Wednesday, May 9, 2018

ಸಂಗೀತ ಗೋತಾ ಆದಾಗ


                                                 ಸಂಗೀತ ಗೋತಾ ಆದಾಗ 
ನಾನಾಗ ಐದನೆಯ ತರಗತಿಯಲ್ಲಿರಬೇಕು. ಹಾಡು, ಸಂಗೀತ ಎಂದರೆ ನನಗೆ ಬಹಳ ಅಚ್ಚುಮೆಚ್ಚು. ಗಾಯಕಿಯಾಗ (ಲೇ) ಬೇಕೆನ್ನುವುದು ನನ್ನ ಹುಚ್ಚು ಕನಸು. ಹೀಗಾಗಿ, ಸ್ವರ, ತಾಳ, ಜ್ಞಾನ ಇರಲಿ, ಬಿಡಲಿ ಮುಖ ಪೆಚ್ಚು ಮಾಡಿಕೊಳ್ಳದೆ ಬಾತ್‌ರೂಮ್‌, ಪಡಸಾಲೆ ಹೀಗೆ ಎಲ್ಲೆಂದರಲ್ಲಿ, ಏನೇ ಮಾಡುತ್ತಿರಲಿ ಸದಾ ಏನಾದರೂ ಹಾಡುತ್ತ ತಿರುಗಾಡುವುದನ್ನು ನೋಡಿ ಕೇಳಿ, ಸಾಕಾಗಿ ಅಮ್ಮ  ನನ್ನನ್ನು  ಸಂಗೀತ  ಶಾಲೆಗೆ ಸೇರಿಸಿದ್ದರು.
ಅÇÉಾದರೂ ಗುರುಗಳ ಬಳಿ ಸಂಗೀತ ಕಲಿತು ನನ್ನ ಮಗಳು ಸುಮಧುರ ಕಂಠದ ಗಾಯಕಿ ಆಗುವಳೇನೋ ಎನ್ನುವ  ಅವರ  ಕನಸನ್ನು ನನಸು ಮಾಡುವ ಹುಮ್ಮಸ್ಸಿನಲ್ಲಿ  ನಾನು ಗುರುಗಳ ಬಳಿ  ಸಂಗೀತ ಕಲಿಕೆ ಆರಂಭಿಸಿ¨ªೆ . ಶುರುವಿನಲ್ಲಿ  ಅವರು ನನ್ನ ಕೊಂಚ  ಗಡಸು ದನಿ, ಗಾನವೈಖರಿಗೆ ಸ್ವಲ್ಪ ಬೆದರಿದರೂ ನನ್ನ  ಕಲಿಯುವ  ಆಸಕ್ತಿಗೆ ಮೆಚ್ಚಿ  ಸಂಗೀತ ವಿದ್ಯೆಯನ್ನು  ನನಗೆ ಧಾರೆ ಎರೆಯಲು  ಬಹಳ ಸಾಹಸಪಟ್ಟರು!
ಆದರೇಕೋ ಮನೆಯಲ್ಲಿ ಅಮ್ಮ ಮಾಡಿಕೊಟ್ಟ ಕಷಾಯ ಕುಡಿದು ಸಿಕ್ಕಾಪಟ್ಟೆ  ತಾಲೀಮು ನಡೆಸಿ ಅದನ್ನು  ಗುರುಗಳ  ಮುಂದೆ ಹಾಡಿದಾಗ ಸ್ವರವೇಕೋ ಜಾರೋ ಬಂಡೆಯಾಗಿ ಬಿಡುತ್ತಿತ್ತು. ಇನ್ನು ತಾಳವೆಂಬುದು ನನ್ನ ಕೈ ತಪ್ಪಿಸಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿತ್ತು. ಆಗ ಗುರುಗಳು, "ಅಯ್ಯೋ! ನಾನು ಎಷ್ಟು ಸಲ  ಹೇಳಿಕೊಡಲಿ ನಿನಗೆ?'
