Sunday, December 23, 2018

ಕೀಟಗಳ ಕಾಟ




ಎಲ್ಲಾ ಕ್ಷೇತ್ರದಲ್ಲೂ ತಂತ್ರಜ್ಞ್ಯಾನ ಬೆಳೆದಿದೆ .ಮನುಷ್ಯನ ಸಾಧನೆ ದಶ ದಿಕ್ಕುಗಳಲ್ಲೂ ಹರಡಿ  ಕೃತಕ ಮಳೆ ತರಿಸುವುದರಿಂದ ಹಿಡಿದು ಕೃತಕ ಗರ್ಭಧಾರಣೆಯವರೆಗೂ ಅವನ ಅಸೀಮ ಸಾಧನೆಗಳು ಮುಂದುವರೆದಿದೆ .ಇನ್ನು ವಿಪರ್ಯಾಸವೆಂದರೆ   ವನ್ಯ ಮೃಗಗಳನೆ ಹತೋಟಿಯಲ್ಲಿ ಇಟ್ಟುಕೊಂಡು ಮೆರೆಯುವ ಈ ಕಾಲದಲ್ಲಿ  ಯಕಶ್ಚಿತ್  ಜೀವಿಯೊಂದರಿಂದ  ಅವನಿಗೆ ಹಾವಳಿ  ತಪ್ಪುತ್ತಿಲ್ಲ ಎಂದರೆ ನಂಬಲೇಬೇಕು ! .. ಹೌದು ನಾನು ಹೇಳಲು ಹೊರಟಿರುವುದು ಮೂರ್ತಿ  ಚಿಕ್ಕದಾದರೂ (ಅಪ)ಕೀರ್ತಿ ದೊಡ್ಡದು ಎನ್ನುವ ತೆಗಳಿಕೆ  ಹೊತ್ತುಕೊಂಡು ನಮಗೆ ತೊಂದರೆ ಕೊಡುವ ತೃಣ ಗಾತ್ರದ ಖಳನಾಯಕ ನೊಣದ ಕುರಿತು .

ನಮ್ಮ ಹಿಂದೆಯೆ ಹಾರಾಡುತ್ತ , ಮೈಯ್ಯ ಮೇಲೆ ಎಲ್ಲೆಂದರಲ್ಲಿ ಲ್ಯಾಂಡಿಂಗ್  ಮಾಡಿ  , ಗಂಟೆ ಗಟ್ಟಲೆ ನಮ್ಮ ಕಿವಿಯನ್ನೆ ವೇದಿಕೆಯಾಗಿಸಿ ತನ್ನ ಕೆಟ್ಟ ಸಂಗೀತವನ್ನು  ಬಿತ್ತರಿಸುತ್ತ ನಮ್ಮನ್ನು ಕೆರಳಿಸುವಾಗ ಇವುಗಳ ಮೇಲೆ ಸಿಟ್ಟಾಗಿ ಹೊಡೆಯಲು ಯತ್ನಿಸಿದರೆ ಮುಗಿಯಿತು ಕಥೆ ..ನಮಗೆ ನಾವೆ  ಎಲ್ಲೆಂದ್ದರಲ್ಲಿ  ಪೆಟ್ಟು ಕೊಟ್ಟುಕೊಳ್ಳುತ್ತಾ , ಕೊನೆಗೆ ಕಪಾಳ ಮೋಕ್ಷದ ಅನುಭವವನ್ನೂ  ಮಾಡಿಸಿ  ನಮ್ಮ ಪೆದ್ದುತನಕ್ಕೆ  ಕಿವಿಯಲ್ಲಿ ಕಿಲಕಿಲ  ನಗುತ್ತ ತಪ್ಪಿಸಿಕೊಂಡು ಓಡುತ್ತದೆ ಈ ತೀಕ್ಷನಮತಿ ನೊಣ !

