Tuesday, April 12, 2016

ಪಾಕದ ರೀಮಿಕ್ಸ್

ಪಾಕದ  ರೀಮಿಕ್ಸ್
                                                    ===================================
ಈಗ ಎಲ್ಲ್ಲೆಲ್ಲೂ  ರೀಮಿಕ್ಸ್,  ರೀ -ಮೇಕ್ಗಳದೆ  ಯುಗ   ! ನಮ್ಮ  ಹಳೆಯ   ಜನಪ್ರಿಯ ಚಿತ್ರ   ಗೀತೆಗಳನ್ನು  ರೀಮಿಕ್ಸ್   ಎನ್ನುವ   ಹೆಸರಿನಲ್ಲಿ    ಯಾವದೋ ಮಸಾಲ ಬೆರೆಸಿ ಒಂದಿಷ್ಟು   ರಾಕ್ ಹಿಮ್ಮೇಳದ  ಗದ್ದಲವೆಬ್ಬಿಸಿ    ನಮ್ಮ  ಕಿವಿಗಳಿಗೆ   ಅಬ್ಬರಿಸಿದರೊ ನಾವು  ಬೊಬ್ಬಿರಿಯದೆ ಬೆರಗಿನಿಂದ ಕಣ್ಣರಳಿಸಿ ಬಾಚಿಕೊಂಡು  ಬಿಡುತ್ತೇವೆ .
ಒಟ್ಟಿನಲ್ಲಿ ಹಳೆಯದನ್ನೇ ಹೊಸ ರೀತಿಯಲ್ಲಿ ಆಕರ್ಷಕವಾಗಿ ತೋರುವಂತೆ ಮಾಡುವ  ಕಲೆ ಸಿನಿಮಾ ರಂಗದಿಂದ ನನ್ನ ಪಾಕ ರಂಗಕ್ಕೂ ಪ್ರವೇಶ ಮಾಡಿತ್ತು ~!
ಆದರೆ ಈ ರೀಮಿಕ್ಸ್ ಗಿಮ್ಮಿಕ್ಕನ್ನು  ನನ್ನ ಅಡುಗೆಯಲ್ಲಿ   ಬಳಸಿಕೊಳ್ಳಲು  ನಾನೂ   ಕೂಡ  ಶುರುವಿಟ್ಟುಕೊಂಡಿದ್ದು,( ಅಳತೆ ಗೊತ್ತಗದೆ) ಹೆಚ್ಚಾಗಿ  ಮಾಡಿದ  ಅಡುಗೆ ಪೋಲಾಗಿ  ಹೋಗಬಾರದೆಂಬುವ  ಉದ್ದೇಶದಿಂದ ! ಮಾಡಿದ್ದು (ನೀನೆ )ಉಣ್ಣೆ  ಮಾರಾಯ್ತಿ ಎಂದು ಹೆಚ್ಚಿಗೆ ಉಳಿದ್ದನ್ನೆಲ್ಲಾ ನಾನೇ ಉಂಡು ಗುಂಡಾಗಿ ಹೋದ ಮೇಲೆ ಈ ಬುದ್ದಿ ಕಲಿತದ್ದು ಎಂದರೂ ತಪ್ಪಾಗಲಾರದು ! ಇನ್ನು ಈ ಊರಿನಲ್ಲಿ ಉಳಿದಡುಗೆಯನ್ನು(ಅವರ ಪುಣ್ಯಕ್ಕೆ)  ಕೊಂಡೊಯ್ಯಲು  ಕೆಲಸದವರ ಕೊರತೆಯೂ ಒಂದು  ಕಾರಣವಾಗಿ     ನನ್ನ ಪಾಕ  ಶಾಲೆಯಲ್ಲಿ  ಈ  ರೀಮಿಕ್ಸ್  ಕಲೆಯನ್ನು  ಪೋಷಿಸಿಕೊಂಡು  ಬಂದ್ದಿದ್ದೆ  .
