Friday, May 3, 2019

ಯಡವಟ್ಟಿನ ದಿನ ....



ಅಂದು ಲಗುಬಗನೆ ವಾಶಿಂಗ್ ಮಶೀನಿಗೆ ಬಟ್ಟೆಗಳ ತುರುಕಿ , ಹಾಲಿನಲ್ಲಿ ಕುಳಿತು  ನನ್ನ ಅಚ್ಚುಮೆಚ್ಚಿನ ಟೀವೀ  ಸೀರಿಯಲ್  ನೋಡುವುದರಲ್ಲಿ  ತಲ್ಲೀನಳಾಗಿದ್ದೆ . ..ಸ್ವಲ್ಪ  ಹೊತ್ತಿನ  ನಂತರ   ಮಶೀನಿನಿಂದ   ಗಡ ಗಡ ಎಂಬ  ಭಾರಿ ಸದ್ದು  ಕಿವಿಗೆ  ಬಡಿಯಿತು .! ತಕ್ಷಣ  ಗಾಬರಿಯಾಗಿ  ಅದೇನೆಂದು  ನೋಡಲು  ವಾಶಿಂಗ್ ಮಶೀನು ತನ್ನ ಕಾರ್ಯಾಚರಣೆಯ  ಅಂತಿಮ  ಘಟ್ಟದಲ್ಲಿ  ಜೋರಾಗಿ ತಿರುಗುತ್ತ  ತನ್ನ  ಹೊಟ್ಟೆಯೊಳಗೆ ಸೇರಿಕೊಂಡ   ಯಾವುದೋ  ಘನ ವಸ್ತುವಿಗೆ  ಎರ್ರಾ   ಬಿರ್ರಿ  ಪೆಟ್ಟು ಕೊಟ್ಟು ಹಣ್ಣುಗಾಯಿ  ನೀರುಗಾಯಿ ಮಾಡಿ ಗಕ್ಕೆಂದು  ನಿಂತಿತ್ತು ! 
ಅಯ್ಯೋ !ಬಟ್ಟೆಗಳ ಜೊತೆ ಏನೋ ಸಾಮಾನು  ಕೂಡ ಸೇರಿರಬೇಕು(ಹಾಕಿರಬೇಕುಎಂಬ ಅನುಮಾನದಿಂದಲೇ  ಮಶೀನಿನ  ಮಹಾ ದ್ವಾರವನ್ನು  ತೆರೆದೆ . 
  ನೀರಿನ ಚಕ್ರತೀರ್ಥದಲ್ಲಿ  ವಕ್ರವಾಗಿ  ಬಿದ್ದುಕೊಂಡ  ಸಾಮಾನ್ನುನ್ನು   ಕಂಡು  ನನ್ನ  ಮುಖ  ಒಮ್ಮಿಲೆ ಬಿಳಿಚಿಕೊಂಡಿತು ! ಹಿಂದೆಲ್ಲ ಮಾಶೀನಿಗೆ ಹಾಕುವ ಬಟ್ಟೆಯ   ಜೊತೆಗೆ ಮರೆತು ಕೆಲವು  ಚಿಲ್ಲರೆ ಸಾಮಾನುಗಳು  ಕೂಡ   ನೀರಿನ ತಿರುಗಣಿಗೆ ಸೇರಿದ್ದುಂಟು  !ಹೇರಪಿನ್ನು  ,ನೋಟು ..ಚಿಲ್ಲರೆಗಳು ,,ಕೀ ಬಂಚ್  , ಇಷ್ಟೇ ಅಲ್ಲದೆ  ಮಗರಾಯನ  ಇಯರ್  ಫೋನ್ಶಾಲೆಯ ಐಡಿ ಕಾರ್ಡುಗಳಲ್ಲೆಲ್ಲಾ    ಮಹಾ  ಮಜ್ಜನ  ಮಾಡಿಸಿಕೊಂಡ ಬಂದ ಇತಿಹಾಸವಿದ್ದರೂ ಇಂದು     ಚಿಲ್ಲರೆ  ಸಾಮನುಗಳ   ದಾಖಲೆಯನ್ನೆ  ಮುರಿದು  ಬಿಸಾಡುವ ಭಯಂಕರ   ಸೂಚನೆ  ಸಿಕ್ಕಿತು !. 