ಇನ್ನು ನಮ್ಮೂರಿನಲ್ಲಿ  ಯಾವುದೇ ಭಯವಿಲ್ಲದೆ ರಸ್ತೆಯ ಮೇಲೆ ವಾಹನಗಳ ಜೊತೆಗೇ ಹಾಯಾಗಿ ಅಡ್ಡಾಡುವ  ಹಸು , ನಾಯಿ ಎಮ್ಮೆ ಹಂದಿಗಳನ್ನು ಕಂಡು ರೂಡಿಯಿದ್ದ ನನಗೆ ನಾವು ಈಗಿರುವ  ದುಬೈನ ಬೆಣ್ಣೆಯಂತೆ ನೈಸಾದ , ಸ್ವಚ್ಛ ರಸ್ತೆಗಳ ತುಂಬೆಲ್ಲ ಕಾಣುವುದು ಬರೀ ನಾಲ್ಕು ಗಾಲಿಯ ವಾಹನಗಳೆ ! ..ಅಪರೂಪಕ್ಕಾದರೂ  ನಾಲ್ಕು ಕಾಲಿನ ಸಾಧು ಪ್ರಾಣಿಗಳು  ಗೋಚರಿಸುವ ದೃಶ್ಯವೇ ಇಲ್ಲ ಎನ್ನಬಹುದು ! ನಾವು ಬಂದ ಹೊಸತರಲ್ಲಿ  ನನ್ನ ಪುಟ್ಟ ಮಗನಿಗೆ  ಹಸು , ಕುದುರೆಯೆಂತ  ಸಾಕು ಪ್ರಾಣಿಗಳನ್ನು ಕೂಡಾ ಹವಾನಿಯಂತ್ರಿತ ಪ್ರಾಣಿ ಸಂಗ್ರಹಾಲಯದಲ್ಲೇ  ತೋರಿಸಿಕೊಂಡು ಬಂದ್ದಿದಾಯಿತು .!

ಆದರೆ ನಮ್ಮ ಮನೆಯ  ಬಾಲ್ಕನಿ, ಕಿಟಿಕಿಗಳಲ್ಲಿ ಕಿಚ ಪಿಚ ಸದ್ದು ಮಾಡುವ ಕೂರುವ ಸುಂದರ  ಪಾರಿವಾಳಗಳು, ಪಾರ್ಕಿನಲ್ಲಿ ವಾಕ್ ಮಾಡುವಾಗ  ಇಲಿಗಳ ಸಂತತಿಯನ್ನೇ ಕಾಣದೆ ಉತ್ಸಾಹಿ ಮಾರ್ಜಾಲ  ಪ್ರಿಯರು ಹಾಕುವ ಕ್ಯಾಟ್ ಫುಡ್ ಗಳನು  ತಿಂದು ಮೈ ಬೆಳಿಸಿ ಹಸಿರು ಪೊದೆಗಳ ಮೇಲೆ ಹಾಯಾಗಿ ಓಡಾಡಿಕೊಂಡಿರುವ ಮುದ್ದು  ಬೆಕ್ಕುಗಳನ್ನು ಬಿಟ್ಟರೆ  ನನಗೆ ಇತರ ಸಾದು ಪ್ರಾಣಿಗಳ ದರ್ಶನ ನನ್ನ  ತಾಯಿನಾಡಿಗೆ ಬಂದಾಗ ಮಾತ್ರ !  ಆದರೆ ಇಲ್ಲಿ ನನ್ನ ಪ್ರಾಣಿಪ್ರಿಯ   ಗೆಳತಿಯೊಬ್ಬಳು ತನ್ನ ಐದು ಕೋಣೆಯ  ವಿಲ್ಲಾದಲ್ಲಿ   ಮೊಲ , ನಾಯಿ , ಮೀನು ,ಅಮೆಗಳನ್ನೆಲ್ಲ ಸಾಕಿಕೊಂಡು ತನ್ನ ಒಂದು ಹಳೆ ಸೂಟುಕೇಸಿನಲ್ಲೇ ಆರು ಮರಿ ಹಾಕಿದ ಮುದ್ದು ಬೆಕ್ಕಮ್ಮನ  ಬಾಣಂತನವನ್ನೂ ಕೂಡ ಮಾಡಿ ಮುಗಿಸಿದ್ದಳು .!

