Wednesday, May 6, 2020

ನಿಂಬೆ ಮಹಾತ್ಮೆ




ನಿಂಬೆ ಮಹಾತ್ಮೆ
=============
ನಿಂಬೆ ಗಿಡ ತುಂಬಾ ಚೆಂದನಿಂಬೆ ಹಣ್ಣು ತುಂಬಾ ರುಚಿ !”  ಎಂದು  ಹಾಡಿಕೊಳ್ಳುತ್ತಾ  ಈ ಪರಿ ಬೇಸಿಗೆಗೆ ಗಂಟಲೊಣಗಿ ನಿಂಬೆ ಪಾನಕ ಮಾಡುತ್ತಿದ್ದೆ . ಈ ಕೊರೊನಾ ವೈರಸ್ಸಿನಿಂದ   ಗೃಹ ಬಂಧಿಗಳಾಗಿ (ಮನೆ) ತಿಂಡಿ -ಊಟ , ಜೂಸುಗಳ ಭಾರಾಟೆಯಲ್ಲಿ  ಗಂಟೆ ಗಟ್ಟಲೆ ಅಡುಗೆ ಮನೆಯಲ್ಲೇ ನಮ್ಮಂತ ಗೃಹಿಣಿಯರಿಗೆ  ಲಾಕ್ ಡೌನ್ ಆಗಿ ಬಿಡುವ  ಪರಿಸ್ಥಿತಿ  !

ನಿಂಬೆ ಪಾನಕದ  ಹುಳಿ ಮಧುರ ರುಚಿ ನಾಲಗೆಗೆ ಏರುತ್ತಿದ್ದಂತೆ ಈ ನಿಂಬೆಯ ಬಗ್ಗೆ ತಲೆಯಲ್ಲಿ ಹುಳ ಕೊರೆಯಲಾರಂಭಿಸಿತು . ಕಳೆಕಳೆಯಾಗಿ ಹೊಳೆಯುವ ಹಳದಿ ಸುಂದರಿ ನಿಂಬೆ  ತರಕಾರಿ ಕ್ಯಟಗರಿಯಲ್ಲಿ ಬಂದರೂ ತನ್ನ ಹೆಸರಿನ ಪಕ್ಕ ” ಹಣ್ಣು”  ಎನ್ನುವ  ಸರ್ ನೇಮ್ ಇಟ್ಟಕೊಂಡು ಹಣ್ಣುಗಳ ಜೊತೆಯಲ್ಲೂ ಗುರುತಿಸಿಕೊಂಡು ಬುದ್ಧಿವಂತಿಕೆ ಮೆರೆದಿದೆ . ಆದರೆ ಇದರಿಂದ ಮೊಬೈಲ್ ಯುಗದ ನನ್ನ ಮಗರಾಯನಿಗೆ ಆದ ಗೊಂದಲ  ಅಷ್ಟಿಷ್ಟಲ್ಲ  !.ಒಮ್ಮೆ ನಮ್ಮ ಮನೆ ದೇವಿಯ ಪೂಜೆಗೆ   ನೈವೇದ್ಯ ಇಡಲು   ಐದು ತರಹದ ಹಣ್ಣು ತರಲು  ಅವನನ್ನು ಮಾರುಕಟ್ಟೆಗೆ ಕಳಿಸಿದಾಗ ,ಬಾಳೆಹಣ್ಣು , ಸೇಬು  , ಕಿತ್ತಳೆ , ಮೂಸಂಬಿಗಳ  ಜೊತೆಗೆ ನಿಂಬೆ ಹಣ್ಣನ್ನೂ ಖರೀದಿಸಿ ತಂದಿದ್ದ !“

ಆಗ ಅತ್ತೆಯವರು ಅವನ ಮುಗ್ಧತನಕ್ಕೆ ನಗುತ್ತ “ ಇವನಿಗೆ  ಆಪಲ್ ಜೂಸು , ಆರೆಂಜ್ ಜೂಸ್ ರೀತಿಯಲ್ಲೆ ನಿಂಬೂ ಜೂಸ್ ಸಹ ಕೂಡಿದು ಗೊತ್ತಿದೆ , ಹಾಗಾಗಿ ಇದು ಸಹ ಹಣ್ಣಿನ ಕ್ಯಟಗರಿಯಲ್ಲೆ ಬರುತ್ತೆ  ಅನ್ಕೊಂಡಿದ್ದಾನೆ ಬಿಡು  “ ಎಂದಾಗ  “ ಹೂಂ! ಜೊತೆಗೆ ಇದಕ್ಕೆ ನಿಂಬೆ ಹಣ್ಣು ಅಂತ ಬೇರೆ ಹೆಸರು, ಕನ್ಫ್ಯೂಶನ್ ಆಗದೆ ಇರುತ್ತಾ “ ಎಂದು ನಾನು ಸಹ ಒಗ್ಗರಣೆ ಹಾಕಿ ಮಗರಾಯ ಕೆಂಗಣ್ಣಿಗೆ ಗುರಿಯಾದೆ .