"ಸರಿ ಹೀಗೆ ಹಾಡಮ್ಮ  ಮತ್ತೂಮ್ಮೆ! ಸಂಗೀತದಲ್ಲಿ  ಏಳು ಸ್ವರಗಳು, ಆದ್ರೆ ನೀನು ಹಾಡಿದರೆ ಎಂಟನೆ ಸ್ವರಾನೂ ಕೇಳಸುತ್ತಲ್ಲಮ್ಮಾ!' ಎಂದು ನವಿರಾಗಿ ಗದರಿದಾಗ, ಪೆಚ್ಚುಮೋರೆಯೊಂದಿಗೆ ಮನೆ ಸೇರಿ ನನ್ನ ತಂಬೂರಿಯನ್ನು  ಎದೆಗವಚಿಕೊಂಡು ದುಃಖೀಸುತ್ತಿ¨ªೆ.
ಏನೇ ಆದರೂ ನನ್ನ ಹಾಡಿನ ಮೇಲೆ ಅಮ್ಮನಿಗೆ ಅಪಾರವಾದ ಹೆಮ್ಮೆ!  ನಾನು ಸ್ವರಗಳು, ಭಜನೆ/ಕೀರ್ತನೆ ಹಾಡಲು ಶುರು ಮಾಡಿದರಂತೂ ಭಕ್ತಿಯಿಂದ ಕಣ್ಣ ಮುಚ್ಚಿ ಆಲಿಸುತ್ತಿದ್ದರು, ಸದ್ಯ ಕಿವಿ  ಮುಚ್ಚುತ್ತಿರಲಿಲ್ಲ ! ಅದನ್ನು  ನೋಡಿ  ನನ್ನಲ್ಲೂ ಇನ್ನಷ್ಟು (ಚೆನ್ನಾಗಿ)  ಹಾಡುವ ಹುರುಪು, ಜೋಶ್‌  ಜಾಗೃತವಾಗುತ್ತಿದ್ದವು. ನಾನು ಗಾಯಕಿ ಯಾಗುವ ಕನಸು  ರೆಕ್ಕೆ ಬಿಚ್ಚಿ ನರ್ತಿಸುತ್ತ, ಇಂಪಾಗಿ  ಮೋಹನ ರಾಗ ಹಾಡುತ್ತಿದ್ದವು.
ಒಟ್ಟಿನಲ್ಲಿ  ನನ್ನ ಸಂಗೀತಾಭ್ಯಾಸ   ದಟ್ಟ  ಕಾನನದಲ್ಲಿ ಅಲೆಮಾರಿ   ರಾಗಗಳನ್ನು ಬೆಂಬತ್ತಿ ಹಿಡಿಯುವ  ಸಾಹಸದಂತೆ ಭರದಿಂದ ಸಾಗಿತ್ತು. ಗುರುಗಳು ಕೂಡಾ ಅಮ್ಮನಿಗೆ, ""ನಿಮ್ಮ ಮಗಳು ಬಹಳ ಒಳ್ಳೆಯ   ವಿದ್ಯಾರ್ಥಿನಿ, ಹೇಳಿಕೊಟ್ಟ ಹಾಡುಗಳನ್ನೆಲ್ಲ  ಮಾರನೆಯ ದಿನವೇ ಕ್ಲಾಸಿನಲ್ಲಿ ಇವಳೇ  ಮೊದಲು ಹಾಡಿ ತೋರಿಸ್ತಾಳೆ'' ಎಂದಾಗ ಹೇಗೆ ಹಾಡ್ತಾಳೆ ಎಂದು ಪ್ರಶ್ನೆಮಾಡುವ ಸಾಹಸಕ್ಕೆ  ಎಂದೂ ಅಮ್ಮ ಕೈ ಹಾಕಿದವರಲ್ಲ. ಗುರುಗಳು ಹೀಗೆ ತಮ್ಮ ಮಗಳ ಕುರಿತು ಹೇಳಿದ ಒಂದೆರಡು ಮಾತುಗಳನ್ನೇ ಮೆಚ್ಚುಗೆಯಾಗಿ ಪರಿವರ್ತಿಸಿಕೊಂಡು ಹೃದಯದÇÉೇ  ಬೀಗಿದವರು. ""ಏನೇ ಅನ್ನಿ, ನಾ ಗಾಯಕಿ ಆಗುವ ಕನಸು ಕಪ್ಪು ಬಿಳುಪಿನಿಂದ  ರೂಪಾಂತರಗೊಂಡು  ರಂಗೇರ ತೊಡಗಿದ್ದವು.
