ಜೀವನದಲ್ಲಿ
ಬದಲಾವಣೆಗಳು ಸರ್ವೇ ಸಾಮಾನ್ಯ . ಈ ಬದಲಾವಣೆಯ ಹಂತಗಳು ಕೆಲವು ಸ್ವಾರಸ್ಯದಿಂದ ಕೂಡಿ ಹರ್ಷದಾಯಕವಾದರೆ ಮತ್ತೆ ಕೆಲವು ರಸವಿಲ್ಲದ
ನಿಸ್ಸಾರ .. ಇವು
ನಮಗೆ ಅನ್ವಯವಾದರೆ ಕೆಲವರು ತಮ್ಮ ಮನೆಯಲ್ಲಿರುವ
ನಿರ್ಜೀವ ವಸ್ತುಗಳ ಬದಲಾವಣೆಯ ಘಟ್ಟವಾದ
ಬಣ್ಣ ಮಾಸುವ , ಹಳತಾಗುವ , ಸವೆದು ಸಣಕಲಾಗುವಂತ ನೂರಾರು ಬದಲವಣೆಗಳಾದರೂ , ಬಿಸಾಡದೆ ಬೆಟ್ಟದಂತಹ ಪುತ್ರ ಮೋಹ ಬೆಳೆಸಿಕೊಂಡು ಅವುಗಳೊಂದಿಗೇ ಜೀವನ
ಸಾಗಿಸಿದರೆ ಮತ್ತೆ ಕೆಲವು ಪ್ರಭೂತಿಗಳು ಅವಕ್ಕೂ ರೀಸೈಕಲ್ ತಂತ್ರಗಳನ್ನು ಬಳಸಿ (ಅದರ) ಕೊನೇ ಉಸಿರಿ ತನಕ ದುಡಿಸಿಕೊಳ್ಳುವ ಮರು ಬಳಕೆ ಸೃಷ್ಟಿಕರ್ತರು !.
ನಮ್ಮ ಮನೆಯಲ್ಲಿ ನನ್ನ ಬಾಲ್ಯದಿಂದಲೂ ಈ ರೀತಿ ಹಳೆ ವಸ್ತುಗಳನ್ನು
ಬಿಸಾಡದೆ ಹೇಗಾದರೂ
ಸರಿ ( ಕಳ್ಳ ಕಾಕರನ್ನು ಸುಧಾರಿಸಿ ಸಮಾಜದ ಮುಖ್ಯ
ವಾಹಿನಿಗೆ ತಂದಂತೆ ) ಅವುಗಳ ಮರು ಉಪಯೋಗ ಪಡೆಯುವುದರಲ್ಲಿ ನಮ್ಮ ತಂದೆಯವರು ಸಿದ್ದ ಹಸ್ತರು !
ಅವರ ಈ ಕಲೆ ಅಲ್ಪ ಸ್ವಲ್ಪ ರಕ್ತಗತವಾಗಿ ನನಗೂ ಹರಿದು ಬಂದಿತ್ತು. ಉದಾಹರಣೆಗೆ
ತಂದ ಹೊಸತರಲ್ಲಿ ನಮ್ಮ
ಹಲ್ಲುಜ್ಜಿ ಬೆಳ್ಳಗೆ ಫಳ ಫಳ ವಾಗಿಸುವ ಟೂತ್
ಬ್ರಶ್ಶು ಹಳತಾದ ನಂತರ ಕೂದಲು
ಕಪ್ಪಾಗಿಸುವ ಹೇರ್ ಡೈ ಬ್ರಶ್ ಆಗಿ ದ್ವಿಪಾತ್ರಾಭಿನಯದಲ್ಲಿ
ತೊಡಗಿಕೊಳ್ಳುತ್ತಿತ್ತು . ಇನ್ನು
ಪೂರ್ವಾಶ್ರಮದಲ್ಲಿ ಎಜಮಾನರ
ಮೈಯನ್ನು ಬೆಳ್ಳಗೆ ಮಿಂಚುತ್ತಾ
ಅಲಂಕರಿಸಿದ್ದ ಬನಿಯನ್ನು ಕಾಲಾನುಕ್ರಮದಲ್ಲಿ ಕೆಲಸದವಳ ಒಗೆತಕ್ಕೆ ನಲುಗಿ ಬಣ್ಣ ಮಾಸಿ ಅವಳ ಕೈಯಲ್ಲೇ ಒರೆಸೊ ಬಟ್ಟೆಯಾಗಿ
ನಿಟ್ಟಿಸುರಿಡುತ್ತಾ ಕೆಲವು ಕಾಲ ಜೀವನ ಸಾಗಿಸುತಿತ್ತು .