ಆದರೆ ಆತ್ತೆಯವರು ಅಷ್ಟಕ್ಕೇ ನಿಲ್ಲದೆ “ ನೋಡು ನಿಂಬೆ ಹಣ್ಣು ಶಕ್ತಿ  ಸ್ವರೂಪಿಣಿಯರಿಗೆ ಅತ್ಯಂತ ಪ್ರಿಯವಾಗಿದೆ . ಹಾಗಾಗಿ ದೇವಿಯ ಕೃಪೆ ಆಶೀರ್ವಾದ ಹಾಗು  ಇಷ್ಟಾರ್ಥ  ಸಿದ್ದಿಗಾಗಿ ಮಹಿಳೆಯರು ದೇವಿ ದೇಗುಲಗಳಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ವಾಡಿಕೆ . ಶಕ್ತಿ  ದೇವತೆಗಳಿಗೆ ನಿಂಬೆಹಣ್ಣಿನ  ಕೊರಳ ಮಾಲೆಯಿಂದ ಸಹ ಅಲಂಕಾರ ಮಾಡಿರುತ್ತಾರೆ , ಅಷ್ಟೇ ಅಲ್ಲದೆ  ಭಕ್ತಾದಿಗಳಿಗೆ ನಿಂಬೆಹಣ್ಣನ್ನು ಸಹ  ಪ್ರಸಾದ ರೂಪದಲ್ಲಿ ಕೊಡುತ್ತಾರಲ್ಲ   ! “ ಅಂದಾಗ  “ಒಹೋ ಅದಕ್ಕೆ ಇರಬೇಕು   ನಮ್ಮ ಮನೆ ದೇವಿಯೆ   ತನ್ನ ನೈವೇದ್ಯಕ್ಕೆ ನನ್ನ ಮಗನಿಂದ ತನಗೆ ಪ್ರಿಯವಾದ ನಿಂಬೆಹಣ್ಣು ತರಸಿ ಕೊಂಡಿರಬೇಕು”  ನಾನು ಮಂಗಳ ಹಾಡಿದಾಗ  ಎಲ್ಲರೂ  ಮನಸಾರೆ ನಕ್ಕಿದ್ದೆವು  . ಅತ್ತೆ ಸೊಸೆಯರು ತಿಳಿಸಿಕೊಟ್ಟ ಈ ನಿಂಬೆ ಮಹಾತ್ಮೆಯನ್ನು ಆಲಿಸಿದ ಮಗರಾಯನಿಗೆ ಕೊಂಚ ಹೆಚ್ಚೆ ಜ್ಞ್ಯಾನೋದಯವಾಗಿ ರೂಮು ಸೇರಿಕೊಂಡ ! .


 ಇನ್ನು ನಮ್ಮ ಮಾವನವರು ನಮ್ಮನೆ  ಹತ್ತಿರವೆ ಇರುವ ಓಂ ಶಕ್ತಿ ದೇವಾಲಯಕ್ಕೆ ನಾನು ಹೋಗಿ ಬಂದಾಗಲ್ಲೆಲ್ಲಾ  “ ಯಾಕೋ ಬೀಪೀ ಜಾಸ್ತಿ ಆಗಿದೆ ಅನಿಸುತ್ತೆ! ನಿಂಬೆ ಹಣ್ಣಿನ ಪಾನಕ ಮಾಡಮ್ಮ “ ಎಂದು ಯಾವ ಹೊತ್ತಿನಲ್ಲಾದರೂ ಸರಿ  ನನ್ನ ಕೈಯಲ್ಲಿದ್ದ (ನಿಂಬೆ ) ಪ್ರಸಾದವನ್ನು ಕಂಡು ಪಾನಕ ಕುಡಿಯುವ ಆಸೆಯಲ್ಲಿ  ತಮ್ಮ ಬೀಪೀಯನ್ನು ಸುಳ್ಳು ಸುಳ್ಳೇ  ಹೆಚ್ಚಿಸಿಕೊಳ್ಳುತ್ತಿದ್ದರು !.

ಏನೇ ಅನ್ನಿ ಈ ಲಿಂಬು ಅಲಿಯಾಸ್ ನಿಂಬೆಹಣ್ಣು ಒಮ್ಮೊಮ್ಮೆ ಸೌಮ್ಯರೂಪಿಯಾಗಿ , ಪಾನಕ , ಉಪ್ಪಿನಕಾಯಿ ಚಿತ್ರಾನ್ನಗಳಲ್ಲಿ  ರುಚಿ ರುಚಿಯಾಗಿ ಸಲ್ಲುತ್ತಾ ನಮ್ಮ ಮನಸ್ಸು ನಾಲಿಗೆಗಳನ್ನು ಗೆದ್ದರೆ , ಮಗದೊಮ್ಮೆ ತನ್ನ ಗುಣ ಸ್ವಭಾವಗಳಿಗೆ  ಯೂ ಟರ್ನ್ ಹೊಡೆದು ಯಾವುದೊ  ಮಂತ್ರವಾದಿಗಳ ಕೈ ವಶವಾಗಿ  ಮಾಟ ಮಂತ್ರದಂತ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತದೆ  .ಪಾಪ ! ಇದರ ತಪ್ಪಿಲ್ಲದ್ದಿದ್ದರೂ   (ನಮ್ಮಂತೆಯೆ) ಆಡಿಸುವಾತನ  ಕೈಗೊಂಬೆಯಾಗಿ  ಬಣ್ಣ ಬಳಿದುಕೊಂಡು ವಿಲನ್ ನಂತಾಗುವುದು ಇದರ ಹಣೆಬರಹ   !. 
  