ನನ್ನ ಸಂಗೀತ ಕಲಿಯುವ ಹುಚ್ಚು ಮತ್ತಷ್ಟು  ವಿಸ್ತಾರಗೊಂಡು ನಮ್ಮ ಮನೆಯ ಮೇಲೆ ಬಾಡಿಗೆಗಿದ್ದ  ಸಂಗೀತ ವಿಶಾರದ ಲಲ್ಲೂಪ್ರಸಾದ ಅವರಿಂದ ಹಿಂದೂಸ್ತಾನಿ ಸಂಗೀತ ಪ್ರಕಾರವನ್ನೂ ಸಂಜೆ ಸ್ಕೂಲ್‌ ಮುಗಿದ ಬಳಿಕ ಕಲಿಯುವಂತೆ  ಪ್ರೇರೇಪಿಸಿತ್ತು. ಅಲ್ಲಿ ಕೂಡ ಹಾಡುವಾಗ ತಾಳ-ಶ್ರುತಿಗಳನ್ನು ಅವರ ವಶಕ್ಕೆ  ಒಪ್ಪಿಸಿ ಹಾಡುವುದರ ಮೇಲಷ್ಟೇ ಗಮನ ವಿರಿಸುವುದು  ನನ್ನ ವಿಶೇಷ ಗುಣವೆಂದೇ ಹೇಳಬಹುದು. "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ  ಹಾಡುವುದು ಅನಿವಾರ್ಯ ಕರ್ಮ ನನಗೆ' ಎಂಬ ಕವಿವಾಣಿಯಂತೆ ಭಾವಪೂರ್ಣವಾಗಿ ಹಾಡಲು ಪ್ರಯತ್ನಿಸುತ್ತಿ¨ªೆ. ಆದರೆ, ನನ್ನ ಆಲಾಪ್‌ಗ್ಳು ನಮ್ಮ ಅಕ್ಕಪಕ್ಕದವರಿಗೆ ಪ್ರಲಾಪದಂತೆ ಕೇಳಿಸುತ್ತಿದ್ದದ್ದು  ನನ್ನ ತಪ್ಪು ಖಂಡಿತ ಅಲ್ಲ.
ಇನ್ನು  ವಾರದ ರಜೆಯಲ್ಲಿ  ಶ್ರದ್ಧೆಯಿಂದ ಗಮಕ ಹಾಗೂ  ಭಾವಗೀತೆಗಳನ್ನು ಕಲಿಯಲು ಶುರುವಿಟ್ಟುಕೊಂಡಿ¨ªೆ. ಗುರುಗಳು ಭಾವಗೀತೆಗಳನ್ನು ಅಷ್ಟು ಭಾವಪೂರ್ಣವಾಗಿ ಹೇಳಿಕೊಟ್ಟಾಗ ನಾನು  ಕೂಡ ನನ್ನ (ಮನೋ)ಭಾವಕ್ಕೆ ಸರಿಹೊಂದಿಸಿಕೊಂಡು ಹಾಡಿ  ತೋರಿಸುತ್ತಿದ್ದಾಗ ಏಕೋ ಅವರ ಮುಖದಲ್ಲಿ ಮೂಕಭಾವ  ಮೂಡಿದ್ದು  ಗೋಚರವಾಗುತ್ತಿತ್ತು. ಇನ್ನು ನನ್ನ ಗಮಕದ  ತಾಲೀಮು ಮನೆಯಲ್ಲಿ ನಡೆಸಿದಾಗ ಅಕ್ಕ ಪಕ್ಕದ ಚಿಕ್ಕ ಹುಡುಗರು ಕೂಡ ಕುತೂಹಲದಿಂದ ನನ್ನ ಬಳಿ ಜಮಾಯಿಸುತ್ತಿದರು. ಆಗೆಲ್ಲ ಅಮ್ಮನ  ಮುಖದಲ್ಲಿನ ಖುಷಿಯ ಗೆರೆಗಳು ಸಂಭ್ರಮದ ಗೆಜ್ಜೆಕಟ್ಟಿ ಕುಣಿಯುತ್ತಿದ್ದವು.
