Thursday, July 16, 2020

ಕಾಕಾಯಣ



ಬಾಲ್ಯದಲ್ಲಿ  ನಾವೆಲ್ಲಾ ಅಮ್ಮನಿಂದಲೋ ಇಲ್ಲ ಅಜ್ಜಿ  ಹೇಳುತ್ತಿದ್ದ  ಪಂಚತಂತ್ರ ,ಜಾನಪದ  ನೀತಿ ಕಥೆಗಳನ್ನು  ಕೇಳುತ್ತಲೇ ಬೆಳೆದವರು ,.” ಅದರಲ್ಲಿ  ಬರುವ ಪ್ರಾಣಿ ,ಪಕ್ಷಿ ,ಮರ-ಗಿಡಗಳೆಲ್ಲಾ  ಮಾತನಾಡುತ್ತಾ ತಮ್ಮ  ಸಹಜ  ವರ್ತನೆಯಿಂದಲೇ ಸುಂದರ  ಸಂದೇಶಗಳ ಕಟ್ಟಿಕೊಡುತ್ತಾ ,  ಎಳೆ  ಮನಸುಗಳಿಗೆ  ಕಲ್ಪನೆಯ  ರೆಕ್ಕೆ ಪುಕ್ಕ ಮೂಡಿ ಕೂತೂಹಲ,ಬೆರಗು ಮೂಡಿಸುತ್ತಿದ್ದ ಕಾಲಘಟ್ಟವದು ! ಈಗ ಸಮಾನ್ಯವಾಗಿ  ಕಾರ್ಟೂನ್ ನೋಡುತ್ತಲೊ,ಇಲ್ಲಾ  ಮೊಬೈಲ್ನಲ್ಲಿ ಆಟವಾಡಿಕೊಂಡೋ  ಬಾಲ್ಯವನ್ನು ಕಳೆಯುತ್ತಿರುವ  ಮಕ್ಕಳಿಗೆ ದೃಶ್ಯಗಳ  ವೈಭವವೇ  ಮೆರೆದು ಕಲ್ಪನೆಗಳ ರಂಗು ಕ್ರಮೇಣ  ಮರೆಯಾಗುತ್ತಿದೆ.
ನಾನು ಸಣ್ಣವಳಿದ್ದಾಗ  ಕೇಳಿದ ಕಾಗಕ್ಕ  ಗುಬ್ಬಕ್ಕನ  ಕಥೆಯಲ್ಲಿ, ಜೋರು ಮಳೆಗೆ ಗೂಡು  ಮುರಿದು,ತನಗೆ  ಆಶ್ರಯ ಕೊಟ್ಟ  ಗುಬ್ಬಕ್ಕ ಹಾಗು  ಅದರ  ಪುಟ್ಟ  ಮರಿಗಳ ಮೇಲೆ ದುರ್ಬುದ್ಧಿಯನ್ನು  ಪ್ರದರ್ಶಿಸಿ ಖಳ ನಾಯಕಿಯಾಗಿ ಮೆರೆದ  ಕಾಗಕ್ಕ ಆಗ  ನನಗೆ ಅತ್ಯಂತ  ಕೆಟ್ಟ ಪಕ್ಷಿ ಎಂಬಂತೆ ತೋರಿದ್ದು  ಸುಳ್ಳಲ್ಲ  !
ಆದರೆ ಮುಂದೆ ಕೋಗಿಲೆಯ  ಮೊಟ್ಟೆಗಳನ್ನು  ಕಾಗೆ ತನ್ನವೆ ಎಂದು  ಪ್ರೀತಿಯಿಂದ  ಸಾಕಿ ಮೋಸ  ಹೋಗುವ  ಕಥೆ ಕೇಳಿದಾಗ ಪಾಪದ ಕಾಗೆ ಎಂದು  ಅದರ ಮೇಲೆ ಕರುಣಾ  ರಸ ಹರಿದು  ಕಟ್ಟೆಯೊಡೆದಿತ್ತು.