ನನಗೂ ಒಮ್ಮೊಮ್ಮೆ ಕುಂಕುಮ  ಸವರಿಕೊಂಡ ಅರ್ಧ ನಿಂಬೆ ಹೋಳುಗಳು ಅಚಾನಕ್ ಆಗಿ ರಸ್ತೆ ಮಧ್ಯೆ ಸಿಕ್ಕಾಗ , ಕೊಂಚ ಭಯದಿಂದ (ನಡುಗಿ  ) ನನ್ನ ಕಾಲಿಗೆ  ಸ್ಪೀಡ್ ಬ್ರೇಕರ್ ಹಾಕಿ  ಅವುಗಳನ್ನು ದಾಟದಂತೆ ಹುಷಾರಾಗಿ ಕ್ಯಾಟ್ ವಾಕ್ ಮಾಡಿಕೊಂಡು ಸಾಗಿಬಿಡುತ್ತೇನೆ !   ನಿಜಕ್ಕೂ ಈ ನಿಂಬೆಹಣ್ಣುಗಳು ಯಾವುದೊ  ಭಯಾನಕ ಸಿನಿಮಾದ ಪಾತ್ರದಾರಿಯಂತೆ  ವಿಚಿತ್ರ  ವೇಷದಲ್ಲಿ ಬಿದ್ದುಕೊಂಡು ದಾರಿಹೋಕರಿಗೆ ಹೆದರಿಕೆ  ಹುಟ್ಟಿಸುತ್ತವೆ  ! ಅದರಲ್ಲೂ ಅಮಾವಾಸ್ಯೆ ದಿನವಂತೂ ಇವುಗಳ ನಟನಾ  ಕೌಶಲ್ಯ ಉತ್ತುಂಗದಲ್ಲಿರುತ್ತದೆ ! ಕೆಲವು ನಿಂಬೆಗಳದು ಈ ಕಥೆಯಾದರೆ , ಸಂಪ್ರದಾಯಸ್ತ  ನಿಂಬೆಗಳು ಹೆಚ್ಚಾಗಿ   ಅಡುಗೆ ಪಾಕ ,ಉಪ್ಪಿನಕಾಯಿ ಜಗತ್ತಿನಲ್ಲಿ   ರಸ’ಮಯ ಅಭಿನಯದ ಕಲಾವಿದರಂತೆ   ಜನಮಾನಸದಲ್ಲಿ ಎಂದಿಗೂ ನೆಲೆ  ನಿಲ್ಲುತ್ತವೆ .ಇನ್ನು  ಈಗಿನ ಕೆಲ ಮಾಡರ್ನ್ ನಿಂಬೆಗಳು  ಸಾಬೂನು ,  ಶ್ಯಾಂಪೂ ಟೂತುಪೇಸ್ಟು ಗಳಲ್ಲಿ  ಕಾಣಿಸಿಕೊಂಡು ಬಿಂಕ ಮೆರೆಯುವುದೂ ಉಂಟು   !ಆದರೆ  " ಹರ್ಬಲ್ ಉತ್ಪನ್ನ"  "ನಿಂಬೆಯುಕ್ತ " ಎಂದೆಲ್ಲ ವಾಸ್ತವಕ್ಕೆ ದೂರವಿರುವ ಅಬ್ಬರದ  ಜಾಹೀರಾತಿನಲ್ಲಿ  ಮೂರು ಗಂಟೆ ಸಿನಿಮಾದಲ್ಲಿ ಒಂದು  ನಿಮಿಷ ಮುಖ ತೋರಿಸಿ ಮರೆಯಾಗುವ ನಟರಂತೆಯೆ ಈ ನಿಂಬೆಗಳದು ಪಾಪ  ಒಂದೇ ಒಂದು  "ಹನಿ" ಪಾತ್ರವೆ  ಇದ್ದೀತು   .