ಏನೇ ಅನ್ನಿ ಮನೆಯ ಗುಜರಿ ಸಾಮಾನುಗಳು
ಮುಂದೆ ಎಂದಾದರೂ ಉಪಯೋಗಕ್ಕೆ
ಬಂದೆ ಬರುತ್ತದೆ ಎನ್ನುವ ಗಟ್ಟಿ ನಂಬಿಕೆ ಪತಿ ಪತ್ನಿ ಇಬ್ಬರಲ್ಲಿ ಒಬ್ಬರಿಗೆ ಬಲವಾಗಿ ಇರುತ್ತದೆ
..ಗಂಡ ಹೆಂಡತಿಯ ಜಾತಕದಲ್ಲಿ
ಮೂವತ್ತೆರಡು ಗುಣಗಳೂ ಕೂಡಿ ಬಂದಿದ್ದರಂತೂ ಈ ಸಮಾನ ಮನಸ್ಕರ ಗುಜರಿ ವ್ಯಾಮೋಹದ ಪರಿಣಾಮ ಅವರ ಮನೆ (ಕಸದ) ತೊಟ್ಟಿ ಡಾಟ್ ಕಾಂ ಎನ್ನುವಂತಾ
ವೆಬ್ಸೈಟ್ ಆಗಿದ್ದರೆ ಅಚ್ಚರಿಯಿಲ್ಲ ಬಿಡಿ .!
ತಮ್ಮ ಮಗ ಮೊದಲ ಬಾರಿ ಹೊಡೆದ ಮೂರು ಗಾಲಿ ಸೈಕಲ್ಲು , ತಮ್ಮ ಪುಟ್ಟಿಯ ಒಂದು ವರ್ಷದ
ಹುಟ್ಟು ಹಬ್ಬದ ಫ್ರಾಕ್ , ಅಮ್ಮನ ಹಳೆ ಹೊಲಿಗೆ ಮಶೀನು, ಅಪ್ಪನ ಹಿಯರಿಂಗ್ ಏಡು , ಮಗ ಧರಿಸಿದ ಮೊದಲ ಕನ್ನಡಕ , ಎಂದೆಲ್ಲಾ ಭಾವನಾತ್ಮಕ ಸೆಳೆತಕ್ಕೆ ಸಿಕ್ಕಿ ಹಳೆ ಸಾಮಾನಿನ ಜೊತೆಯಲ್ಲೆ ಜೋತಾಡಿಕೊಂಡಿರುತ್ತಾರೆ ! ನನ್ನ ಕಾಲಿನ ರೀ ಸರ್ಜರಿಯಾದಾಗ , ಬಿದ್ದಾಗ ಮೂಳೆ
ಕೂಡಿಕೊಳ್ಳಲು ಹಾಕಿದ ನಟ್ಟು ಸ್ಕ್ರೂ, ಸ್ಟೀಲ್ ರಾಡುಗಳು ಇನ್ನೂ ನನ್ನ
ಕಾಪಾಟಿನಲ್ಲಿ ವೈದ್ಯರು ನೀಡಿದ ಸ್ಮರಣಿಕೆಯಂತೆ ಕುಳಿತಿದ್ದು ಇದೆ ಕಾರಣಕ್ಕೆ .
ಇನ್ನು ನನ್ನ ಬಾಲ್ಯದ ದಿನಗಳನ್ನು ನೆನೆಸಿಕೊಂಡಾಗ ಈಗಲೂ ನಗೆ ತರಿಸುವ ಅಪ್ಪನ ಅಗಾಧವಾದ ಮರುಬಳಕೆ ಪ್ರಜ್ಞೆ ಮೆಲ್ಲನೆ ಎಂಟ್ರಿ ಕೊಟ್ಟು ಕಚಗುಳಿಯಿಡುತ್ತದೆ . ನನಗೆ
ನೆನಪಿದ್ದಂತೆ ಮನೆ ಕೆಲಸದವಳು ಗುಡಿಸಿ ಹಾಕಿದ ಮನೆ ಕಸದ ಹೊರತಾಗಿ ಮತ್ಯಾವ
ಹಳೆ ವಸ್ತುಗಳು ಕೂಡ ನಮ್ಮ ಮನೆಯಿಂದ
ಆಚೆ ಹೋಗುತ್ತಿರಲಿಲ್ಲ ..
