Thursday, December 13, 2018

ಮನೆ ಬದಲಿಸಿ ನೋಡು


ಅಲ್ಲಿರುವುದು ನಮ್ಮನೆ ಇಲ್ಲಿರುವುದು ಸುಮ್ಮನೆ ಎಂಬ ತಾದಾತ್ಮ್ಯ  ಭಾವ ನಾವು  ಸ್ವಂತ ಮನೆ ಕಟ್ಟಿ ಕೊಳ್ಳುವವರೆಗೊ  ನನ್ನನ್ನು ತಿಗಣೆಯಂತೆ ಕಚ್ಚುತ್ತಲೆ  ಅರ್ಥಾತ್  ಕಾಡುತ್ತಲೇ ಇರುತ್ತದೆ . ಇನ್ನು  ಬದಲಾವಣೆ ಎಂಬುದು ಜಗದ ನಿಯಮ... ಅದು ಹರಿಯುವ ನೀರಿನಂತೆ ಪರಿಸ್ಥಿತಿಗೆ ತಕ್ಕಂತೆ ಹರಿಯುತ್ತಾ ಹೋಗುವಂತಹದು . ಆದರೆ ಈ ಬದಲಾವಣೆ ಎಂಬುದು ಈಗ ಸಧ್ಯಕ್ಕೆ ನಮ್ಮ ಈಗಿರುವ ಬಾಡಿಗೆ ಮನೆಗೆ ತಳಕು ಹಾಕಿಕೊಂಡು   ಹೊಸ ಮನೆ  ಹುಡುಕುವ ಪಾಡು ನಮಗೆ  ಸರಿಯಾಗೇ (ನದಿ ) ನೀರು ಕುಡಿಸಿತ್ತು ಅನ್ನಿ !

ದುಬೈನಿಂದ ಇಪ್ಪತ್ತು  ಕಿಲೋ ಮೀಟರ್ ದೂರದ ಶಾರ್ಜಾದಲ್ಲಿರುವ  ನಮ್ಮ  ವಿಶಾಲವಾದ  ಎರೆಡು  ಬೆಡ್ರೂಮಿನ ಮನೆಯನ್ನು ಬದಲಿಸಿ ನಾವು ದಂಪತಿಗಳು ಒಂದೆ ಕೋಣೆಯ ಮನೆ ಹುಡುಕುವ ಕಟು ನಿರ್ಧಾರ ಕೈಗೊಂಡಿದ್ದು ನಮ್ಮ ಹಿರಿ ಮಗ  ವಿದೇಶಕ್ಕೆ  (ಅಮೇರಿಕಾ)  ಹಾಗು ಎರಡನೆಯವ ಸ್ವದೇಶಕ್ಕೆ ವ್ಯಾಸಂಗಕ್ಕಾಗಿ  ತೆರಳಿದಾಗ .

ನಿತ್ಯವೂ ಮನೆಯಲ್ಲಿ ಬ್ರೆಡ್ ಜಾಮ್ ..ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಎಂದಿವರು ಇಲ್ಲಿನ ಶಾರ್ಜಾ - ದುಬೈ ಟ್ರಾಫಿಕ್ ಸಮಸ್ಯೆಗೆ ಬೇಸತ್ತು ಹಾಡು ಕಟ್ಟಿ (ಕುಟ್ಟಿ ) ಹಾಡುವ   ಹಂತಕ್ಕೆ ಬಂದಿದ್ದರು !  ಹಾಗಾಗಿ ಈ ಸಮಸ್ಯೆಯಿಂದ ಶಾಶ್ವತ ಪರಿಹಾರೋಪಾಯವೂ ಆಯಿತು ಎಂದು ಈಗಿರುವ ಮನೆಯಿಂದ  ೫೦ ಕಿಲೋ ಮೀಟರ್ ದೂರದಲ್ಲಿರುವ ಅವರ ಕಚೇರಿಯಯ ಸಮೀಪವೇ ಹೊಸ ಬಾಡಿಗೆ ಫ್ಲಾಟು ನೋಡುವುದು ಎಂದು  ನಮ್ಮ ಜಂಟಿ ತೀರ್ಮಾನವಾಯಿತು .
.
ಈಗ ಸಧ್ಯಕ್ಕೆ ಇರುವುದು ನಾವಿಬ್ಬರೇ ಆದರೂ ವರ್ಷನಾಗಟ್ಟಲೆಯಿಂದ  ಕೂಡಿಟ್ಟ ನಮ್ಮ ಭಾರಿ ಸಾಮಾನುಗಳು  ಹಿಡಿಸಲು ಸ್ವಲ್ಪ ದೊಡ್ಡದಾದ   ಒಂದು ಬೆಡ್ರೂಮ್ ಮನೆಯಾದರೂ  ಆದೀತು  ಎಂದು ಕೊಂಡೆವು . ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆದಂತೆ ಮನೆ ನೋಡುವ ಮುಂಚೆಯೆ ಪೂರ್ವಭಾವಿ ತಯಾರಿ ಶುರುವಾದವು.  ಇಷ್ಟು ವರ್ಷಗಳಲ್ಲಿ ಎಷ್ಟೇ ಪ್ರಯತ್ನ  ನಡೆಸಿದರೂ ನನ್ನ ಹೊಟ್ಟೆಯನ್ನಂತೂ ಕರಗಿಸಲು ಸಾಧ್ಯವಾಗಲಿಲ್ಲ , ಹಾಗಾಗಿ  ಹೊಟ್ಟೆ ತುಂಬಾ ಸಾಮಾನುಗಳನ್ನು ಹೊತ್ತ ಮಕ್ಕಳ ರೂಮನ್ನಾದರೂ ಕರಗಿಸುವ (ಖಾಲಿ ಮಾಡುವ ) ಸಾಹಸಕ್ಕೆ ಮೊದಲು  ಕೈ ಹಾಕಿದೆ .

