Sunday, April 5, 2020

ಫೇಸ್ಬುಕ್ ಲಾಕ್ಡೌನ್



                                              

ಈಗಾಗಲೇ ವಿಶ್ವದಲ್ಲೆಲ್ಲಾ  ಹಬ್ಬಿ ಲಕ್ಷಾಂತರ ಮಂದಿ ಸೊಂಕಿತರಾಗಿ , ಸಾವಿರಾರು ಜನರ ಬಲಿ ಪಡೆಯುತ್ತಿರುವ ಉಗ್ರ ಮಾರಣಾಂತಿಕ ಕ್ರಿಮಿ   ಕರೋನಾ” ಈಗ ಬೇರೊಂದು ಮಹಾ ಮಾರಿ ರೂಪದಲ್ಲಿ ಕಾಣಿಸಿ ಕೊಳ್ಳುತ್ತಿದೆಯಂತೆ ! ಈ ಹೊಸ  ಕಿಡಿಗೇಡಿ “ ಮರೋನಾ “  ಎಂಬ ವೈರಸ್ ಕರೋನಾಳ ತಂಗಿಯೇ ಆಗಿದ್ದು ಅಕ್ಕನ ಚಾಳಿ ಮನೆ ಮಂದಿಗೆಲ್ಲ ಎನ್ನುವಂತೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಸಿ ಕೊಂಡಿದ್ದು  ಆನ್ ಲೈನಿನಲ್ಲಿ ಅಡ್ವಾನ್ಸ್ ಕಿಲ್ಲರ್  ಕೋರ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ  ದಾಳಿಯಿಟ್ಟು ಜಗತ್ತಿನಾದ್ಯಂತ ಮಿಲ್ಲಿಯನ್ ಗಟ್ಟಲೆ ಫೇಸ್ಬುಕ್ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡುವುದಲ್ಲದೆ ಅವುಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡುತ್ತಿದೆ !

ಇನ್ನು ಅಪ್ಪಿ ತಪ್ಪಿ ವೈರಸ್ ಸೋಂಕಿತ ಖಾತೆಗಳ ಪೋಸ್ಟು, ಸ್ಟೇಟಸ್ಗಳಿಗೆ ನೀವು ಲೈಕು, ಕಾಮೆಂಟು ಹಾಕಿದ್ದೆಯಾದರೆ ನಿಮ್ಮ ಫೇಸ್ಬುಕ್ ಖಾತೆಗೂ ಅಪಾಯ ತಪ್ಪಿದ್ದಲ್ಲ  . ಈಗಾಗಲೇ ಅಮೇರಿಕಾ  ಯುರೋಪ್ ದೇಶಗಳಲ್ಲಿ  ಹಲವಾರು ಫೇಸ್ಬುಕ್ ಅಕೌಂಟುಗಳು ಸೊಂಕಿತವಾಗಿ ಈ ಉಗ್ರ ರೂಪಿ ಮರೋನಾ ಹಾವಳಿಗೆ ಬಲಿಯಾಗಿವೆ .  ಇದನ್ನು ಸಂಪೂರ್ಣವಾಗಿ ನಾಶ ಪಡಿಸುವ ಆಂಟಿ ವೈರಸ್ ತತ್ರಾಂಶವನ್ನು ಸಮರೋಪಾದಿಯಲ್ಲಿ ಅಭಿವೃದ್ಧಿ ಪಡಿಸಲು ಇನ್ನು ಮೂರು ತಿಂಗಳು ಕಾಲಾವಕಾಶ ಬೇಕಿದ್ದರಿಂದ ನಾಳೆಯಿಂದಲೇ  ಫೇಸ್ಬುಕ್ ತಾಣವನ್ನು( ಭಾಗಶಃ )  ಲಾಕ್ ಡೌನ್ ಮಾಡಲಾಗುವುದು , ಈ ಅವಧಿ  ಮುಗಿಯುವ ತನಕ ಸ್ಟೇಟಸ್ ಹಾಕುವುದು , ಪೋಸ್ಟುಗಳಿಗೆ ಲೈಕ್ ಕುಟ್ಟಿ ಕಾಮೆಂಟು, ಶೇರು,  ಟ್ಯಾಗ್ ಮಾಡುವ ನಿತ್ಯದ ಚಟುವಟಿಕೆಗಳಿಂದ ದೂರವಿದ್ದು ಮೂರು ತಿಂಗಳ ಅವಧಿಯವರೆಗೆ  ನೀವೆ ಸ್ವಯಂ ಪ್ರೇರಣೆಯಿಂದ  ಫೇಸ್ಬುಕ್ ಬುಕ್ ಲಾಕ್ ಡೌನ್ ಮಾಡಿಕೊಳ್ಳಿ. ನಿಮ್ಮ  ಖಾತೆಯ ಸುರಕ್ಷತೆ ನಿಮ್ಮ ಕೈಯಲ್ಲಿದೆ . ಕೆಲವು ದಿನಗಳ ಮಟ್ಟಿಗೆ ನಿಮ್ಮ ಅಕೌಂಟ್ಗಳನ್ನು ಡೀ ಆಕ್ಟಿವೇಟ ಮಾಡಿದರಂತೂ  ನೀವು ನೂರಕ್ಕೆ ನೂರಷ್ಟು “ ಮರೋನಾ “ ವೈರಸ್ಸಿನಿಂದ ಪಾರಾಗಬಹುದು , ಈ ನಿಟ್ಟಿನಲ್ಲಿ ಪ್ರಪಂಚಾದ್ದಾದ್ಯಂತ ಇರುವ  ನಮ್ಮೆಲ್ಲ ಆತ್ಮೀಯ ಬಳಕೆದಾರ ಸಹಕಾರ ಕೋರುತ್ತಿದ್ದೇವೆ” ಎಂಬ  ಆಘಾತಕಾರಿ  ಅಧಿಕೃತ ಘೋಷಣೆ ಫೇಸ್ಬುಕ್ ಮುಖ್ಯ ಕೇಂದ್ರದಿಂದ ಬಿತ್ತರವಾಯಿತು !

