Friday, January 18, 2019

ಅರಬ್ ನಾಡಿನಲ್ಲಿ ಹಾಸ್ಯದ ಕಚಗುಳಿ

                                     
ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಹೊಂದಿದ ಹೈ ಟೆಕ್ ನಗರ , ಚಿನ್ನದ ನಾಡು ದುಬೈಗೆ  ನಾವು ಕಾರ್ಯ ನಿಮಿತ್ತ ವಲಸಿಗರಾಗಿ ಬಂದ ಶುರುವಿನಲ್ಲಿ ಆ ನಗರ ಸೌಂದರ್ಯಕ್ಕೆ ಮಾರು ಹೋಗಿ ಮರುಭೂಮಿಯನ್ನೂ  ಇಂಥ ಮಾಯಾ   ನಗರಿಯನ್ನಾಗಿಸಿದ  ದುಬೈ ಶೇಖುಗಳ  ದೂರ ದೃಷ್ಟಿ ,ಇಚ್ಚಾಶಕ್ತಿಗೆ ಬೆರಗಾಗುತ್ತಿದ್ದೆವು . 

 ಝಗಮಗಿಸುವ ಮಾಲುಗಳಲ್ಲಿ ಸುತ್ತಾಡುವಾಗ ಪ್ರಪಂಚದ  ನಾನಾ  ಭಾಗಗಳಿಂದ ಬಂದು  ಇಲ್ಲಿ ನೆಲಸಿರುವ ಹಲವಾರು ದೇಶೀಯರ ನಡುವೆ ಅರಬ್ ಜನರ  ಹಾವ ಭಾವ , ಭಾಷೆ,  ಪೋಷಾಕುಗಳನ್ನು ಬಹಳ  ಆಸಕ್ತಿಯಿಂದ ಗಮನಿಸುತಿದ್ದೆ . ಇಲ್ಲಿನ ಸ್ಥಳೀಯ ಅರಬ್  ಮಹಿಳೆಯರು ಧರಿಸುವ ಕಪ್ಪು ಬುರ್ಖಾವೇನೋ ಸರಿ ಆದರೆ ಡಿಟರ್ಜೆಂಟ್ ಜಾಹಿರಾತುಗಳಲ್ಲಿ ತೋರಿಸುವಂತೆ ಬೆಳ್ಳನೆಯ ಶುಭ್ರ ನಿಲುವಂಗಿ ಧರಿಸಿ ಅಡಿಯಿಂದ ಮುಡಿಯವರೆಗೂ ಶ್ವೇತ ವಸ್ತ್ರಧಾರಿಗಳಾಗಿ  ಕಂಗೊಳಿಸುತ್ತಿದ್ದ   ಅರಬ್ ಪುರುಷರ ಧಿರಸನ್ನು ಕಂಡಾಗ , ಇದು ಬಿಳಿ ಬುರ್ಖಾ ಇದ್ದೀತ್ತೇನೋ ಎಂಬ ಮುಗ್ಧ ಅನುಮಾನವೊಂದು ಕಾಡಿ ನಗೆಯರಳಿಸಿತ್ತು !