ಅನೇಕ ವರ್ಷಗಳಿಂದ ಗುಡ್ಡದಂತೆ ಏರಿದ ವಸ್ತುಗಳೇ ಕೋಣೆಯ ತುಂಬೆಲ್ಲಾ ..ಇಬ್ಬರು  ಗಂಡು ಗಲಿಗಳಿಗೆ ಬೇರೆ ಬೇರೆ ಬಣ್ಣದ ಓದುವ ಟೇಬಲ್ , ಮಂಚ , ಕಪಾಟು , ಅಷ್ಟೇ ಅಲ್ಲದೆ ಒಬ್ಬ ಕ್ರಿಕೆಟ್ ಪ್ರೇಮಿ ಮತ್ತೊಬ್ಬ ಫುಟ್ಬಾಲ್ ಫ್ಯಾನು ಎಂದು ಸಮರ್ಥಿಸುವ ನಾನಾ ನಮೂನಿ ಆಟದ ವಸ್ತುಗಳು ,.ಇನ್ನು  ಅವರವರ ಸಂಗೀತ/ ಆಟದ ಹುಚ್ಚಿಗೆ   ತಕ್ಕಂತೆ ಗೋಡೆ ತುಂಬಾ ಅಂಟಿಸಿದ ಪೋಸ್ಟರ್ಗಳು ವಿಜ್ರುಂಭಿಸಿದರೆ,  ಗೋಡೆಗೇರಿ ಕುಳಿತ ಹಿರಿ ಮಗನ ಗಿಟಾರು ಹಾಗು ಮೂಲೆಯಲ್ಲಿ ಕುಳಿತ ಕಿರಿಯವನ ತಬಲಾ ಜುಗಲ್ ಬಂದಿ ಬಾರಿಸಿದಂತಾಯಿತು ನನಗೆ .

ಒಟ್ಟಿನಲ್ಲಿ ೨೦೦ ಕ್ಕೂ ಹೆಚ್ಚು ಫ್ಲಾಟ್ಗಳಿದ್ದ ನಮ್ಮ ಬೃಹತ್ ಬಹು ಮಹಡಿ ಕಟ್ಟಡದಲ್ಲಿ ಈ ವಸ್ತುಗಳನ್ನು ಹೇಗಾದರೂ ಮಾರಾಟ ಮಾಡುವ ನನ್ನ ತಲೆ ನೋವನ್ನು ನಮ್ಮ ಅಕ್ಕ ಪಕ್ಕದ ಮನೆಗಳಿಗೂ ವರ್ಗಾಯಿಸಿದೆ .
ನಾನು ಆಗಾಗ ಧಾರಾಳವಾಗಿ ಕೊಡುತ್ತಿದ್ದ ಪುಳಿಯೋಗರೆ ಗೊಜ್ಜು , ಹುಣಸೆ ತೊಕ್ಕು , ದೀಪಾವಳಿ ತಿಂಡಿಗಳ ಋಣಕ್ಕೆ  ಕಟ್ಟು ಬಿದ್ದು ಪಾಪ !ನಮ್ಮ ಬಿಲ್ಡಿಂಗಿನ  ನೆರೆ ಹೊರೆಯವರೆ ಮಕ್ಕಳ ರೂಮಿನ ಪೀಟೋಪಕರಣಗಳನ್ನು  ಖರೀದಿಸಿ ನನ್ನ ಹೊರೆಯಿಳಿಸಿದರು !
ಇನ್ನು  ಹಿರಿ ಮಗನ ರಾಶಿ ಕಥೆ ಪುಸ್ತಕಗಳು , ಸಣ್ಣ ಪುಟ್ಟ ಆಟದ ಸಾಮನುಗಳನ್ನು ನಾನು ಅಕ್ಕ ಪಕ್ಕದ   ಮಕ್ಕಳಿಗೆಲ್ಲಾ  ಧಾರಾಳವಾಗಿ ಹಂಚಿ ಎಷ್ಟು ಒಳ್ಳೆ  ಅಂಟಿ ಎಂಬ ಕೀರ್ತಿ ಪಟ್ಟ ಧರಿಸಿದ್ದು ಆಯಿತು .