 ಇನ್ನು  ಉಪ್ಪಿನಕಾಯಿ   ವಿಷಯ ಬಂದಾಗ ನನಗೆ ಮಾವಿನಕಾಯಿಗಿಂತಲೂ  ನಿಂಬೆಹಣ್ಣಿನ ಉಪ್ಪಿನಕಾಯಿಗಳ ಮೇಲೆ ಹೆಚ್ಚು ಪ್ರೀತಿ ..ಅದರಲೂ ಸ್ವೀಟ್  ಲೈಮ್ ಪಿಕಲ್ ಎನ್ನುವ ಹೆಸರಿನಲ್ಲಿ ಸಿಗುವ ಸಿಹಿ ನಿಂಬೆ ಉಪ್ಪಿನಕಾಯಿ ಎಂದರೆ ನನಗೆ ಪಂಚ ಪ್ರಾಣ. ಆದರೆ ಇದು ಎಲ್ಲಾ  ಕಡೆ ಸಿಗುವುದು ಅಪರೂಪ . ಒಮ್ಮೆ  ನಾನು ಸೂಪರ್ ಮಾರುಕಟ್ಟೆಯಲ್ಲಿ  ತರಾವರಿ  ಉಪ್ಪಿನಕಾಯಿಗಳ ಮಧ್ಯೆ ಮೇರಾವಾಲಾ ಸಿಹಿ ನಿಂಬೆ ಬ್ರ್ಯಾಂಡಿಗಾಗಿ ಶೆಲ್ಫ್  ಮೇಲಿರುವ ಉಪ್ಪಿನಕಾಯಿ ಬಾಟಲುಗಳ ಮಧ್ಯೆ  ಮುಳುಗಿ ಕಾಲದ ಪರಿವಿಲ್ಲದೆ  ಹುಡುಕಾಟ  ನಡೆಸಿದ್ದೆ .   ಆಗ ನನ್ನನ್ನು ಮಾಲ್ ತುಂಬಾ ಹುಡುಕಾಡಿದ  ಎಜಮಾನರ ತಾಳ್ಮೆ ಕುಸಿದು ಎರಡು ಮೂರು ತರದ ( ಖಾರದ ಲಿಂಬೆ )ಉಪ್ಪಿನಾಕಾಯಿ  ಬಾಟಲಿಗಳನ್ನು ಬಸುರಿ ಹೊಟ್ಟೆಯಂತಿದ್ದ ನಮ್ಮ  ಟ್ರಾಲಿಗೆ ತುರುಕಿ “ಇದಕ್ಕೇ ಒಂದಿಷ್ಟು ಸಕ್ಕರೆ ಹಾಕಿಕೊಂಡು ತಿಂದರಾಗದೆ ಮಾರಾಯ್ತಿ  “ ಎಂದು ಟ್ರಾಲಿಯ  ಜೊತೆ ನನ್ನನು ತಳ್ಳಿಕೊಂಡು ಬಂದಿದ್ದರು !.

ಏನೇ ಅನ್ನಿ ಭಗವಂತ ಎಷ್ಟೆಲ್ಲಾ ವಿಶೇಷ ಪ್ರತಿಭೆಗಳನಿಟ್ಟು  ಈ ನಿಂಬೆಯನ್ನು ಸೃಷ್ಟಿಸಿದ್ದಾನಪ್ಪ  ಎಂದು ಒಮ್ಮೊಮ್ಮೆ  ಅಚ್ಚರಿ ಎನಿಸುತ್ತದೆ.! ಕಾರಣ ನಿಂಬೆಯ ಬಳಕೆ  ಅಡುಗೆ ವಲಯಕಷ್ಟೆ ಸೀಮಿತವಾಗದೆ ಅದರ ಕಾರ್ಯ ಕ್ಷೇತ್ರ ಆಲದ ಮರದಂತೆ ನಾನಾ ದಿಕ್ಕುಗಳಲ್ಲಿ ಹಬ್ಬಿಕೊಂಡಿದೆ  . ಉದಾಹರಣೆಗೆ ಕುಕ್ಕರ್ ತಯಾರಿಕೆಯಿಂದ ಹಿಡಿದು ನಿಕ್ಕರ್ ತಯಾರಿಕೆಯವರೆಗೂ ತನ್ನ ಉತ್ಪಾದನಾ ವಲಯವನ್ನು ಹಬ್ಬಿಸಿಕೊಂಡ ಯಶಸ್ವಿ ಬ್ಯುಸಿನೆಸ್ಸ್ ಟೈಕೂನಿನಂತೆ  ಈ ನಿಂಬೆಯದು ಕೂಡ ಬಹುಮುಖ ವ್ಯಕ್ತಿತ್ವ .!
ಗಾತ್ರದಲ್ಲಿ ಕಿರಿದಾದರೂ  ನಾನಾ  ಪಾತ್ರದಲ್ಲಿ  ಕಾಣಿಸಿಕೊಳ್ಳುವ ಈ ಹೊಂಬಣ್ಣದ  ಚೆಲುವೆಗೆ ಮನುಷ್ಯರ ಕಣ್ಣು ಹಾಗು ದೃಷ್ಟಿಗಳ  ಬಗ್ಗೆ ವಿಶೇಷ ಗ್ರಹಿಕೆಯಿದೆ  .ಅಷ್ಟೇ ಅಲ್ಲ !  ಆ ವಿಷಯ ಸಂಬಂಧಿ  ಭಾರಿ ಅದ್ಯಯನ  ನಡೆಸಿ  ” ಪೀಹೆಚ್ ಡಿ”  ಪದವಿಯನ್ನೆ ಗಿಟ್ಟಿಸಿಕೊಂಡಿರಬೇಕು ಈ ಗಟ್ಟಿಗಿತ್ತಿ  .! ತನ್ನ ಪರಿಣಿತಿಯನ್ನೂ ಹೇಗಾದರೂ ಬಳಸಿಕೊಳ್ಳಿ ಮಾರಾಯರೆ ಎಂದು ಕೈ ಕಟ್ಟಿ ಕೂತ ನಿಂಬೆಯನ್ನು ಕೆಲವರು ಯಾವುದೆ ಕೆಟ್ಟ ,ನಕಾರತ್ಮಕ ಕಣ್ಣು ದೃಷ್ಟಿ ಬೀಳದಿರಲಿ( ಅಥವಾ ಬಿದ್ದರೂ ಅದು ರೀಬೌಂಡ್ ಆಗಿ ಅವರಿಗೆ ನಾಟಲಿ ಎನ್ನುವ ಉದ್ದೇಶವೂ ಇರಬಹುದು !)  ಎನ್ನುವ  ನಂಬಿಕೆಯಿಂದ ತಮ್ಮ ನಿವಾಸದ  ಪ್ರಧಾನ ದ್ವಾರಗಳ ಮೇಲೆ   ಈ ನಿಂಬೆ ಹಣ್ಣನ್ನು ಕಟ್ಟುತ್ತಾರೆ . ಆದರೆ ಈ  ನಿಟ್ಟಿನಲ್ಲಿ ಇದು  ತಾನೊಂದೆ ಕೆಲಸ ಮಾಡದೆ ತನ್ನೊಂದಿಗೆ ಚೋಟು   ಮೆಣಸಿನ ಕಾಯಿಗಳನ್ನು  ಸಹಾಯಕ ಪಡೆಗಳಂತೆ ಕೈಕೆಳಗೆ ನೇಮಿಸಿಕೊಂಡು   ಮನೆಯ ಹೆಬ್ಬಾಗಿಲಿಗೆ  ಜೋತಾಡಿಕೊಂಡೆ ಸೆಕ್ಯುರಿಟಿ  ತಂಡದಂತೆ ಕಾರ್ಯತತ್ಪರವಾಗುತ್ತದೆ .ಆದರೆ ಇವುಗಳ ಶಕ್ತಿ  ಒಂದು ವಾರ ಹೆಚ್ಚೆಂದರೆ  ಹದಿನೈದು ದಿನಗಳ ವರೆಗಿದ್ದು , ಮತ್ತೆ ಹೊಸ ಪಡೆಗಳನ್ನು ನಿಯೋಜನೆ ಆಗುತ್ತದೆ .