ಈಗಾಗಲೆ ಇದರ ಮನೆಹಾಳು ಅಕ್ಕ” ಕರೋನಾ “  ದಸೆಯಿಂದಾಗಿ  ಜಗತ್ತೇ ಪತರುಗುಟ್ಟುತ್ತಾ ಗೃಹಬಂಧನದಲ್ಲಿದ್ದುಕೊಂಡು   ಸಾಮಾಜಿಕ ಜಾಲತಾಣದಲ್ಲೆ  ಸಕ್ರಿಯರಾಗಿ  ಸಮಯ ಕಳೆಯುತ್ತಿದ್ದ ಜನರ  ಗಾಯದ ಮೇಲೆ ಬರೆ ಎಳೆದಂತಾಗಿ   ಸುದ್ದಿ ಪ್ರಕಟಿಸಿದ್ದೆ ತಡ  ಫೇಸ್ಬುಕ್ ಗೋಡೆಗಳ ಮೇಲೆ ಹಾಹಾಕಾರ, ಕೋಲಾಹಲ ಶುರುವಿಟ್ಟುಕೊಂಡಿತು .
ಕೆಲವು ಫೇಸ್ಬುಕ್ ವ್ಯಸನಿಗಳಂತು  ಇನ್ನು ಜೀವನವೇ ಮುಗಿದಂತೆ ತಲೆಕೆಡಿಸಿಕೊಂಡು ಕುಳಿತರು  . ಕೆಲವರು ತರಾತುರಿಯಲ್ಲಿ ತಮ್ಮ ಡೀಪಿಗಳನ್ನು ಬದಲಾಯಿಸಿ ಬಂದಷ್ಟೆ ಲೈಕು ಕಾಮೆಂಟುಗಳಿಗೆ  ತೃಪ್ತರಾದರು ,ಕವಿಗಳು ಲಗು ಬಗೆಯಿಂದ  ಉದ್ದುದ್ದವಾದ ಗಂಭೀರ ಕವನಗಳನ್ನು ತಮ್ಮ ಗೋಡೆಯ ಮೇಲೆ ಹರಿಬಿಟ್ಟರು . ವೈರಸ್ ಕುರಿತಂತಾ  ಜೋಕು ಹನಿಗವನ, ಸ್ವಗತಗಳು, ಲಹರಿಗಳು   ಸ್ಟೇಟಸ್ ರೂಪದಲ್ಲಿ ದಾಳಿಯಿಡಲಾರಂಭಿಸಿದವು .