ನಮ್ಮ ಮನೆಯ ಬಾಡಿಗೆ ಕಂಟ್ರಾಕ್ಟು ಮುಗಿಯಲು ತಿಂಗಳು ಬಾಕಿ ಇದೆ ಅನ್ನುವಾಗ ನಮ್ಮ  ಮನೆ ಹುಡುಕುವ ಕಾರ್ಯ ಒಂದು ವೀಕೆಂಡಿನ ಶುಭ ಮುಹೂರ್ತದಲ್ಲಿ ಶುರುವಾಯಿತು . ಟ್ರಾಫಿಕ್  ಸಮಸ್ಯೆಯಿಂದ ನಾವಿರುವ ಏರಿಯದಿಂದ  ಐವತ್ತು ಕಿಲೋ ಮೀಟರ್  ದೂರದಲ್ಲಿರುವ  ಪತಿಯ ಕಚೇರಿಯ ಸಮೀಪ ಮನೆ ಹುಡುಕುವ ಸಾಹಸ ಸುಲಭದಲ್ಲ  . ನಾವಿದ್ದ ಶಾರ್ಜಾ  ನಗರದಿಂದ ದುಬೈನ ಹೃದಯ ಭಾಗಕ್ಕೆ   ಬಸ್ ಹಿಡಿದು ಕೊನೆ  ನಿಲ್ದಾಣದಲ್ಲಿಳಿದು  ,ಅಲ್ಲಿಂದ ಮೆಟ್ರೋ ಹಿಡಿದು ಇಪ್ಪತ್ತು  ಸ್ಟಾಪುಗಳನ್ನು  ಕ್ರಮಿಸಿ ಇವರ ಕಚೇರಿಯ ಸಮೀಪ  ತಲುಪುತ್ತಿದ್ದೆ .
ಶುರುವಿನಲ್ಲಿ  ತಿಂಡಿ ಅಡುಗೆ ಚಾಕರಿ ಎಲ್ಲ ಮುಗಿಸಿ ಅರ್ಧ ಎನರ್ಜಿ ಖರ್ಚಾದರೂ ಹೊಸ ಮನೆ ನೋಡುವ ಹುರುಪಿನಲ್ಲಿ   ಅಷ್ಟು ದೂರ ಪಯಣಿಸಿ ಒಂದೆರಡು ಮನೆ ನೋಡಿ ನಪಾಸು ಮಾಡಿ ಸುಸ್ತಾಗಿ ಹಿಂದಿರುತ್ತಿದ್ದೆ .
ವಾರಾಂತ್ಯ ವಾದರೆ  ಅಡುಗೆ ತಿಂಡಿಗೆ ಕೊಕ್ಕೆ ಇತ್ತು , ಪತಿಯ ಆಫೀಸಿನ ಹತ್ತಿರವೆ ಇರುವ ಮಾಲ್ ನಲ್ಲಿ ಅವರ ಊಟದ ಸಮಯಕ್ಕೆ ಹಾಜರಾಗಿ  ಅಲ್ಲೇ ಹಳೆ ಪ್ರೇಮಿಗಳಂತೆ ಇಬ್ಬರೂ ಸಂಧಿಸಿ  ಫುಡ್ ಕೋರ್ಟಿನಲ್ಲಿ ಹೊಟ್ಟೆ ಪೂಜೆ ಮುಗಿಸಿ ಅಯ್ಯೋ ಯಾಕೋ ಮನೆ ನೋಡೋಕೆ ಮೂಡೆ ಇಲ್ಲಪ್ಪ ಎಂದು ಆರಾಮಾಗಿ ಸಿನಿಮಾ ನೋಡಿ  ಹಿಂದುರಿಗಿದ  ನಂತರ ಈ ವೀಕೆಂಡು ಸುಮ್ಮನೆ  ಹಾಳಾಯಿತಲ್ಲ ಎಂದು ಪರಸ್ಪರ ದೋಷಾರೋಪಣೆಗಳನ್ನು ಮಾಡಿಕೊಂಡು ಸಿನಿಮಾ ನೋಡಿದ ಮಜವನ್ನೂ  ಕಳೆದುಕೊಳ್ಳುತಿದ್ದದ್ದು ಉಂಟು .   

ಇನ್ನು ದಿನಕ್ಕೆ ತಾಳ್ಮೆಯಿಂದ ಹತ್ತಾರು ಫ್ಲ್ಯಾಟ್  ತೋರಿಸುವ ಮನೆ ಬ್ರೋಕರ್ /ರಿಯಲ್  ಎಸ್ಟೇಟ್ ಕಂಪನಿಗೆ ಮನೆ ಕಾಯಂ ಗೊಳಿಸುವವರೆಗೂ ಯಾವುದೇ ಹಣ ಕೊಡುವ ಅಗತ್ಯವಿಲ್ಲದ ಕಾರಣ , ಎಲ್ಲೆಲ್ಲೂ ಬಹು ಮಹಡಿ ಕಟ್ಟಡದ  ಮನೆಗಳನ್ನು ನೋಡುವಾಗ  ನಮ್ಮ ಅವಶ್ಯಕತೆಗೆ  ತಕ್ಕಂತೆ ಒಂದಿದ್ದರೆ ಮತ್ತೊಂದಿರದ ಸ್ಥಿತಿಗೆ   ತಲೆ ಗಿರ್ರ್ ಎನ್ನುತಿತ್ತು .