ನಮ್ಮ ಫ್ಲಾಟಿನೆದುರು  ಮನೆಯಾಕೆ ತಮ್ಮ ಮನೆಯ ಹೆಬ್ಬಾಗಿಲಿಗೆ ಈ ರೀತಿ ನಿಂಬೆ ಹಾಗು ಮೆಣಸಿನ ಕಾಯಿಗಳನ್ನು ತೂಗು ಹಾಕಿದ್ದಾರೆ .ಅವರ ಮನೆಗೆ ಹೋಗುವಾಗ ಬೇಡವೆಂದರೂ ನನ್ನ(ಒಳ್ಳೆಯ )  ದೃಷ್ಟಿ ಆ ಕಡೆ  ಬಿದ್ದು ಕೊಂಚ ಇರುಸು ಮುರುಸಾಗುವುದುಂಟು ! ಆದರೆ ಅವರ ಮನೆಯಲ್ಲಿ ಸಿಗುವ ನಗು ಮುಖದ ಸ್ವಾಗತ ಅದನ್ನೆಲ್ಲ ಮರೆಸುವುದಷ್ಟೆ  ಅಲ್ಲದೆ  ಕೊಂಚ  ಜಲಜೀರಾ ಪುಡಿಯನ್ನು ಸೇರಿಸಿ ಅವರು ಮಾಡಿಕೊಡುವ   ತಣ್ಣನೆಯ ನಿಂಬೆ ಪಾನಕ ಬಹಳ ರುಚಿಯಾಗಿರುತ್ತದೆ  .ಏನೇ ಅನ್ನಿ  ಅವರ ಮನೆಯಲ್ಲಿ ಸದಾ  ನಿಂಬೆ ಹಣ್ಣಿನ  ಸ್ಟಾಕ್ ಇರುವ  ರಹಸ್ಯ  ನನ್ನ  ಟ್ಯೂಬ್ ಲೈಟ್ ತಲೆಗೆ ಎಷ್ಟೋ ದಿನಗಳ ನಂತರ ಹೊಳೆಯಿತು  .!