 ನಾನು ಹಾಕಿದ್ದು  ಅದರಕ್ಕಿಂತಲೂ ಬೆಲೆ  ಬಾಳುವ ನನ್ನ  ಜೀನ್ಸ್  ಪ್ಯಾಂಟ್ ಅಷ್ಟೇ  ಅಲ್ಲ ಅದರ ಜೇಬಿನಲ್ಲಿದ್ದ   ನನ್ನ ಮೊಬೈಲ್  ಸಮೇತ  ಅಂದ್ರೆ  ನೀವು  ನಂಬ್ತೀರಾ ?! ನೆನ್ನೆ  ಸಂಜೆ ಹೊರಗೆ ತಿರುಗಾಡಲು ಹೋಗಿದ್ದಾಗ  ಹಾಕಿ ಕಳಚಿಟ್ಟ ಜೀನ್ಸಿಗೆ ಬಹಳ  ದಿನಗಳ ಬಳಿಕ ಸಿಕ್ಕ  ವಾಶಿಂಗ್ ಮಶೀನ್  ಭಾಗ್ಯವೇನೋ ಸರಿ ಆದರೆ ಅದರ  ಜೇಬಿನಲ್ಲೇ  ಮುದುಡಿ  ಕುಳಿತ  ಮೊಬೈಲಿಗೂ ಮಾಘ ಸ್ನಾನ ಮಾಡಿಸಿದ   ನನ್ನ  ಮರೆಗುಳಿತನಕ್ಕೆ ಪೇಚಾಡಿಕೊಂಡೆ ! 
ಪಾಪ ಅದು ಮೈಕೈಯೆಲ್ಲಾ  ಹೊಡೆತ  ತಿಂದು  ನಿಸ್ತೇಜವಾಗಿ  ಧೊಪ್ಪೆಂದು ಹೊರ  ಬಿದ್ದಿತು !  
ಕಳೆದ  ವರ್ಷದ ನನ್ನ  ಹುಟ್ಟು  ಹಬ್ಬದಂದೇ ಉಡುಗೊರೆಯಾಗಿ  ಬಂದ ನನ್ನ ಜೀವದ ಗೆಳತಿಗೆ ಹೀಗೆ  ನೀರಿನಿಂದಲೆ  ಅಪಾಯವಿದೆಯೆಂದು  ಮೊದಲೇ ತಿಳಿದ್ದಿದ್ದರೆ ಮುಂಜಾಗೃತಾ  ಕ್ರಮವಾಗಿ  ಇದರ  ಹೆಸರಿನಲ್ಲಿ ಒಂದು  ಜಲ  ಹೋಮವನ್ನಾದರೂ  ಮಾಡಿಸಬಹುದಿತ್ತು ! 
ಏನೇ  ಅಗಲಿ ಮೊದಲದಕೆ ಪ್ರಾಥಮಿಕ  ಚಿಕಿತ್ಸೆ ಕೊಡೋಣವೆಂದು ಅದರ ಅವಯವಗಳನ್ನೆಲ್ಲ ಮತ್ತೆ ಯಥಾಸ್ಥಿತಿಯಲ್ಲಿ ಜೋಡಿಸಿ  ಬಿಸಿಲಿನಲ್ಲಿ  ಅರಿವೆಯ ಜೊತೆ  ಅದನ್ನು  ಒಣಗಿಸಿ ಸಂಜೀವಿನಿಯಂತೆ  ಚಾರ್ಜ್  ಹರಿಸಿದರೂ ಪ್ರಾಣ ಪಕ್ಷಿ  ಇಲ್ಲದಂತೆ  ಬಿದ್ದುಕೊಂಡಿತು ! ಅಲ್ಲಿಗೆ ನನ್ನ  ಅದರ ಸ್ನೇಹದ ನಂಟು  ಮುಗಿಯಿತು ಎಂದನಿಸಿತು . 