ಇನ್ನು ನಮ್ಮ ಶಾಲೆಯಲ್ಲೂ  ನನಗೆ  ಚಿಕ್ಕಪುಟ್ಟ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಕೊಡುವಂತೆ  ನಮ್ಮ ಸಂಗೀತದ ಮಿಸ್‌ ಪಾರ್ವತಿ ಮೇಡಂನನ್ನು ಪರಿಪರಿಯಾಗಿ ಕೇಳಿಕೊಂಡಿ¨ªೆ. 
ಒಮ್ಮೆ ಒಂದು ಸಮೂಹ ಗಾಯನದಲ್ಲಿ ಹಾಡುವ ಸುವರ್ಣ ಅವಕಾಶ ನನಗೆ ಒದಗಿ ಬಂದಿತ್ತು, ನಾನೇ ಉತ್ಸಾಹದಿಂದ ಸೀದಾ  ಮೈಕ್‌ ಮುಂದೆಯೇ ಪ್ರತಿಷ್ಠಾಪನೆಯಾಗಿ ನನ್ನ ಗಾನಸುಧೆಯಿಂದ ಪ್ರೇಕ್ಷಕರನ್ನು ರಂಜಿಸುವ ಹುರುಪು ತೋರಿದಾಗ  ಅಲ್ಲಿದ್ದ ಸಂಗೀತ ಮಿಸ್‌ ತತ್‌ಕ್ಷಣ ಮೈಕನ್ನು ನನ್ನ ಪಕ್ಕದಲ್ಲಿದ್ದ ವನಜಾಳ ಮುಂದಿಟ್ಟು ನನ್ನನ್ನು ಹಿಂದಿನ ಸಾಲಿಗೆ  ಕಳಿಸಿದಾಗ ಬೇಜಾರಾದರೂ ಮೈಕಿನಲ್ಲಿ  ನನ್ನ ದನಿ ಸರಿಯಾಗಿ ಕೇಳಿಸುವಂತೆ ನಾನೇ ಜೋರಾಗಿ ಹಾಡಿದ್ದು  ಇನ್ನೂ ನೆನಪಿದೆ.
ಕಾರ್ಯಕ್ರಮ ಮುಗಿದ ಬಳಿಕ ಅಮ್ಮನ ಮುಂದೆ ನನ್ನ ಮೈಕಿನ ವಿಷಯ ಪೆಚ್ಚುಮೋರೆಯಿಂದ ಹೇಳಿದಾಗ   ಅಮ್ಮನ ಕಣ್ಣಂಚಿನಲ್ಲಿ ಒಂದಿಂಚೂ ನೀರು ಜಿನುಗಲಿಲ್ಲ ಬದಲು ತುಟಿಯಲ್ಲಿ ನಗು, ಸಂಭ್ರಮ. ""ಅಯ್ಯೋ  ಮರಿ ಇಷ್ಟಾದರೂ ನಿನಗೆ ಹಾಡಲು ಛಾನ್ಸ್‌  ಸಿಕ್ತಲ್ಲ'' ಎಂದು ಬಹಳ ಖುಷಿಪಟ್ಟಿದ್ದಳು. ತನ್ನ ಮುದ್ದು ಮಗಳ ಕಂಠಸಿರಿಗೆ ಯಾವ ಕಂಟಕವೂ ಬಾರದಂತೆ ನನ್ನನ್ನು  ಐಸ್‌ಕ್ರೀಮ್‌, ಕೋಲ್ಡ…ಜ್ಯೂಸ್‌ಗಳಿಂದ ದೂರವಿರಿಸಿ  ಮುನ್ನೆಚ್ಚರಿಕೆಯ ಕ್ರಮಗಳನ್ನು ನನ್ನ ಮೇಲೆ ಹೇರಿದ್ದಳು.