ದುಬೈ ಯಲ್ಲಿ ಸಾಮಾನ್ಯವಾಗಿ ಯಾವುದೇ ಫ್ಲಾಟ್ ಒಳ  ಹೊಕ್ಕರೂ  ಒಂದು ಬದಿಗೆ ಚಿಕ್ಕದಾದ  ಬಚ್ಚಲು ಮನೆಯಿಂದಲೇ ಪ್ರಾರಂಭವಾಗಿ  ಮುಂದೆ ಸಾಗಿದರೆ ಪಡಸಾಲೆ ಇರುವ ಫ್ಲಾಟುಗಳೇ    ಹೆಚ್ಚು  . ನಾವು ಬ್ರೋಕರ್ ತೋರಿಸುತ್ತಿದ್ದ ಮನೆಗಳನ್ನು ಜಂಟಿಯಾಗಿ ಉತ್ಸಾಹದಿಂದ ನೋಡುತಿದ್ದು , ಮುಂಬಾಗಿಲು  ಪೂರ್ವಕೆ ಅಥವಾ ಉತ್ತರ ದಿಕ್ಕಿಗಿದ್ದರೆ ಒಳಿತಾಗುವುದು ಎಂದು ನಾನು ಪ್ರವೇಶದ್ವಾರದಲ್ಲೇ ದಿಕ್ಕುಗಳನ್ನು ತೋರಿಸುವ ಪುಟ್ಟ ಕಾಂಪಾಸ್  ಹಿಡಿದು  ನಿಂತರೆ ಫ್ಲಾಟ್ ಸಂಖ್ಯೆ  ಕಡೆ ಕಣ್ಣು ಹಾಯಿಸಿ ಅದು ತಮ್ಮ ಅದೃಷ್ಟ ಸಂಖ್ಯೆಯಾದರೂ ಇದೆಯೇ  ಎಂದು ಮನೆಯವರು ಕೂತೂಹಲಿಯಾಗುತ್ತಿದ್ದರು ! . ಬಟ್ಟೆ ಒಣಗಿಸಲು , ಹೋಗಲಿ ಹೆಚ್ಚಿನ (ಉಪಯೋಗವಿಲ್ಲದ  ) ಸಾಮಾನು  ಇಡಲು ಬಾಲ್ಕನಿ  ಇರಲೇಬೇಕು ಎಂದು ನನ್ನ ಹಟವಾದರೆ , ನಮ್ಮ ಭಾರಿ ಪೀಟೋಪಕರಣಗಳನ್ನು   ಹಿಡಿಸಲು ಪಡಸಾಲೆ ,ಮಲಗುವ ಕೋಣೆ  ದೊಡ್ಡದಾಗಿರಬೇಕು ಎನ್ನುವುದು ಇವರ  ಡೀಮ್ಯಾಂಡು  .
ನನ್ನ ಪಾಕ ಪ್ರಯೋಗ ಕೇಂದ್ರ ಅಡುಗೆ ಕೋಣೆ ತುಂಬಾ ಚಿಕ್ಕದಾಯಿತು ರೀ  ಎಂದು ನಾ ಗೊಣಗಿದರೆ , ಕ್ರಿಕೆಟ್ ಕ್ರೇಜಿ ಎಜಮಾನರು ಆ ಬಿಲ್ಡಿಂಗ್  ಡಿಶ್  ಆಂಟೆನಾದಲ್ಲಿ  ತಮ್ಮ ಇಷ್ಟದ ಸ್ಪೋರ್ಟ್ಸ್ ಚಾನೆಲ್ಲೇ ಇಲ್ಲವಲ್ಲ  ಎಂದು ತಲೆ ಕೆಡಿಸಿಕೊಳ್ಳುತ್ತಿದ್ದರು . ¸ಇನ್ನು ಸೆಂಟ್ರಲ್ ಎಸಿ ವ್ಯವಸ್ತೆ ಇರುವ ಕಟ್ಟಡಗಳಿಗಾಗಿಯೆ ಏಜೆಂಟ್ ಬಳಿ ಬೇಡಿಕೆ ಇಟ್ಟರೆ , ಎಸಿಯ ಬಗ್ಗೆ ಕಿಂಚಿತ್ತು  ತಲೆ ಬಿಸಿ ಮಾಡಿಕೊಳ್ಳದೆ  ಅಯ್ಯೋ ! ಸುತ್ತಾ ಮುತ್ತಾ  ಒಂದಾದರೂ ಪಾರ್ಕ್ ಇಲ್ಲವಲ್ಲ ಎನ್ನುವುದು ನನ್ನ ತಕರಾರು ...¸ ಅಂತು ಅವರು ಒಪ್ಪಿದ ಮನೆಗಳಿಗೆ ನನ್ನ ನಕಾರದ ಹಾಡು , ನಾನು “ಪರವಾಗಿಲ್ಲ ರೀ “  ಎನ್ನುವ ಮನೆಗಳಿಗೆ  “ಸರಿಯಿಲ್ಲ ಕಣೆ “ ಎಂದಿವರು ಬಾರಿಸುವ ಬ್ಯಾಂಡು !
ಹೀಗೆ ಒಂದೊಂದೇ ಮನೆಗಳು ನಪಾಸಾಗುವ ವರ ಕನ್ಯೆಯರ ಪಟ್ಟಿಯಂತೆ ಬೆಳೆಯುತ್ತಲೇ  ಹೋದವು  .