ನನ್ನ ದುಬಾರಿ ಮೊಬೈಲು ಕಳೆದುಕೊಂಡ ಬೇಸರ  ಒಂದು  ಕಡೆಯಾದರೆ ..  ಎಡವಟ್ಟಿಗೆ .ತಲೆ  ಬಿಸಿ ಏರಿ  ಕೊಂಚ ಕೂಲ್ ಆಗಲು  ಫ್ರಿಡ್ಜಿನಿಂದ  ಧಾರಾಳವಾಗಿ ಒಂದು  ಕಪ್ ಐಸ್ಕ್ರೀಮಿನೊಂದಿಗೆ  ಹಾಲಿನಲ್ಲಿ  ಕುಳಿತೆ ..ಅಷ್ಟರಲ್ಲಿ  ಏನೋ  ಸೀದಿದ ವಾಸನೆ ನನ್ನನ್ನು ಅಡುಗೆ  ಮನೆಯ  ಕಡೆಗೆ  ಓಡಿಸಿತು ..ಸೀರಿಯಲ್ ವೀಕ್ಷಣೆಯ ಮದ್ಯೆ ಜಾಹೀರಾತಿನ ಸಮಯದಲ್ಲೇ  ಅಡುಗೆ ಕೆಲಸವನ್ನು  ಅಚ್ಚುಕಟ್ಟಾಗಿ  ಮಾಡುವ  ನನಗೆ ಅಂದು  ಒಲೆ ಮೇಲೆ  ಕುದಿಯಲು ಇಟ್ಟದ್ದ   ತರಕಾರಿ   ಹುಳಿಯ ನೆನಪೇ  ಇಲ್ಲದೆ ಅದೂ  ತಳ ಹಿಡಿದು ಮೇಲಿನ ಭಾಗವನ್ನು ನಿಧಾನವಾಗಿ  ಮೊಗೆದರೆ ಮಿಕ್ಸ್ ವೆಜ್  ಪಲ್ಯವಾಗುವ  ಎಲ್ಲಾ (ಅವ)ಲಕ್ಷಣಗಳು  ಗೋಚರಿಸಿದವು  .ಥತ್  ! ಇಂದೇಕೋ   ದಿನವೇ  ಸರಿಯಿಲ್ಲ  ಎಂದು  ಗುರುವಾರವಾದ  ಮೇಲೆಯೇ  ಗುರ್ರ್  ಎಂದು  ಗೊಬೆ ಕೂರಿಸಿದೆ !. 
ಆದರೂ  ಇದರಲ್ಲಿ  ಗೂಬೆಯಾಗಿದ್ದು  ನಾನೇ  ಎಂಬುದು ಅರಿವಾಗಿ  ಮತ್ತಷ್ಟು ತ್ರಾಸಾಯಿತು  ! ಧಿಡೀರ್   ಸಾರು  ಮಾಡಿ  ಊಟದ  ಶಾಸ್ತ್ರ  ಮುಗಿಸಿದೆ . 
ಅದೇ  ಕಾಲಕ್ಕೆ  ಮಾರನೆಯ ದಿನ ಗೆಳತಿ ವೀಣಾಳ ಹುಟ್ಟು  ಹಬ್ಬದ  ಪ್ರಯುಕ್ತ ಬ್ರೇಕ್ ಫಾಸ್ಟ್ ಪಾರ್ಟಿಯ   ಆಹ್ವಾನ ದಿಗ್ಗನೆ ನೆನಪಾಯಿತು !  