ಇನ್ನು ಇಲ್ಲಿನ ಸ್ವಚ್ಚವಾದ  ಪರಿಸರದಲ್ಲೂ  ಕೆಲವೊಮ್ಮೆ ಅಡುಗೆ ಕೋಣೆಗೆ ಚಿಕ್ಕದಾದ  ಜಿರಳೆಗಳು ಎಂಟ್ರಿ ಕೊಟ್ಟಾಗ  ಪ್ರಭಲವಾದ ಕೀಟ ನಾಶಕ ,ಲೇಟೆಸ್ಟ್ ಆಗಿರುವ  ರಾಸಾಯನಿಕ  ಜೆಲ್ ಬಳಿಸಿ   ಅವುಗಳಿಂದ ಮುಕ್ತಿ ಪಡೆಯಬಹುದು . ಆದರೆ ಯಾವ ಕೀಟ ನಾಶಕ , ಸೊಳ್ಳೆ ಬ್ಯಾಟು ಗಳ  ದಾಳಿಗೂ ಹೆದರದೆ ರೌಡಿ ನೊಣಗಳು ಒಮ್ಮೊಮ್ಮೆ  ನಮ್ಮ ಮನೆಯೊಳಗೆ ನುಸುಳಿಬಿಡುತ್ತವೆ !. ಹೇಗೆ ಅಂತೀರಾ ? ಹೇಳ್ತೀನಿ ಕೇಳಿ . ಬಟ್ಟೆ ಒಣ ಹಾಕುವ ಸಲುವಾಗಿ  ನಮ್ಮ ಬೃಹದಾಕಾರದ ಬಾಲ್ಕನಿ ದ್ವಾರಗಳನ್ನು ಜಾಲರಿ ಹಾಕದೆ ತೆರೆದು ಜನ್ಮತಃ ನನ್ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ನನ್ನ ಮರೆಗುಳಿತನ ಪ್ರದರ್ಶಿಸಿದಾಗಲ್ಲೆಲ್ಲ ಹೊರಗೆ ಬಿಸಿಲು ಕಾಯಿಸುತ್ತಾ ಪಂಚಾಯತಿ ಕಟ್ಟೆಗೆ ಕುಳಿತ ನಾಲ್ಕಾರು  ನೊಣಗಳು  ಮನೆಯೊಳಗೆ ನುಗ್ಗೇ ಬಿಡುತ್ತವೆ !..

