್ಮ ಪರಾಮಾನಸ ಶಕ್ತಿಗೆ ನನ್ನ ಮೆಚ್ಚುಗೆಗೆಳು.

    ReplyDelete
  2. ಪಾಮರರಿಂದ ಇಂಥ (ಮುಗ್ಧ) ತಪ್ಪುಗಳು ನಡೆದರೂ ದೇವತೆಗಳು ಕ್ಷಮಿಸಿಸುತ್ತಾರೆ ಎನ್ನುವ ನಂಬಿಕೆ ಸರ್ :) ಧನ್ಯವಾದಗಳು ನನ್ನ ಲೇಖನ ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕಾಗಿ .

    ReplyDelete