.ಇಲ್ಲಿ ನನ್ನ ಆಪ್ತ ಗೆಳತಿಯರ  ಗುಂಪಿನಲ್ಲಿ  ಯಾರದೇ   ಹುಟ್ಟು  ಹಬ್ಬವಾದರೂ ಸರಿ ಅದೇ  ನೆಪದಲ್ಲಿ  ಮುಂಜಾನೆ  ಗಂಡ  ಮಕ್ಕಳನ್ನು  ಕಚೇರಿ  ಶಾಲೆಗಳಿಗೆ  ಪ್ಯಾಕ್ ಮಾಡಿ ಕಳಸಿದ ನಂತರ ಎಲ್ಲರು  ಹೋಟಲಿನಲ್ಲೆ   ಭೇಟಿಯಾಗಿ  ಇಡ್ಲಿ  ದೋಸೆ  ವಡೆಗಳನ್ನು   ಕತ್ತರಿಸುತ್ತಾ  ಮನ ದಣಿಯ  ಹರಟೆ  ಕೊಚ್ಚಿ ಶುಭಾಶಯಗಳನ್ನು ಹೇಳುವುದು   ರೂಢಿಗತವಾಗಿತ್ತು !,   

ಪಾರ್ಟಿಯ  ತಯಾರಿಗೆ  ಮುಂದಾದೆ .ನಾಳಿನ  ಕೆಲಸವನ್ನು  ಇಂದೇ  ಮಾಡು ಎನ್ನುವ  ಬದಲು ಇಂದಿನ   ಕೆಲಸವನ್ನು ನಾಳೆ  ,ಇಲ್ಲ ನಾಳಿದ್ದು ,ಹೋಗಲಿ  ಆಚೆ  ನಾಳಿದ್ದಾದರೂ ಮಾಡಿ  ಮುಗಿಸು  ಎಂಬ ಕಠಿಣಾತಿ ಕಠಿಣ ನಿಯಮಗಳನ್ನು  ನನ್ನ  ಮೇಲೆ  ಹೇರಿಕೊಂಡಿದ್ದೆ .! ಆದರೆ  ಅಂದೇಕೋ  ಮೊಬೈಲ್ ವಿಷಯಕ್ಕೆ ಮೂಡು  ಆಫಾಗಿ   ಯಾವುದಾದರೂ  ಆಸಕ್ತಿ ಭರಿತ  ಕೆಲಸ  ಮಾಡಲು  ನಿರ್ಧರಿಸಿ ,ನನ್ನ ಇಷ್ಟದ ಇಸ್ತ್ರೀ  ತೀಡುವ ಕೆಲಸವನ್ನೇ  ಶುರುವಿಟ್ಟುಕೊಂಡೆ . 
  
ಸರಿ ಮೊದಲೇ  ನಿರ್ಧಾರಿತವಾದ  ಪಿಂಕ್  ಥೀಮಿನಲ್ಲಿ ನಾವೆಲ್ಲಾ  ಕಾಣಿಸಿಕೊಳ್ಳುವ  ಉಮೇದಿನಿಂದ ,ನನ್ನ ಗುಲಾಬಿ ಬಣ್ಣದ  ಚೂಡಿದಾರು ಬಿಸಿ  ಬಿಸಿ ಯಾಗಿ ಇಸ್ತ್ರೀ ಪೆಟ್ಟಿಗೆಯಿಂದ  ಮಸಾಜ್ ಮಾಡಿಸಿಕೊಂಡು ಗರಿ ಗರಿಯಾಗಿ  ಹ್ಯಾಂಗರ್  ಸೇರಿದಳು .!.ಅದಕೊಪ್ಪುವ ದುಪಟ್ಟಾಳನ್ನು ತೀಡಲು  ಮರೆತಿದ್ದರಿಂದ ಅದನ್ನು  ಹುಡುಕಿ  ಇಸ್ತ್ರಿ  ಹಚ್ಚಿದಷ್ಟೇ ..ನನ್ನ  ದುರಾದೃಷ್ಟಕ್ಕೆ ಆದೆ ಸಮಯದಲ್ಲಿ  ಕೆಂಡಾಮಂಡಲವಾಗಿ  ಕಾದು ಕುಳಿತ ಇಸ್ತ್ರೀ  ಪೆಟ್ಟಿಗೆ  ನನ್ನ ಪಾಪದ ದುಪಟ್ಟಾಳನ್ನು  ಅಂಗೈಯಗಲದಷ್ಟು  ಸುಟ್ಟು ಕಂದಕವನ್ನೇ ಸೃಷ್ಟಿ  ಮಾಡಿದಾಗ    ಶಾಕಿಗೆ  ಕಂದಕದಷ್ಟೇ ಆಗಲವಾಗಿ  ನನ್ನ ಬಾಯಿ  ತೆರೆದುಕೊಂಡು   ಕೈ  ತನ್ನ ತಾನೇ ಹಣೆ ಚಚ್ಚಿಕೊಂಡಿತು !! 