ಅಡುಗೆ ಕೋಣೆಗೆ ಫುಡ್ ಇನ್ಸ್ಪೆಕ್ಟರ್ ಗಳಂತೆ ರೊಯ್ಯನೆ  ನುಗ್ಗಿ  , ಪಡಸಾಲೆ  ಊಟದ ಮೇಜು ಎಲ್ಲೆಂದರಲ್ಲಿ ಸರ್ವವ್ಯಾಪಿಯಾಗಿ ಹಾರಾಟ ನಡೆಸುತ್ತವೆ.. ನಾನು ಗಡಬಡಿಸಿ  ಆಹಾರ ಪದಾರ್ಥಗಳನ್ನೆಲ್ಲ  ಮುಚ್ಚಿಟ್ಟು ಹೊರ ನಡೆದರೆ ನನ್ನ ಹಿಂದೆಯೆ  ರೋಡ್ ರೋಮಿಯೋಗಳಂತೆ  ಹಾ(ರು)ಡುತ್ತಾ ಹಿಂಬಾಲಿಸುತ್ತವೆ ..ಅಂತೂ ನನಗೂ ಆಗ   ಜೈ ಕಾರ  (ಗುಯ್ ಕಾರ) ಹಾಕುವ ಕೀಟ ರೂಪಿ ಹಿಂಬಾಲಕರು  !  ಅವುಗಳನ್ನು ಓಡಿಸಲೂ ನಾ ತೋರುವ ಆಲಸಿನತನಕ್ಕೆ ಪ್ರತಿಫಲವಾಗಿ ರುಚಿಯಾದ ತಿಂಡಿ ತಿನಸುಗಳ ತುಣುಕಗಳನ್ನು ತಿನ್ನುತ್ತಾ  ಒಮ್ಮೊಮೆಯಂತೂ ವಾರಗಟ್ಟಲೆ ಹೊಸ ತಾಣಕ್ಕೆ ಬಂದ  ಮೋಜಿನ ವಿಹಾರಾರ್ಥಿಗಳಂತೆ  ಬೆಳಗಿನಿಂದ ನಡೆಸಿದ ಧಾಂದಲೆ ಸಾಲದೆಂಬಂತೆ ಗುಯ್ ಎಂದು ಮುಖದ ಸುತ್ತಲೆ  ಹಾರಾಡಿಕೊಂಡು ನನ್ನ ,ಮಧ್ಯಾನದ ನಿದ್ದೆಗೂ ಕತ್ತರಿ ಹಾಕುತ್ತವೆ .

ಆಗಂತೂ ನನ್ನ ತಾಳ್ಮೆಯ ತಂತಿ  ಹರಿದು ಸಿಟ್ಟಿನಿಂದ  “ಅಪರೇಷನ್ ನೊಣ” ಕ್ಕೆ ಸಜ್ಜಾಗುತ್ತೇನೆ  .!  ಭಾರಿ ಗಾತ್ರದ  ಟವಲೊಂದನ್ನು  ಅಸ್ತ್ರವಾಗಿಸಿ  ಸೋಫಾ ,ಟೇಬಲ್ಲು  ಖುರ್ಚಿ ಎಲ್ಲೆಂದರಲ್ಲಿ ಅವು ಕೂತ  ಕಡೆಗೆ ಗುರಿಯಿಟ್ಟು  ಟವಲ್   ಬೀಸಿದಾಗ ಒಮ್ಮೆ ಮೇಜಿನ ಮೇಲಿಟ್ಟ  ದುಬಾರಿ ಹೂದಾನಿಯನ್ನು ಒಡೆದು ಬೀಳಿಸಿದ್ದೆ  .!