ಸಪ್ಟೆಂಬರ್ ತಿಂಗಳಿನಲ್ಲಿ ನಾವು ಇಲ್ಲಿ ಬಂದಾಗ ೪೫ ಡಿಗ್ರಿ ರಣ ರಣ ಬಿಸಿಲಿಗೆ ಹೌಹಾರಿ ಹೋಗಿದ್ದೆವು , ಹಾಗಾಗಿ ಮನೆಯಿರಲಿ , ಶಾಲೆ , ಸಣ್ಣ ಸುಪರ್ ಮಾರ್ಕೆಟ್ , ಬಸ್ಸ್ಟಾಂಡ್ , ಎಲ್ಲೆಂದರಲ್ಲಿ ಏಸಿಯ ತಂಪುಗಾಳಿಯ ರಕ್ಷಣೆ ಸದಾ ಕಾಲ ಇರಲೇಬೇಕು .ಆಗೆಲ್ಲ ಬೇಸಿಗೆಯ ಧಗೆ ಕೊಂಚ  ಹೆಚ್ಚಾದರೂ ಮಳೆರಾಯ ಅಡ್ಡಗಾಲು ಹಾಕಿ ಭೂಮಿಯನ್ನು  ತಂಪಾಗಿಸುತ್ತಿದ್ದ ನಮ್ಮ ಬೆಂಗಳೂರಿನ ಮಳೆಯನ್ನು  ನೆನೆಸಿಕೊಂಡು ಮನಸ್ಸು ಒದ್ದೆಯಾಗುತಿತ್ತು .ಹಾಗಾಗಿ  ಮುಂದೆ   ಡಿಸೆಂಬರಿನಲ್ಲಿ  ರಸ್ತೆ ಒದ್ದೆ ಮಾಡುವಷ್ಟು  ಐದು ನಿಮಿಷಗಳ ಕಾಲ ಸುರಿದ ಮಳೆಗೇ ನಾವುಗಳು ಸಂಭ್ರಮಿಸಿ  ಈ ಅಪರೂಪದ ವರ್ಷ ಧಾರೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತ  ಹರ್ಷೋದ್ಘಾರದ  ಕೇಕೆ ಹಾಕಿದ್ದೆವು  .ಆದರೆ ಈಗೀಗ  ವರ್ಷಕ್ಕೆ ಒಂದೆರಡು ಬಾರಿಯಾದರೂ  ಕೊಡೆ ಹಿಡಿದು ನಡೆದಾಡುವಂತ ಮಳೆರಾಯನ ಕೃಪೆ ಆಗುತ್ತಿರುವುದು ಒಂದು ಕಡೆ ವಿಶೇಷ ಅನಿಸಿದರೆ, ದುಬೈನಲ್ಲಿ ಮಳೆ ಯಾದಾಗ  ಅದು  ಸೃಷ್ಟಿಸುವ ಅವಾಂತರಗಳ ಬಗ್ಗೆ ಒಂದು  (ಹಾಸ್ಯ )  ಲೇಖನವನ್ನೆ ಬರೆದುಬಿಡಬಹುದು ಅನ್ನಿ !

ಈ ಊರಿಗೆ ಬಂದು ಒಂದು ವಾರಕ್ಕೇ ಗಡಿಬಿಡಿ ಧಾವಂತದಲ್ಲಿ ಹಿರಿ  ಮಗನನ್ನು ಶಾಲೆಗೆ ಸೇರಿಸಿ ಉಸ್ಸಪ್ಪ ಎಂದು ನಿಟ್ಟಿಸುರು ಬಿಡುವಾಗಲೇ  , ಅಲ್ಲಿನ  ಹೊಸ ವಾತಾವರಣಕ್ಕೆ   ಹೊಂದಿಕೊಳ್ಳುತ್ತಿದ್ದ  ಅವನಿಗೆ  ದುಬೈನ ಅಧಿಕೃತ  ಭಾಷೆಯಾದ ಅರಾಬಿಕ್ ಭಾಷೆಯನ್ನೂ ಸಹ   ಕಡ್ಡಾಯವಾಗಿ ಕಲಿಯಲೇಬೇಕೆಂದು ಅರಿತಾಗ ಹೌಹಾರಿ ಕುಳಿತಿದ್ದ .!  
ಹಾಗಾಗಿ  ಎಜಮಾನರ ಕಚೇರಿಯಲ್ಲಿ ಸೂಪೆರ್ವೈಸರ್ ಆಗಿ ಕೆಲಸ ಮಾಡುತಿದ್ದ  ಈಜಿಪ್ಟ್ ದೇಶದವನಾದ  
 “ಅಬ್ದುಲ್ ಬಾಸಿತ್ “ ನನ್ನ ಮಗನಿಗೆ ಅರಾಬಿಕ್  ಕಲಿಸುವ  ಮೇಷ್ಟ್ರಾದ ! 
ಅವನ ಅರಾಬಿಕ್  ಮನೆ ಪಾಠ ಶುರು ಮಾಡಿದಾಗ ಆಗಾಗ ಅಲ್ಲಿ  ನನ್ನ ಠಿಕಾಣಿಯೂ  ಇರುತಿತ್ತು . 
 ಪುಸ್ತಕದ ಕೊನೆಯ ಪುಟದಿಂದ ಬರೆಯಲು ಶುರು ಮಾಡಿ ತಾರೀಕನ್ನು ಕೂಡ ಬಲದಿಂದ   ಎಡಕ್ಕೆ  ಆರಂಭಿಸಿದ  ಮಗನನ್ನು ಕಂಡು ನನಗೋ ಅಪಾರವಾದ ಅಚ್ಚರಿ ! .ಇದು ಸಾಲದು ಎಂಬಂತೆ ಮಾಸ್ತರು ಅವನು ಬರೆದ ಟಿಪ್ಪಣಿಗಳನ್ನು ಪರೀಕ್ಷಿಸುತ್ತಾ ಸರಿ (right symbol)  ಚಿನ್ಹೆಗಳನ್ನು  ಹಾಗು ಕೆಲವು ಕಡೆ ಪ್ರಶ್ನಾರ್ಥಕ (question mark ) ಚಿನ್ಹೆಗಳನ್ನು ಕೂಡಾ  ಉಲ್ಟಾ ಹಾಕಿದ್ದು ಕಂಡಾಗ ನಗು ತಡೆಯಲಾಗಲಿಲ್ಲ . 
 ..”ಇದೇನು ಮೇಷ್ಟ್ರೇ ನಿಮ್ಮ ಅರಾಬಿಕ್ ಭಾಷೆಯಲ್ಲಿ   ಚಿನ್ಹೆಗಳನ್ನೂ  ಕೂಡ ಉಲ್ಟಾ  ಬರೀತೀರಲ್ಲ ನನ್ನ ಮಗನನ್ನು ಕೂಡಾ ಉಲ್ಟಾ ಕೂಡಿಸಿ ಬರಿಸಲ್ಲ  ಸದ್ಯ    ಎಂದು  ಶೀರ್ಷಾಸನದಲ್ಲಿ  ಉಲ್ಟಾ ಗೀಚುತ್ತಿರುವ ಮಗನನ್ನು ಕಲ್ಪಿಸಿಕೊಂಡು ಮೇಷ್ಟ್ರನ್ನು ಕಿಚಾಯಿಸಿದಾಗ  ಅವ   ತಮ್ಮ ಪದ್ದತಿಯೆ  ಶ್ರೇಷ್ಟವೆಂದು  ಸಮರ್ಥಿಸಿಕೊಳ್ಳುತ್ತಾ .. 
ಮೇದಾಂ ! ನಮ್ಮದು ಅತಿ ಪ್ರಾಚೀನ ಭಾಷೆ ,ನಾವು ಬರೆಯುವ ಪದ್ದತಿಯೆ ಸರಿಯಿದೆ   ,ಹಾಗೆ ನೋಡಿದರೆ ನಿಮ್ಮ ಬರೆಯುವ ವಿಧಾನವೇ ಉಲ್ಟಾ ! ಎಂದು ಕೊರೆಯಲು ಶುರು ಮಾಡಿದ್ದ . 