ನಮ್ಮ ಕಾಲೇಜು ದಿನಗಳಲ್ಲಿ ಸುಂದರ ಪ್ರಕೃತಿ ಚಿತ್ರಗಳಿರುವ , ಸಿನಿಮಾ ನಟ ನಟಿಯರ ಚಿತ್ರಗಳಿರುವ ಕ್ಯಾಲೆಂಡರ್ ಸಂಸ್ಕೃತಿ ಎಲ್ಲರ
ಮನೆಯಲ್ಲಿ ಸರ್ವೇ ಸಾಮಾನ್ಯವಾಗಿತ್ತು .
ರೈಲ್ವೆ ಬೋಗಿಯಂತಿದ್ದ
ನಮ್ಮ ಹೆಂಚಿನ ಮನೆಯ
ಉದ್ದಕ್ಕೂ ಪ್ರತಿ ಕೋಣೆಯಲ್ಲೂ ನಾನಾ ಬಣ್ಣದ
ಕ್ಯಾಲಂಡರ್ ನೇತು ಹಾಕಿದ್ದೆವು .ತಿಂಗಳಿಗೊಮ್ಮೆ
ಅದರ ಹಾಳೆಗಳನ್ನು ತಿರುವು ಹಾಕುವುದು ನನ್ನ ಕಾಯಕವಾಗಿತ್ತು .ನನ್ನ ಉದ್ದನೆಯ ಲೆಡ್ಜರ್ ನೋಟ್
ಬುಕ್ಗಳೆಲ್ಲ ಬೈಂಡ್ ಎಂಬ ಹೆಸರಿನಲ್ಲಿ ಈ ಸಿನಿಮಾ ತಾರೆಯರ ಚಿತ್ರ
ಪಟಗಳಿಂದ ಸನ್ಮಾನ
ಮಾಡಿಸಿಕೊಳ್ಳುತ್ತಿದ್ದವು . ಒಮ್ಮೆ
ಡಿಸೆಂಬರ್ ತಿಂಗಳ ಕ್ಯಾಲೆಂಡರ್ ಪುಟದಲ್ಲಿ ನನ್ನ ಅಚ್ಚು ಮೆಚ್ಚಿನ ಚಾಕ್ಲೇಟ್ ಹೀರೋ ಆಮೀರ್ ಖಾನ್ ನಗುತ್ತಾ ನಿಂತಾಗ , ಡೆಸೆಂಬರ್ ಮುಗಿಯಲು ಇನ್ನೂ ಒಂದು ವಾರ ಇರುವಾಗಲೇ
ಮೆಲ್ಲಗೆ ಆ ಹಾಳೆಯನ್ನು ಬೈಂಡ್
ಗಾಗಿ ಲಪಟಾಯಿಸುವ ಕತ್ತರಿ ಕೆಲ್ಸ ಮಾಡಿ ಅಮ್ಮನಿಂದ ಬೈಗುಳ ತಿಂದಿದ್ದೆ . ಆದರೆ ದಿನವೂ ಲೆಡ್ಜರ್ ಪುಸ್ತಕದಲ್ಲಿ ಆಮೀರನನ್ನು ನನ್ನ ಹೃದಯಕ್ಕೆ ಹತ್ತಿರವಾಗಿ
ಹಿಡಿದು ಹೋಗುವ ಮಜಾ ಅನುಭವ ಮುಂದೆ ಈ ಬೈಗುಳ ಯಾವ ಲೆಕ್ಕ ಬಿಡಿ ! ..ಆದರೆ ನಮ್ಮ ತಂದೆಯವರು ಹಳೆ ಕ್ಯಾಲೆಂಡರಿನ ಪ್ರಯೋಜನ ಪಡೆದುಕೊಳ್ಳುತ್ತಿದ
ರೀತಿ ಇನ್ನೂ ಅಮೋಘವಾಗಿತ್ತು .