ಈ ತಮಾಷೆ ಸೀನಿಗೆ ಒಂದು  ತರಲೆ ನೊಣ ವಂತೂ  ನನ್ನ ಕಿವಿಯ ಬಳಿಯೆ ಕುಳಿತು ಮುಸಿ ಮುಸಿ ನಕ್ಕಿತ್ತು ! ಮತ್ತೊಂದು ನನ್ನ ಕೈ ಭುಜ ಸವರಿಕೊಂಡು ಕೆನ್ನೆಯೇರಿ   “ಅಯ್ಯೋ ಪಾಪ ! ” ಎನ್ನುವಂತೆ ಕಿಚಾಯಿಸಿದಾಗ ಇವುಗಳನ್ನು  ಸಂಹರಿಸಿಯೇ ಮತ್ತೆ ನನ್ನ ಮುಡಿ ಕಟ್ಟುವೆನು ಎಂದು ಕೂದಲಿಗೆ ಸಿಗಿಸಿದ  ಕ್ಲಿಪ್ಪನ್ನು ಕಿತ್ತೆಸೆದು ಸಿಟ್ಟಿನ ಭರದಲ್ಲಿ  “ ಫಟಾರ್ “ ಎಂದು( ನನ್ನ) ಕೆನ್ನೆಯ ಮೇಲೆ ಜೋರಾಗಿ ಬೀಸಿ (ನೋವಿನಿಂದ  )ಕೂಗಿದ  ಸದ್ದಿಗೆ ಪತಿ ರಾಯರು ಘಾಬರಿಯಿಂದ  ಪ್ರತ್ಯಕ್ಷರಾದರು ! ಆದರೆ ನೊಣದ ಜೊತೆಯಲ್ಲಿ ನಾನು  ವೀರಾವೇಶದಿಂದ ಕಾದಾಡಿದ ಕುರುಹುಗಳು ಅವರಿಗೆ ಹೊಸದೇನಲ್ಲ .ಹಾಗಾಗಿ ಅವರು  ಪಕಪಕನೆ ನಕ್ಕಾಗ “ ಯಾಕ್ರೀ ಹೀಗೆ ನಗ್ತಾ ಇದ್ದೀರಾ ? “ ಎಂದು ಕೋಪದಿಂದ ನೋವಾದ ಕೆನ್ನೆ ಸವರಿಕೊಂಡೆ.
“ಅಯ್ಯೋ.!ಆ ನೊಣಕ್ಕೆ ಎಷ್ಟು ಧೈರ್ಯ ನೋಡು ನಿನ್ನ ಕೆನ್ನೆ ಮೇಲೆ ನೀನೆ ಹೊಡ್ಕೋಳೋ ಹಾಗೆ ಮಾಡಿದೆಯೆಲ್ಲ ,ಕಿಲಾಡಿ ನೊಣ  “ ಎಂದು ಇವರು ವಿಕಟಕವಿಯಂತೆ ರೇಗಿಸಿದಾಗ ನಾನು ಕಾಳಿಯಂತೆ ಕೆರಳಿ ಇವನ್ನೆಲ್ಲ  ಹೊಡೆದು ಕೆಳಗುರುಳಿಸುವ  ತನಕ ಅಡುಗೆ ಮುಷ್ಕರವನ್ನು  ಘೋಷಿಸಿ ಬಿಟ್ಟೆ !

ವಿಧಿಯಿಲ್ಲದೆ ಇವರು ಒಳ ನಡೆದು ತಮ್ಮದೊಂದು  ಲುಂಗಿಯೊಂದಿಗೆ(ಬೇಟೆಗಾರನಂತೆ ) ಹಾಜರಾದರು . ಆದರೆ ಬಿಳಿ ಬಣ್ಣದ ಲುಂಗಿಯ ಪ್ರಭಾವಕ್ಕೋ ಏನೋ ಶಾಂತಿ ದೂತರಂತೆ , ಅಹಿಂಸಾವಾದಿಯಾಗಿ , ಕೀಟ ದಯಾ ಸಂಘದವರಂತೆ ಈ ಸೂಕ್ಷ ಜೀವಿಗಳನ್ನು  ಕೊಲ್ಲುವ ಬದಲು ಜೀವಸಹಿತ ಮನೆಯಿಂದ   ಆಚೆ ಓಡಿಸುವ ಕಾರ್ಯಾಚರಣೆಗೆ ಕೈ ಹಾಕಿದರು  . ನಿಧಾನವಾಗಿ ತಮ್ಮ ಲುಂಗಿಯನ್ನು ಬೀಸುತ್ತ ಅವುಗಳನ್ನು ಬಾಲ್ಕನಿಯ ಬಳಿ ಓಡಿಸಿಕೊಂಡು   ಮೆಲ್ಲನೆ ಬಾಲ್ಕನಿಯ ಬಾಗಿಲು ತೆರೆದಾಗ ಒಂದೆರಡು ನೊಣಗಳು ಹೊರ ಹೋದಂತೆ ಅನಿಸಿ ಅವರು ವಿಜಯೋತ್ಸವದ  ನಗೆ ಬೀರುತ್ತಿದ್ದಾಗಲೆ   ಯಾವ ಮಾಯದಲ್ಲೊ ಮತ್ತೊಂದೆರಡು  ರೌಡಿ  ನೊಣಗಳು ಒಳಕ್ಕೆ ನುಗ್ಗೆ ಬಿಟ್ಟವು !.