ತನ್ನ  ಮರಿಗಳನ್ನು   ಸಾಕಿ  ಸಲಹುವ ತಾಯಿ  ಕರ್ತವ್ಯವನ್ನೂ   ಕಾಗಕ್ಕನಿಗೆ ಹೊರಗುತ್ತಿಗೆ (ಸಾಫ್ಟ್ವೇರ್ ಕಂಪನಿಗಳಂತೆ ಔಟ್ ಸೋರ್ಸಿಂಗ್ !) ನೀಡಿ ಸಂಗೀತ ಕಚೇರಿಯಲ್ಲಿ  ಮುಳುಗುವ ಸೋಮಾರಿ  ಕೋಗಿಲೆ ಮಾತ್ರ ತನ್ನ ಗಾನ ಸಿರಿಗೆ ಅನಾದಿ  ಕಾಲದಿಂದಲೂ ಕವಿಗಳ ಕೃತಿಗಳಲ್ಲಿ ಗೌರವದಿಂದ ಮೆರೆಯುವ ಪಕ್ಷಿಯಾಗಿ ಬಿಟ್ಟಿದೆ  !
ನವಿಲು  ಕುಣಿಯೋದು ನೋಡಿ  ಕೆಂಭೂತ ಕುಣೀತು ಎಂದು ಕೆಂಭೂತಕ್ಕೆ ಟಾಂಗ್ ಕೊಡುತ್ತ ,  ಕೋಗಿಲೆ ಹಾಡಿತು  ಅಂತ ಕಾಗೆ ಹಾಡಬಲ್ಲದೆ ? ಎಂದೆಲ್ಲ ಪ್ರಾಣಿಗಳ  ರೂಪ  ,ನಡತೆಗಳನ್ನು  ಹೋಲಿಕೆ  ಮಾಡಿ   ಮೂದಲಿಸಿದರೆ ,ಮನುಷ್ಯರ ಗುಣ -ಸ್ವಭಾವಗಳ ಅತಿರೇಕಗಳಿಗೂ  ಪ್ರಾಣಿಗಳ  ವರ್ತನೆಗಳಿಗೆ  ತಳಕು ಹಾಕಿ ನೋಡುವ ಬುದ್ದಿ ನಮಗೆಲ್ಲ  ಕರಗತವಾಗಿದೆ .
ಜಿಪುಣಾಗ್ರೇಸರನ್ನು ಕಾಗೆಗೆ ಹೋಲಿಸಿದಾಗ ಇದಕ್ಕಿಂತ ಹೆಚ್ಚಿನ  ವಿರೋಧಾಭಾಸ ಇರಲಾರದು ಅನಿಸುತ್ತದೆ  .ಕಾರಣ ಕಾಗೆ ಬಹಳ ಉದಾರಿ,  ಸಂಘಜೀವಿ !ಒಂದಿಷ್ಟು ಆಹಾರ ಪದಾರ್ಥಗಳ  ಚೂರು  ಕಂಡರೂ ಸಾಕು ತನ್ನೆಲ್ಲಾ ಬಂಧು   ಬಳಗದವರನ್ನು  ಕೂಗಿ ಕರೆದು  ಹಂಚಿ  ತಿನ್ನುವ  ಸ್ವಭಾವ ಅದಕ್ಕೆ . ಮನುಷ್ಯ  ಹಂಚಿ ತಿನ್ನುವುದು ಹಾಗಿರಲಿ , ಇತರರದನ್ನೂ ಕಬಳಿಸಿ ತಿನ್ನುವ ಮಟ್ಟಕ್ಕೆ ನಿಂತು ಪಾಪ !  ಕಾಕರಾಯನನ್ನು ಹೀಗೆಲ್ಲ ಆಡಿಕೊಂಡಾಗ  ಅದಕ್ಕೂ  ಮಾತು  ಬರುವಂತ್ತಿದ್ದ್ದರೆ  ಹಾಗೆಂದವರ ತಲೆಯನ್ನು ಕುಕ್ಕಿ ಆಂಗ್ರಿ ಬರ್ಡಿನಂತೆ  ಸೇಡು  ತೀರಿಸಿಕೊಳ್ಳದೆ  ಬಿಡುತ್ತಿರಲ್ಲಿಲ್ಲ   !