ಜಾಗತಿಕವಾಗಿ ಬರೆಯುವ ಪದ್ದತಿಯನ್ನು ಪರಿಗಣಿಸಿದರೆ  (ಉರ್ದು , ಅರಬಿಕ್ ,ಹೀಬ್ರು ಹೀಗೆ ಕೆಲವು ಭಾಷೆಗಳನ್ನು  ಬಿಟ್ಟು ಇತರ ಭಾಷೆಗಳಲ್ಲಿ  ಎಡದಿಂದಲೆ  ಬರವಣಿಗೆಯನ್ನು ಶುರು ಮಾಡುವ ರೂಢಿಯಿದೆ  ,  ವಿಷಯದಲ್ಲಿ ನಾವು  ಬಹುಸಂಖ್ಯಾತರು  ಎಂದೆಲ್ಲ  ನಾನು ಅವನಿಗೆ  ನಗುತ್ತಲೆ  ತಿರುಗು ಬಾಣ  ಬಿಟ್ಟಿದ್ದು ಆಯಿತು  ! ಅಂತೂ ಮಗನ ಜೊತೆ ನಾನು ಸಹ  (ಹಣ ಕೊಡದೆ )  ಅಕ್ಷರಗಳನ್ನು ತಿದ್ದುವ ಮಟ್ಟಕಷ್ಟೇ  ಕೊಂಚ  ಅರಾಬಿಕ್  ಕಲಿತುಕೊಂಡೆ !  