ನಾವಿಬ್ಬರೂ ಪೆಚ್ಚು ಮೋರೆಯಿಂದ ಅಂತೂ “ ನೊಣ ಕೋ ಪಕಡನಾ ಮುಷ್ಕಿಲಿ ನಹೀ... ನಾ ಮುಮ್ಕಿನ್ ಹೈ “  ಎಂದು ಡಾನ್ ಸಿನಿಮಾದಲ್ಲಿ ಶಾರುಖ್ ಖಾನನ ಡೈಲಾಗನ್ನು  ಹೊಡೆದು  ತಲೆ ಚಚ್ಚಿಕೊಂಡು ನಿಟ್ಟುಸಿರು ಬಿಟ್ಟೆವು  !  .
ನೀವೇನೇ ಅನ್ನಿ ನೊಣಕ್ಕಿಂತಲ್ಲೂ ಮೈ ಕೈಯೆಲ್ಲ ಗಾಯ ಆಗುವಂತೆ ಕಚ್ಚಿ ರಕ್ತ ಹೀರುವ ಸೊಳ್ಳೆಗಳು ಮಾತ್ರ ಬಲು  ಅಪಾಯಕಾರಿ ..ಎನ್ನುವುದು ನನ್ನ ಭಾವನೆ . ಇನ್ನು ವರ್ಷಕೊಮ್ಮೆ ನನ್ನ  ತವರೂರಿಗೆ ಬಂದಾಗ  ಈ  ಸೊಳ್ಳೆಗಳ ಕಾಟ  ತಪ್ಪಿದ್ದಲ್ಲ . ಇವು  ರಕ್ತದ ಬದಲು ನನ್ನ ಕೊಬ್ಬನಾದರೂ ಹೀರಿದರೆ  ನನ್ನ ತೂಕವಾದರೂ ಕಡಿಮೆಯಾಗುತ್ತಿತ್ತು ಎನ್ನುವ ತರಲೆ ಯೋಚನೆಗಳು ಅವು ಕಚ್ಚುವ ಸಮಯಕ್ಕೆ ನನ್ನನ್ನು   ಕೆಣಕಿದಾಗ  ಕೋಳಿ ಫಾರ್ಮ್ಗಳಂತೆ ಆಗ ಗಲ್ಲಿ ಗಲ್ಲಿಗೆ  ಸೊಳ್ಳೆ ಫಾರ್ಮ್ಗಳೂ ಹುಟ್ಟಿ ಕೊಳ್ಳುತ್ತಿದ್ದವೇನೋ  ಅನಿಸಿ ನಗೆ ಉಕ್ಕಿ ಬರುತಿತ್ತು ..