ಈ ಜಂಜಾಟದಲ್ಲಿ ನಮ್ಮ ಹಳೆ ಮನೆಯ ಕಾಂಟ್ರಾಕ್ಟು  ಮುಗಿಯಲು ಹತ್ತೇ ದಿನಗಳು ಉಳಿದಾಗ ಎಜಮಾನರು ಒಮ್ಮಿಲೆ ಜಾಗೃತರಾಗಿ “ಈ ದೇಶವೇ ಮಿಡಿಲ್ ಈಸ್ಟ್(middle east )  ಎನ್ನುವ ಹೆಸರಿನಲ್ಲಿ ಪೂರ್ವಕ್ಕೇ ಇದೆ ಮಹಾರಾಯ್ತಿ .. ಹಾಗಾಗಿ ನಮ್ಮ ಮನೆ ಮುಂಬಾಗಿಲು  ಯಾವ ದಿಕ್ಕಿಗೆ ಇದ್ದರೇನು ”  ಎಂದು ಜಾಣತನದಿಂದ ಮುಂಬಾಗಿಲ ದಿಕ್ಕಿನ  ವಿಷಯಕ್ಕೆ ಹಠ ಹಿಡಿದು  ಕೂತ ನನಗೆ ದಿಕ್ಸೂಚಿ ನೀಡಿ  ಒಪ್ಪಿಸಲು  ಪ್ರಯತ್ನಿಸಿ , ತಾವು  ಕೂಡ ಒಂದಿಷ್ಟು  ಅಗತ್ಯಗಳನ್ನು ಒಲ್ಲದ ಮನಸ್ಸಿನಿಂದಲೇ  ಕೈ ಬಿಟ್ಟು ಒಂದು ಪುಣ್ಯ ಪರ್ವ ಕಾಲದಲ್ಲಿ ಇಬ್ಬರಿಗೂ ಏಕ ಕಾಲಕ್ಕೆ ಒಂದು ಫ್ಲಾಟು  ಒಪ್ಪಿಗೆಯಾದಾಗ ಪಾವಡ ಸದೃಶವೆಂಬಂತೆ  ಬಿರು ಬೇಸಿಗೆಯ ಮರು ಭೂಮಿಯಲ್ಲಿ ವರ್ಷ ವೃಷ್ಟಿ ಆಗುವುದೊಂದೇ ಬಾಕಿ  .!

ಇನ್ನು ಫ್ಲ್ಯಾಟ್ ಫೈನಲ್ ಗೊಳಿಸಿ ಇಲ್ಲಿನ ನಿಯಮದಂತೆ ಇಡಿ ವರ್ಷದ ಬಾಡಿಗೆಯನ್ನು ನಾಲ್ಕು ಚೆಕ್ಗಳಲ್ಲಿ ನೀಡಿ (ಪೋಸ್ಟ್ ಡೆಟೆಡ್ ಚೆಕ್ )  ನಿರಾಳವಾಗಿ  ಮನೆಗೆ ಬಂದರೆ ಒಂದೆ ವಾರದಲ್ಲಿ ಈಗಿರುವ ಮನೆಯ ಭಾರಿ ಸಾಮಾನುಗಳನ್ನೂ ಮೂಟೆ ಕಟ್ಟಿ ಹೊಸ ಮನೆಗೆ ಸಾಗಿಸುವ ಭಯಾನಕ ವಾಸ್ತವ ನಮನ್ನು ಕಾಡಲು ಶುರು ಮಾಡಿತು . 

ವರ್ಷಾನುಗಟ್ಟಲೆಯಿಂದ ಹಾಯಾಗಿದ್ದ ಹಳೆ ಸಾಮಾನುಗಳು ನನ್ನನ್ನು   ಎಮೋಷನಲ್ ಬ್ಲಾಕ್ ಮೇಲ್ ಮಾಡುತ್ತಿದ್ದರೆ , ಈ ವಿಷಯದಲ್ಲಿ ಅವೆಲ್ಲವನ್ನು ಅಚೆಗೆಸಿ ಎನ್ನುವ ಪತಿರಾಯರು ನಿರ್ದಯಿ maleಉ ಎನ್ನಬಹುದು !
ಮೊದಲು  ನನ್ನ ಬಟ್ಟೆ ಸಾಮ್ರಾಜ್ಯಕ್ಕೆ  ಕಾಲಿಟ್ಟೆವು . ರಾಶಿ ರಾಶಿ ಬಟ್ಟೆಗಳನ್ನು ಹೊತ್ತು ಬಸುರಿ ಹೆಂಗಸಿನಂತೆ ನಿಂತ ನನ್ನ ಐದು ಬಾಗಿಲನ ಬಟ್ಟೆ ಕಪಾಟು ಇವರ ಕೆಂಗಣ್ಣಿಗೆ ಗುರಿಯಾಗಿ , ನಾ ಮುಂದೆ ತೆಳ್ಳಗಾಗುವ  ಆಸೆಯಲ್ಲಿ ವರ್ಷಗಳಿಂದ ಹಾಗೆ ಇಟ್ಟ  ಚೆಂದದ ಹಳೆ ಉಡುಪುಗಳನ್ನೆಲ್ಲಾ  ಅಂದು ದುಃಖ ತಪ್ತಳಾಗಿ  ವಿಲೇವಾರಿ ಮಾಡಿದೆ  , ಇದೆ ಭರಾಟೆಯಲ್ಲಿ ಪತಿರಾಯರು ನಿರ್ಮೋಹಿಯಾಗಿ ಸ್ವಚ್ಚ  ಕಪಾಟು ಅಭಿಯಾನವನ್ನು   ಬಿರುಸಿನಿಂದ ನಡೆಸಿ ತಮ್ಮ  ಹಳೆ ಶರ್ಟು ಪ್ಯಾಂಟುಗಳನ್ನೆಲ್ಲ  ಚಾರಿಟಿ ಡಬ್ಬಕ್ಕೆ ಹಾಕಿ ಬಂದಾದ ನಂತರ ,  ತಾವು ತೊಡುತಿದ್ದ ಒಂದೆರಡು ಹೊಸ ಶರ್ಟ್ಗಳು ಕೂಡ ಅದೇ  ಗುಂಪಿನಲ್ಲಿ ಗೋವಿಂದನ ನಾಮ ಸ್ಮರಣೆ ಮಾಡುತ್ತಾ ವಿಲೆವಾರಿಯಾಗಿ ಹೋಗಿದ್ದು ಅರಿವಾಗಿತ್ತು .