ಅಯ್ಯೋ ದೇವರೇ  ! ಇಂದು  ಮುಂಜಾನೆಯಿಂದ  ಬರೀ ಎಡವಟ್ಟು ಕೆಲಸಗಳೆ  ! ಯಾರ  ಮುಖ  ನೋಡಿ  ಎದ್ದಿದ್ನೋ  ಏನೋ  ಎಂದು ಯಾರಾದರೂ  ದೋಷಾರೋಪಣೆಗೆ  ಸುಲಭದಲ್ಲಿ  ಸಿಗುವರೇ ಎಂದು  ನೋಡಿದಾಗ ಅಂದು  ಎದ್ದ ಬಳಿಕ ಕನ್ನಡಿಯ  ದರ್ಶನ ಮಾಡಿದ್ದು ನಾನೇ ಎಂಬುದು  ನೆನಪಾಯಿತು !  

ಇಂದು   ನನ್ನ ಗ್ರಹಚಾರದಲ್ಲಿ ಗೃಹಪಯೋಗಿ  ಸಾಮಾನುಗಳಿಂದಲೇ  ಭಾರಿ  ನಷ್ಟ ಎಂಬ   ಭವಿಷ್ಯವಾಣಿ ಇತ್ತೇನೋ ಎನ್ನುವ  ಭಯಂಕರ ಅನುಮಾನ ಕಾಡಿತು ! 
ಸುಟ್ಟಿದ್ದು ದುಪಟ್ಟಾ  ತಾನೇ,  ಸದ್ಯ!  ಇನ್ನೇನು  ಹೆಚ್ಚಿನ  ಅನಾಹುತವಾಗಿಲ್ಲವಲ್ಲ  ಎಂಬ ಸಕಾರತ್ಮಕ  ಧೋರಣೆಗೆ  ಶರಣು ಹೋಗಿ ಮತ್ತೊಂದು  ಧಿರಸನ್ನು  ಆರಿಸಿಕೊಂಡೆ .  
ಆದರೆ  ಮರೆತೆನೆಂದರೂ  ಮರೆಯಲಿ  ಹ್ಯಾಂಗ   ಮೊಬೈಲ್  ಎಡವಟ್ಟಿನ  ವಿಷಯವನ್ನ  ! ಎಂದು ಸತ್ತಂತೆ  ಬಿದ್ದುಕೊಂಡ ನನ್ನ  ಪ್ರಿಯ  ಮೊಬೈಲು ಮತ್ತೆ  ಕಹಿ  ನೆನಪಿನ ಕರ್ಕಶ  ರಿಂಗ್ ಟೋನ್ ಬಾರಿಸಿತು ! 
  (ಹಾರ್ಟ್) “ಬ್ರೇಕಿಂಗ್” ನ್ಯೂಸ್ ಅನ್ನು  ಪತಿರಾಯರಿಗೆ  ತಿಳಿಸುವ  ಅನಿವಾರ್ಯತೆಗೆ ತಕ್ಕ  ಸಿದ್ದತೆಗಳನ್ನು   ನಡೆಸಿದೆ  !  . 
ಅವರಿಗಿಷ್ಟವಾದ  ಗರಿಗರಿ  ಈರುಳ್ಳಿ ಪಕೋಡ  ತಯಾರಾದವು  !  