ಒಟ್ಟಿನಲ್ಲಿ ಅಡುಗೆ  ಹೆಚ್ಚಿಗೆ  ಉಳಿದಲ್ಲಿ , ನನ್ನ ಖಾಲಿ  ತಲೆಗೆ ಹಟಾತ್ತಾಗಿ  ಪಾಕದ ರೀಮಿಕ್ಸ್ ಐಡಿಯಾಗಳು ಸಾಲು  ದೀಪದಂತೆ ಹೊಳೆದು  ನನ್ನ ಹಳೆ ಪಾಕಕ್ಕೆ  ಹೊಸ ಮಸಾಲಾಗಳಿಂದ  ಚೆಂದದಿ ಮೇಕಪ್ (ಚಿಂದಿಯಾಗದಂತೆ) ಮಾಡಿ ಹೊಸ ರೂಪ ಕೊಡುವುದರಲ್ಲಿ  ಯಶಸ್ವಿ ಆಗುತ್ತಿದ್ದೆ  !
 ಉದಾ ..ಒಮ್ಮೆ  ರಾಮನವಮಿ   ಹಬ್ಬದಲ್ಲಿ ನಾ ಮಾಡಿದ   ಹೆಸರು ಬೇಳೆ ಕೋಸಂಬರಿ ಜೊತೆಗೆ ಅವರಿವರು  ಕೊಟ್ಟಿದ್ದೂ  ಕೂಡ ಹೆಚ್ಚಾಗಿ  ಉಳಿದುಕೊಂಡಾಗ ಒಂದಿಷ್ಟು ತಲೆ ಕೆರೆದು  ಕೊಳ್ಳದೆ ಅದನ್ನು  ಪಲ್ಯದೊಳಗೆ  ಹದವಾಗಿ  ಬೆರೆಸಿ   ಮನೆಯವರ ಮೂಗಿಗೆ ಕಿಂಚಿತ್ತು ಸಂಶಯ ಬಾರದಂತೆ ಬಡಸಿ ಮೆಚ್ಚುಗೆಗೆಗೂ  ಪಾತ್ರಳಾಗಿದ್ದೆ .!..
ಇನ್ನು ಕೆಲವೊಮ್ಮೆ ಇಂಥಾ   ಒಣ ಪಲ್ಯಗಳೆ ಹೆಚ್ಚಾಗಿ  ಉಳಿದುಕೊಂಡಾಗ ,  ಮತ್ತದನ್ನೇ   ಬಿಸಿ  ಮಾಡಿ  ತಿನ್ನಲು  ಬೇಸರವೆನಿಸಿ  ಅವುಗಳನು  ಪರೋಟದ ಹಿಟ್ಟಿನಲ್ಲಿ  ಸೇರಿಸಿ  ಲಟ್ಟಣಿಗೆಯಿಂದ ಹಿತವಾಗಿ  ಮಸ್ಸಾಜ್  ಮಾಡಿಸಿ ಹೆಂಚಿನ   ಮೇಲೆ ಕೆಂಪಾಗಿಸಿ  ಹೊಸ ರುಚಿಯೆಂಬ ಹೆಸರಿನಲ್ಲಿ ಮನೆಯವರ ಹೊಟ್ಟೆ  ತಂಪಾಗಿಸು ತ್ತಿದ್ದದ್ದುಂಟು  !
ಇನ್ನು ಉಳಿದ  ಸಾಲಡ್ಗಳು ಅಕ್ಕಿ ರೊಟ್ಟಿ ಹಿಟ್ಟಿನೊಂದಿಗೆ  ಸೇರಿ ಮರು ಜನ್ಮ   ಪಡೆದರೆ . ಕೊನೆಯಲ್ಲಿ  ಉಳಿದ  ಬ್ರೆಡ್ ಪೀಸ್ಗಗಳೂ ಕೂಡ  ಸರಾಗವಾಗಿ   ಚಪಾತಿ  ಹಿಟ್ಟಿನ  ಹೊಟ್ಟೆ  ಸೇರುತ್ತಿದ್ದವು .
ಹೇಳಬೇಕೆಂದರೆ ಕೆಲವು ಗೃಹಿಣಿಯರಿಗೆ ಈ ರೀಮಿಕ್ಸ್ ಕಲೆ ಸುಲಭವಾಗಿ ಒಲಿದಿರುತ್ತದೆ ,  ಕೆಲವರು  ಸಂದರ್ಭಕ್ಕನುಸಾರವಾಗಿ  ಈ ಕಲೆಯನ್ನು ಅಡುಗೆಯನ್ನು ಕುಲಗೆಡಿಸದೆ ಕರಗತ  ಮಾಡಿಕೊಳ್ಳಬಹುದು  .
