ಆಟೋ ರಾಜರಲ್ಲಿ ನಾನಾ ನಮೂನೆಗಳು . ಕರೆದಲ್ಲಿಗೆ ನೇರ ,ದಿಟ್ಟ , ನಿರಂತರವಾಗಿ ಮುಲಾಜಿಲ್ಲದೆ ನಿರಾಕರಿಸುವವರು , ಇಲ್ಲಾ ಕೆಲವೊಮ್ಮೆ ದೂರದ ಏರಿಯಗಳಿಗೆ ಅರ್ಧ ಮನಸ್ಸಿನಿಂದ ಒಪ್ಪಿ ಪಶ್ಚಾತಾಪ ಪಟ್ಟು ಮೀಟರ್
ಮೇಲೆ ೨೦ , ೩೦ ಜಾಸ್ತಿ ಪೀಕುವವರು , ಇನ್ನು ಒಳಗಡೆ ಸಂದಿ ಗೊಂದಿಗೆಲ್ಲ
ಬರುವ ಚಾನ್ಸೇ ಇಲ್ಲ್ಲ ಎಂದು ನಿರ್ದಯವಾಗಿ ಮೇನ್ ರೋಡಿನಲ್ಲೇ ಇಳಿಸಿ ಗಾಡಿ ಬಿಡುವವರು
ಹೀಗೆ ..ಆದರೆ ಒಮ್ಮೊಮ್ಮೆ ನಾವು ಕರೆದ
ಕಡೆ ಒಂದೆ ಬಾರಿಗೆ ಅಸ್ತು
ಎನುವ ಅತಿ ವಿವೇಕಾನಂದರು ಕೂಡ ಕಣ್ಣಿಗೆ ಬಿದ್ದು ಅಂದು ಬಾರಿ ಅಡ್ಡ
ಮಳೆಯಾಗುವುದುಂಟು !
ಯುದ್ದ ಕಾಲದಲ್ಲೆ ಅಸ್ತ್ರಗಳನ್ನು ಬಳಸುವ
ಮಂತ್ರ ಮರೆತು ಹೋಗುವ ಪ್ರಸಿದ್ದ ಪೌರಾಣಿಕ ಪಾತ್ರಗಳಂತೆ ಬೇಕಾದ ಸಮಯದಲ್ಲೇ ನನ್ನ ಮೊಬೈಲ್ ಡಾಟಾ
ಕೈ ಕೊಟ್ಟು ರಸ್ತೆಯಲ್ಲಿ ಊಬರ್ ,ಓಲಾ ದವರನ್ನು ಕೈ ಬೆರಳುಗಳಲ್ಲೇ ಕರೆಸಿಕೊಳ್ಳಲಾಗದೆ
ಕೈ ಕೈ ಹಿಚುಕುತ್ತಿರುವಾಗ ಇಂಥ ಆಟೋರಾಜರ ಜೊತೆ ಏಗಬೇಕಾಗುವುದು ಅನಿವಾರ್ಯ ನನಗೆ .
. ಬಾಲ್ಯದಲ್ಲಿ ನಮ್ಮ ಮನೆಯ ಸಮೀಪದ ಆಟದ
ಮೈದಾನದಲ್ಲಿ ಗಂಟೆಗೊಂದು ರುಪಾಯಿಯಂತೆ ಸೈಕಲ್ ತುಳಿದಿದ್ದು ಬಿಟ್ಟರೆ ರಸ್ತೆಯಲ್ಲಿ ಜೆಟ್
ವೇಗದಲ್ಲಿ ಓಡಾಡುವ ವಾಹನಗಳ ಭಯಕ್ಕೆ ಎರಡು ಗಾಲಿಯ
ಸ್ಕೂಟಿ /ಹೋಂಡಾ ಓಡಿಸುವುದು ಕೂಡಾ ನನಗೆ
ಮರೀಚಿಕೆಯೇ ಆಗಿತ್ತು ..
ಅಂದು ಕೂಡ ಸಮಯದ ಪರಿವೆ ಇಲ್ಲದ ನನ್ನ
ಮಾಮೂಲು ಶಾಪಿಂಗ್ ಮುಗಿಸಿ ಮೊಬೈಲ್
ಡಾಟಾ ಯಾಕೋ ಟಾಟಾ
ತಿರುಗುತ್ತಿದ್ದ ಸೂಚನೆಗೆ
ಹೇಗಾದರೂ ಬೇಗ ಮನೆ ಸೇರುವ ತವಕದಿಂದ
ಖಾಲಿ ಆಟೋಗಾಗಿ ಕೈ ಬೀಸುತ್ತ ನಿಂತಿದ್ದೆ . ಆದರೆ ನಾ ಕರೆದ ಕಡೆ ತಮ್ಮ ಗೋಣು ಅಲ್ಲಾಡಿಸಿ ಕೈ ತಿರುಗಿಸಿ ಬಲವಾಗಿ
ನಿರಾಕರಿಸುವವರೆ ಹೆಚ್ಚಿನವರಾದ್ದರಿಂದ ಇಂತ ನಖರಾಗಳಿಗೆ
ನಾನು ಖಾರವಾಗಿ ರೇಗಿ ರಾಂಗ್ ಆಗಿ ನಿಂತಾಗ “ಎಲ್ಲಿಗೆ ಮೇಡಂ “ ಎಂದ ಆಟೋರಾಜನೊಬ್ಬನ ಕಳಕಳಿಯ ದನಿ ಬಹಳ ಇಂಪಾಗಿ ಕೇಳಿತು .
ಅವ(ದೊಡ್ಡ ಮನಸ್ಸಿನಿಂದ ) ಒಪ್ಪಿ ,ನಾನು ಅಟೋ ಏರಿ ‘ಉಸ್ಸಪ್ಪ’ ಎನ್ನುತ್ತ ನಿಟ್ಟುಸಿರು ಬಿಡುವಾಗಲೇ “ ಧಡಲ್” ಎಂದು ರಸ್ತೆ ಹಂಪಿಗೆ
ಹೈ ಜಂಪಾಗಿ ಅಟೋ ಮಧ್ಯ ಬ್ಯಾಲೆನ್ಸ್ ಆಗಿ
ಕುಳಿತೆ .” ಥೂ ! ಏನ್ ರಸ್ತೆಗಳು ಮೇಡಂ , ಯಾವ ಸರ್ಕಾರ ಬಂದರೂ ಅಷ್ಟೇನೆ “ ಗುಂಡಿ,
ಹೊಂಡಗಳ ಮಧ್ಯೆ ದಿನವೂ ಏಗುತ್ತಿರುವ ಸತ್’ಪ್ರಜೆ ಯಂತೆ ಆಟೋರಾಜ ಗೊಣಗಿದ !
ನಾನು “ ಹೂಂ “
ಗುಟ್ಟಿದ್ದೆ ತಡ ಏನೋ ಸ್ಪೂರ್ತಿ ಬಂದವರಂತೆ ಮಾತುಕತೆಗೆ ಶುರುವಿಟ್ಟು ಕೊಂಡ . ನಮ್ಮಿಬ್ಬರ ಬೆಂಬಲ
ಒಂದೆ ರಾಜಕೀಯ ಪಕ್ಷಕ್ಕೆ ಎಂಬುದು ಅರಿವಾಗಿ ಈಗ ನಡೆಯುತ್ತಿರುವ ರಾಜಕೀಯ ದೊಂಬರಾಟ ,ಕಚ್ಚಾಟ ,ಹುಚ್ಚಾಟಗಳ ಬಗ್ಗೆ ಇಬ್ಬರೂ ಏಕಪಕ್ಷೀಯವಾಗಿ
ಉಪ್ಪು ಖಾರ ಹಾಕಿ ಉಗಿದು ನಮ್ಮ ನಾಲಿಗೆಯನ್ನು ಪವಿತ್ರ ಗೊಳಿಸಿದೆವು !.