ನಾನು  ಕ್ರಮೇಣ ದುಬೈ ವಾತಾವರಣಕ್ಕೆ ಅಡ್ಜಸ್ಟ್ ಆಗಿ  ಅಲ್ಲಿ ಉದ್ಯೋಗಕ್ಕೆ ಸೇರಿದೆ .ನನ್ನ ಕಚೇರಿಯಲ್ಲಿ ಅರಬ್ ದೇಶದ  ಸ್ಥಳೀಯರೆ  ಹೆಚ್ಚಿನ ಸಂಖ್ಯೆಯಲ್ಲಿದ್ದರು .  ಭಾರತೀಯ ಹೆಸರುಗಳನ್ನು ಅವರು  ಉಚ್ಛರಿಸುವುದನ್ನು ಕಂಡಾಗಲ್ಲೆಲ್ಲಾ ನಗೆ ಉಕ್ಕಿ ಬರುತ್ತಿತ್ತು ! ನನ್ನನ್ನು ಸಂಬೋಧಿಸುವಾಗ ಆರಾ .....ತಿ ಎಂದು ರಾ ಅಕ್ಷರವನ್ನು ರಬ್ಬರ್ ಬ್ಯಾಂಡಿನಂತೆ ಎಳೆದು ಹೇಳುವಾಗ ಅವರ ಬಾಯಿಗೆ ಒಂದು ಲಾಡು ಹಾಕಬಹುದಿತ್ತೇನೋ ಅನಿಸುತಿತ್ತು .ಇನ್ನು ಚಿಕ್ಕದಾದ ಅರಬ್  
ಸಹದ್ಯೋಗಿಗಳ  ಹೆಸರನ್ನು ನಾನು ಸಲೀಸಾಗಿ  ಹೇಳಿ ಅವರನ್ನು ಬೆರಗು ಗೊಳಿಸಿದರೂ ,ನಮ್ಮ ಲೆಬಿನಾನ್ ದೇಶದ ಮ್ಯಾನೇಜರ್” ಸಾಮೆರ್ ಅಚಾಕರ್  “ ನನ್ನ ಬಾಯಲ್ಲಿ ಒಮ್ಮೆ  ಸಮೀರ್ ಆಚಾರ್ ಆದಾಗ  ನನ್ನ ಸಹದ್ಯೋಗಿಗಳು ನನ್ನನ್ನು  ಕಿಚಾಯಿಸಿ ಮೂರ್ನಾಲ್ಕು ಕಷ್ಟಕರ  ಅರಬ್ ಹೆಸರುಗಳನ್ನು ನನ್ನಿಂದ ಹೇಳಿಸಿ ಮಜಾ ತೆಗೆದಕೊಂಡಿದ್ದು ಇನ್ನು ನೆನಪಿದೆ   ! 
ಇನ್ನು  ಉದ್ದನೆಯ  ರೈಲ್ವೆ ಬೋಗಿಯಂತಿದ್ದ ನಮ್ಮ ಅರಬ್ ಬಾಸಿನ  ಹೆಸರಂತೂ   ಒಂದಿಷ್ಟೂ   ನೆನಪಲ್ಲಿ ಉಳಿಯದೆ ಕೊನೆ ಬೋಗಿ ಅರ್ಥಾತ್ ಅವರ ಕೊನೆ ಹೆಸರನಷ್ಟೇ ನೆನಪಿಟ್ಟುಕೊಂಡಿದ್ದೆ . 

ಅರಾಬಿಕ್ ವರ್ಣಮಾಲೆಯಲ್ಲಿ ,  , ಟ ವ ಹೀಗೆ ಕೆಲ ಅಕ್ಷರಗಳು ಇಲ್ಲವಾದ್ದರಿಂದ  ಅವುಗಳ ಬದಲಿಗೆ  ಬೇರೆ ಸೂಕ್ತ ವ್ಯಂಜನಗಳನ್ನು ಬಳಸಿದಾಗ ಅರಬ್ಬರ ಬಾಯಲ್ಲಿ ಕೆಲವು ಹೆಸರುಗಳು ಸ್ಪ್ರಿಂಗಿನಂತೆ ತಿರುಚಿಕೊಂಡು ಮರು ಹುಟ್ಟು ಪಡೆಯುತ್ತಾ ಹಾಸ್ಯ ಉಕ್ಕಿಸುತ್ತಿದ್ದವು  . 
ಸಾಮಾನ್ಯವಾಗಿ ” ಪ” ಅಕ್ಷರದ ಬದಲು “ಬ “ ,”  ಬದಲಿಗೆ “ ”ಅಕ್ಷರ  ಬಳಸುವ ರೂಢಿ ಇದೆ.... 