ಹೇಗೆ ಅಂತೀರಾ ಕೇಳಿ ..ಸಾಮಾನ್ಯವಾಗಿ
ಹಳೆಯ ಬಾಂಕಿನ ಕ್ಯಾಲೆಂಡರ ಹಾಳೆಗಳನ್ನೆಲ್ಲ ನೀಟಾಗಿ ಹರಿದು ನಾಲ್ಕು ಭಾಗವಾಗಿ ಅಂಗೈ ಆಗುಲಕ್ಕೆ ಕತ್ತರಿಸಿ ಹಾಳೆಯ ಹಿಂಭಾಗದ ಬಿಳಿ ಬಣ್ಣ ಮೇಲೆ ಬರುವಂತೆ ಸೇರಿಸಿ ಸ್ಟ್ರೆಪಲ್ಲರ್
ಬಡಿದು ಅದನ್ನು ನಮ್ಮ ಪುರಾತನ
ಕಾಲದ ಸೋಫಾದ ಕೆಳಗಿಟ್ಟಿರುತ್ತಿದ್ದರು . ತಿಂಗಳ
ದಿನಸಿ ಲಿಸ್ಟ್ ಬರೆಯಲು , ಅಥವ ಬಿಳಿ ಹಾಳೆ ಬೇಕಿದ್ದಲ್ಲಿ ಅದನ್ನೇ
ಉಪಯೋಗಿಸಿ ಎಂದು ಮನೆ ಮಂದಿಗೆಲ್ಲ ತಾಕೀತು ಮಾಡಿದ್ದರು !.ಈಗಲೂ ಈ ಕಾರ್ಯವನ್ನು ಅಪ್ಪ ಶ್ರುದ್ಧಾಭಕ್ತಿಯಿಂದ ಮುಂದುವರೆಸಿಕೊಂಡು
ನಮಗೆ ಕೇಳಿದ ತಕ್ಷಣ ಬಿಳಿಹಾಳೆಗಳನ್ನು ಒದಗಿಸುತ್ತಿದ್ದಾರೆ ..
ಆಗ ನಮ್ಮ ಮನೆಯ ಆಟ್ಟ ಎನ್ನುವ ಬ್ರಹ್ಮಾಂಡದಲ್ಲಿ ಗುಜರಿ ಸಾಮಾನುಗಳು ಮಹಾ ಕಾವ್ಯಗಳಾಗಿ ಗೋಣಿಚೀಲದಲ್ಲಿ ಕುಳಿತಿರುತ್ತಿದ್ದವು .
ಮನೆಯಲ್ಲಿ ಪೈಂಟಿಂಗ್ ಮಾಡಿಸಿದ ಕುರುಹುಗಳಾಗಿ ಖಾಲಿಯಾದ ಪೈಂಟ್ ಡಬ್ಬಗಳು ನೆಲ ಒರೆಸುವ , ಗಿಡಕ್ಕೆ ನೀರು ಹಾಕುವ ಕೆಲವೊಮ್ಮೆ ಸ್ನಾನದ ಬಕೆಟ್
ಗಳಾಗಿ ಮರು ಜನ್ಮ ಪಡೆಯುತ್ತಿದ್ದವು
ಹಾಗಾಗಿ ಮನೆಗೆ
ಪೈಂಟಿಂಗ್ ಮಾಡಿಸಿದಾಗಲ್ಲೆಲ್ಲ (ಪಕ್ಕದ ಮನೆಯದಾಗಿದ್ದರೂ
ಸರಿ ) ಇಂಥ ಪೈಂಟ್ ಡಬ್ಬಗಳ ಕಲ್ಲೆಕ್ಷನ್
ಜೋರಾಗಿ, ನಾಯಿಕೊಡೆಗಳಂತೆ ಅವುಗಳ ಸಂತತಿ ಬೆಳೆದು , ಪಿತ್ರಾರ್ಜಿತ
ಆಸ್ಥಿಯನ್ನು ಮಕ್ಕಳು ಮೊಮ್ಮಕ್ಕಳಿಗೆ
ವರ್ಗಾಯಿಸುವಂತೆ ನಮ್ಮ
ತಂದೆಯವರು ತಮ್ಮ ಮೂರು ಹೆಣ್ಣು ಮಕ್ಕಳಿಗೆ ಮುಂದೆ ಈ ಡಬ್ಬಗಳನ್ನು
ದಾನವಾಗಿ ನೀಡಿದ್ದರು .
ಇನ್ನು ಎಲೆಕ್ಟ್ರಿಕ್, ಪ್ಲಮ್ಬಿಂಗ್,
ಮರ ಗೆಲಸಗಳು ಅಪರೂಪಕೆ ನಡೆದಾಗ ನಟ್ಟು ಸ್ಕ್ರೂ , ಸ್ವಿಚ್
ಬೋರ್ಡ್ ಬಾಕ್ಸಗಳು , ಹಳೆಯ ಸ್ಟೀಲ್ ನಲ್ಲಿಗಳು ,
ಇತ್ಯಾದಿ ಅಟ್ಟವೇರಿ ಆಗಲೇ
ಅಲ್ಲಿವಜಮಾಯಿಸಿಕೊಂಡಿರುವ ಹರಕು ಮುರುಕು ಸಹವರ್ತಿಗಳೊಡನೆ
ಶಾಶ್ವತವಾಗಿ ತಮ್ಮ ಜಾಗವನ್ನು ಭದ್ರ ಪಡಿಸಿ ಕೊಳ್ಳುತ್ತಿದ್ದವು .