ಕೆಲ  ಜವಾಬ್ದಾರಿ ಫೇಸ್ಬುಕ್ಕಿಗರು  ತಮ್ಮ ಖಾತೆಗಳನ್ನು ಒಲ್ಲದ  ಮನಸ್ಸಿನಿಂದ ಡೀ ಆಕ್ತಿವೆಟ್ ಮಾಡಿಕೊಂಡು ದಿನ ನಿತ್ಯ ಆನ್ ಲೈನಿನಲ್ಲೇ ಕಳೆದು ಮಾಡಲಾಗದ ರಾಶಿ ಕೆಲಸಗಳ ಕಡೆ ಗಮನ ಹರಿಸ ತೊಡಗಿದರು , ನಾಲ್ಕು ಸಾಲುಗಳ ಸ್ಟೇಟಸ್ ಓದುವುದನಷ್ಟೇ ರೂಢಿ ಮಾಡಿಕೊಂಡ ಫೇಸ್ಬುಕ್ ಪ್ರೇಮಿಗಳು ಟೈಮ್ ಪಾಸಿಗಾಗಿ  ಕಥೆ ಪುಸ್ತಕ ಹಿಡಿದು ಒಂದೊಂದು ಪುಟ ಓದುವಷ್ಟರಲ್ಲಿ ಸುಸ್ತಾದರು  .

ನಿಮ್ಮ ಖಾತೆಗಳಿಗೆ ವೈರಸ್ ತಗಲುವುದಷ್ಟೆ  ಅಲ್ಲದೆ ನಿಮ್ಮ ಸ್ನೇಹಿತರ ಪಟ್ಟಿಗೂ ಸೋಂಕು ಹಬ್ಬುವ ಅಪಾಯ ಇರುವುದರಿಂದ ದಯಮಾಡಿ ಫೇಸ್ಬುಕ್ಕ್ ಬಳಕೆ  ಕಡಿಮೆ ಮಾಡಿ ಎಂದು ಹಲವಾರು ಸಲ ಮನವಿ ಕೋರಿಕೆಗಳನ್ನು ಸುದ್ಧಿ ಮಾಧ್ಯಮದಲ್ಲಿ ಬಿತ್ತರಿಸಿದರೂ   ಕೆಲವು ನಿರ್ಲಜ್ಜ  ಫೇಸ್ಬುಕ್ ಬಳಕೆದಾರರು ಈ ಲಾಕ್  ಡೌನ್ ಅವಧಿ ಜಾರಿಯಲ್ಲಿದ್ದಾಗಲೂ ಎಲ್ಲಾ  ನಿಯಮಗಳನ್ನು ಗಾಳಿಗೆ ತೂರಿ ಫೇಸ್ಬುಕ್ ಗೋಡೆ ಮೇಲೆ ಅಡ್ಡಾ  ದಿಡ್ಡಿ ಓಡಾಡುತ್ತ ಪೋಸ್ಟ್ ಹಾಕುವುದು ,ಸ್ನೇಹ ಕೋರಿಕೆಗಳನ್ನು ಕಳಿಸುವುದು ,  ಲೈಕು ಕಾಮೆಂಟ್   ಕುಟ್ಟುವುದು  ಕಂಡು ಬಂದಾಗ ರೋಸಿ ಹೋದ ಫೇಸ್ಬುಕ್ ಕಾರ್ಯಾಲಯ ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು  ತೀರ್ಮಾನಿಸಿತು .