ಇನ್ನು ನಮ್ಮ  ಮನೆಯಲ್ಲಿ   ಹೆಚ್ಚಿಗೆ ಉಳಿದ ಚಪಾತಿಗಳು  ಮಾಲೆದುಂಡಿ ಅಥವಾ  ಮಾಲದಿಯಾಗಿ (ಸಿಹಿ  ತಿನಸು),   ಇಡ್ಲಿಗಳು  ಇಡ್ಲಿ  ಫ್ರೈ ಗಳಾಗಿ ರೂಪಾಂತರಗೊಳ್ಳುತ್ತಿದ್ದವು  . ಹೀಗೆ  ಹೆಚ್ಚಿನಡುಗೆಯನು ಬಿಸಾಡದೆ ಮನೆಯವರ  ಹೊಟ್ಟೆಗೂ ( ಹೆಚ್ಚಿನ ) ಅಪಾಯವಾಗದಂತ ನನ್ನ ವಿವಿಧೋಪಾಯಗಳ ದಂಡು ಇದ್ದಂತೆ , ಅಡುಗೆ  ಕಡಿಮೆ  ಯಾದದ್ದನ್ನು  ಹೆಚ್ಚಾಗಿಸುವ ತಂತ್ರವನ್ನು ಅತ್ತೆಯವರು ನಮ್ಮ ಮದುವೆಯಾದ ಹೊಸತರಲ್ಲಿ ತಿಳಿಸಿಕೊಟ್ಟಿದ್ದರು .
ಕೆಲವೊಮ್ಮೆ ಸಂಜೆ ಗೆ ಸಾರು ,  ಹುಳಿ ,ಮನೆ  ಮಂದಿಗೆ ಸಾಲದೆನೆಸಿದಾಗ  .  ಅದಕ್ಕೊಂದಿಷ್ಟು  ಗಂಗಾ  ಜಮುನಾ ಸೇರ್ಸವ್ವ ಎನ್ನುವ  ಅತ್ತೆಯವರ     ಕೋಡ್ವರ್ಡ್  ಅನ್ನು   ಡೀ ಕೋಡ್ ಮಾಡಿದಾಗ   ತಿಳಿದದ್ದು ಗಂಗಾ ಜಾಮುನಾ  ಅರ್ಥಾತ್   ನೀರು   ಸೇರಿಸಿ ಜೊತೆಗೊಂದಿಷ್ಟು ಮಸಾಲೆ ಹಾಕಿ   ಬೆಳೆಸಿ   ಬಡಿಸು   ಎಂಬುದಾಗಿತ್ತು .
ಆದರೆ ನನ್ನಡುಗೆಯನ್ನು ಸವಿದು  ಮೆಚ್ಚಿಕೊಳ್ಳುವ  ನನ್ನ ಮಗರಾಯನ ಮೂಗು  ಮಾತ್ರ   ನಾಯಿ   ಮೂಗಿಗಿಂತಲೂ   ತೀಕ್ಷ್ಣವಾಗಿದ್ದು  ನನ್ನ ಈ  ಎಲ್ಲ ರೀಮಿಕ್ಸ್  ರಹಸ್ಯವನ್ನು  ಭೇದಿಸಲು  ಸದಾ ಮುಂದುರುತ್ತಿದ್ದ , ಅವನು ಚಾಪೆಯ  ಕೆಳಗೆ  ತೂರಿದರೆ   ನಾ  ರಂಗೋಲಿ  ಕೆಳಗೆ   ತೂರಿ ಒಟ್ಟಿನಲ್ಲಿ   ಏನೇ ಪ್ರಯೋಗ  ಮಾಡಿದರೂ   ರುಚಿಯಾಗಿ  ಮಾಡಿ  ಬಡಸಿ ಅವ  ತಕರಾರಿಲ್ಲದ  ಹಾಗೆ  ತಿನ್ನುವಂತೆ ಮಾಡುವ  ನನ್ನ  ಸಾಹಸಕ್ಕೆ ನನ್ನ  ಬೆನ್ನನ್ನು  (ಬೆನ್ನು  ನೋವಿದ್ದರೂ )ನಾನೇ ತಟ್ಟಿಕೊಂಡಿದ್ದುಂಟು. !