ಇನ್ನು ಡ್ರಮ್ಮಿಗೆ ನೀರು ತುಂಬುವ ಸಲುವಾಗಿ ಇದ್ದ ತುಂಡಾದ
ರಬ್ಬರ್
ಪೈಪುಗಳು (ಶಿವನ ಕೊರಳಿಗೆ ಸುತ್ತಿಕೊಂಡ ನಾಗಗಳಂತೆ )
ನಲ್ಲಿಯ ಕೊರಳಿಗೆ ಬಿಗಿಯಾಗಿ ಸುತ್ತಿಕೊಂಡು ನೀಲಕಂಠನಂತೆ ‘ನಲ್ಲಿ’ಕಂಠವಾಗಿದ್ದವು !
..
ಒಮ್ಮೆ ಮರಗೆಲಸವಾದ ನಂತರ ಅಪ್ಪನ ಮರುಬಳಕೆ ಪ್ರಜ್ಞೆ ಜಾಗೃತವಾಗಿ ಕಾರ್ಪೆಂಟರ್ಗಳು ಉಳಿಸಿಹೋದ ಕಸದಲ್ಲಿ
ಅಪ್ಪ ನಡೆಸಿದ ಉತ್ಖನದಲ್ಲಿ ನಿಧಿಯಂತೆ ಸಿಕ್ಕ ಗೋಳಾಕಾರದ,
ಚೌಕಾಕಾರದ ಪುಟಾಣಿ ಮರದ ತುಂಡುಗಳನ್ನು ಆಸ್ಥೆಯಿಂದ
ಶೇಖರಿಸಿಟ್ಟಿದ್ದರು . ಮರುದಿನ ಅವು ದೇವರ ಮುಂದೆ ಆರತಿ ತಟ್ಟೆ , ನೈವೇದ್ಯಗಳನ್ನು
ಇಡುವ ಪುಟ್ಟ ಮಣೆಗಳಾಗಿ ತಮ್ಮ ಮರುಜನ್ಮವನ್ನು ಭಗವಂತನ ಸೇವೆಯಲ್ಲಿ ಪಾವನಗೊಳಿಸಿಕೊಂಡವು !.ಒಟ್ಟಿನ್ನಲ್ಲಿ
ಕಲಾವಿದರು ಬಣ್ಣ ,ವೇಷ ಬದಲಿಸಿ ಮತ್ತೆ ಹೊಸ
ಪಾತ್ರಕ್ಕೆ ಸಜ್ಜಾದಂತೆ ನಮ್ಮ ಮನೆಯ ಗುಜರಿಯೂ
ತನ್ನ ಕಲಾವಂತಿಕೆಯಿಂದ ಮೆರೆಯುತಿತ್ತು .
.ಏನೇ ಅನ್ನಿ ಈ ಹಳೆ ವಸ್ತುಗಳ ಪುನರ್ಬಳಕೆ ಒಂದು ಕಲೆಯೇ ಸರಿ
.ಆದರೆ ಅದು ಸುಂದರವಾಗಿ ರೂಪಾಂತರ ಗೊಂಡಾಗ ಹಿರಿಯರು “ಕಸದಿಂದ ರಸ “ ಎಂದು ಚೆಂದವಾಗಿ ಕರೆದು ನಮ್ಮ ಕಲಾ ನೈಪುಣ್ಯವನ್ನು ಹಾಡಿ ಹೊಗಳುತ್ತಾರೆ . ಅದು ನಿಜಕ್ಕೂ
ಕಾಲಾನುಭೂತಿ , ಆದರೆ ನಮ್ಮದು ಗುಜರಿ ವ್ಯಾಮೋಹಕ್ಕೆ ಗಂಟು ಬೀಳುವ
ಕಸಾನುಭೂತಿ !