ಇನ್ನು ಈ ಸಿಂಗಲ್ ನಿಂಬೆ ಹಾಗು ಆರು  ಚಿನಕುರಳಿ ಮೆಣಸಿನಕಾಯಿಗಳ ಇದೆ  ಟೀಮು  ಜಂಗಮ ಜೀವಿಗಳಾಗಿ   ಟ್ರಕ್ಕು , ಲಾರಿಗಳ ಕನ್ನಡಿಯ ಮೇಲೂ ತೂಗಾಡುತಾ ಊರೂರು ಸುತ್ತುತ್ತವೆ .ಇದು ನಕಾರತ್ಮಕ  ದೃಷ್ಟಿ   ದೋಷ ನಿವಾರಣೆಗಾಗಿ ಬಳಸುವುದು ಒಂದು ಕಡೆಯಾದರೆ ,  ಹೀಗೆ ನಿಂಬೆ ಹಣ್ಣು - ಮೆಣಸಿನಕಾಯಿಗಳನ್ನು ಕಟ್ಟುವ  ಸಂಪ್ರದಾಯದ ಹಿಂದೆ ವೈಜ್ಞ್ಯಾನಿಕ  ಕಾರಣವೂ ಇದೆ ಎಂದು  ಯಾವಾಗಲೋ ಓದಿದ್ದು ನೆನಪಾಗುತ್ತದೆ . ಆಗಿನ ಕಾಲದಲ್ಲಿ ಊರಿಂದ ಊರಿಗೆ ಹೋಗುವ ರಸ್ತೆಗಳು ಈಗಿನಂತೆ ಅಭಿವೃದ್ಧಿ ಹೊಂದಿರಲಿಲ್ಲ .ಹಾಗೆ  ಮಾರ್ಗಮಧ್ಯೆ  ವಾಹನ ಚಲಾಯಿಸುವಾಗ ವಿಷ ಜಂತುಗಳೆನಾದರೂ ಕಚ್ಚಿದಲ್ಲಿ ದೇಹದಲ್ಲಿ ವಿಷ ಏರಿದೆಯೋ ಇಲ್ಲವೊ ಎಂದು  ಪರೀಕ್ಷಿಸಲು ಇವುಗಳ ಬಳಕೆಯಾಗುತ್ತಿತ್ತು . ವಿಷ ಏರಿದ್ದ ಪಕ್ಷದಲ್ಲಿ ಅವರ ನಾಲಿಗೆಗೆ ನಿಂಬೆಯ ಹುಳಿ ಅಥವಾ ಹಸಿಮೆಣಸುಗಳ  ಖಾರ ಹೀಗೆ ಯಾವುದೆ ಪದಾರ್ಥಗಳ ರುಚಿ ಹತ್ತುವುದಿಲ್ಲ ಎಂದು ಈ ರೀತಿ ಕಟ್ಟುತ್ತಿದ್ದರು .

ಇನ್ನು ನವರಾತ್ರಿ ಸಮಯದಲ್ಲಿ ಆಚರಿಸುವ ಆಯುಧ ಪೂಜೆಯ  ದಿನ ಈ ನಿಂಬೆಹಣ್ಣುಗಳ ಡಿಮ್ಯಾಂಡು ಜೋರಾಗುತ್ತದೆ . ಕಾರಣ ಅಂದು ಆಯುಧಗಳಿಗಷ್ಟೆ ಅಲ್ಲದೆ  ವಾಹನಗಳಿಗೂ ಪೂಜೆ ಮಾಡಲಾಗುತ್ತದೆ . ವಾಹನಗಳಿಗೂ  ಕೆಟ್ಟ ದೃಷ್ಟಿ ಆಗದಿರಲಿ ,ಯಾವುದೇ  ಅವಗಡ, ಅಪಘಾತಗಳು ಸಂಭವಿಸದಿರಲಿ ಎನ್ನುವ ನಂಬಿಕೆ ಆಚರಣೆಗಳಿಗೆ ಬದ್ಧವಾಗಿ ಅಂದು ಸಾವಿರಾರು ನಿಂಬೆಹಣ್ಣುಗಳು ಬುದಬುದನೆ  ದ್ವಿಚಕ್ರ ವಾಹನಗಳು  , ಕಾರು ಬಸ್ಸುಗಳ ಚಕ್ರದಡಿ ಸಿಕ್ಕಿ ರಸ ಹರಿಸಿಕೊಂಡು  ಸಾಯುತ್ತವೆ  .ಕಳೆದ ವರ್ಷ ಆಕಾಶದಲ್ಲಿ  ಹಾರಾಡುವ ರಫೇಲ್ ವಿಮಾನಗಳಿಗೂ ಪೂಜೆ ನಡೆದು ಅವುಗಳ  ಭಾರಿ ಗಾತ್ರದ ಚಕ್ರದಡಿ ಧೀಮಂತವಾಗಿ ಕುಳಿತ  ಪುಟಾಣಿ ನಿಂಬೆಯ   ಚಿತ್ರಗಳು  ವಾಟ್ಸಾಪಿನಲ್ಲಿ ಹರಿದಾಡಿತ್ತು  !

ಆಯುಧ ಪೂಜೆ ಅಂದಾಗ ಹೀಗೊಂದು ಆಚ್ಘರಣೆ ಜಾತಿ ಮತ ಧರ್ಮಗಳನ್ನು ಮೀರಿ  ಆಚರಿಸಿದಲ್ಲಿ  ಒಂದು ದಿನ ಮಟ್ಟಿಗಾದರೂ ಗನ್ನು  ಮಚ್ಚು ಲಾಂಗುಗಳು ವಿಶ್ರಮಿಸಿಕೊಂಡು ದ್ವೇಷದ ಕಾದಾಡುವ ಮನಸುಗಳಿಂದ   ಜೀವಗಳ ರಕ್ಷಣೆಯಾಗುತ್ತಿತ್ತೇನೋ ಅನಿಸುತ್ತದೆ .
  