ಕೊಂಚ ಹಳೆಯದಾದರೂ ಒಳ್ಳೆಯ ಸ್ಥಿತಿಯಲ್ಲಿದ್ದ ಶೂರ್ಯಾಕು  , ದಿನಪತ್ರಿಕೆಗಳಿಂದ ಹಿಡಿದು ಮಾತ್ರೆ ಕಿಟ್ ವರೆಗೂ  ಒಂದಿಷ್ಟು ಬೇಸರಿಸದೆ ಹೊತ್ತು ನಿಂತ ಬುಕ್ ಶೆಲ್ಫು, ಸಾವಿರಾರು ಸಲ ಸುಡು ಸುಡು ಮಸಾಜು ತಿಕ್ಕಿಸ್ಕೊಂಡ ಇಸ್ತ್ರೀ  ಸ್ಟ್ಯಾಂಡು , ಅಷ್ಟೇ ಅಲ್ಲದೆ  ಸ್ಟ್ಯಾಂಡ್ ಹಾಕಿ ತಪ್ಪಸ್ಸಿಗೆ ನಿಂತ ಕಿರಿ  ಮಗನ ದೊಡ್ಡ ಸೈಕಲ್ಲು , ಇವೆಲ್ಲವೂ ಇವರು ಧಾರಾಳತನದ  ದಾನ ದಾಸೋಹದಲ್ಲಿ ಕಣ್ಮರೆಯಾದಾಗ ನಾನು ಮರೆಯಲ್ಲಿ ನಿಂತು ಕಣ್ಣೋರಿಸಿಕೊಂಡಿದ್ದು ಆಯಿತು!
  
ಏನೇ ಅನ್ನಿ ಮನೆ ಬದಲಾಯಿಸುವಾಗ  ದಂಪತಿಗಳಲ್ಲಿ ಒಬ್ಬರಿಗಾದರು ತಾತ್ಕಾಲಿಕವಾಗಿ ವೈರಾಗ್ಯ ಕಾಡಿ ಹಳೆ ಸಾಮಾನುಗಳು ಮೇಲಿನ ಮೋಹ ಕಡಿಮೆಯಾಗಿ ಆಧ್ಯಾತ್ಮದ ಭಾವ ಮೆಲ್ಲಗೆ ಕಾಲಿಡುತ್ತದೆ  ..ಆದರೆ ಈ ಅಲೆಯಲ್ಲಿ ನಾನು ಕೊಚ್ಚಿ ಹೋಗದೆ  ಗಟ್ಟಿಯಾಗಿ ನಿಂತಿದ್ದೆ . ಆಗಿವರು  ನನ್ನ ಹಳೆ ಸಾಮಾನುಗಳ ಮೋಹದಿಂದ ಹೊರ ಬರಲು ಸಿಕ್ಕ ಸಿಕ್ಕ ಉದಾಹರಣೆಗಳನ್ನು, ಆಧ್ಯಾತ್ಮದ  ಬಿಟ್ಟಿ ಉಪದೇಶಗಳನ್ನು   ಕೊಡುತ್ತ  ರಕ್ತ ದಾನ ಮಾಡಿದರೆ ಹೊಸ ರಕ್ತ ಬರುವ ವಿಚಾರವನ್ನು  (ಹಳೆ ) ವಸ್ತು ದಾನಕ್ಕೂ ತಳಕು ಹಾಕಿ ನನ್ನ ಮನಸನ್ನು ಕರಗಿಸಲು ಯತ್ನಿಸಿದಾಗ ನನಗೋ ನಗುವುದೋ ಅಳುವುದೋ ಎಂಬ ಗೊಂದಲ !  ಅದರ ಪರಿಣಾಮ  ನಮ್ಮ ಹುಡುಗರ  ಆಡುತ್ತಿದ್ದ ಬ್ಯಾಟು , ಫುಟ್ಬಾಲು , ಕ್ರಿಕೆಟ್ ಸೆಟ್ಗಳು , ನನ್ನನ್ನು ಮತ್ತಷ್ಟು ಭಾವನಾತ್ಮಕವಾಗಿ  ಬೆಸೆದು ಇವರ ಕಣ್ಣಿಗೆ ಕಾಣದಂತೆ ಅವನ್ನೆಲ್ಲ  ಮುಚ್ಚಿ ಇಡುವುದೇ ನನ್ನ ಸಾಹಸವಾಯಿತು.