ವಿಶ್ವದ್ದಾದ್ಯಂತ  ಇರುವ ಮಿಲ್ಲಿಯನ್ ಗಟ್ಟಲೆ ಫೇಸ್ಬುಕ್ ಬಳಕೆದಾರರ  ದೇಶ- ಭಾಷೆಗಳಿಗನುಸಾರವಾಗಿ ವರ್ಚುಯಲ್ ಪೋಲಿಸರನ್ನು ನೇಮಿಸಲಾಯಿತು . ನಿಭಂದನೆಗಳನ್ನು ಪಾಲಿಸದ ಬೇಜವಾಬ್ದಾರಿತನ ಮೆರೆಯುವ ಖಾತೆಗಳನ್ನು  ಗುರುತಿಸಿ  ವಾರ್ನಿಂಗ್ ನೀಡಿಲಾಯಿತು , ಆದರೆ ಅದಕ್ಕೂ ಬಗ್ಗದ ನಾಚಿಗ್ಗೇಡು ಬಳಕೆದಾರ ಅಕೌಂಟ್ಗಳು  ತಾತ್ಕಾಲಿಕವಾಗಿ ಮೂರು ತಿಂಗಳ ಕಾಲ ನಿಷ್ಕ್ರಿಯವಾದವು .

ಈ ವೈರಸ್ ಇನ್ನು ವಾಟ್ಸಾಪ್ ತಾಣದ ಮೇಲೂ ತನ್ನ ಕರಾಳಮುಖ ತೋರಿಸುವ  ಸುದ್ದಿಗಳು ಫಾರ್ವರ್ಡ್ ಆಗತೊಡಗಿದಾಗ ಜನ ನಡುಗಿ ಹೋದರು . ಆನ್ಲೈನಿನಲ್ಲಿ ನಡೆಯುತ್ತಿರುವ ಅಧರ್ಮವನ್ನು ಹೋಗಲಾಡಿಸಿ  ಒಳ್ಳೆ ಕರ್ಮ  (ಮಾಡಿದವರ ಖಾತೆಗಳನ್ನು )  ಮಾತ್ರ ಉಳಿಸಿಕೊಳ್ಳಲು ಸಂಭವಾಮಿ ಯುಗೆ ಯುಗೆ  ಎಂದು ಸಾಕ್ಷಾತ್ ಭಗವಂತನೆ ವೈರಸ್ ರೂಪದಲ್ಲಿ ಅವತರಿಸಿದ್ದಾನೇನೋ   ಎಂಬಂತ ವಂದತಿಗಳು ಹರಿದಾಡಿ ಜನರು  ಆತಂಕಕ್ಕೊಳಗಾದರು    .

ಇನ್ನು ಮುಂಜಾನೆ ಕಣ್ಣು ಬಿಟ್ಟಾಕ್ಷಣ  ಕರಾಗ್ರೆ ವಸತೇ ಮೊಬೈಲ್ ಎಂದು ಹಲ್ಲುಜ್ಜುವ ಮುನ್ನವೆ ಫೇಸ್ಬುಕ್- ವಾಟ್ಸಾಪ್  ಗಳಿಗಾಗಿ  ಮೊಬೈಲ್ ಸ್ಕ್ರೀನ್ ಉಜ್ಜುತ್ತಲೆ  ಆರಂಭಗೊಳ್ಳುತ್ತಿದ್ದ ಎಷ್ಟೋ ದಿನಚರಿಗಳಿಗೆ ಬ್ರೇಕ್ ಬಿದ್ದು ಅವರ ತಲೆಗಳನ್ನು ಬ್ರೇಕ್ ಮಾಡಿಕೊಳ್ಳುವ ಮಟ್ಟಕ್ಕೆ ಹೋದರು . ಮನ್ನಣೆಯ ಮೋಹ ,ಲೈಕಿನ ದಾಹಕ್ಕೆ ಅಂಟಿಕೊಂಡ ವ್ಯಸನಿಗಳ ಪೋಸ್ಟುಗಳು ಭಣಗುಟ್ಟುತ್ತ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದ್ದು ಕಂಡು ಖಿನ್ನತೆ ಅವರಿಸತೊಡಗಿತು .