ಅಗ ನನ್ನ ಗಮನ ಅವ ಹಾಕಿದ್ದ ಖಾಕಿ
ಜ್ಯಾಕೆಟ್ಟಿನ ಹಿಂದೆ ಬರೆದ “ಕನ್ನಡವೆ ಸತ್ಯ , ಜೈ ಭುವನೇಶ್ವರಿ
“ ಎಂಬ ಘೋಷ ವಾಕ್ಯಗಳತ್ತ ಹರಿಯಿತು ..ಅಷ್ಟೇ ಅಲ್ಲದೆ ಯಾವುದೋ ಕನ್ನಡ ಚಿತ್ರದ
ಹೆಸರು, ತಾರಾಗಣವನ್ನೆಲ್ಲ ಕೊರೆಸಿಕೊಂಡು ಮಿಂಚುತಿದ್ದ ಅವನ ಜಾಕೆಟ್
ಥೇಟ್ ಸಿನಿಮಾ ಪೋಸ್ಟರ್ ನಂತೆಯೆ ಕಂಡಿತು
.!
“ಇದನ್ನು ನಿಮಗೆ ಕನ್ನಡ ಹುಟ್ಟು
ಹೋರಾಟಗಾರರ ಸಂಗದವರು ಕೊಟ್ಟಿದ್ದಾ ? “ ಕುತೂಹಲದ ತಡೆಯಲಾರದೆ
ಕೇಳಿದಾಗ ಮೊದಲೆ ವಾಚಾಳಿಯಾದ ಅಟೋರಾಜ ಶುರು
ಹಚ್ಚಿಕೊಂಡ . “ಅಯ್ಯೋ ಮೇಡಂ! ಇದು ಆ ರಾಜಕೀಯ ಪಕ್ಷದ ಶಾಸಕರು ಸಿನಿಮ ತೆಗೆದಾಗ
ಕೊಟ್ಟಿದ್ದು ,ಅವರ ಸಿನಿಮಾ ನೂ ಫ್ಲಾಪು , ಎಲೆಕ್ಷನ್ ನಲ್ಲಿ ಕೂಡ ಸೋತ್ಹೊದ್ರು ಪಾಪ !” ಮರುಕದಿಂದ ಲೊಚ ಗುಟ್ಟಿದ .
ಪ್ರಭಾವಿ ಫುಡಾರಿಯೊಬ್ಬ ತೆಗೆಯುತ್ತಿದ್ದ ಒಂದು ಕನ್ನಡ ಸಿನಿಮದಲ್ಲಿ ಒಂದು ಅಟೋ ಸೀನ್
ಶೂಟ್ ಮಾಡುತ್ತಿದ್ದರಂತೆ .ಅವರ ಕಾರು ಚಾಲಕ ಇವನ ದೋಸ್ತ್ ಆದ್ದರಿಂದ , ಆ
ಆಟೋ ಸೀನ್ಗಾಗಿ ಇವನಿಗೆ ಬುಲಾವ್ ಬಂದಾಗ ತನ್ನ
ಕಿವಿಯನ್ನೇ ನಂಬದೇ ಹಿಗ್ಗಿ ಹೀರೆಕಾಯಾಗಿದ್ದನಂತೆ
.! ಶೂಟಿಂಗ್ ಹಿಂದಿನ ದಿನ ಅವನ ಗಾಡಿಯನ್ನು ಸೋಪು ಬ್ರಷ್ ಹಾಕಿ ಫಳ ಫಳನೆ ತಿಕ್ಕಿ ತೊಳೆದು , ತಾನು ಕೂಡ ಬೆಳಗಿನ ಜಾವವೆ ಬೆಳ್ಳಗೆ ಮಿರಿ ಮಿರಿ ಮಿಂಚುವಂತೆ ಪೌಡರ್, ಎಂತೆಂತದೊ