ಇನ್ನು ನಮ್ಮಿಂದ  ಕಡ್ಡಾಯವಾಗಿ ರಕ್ತ ದಾನ ಮಾಡಿಸಿಕೊಳ್ಳುವ ಸೊಳ್ಳೆಗಳಿಗೆ  ವೆನಿಲ್ಲಾ ,ಸ್ಟ್ರಾ ಬೆರಿ  , ಮ್ಯಾಂಗೋ ಎಂದೆಲ್ಲಾ ಐಸ್ಕ್ರೇಮಿನ ನಾನಾ  ಫ್ಲೇವರ್ಗಳಿದ್ದಂತೆ ನಮ್ಮಲ್ಲೂ  ಎ ಪಾಸಿಟೀವ್ , ಬೀ ಪಾಸಿಟೀವ್ ಎನ್ನುವ ಬೇರೆ ಬೇರೆ ರಕ್ತದ ಗುಂಪಿನ ರುಚಿ ಸವಿಯುವ ಭಾಗ್ಯವೆ ಸರಿ ! ಆದರೆ  ಸೊಳ್ಳೆಗಳು ಹೆಚ್ಚಾಗಿ  ಓ ಗುಂಪಿನ ರಕ್ತವನ್ನೆ   ಕುಡಿಯಲು ಮುಂದಾಗುವುದಂತೆ ಎನ್ನುವ ಸ್ವಾರಸ್ಯಕರ ಸುದ್ದಿಯನ್ನು ಎಲ್ಲೋ ಓದಿದಾಗ ಮೊದಲ ಬಾರಿ ನನ್ನ ರಕ್ತದ ಗುಂಪಿನ ಬಗ್ಗೆ ಸಿಟ್ಟು ಬಂದಿತ್ತು ! ಮತ್ತೊಂದು ಬಾರಿ ಕಿಡಿಗೇಡಿ ಸೊಳ್ಳೆಗಳು   ವಿಮಾನದಲ್ಲೂ ಸೇರಿಕೊಂಡು ಯಾತ್ರಿಕರಿಗೆಲ್ಲ  ತೊಂದರೆ ಕೊಟ್ಟ   ಬಗ್ಗೆ ಪತ್ರಿಕಾ ವರದಿಯೊಂದನ್ನು  ಓದಿದಾಗ  ನಿಜಕ್ಕೂ  ಟಿಕೆಟ್ ಇಲ್ಲದೆ ಸುರಕ್ಷಾ ಸಿಬಂಧಿಗಳ ಕಣ್ಣು ತಪ್ಪಿಸಿ ವಿಮಾನ ಯಾನ ನಡೆಸಿದ್ದ  ಆ ಸಾಹಸಿ ಸೊಳ್ಳೆಗಳ  ಬಗ್ಗೆ ಮೆಚ್ಚುಗೆ ಮೂಡಿತ್ತು !