“ ಅಯ್ಯೋ ಎಲ್ಲಾ ಹಳೆದಾಯಿತು , ಎಷ್ಟು ದಿನಾಂತ ಇವನ್ನ ಬಳಸೋದು , ,ಇದನ್ನು ಅರ್ಧ ಇಲ್ಲಾ ಗಿರ್ಧಾ  ಬೆಲೆಗೆ  ನಮ್ಮ ಆಫೀಸಿನ ಸೂಪರ್ವೈಸೆರ್ಗೆ  ಮಾರಿ , ಹೊಸದು ಕೊಂಡರಾಯಿತು ಎಂದು ಒಂದಾನೊಂದು ಕಾಲದಲ್ಲಿ  ನನ್ನ ಒಂದೆರಡು  ಕೆಜಿ  ತೂಕ ಕರಗಿಸಿ ಪುಣ್ಯ ಕಟ್ಟಿಕೊಂಡು ಈಗ ತಾನೇ ಬಹಳ ದೂರ ಓಡಲಾಗದೆ   ಟವಲ್ ಸ್ಟ್ಯಾಂಡ್ ಆಗಿ ಮಾರ್ಪಾಡುಗೊಂಡ  ನನ್ನ ಹಳೆ ಟ್ರೇಡ್ ಮಿಲ್ಲನ್ನು ಸಾಗಿಸಲು ಪೀಟಿಕೆ ಇತ್ತರು .

ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿ ಒಯ್ಯುವಂತೆ ನವೀನ  ಮಾಡೆಲ್ಲಿನ  ಟ್ರೇಡ್ ಮಿಲ್ ಮೇಲೆ ಓಡಿ ಮಾಡೆಲ್ ನಂತಾಗುವ ಕನಸಿನಿಂದ ಅಸ್ತು ಎಂದರೆ ಒಮ್ಮಿಲೆ ಇವರ ಮೈ ಮೇಲೆ ದಾನ ಶೂರ ಕರ್ಣನೆ ಆತ್ಮವೇ ಹೊಕ್ಕು ಹೋಮ ಹವನ ಮಾಡಿದಾಗ   ಬ್ರಾಹ್ಮಣರಿಗೆ “ ಗೊ ದಾನದ ಜೊತೆ ಪುಟ್ಟ ಕರುವನ್ನೂ ದಾನ ನೀಡುವಂತೆ  ನನ್ನ ಟ್ರೇಡ್ ಮಿಲ್ಲಿನ ಜೊತೆಗೆ   ತಮ್ಮ ಹೊಟ್ಟೆ ಕರಗಿಸುವ  ಯಂತ್ರವನ್ನು  ಕೂಡ ಫ್ರೀ ಯಾಗಿ ಕೊಟ್ಟು ಇನ್ನು ಮುಂದೆ ಇಬ್ಬರೂ  ಜಿಮ್ಮಿಗೆ  ಹೋದರಾಯಿತು ಬಿಡು ಎಂದು ನನ್ನ ಕೋಪ ಕೆರಳಿಸಿದರು  !
  
ಹೀಗೆ ರಿಯಾಲಿಟಿ  ಷೋ ಗಳಲ್ಲಿ  ಎಲಿಮಿನೇಟ್  ಆಗಿ ಹೊರ ಹೋಗುವ ಪ್ರತಿಭೆಗಳಂತೆ ಮನೆಯಿಂದ ಒಂದೊಂದಾಗಿ ನಿರ್ಗಮಿಸುತ್ತಿದ್ದ  ಹಳೆ ಸಾಮಾನುಗಳನ್ನು ಆಪ್ತವಾಗಿ  ನೆನೆಯುತ್ತ  ಎಷ್ಟೋ ಬಾರಿ ನಾನು ಫ್ಲ್ಯಾಶ್ ಬ್ಯಾಕಿಗೆ ಹೋಗಿ ಬಂದ್ದಿದ್ದಾಯಿತು  . ಖಾಲಿಯಾದಷ್ಟು ಮತ್ತೆ ಭರ್ತಿಯಾಗಿ ತುಂಬಿಸುವ ನನ್ನ ಅದ್ಭುತವಾದ  ಗುಣ ವಿಶೇಷಣಗಳನ್ನು ನೆನೆದು ಕೊಂಚ ನಿರಾಳಾದೆ !