ಈ ನಿಂಬೆ ಹಣ್ಣುಗಳ ಮಾಂತ್ರಿಕ ಶಕ್ತಿ ಅಷ್ಟಿಷ್ಟಲ್ಲ ! ಹಿಂದಿನ ಸರ್ಕಾರದ ಮಂತ್ರಿಯೊಬ್ಬರು ಸದಾ ಕೈಯಲ್ಲಿ ನಾಲ್ಕು  ನಿಂಬೆ ಹಣ್ಣುಗಳನ್ನು  ಹಿಡಿದೆ ಓಡಾಡುತ್ತ  ತಮ್ಮ ಪವರಿನ  ಜೊತೆ ಈ ನಿಂಬೆ ಪವರನ್ನೂ  ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ನೆನಪಾಗುತ್ತದೆ  .ಈ ದೃಶ್ಯ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಅವರ ಕೈಯಲ್ಲಿದ್ದ ಚಮತ್ಕಾರಿ ನಿಂಬೆಗಳೂ ಸಹ  ಸೆಲೆಬ್ರಿಟಿಗಳಾಗಿ ಬಿಟ್ಟಿದ್ದವು !

ಇನ್ನು ಎಲ್ಲ ಕಾಲಕ್ಕೂ ಲಭ್ಯವಿರುವ ಈ ಜನಾನುರಾಗಿ ನಿಂಬೆ ತಾಳಿದವನು ಬಾಳಿಯಾನು ಎಂದು ನಂಬಿಕೊಂಡು ಬಂದಿದೆ . ಒಮ್ಮೊಮ್ಮೆ ಎತ್ತರಕ್ಕೆ ಜಿಗಿದು ಜನ ಸಾಮಾನ್ಯರನ್ನು  ಖರೀದಿಸುವಾಗಲೆ ಅಳಸಿ  ಮಗದೊಮ್ಮೆ ಬೆಲೆ ಕಳೆದುಕೊಂಡು  ಪಾತಾಳಕ್ಕೆ ಧರಶಾಯಿಯಾಗುವ  ಈರುಳ್ಳಿಯಂತೆ  ಚಂಚಲ ಸ್ವಭಾವ ಇದಕಿಲ್ಲ . ಒಳಿತೋ ಕೆಡಕೊ ಒಟ್ಟಿನಲ್ಲಿ ವಿವಿಧ ಕ್ಷೇತ್ರದಲ್ಲಿ ದಣಿವರಿಯದೆ ದುಡಿಯುವ ನಿಂಬೆ ಹಂತ ಹಂತವಾಗಿಯೇ ತನ್ನ ಮೌಲ್ಯವನ್ನು ಏರಿಸಿಕೊಂಡು ಬಂದಿದೆ .ಇದೆ ಸಿಟ್ರಸ್ ಜಾತಿಗೆ ಸೇರಿದ ನಿಂಬೆಯ ಚಿಕ್ಕಮ್ಮ- ದೊಡ್ದಮ್ಮಂದಿರಾದ    ಕಿತ್ತಳೆ , ಮೋಸಂಬಿಗಳದು ಇನ್ನೂ  ಹೆಚ್ಚಿನ ‘ರಸ’ ವೈಭವ ! ಜೂಸಂಗಡಿಗಳಲ್ಲೆ ಇವುಗಳ ಉಭಯ ಕುಶಲೋಪರಿಗಳು ,ಫ್ಯಾಮಿಲಿ ಮೀಟಿಂಗು , ಗೆಟ್ಟುಗೆದರಗಳು ನಡೆದರೂ  ಅಚ್ಚರಿಯಿಲ್ಲ   !
ಇನ್ನು ಟೊಮೇಟೊ  ಹಣ್ಣಿನ ಧಿಮಾಕು ಅತಿಯಾದಾಗ ಅದಕ್ಕೆ ಪರ್ಯಾಯವಾಗಿ ನಿಂಬೆ ಸಾರು ಒದಗಿ ಬರುತ್ತದೆ.ಆದರೆ ಆ ಕೆಂಪನೆಯ ಚೆಲುವೆಯೊಂದಿಗೆ  ಇದು ಪೈಪೋಟಿಗಿಳಿದಿದ್ದೆ ಇಲ್ಲಾ .