ನನ್ನ ಪತಿ ರವಿಯವರ ಹೆಸರನ್ನು ಸಹ  “ ಮೊಹಂದಿಸ್  ರಾ ...ಬಿ  ಎಂದು ಅಲ್ಲೂ ರಾ ಅಕ್ಷರವನ್ನು ಆಳವಾದ ಭಾವಿಗೆ ಹಗ್ಗ ಹಾಕಿ ಎಳೆದಂತೆ ಕರೆಯುತ್ತಿದ್ದರು .( ಅರಾಬಿಕ್ ಭಾಷೆಯಲ್ಲಿ ಇಂಜಿನಿಯರ್ ಗೆ ಮೊಹಂದಿಸ್ ಎನ್ನುತ್ತಾರೆ ). 
ಒಮ್ಮೆ ಒಂದು ಕಾಮಗಾರಿ ಕಂಪನಿಗೆ ಒಬ್ಬ ಅರಬ್ಬ್  ಕರೆ ಮಾಡಿ ಮೊಹಂದಿಸ್ ಬೇಕಿತ್ತು ಎಂದಾಗ ಅಲ್ಲಿದ್ದ ಆಫೀಸ್ ಬಾಯ್ ನಾನೇ ಮೋಹನ್ ದಾಸ್ ಎಂದ್ದಿದ್ದನಂತೆ !   

.ಇನ್ನು ಶಾಲೆಯಲ್ಲೂ ಕೂಡ ಕೆಲವು ಭಾರತೀಯ ಹೆಸರುಗಳು ಇವರ ಬಾಯಿಗೆ ಸಿಕ್ಕು ಚಿಂದಿ  ಚಿತ್ರಾನ್ನ ವಾಗುತಿತ್ತು !  
ನನ್ನ ಮಗ ತೇಜಸ್  ಅವನ  ಅರಾಬಿಕ್ ಶಿಕ್ಷಕರ  ಬಾಯಲ್ಲಿ  ತೀಜಾಸ್ ಆದರೆ ಅವನ ಗೆಳೆಯ ಪ್ರತೀಕ್ ಕುಟ್ಟಿ, “ಬರ್ತಿಗ್ ಕೂತಿಯಾಗಿ ಕೊನೆಗೆ ಉಚ್ಛರಿಸುವಾಗ  ಕೋತಿಯೇ ಆಗಿಹೋಗಿದ್ದ  !ಮಗನ ಜೊತೆಯಲ್ಲೆ ಕೂಡುತಿದ್ದ
ಸಬಾಸ್ಟೀನ್ ಎನ್ನುವ ಹುಡುಗ ಸಬಾ ಸತ್ತೀನಿ ಆಗಿ ಹೊಸ ನಾಮಧ್ಯೇಯಗಳು  ಪಡೆದರೆ ಮತ್ತೊಬ್ಬ ವಿದ್ಯಾರ್ಥಿನಿ ಕೃಪಾಳ ಹೆಸರು ಕುರುಬ ಎಂದು ವಿಚಿತ್ರವಾಗಿ ನಾಮಕರಣ ಗೊಂಡಿತ್ತು ! ಒಟ್ಟಿನಲ್ಲಿ ಅರಾಬಿಕ್ ಕ್ಲಾಸ್ ಎಂದರೆ  ಸಾಕು  ಕೆಲವು ಹೆಸರುಗಳು   ಕಚಗುಳಿ ಕೊಟ್ಟು ಕಿಲಕಿಲ ಎಂದು ನಗೆ ಉಕ್ಕಿಸುವ  ಹೊಸ ಅವತಾರ ತಾಳುತ್ತಿದ್ದವು . 
ನನ್ನ ಹಿರಿ ಮಗನ ಅರಬ್ ಸಹಪಾಟಿಗಳು  ಬೆಬ್ಸಿ  , ಬೇಬರ್ ಎಂದೋ ಇಲ್ಲ ತರಗತಿಯಲ್ಲಿ ಬಾಂಡಾ ಬೇರ್ (ಪೆಪ್ಸಿ , ಪೇಪರ್ , ಪಾಂಡಾ ಬೇರ್ ) ಎಂದೆಲ್ಲಾ  ಹೇಳುವಾಗ ಇವನು ಕೂಡ  ಮುಸಿ ಮುಸಿ ನಕ್ಕಿದ್ದು ಉಂಟು !.ಆದರೆ ಅವರ ವ್ಯಾಕರಣದ  ಇತಿಮಿತಿಯ ಬಗ್ಗೆ ತಿಳಿದಾಗ ಅವನಿಗೆ ಈ ರೀತಿಯ ಉಚ್ಛಾರಣೆಗಳ ಹಿಂದಿನ  ಕಾರಣ ಅರ್ಥವಾಗಿತ್ತು . 