ಇನ್ನು ಮೊದಲಿನಿಂದಲೂ  ಕಸದಿಂದ  ರಸ ತಯಾರಿಸುವುದು  ನನ್ನ ಇಷ್ಟದ  ಹವ್ಯಾಸ ಹಾಗೂ  ಅಚ್ಚುಮೆಚ್ಚಿನ ಆಸಕ್ತಿಗಳಲ್ಲೊಂದು . ಹಾಗಾಗಿ  ಹಳೆ  ಕುಕ್ಕರ್ ಗಾಸ್ಕೆಟ್ ,  ಐಸ್ಕ್ರೀಮ್  ಕಡ್ಡಿಗಳು ,  ಮುರಿದ ಬಳೆಗಳು , ಫ್ಯುಸಾದ ಬಲ್ಬಗಳು ,ಹಳೆ ಬಾಟಲಿಗಳು , ಇತ್ಯಾದಿ ನನ್ನ   ಮಿನಿ ಗೋಡೌನಿಗೆ  ಸೇರಿ  ನನ್ನ ಬಿಡುವಿನ  ವೇಳೆ ಹಾಗು  ಮೂಡಿಗನುಸಾರವಾಗಿ   ಅಲಂಕಾರಿಕ  ವಸ್ತುಗಳಾಗಿ ಹೊಸ  ರೂಪ  ಪಡೆದು ಕೊಳ್ಳುತ್ತಿದ್ದವು .
ಈಗಲೂ ಅದೇ  ಕಸ ಐ  ಮೀನ್ ಇಂತಹ ಹಳೆ ವಸ್ತುಗಳನ್ನು ಕಂಡರೆ ನನಗೆ  ಎಲ್ಲಿಲ್ಲದ ಪ್ರೀತಿ !,   ಆದರೀಗ ಅವುಗಳನು  ಕಲಾತ್ಮಕವಾಗಿ ಮಾರ್ಪಾಡು  ಮಾಡಲು ಮೊದಲಿದ್ದ  ಆಸಕ್ತಿ  ಹಾಗೂ ತಾಳ್ಮೆ ಆಗಾಗ ಕೈ ಕೊಡುತ್ತಿದ್ದವು . ಹಾಗಾಗಿ ಕಸದಿಂದ ರಸ ಮಾಡುವ ಬದಲು ಕಸವೇ ಹೆಚ್ಚಾದಾಗ  ನಮ್ಮನೆಯವರು ತಾಳ್ಮೆಯೂ ಕೈ  ಕೊಟ್ಟು ನನಗೆ ಗೊತ್ತಾಗದಂತೆ  ಸಾಮೂಹಿಕವಾಗಿ ಅವಕ್ಕೆಲ್ಲ   ಕಸದ ತೊಟ್ಟಿಯ  ದರ್ಶನ ಮಾಡಿಸಿ ಬಿಡುತ್ತಿದ್ದರು  .!
 ನಂತರದ ದಿನಗಳಲ್ಲಿ ಅವರ ಈ  ಘೋರ ಅಪರಾಧದ ಅರಿವಾದಾಗ  ಈ  ನಾರಿ ಕೊಂಚ  ಹೊತ್ತು  ಮುನಿದರೂ  ಮಾರಿಯಾಗದೆ  ಮತ್ತೆ   ಯಥಾ  ಪ್ರಕಾರ ನಾರು /ಕಸ ಸಂಗ್ರಹಣೆ ಶುರುವಿಟ್ಟುಕೊಳ್ಳುತ್ತಿದೆ  !
ನನ್ನ ಇದೆ ಬುದ್ಧಿ ನನ್ನ ಅಡುಗೆ  ರೀ ಮಿಕ್ಸ್ ಗೂ ತಳಕು  ಹಾಕಿಕೊಂಡಿದ್ದು   ಎಂದರೆ ತಪ್ಪಾಗಲಾರದು . ಹಾಗಾಗಿ ನಿಮ್ಮನ್ನು  ನನ್ನ ಇನ್ನೊಂದಿಷ್ಟು  ಫ್ಲಾಶ್ ಬ್ಯಾಕಿಗೆ ಕರೆದೊಯ್ಯಲೇಬೇಕು !