ಮಾನವ ಸಹಜ (ಆವ)ಗುಣಗಳಲ್ಲಿ  ಬೆಳ್ಳಗಿನ ಬಣ್ಣವನ್ನೇ ಇಷ್ಟ ಪಡುತ್ತ ಕಡುಕಪ್ಪಗಿನ ಕಾಗೆಯನ್ನು  ಕಂಡು ಅಹಸ್ಯ ಪಡುವವರೆ ಹೆಚ್ಚು ! ಆದರೆ ಮಿರಿ ಮಿರಿ ಮಿಂಚುವ ಕಪ್ಪನೆಯ  ಕೇಶ  , ತಿಳಿಯಾದ   ಮೈ  ಬಣ್ಣಕ್ಕೇ ಮಣೆ ಹಾಕುತ್ತ  , ನಮ್ಮಲ್ಲೇ  ವರ್ಣ ಬೇಧ ನೀತಿಯನ್ನು ಅನುಸರಿಸುವುದನ್ನು   ಮಾತ್ರ ನಾವು ಬಿಡುವುದಿಲ್ಲ ! ಆದರೆ ಪಕ್ಷಿಗಳಲ್ಲೇ ಅತ್ಯಂತ ವಿಕಸನಗೊಂಡ ಮೆದುಳು ಹೊಂದಿದ ಕಾಕರಾಯ ಈಸೋಪನ   ಕಥೆಯಲ್ಲಿ ನೀರಿನ ಹೂಜಿಗೆ ಕಲ್ಲು ಹಾಕುತ್ತ ನೀರನ್ನು ಮೇಲೆ  ಬರಿಸಿ ತನ್ನ ಬಾಯಾರಿಕೆ ತಣಿಸಿಕೊಂಡು ಬುದ್ದಿವಂತಿಕೆಯನ್ನು ಪ್ರದರ್ಶಿಸಿದರೆ , ಈಗಿನ ಮಾಡರ್ನ್  ಕಾಗೆಗಳು ತಮ್ಮ ಕೊಕ್ಕಿನಲ್ಲಿ ಸ್ಟೈಲಾಗಿ  ಸ್ಟ್ರಾ ಹಿಡಿದೆ  ನೀರು  ಹೀರಿ ಬಿಡುತ್ತವೇನೋ !

ಏನೇ ಅನ್ನಿ ಬುದ್ಧಿವಂತಿಕೆ , ಉದಾರತನ ,ಅಂತಕರಣಗಳ ಗುಣ ಹೊಂದಿದ ಪಕ್ಷಿಯಾದರೂ ಅಪಶಕುನದ ಹಕ್ಕಿ ಎನ್ನುವ ಹಣೆಪಟ್ಟಿ  ಹೊತ್ತುಕೊಂಡು  ಕಾಗೆ  ಶೋಷಣೆಗೆ  ಒಳಗಾಗುತ್ತಲೆ  ಬಂದಿದೆ !
ತಮ್ಮ ಬಾಲ್ಯ ಸಂಗಾತಿ ಗುಬ್ಬಿಗಳ ಜೊತೆ  ಹೋಲಿಸಿ ನೋಡಿದಾಗ   ಕಾಗೆ ನಿಜಕ್ಕೂ ಗಟ್ಟಿಗಿತ್ತಿ  ಅನ್ನಲಡ್ಡಿಯಿಲ್ಲ !.. ವಾಯುಮಾಲಿನ್ಯ ಹೆಚ್ಚಾಗುತ್ತಿರುವ ನಗರ  ಪ್ರದೇಶಗಳಲ್ಲಿ  ಗುಬ್ಬಿಗಳ  ಸಂಖ್ಯೆ  ದಿನೆ ದಿನೆ ಇಳಿಮುಖವಾಗಿ ಅವುಗಳಿಗೂ ಮನುಷ್ಯರಂತೆ  ಅಸ್ತಮಾ ಸಮಸ್ಯೆ ಕಾಡಿ  ,ಪಲಾಯನವಾದಿಗಳಾಗುತ್ತಿದ್ದರೆ ,  ಕಾಗೆ ಸಂತತಿ  ಮಾತ್ರ ಊರು  ಎಷ್ಟೇ  ಗಬ್ಬೆದ್ದು ಹೋದರೂ  ಅಂಜದೆ ,ಅಳುಕದೆ ತಾನು  ಹುಟ್ಟಿ  ಬೆಳೆದ ಊರಿನಲ್ಲೇ ಸಿಕ್ಕಿದ್ದೆಲ್ಲ ತಿನ್ನುತ್ತ  ಹಾರಾಡಿ ಕೊಂಡು  (ಲೋಡ್ ಶೆಡ್ಡಿಂಗ್ ವೇಳೆಗನುಸಾರವಾಗಿ )  ವಿದ್ಯುತ್ ಕಂಬದ  ಮೇಲೆ   ಆಟವಾಡುತ್ತಾ  ತನ್ನ ತಾಯಿನಾಡಿನ  ಋಣ  ತೀರಿಸುತ್ತಲೇ ಇವೆ  !