ಇನ್ನು ಮಳೆಗಾಲ ಬಂತೆಂದರೆ ಸಾಕು ಇವುಗಳ ಕಡಿತದಿಂದ ಬಚಾವ್ ಆಗಲು ಸೊಳ್ಳೆ  ಕಾಯಿಲ್ ,ಗುಡ್ ನೈಟ್ , ಆಲ್ ಔಟ್ ಗಳನ್ನು  ಹಚ್ಚಿ ಮಲಗಿದರೂ ಕೆಲವು ಫಾರ್ಮ್ನಲ್ಲಿ ಇರುವ ಸೊಳ್ಳೆಗಳು ರಾತ್ರಿಯಿಡಿ  ಔಟಾಗದೆ ಬ್ಯಾಟ್ಟಿಂಗ್ ನಡೆಸಿದ ಗುರುತುಗಳನ್ನು  ನಮ್ಮ ಕೈ ಕಾಲುಗಳ ಮೇಲೆ ಉಳಿಸೆ ಬಿಡುತ್ತವೆ .. ಆದರೆ ಇದು  ಇಷ್ಟಕ್ಕೆ ನಿಲ್ಲದೆ ಚಿಕೆನ್ ಗುನ್ಯಾ , ಡೆಂಗ್ಯು ಗಳಂತ ಮಾರಣಾಂತಿಕ ಕಾಯಿಲೆಗಳನ್ನೂ  ಹರಡಿ ಭಯೋತ್ಪಾದಕರಂತೆ ಅಮಾಯಕರ ಜೀವ ಬಲಿ ಪಡೆಯುವ  ಸೊಳ್ಳೆಗಳ ಬಗ್ಗೆ ಕೇಳಿದಾಗ  ನಿಜಕ್ಕೂ  ಭಯ ಆವರಿಸುತ್ತದೆ . ಇವುಗಳ ನಿಯಂತ್ರಣಕ್ಕೆ ಯಾವುದೆ  ಹೊಸ ಬಗೆಯ ಸೊಳ್ಳೆ ನಿವಾರಕಗಳನ್ನು ಬಳಸಿದರೂ ಈ ಸ್ಮಾರ್ಟ್ ಸೊಳ್ಳೆಗಳು ನಮಗಿಂತ ಹೆಚ್ಚಿನ ಸಂಶೋಧನೆ ನಡೆಸಿ  ಅದರ ವಿರುದ್ದವೂ   ಲಸಿಕೆ ಹಾಕಿಸಿಕೊಂಡು  ಅಪ್ಡೇಟ್ ಆಗಿಯೆ ನಮ್ಮನ್ನು ಎಟಾಕ್ ಮಾಡಲು ಬರುತ್ತವೇನೋ ಅನಿಸಿಬಿಡುತ್ತದೆ !
  .
ನನ್ನ ಗೆಳತಿಯೊಬ್ಬಳು ಇರುವ ಬಡಾವಣೆಯಲ್ಲಿ ವಿಪರೀತ ಸೊಳ್ಳೆ ಕಾಟವಂತೆ.  ಒಮ್ಮೆ ನನ್ನ ಬಳಿ ಕಾಲೇಜಿನಲ್ಲಿ ಚಾಂಪಿಯನ್ನಾಗಿ  ಎಕ್ಸ್ಪರ್ಟ್ ಬ್ಯಾಟ್ಸ್ಮೆನ್ ಆಗಿದ್ದ ಅವಳ ಪತಿಯ ಬಗ್ಗೆ ಹೇಳುತ್ತಾ , ಈಗವರ  ಕ್ರಿಕೆಟ್ ಎಲ್ಲ  ಮೂಲೆಗುಂಪಾಗಿ ಮನೆಯಲ್ಲಿ ಸೊಳ್ಳೆ ಬ್ಯಾಟ್ ಬೀಸುವುದರಲ್ಲೇ ಎಕ್ಸ್ಪರ್ಟ್ ಆಗಿದ್ದಾರೆ ಎಂದು ನಗೆಯಾಡಿದ್ದಳು .! ನೀವೇನೆ ಅನ್ನಿ  ನಮ್ಮ ಮನೆಗೆ ನುಗ್ಗಿದ ಚಾಣಾಕ್ಷ ನೊಣಗಳು ನನ್ನ ಏಟಿಗೆ ತಪ್ಪಿಸಿಕೊಂಡ ಸಿಟ್ಟನ್ನು ನಾನು ಒಮ್ಮೊಮ್ಮೆ  ನನ್ನ ರಕ್ತ ಹೀರುತ್ತಾ ಮೈ ಮರೆತ ಸೊಳ್ಳೆಯ ಮೇಲೆ  ತೀರಿಸಿಕೊಂಡು   “ ಡೆತ್ ವೈಲ್ ಇನ್ ಡ್ಯುಟಿ   “.ಎಂದು ಅವುಗಳಿಗೆ ಮೋಕ್ಷ ಕರುಣಿಸುವುದುಂಟು . ..ಅಂತೂ ಕೀಟಾಯ ನಮಃ ! ಎಂದು  ದೀರ್ಘ  ದಂಡ ನಮಸ್ಕಾರಗಳೊಂದಿಗೆ ದೇವರನ್ನು ಬೇಡಿಕೊಳ್ಳುತ್ತ  ಕಲಿಯುಗದಲ್ಲಿ ಈ ಕೀಟಗಳ ಕಾಟದಿಂದ ಮುಕ್ತಿ ದೊರೆಯುವುದೆ  ಎಂಬ  ಚಿಂತೆ  ಸದಾ ನನ್ನನು  ಕಾಡುತ್ತದೆ . .
ಆರತಿ ಘಟಿಕಾರ್

ದುಬೈ 

ಹೊಸ ದಿಗಂತ ಪತ್ರಿಕೆ ಯಲ್ಲಿ ಪ್ರಕಟವಾದ ಲಘು ಲೇಖನ 

No comments :

Post a Comment