ಕೇಕ್  ತಯಾರಿಸುವುದನ್ನು ನಾನು  ಆ ದಿನಗಳಲ್ಲಿ  ಆಗಷ್ಟೇ ಹುರುಪಿನಿಂದ ಕಲಿಯುತ್ತಿದ್ದೆ .! ಒಂದೆರಡು ಸರಿ  ಬಂದು ,ಇನ್ನು ಕೆಲವು ಬಾರಿ   ಏನೋ   ವ್ಯತ್ಯಾಸವಾಗಿ ಕೇಕ್  ಆಗುವ ಬದಲು ಹಲ್ವಾ   ಆಗಿದ್ದೂ   ಇತ್ತು ! . ನನ್ನ ಕೇಕ್ ಕಂಡು ಯಾರೇ ಕೇಕೆ ಹಾಕಿ  ನಕ್ಕರೂ ನನ್ನ ಕೇಕ್  ಪ್ರಯೋಗಗಳಿಗೆ ಯಾವ ಬರವೂ  ಬಂದಿರಲ್ಲಿಲ್ಲ !.
  ಅಂತೆಯೇ  ಒಮ್ಮೆ  ಖರ್ಜೂರದ  ಕೇಕ್  ಮಾಡುವ   ಸಾಹಸಕ್ಕೆ ಕೈ  ಹಾಕಿದ್ದೆ ,ಮಾಡುವ  ವಿಧಾನವನ್ನು ಸರಿಯಾಗಿ ಅನುಸರಿಸಿದರೂ  ನನ್ನ
 ದುರಾದೃಷ್ಟಕ್ಕೆ  ಏನೋ  ಏರುಪೇರಾಗಿ
, ಕೇಕ್ ತಯಾರಾದಾಗ ಬಳಿಕ, ಮೇಲ್ನೋಟಕೆ   ಸುಂದರವಾಗಿ  ಕಂಡರೂ ನನ್ನ ಫೀಮೇಲ್ ನೋಟಕೆ ಎಲ್ಲವೂ ಒಂದೇ  ಏಟಿಗೆ ಅರಿವಾಗಿತ್ತು ! .ಅರ್ಥಾತ್   ನನ್ನ ಕೇಕ್ ತೋಪಾಗಿ  , ಮಧ್ಯ ಭಾಗ ಕಿಂಚಿತ್ತೂ  ಬೇಯದೆ ಹಸಿ  ಮುದ್ದೆಯಾಗಿ  ಮೌನದಿ  ಕುಳಿತು ಬಿಟ್ಟಿತ್ತು ..ಆಗ ತಕ್ಷಣ  ಜಾಗೃತವಾಗಿದ್ದೇ  ನನ್ನ ರೀಮಿಕ್ಸ್ ಬುದ್ಧಿ ! ಆ ಮುದ್ದೆಗೆ  ಒಂದಿಷ್ಟು ಹೊಸ  ಸಾಮಗ್ರಿಗಳನ್ನು  ಸೇರಿಸಿ ಸಿಹಿ ಹೂರಣವಾಗಿಸಿ , ಮಗ ಸ್ಕೂಲಿನಿಂದ ಬರುವಷ್ಟರಲ್ಲಿ   ರುಚಿಯಾದ  ಖರ್ಜೂರದ  ಹೋಳಿಗೆ ತಯಾರಿಸಿದ್ದೆ !. ,
“ ಅಮ್ಮ  ನೀನು  ಮುಂಜಾನೆ  ಖರ್ಜೂರ   ಕೇಕ್ ಎಂದಿದ್ದ್ಯಲ್ಲ  , ಹೋಳಿಗೆ  ಮಾಡಿದ್ದೇಕೆ “ ಎಂದವ  ತನ್ನ ನೆನಪಿನ ಶಕ್ತಿಯನ್ನು ಪ್ರದರ್ಶಿಸಿ ನನ್ನನ್ನು ಕೆಣಕಿ  ತಕರಾರು  ತೆಗೆದಾಗ   “ ಇಗೋ ಈ ಹೋಳಿಗೆ ಅದಕಿಂತಲೂ ರುಚಿ  ಇದೆ .. ತಿನ್ನು  ಮರಿ  ! ಮುಂದಿನ   ಬಾರಿ  ಖಂಡಿತ  ಕೇಕ್ ಮಾಡಿ  ಕೊಡುವೆ  “  ಎಂದು     ಹೋಳಿಗೆ ರುಚಿ  ತೋರಿಸಿದಾಗ  “ ಸೂಪರ್  ಅಮ್ಮ “ ಎಂದವನ  ಉದ್ಘಾರಕ್ಕೆ  ನನ್ನ ತಲೆ  ಸಂತಸದಿಂದ ಗಿರ್ರ್  ಎಂದ್ದಿದ್ದು   ಹೇಗೆ  ತಾನೇ   ಮರೆಯಲಿ ? !!