ನನ್ನ ದನಿಯನ್ನು ನಾನು ಅಪಾರವಾಗಿ ಪ್ರೀತಿಸುತ್ತಿದ್ದುದರಿಂದ ಗಾಯಕಿಯಾಗುವ ಆಸೆಯಲ್ಲಿ  ಐಸ್‌ಕ್ರೀಮನ್ನು ಅಮ್ಮನ ಮುಂದೆ ತಿನ್ನದೇ ಯಾವಾಗಲಾದರೂ ಕದ್ದುಮುಚ್ಚಿ  ಫ್ರೆಂಡ್‌ ಮನೆ, ಇಲ್ಲ  ಸ್ಕೂಲ್‌  ಮುಂದೆ ಜಮಾಯಿಸಿಕೊಂಡಿರುತ್ತಿದ್ದ ಐಸ್‌ಕ್ಯಾಂಡಿ ಗಾಡಿಯಲ್ಲಿ  ಕೊಂಡು ತಿಂದಿದ್ದುಂಟು. ಹೀಗೆ ಒಮ್ಮೆ ನನ್ನ ಪಾಕೆಟ್‌ ಮನಿಯಿಂದ ಒಂದೆರಡು ಬಾರಿ ಸತತವಾಗಿ ಐಸ್‌ಕ್ರೀಮ್‌ ತಿಂದಾಗ ನನ್ನ ಧ್ವನಿ ಹಿಡಿದು, ನನಗೇ  ಗುರುತಿಸಲಾಗಷ್ಟು ಮಾರ್ಪಾಡುಗೊಂಡು, ಹಾಡಲು ಹೋದಾಗ ಒಂದು ವಿಶೇಷ ಅಪರೂಪದ ದನಿಯಾಗಿ  ಕೇಳಿಬಂದಿತ್ತು. ಆದರೆ, ಈ ಬದಲಾವಣೆ ನನಗೊಂದು ಅದೃಷ್ಟವೇ ತಂದುಕೊಟ್ಟಿತು ಎಂದರೆ  ನೀವು  ನಂಬಲಿಕ್ಕಿಲ್ಲ  ಬಿಡಿ.
ಪರೀಕ್ಷೆಗಳು ಮುಗಿದ ನಂತರ ಶಾಲೆಯಲ್ಲಿ  ಒಂದು ಚಿಕ್ಕದಾದ ಮನರಂಜನಾ ಕಾರ್ಯಕ್ರಮಕ್ಕಾಗಿ  ಮಕ್ಕಳಿಂದ ನಾಟಕ, ಹಾಡು, ನೃತ್ಯಗಳ ರಿಹರ್ಸಲ್‌ ನಡೆಯುತ್ತಿತ್ತು. ಒಂದು ಭಾವಗೀತೆಗೆ ಕೋರಸ್‌ ಹಾಡಲು ಬರಬೇಕಿದ್ದ ಒಬ್ಬ ಹುಡುಗ ಟೈಫಾಯ್ಡ  ಜ್ವರದ ಕಾರಣದಿಂದ ಗೈರು ಹಾಜರಾಗಿದ್ದ. ಕಾರ್ಯಕ್ರಮ ಮಾರನೆಯ ದಿನವೇ ಇದ್ದುದ್ದರಿಂದ, ಬೇರೆ ದಾರಿಯಿಲ್ಲದೆ ನಮ್ಮ ಸಂಗೀತದ ರಿಹರ್ಸಲ್‌ಗಾಗಿ ನನ್ನಿಂದ ಒಮ್ಮೆ  ಹಾಡಿಸಿ ನೋಡಿದಾಗ ಐಸ್‌ಕ್ರೀಮ್‌ ಪ್ರಭಾವದಿಂದಲೋ ಏನೋ ಮೊದಲೇ ಕೊಂಚ ಗಡುಸಾದ ನನ್ನ ದನಿ ಅಂದು ಇನ್ನೂ ಖಡಕ್ಕಾಗಿ ಗಂಡುದನಿಯಂತೆ ತೋರಿ, ಅಂದು ಹುಡುಗರ ಸಾಲಿನಲ್ಲಿ  ನಿಂತು ನನಗೊಂದು  ಕೋರಸ್‌ ಹಾಡುವ ಸುವರ್ಣ ಅವಕಾಶವನ್ನು ಒದಗಿಸಿಕೊಟ್ಟಿತ್ತು! ಆಗಂತೂ ನನ್ನ‌ ಸಂತಸ ಮುಗಿಲು  ಮುಟ್ಟಿತ್ತು .