ಅಷ್ಟೇ  ಅಲ್ಲದೆ ಅಂದು ನನ್ನ ಅಚ್ಚುಮೆಚ್ಚಿನ ಕಪಿಲ್  ಶೋ ನೋಡುವುದನು   ಬಿಟ್ಟು ಸಿಕ್ಕಾಪಟ್ಟೆ ಕ್ರಿಕೆಟ್ ಕ್ರೇಜಿರುವ   ಎಜಮಾನರಿಗಾಗಿ  ಭಾರತ  ಇಂಗ್ಲೆಂಡ್ ನಡುವಿನ ಟ್ವೆಂಟಿ ಟ್ವೆಂಟಿ ಸರಣಿ ಪಂದ್ಯವನ್ನು ಟೀವೀಯಲ್ಲಿ  ಹಾಕಿ  ತ್ಯಾಗ ಜೀವಿಯಾಗಿದ್ದು  ಒಂದು  ಕಡೆಯಾದರೆ .ಅವರು  ತಡ ಮಾಡಿ ಬಂದರೂ ನಗು ಮುಖದ ಸ್ವಾಗತಕಾರಣಿಯಾಗಿದ್ದು  ಮತ್ತೊಂದು  ಅದ್ಭುತಗಳಲ್ಲಿ  ಒಂದು ! .  
ಕಾರಣಬೇಗ  ಬರುತ್ತೇನೆ ಎಂದು  ಹೇಳಿ ಸಾಮಾನ್ಯವಾಗಿ  ತಡ ಮಾಡಿಯೇ   ಮನೆಯ  ಕರೆ ಗಂಟೆ ಒತ್ತುವ ಪತಿರಾಯರನ್ನು   ನಾನು  ಗಂಟು  ಮುಖದಲ್ಲೇ ಸ್ವಾಗತಿಸಿ ರೂಢಿ ! .ಇಂದು .ನನ್ನ ನಗು  ಮುಖ  ಕಂಡಾಕ್ಷಣ ಅವರು  ಗಲಿಬಿಲಿಗೊಂಡು ಹಲ್ಕಿರಿದು  ಒಂದೊಂದೇ ಪಕೋಡ ಬಾಯಿಗಿಳಿಸಿ ಕಾಫೀ ಹೀರಿ ಇನ್ನು  ನನ್ನ ತಂಟೆಗೆ  ಬರದಿರು  ಎಂಬ  ಭಂಗಿಯಲ್ಲಿ  ಟೀವೀ  ಮುಂದೆ ಕುಳಿತರೂ ಅವರ  ತಂಟೆಗೆ  ಬರುವುದು  ನನ್ನ ಜನ್ಮ  ಸಿದ್ದ  ಹಕ್ಕೆಂದು  ನಾನು  ಮದುವೆಯಾದಗಿಂದ  ಭಾವಿಸಿಕೊಂಡು  ಬಂದ್ದಿದಷ್ಟೇ !.... 

ಆದರೂ ಜಗತ್ತಿನ ಪರಿವಿಲ್ಲದಂತೆ ಅವರು  ಕ್ರಿಕೆಟ್ ಆಟ ವೀಕ್ಷಿಸುವುದರಿಂದ ನನ್ನ  ಮೊಬೈಲ್  ವಿಷಯ  ಹೇಳಲು  ಇದೆ  ಒಳ್ಳೆಯ ಸಮಯವೆಂದು “ ರೀ ! ತೇಜು  ಗಣಿತದಲ್ಲಿ ನೂರಕ್ಕೆ ೯೦ ಮಾರ್ಕ್ಸ್ ತೆಗೆದ್ದಿದ್ದಾನೆ ! ಮಗರಾಯನ ಪರೀಕ್ಷಾ  ಫಲಿತಾಂಶದ ಸಿಹಿ  ಸುದ್ದಿಯೊಂದಿಗೆ  ನಾಂದಿ  ಹಾಡಿದೆ ! 
ವೆರಿ  ಗುಡ್ !.ನೋಡು  ತೇಜು  ಗಣಿತದಲ್ಲಿ  ನನ್ನ ಹಾಗೆನೆ ,   ಸದ್ಯ  ನಿನ್ನ ಹೊತಿಲ್ಲ ಆವಾ !ಎಂದು  ರೇಗಿಸಿದರೂ ನಾನಂದು  ಮಾಮೂಲಿನಂತೆ ವಾದಕ್ಕೆ ತಯಾರಿರಲಿಲ್ಲ .. 