ಕ್ರ್ರೀಮ್ಗಳನ್ನು ಬಳಿದುಕೊಂಡು ತಾನೇ ಮೇಕಪ್ ಮಾಡಿಕೊಂಡು ಹೋಗಿದ್ದನಂತೆ .. ಅಲ್ಲಿ ಒಂದು ಫೈಟ್ ದೃಶಕ್ಕೆ ಇವನ ಆಟೋ ಬಳಸಿಕೊಂಡು
ಪಂಕ್ಚರ್ ಮಾಡಿಸಿ ,ಅದಕ್ಕೂ ಹಣ ಕೊಡದೆ ಒಂದು ಪ್ಲೇಟ್ ಎಗ್ ರೈಸ್ ಹಾಗು ಈ ಜ್ಯಾಕೆಟ್ ಕೊಟ್ಟು ಕಳಸಿದ್ದ ಕಥೆಗಳನ್ನು ರಸವತ್ತಾಗಿ ಬಿಚ್ಚಿಟ್ಟಾಗ ನನಗಂತೂ ನಗು
ತಡೆಯಲಾಗಲ್ಲಿಲ್ಲ ! ಅದೇನೇ ಇರಲಿ ಅವನ ಅಟೋ ನಾದ್ರೂ ಸಿನಿಮಾದಲ್ಲಿ ಪಾರ್ಟ್ ಮಾಡಿದ್ದು ಅವನಿಗೆ ಅತ್ಯಂತ
ಖುಷಿಯಾಗಿತ್ತು .
ಆಗ ರಸ್ತೆ ಮಧ್ಯೆ ತೂರಾಡುತ್ತ ಇವನ ಗಾಡಿಗೆ ಡಿಕ್ಕಿ
ಹೊಡೆಯುವವನಂತೆ ಟೈಟಾಗಿ ಬಂದ ಕುಡುಕನ ಮೇಲೆ ರೇಗಾಡುತ್ತಾ ಆಟೋ ಮಹಾಶಯನಿಗೆ ತಕ್ಷಣ ಬಿಯರ್ ಕಿಂಗ್ ಸಾಕ್ಷಾತ್ ಮಲ್ಯನೆ ನೆನಪಾದ . ಇನ್ನು ಈ ಸಲ “ಕಪ್ಪು ನಮ್ಮದೆ “ ಎಂದು ಇವನಂತೆ ಕಾಯುತ್ತಿದ್ದ ಲಕ್ಷಾಂತರ
ಕ್ರಿಕೆಟ್ ಪ್ರೇಮಿಗಳಿಗೆ ಈ ಬಾರಿಯೂ ಚಿಪ್ಪೇ ಕೊಟ್ಟ ಆರ್ಸೀಬೀ (RCB) ತಂಡದ ಕಳಪೆ ಪ್ರದರ್ಶನವನ್ನು ಹಿಗ್ಗಾ ಮುಗ್ಗ
ಬಯ್ಯಲು ಶುರು ಮಾಡಿ .” ಥೋ ! ಮಲ್ಯನ ನಕ್ಷತ್ರ , ಕಾಲ್ಗುಣಾನೆ ಸರಿಯಿಲ್ಲ ಮೇಡಂ,”
ಎಂದು ತುಂಬು ಬೇಸರದಿಂದ ನುಡಿದ ..