ಈ ಗಂಬೀರ ವಿಷಯದ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ಪ್ಯಾನೆಲ್ ಡಿಸ್ಕಶನ್ , ಘನಘೋರ ಚರ್ಚೆಗಳು ನಡೆದು ಇವರ ಪರಿಸ್ಥತಿ ಬಿಗಡಾಯಿಸುವ ಮುನ್ನ ಫೇಸ್ಬುಕ್ ಕಂಪನಿ ಎಚ್ಚೆತ್ತುಗೊಂಡು ಪರಿಹಾರ ಸೂಚಿಸಬೇಕು ಎನ್ನುವ ಒಕ್ಕೊರಲಿನ ಕೂಗುಗಳು ಕೇಳಿಬಂದವು .
ಫೇಸ್ಬುಕ್ ಕಂಪನಿಯ ಸೀಈಓ  ಈ ನಿಟ್ಟಿನ್ನಲ್ಲಾಗಲೆ  ಸೈಕಾಲಜಿ ತಜ್ಞ್ಯರೊಂದಿಗೆ  ಸಮಾಲೋಚನೆಯಲ್ಲಿ ತೊಡಗಿದ್ದರು.  ಫೇಸ್ಬುಕ್ ವ್ಯಸನಿಗಳ ಮಾನಸಿಕ ಸ್ವಾಸ್ಥ್ಯ  ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವುದನ್ನು ಕಂಡು ಕಂಪನಿಯ ಪ್ರಧಾನ ಕಾರ್ಯಾಲಯದಲ್ಲಿ ಉನ್ನತ ಮಟ್ಟದ ಸಭೆ  ನಡೆಸಿ  ಪೋಸ್ಟು, ಸ್ಟೇಟಸ್ ಹಾಕುವ ಚಟಕ್ಕೆ ಕಡಿವಾಣ ಬಿದ್ದಾಗಿನಿಂದ   ಖಿನ್ನತೆಯ ಲೆವೆಲ್ಲಿಗೆ ತಲಪುತ್ತಿರುವ  ಫೇಸ್ಬುಕ್ ವ್ಯಸನಿಗಳ ಹಿತಾಸಕ್ತಿಯನ್ನು ಕಾಪಾಡಲು  ಒಂದು ಮಹತ್ವದ ತೀರ್ಮಾನಕ್ಕೆ ಬರಲಾಯಿತು .