ಹಾಗೆ ನೋಡಿದರೆ ಎಲ್ಲದರಲ್ಲೂ ಅಪ್ಪನ ಶಿಸ್ತು ಅಚ್ಚುಕಟ್ಟುತನ , ತಮ್ಮ ವಸ್ತುಗಳನ್ನು ಚೆಂದವಾಗಿ
ಇಟ್ಟುಕೊಳ್ಳುತ್ತಿದ್ದ ರೀತಿ ಎಲ್ಲವೂ ನಮಗೆ ಮೆಚ್ಚುಗೆ ಯಾಗುತಿತ್ತು .. ಆದರೆ ಅವರಗಿದ್ದ ಹಳೆ ಸಾಮಾನಿನ ಮೋಹಕ್ಕೆ
ಬ್ರೇಕ್ ಹಾಕಲು ಅಮ್ಮನಿಗೂ ಸಾಧ್ಯವಾಗುತ್ತಿರಲಿಲ್ಲ . ಹಾಗಾಗಿ ನಮ್ಮ ಮನೆಯಲ್ಲಿ ಕಸದಿಂದ ರಸಕ್ಕೂ
ಮುನ್ನ ಕಸದಿಂದ ವಿರಸವೆ ಆರಂಭವಾಗುತಿತ್ತು
. ಆದರೆ ಅವರ ಈ ಸ್ವಭಾವ ,
ವರ್ತನೆ ಎಷ್ಟೋಬಾರಿ ನಮಗೆಲ್ಲ ತಮಾಷೆ ಸಂಗತಿಯಾಗಿ
ನಗೆ ಉಕ್ಕಿ ಬರುತ್ತಿದ್ದದ್ದೂ ಕೂಡ ಇತ್ತು .
ಗಿನ್ನೆಸ್ ಧಾಕಲೆ ಮುರಿಯುವಷ್ಟು ಬೀಗ ಹಾಗೂ ಬೀಗದ ಕೈಗಳ ಸಂಗ್ರಹ ಅವರ
ಖಜಾನೆಯಲ್ಲಿತ್ತು .ತಾವು ಮೊದಲ ಬಾರಿ
ನೌಕರಿ ಸೇರಿ ತಮ್ಮ ಖೋಲಿಗೆ ಹಾಕಿದ್ದ ಬೀಗದಿಂದ ಹಿಡಿದು ಇತ್ತೀಚಿನವರೆಗೂ
ಅವರ ಬೀಗಗಳ ಸಂಗ್ರಹ ಮುಂದುವರೆದು
ಹೆಮ್ಮೆಯಿಂದ ಬೀಗುತ್ತಿದ್ದವು . ಒಮ್ಮೊಮ್ಮೆ ಮುಂಜಾನೆಯ ಸುಪ್ರಭಾತದ ಶುಭ ವೇಳೆಯಲ್ಲಿ ಅವುಗಳನ್ನೆಲ್ಲ ತಮ್ಮ ಮುಂದೆ
ಹರಡಿಕೊಂಡು ಪ್ರೀತಿಯಿಂದ ಈಕ್ಷಿಸುತ್ತಾ
(ಎಣಿಸುತ್ತಾ )ಕಾಲ ಕಳೆಯುತ್ತಿದ್ದದ್ದುಂಟು. ಒಂದೆರಡು ಬಾರಿ ನಾ ಊರಿನಿಂದ ತವರಿಗೆ ಬಂದಾಗ ಸೂಟ್ಕೇಸಿಗೆ ಹಾಕಿದ
ಚೋಟುದ್ದ ಬೀಗ ಕಳೆದು ಅವರ ಬೀಗದ ಕಾಯಿಗಳ
ಗೊಂಚಲಿನಿಂದಲೇ ನನ್ನ ಸೂಟುಕೇಸಿನ ಬಾಯಿ ತೆರೆದಿತ್ತು ಎಂದರೆ ನೀವು ನಂಬಲೇಬೇಕು !