ನಾನಾಗ ಎಕ್ಸ್ಪರ್ಟ್ ಕಾಮೆಂಟರಿ ಕೊಡುತ್ತ “ ಅಯ್ಯೋ ! ಅವನು ಕ್ರಿಕೆಟ್ ಮನೆ ಹಾಳಾಗಲಿ ಎಂದು ಕೈ ತುಂಬಾ ಬಾಚಿಕೊಂಡು “ಭಾಗ್ ಮಲ್ಯಾ ಭಾಗ್ “ ಎಂದು ದೇಶ ಬಿಟ್ಟು ಓಡಿದ್ದು ಅವನ ಒಳ್ಳೆ “ಕಾಲ್ “ ಗುಣ ಅಲ್ಲದೆ ಮತ್ತೇನು “ ಎಂದು ಟಾಂಗ್ ಕೊಟ್ಟಾಗ ಆಟೋದವ ಹಲ್ಕಿರಿಯುತ್ತ
“ ನೀವೇನೇ ಹೇಳಿ ಮೇಡಂ , ಐಪೀಎಲ್ ನಲ್ಲಿ ಬೆಟ್ಟಿಂಗ್ ಕಟ್ಟಿ ಮೆಂಟಲ್
ಆಗೊದವರೂ ಇದ್ದಾರೆ “ ಮತ್ತೆ ಯಾವುದೋ ಸ್ವಾರಸ್ಯಕರ ವಿಷಯಕ್ಕೆ ಎಂಟ್ರಿ ಕೊಟ್ಟ !
ನಾನು ಆಸಕ್ತಿಯಿಂದ “ ಒಹ್ ಏನಾಯ್ತಪ್ಪ “ ಅವನ ಚಿನಕುರಳಿ ಹಾಸ್ಯಾಯಣಕ್ಕೆ
ಹುರುಪು ತೋರಿಸಿದೆ .” ಅದೇ ಮೇಡಂ! ಈ ಸಾರಿ ಐಪೀಎಲ್ ನಡೆಯೋವಾಗ ಒಬ್ಬ ಆಸಾಮಿ ನನ್ನ ಅಟೋ ಹತ್ಕೊಂಡ . ಪಕ್ಕಾ
ಅಳುಮುಂಜಿ ಮೂತಿ !,ಅಯ್ಯೋ
ಪಾಪ! ಏನು ದುಃಖ ಇರಬೇಕು ಅನ್ಕೊಂಡೆ . ಆದರೆ ಇದ್ದಕ್ಕಿದ್ದಂತೆ
ದಾರಿ ಮಧ್ಯ “ ಅಣ್ಣಾ ! ಇವತ್ತು ಐಪೀಎಲ್
ಬೆಟ್ಟಿಂಗ್ನಲ್ಲಿ ಐವತ್ತು ಸಾವಿರ ಕಳ್ಕೊಂಡ್ ಬಿಟ್ಟೆ ! ಮನೆಗೆ ಹೋದ್ರೆ ಹೆಂಡತಿ ಯಿಂದ ಚಪ್ಪಲಿ
ಏಟು ತಿನ್ನಬೇಕು , ತಲೆ ಕೆಟ್ಟೋಗಿದೆ ,ಒಂದು ನಿಮಿಷ ಎಣ್ಣೆ ಅಂಗಡಿ ಹತ್ತಿರ
ನಿಲ್ಸಂನ “ ಅಂತ
ಫುಲ್ಲು ಫೀಲಿಂಗ್ ನಲ್ಲಿ ಅವನ ಗೋಳಾಟ ! ಹೋಗಲಿ ಪಾಪ !