ನಾವು ಸಾಮಾನ್ಯವಾಗಿ ಬಿಳಿ ಸುಣ್ಣ ಕೇಳಿರುತ್ತೇವೆ ಆದರೆ ಕರಿ ಸುಣ್ಣ ಎಂದಾಗ ಕೊಂಚ ಅಚ್ಚರಿಯಾಗುತ್ತದೆ ಅಲ್ಲವೇ ! ಈ ಕರಿ ಸುಣ್ಣ ಅಲ್ಲಲ್ಲ ಕರಿಶುಣ ಬೈಲೇ  ಮತ್ತಾರು ಅಲ್ಲ , ನಮ್ಮ ಎಜಮಾನರ  ಕಚೇರಿಯಲ್ಲಿ ಕೃಷ್ಣ ಪಿಳ್ಳೈ ಎಂಬುವವರು . 
ಆ ಕಚೇರಿಗೆ ಸೇರಿದ ಹೊಸತರಲ್ಲಿ   ರೆಕಾರ್ಡಿನಲ್ಲಿದ್ದ ಅವರ ಹೆಸರನ್ನು ಓದಿಕೊಂಡ  ಅರಬ್ ಸಹದ್ಯೋಗಿಗಳು ಅವರನ್ನು ಹಾಗೆ ಸಂಬೋದಿಸುತ್ತಿದ್ದರಂತೆ  !. ಭಾರತೀಯ ಮೂಲದವರನ್ನು ಇಲ್ಲಿಯ ಜನ ಅಲ್ ಹಿಂದ್ ಎನ್ನುತ್ತಾರೆ . ಶುರುವಿನಲ್ಲಿ   ಅದನ್ನು ನಾನು ಕನ್ನಡೀಕರಿಸಿ ನಾನು ಕೊಂಚ ಗಲಿಬಿಲಿ ಗೊಂಡಿದ್ದೆ.
ಇನ್ನು ನಮ್ಮ ಸುತ್ತ ಮುತ್ತೆಲ್ಲ  ಅರಾಬಿಕ್ ಭಾಷೆ ಕಿವಿ ಮೇಲೆ  ಸಾಮನ್ಯವಾಗಿ ಬೀಳುತ್ತಲೇ ಇರುತ್ತದೆ . ಕಿವಿಗಿಂಪಾಗಿಯೂ  ಕೇಳಿಸುತ್ತದೆ ..ಆದರೆ ಅವರ ಸಂವಹನೆಯಲ್ಲಿ ಖಾ ಅಕ್ಷರ ಮಾತ್ರ ಕಫಾ ಕಟ್ಟಿದ  ಗಂಟಲಿನಿಂದ ಪ್ರವಾಹದಂತೆ ನುಗ್ಗಿ ಬಂದಂತೆ ಜೋರಾಗಿ ಕೇಳಿಸಿ ನನಗೂ ಒಮ್ಮೊಮ್ಮೆ ಗಂಟಲು ಕೆರೆತ ಶುರುವಾಗಿಬಿಡ್ತ್ತದೆ ಎಂದು ಇವರ ಮುಂದೊಮ್ಮೆ  ತಮಾಷೆ ಮಾಡಿದ್ದೆ..  