ಈ ನೀರಸ ಅವಧಿಯಲ್ಲಿ  ಕೆಲವು ಅಗತ್ಯದ (ನಿರುಪದ್ರವಿ ) ಮನರಂಜನಾ  ಸೇವಾ ಪೋಸ್ಟುಗಳಿಗೆ,  ಲಾಕ್ ಡೌನ್ ನಿಯಮಗಳನ್ನು ಸಡಲಿಸಲು ನಿರ್ಧರಿಸಲಾಯಿತು .
ಉದಾಹರಣೆಗೆ ಮಕ್ಕಳು ಹಲ್ಲುಜ್ಜುವ , ಗೇಟಿನ ಬಳಿ ರಂಗೋಲಿ ಬಿಡಿಸುವ ಪಟದಿಂದ ಹಿಡಿದು , ಗುಬ್ಬಿ, ಸೂರ್ಯ, ಗಿರಿ ಬೆಟ್ಟ ಜಲಪಾತಗಳ ಚಿತ್ರದೊಂದಿಗೆ ಮುಂಜಾನೆಯ ತಾಜಾ ಅನುಭವ ನೀಡುವ “ ಗುಡ್  ಮಾರ್ನಿಂಗ್   ಫ್ರೆಂಡ್ಸ್ “  ಹಾಕುವ ಮಹಾನುಭಾವರ ನಿತ್ಯದ ಪೋಸ್ಟುಗಳು  , ತಾವು ಮಾಡಿದ ತರಾವರಿ ಹೊಸ ರುಚಿ ತಿಂಡಿ ತಿನಸುಗಳನ್ನು ಮೊದಲು ಫೇಸ್ಬುಕ್ಕಿಗೆ   ನೈವೇದ್ಯ  ಮಾಡಿ ಸೂಪರ್ , ಯಮ್ಮಿ ಎನ್ನುವ ಕಾಮೆಂಟ್ ಗಿಟ್ಟಿಸಿದ ನಂತರವೇ ಗಂಡ  ಮಕ್ಕಳಿಗೆ ಕೊಡುವ ಪಾಕ ಪ್ರವೀಣ ಮಮ್ಮಿಯರ  ಪೋಸ್ಟುಗಳು , ತಮ್ಮ ಊರೂರು  ಸುತ್ತಾಟದಲ್ಲೆಲ್ಲ  ಮಹಿಳಾಮಣಿಗಳು  ಕ್ಲಿಕ್ಕಿಸಿದ ಅಪರೂಪದ ಪಟಗಳು. ಉದಾಹರಣೆಗೆ ಸಾಗರದಲೆಗಳ ನಡುವೆ ನೈಲ್ ಪಾಲಿಶ್ ಹಚ್ಚಿದ  ಪಾದಗಳ ಕ್ಲೋಸಪ್ ಪಟಗಳು  , ಭಾವಿ ಕಟ್ಟೆಗೆ ನಿಂತು (ಖಾಲಿ )ಬಿಂದಿಗೆಯನ್ನ ಎಳೆದಂತಾ  ಪೋಸುಗಳು ,  ಕಸದಿಂದ ರಸ ಎನ್ನುವ ಸ್ಟೇಟಸ್ ಹಾಕಿ  ಹಕ್ಕಿ ಪುಕ್ಕ, ಕಪ್ಪೆ ಚಿಪ್ಪು , ತೆಂಗಿನನಾರುಗಳಿಂದ ತಯಾರಿಸಿದ  ಕಿವಿಯೋಲೆಗಳನ್ನು ತಾವೇ ಕಿವಿಗೆ ತೂಗಿಸಿಕೊಂಡ ಮಹಿಳೆಯರ ಚಂದದ ಚಿತ್ರಗಳು , ವಿಚಿತ್ರ ಭಂಗಿಯಲ್ಲ ಕ್ಲಿಕ್ಕಿಸಿದ  ಸೆಲ್ಫಿ  ಕುಮಾರಿಯರ  ಪಟಗಳು  ಒಂದೇ ಎರಡೇ !

ಇನ್ನು  ಹುಡುಗರು ಶಾರುಖ್  ಖಾನ್ ಭಂಗಿಯಲ್ಲಿ ಟ್ರೈನಿನ ಬಾಗಿಲ ಬಳಿ , ಬೆಟ್ಟದ ತುದಿಯಲ್ಲಿ  ನಿಲ್ಲುವ ,ಫುಟ್ ಬೋರ್ಡ್ ಮೇಲೆ ಒಂದೇ ಕಾಲಲ್ಲಿ  ನೇತಾಡುವ, ರಕ್ತ ದಾನ ಮಾಡುವ , ಜನಪ್ರಿಯ ಸಿನಿಮ ತಾರೆಯರ ಜೊತೆಗಿನ ಫೋಟೋ ವೀರರು  ಹಾಕುವ ಇಂತಾ  ಲೆಕ್ಕಕ್ಕಿಲ್ಲದ  ಮಸ್ತಾದ   ಪಟಗಳು , ಅಷ್ಟೇ ಅಲ್ಲದೆ   ದಿನಕೊಮ್ಮೆ ( ತಮ್ಮದೇ ಚಿತ್ರ ನೋಡಿ ಬೇಸರಗೊಂಡು ) ಡೀಪಿ ಬದಲಾಯಿಸುವ ಕಾಮೆಂಟಾಕಾಂಕ್ಷಿಗಳು , ದಿನವಿಡೀ ತಮ್ಮ (ವಾಟ್ಸಾಪ್ ) ಜೋಕ್ಸ್ ಗಳಿಂದ ಹಾಸ್ಯ  ಹಾಗು ಮನರಂಜನೆ ಒದಗಿಸುವ ಜೋಕುಮಾರರ  ಪೋಸ್ಟುಗಳು ಹೀಗೆ  ಅಗತ್ಯದ  ಮನರಂಜನೆ,ಮನೋಲ್ಲಾಸ  ಸೇವಾ ನಿಯಮದಡಿಯಲ್ಲಿ  ಇವರ  ಖಾತೆಗಳು  ಸೋಂಕು ಮುಕ್ತವಾಗಿರುವುದನ್ನು ಧೃಡ ಪಡಿಸಿಕೊಂಡು  ಆ ಪೋಸ್ಟುಗಳಿಗೆ ಮಾತ್ರಾ ಅನುಮತಿ ನೀಡಲಾಯಿತು.