ಅಂತ ಒಂದು ಬಾರ್ ಮುಂದೆ ನಿಲ್ಲಿಸಿದಾಗ ಆಸಾಮಿ
ಚಂಗ್ ಅಂತ ಇಳಕೊಂಡು ನನ್ನ ನೂರು ರುಪಾಯಿಗೆ ಮೀಟರ್ ದುಡ್ಡಿಗೆ ನಾಮ ಹಾಕಿ ಅಂಗಡಿ ಒಳಗೆ ಅಂಗೆ ಮಾಯ ಆಗಬಿಡೋದಾ ! “
ಅವನ
ನಾಮದ ಕಥೆಗೆ ನಗು ಬಂದರೂ “ ಅಯ್ಯೋ ಛೆ “ ಎಂದು ಲೊಚ ಗುಟ್ಟಿದೆ. “ “ಅವ ಕೂಲಾಗಿ ನಗುತ್ತ “ಅಯ್ಯೋ ಪಾಪ ಹೋಗಲಿ ಬಿಡಿ “ ಬಾಯಿಗೆ
ಒಂದಿಷ್ಟೂ ಬ್ರೇಕ್ ಹಾಕದೆ “, ಇನ್ನೊಂದ್ ಸಲ ಏನ್ ಮಜಾ ಗೊತ್ತಾ ಮೇಡಂ ? “ ಎಂದು ಹಾವಿನಂತೆ ನುಸುಳಿದ ಹೊಂಡಾ ಚಾಲಕನೊಬ್ಬನಿಗೆ
ಕಿವಿ ಪರದೆ ಹರಿಯವಂತೆ ಹಾರ್ನ್ ಬಾರಿಸಿ ಮತ್ತೊಂದು ತಮಾಷೆ ಅನುಭವದ ಕಥೆ ಶುರು ಹಚ್ಚಿದ .
ಕಳೆದ
ವಾರ ಅವನ ಆಟೋದಲ್ಲಿ ಏರಿಕೊಂಡ
ವ್ಯಕ್ತಿಯೊಬ್ಬನಿಗೆ ಒಂದು ಫೋನ್ ಕರೆ ಬಂದಿತಂತೆ . ಎರಡೇ ನಿಮಿಷದಲ್ಲಿ ಕರೆ
ಕಟ್ ಮಾಡಿ ಸಿಕ್ಕಾಪಟ್ಟೆ ಖುಷಿಯಿಂದ ಇವನ ಭುಜವನ್ನು( ಜೋರಾಗಿ ) ತಟ್ಟಿ “ ಅಬ್ಬಾ ! ಇವತ್ತು ನನಗೆ ಫುಲ್ ಖುಷಿ ಆಗೋಗಿದೆ , ತಡ್ಕೊಳ್ಳೋಕೆ ಆಗ್ತಾ
ಇಲ್ಲ ,ಗುರು ! ಯಾವುದಾದರೂ ಎಣ್ಣೆ ಅಂಗಡಿ ಮುಂದೆ ನಿಲ್ಸಪ್ಪಾ “ ಎಂದಾಗ
ಪಾಪ! ನಮ್ಮ ಆಟೋರಾಜನಿಗೆ ಹಿಂದಾದ ಉಂಡೆ ನಾಮದ ನೆನೆಪೆ ನುಗ್ಗಿ ಬಂದು
ಅನುಮಾನಿಸಿದಾಗ , ಆ ಆಸಾಮಿ “ ಏನ್ ಗುರು ನಿಮ್ಮ ಆಟೋ ಸಕ್ಕತ್ ಲಕ್ಕು , ಇವತ್ತು ಐಪೀಎಲ್ ಬೆಟ್ಟಿಂಗ್ ನಲ್ಲಿ ಐದು ಲಕ್ಷ ಮಾಡ್ಕೊಂಡೆ “ ಎಂದು ಭರ್ಜರಿ
ಸಂತೋಷದಿಂದ ಎರೆಡು ಸಾವಿರ ಇವನಿಗೆ ಭಕ್ಷೀಸು ಕೂಡ
ಕೊಟ್ಟಿದ್ದ್ದಲ್ಲದೆ ಒಂದು ಬಿಯರ್ ಬಾಟಲ್ ಕೂಡ
ಉಡುಗೊರೆಯಾಗಿ ನೀಡಿದನ್ನು ನಗಾಡುತ್ತ ಹೇಳಿದಾಗ ನಾನು “ ಒಹ್ ಸೂಪರ್ (ಗುರು )! ನಿಂದು ಲಕ್ಕೋ ಲಕ್ಕು ಬಿಡಪ್ಪ “ ಫೇಸ್ಬುಕ್ಕಿನಲ್ಲಿ ಕಾಮೆಂಟ್ ಹೊಡೆದಂತೆ ನಗುತ್ತ ಪ್ರತಿಕ್ರಯಿಸಿದೆ !