ಸ್ನೇಹಿತರೊಂದಿಗೆ ಹರಟುವಾಗ ಒಮ್ಮೊಮ್ಮೆ ಇಂತ ಹಾಸ್ಯ ಪ್ರಸಂಗಗಳು ವಿನಿಮಯವಾಗುತ್ತಿತ್ತು .ಕೆಲವನ್ನು ನಿಮ್ಮ ಮುಂದೆ ಹಂಚಿಕೊಳ್ಳಲೇಬೇಕು .   ಇದು ಕೆಲವು ದಶಕಗಳ  ಹಿಂದಿನ ಮಾತು . ನಮ್ಮ ಸ್ನೇಹಿತರ ದೂರದ ಸಂಬಂಧಿಯೊಬ್ಬರು ಕೆಲಸಕ್ಕಾಗಿ ಕರ್ನಾಟಕದ ಸಣ್ಣ ಊರಿನಿಂದ ಮೊದಲ ಬಾರಿ  ದೂರದ  ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದು ,ವೀಸಾ ಸ್ಟ್ಯಾಂಪ್ ಗಾಗಿ   ಇಮ್ಮಿಗ್ರೇಶನ್ ಸರದಿ ಸಾಲಿನಲ್ಲಿ ನಿಂತಾಗ ಅಲ್ಲಿನ  ಅರಬ್  ಪಾಸ್ಪೋರ್ಟ್ ಅಧಿಕಾರಿಯೊಬ್ಬರು ಇವರ ವೀಸಾ ಕಾಗದಗಳನ್ನು ಪರಿಶೀಲಿಸುತ್ತ   “ ವಿಸ್ಕಿ ಪೀತಾ “?  ಎಂದು ಅವರನ್ನು ಗಂಬೀರವಾಗಿ ಪ್ರಶ್ನಿಸಿದಾಗ ಇವರಿಗೆ ಗಾಬರಿ ಗಲಿಬಿಲಿ ಭಯ ಎಲ್ಲವೋ ಒಮ್ಮಿಲೆ ಮುತ್ತಿಗೆ ಹಾಕಿ  “ ಮೈ ನಹಿ ಪೀತಾ “ ಎಂದು ಮುಂದೇನು ಗತಿಯೋ ಎಂಬಂತೆ ಎಂದು ತಡವರಿಸುತ್ತಾ ಉತ್ತರಿಸಿದರು   .  ಆಗ ಆ ಅರಬಿಯವ   ಜೋರಾಗಿ ನಕ್ಕು ಇವರನ್ನು ಮುಂದೆ ಕಳಸಿದ ನಂತರ  ತಿಳಿದಿದ್ದು 
  “ ವಿಶ್ವಪತಿ ಮೊಳೆಯಾರ್   ಎಂಬ ತಮ್ಮ ಚೆಂದದ (ಮೊದಲ) ಹೆಸರು "ವಿಶ್ವಪತಿ "   ಆ  ಅರಬ್ ಅಧಿಕಾರಿಯ ಬಾಯಲ್ಲಿ ವಿಸ್ಕಿ ಪೀತಾ ಆಗಿ ತಮಾಷೆಯಾಗಿತ್ತು  .. ಆದರೆ ವಿಶ್ವಪತಿಯವರಿಗೆ ತಮ್ಮ ಹೆಸರು  ಈ ರೇಂಜಿಗೆ barಬಾದ್ ಆಗಿದ್ದು ನಿಜಕ್ಕೂ ಶಾಕ್ ಕೊಟ್ಟಿತ್ತು  ಬಿಡಿ ! 

ಮತ್ತೊಮ್ಮೆ ಫೇಸ್ಬುಕ್ಕಿನಲ್ಲಿ  ನನ್ನ ಸ್ನೇಹಿತರಾದ ಸಧ್ಯಕ್ಕೆ ಕುವೈತ್ನಲ್ಲಿ ನೆಲಿಸಿರುವ ಆಜಾದ್  ಅವರು  ಅರಬ್ಬರು  ಭಾರತೀಯ ಹೆಸರುಗಳ  ಉಚ್ಚರಿಸುವಾಗ  ಆದ ಅವಾಂತರದ ಪ್ರಸಂಗ ಬಿಚ್ಚಿಟ್ಟಾಗ ಸಿಕ್ಕಾಪಟ್ಟೆ ನಗು ತರಿಸಿತ್ತು !.  
ಒಮ್ಮೆ ಆಸ್ಪತ್ರೆಯಲ್ಲಿ ತಮ್ಮ ಮಡದಿಯ ಹೆರಿಗೆ ಸಮಾಚಾರಕ್ಕಾಗಿ ಕಾತುರರಾಗಿ ಕಾಯುತ್ತಾ ಕುಳಿತ ಅಜಾದ್ ಅವರ ಗೆಳೆಯರಿಗೆ  ಅಲ್ಲಿಯ ಅರಬ್  ನರ್ಸು ಹೊರಬಂದು “ಮಾಂಗೋ ಬಾಲ್“. ಗೆ ಗಂಡು ಮಗುವಾಯಿತು  ಎಂದು ಅನ್ನೌನ್ಸಿದಳಂತೆ ! ಆ ಪತಿರಾಯನಿಗಂತೂ  ಅರೆಕ್ಷಣ  ಗಾಬರಿಯಿಂದ ಸ್ವತಃ ತಾವೇ   “ಮಂಗ ಆಗುವ ಪರಿಸ್ಥಿತಿ  ! ನಂತರ ತಿಳಿಯಿತು   “ ಮಂಜು ಪಾಲ್ “ ಎಂದಿದ್ದ ಅವರ  ಪತ್ನಿಯ ಹೆಸರು  ಅರಬ್ ನರ್ಸ್ ಬಾಯಲ್ಲಿ   ಪರಿಯಾಗಿ  ಗೋಲ್ಮಾಲ್ ಆಗಿ ಆ ನರಸಮ್ಮ ಸರಿಯಾದ  ನಗೆ ಗುಳಿಗೆಗಳನ್ನು ತಿನ್ನಿಸಿದ್ದಳು  . 