ಇನ್ನು ಫೇಸ್ಬುಕ್ ವೇದಿಕೆಯ ಮೇಲೆ ಕಲೆ, ಸಾಹಿತ್ಯ ಪ್ರಾಕಾರಗಳು ,  (ಬೆರಳೆಣಿಕೆಯಷ್ಟು ಜನ ಓದುವ ) ತಮ್ಮ ಗಂಭೀರ  ಕವನ , ಮಹಾ ಕಾವ್ಯಗಳು ,ಕಥೆ ಪ್ರಬಂಧಗಳನ್ನು ಹಂಚಿಕೊಳ್ಳುವ ಕಲಾವಿದರ  ,  ಸೃಜನಶೀಲ ಕವಿ, ಲೇಖಕರ  ಪೋಸ್ಟುಗಳಿಗೆ ಫೇಸ್ಬುಕ್ ಲಾಕ್ ಡೌನ್ ಪೂರ್ತಿ ಅನ್ವಯವಾವುದೆಂದು ಆದೇಶ  ಹೊರಡಿಸಲಾಯಿತು .

ಸಾಮಾಜಿಕ ಜಾಲತಾಣದಲ್ಲೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳ (ಕರ್ಮಗಳ )  ಬಗ್ಗೆ  ರಿಂಗ ಟೋನುಗಳು ಎಚ್ಚರಿಕೆ ನೀಡಿದವು  .ಎಷ್ಟೇ ಕಠಿಣ ನಿಯಮಗಳನ್ನು ಹೇರಿದ್ದರೂ ಸೋಂಕಿತ ಖಾತೆಗಳ ಸಂಖ್ಯೆ ಗಣನೀಯವಾಗಿ ಏರತೊಡಗಿ ಕಳವಳ ಹುಟ್ಟು ಹಾಕಿದವು . ಪಾಶ್ಚಾತ್ಯ ದೇಶಗಳೆ ಮರೋನಾ ವೈರಸ್ನ  ಉಗಮ ಸ್ಥಾನವೆಂದು ಭಾರತೀಯ ಫೇಸ್ಬುಕ್ ಗ್ರಾಹಕರಿಗೆ ತಮ್ಮ  ಸ್ನೇಹಿತರ ಪಟ್ಟಿಯಲ್ಲಿದ್ದ  ವಿದೇಶಿ (ಇಟಲಿ, ಲಂಡನ್, ಸ್ಪೇನಿನ ಇತ್ಯಾದಿ ) ಸ್ನೇಹಿತರನ್ನು ಕೊಡಲೇ ಬ್ಲಾಕ್ ಮಾಡಲು ಸೂಚಿಸಲಾಯಿತು .

ಭಾರತದಲ್ಲಿ  ಈ ಕಿಡಿಗೇಡಿ ಮರೋನಾ  ವೈರಸ್ಸಿನಿಂದ ತಮ್ಮ ಖಾತೆಯನ್ನು ಉಳಿಸಿಕೊಳ್ಳಲು ಕೆಲವು ಆಸ್ತಿಕರು  ದೇವರ ಮೊರೆ ಹೋಗಿ   ತಮ್ಮ ಫೇಸ್ಬುಕ್  ಐಡಿ ಹೆಸರಿನಲ್ಲಿ ಅರ್ಚನೆ ಹೋಮಗಳನ್ನು ಮಾಡಿಸಿದರು . ಕೆಲ  ಅಗತ್ಯದ  ಸ್ಟೇಟಸ್ ಹಾಗು ಪೋಸ್ಟುಗಳನ್ನು ಹೊರತು ಪಡಿಸಿ ಫೇಸ್ಬುಕ್  ಗೋಡೆ/ಗಲ್ಲಿ ಗಲ್ಲಿಯಲ್ಲಿ ಎಂದಿನ  ಲವಲವಿಕೆಯಿಲ್ಲದೆ ನೀರಸ ವಾತರವರಣದ ಲಾಕ್ ಡೌನ್ ಅವಧಿ ಎಲ್ಲರಿಗೂ ಬೋರ್ ಹಿಡಿಸಿ ಜನ ಹುಚ್ಚರಂತೆ ವರ್ತಿಸಲು ಆರಂಭಿಸಿದ್ದರು !.