ರೀ ! ಇವತ್ತು  ವಾಶಿಂಗ್  ಮಶೀನಿನಲ್ಲಿ  ನಿಮ್ಮ ಎಲ್ಲ ಪ್ಯಾಂಟ್ ಶರ್ಟುಗಳು ಸ್ವಚ್ಚವಾಗಿ ಬಂದವು “ 
ಇವರು ನೆಮ್ಮದಿಯಿಂದ  ಹುಂಗುಟ್ಟಿದರು ! 
“ ಜೊತೆಗೆ ನನ್ನ ಜೀನ್ಸು ಪ್ಯಾಂಟ್  ಕೂಡಾ ! ,ಆದರೆ  ಅದರ  ಜೇಬಿನಲ್ಲಿ ನನ್ನ ಮೊಬೈಲ್ ಕೂಡ  ಇರೋದು  ಮರೆತೇ   ಹೋಗಿತ್ತು  !”  ಎಂದು  ಮೊಬೈಲು  ಅನ್ನುವುದನ್ನು ಅವರಿಗೆ ಕೇಳಿಸಲಾರದಷ್ಟು  ಸಣ್ಣ ದನಿಯಲ್ಲಿ   ಹೇಳಿ “ ಅಶ್ವತ್ತಾಮೋ  ಹತಃ  ಕುಂಜರಃ “ ಎಂದು ಕುರುಕ್ಷೇತ್ರ ಯುದ್ದದಲ್ಲಿ ಧರ್ಮರಾಜ ಹೇಳಿದ  ಶೈಲಿಯನ್ನೇ  ಅನುಸರಿಸಿದೆ ! 
ಅಷ್ಟರಲ್ಲಿ ಧೋನಿ ಸಿಕ್ಸರ್  ಹೊಡೆದು  ಇವರು ಉತ್ಸಾಹದಿಂದ ಎರಡು  ಕೈಯೆತ್ತಿ  ಅಂಪೈರಾದರು ! ನಾನು   ಧೋನಿಗೆ  ಕೈ  ಎತ್ತದೆ  ಮನದಲ್ಲೇ ನಮಸ್ಕರಿಸಿ  ಬೀಸೊ   ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು ಎಂದು ಮುಂದಿನ  ಬಾಣ ಬೀಸಲು   ತಯಾರಾದೆ .. 
“ ರೀಹೋದ ವರ್ಷ ನನ್ನ ಹುಟ್ಟಿದ  ಹಬ್ಬಕ್ಕೆ ಏನ್ ಉಡುಗೊರೆ  ತೊಗೊಂಡಿದ್ದೆ ನೆನಪಿದ್ಯ  ನಿಮಗೆ “ ಅನುಮಾನದಿಂದಲೇ ಕೇಳಿದೆ . 
ಅಯ್ಯೋನೀನು ಹೋದ  ತಿಂಗಳು ಏನು ತೊಗೊಂಡೆ  ಅನ್ನೋದೇ ನನಗೆ  ನೆನಪಿರಲ್ಲ ಇನ್ನು  ಹೋದ  ವರ್ಷದ್ದು  ಕೇಳ್ತಾ  ಇದೀಯಲ್ಲೇ  ! ಅರೆರೆ ! ಇಷ್ಟು  ಬೇಗ   ಮತ್ತೆ  ನಿನ್ನ ಹುಟ್ಟಿದ  ಹಬ್ಬ  ಬಂದೆ  ಬಿಡ್ತಾ ” ಇವರು ತಮ್ಮ  ಜೇಬಿಗೆ  ಬೀಳುವ ಕತ್ತರಿಯನ್ನು  ನೆನದು  ಗಾಬರಿಯಾದರು !  