ಇನ್ನು ಶ್ರಾದ್ದ  ,ಪಕ್ಷಗಳ ಸಮಯದಲ್ಲಿ ಕಾರ್ಯವಾಸಿ  ಕಾಗೆ ಕಾಲು ಎಂದು  ಮನುಷ್ಯರು ತಮ್ಮನ್ನು  ನಿಕೃಷ್ಟವಾಗಿ  ಕಾಣುವ ಇಬ್ಬಗೆ ನೀತಿಗೆ ಸೇಡು  ತೀರಿಸ್ಕೊಳ್ಳಲು ಎಂಬಂತೆ  ಎಷ್ಟೋ ಬಾರಿ ಪಿಂಡವನ್ನು ಕಂಡರೂ ತಿನ್ನಲು ಬಿಂಕ ತೋರಿ, ಸತಾಯಿಸುತ್ತಾ ಕೆಲವೊಮ್ಮೆ  ನಾವೆ ಕಾಗೆ ಭಾಷಿಗರಾಗಿ ಕಾಕ  ಅಷ್ಟೋತ್ತರ (!?)ಹೇಳಿಕೊಳ್ಳುತ್ತಾ ಅವನ್ನು ಕೂಗಿ  ಕರೆವ ಸ್ಥತಿಗೆ ನಮ್ಮನ್ನು ಇಳಿಸಿ ಬಿಡುವುತ್ತವೆ  !
ಇತ್ತೀಚಿಗೆ  ನಮ್ಮ ರಾಜ್ಯದ ಮುಖ್ಯ ಮಂತ್ರಿಗಳ ಕಾರಿನ  ಮೇಲೊಂದು  ಕಾಗೆ ಕೂತು  ಭಾರಿ  ಸುದ್ದಿ  ಮಾಡಿ ಸೆಲೆಬ್ರಿಟಿಯಾಗಿ  ಸುದ್ದಿ ವಾಹಿನಿಗಳ ಟೀ ಆರ್ ಪೀ ಹೆಚ್ಚಿಸಿ ಬಿಟ್ಟಿದ್ದು  ನಿಮಗೆಲ್ಲ ನೆನಪಿರಬಹುದು  ! ಮುಖ್ಯಮಂತ್ರಿಗಳ ಹೈಫೈ ಕಾರಿನಲ್ಲಿ(ತನ್ನ ಹಿಂದಿನ ಜನ್ಮದಲ್ಲಿ ಮಂತ್ರಿಯಾದ ನನಪೇನಾದರೂ ಹಠಾತ್ತನೆ  ಮರುಕಳಿಸಿ) ಒಂದು  ರೈಡ್ ಹೋಗುವ ಆಸೆಯಾಯಿತೇನೋ ಅದಕೆ ಎನ್ನುವ ಅನುಮಾನ ನನಗೆ !
ಏನೇ ಅನ್ನಿ  ಇತರ ಪಕ್ಷಿಗಳಿಗಿಂತ ಕಾಗೆಗಳಿಗೆ  ಅಪಾರವಾದ  ನೆನಪಿನ ಶಕ್ತಿ ಇದ್ದು  ತಮಗೆ  ತೊಂದರೆ  ಕೊಟ್ಟವರ  ಮುಖವನ್ನು ಸರಿಯಾಗಿ  ನೆನಪಿಟ್ಟುಕೊಂಡು ತಾನು  ಸೇಡು ತೀರಿಸಿಕೊಳ್ಳುವುದಷ್ಟೇ  ಅಲ್ಲದೆ  ತನ್ನ ಮುಂದಿನ ತಲೆಮಾರಿಗೆಲ್ಲಾ ತಿಳಿಸಿಬಿಡುವುದಂತೆ !ಹಿಂದೆ ನಮ್ಮ  ನಮ್ಮ ಮನೆಯಲ್ಲಿ ಈ ಕಾಗೆಗಳು ಸೃಷ್ಟಿಸಿದ ಆವಂತರದ ಪ್ರಸಂಗವೊಂದನ್ನು ಇಲ್ಲಿ ಬಿಚ್ಚಿಡಲೇಬೇಕು .