ರೀ !  ನೆನ್ನೆ  ಹತ್ತು ಹನಿಗವನ ಗೀಚಿ ನನ್ನ ಪ್ರೊಫೈಲ್ನಲ್ಲಿ ಹಾಕಿದ್ದೆ  .ನೋಡಿ ಫೇಸ್ಬುಕ್ ಲಾಕ್ಡೌನ್  ಅಂತ ಎಲ್ಲಾ ತೆಗೆದು  ಬಿಟ್ಟಿದ್ದಾರೆ. ಅಯ್ಯೋ!,ಏನ್ರಿ ಮಾಡಲಿ ಈಗ !? ಎಂದು ನಾನು ಒಂದೇ ಸಮನೆ ಅಲವತ್ತು ಕೊಂಡಾಗ
  ಏನೇ ಅದು ನಿಂದು ಗಲಾಟೆ , ಯಾವ ಲಾಕ್ ಡೌನ್ ಬಗ್ಗೆ ಕನವರಿಸ್ತಾ ಇದ್ದೀಯಾ  ? ನಿನ್ನ ಹನಿಗವನಕ್ಕೆ   ಹತ್ತು ಲೈಕ್ ಬಂದಿದ್ದನ್ನು ಈಗಷ್ಟೆ ನೋಡಿದೆ ! ಗಂಟೆ ಎಂಟಾಯಿತು ಇನ್ನು ಮಲಗಿದ್ದೀಯಾ ?  ಕಾಫೀ ಮಾಡಿದ್ದೀನಿ . ಇನ್ನಾದ್ರು ಏಳು ಮಾರಾಯ್ತಿ “ ಎಂದು ವರ್ಕ್ ಅಟ್ ಹೋಂ ನಲ್ಲಿದ್ದ  ಗಂಡನ ಅಕ್ಕರೆಯ ರೇಗಾಟಕ್ಕೆ  ಗಾಬರಿಯಿಂದ ಕಣ್ಣು ಬಿಟ್ಟೆ !


ಆರತಿ ಘಟಿಕಾರ್

ಬೆಂಗಳೂರು  

(ಮೇ 2020 )ವಿಶ್ವವಾಣಿ ಪತ್ರಿಕೆಯಲ್ಲಿ  ಪ್ರಕಟವಾದ ಹಾಸ್ಯ ಲೇಖನ .









10 comments :

  1. ಅಯ್ಯೊ, ನನ್ನ faceನ್ನು lock down ಮಾಡೇನು, ಆದರೆ face bookಅನ್ನು lock down ಮಾಡಲಾರೆ.
    ನಿಮ್ಮ ಈ ಲೇಖನದ ಪ್ರತಿಯೊಂದು ಪರಿಚ್ಛೇದಕ್ಕೂ like ಒತ್ತುತ್ತೇನೆ!

    ReplyDelete
    Replies
    1. ಧನ್ಯವಾದಗಳು ಸರ್.
      ನಿಮ್ಮ ಲೈಕು ದಿಲ್ ಖುಶ್ ಮಾಡಿತು.

      Delete
    2. chendada lekhana. sadhaka bhadakagalannu chennagi vivarisiddeeri

      Delete
  2. ಬರಹ ಚೆನ್ನಾಗಿದೆ

    ReplyDelete
  3. ತುಂಬಾ ಚೆನ್ನಾಗಿದೆ,ಓದಿ ಕೊಂಡು ಹೋಯ್ತು ಸಲೀಸಾಗಿ👌👌💐

    ReplyDelete
  4. ಚೆನ್ನಾಗಿದೆ ಆರತಿ

    ReplyDelete