ಅಯ್ಯೋ ! ಅದಕ್ಕೆ  ನೀವೇನು  ತಲೆ  ಕೆಡಿಸ್ಕೋಬೇಡಿ ! ನನ್ನ ಮೊಬೈಲ್   ಮಾಡೆಲ್  ಹಳೆಯದಾಯಿತು ,, ಸಲ ಹುಟ್ಟಿದ ಹಬ್ಬಕ್ಕೆ    ಹೊಸದು  ತೊಗೊಳ್ಳೋಣ ಅನ್ಕೊಂಡೆ !” 
 ..ಕ್ರಿಕೆಟ್  ಪಂದ್ಯದ  ಕೊನೆ ಎರೆಡು  ಓವರ್ಗಳು  ..ಭಾರತದ  ಸೋಲು  ಗೆಲುವಿನ ಪ್ರಶ್ನೆ !.ಇದರ  ಜೊತೆ .ನನ್ನ  ತಲೆ  ತಿನ್ನುವ  ಪ್ರಶ್ನಾವಳಿಗಳು !.. ಇವರು “ ಆಯಿತು ಮಾರಾಯ್ತಿತೊಗೋ ,,ಈಗ  ಮ್ಯಾಚ್  ನೋಡೋಕೆ  ಬಿಡ್ತೀಯಾ  “ ಎಂದು  ಉಗುರು  ಕಚ್ಚುತ್ತಾ ಸೋಫಾ  ತುದಿಗೆ ಸರಿದು  ಕುಳಿತರು ! ,, 
“  ಸಲ ನೀವು  ನನ್ನ ಶಾಪಿಂಗ್ ಗೆ  ನನ್ನ ಜೊತೆ  ಬರೋದೇನು ಬೇಡ ರೀ !” .ನಾನೇ  ಆನ್ಲೈನ್ನಲ್ಲಿ  ಹೊಸ  ಮಾಡೆಲ್  ನೋಡ್ಕೊಂಡಿದ್ದೀನಿ ,ಫ್ಲಿಪ್ಕಾರ್ಟಿ ನಲ್ಲಿ ಬುಕ್  ಮಾಡಿಬಿಡ್ತೀನಿ ! “  ಎಂದು  ಅವರಿಗೆ  ನನ್ನ ಶಾಪಿಂಗ್  ಎಂಬ “ ಮಾಲ್  ಬಂಧನದಿಂದ” ಧಾರಾಳವಾಗಿ   ಮುಕ್ತ ಗೊಳಿಸಿದಾಗ  ಕಾಮೆಂಟರಿ  ಹೊರತಾಗಿ ಇವರ  ಕಿವಿಗಳಿಗೆ  ಏನೋ  ಕೇಳಿಸಲ್ಲಿಲ್ಲ ! ಆದರೂ  ನಾ ಹೇಳೋದನ್ನು  ಕೇಳಿಸಿದಂತೆ  ನಟಿಸಿ  “ ಓಕೇ ಓಕೇ “  ಎಂಬ  ಸಂಜ್ಞೆ   ಮಾಡಿದರು ... 
ನಾನು  ನನ್ನ ಮ್ಯಾಚ್  ಮುಗಿಸಿ  ಗೆಲುವಿನ  ನಗೆಯೊಂದಿಗೆ ಜಾಗ  ಖಾಲಿ  ಮಾಡಿದೆ !.. 
ಆರತಿ  ಘಟಿಕಾರ್  

ಮಂಗಳಾ ಪತ್ರಿಕೆಯಲ್ಲಿ ಪ್ರಕಟಿತ ಲೇಖನ 






2 comments :

  1. ಮೋಬೈಲ್ ಹೋದರೆ ಹೋಗಲಿ. ಒಳ್ಳೇ ಉಪಾಯಕಾರ್ತಿ ನೀವು! ನಿಮಗೆ ಯಾವಾಗಲೂ ಜಯವಾಗುತ್ತಿರಲಿ!

    ReplyDelete
  2. ಧನ್ಯವಾದಗಳು ಸರ್ .ಬಹಳ ಖುಷಿಯಾಯಿತು ನಿಮ್ಮ ಅನಿಸಿಕೆ ಓದಿ.

    ReplyDelete