ಮತ್ತೊಂದು ಸಂದರ್ಭದಲ್ಲಿ ,ಊರಿಗೆ ಹೊರಡಬೇಕಿದ್ದ ಅವರ  ಗೆಳಯರೊಬ್ಬರು ವಿಮಾನ ಹೊರಡುವ ಸಮಯವಾದರೂ ಇನ್ನು ಗೇಟ್ ಬಳಿ ಹಾಜರಾಗದ್ದಿದ್ದ  ಕಾರಣ ಅಲ್ಲಿನ ಏರ್ಪೋರ್ಟ್ ಸಿಬ್ಬಂಧಿಗಳಿಂದ
ಅನದರ್ ಮ್ಯಾನ್ ಸೂಬರ್ ಮ್ಯಾನ್ ಅವರು  ೨೪ನೆ ಗೇಟಿನ ಬಳಿ  ಶೀಘ್ರದಲ್ಲಿ ಹಾಜರಾಗಲು ವಿನಂತಿ  “  ಎಂಬ ಘೋಷಣೆ  ಸ್ಪೀಕರಿನಲ್ಲಿ ಕೇಳಿ ಬಂದಿತು . ತಡವಾಯಿತೆಂದು  ಲಗುಬಗನೆ ಹೆಜ್ಜೆ ಹಾಕುತ್ತಿದ್ದ “ ಅನಂತರಾಮನ್ ಸುಬ್ಬರಾಮನ್ “ ಅವರಿಗೆ  ಈ ಸಂದೇಶ ತಮಗೇ  ಎಂದು ತಿಳಿದಾಗ ,ಕಾಮನ್ ಮ್ಯಾನ್ ಆದ ತಮ್ಮ ಹೆಸರಿನ ಹೊಸ ಅವತಾರ ಕಂಡು ನಗು ಉಕ್ಕಿ ಬಂದರೂ .ತಡಮಾಡದೆ   ಸೂಪರ್ ಮ್ಯಾನ್ನಂತೆ ಸೂಪರ್ ಸ್ಪೀಡಿನಲ್ಲಿ  ತಾವು ಹೊರಡಬೇಕಿದ್ದ ವಿಮಾನದ ಗೇಟನ್ನು ತಲುಪಿ ನಿಟ್ಟುಸಿರು  ಬಿಟ್ಟಿದ್ದರಂತೆ !. 

ಹೀಗೆ ಅರಾಬಿಕ್ ಭಾಷೆಯ  ವ್ಯಾಕರಣಗಳ ಇತಿಮಿತಿಗಳಿಂದ ಒಮ್ಮೊಮ್ಮೆ ಅವರ  ಉಚ್ಚಾರಣೆಗಳು   ಹಾಸ್ಯದ  ಮನರಂಜನೆ ಒದಗಿಸಿದರೆ ಮರು ಭೂಮಿಯನ್ನುಇಂತಹ ಅದ್ಭುತ  ವಿಸ್ಮಯ ನಗರಿಯನ್ನಾಗಿಸಿದ ಅರಬ್ ಜನರ ಶಿಸ್ತು ಅಭಿವೃದ್ದಿಯ ಸಂಕಲ್ಪ ದೂರದ್ರಿಷ್ಟಿ ನಮ್ಮನ್ನು ನಿಬ್ಬೆರಗಾಗಿಸುತ್ತಲೇ ಜಗತ್ತಿನಾದ್ಯಂತ ದುಬೈಯನ್ನು ಕರ್ಮ ಭೂಮಿಯಾಗಿಸಿಕೊಂಡು ನೆಲೆ ನಿಂತ ನಮ್ಮಂತ  ಲಕ್ಷಾಂತರ ವಲಸಿಗರಿಗೆ ಸುಂದರ ನಗರ  ಸದಾ ಸ್ನೇಹಮಯ ವಾತಾವರಣವನ್ನೆ ಕಲ್ಪಿಸಿಕೊಟ್ಟಿದೆ .
ಆರತಿ ಘಟಿಕಾರ್

ದುಬೈ 

No comments :

Post a Comment