ಅಂದು  ನಮ್ಮ ಮನೆಯಲ್ಲಿ ನನ್ನ ಮಗನ  ಹುಟ್ಟು  ಹಬ್ಬದ ಪಾರ್ಟಿ  .ಮನೆ ತುಂಬೆಲ್ಲ ತಮ್ಮ ಮಕ್ಕಳೊಂದಿಗೆ ನೆಂಟರಿಷ್ಟರ ಬಳಗ ಸೇರಿತ್ತು  .ಅಂತೂ  ಅತಿಥಿಗಳ  ಹರಟೆ- ನಗು, ತಿಂಡಿ -ತೀರ್ಥ ಎಲ್ಲ  ಮುಗಿದು ಒಬ್ಬೊಬ್ಬರಾಗಿ ವಿದಾಯ ಕೋರುತ್ತ  ಹೊರ ನಡೆದರೆ ಆಶ್ಚರ್ಯವೆಂಬಂತೆ ಮನೆಯ ಮುಂದೆ ದೊಡ್ಡ ಕಾಕ  ಸಭೆಯೊಂದು ನೆರೆದು ಜೋರು  ಗದ್ದಲವೆಬ್ಬಿಸಿ ಬಿಟ್ಟಿತ್ತು  !
ವಿಷಯ  ಇಷ್ಟೇ ! ಇನ್ನು  ಸರಿಯಾಗಿ  ಹಾರಲು   ಬಾರದ ಪುಟ್ಟ  ಕಾಗೆ  ಮರಿ ನಮ್ಮ ಗೇಟಿನ  ಹತ್ತಿರ ಬಿದ್ದು ಹಾರಲು ಪ್ರಯತ್ನಿಸುತ್ತಿತ್ತು .ಪಾಪ! ತಾಯಿ ಕಾಗೆ ತನ್ನ ಬಂಧು  ಬಳಗವನ್ನೆಲ್ಲ ಸೇರಿಸಿಕೊಂಡು  ಅದಕ್ಕೆ ಬಾಡಿ  ಗಾರ್ಡಿನಂತೆ ಗೇಟಿನ ಮೇಲೆಯೇ ಕಾವಲು  ಕಾಯುತ್ತ ಮನುಷ್ಯರಿಂದ ತನ್ನ ಪುಟ್ಟ ಮರಿಗೆ ಅಪಾಯವಾಗದಂತೆ ಆತಂಕದ  ಸಭೆ  ನಡೆಸಿತ್ತು !’
ಇನ್ನು ಅಲ್ಲಿ ಸೇರಿದ್ದ ರೌಡಿ  ಕಾಗೆಗಳು ಗೇಟು  ತೆರೆದು ಯಾರೆ  ಹೊರ  ಹೋಗಲು ಪ್ರಯತ್ನಿಸಿದರೂ  ಆಂಗ್ರಿ ಬರ್ಡ್ಗಳಂತೆ ಕುಕ್ಕಲು  ಬರುತ್ತಿದ್ದವು !
ಇದೆ  ಫಜೀತಿಯಲ್ಲಿ ಕೆಲ  ತುಂಟ ಮಕ್ಕಳು  ಕಾಂಪೌಂಡ್ ಹಾರಿ  ತಮ್ಮ  ಮಂಗ ಬುದ್ಧಿಯನ್ನು ಪ್ರದರ್ಶಿಸಿ ಕಾಗೆಯನ್ನು  ಯಾಮಾರಿಸಿ ಕೇಕೆ ಹಾಕಿದರೆ ,ನಾವು ದಂಪತಿಗಳು  ನಮ್ಮ ಕೆಲಸದಾಕೆ ಕೊಟ್ಟ ಸೂಪರ್ ಸುಪ್ರೀಂ  ಐಡಿಯಾದಂತೆ  ಕಾಕ ದಾಳಿಯಿಂದ ಬಚಾವ್ ಆಗಲು  ಛತ್ರಿ ಆಸರೆಯಲ್ಲಿ ಒಬ್ಬಬ್ಬರನ್ನೇ   ಗೇಟು  ದಾಟಿಸಿ ನವೀನ ರೀತಿಯ  ಅತಿಥಿ ಸತ್ಕಾರವನ್ನು  ಮೆರೆದೆವು ! ಇನ್ನು ನನ್ನ ಕೆಲವು  ಗೆಳತಿಯರು  ಹೆಲ್ಮೆಟ್ ಧಾರಿಗಳಾಗಿ ತಮ್ಮ ತಲೆಯನ್ನು  ರಕ್ಷಿಸಿಕೊಳುತ್ತಾ ತಮ್ಮ ಚಾಣಾಕ್ಷತನವನ್ನು  ತೋರಿದರು !