ಇನ್ನು ನಮ್ಮ ತರಗತಿಯ ವಾರ್ಷಿಕ ಪರೀಕ್ಷೆ ಮುಗಿದ ನಂತರ ತಿಂಗಳಿಗೆ
ಇಪ್ಪತ್ತು ದಿನಗಳು ಆಡಿಟ್
ಅಧಿಕಾರಿಯಾಗಿ ಊರೂರು ಸುತ್ತುತ್ತಿದ್ದ ತಂದೆಯವರ ಆಗಮನವಾಗುತಿತ್ತು . ಪರೀಕ್ಷೆ ಫಲಿತಾಂಶದಲ್ಲಿ ನಾವು ಮೂವರು ಅಕ್ಕ ತಂಗಿಯರು ಮೊದಲ ದರ್ಜೆಯಲ್ಲಿ ಉತ್ತಮ ಅಂಕಗಳಿಂದ ಪಾಸ್ ಆದ ಸುದ್ದಿ ಅವರ ಮುಂದೆ ಅರುಹಿದಾಗ ಮೂವರಿಗೂ ” ವೆರೀ ಗುಡ್” ಎನ್ನುವ
ಶಭಾಷಗಿ(ಗ)ರಿ ಕೊಟ್ಟು ಮುಂದಿನ ಮಹತ್ವದ ಕಾರ್ಯಾಚರಣೆಯನ್ನು
ಆರಂಭಗೊಳಿಸುತ್ತಿದ್ದರು . ನಾವು ಓಡಿ ಹೋಗಿ ಕಳೆದ
ವರ್ಷದ ನಮ್ಮ ನೋಟು ಬುಕ್ಕುಗಳನ್ನೆಲ್ಲ ಅವರಿಗೆ ಒಪ್ಪಿಸಿ ವಿನೀತ ಭಾವದಿಂದ ನಿಂತಿರುತ್ತಿದ್ದೆವು . ನಮ್ಮ ನೂರು ಇನ್ನೂರು ,ಮುನ್ನೂರು ಪೇಜುಗಳ ನೋಟ್ ಪುಸ್ತಕದಲ್ಲಿ ಬರಿಯದೆ ಖಾಲಿ ಬಿಟ್ಟ
ಹಾಳೆಗಳನ್ನು ಮೇಲೆ ತಮ್ಮ ಚಿಕಿತ್ಸಕ ದೃಷ್ಟಿ ಬೀರಿ “ನೋಟ್ ಬುಕ್ ಪೂರ್ತಿ ಉಪಯೋಗಿಸದೆ ಎಷ್ಟು
ವೇಸ್ಟ್ ಮಾಡಿದ್ದೀರಿ ನೋಡಿ,
ದುಡ್ಡಿನ ಬೆಲೆ ಎಳ್ಳಷ್ಟೂ ಇಲ್ಲ ನಿಮಗೆ “ ಎಂದು
ಪ್ರತಿ ಸಲದಂತೆ ಬೈದು ಸರಸರನೆ ಎಲ್ಲ ನೋಟ್
ಪುಸ್ತಕಗಳ ಖಾಲಿ ಇದ್ದ ಹಾಳೆಗಳನ್ನು ಹರಿದು , ಪ್ರಿಂಟಿಂಗ್
ಪ್ರೆಸ್ ಇಟ್ಟ ತಮ್ಮ ಗಳಸ್ಯ ಕಂಟಸ್ಯ ಸ್ನೇಹಿತನಲ್ಲಿಗೆ ಕೊಂಡೊಯ್ದು
ಅವರ ಬಿಟ್ಟಿ ಸೇವೆ ಪಡೆಯ್ತುತ್ತಿದ್ದರು ..ಆಗ ಭಗವದ್
ಗೀತೆಯಂತ ಐನೂರು/ಆರು ನೂರು ಪೇಜಿನ ದಪ್ಪನೆಯ ರಫ್ ನೋಟುಗಳೆಂಬ ಉದ್ಗ್ರಂತಗಳು
ನಮ್ಮ ಬ್ಯಾಗು ಸೇರುತ್ತಿದ್ದವು ! ಈ ಪದ್ದತಿ ನಾವೆಲ್ಲ ಹತ್ತನೆಯ
ತರಗತಿ ಮುಗಿಸುವವರೆಗೂ ಅನೂಚಾನವಾಗಿ ಮುಂದುವರಿಯಿತು .
ನಾವೆಲ್ಲಾ ಹೆಣ್ಣು
ಮಕ್ಕಳೇ ಇದ್ದರೂ ಕೂಡ ಕುಟುಂಬ
ರಾಜಕಾರಣದಲ್ಲಿ ತಮ್ಮ ಮಕ್ಕಳಿಗೇ ಟಿಕೆಟ್ ನೀಡುವಂತೆ ಅಪ್ಪನ ಹಳೆಯ ಟೆರ್ರಿಕಾಟ್
ಪ್ಯಾಂಟುಗಳು ನಾವು ಸಣ್ಣವರಿದ್ದಾಗ ಚಳಿಗಾಲಕ್ಕೆ ಬೆಚ್ಚನೆಯ ಬುಷ್ ಕೋಟ್ಗಳಾಗಿ ವೇಷಾಂತರಗೊಳ್ಳುತ್ತಿದ್ದವು. ಆಗ ಅಪ್ಪ
ಆನಂದಿಂದ ಪ್ಯಾಂಟ್
ಹೋಯ್ತು ಕೋಟ್ ಬಂತು ಎಂದು ಆನಂದದಿಂದ ಡೊಳ್ಳು ಬಡಿಯುವುದೊಂದೆ ಬಾಕಿ !
ಆದರೆ ಅಪ್ಪನ ಕಲ್ಪನೆಗೂ
ಮೀರಿಸುವ ಮರುಬಳಕೆಯ ಐಡಿಯಗಳು ಅವರ ಬಾಲ್ಯ ಸ್ನೇಹಿತ ಕಾಕಡೆ ಅಂಕಲ್ ಅವರದ್ದಾಗಿದಂತೆ !
ಅವರ ಬಳಿಯಿದ್ದ ಕೆಂಪು
ಬಣ್ಣದ ಹಳೆಯ ಕೊಡೆಯ ತಂತಿಗಳು ಮುರಿದು , ಅದು ಉಪಯೋಗಕ್ಕೆ ಬಾರದಂತಾದಾಗ ಕಾಕಡೆಯವರ ರೀ ಸೈಕಲ್ ಐಡಿಯಾ ಜೋರಾಗಿ ಪೆಡ್ಡಲ್ ತುಳಿದಿತ್ತು . ಆ
ಕೊಡೆಯ ತಂತಿಗಳನ್ನೆಲ್ಲ ಕಿತ್ತು ತಮ್ಮ ಪುಟಾಣಿ ಮಗಳಿಗೆ
ಛತ್ರಿಯ ಸಾಟಿನ್ ಬಟ್ಟೆಯಲ್ಲಿ ಫ್ರಾಕ್ ಹೊಲಿಸಿ
ಛತ್ರಿಯಿಂದ ಚಮತ್ಕಾರವನ್ನೆ ಶ್ರುಷ್ಟಿಸಿದ್ದರಂತೆ !. ನಮ್ಮ ತಂದೆಯವರು ಈ ವೃತಾಂತ ವನ್ನು
ಹೇಳಿದಾಗಿನಿಂದ ಕಾಕಡೆ ಅಂಕಲ್ನಂತ ಮಹಾನ್ ವ್ಯಕ್ತಿಯನ್ನು ಎಲ್ಲಿದ್ದರೂ ಹುಡುಕಿ ಸನ್ಮಾನ
ಮಾಡಬೇಕೆಂದಿರುವೆ !
ಏನೇ ಅನ್ನಿ
ತಮ್ಮಲ್ಲಿರುವ ಗುಜರಿ ವಸ್ತುವನ್ನು ಬೆರಗಾಗುವಂತೆ ಹೊಸ ರೂಪದಲ್ಲಿ ಮಾರ್ಪಡಿಸುವ ಈ ಮರುಬಳಕೆ
ತಜ್ಞ್ಯರಿಗೆಲ್ಲ ನಮೋನ್
ನಮಃ ! ಇನ್ನು ಈ ಲೇಖನ ಕೂಡ ಯಾರದೋ ಕೈಯಲ್ಲಿ ಸಿಕ್ಕಿ ಮರು ಬಳಕೆ ಆಗದಿದ್ದರೆ ಅಷ್ಟೇ
ಸಾಕು !
ಜನೆವರಿ 2019 ತುಷಾರ ಪತ್ರಿಕೆಯಲ್ಲಿ ಪ್ರಕಟಿತ
ಜನೆವರಿ 2019 ತುಷಾರ ಪತ್ರಿಕೆಯಲ್ಲಿ ಪ್ರಕಟಿತ
ಆರತಿ ಘಟಿಕಾರ್
ಗುಜರಿ ವೃತ್ತಾಂತವನ್ನು ಓದಿ ಪುಳಕಿತನಾದೆ, ಮೇಡಮ್! ನಾನು ಸ್ವಲ್ಪ ಮಟ್ಟಿಗೆ ಇದೇ ಲೈನ್-ದಲ್ಲಿದ್ದರೂ ನಿಮ್ಮ ತಂದೆಯವರ ಮಟ್ಟಕ್ಕಾಗಲಿ. ಕಾಕಡೆ ಅಂಕಲ್ ಮಟ್ಟಕ್ಕಾಗಲಿ ಬರಲು ಸಾಧ್ಯವಿಲ್ಲ. ಇವರೀರ್ವರಿಗೆ ನನ್ನ ಅನಂತ ವಂದನೆಗಳು.
ReplyDeleteನಿಮ್ಮ ಲೇಖನಶೈಲಿ ತುಂಬ ಚೆನ್ನಾಗಿದೆ. ಒಂದು ಕ್ಷಣ ಕೂಡ ಓದನ್ನು ಬಿಟ್ಟು ಮನಸ್ಸು ಅತ್ತಿತ್ತ ಚಲಿಸದು. ಅಭಿನಂದನೆಗಳು ಎಂದಷ್ಟೇ ಹೇಳಬಲ್ಲೆ.
sunaatha kaka thank u so much for ur feedback . i am blessed to recive .
ReplyDeleteಈ ಲೇಖನ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ
ReplyDelete