ಏನೇ ಅನ್ನಿ ಪ್ರತಿಭೆಯ ಪ್ರಭಾವಳಿಯನ್ನೆ ಹೊತ್ತ  ನಿಂಬೆಹಣ್ಣಿನ ಗುಣಗಾನ ಇಷ್ಟಕ್ಕೆ ಮುಗಿಯುವುದಿಲ್ಲ.ಸಾಕಷ್ಟು ಔಷದೀಯ ಗುಣಗಳು ಹೊಂದಿರುವ ಈ ನಿಂಬೆಯ ಮನೆ ಮದ್ದುಗಳ ಬಗ್ಗೆ ನಾನು ಕೊ(ಬ)ರೆಯುವುದಿಲ್ಲ . ಆದರೆ  ಇದು ಸೌಂದರ್ಯವರ್ಧಕವಾಗಿ ಕೂದಲ ಆರೈಕೆಯಿಂದ ಹಿಡಿದು ಲೋಷನ್ನು , ಕ್ರೀಮು ಅಷ್ಟೇ ಅಲ್ಲದೆ ತನ್ನ ಶಕ್ತಿಯಿಂದ  ಜಿಡ್ಡು ಹಾಗು ಕ್ರಿಮಿಗಳನ್ನು ನಾಶ ಮಾಡುವ ನಿಂಬಾ ದೇವಿಯಾಗಿ ಪಾತ್ರೆ ತೊಳೆಯುವ ಬಾರಿನಲ್ಲೂ ಸೇರಿಕೊಂಡು ಸದಾ ಮಹಿಳೆಯರ ಸಾಂಗತ್ಯದಲ್ಲೆ ಇರಲು ಬಯಸುವ ಇದು ಮಹಿಳಾಪರವೆ  ಇರಬೇಕು ಎನ್ನುವ ಅನುಮಾನ ನನಗೆ  .

ಕವಿವರ್ಯರು ಹುಡುಗಿಯರ ಸೌಂದರ್ಯವನ್ನು ವರ್ಣಿಸುವಾಗ ಬಾದಾಮಿಯಂತ ಕಣ್ಣುಗಳು ಸೇಬಿನಂತಾ  ಮೈ ಬಣ್ಣ  ,ಸಂಪಿಗೆಯಂತ ನಾಸಿಕ , ತೊಂಡೆ ತುಟಿಗಳು , ದಾಳಿಂಬರಿ ಹಣ್ಣಿನಂತೆ  ಹಲ್ಲುಗಳು  ಎಂದೆಲ್ಲಾ  ಹಣ್ಣು ತರಕಾರಿ ಬುಟ್ಟಿಯನ್ನೇ ತಮ್ಮ ಕವನಗಳಲ್ಲಿ ಇಳಿಸಿದಾಗ ನಮ್ಮ ಹಂಸ ಲೇಖಾ ಅವರು ಮಾತ್ರಾ  ಪ್ರೇಮ ಲೋಕ ಸಿನಿಮಾದ  ನಾಯಕಿಯನ್ನು “ ನಿಂಬೆ ಹಣ್ಣಿನಂತ ಹುಡುಗಿ ಬಂದ್ಲು ನೋಡು “ ಎಂದು ಹಾಡಿ ಹೊಗಳುವಾಗ   “ ಸರ್ವ ಕ್ಷೇತ್ರದಲ್ಲೂ ಸೈ ಎನಿಸಿಕೊಂಡ ನಿಂಬೆಯನ್ನು ಸ್ತ್ರೀ  ಶಕ್ತಿಗೆ  ಹೋಲಿಸಿ ಹಾಡು ರಚಿಸಿದ್ದರೇನೋ   ಎನ್ನುವ ಒಳ ನೋಟ ನನ್ನದು ! .

ಆದ್ಯಂತವಾಗಿ ನೋಡುವುದಾರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿ  ‘ರಸವತ್ತಾದ ಜೀವನ ನಡೆಸಿಕೊಂಡು   “( ಮನುಷ್ಯರ ) ಉದರ ನಿಮಿತ್ತಂ   ಬಹುಕೃತ ವೇಷಂ” ಗಳನ್ನು  ಧರಿಸುತ್ತಾ  “ ಸಮಾಜದ ಸ್ವಾಸ್ಥ್ಯಕ್ಕಾಗಿ ನನ್ನನ್ನು  ಸದಾ  ನಂಬಿ “ ಎನ್ನುವ ನಿಂಬೆಗೆ ಜೈ ಎನ್ನೋಣವೇ “!  

ಆರತಿ ಘಟಿಕಾರ್
ಬೆಂಗಳೂರು


3 comments :

  1. ಮೇಡಮ್, ನನ್ನ BSNL ಕಳೆದ ೨೦ ದಿನಗಳಿಂದ ಕೈಕೊಟ್ಟು ಕೂತಿದ್ದರಿಂದ ಅಂತರ್ಜಾಲಕ್ಕೆ ಬರುವುದು ಸಾಧ್ಯವಾಗಿರಲಿಲ್ಲ. ಇದೀಗ ನಿಮ್ಮ ನಿಂಬೆಮಹಾತ್ಮೆಯನ್ನು ಓದಿ, ಹೊಟ್ಟೆ ತುಂಬ ಪಾನಕ ಕುಡಿದಂತಹ ಸುಖವಾಯಿತು. ಇನ್ನು ಆಗಾಗ ನಿಂಬೆ ಹಣ್ಣಿನ ಉಪ್ಪಿನಕಾಯಿಯನ್ನೂ ನೀಡುತ್ತಲಿರಿ. ಧನ್ಯವಾದಗಳು.

    ReplyDelete
  2. ಅನಂತ ಧನ್ಯವಾದಗಳು ಸರ್.ನಿಮ್ಮ ಅನಿಸಿಕೆ ಓದಿ ಬಹಳ ಖುಶಿಯಾಯಿತು 🙏

    ReplyDelete
  3. This comment has been removed by the author.

    ReplyDelete