Wednesday, May 13, 2015

ನನ್ನ ಶಾಪಿಂಗ್ ಫಜೀತಿ 
======================
ಯಾವುದೇ ವಸ್ತುವಿನ ಖರೀದಿ ಅದರಲ್ಲೂ ಬಟ್ಟೆ ಬರೆ ಶಾಪಿಂಗು ಎಂದರೆ ಬಹುತೇಕ ಮಹಿಳೆಯರು ಗಂಟೆ ಗಟ್ಟಲೆ ಸಮಯ ಕಳೆಯುವುದರಲ್ಲಿ ಮಹದಾನಂದ ಕಂಡುಕೊಳ್ಳುವುರು. ಇದು ಅವರ ಜನ್ಮ ಸಿದ್ದ ಹಕ್ಕಾ ಗಿರುವುದರಿಂದ ಯಾವ ಗಂಡು ಪ್ರಾಣಿಯೂ ಅವರ ಈ ಹಕ್ಕನ್ನು ವಿರೋಧಿಸ ಬಾರದು ಎಂಬುದು ನನ್ನ ಹೃದಯಾಳದ ಅಪೀಲು. ಈ ಕಾರ್ಯದಲ್ಲಿ ಅವರ ನಿಷ್ಠೆ , ಪ್ರಾಮಾಣಿಕತೆ ಒಂದು ಕಡೆಯಾದರೆ, ಆ ಸಮಯದಲ್ಲಿ ಸಮಯಪ್ರಜ್ಞೆ ಎಂಬ(ಚಿಲ್ಲರೆ) ವಿಷಯಕ್ಕೆ ತಲೆ ಕೆಡಸಿಕೊಳ್ಳದೆ ಅವರು ತೋರುವ ಏಕಾಗ್ರತೆ ಯಾವುದಕ್ಕೆ ಸಮ ನೀವೇ ಹೇಳಿ ?
ಇನ್ನು ನಾನೂ ಈ ಮೇಲೆ ಹೇಳಿದ ಗುಂಪಿನವಳೇ ,  ಆದ್ದರಿಂದ ನಾನೂ ನನ್ನ ಅರಿವೇ ಅಂಚಡಿ ಕೊಳ್ಳಲು ಹೋದಾಗ ಸಮಯದ ಬಗ್ಗೆ ಕಿಂಚಿತ್ತೂ ಯೋಚಿಸದೆ ಮನಕೊಪ್ಪುವ ಬಟ್ಟೆ ಖರೀದಿಸುವ ತನಕ ಆರಿಸಬೇಕು ಎನ್ನುವ ಸಿದ್ದಾಂತದವಳು.
ಸಾಮನ್ಯವಾಗಿ ನಮ್ಮ ಚೂಡಿದಾರ್ , ಸೀರೆ ಹೀಗೆ ಇತರ ಬಟ್ಟೆ ಖರೀದಿಗೆ ನಾವು ಅಂಗಡಿ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ ಆ ಸೇಲ್ಸ್ ಮೆನ್ನಿನ ತಾಳ್ಮೆ ಪರೀಕ್ಷಿಸದೆ ಬಿಡುವುದಿಲ್ಲ. ನಮ್ಮ ಮಾಮೂಲಿ ಪ್ರಶ್ನೆಗಳು “ ರೀ ಈ ಕಲರ್ ನಲ್ಲಿ ಬೇರೆ ಡಿಸೈನ್ ಇಲ್ವಾ ?, ಅಥವಾ ಈ ಡಿಸೈನ್ ನಲ್ಲಿ ಬೇರೆ ಕಲರಿದ್ರೆ ನೋಡಬಹುದಾಗಿತ್ತು “ ಎಂದು ಅವನ ತಲೆ ತಿಂದಾಗ ಆತನೂ ಪಾಪ ತನ್ನ ತಾಳ್ಮೆ ಯನ್ನು ರಬ್ಬರ್ ಬ್ಯಾಂಡಿನಂತೆ ಹಿಗ್ಗಿಸಿಕೊಂಡು ನಗುತ್ತಲೇ ನಮ್ಮುಂದೆ ರಾಶಿ ಬಟ್ಟೆ ಗಳನ್ನು ಪೇರೈಸುತ್ತಾನೆ. ಒಮ್ಮೊಮ್ಮೆ ಆ ಸೀರೆಗಳ ಗುಡ್ಡೆಯಲ್ಲಿ ನಾನೊಂದು ಕಡೆ ಎಳೆದರೆ ಇನ್ನೊಬ್ಬ ಮಹಿಳೆ ಆದೆ ಸೀರೆ ಯನ್ನು ಮತ್ತೊಂದು ಕಡೆಯಿಂದ ಎಳೆಯುತ್ತಿರುತ್ತಾರೆ. ಅಕಸ್ಮಾತಾಗಿ ಅವರ ಕೈಹಿಡಿತ ಜೋರಾಗಿ ಆ ಸೀರೆ ಅವರ ಕೈಸೇರಿ ಅದನ್ನಾಕೆ ಖರೀದಿಸಿಬಿಟ್ಟರಂತೂ ನಾನೇನೋ ಕಳೆದುಕೊಂಡ ಹಾಗೆ ಮತ್ತೆ ಆ ಸೇಲ್ಸ್ ಮೆನ್ನಿಗೆ “ ರೀ ಅದೇ ಸೀರೆ ಇನ್ನೊದು ಪೀಸ್ ಇಲ್ವಾ “ ಎಂದು ಘಾಬರಿಯಿಂದ ಕೇಳಲು “ ಅಯ್ಯೋ ಮೇಡಂ ಆ ಸೀರೆ ನಿಮಗೇ ಮೊದ್ಲು ತೋರಿಸಿದ್ನಲ್ಲಾ , ನೀವು ಇಷ್ಟ ಇಲ್ಲ ಅಂದ್ರಿ “ ಅಂದಾಗ ನನ್ನ ಮುಖ ಪೆಚ್ಚು !
ಇನ್ನು ರೆಡಿ ಮೇಡ್ ಚೂಡಿದಾರ್ , ಇಲ್ಲಾ ಬರಿ ಮಟೀರಿಯಲ್ ಕೊಳ್ಳವಾಗ ಅದು ಕಾಟಾನ್ ಆಗಿದ್ದರಂತೂ ಮಹಿಳಾ ಮಣಿಗಳ ಅನುಮಾನದಿಂದ ಕೇಳುವ ಸಾಮನ್ಯ ಪ್ರಶ್ನೆ “ ರೀ ಇದು shrink ಆಗತ್ತಾ ? ಗಾಢ ಬಣ್ಣ ಬೇರೆ , ಕಲರ್ ಹೋಗಲ್ಲ ತಾನೇ ?” ಇದೆ ರೀತಿ ನಾನೂ ಒಮ್ಮೆ ಕೇಳಿದಾಗ ಒಬ್ಬ ಕಿಲಾಡಿ ಸೇಲ್ಸ್ ಮೆನ್ನು “ ಇಲ್ಲ ಮೇಡಂ ಕಲರ್ ಎಲ್ಲೂ ಹೋಗಲ್ಲ ಬಕೆಟ್ ನಲ್ಲೆ ಇರತ್ತೆ “ ಎಂದು ಅವನ ಸಾಮನ್ಯ ಜ್ಞಾನ ಪರೀಕ್ಷಿಸಿದ ನನಗೆ ಅಸಾಮಾನ್ಯವಾಗಿ ಉತ್ತರಿಸಿದ್ದ.