ಇನ್ನು ಅಡುಗೆ ಮನೆಯ ಸಾಮಾನುಗಳ ವಿಲೇವಾರಿಯ  ಆಡಳಿತ ನನ್ನ ಕೈಯಲ್ಲೆ ಇದ್ದುದರಿಂದ ಒಂದು ಪ್ಲಾಸ್ಟಿಕ್ ಚಮಚೆಯನ್ನು ಬಿಡದಂತೆ ಎಲ್ಲವನ್ನು ಕಟ್ಟಿ ಇಡುತ್ತಿರುವಾಗ , ಎಜಮಾನರು ಉತ್ಸಾಹದಿಂದ ನನಗೆ ಸಹಾಯ ಮಾಡಲು ಬಂದರು .  ಇವರ ದಾನ ಮೇಳದಲ್ಲಿ ನಾನು ಯಾವ ಪಾತ್ರವನ್ನೂ  ವಹಿಸದೆ ಇವರ ಮೇಲೆ ಧುಮುಗುಡುತ್ತ ನನ್ನ  ಪಾತ್ರೆ ಪಗಡವನ್ನೆಲ್ಲ ಹೊಸ ಮನೆಗೆ ಸಾಗಿಸಿಯೇ ತೀರುವ ಇರಾದೆಯಲ್ಲಿ ಎಂದಾದರೂ ಉಪಯೋಗಕ್ಕೆ ಬರುತ್ತದೆ ಎಂದು ಇವರಿಗೆ ಕಾಣಿಸದಂತೆ ಮುತುವರ್ಜಿಯಿಂದ ಎತ್ತಿಟ್ಟ ಕೆಲ  ಹಳೆ ಸಾಮಾನುಗಳು  ಇವರ ಕ್ಯಾಮೆರಾ  ಕಣ್ಣಿಗೆ ಬಿದ್ದಾಗಲೂ ಅವನ್ನು  ಎಸೆಯಲು ಹೇಳದೆ ಬೇರೆ  ಕಾರ್ಟನ್ ಡಬ್ಬಕ್ಕೆ ವರ್ಗಾಯಿಸಿ ಮಾರ್ಕ್ ಮಾಡಿದಾಗ ನನಗೆ ಕೊಂಚ ನೆಮ್ಮದಿಯಾಯಿತು  .
.
ಅಂತೂ ವಾರಾಂತ್ಯದ ರಜದಲ್ಲಿ ನಮ್ಮ  ಸಾಮಾನುಗಳ ರಾಶಿಯೊಂದಿಗೆ ನಾವು ಹೊಸ ಮನೆಗೆ ಸ್ಥಳಾಂತರಗೊಂಡು  ತಿಂಗಳು ಕಳೆಯುತ್ತಾ ಬಂದಿತ್ತು .  ಬೇಸಿಗೆ ರಜೆಗೆ ಊರಿನಿಂದ  ಮಗ ಬಂದ ಖುಷಿ ಒಂದು ಕಡೆಯಾದರೆ ಅವನ ಅಚ್ಚು ಮೆಚ್ಚಿನ ಅಕ್ಕಿ ರೊಟ್ಟಿ ಮಾಡುವುದಕ್ಕೆ   ತೆಗೆದಿಟ್ಟ  ಹ್ಯಂಡೆಲ್ ಮುರಿದ ಕಬ್ಬಿಣದ ಹೆಂಚನ್ನು  ಕಾರ್ಟನ್  ಡಬ್ಬದಲ್ಲಿ ಹುಡುಕಲು ಹೋದಾಗ ಆ ರಟ್ಟಿನ ಡಬ್ಬವೆ ಮಾಯಾ !
ಎಜಮಾನರು ಅಂದು  ನನಗೆ ಸಹಾಯಕ್ಕೆ ನಿಂತದ್ದು ಏಕೆ ಎಂದು ಚೆನ್ನಾಗಿ ಅರ್ಥವಾಗಿತ್ತು .
ಆರತಿ ಘಟಿಕಾರ್

ದುಬೈ 

3 comments :

  1. ಹೌದು ನನಗೂ ಹಳೇ ಬಟ್ಟೆ ಸಾಮಾನು ಅ0ದ್ರೆ ವ್ಯಾಮೂಹ. ದಿನಾ ಮಕ್ಕಳು,ಗಂಡನ ಜೊತೆ ಜಗಳ ನೆಡಿತಾನೆ ಇರುತ್ತೆ

    ReplyDelete
  2. ನನಗೂ ವಿಜಾಪುರ ಬಿಟ್ಟು ಧಾರವಾಡಕ್ಕೆ ಬರುವಾಗ ಹೀಗೇ ಆಯಿತು. ಸಾಮಾನು ಇರಿಸುವ ಅಟ್ಟದ ಮೇಲೆ ನನ್ನ ಗೆಳತಿ ಯ ಮಗನು ಏನಾದರೂ ಉಳಿದಿದೆಯೇ ಎಂದು ನೋಡಿದಾಗ ಅವ್ವನ ಮನೆಯಿಂದ ತಂದ ಹಿತ್ತಾಳೆಯ ಪಾತ್ರೆಗಳ ದೋಡ್ಡ ಗಂಟು ನನ್ನನ್ನು ನೋಡಿ ಅಣಕಿಸಿತ್ತು!

    ReplyDelete
  3. ಮನೆ ಬದಲಿಸಿ ನೋಡು‌ ಪ್ರಯೋಗಗಳಲ್ಲಿ ನಾನೂ ಎಕ್ಸ್ ಪರ್ಟೇ... ಅನುಭವಗಳನ್ನು ಪಟ್ಟಿ ಮಾಡಿದರೆ ಮೂರು ಪುಟಕ್ಕೆ ಮುಗಿಯದಷ್ಟು! 😃ಆದರೂ ನಿನ್ನ ಅನುಭವ ಹೊಸ ಹೊಸ ಕಿಟಕಿಗಳಲ್ಲಿ ಇಣುಕಿಸಿ ಕಚಗುಳಿಯಿಟ್ಟಿಸಿದೆ ಆರತಿ.😃

    ReplyDelete