ಇದೆ  ಗದ್ದಲದಲ್ಲಿ ಜೋಪಾನವಾಗಿ ಪುಟ್ಟ  ಮಕ್ಕಳನ್ನು ಹಿತ್ತಲ ಗೋಡೆಯಿಂದ  ದಾಟಿಸುತ್ತಿದ್ದ ಎಜಮಾನರಿಗೆ  ಕಾಗೆ  ಬಳಗದ ಸದಸ್ಯವೊಂದು ರಭಸದಿ  ಹಾರಿಬಂದು  ತಲೆಗೆ  ಕುಕ್ಕಿ ಏಕಾಏಕಿ ದಾಳಿ ನಡೆಸಿತು .!ಈ ಕಾಕರಾಯ ನಮ್ಮ  ಮನೆ  ಮುಂದಿದ್ದ ಚಿಕ್ಕ ಮರವನ್ನು  ಪಾರ್ಕಿಂಗ್  ಸಲುವಾಗಿ ಕಡಿಸಿದ್ದರ ಸೇಡು ತೀರಿಸಿಕೊಂಡಿತೆ ಎಂದು  ನಮಗೆ ಶಂಕೆ ಕಾಡಿತು  !. ಗಲಭೆ.ಮುಷ್ಕರಗಳ ಸಮಯದಲ್ಲಿ ಗಲಭೆಕೋರರು ತಮ್ಮ ವೈರಿಗಳ ಮೇಲೆ ವಯಕ್ತಿಕ ಸೇಡನ್ನೂ  ತೀರಿಸ್ಕೊಂಡಂತೆ ಆ ಕಾಗೆ ನಮ್ಮ ಏಜಮಾನರ ಮುಖವನ್ನು ನಾ ನಿನ್ನ ಮರೆಯಾಲಾರೆ ಎಂಬಂತೆ ತನ್ನ ಸಿಟ್ಟನ್ನು  ಪ್ರದರ್ಶಿಸಿತು !
ಅಂತೂ ಹೊರಗೆ  ನೆರೆದಿದ್ದ  ಕಾಕ  ಬಳಗದಿಂದ ಅಪರೇಷನ್ ಕಾಗೆ  ಮರಿ  ರಕ್ಷಣೆ  , ಸುಖಾಂತ್ಯದಲ್ಲಿ ಕೊನೆಗೊಂಡು ನಾವು ಸಮಾಧಾನದ ಉಸಿರು ಬಿಟ್ಟೆವು . ಅಂದಿನಿಂದ ನಮ್ಮವರು  ಕಾಗೆಗಳನ್ನು ನೋಡಿದಾಗಲ್ಲೆಲ್ಲಾ   ಮಾರು ದೂರ   ಓಡುವಂತೆ ಮಾಡಿದ  ಆ  ಕಾಗೆ ಪ್ರಕರಣ  ಇಂದಿಗೂ  ನಗು  ತರಿಸುತ್ತದೆ !
ಒಟ್ಟಿನಲ್ಲಿ ಈ ಕಾಗೆ ಪುರಾಣವನ್ನು ಓದಿದವರಿಗೆ ಯಾವ ಕಾಗೆಯಿಂದಲೂ ಕುಕ್ಕಿಸಿಕೊಳ್ಳುವ ಪರಿಸ್ತಿತಿ ಬಾರದು ಎಂದು ನಾನು ಕಾಗೆ  ಹಾರಿಸದೆ ಕಾಗೆಯಾಣೆಗೂ  ಪ್ರಮಾಣ ಮಾಡುತ್ತೇನೆ !.
ಅವಧಿ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಪ್ರಬಂಧ 
ಆರತಿ ಘಟಿಕಾರ್



2 comments :

  1. ಭವತಿ ಆರತಿ ರಚಿತಾ ಕಾಕಪುರಾಣ ಪಠಣಸ್ಯ ಪುಣ್ಯಫಲಮ್ ಪ್ರಾಪ್ತವಾನ್ ಅಹಮ್. ಹಾಸ್ಯರಸಾಮೃತಮ್ ಸಂಪ್ರಾಪ್ತವಾನ್. ಶುಭಾಶಯಾ: ಸಂತು.

    ReplyDelete
  2. ಧನ್ಯೊಸ್ಮಿ ಸರ್..
    ಈ ಕಾಕ ಪುರಾಣ ನಿಮಗೆ ಸಂತೃಪ್ತಿ ಹಾಸ್ರ ರಸ ಉಕ್ಕಿಸಿದ್ರೆ ನಾನು ಪುಣ್ಯವಂತೆ 💐🏵

    ReplyDelete