ನನ್ನ ಈ ರೀಮಿಕ್ಸ್ ಕಲೆಯ  ಫಲಾನುಭಾವಿಗಳಾದ  ನಮ್ಮ  ಮನೆಯವರೂ (ನನ್ನ )ಸಹವಾಸ ದೋಷದಿಂದ ಒಮ್ಮೊಮ್ಮೆ  ಸೂಪರ್  ಸುಪ್ರೀಂ ಐಡಿಯಗಳೊಂದಿಗೆ ನನಗೆ  ಸಾಥ್ ಕೊಟ್ಟಿದ್ದುಂಟು  ಎಂದರೆ ನೀವು  ಖಂಡಿತಾ   ನಂಬಲಿಕ್ಕಿಲ್ಲ !
ಒಮ್ಮೆ  ನನ್ನ ಪಾಕ ಪ್ರಯೋಗಾಲಯದಲ್ಲಿ  ನನ್ನ ಅಚ್ಚು  ಮೆಚ್ಚಿನ   ಮೈಸೂರ್  ಪಾಕ್ ಮಾಡುವಾಗ  ಅದು ಕೈ  ಕೊಟ್ಟು  ಕೊನೆಗೆ  ಮೈಸೂರ್ ಪಾಕ್  ಬರ್ಫಿ  ಆಗುವ  ಬದಲು  ಪುಡಿ ಪುಡಿಯಾಗಲು,  ನನ್ನ ಪೆಚ್ಚು  ಮುಖವನ್ನು ಕಂಡ ಇವರು “ ವಾಣಿ  ! ಯಾಕೆ  ಬೇಜಾರ್   ಮಾಡ್ಕೊತೀಯಾ   ? ಮತ್ತೆ   ಇದನ್ನೇ  ಮಿಕ್ಸಿ ಗೆ  ಹಾಕಿ   ನುಣ್ಣಗೆ  ಪುಡಿ ಮಾಡಿ ಬೇಸನ್  ಲಾಡು   ಮಾಡಿ  ಬಿಡು “   ಎಂದು  ರೀಮಿಕ್ಸ್  ಕಂ  ರೀ ಸೈಕಲ್ ಉಪಾಯವನ್ನೂ  ಕೊಟ್ಟು  ಧನ್ಯರಾಗಿದ್ದರು !
ಒಟ್ಟಿನಲ್ಲಿ   ನೀವೇನೇ ಅನ್ನಿ   ನನ್ನ   ಈ  ಪಾಕ ಪ್ರಯೋಗಗಳು ತಿನ್ನಲು  ರುಚಿಯೆನಿಸಿದಾಗ ನಮ್ಮವರು  ಮೆಚ್ಚಿ   ನನಗೆ  “ ರೀಮಿಕ್ಸ್  ರಾಣಿ “ ಎಂಬ ಬಿರುದು ಕೊಟ್ಟಾಗಲಿಂದಾ  ನನ್ನ  ಈ ಕಲೆಗೆ    ಉತ್ಸಾಹದ ಗರಿ  ಮೂಡಿ   ಒಂದು  ಬುಕ್ಕಾದರೂ   ಬರೆದುಬಿಡುವ   ಜೋಶ್  ಬಂದಿದೆ .  ಇದಕ್ಕೆ   ನಿಮ್ಮ  ಪ್ರೋತ್ಸಾಹವೂ    ಇದೆ  ತಾನೇ ?

ಆರತಿ  ಘಟಿಕಾರ್ 

No comments :

Post a Comment