ಆದರೆ ಹಾಡಿನ ಕಾರ್ಯಕ್ರಮ ಮುಗಿದ ಮೇಲೆ ಅಪಾರವಾದ ಸಂಗೀತ ಜ್ಞಾನವಿದ್ದ ನಮ್ಮ ಹೆಡ್‌ ಮಾಸ್ತರರು, ""ನಿಮ್ಮ ಭಾವಗೀತೆ ಹಾಡು ಚೆನ್ನಾಗಿ ಮೂಡಿಬಂತು. ಆದರೆ ಕೋರಸ್‌ ಆಲಿಸಿದಾಗ ಒಂದು  ಅಪಸ್ವರದ ಧ್ವನಿ ಕೇಳಿಬಂದ ಹಾಗಿತ್ತಲ್ಲ !'' ಎಂದು ನಮ್ಮ ಸಂಗೀತದ ಮಿಸ್‌ನನ್ನು ಕಿಚಾಯಿಸಿದಾಗ ಅವರ ಮೇಲೆ ನನಗೂ ಮರುಕವುಂಟಾಗಿದ್ದು ಮಾತ್ರ ಸತ್ಯ! ಆದರೆ ಅದರ ಕುರಿತು ಹೆಚ್ಚು ತಲೆಕೆಡೆಸಿಕೊಳ್ಳದೆ   ಹೀಗೆ ಅಚಾನಕ್‌ ಆಗಿ ವೇದಿಕೆ ಮೇಲೆ ಹಾಡಿದ ಖುಷಿಯ ಸುದ್ದಿಯನ್ನು ಅಮ್ಮನ ಮಡಿಲಿಗೆರಿಸುವ ಉತ್ಸಾಹದಲ್ಲಿ   ಮನೆಯತ್ತ ದಾಪುಗಾಲಿಕ್ಕಿ¨ªೆ !
ಅಂತೂ ನಾ ಬೆಳೆದಂತೆಲ್ಲ ಉತ್ತಮ ಗಾಯಕಿಯಾಗುವ ಕನಸು ನನ್ನ ನೆರಳಿನಂತೆಯೇ ನನ್ನನ್ನು  ಹಿಂಬಾಲಿಸುತ್ತಲೇ ಇತ್ತು . ಅದರೆ ಯಾಕೋ ಸಂಗೀತ ನನ್ನ ಪಾಲಿಗೆ ಕಬ್ಬಿಣದ ಕಡಲೆಯಾಗಿ ಒಲಿಯಲೇ  ಇಲ್ಲ , ಬದಲಿಗೆ ಮುಂದೆ ಕಾಲೇಜಿನಲ್ಲಿ ಒಬ್ಬ ಸುಂದರ ತರುಣನಿಗೊಲಿದು ನನ್ನ ಹೃದಯದ ತಾಳ ತಪ್ಪಿಸಿದ್ದ. ನನ್ನ ಮನಗೆದ್ದಿದ್ದ. ನಮ್ಮ ಪ್ರೇಮಕಥೆಯೂ ರಾಗ ತಾಳ ಸೇರಿದ ಹಾಗೆ ಮದುವೆಯಲ್ಲಿ  ಸಮ್ಮಿಲನವಾಯಿತು.
"ಈಗ ನನ್ನ ಮಗಳೂ ಚೆನ್ನಾಗಿ  ಹಾಡ್ತಾಳೆರೀ. ಆದರೆ ನಿಮ್ಮ ಹಾಗೇನಾ' ಅಂತ ಮಾತ್ರ ದಯವಿಟ್ಟು ಕೇಳಬೇಡಿ!
https://www.udayavani.com/kannada/news/%E0%B2%B8%E0%B2%BE%E0%B2%AA%E0%B3%8D%E0%B2%A4%E0%B2%BE%E0%B2%B9%E0%B2%BF%E0%B2%95-%E0%B2%B8%E0%B2%82%E0%B2%AA%E0%B2%A6/164931/%E0%B2%95%E0%B3%86%E0%B2%B0%E0%B3%86%E0%B2%AF-%E0%B2%A8%E0%B3%80%E0%B2%B0%E0%B2%A8%E0%B3%81-%E0%B2%95%E0%B3%86%E0%B2%B0%E0%B3%86%E0%B2%97%E0%B3%86-%E0%B2%9A%E0%B3%86%E0%B2%B2%E0%B3%8D%E0%B2%B2%E0%B2%BF
ಆರತಿ ಘಟಿಕಾರ್‌, ದುಬೈ
ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ  ಪ್ರಕಟಿತ ಲೇಖನ 

No comments :

Post a Comment