ಇವನ
ಅಟೋದಲ್ಲಿ ನನ್ನ ಅದೃಷ್ಟವೂ ಖುಲಾಯಿಸುವುದೇನೋ
ಎಂಬ ಸಣ್ಣ (ದೊಡ್ಡ ) ಆಸೆ ಮನದಲ್ಲೇ ಕುಣಿಯಲು ಪ್ರಾರಂಭಿಸಿತು . ಅದೃಷ್ಟದ ಕರೆಗಾಗಿ ಕಾತುರದಿಂದ
ಮೈಯೆಲ್ಲಾ ಕಿವಿಯಾಗಿ ಕಾದು ಕುಳಿತೆ ..ಆದರೆ ಮನೆ
ಮುಟ್ಟುವವರೆಗೂ ಒಂದಾದರೂ ರಿಂಗ ಟೋನ್ ಹಾಡದೆ
ಮೂಕನಂತೆ ಕುಳಿತ ನನ್ನ ಮೊಬೈಲು ಸ್ವಿಚ್ ಆಫ್ ಆಗಿದ್ದು ತಿಳಿದು ತಣ್ಣನೆಯ ನಿಟ್ಟಿಸಿರು
ಬಿಟ್ಟೆ .
ಆಟೋ
ರಾಜ ತನ್ನ ಸುಂದರ ಫ್ಲಾಶ್ಬ್ಯಾಕಿನಿಂದ ಹೊರ ಬಂದು
ನಮ್ಮ ಮನೆಯ ರೋಡ್ ಹತ್ತಿರ ಆಗುತ್ತಿದ್ದಂತೆ “ ಹೂಂ !
ಅಲ್ಲೇ ಬಾರ್ ಅಂಡ್ ರೆಸ್ಟೋರಾಂಟ್ ಇದೆಯಲ್ಲ ,ಅಲ್ಲಿ ಬಲಕ್ಕೆ ತಿರುಗಿ ಎಡಕ್ಕೆ ಮರದ ಹತ್ರ ಮೂರನೇ ಮನೆ , ಸದ್ಯ! ನನ್ನನ್ನು ಯಾವ ಎಣ್ಣೆ
ಅಂಗಡಿ ಹತ್ರನೂ ನಿಲ್ಲಿಸೋದು ಬೇಡಪ್ಪ ,” ನಾನು ಜೋಕ್ ಮಾಡಿದಾಗ ಅವ ಹಲ್ಕಿರಿಯುತ್ತ “ ಮೇಡಂ ಒಳ್ಳೆ
ತಮಾಷೆ ಮಾಡ್ತ್ತೀರ ಬಿಡಿ “ ಎಂದು ನಾನು ಮೀಟರ್
ಹಣ ಕೊಟ್ಟ ನಂತರ ಉಳಿದ ಚಿಲ್ಲರೆ ವಾಪಸ್ ಕೊಡದೆ (ಬಲವಂತದ) ಬಕ್ಷೀಸ್ನಂತೆ ಜೇಬಿಗಿಳಿಸಿ ಗಾಡಿ ಬಿಟ್ಟ
.ಅಂತೂ ಟೈಮ್ ಪಾಸ್ ಕಳ್ಳೆಕಾಯಂತ್ತಿದ್ದ ಆಟೋರಾಜನ ತಮಾಷೆ ಮಾತುಗಳನ್ನು ನೆನಸಿಕೊಂಡು ನಗುತ್ತಲೆ
ಮನೆ ಸೇರಿದೆ.
ಆರತಿ ಘಟಿಕಾರ್
ಆರತಿ ಘಟಿಕಾರ್
No comments :
Post a Comment