ಇಲ್ಲಿ ದುಬೈ ನಗರಿಗೆ ಬಂದ ನಂತರ ನನ್ನ ಶಾಪಿಂಗ್ ಕೂಡ ವಿಸ್ತಾರಗೊಂಡಿದೆ . ಕೊಳ್ಳುವಿಕೆಯಲ್ಲಿ ಅಲ್ಲ , ಬದಲು ಆ ಕ್ರಿಯೆಯಲ್ಲಿ ಗಂಟೆ ಗಟ್ಟಲೆ ಸಮಯ ವ್ಯಯ ಮಾಡುವುದರಲ್ಲಷ್ಟೇ.  “ ಇಂದು ನನ್ನ ಬಟ್ಟೆ ಶಾಪಿಂಗಿದೆ “ ಎಂದು ನಾನೇನಾದರು ಬಾಯಿ ತಪ್ಪಿ ಅನೌನ್ಸ್ ಮಾಡಿದರಂತೂ ಗಂಡ ಮಕ್ಕಳ ಮುಖದಲ್ಲಿ ಘಾಬರಿ ಎದ್ದು ತೋರುತ್ತ ಒಮ್ಮಿಲೆ ಚಿಂತಾಕ್ರಾಂತರಾಗಿ ಬಿಡುತ್ತಾರೆ. ನನ್ನ ಮಕ್ಕಳು ಶಾಪಿಂಗ್ ಆದ ಬಳಿಕ ಅವರ ಅಚ್ಚುಮೆಚ್ಚಿನ ಪಿಜ್ಜಾ ತಿನ್ನುವ ಆಸೆಯನ್ನೂ ಕೈ ಬಿಟ್ಟು ಜಾರಿ ಕೊಳ್ಳಲು ಕಾರಣ ಹುಡುಕುವ ಸದ್ಭುದ್ದಿಯಲ್ಲಿ ತೊಡಗುತ್ತಾರೆ. ಇನ್ನು ತನ್ನ ಮೈ ಮೇಲೆ ಬಂದೆರುಗುವ ಆಪತ್ತಿಗೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಸಿದ್ದಗೊಳ್ಳುತ್ತಿರುವ ಪತಿಯ ಮುಖ ಭಾವ ಕಂಡಾಗ “ ಅರೆ ಇದ್ಯಕ್ಯಾಕೆ ಇಷ್ಟೊಂದು ಚಿಂತೆ ಮಾಡ್ತಾರೋ“ಎನ್ನುವುದು ನನ್ನ ಸಿಂಪಲ್ ತರ್ಕ ಅಷ್ಟೇ !
ಮೊದ ಮೊದಲು ಮಕ್ಕಳು ಗಂಡ ನನ್ನ ಶಾಪಿಂಗು ಪ್ರಕ್ರಿಯೆಯಲ್ಲಿ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದರು . ಆದರೆ ಎಷ್ಟು ವೇಳೆಯಾದರೂ ಅದು ಮುಗಿಯುವ ಸೂಚನೆ ಇಲ್ಲದೆ ಹಿಗ್ಗುತ್ತಲೇ ಹೋದಾಗ ಪತಿ ಪರಮೇಶ್ವರ ಹೊರ ನಡೆದು ನಮ್ಮ ಮಾಲ್ ನ ಮುಂಭಾಗದಲ್ಲಿ ಇರುವ body massage ಚೈರಿನಲ್ಲಿ ,chair man ಆಗಿ ಎರೆಡು ಧಿರಾಂ ಚಿಲ್ಲರೆ ಹಾಕಿ ಎರಡೆರಡು ಬಾರಿ ಮಸಾಜ್ ಮಾಡಿಸಿ ಕೊಂಡರೂ ನನ್ನ ಬಟ್ಟೆ ಶಾಪಿಂಗು ಮುಗಿದಿರುತ್ತಿರಲಿಲ್ಲ . ಅವರು ನನ್ನಸ್ಥಿಗತಿಗಳನ್ನು ನೋಡಲು ಒಳ ಬಂದಾಗ ನಾನು ೨ ಅಥವಾ ೩ ಚೂಡಿದಾರ ಒಟ್ಟಿಗೆ ಕೈಯಲ್ಲಿ ಹಿಡಿದು ಜೀವನದ ಮಹತ್ತರ ನಿರ್ಣಯವೊಂದನ್ನು ಕೈಗೊಳ್ಳುವ ಮುಖಭಾವದಿ . ಯಾವದನ್ನು ಆಯ್ಕೆ ಮಾಡಲಿ ಎಂಬ ಗೊಂದಲದಲ್ಲಿ ಇರುವುದನ್ನು ಕಂಡು “ ಅಯ್ಯೋ ಇನ್ನು ನಿನ್ನ ಖರೀದಿ ಮುಗಿದೇ ಇಲ್ವಾ “ ಎಂದು ಗಾಬರಿಗೊಂಡಾಗ ಆವುಗಳ ಆಯ್ಕೆಯಲ್ಲಿ ಅವರನ್ನು ಎಳೆದುಕೊಂಡು “ ರೀ ಇಲ್ಲಿರುವ ಸಾಕಷ್ಟು ಬಟ್ಟೆಗಳನ್ನೆಲ್ಲಾ ತಡಕಾಡಿ ಕೊನೆಗೆ ಇವೆರಡನ್ನು short list ಮಾಡಿದ್ದೀನಿ . ನೋಡಿ , ಇದರಲ್ಲಿ ನನಗ್ಯಾವುದು ಒಪ್ಪುತ್ತೆ ,ನೀವೇ ಹೇಳಿ , ನನಗೇನೋ ಎರಡು ಚೆನ್ನಾಗಿ ಕಾಣತ್ತೆ ,ಅದಕ್ಕೆ ಯಾವುದು ಆರಿಸಬೇಕು ಅನ್ನುವ ಗೊಂದಲದಿಂದ ಸ್ವಲ್ಪ ಲೇಟ ಆಯಿತು “ ಎಂದು ಸ್ವಲ್ಪವೂ ಬೇಸರವಿಲ್ಲದೆ ಪಟ್ಟ ಶ್ರಮದ ವೃತಾಂತವನ್ನು ಅರುಹಿದಾಗ ಇವರು ಕೈಜಾರುತ್ತುತ್ತಿರುವ ತಮ್ಮ ತಾಳ್ಮೆಯನ್ನು ಹೇಗೋ ತಿಣುಕಾಡಿ ಹಿಡಿದು ನಿಲ್ಲಿಸಿ “ನಿನಗೆ ಎರೆಡೂ ಡ್ರೆಸ್ ತುಂಬಾ ಚೆನ್ನಾಗಿ ಕಾಣತ್ತೆ, ಬೇಗ ಎರಡನ್ನೂ ಪ್ಯಾಕ್ ಮಾಡಿಸು “ ಎನ್ನುವ ಸೂಪರ್ ಉಪಾಯವನ್ನು ಹುಡಿಕಿ ನನ್ನನ್ನು ಹೊರಗೆ ಕರೆದುಕೊಂಡು ಕೊಂಡು ಬರುವಲ್ಲಿ ಸಪಲರಾಗುತ್ತಿದ್ದರು .
ಒಮ್ಮೊಮ್ಮೆ ನಾನಾರಿಸಿದ ಬಟ್ಟೆ ಆಯ್ಕೆ ಗೆ ನಾನೇ ಸಂತಸಗೊಂಡು ಯಾವುದು ಜಾಹಿರಾತಿನ ಟ್ಯಾಗ್ ಲೈನಿನಂತೆ “ yeh hai right choice baby “ ಅನ್ನುತ್ತಾ ಆ ಡ್ರೆಸ್ ಅನ್ನು ಪ್ರೀತಿಯಿಂದ ಎದೆಗವಚಿ ಕೊಂಡು ಮನೆಗೆ ಬಂದ ನಂತರ ಮನೆಯಲ್ಲೇ ಮತ್ತೊಮ್ಮೆ ಹಾಕಿನೋಡಲು ಅದರ ಮೇಲೆ ಸ್ವಲ್ಪವೂ ಕರುಣೆ ತೋರದೆ “ ಛೆ ಯಾಕೋ ಸರಿ ಅನ್ಸ್ತಿಲ್ಲಾ “ ಎಂದು ಪತಿ ದೇವರನ್ನೂ ಪರಿಪರಿಯಾಗಿ ಒಪ್ಪಿಸಿ ಅದನ್ನು ಮರುದಿನವೇ ಹೋಗಿ ಬದಲಾಯಿಸದ ಪ್ರಸಂಗಗಳೂ ಇವೆ . ಹಾಗಾಗಿ ಇವರು ನನ್ನ ಬಟ್ಟೆ ಆಯ್ಕೆಯ ನಂತರ “ ಇದು ಇಷ್ಟ ಆಗಿದೆ ಅಲ್ವಾ , ಫೈನಲ್ ತಾನೇ , ಇನ್ನು ಮತ್ತೆ ಬದಲಾಯಿಸೆ ಬೇಡ ಮಾರಾಯ್ತಿ “ ಎಂದು ನನ್ನಿಂದ ಭಾಷೆ ಪ್ರಮಾಣ ಗಳನ್ನು ತೆಗೆದು ಕೊಳ್ಳುವುದೊಂದು ಬಾಕಿ !
ಒಮ್ಮೊಮ್ಮೆ ನಾ ಆಯ್ಕೆ ಮಾಡಿದ ದಿರಸು ನನಗೆ ಒಪ್ಪುವುದೋ ಇಲ್ಲವೋ ಎಂದು ಅಲ್ಲಿರುವ trail room ನುಗ್ಗುವ ಮುನ್ನ ಇವರು ಸುಮ್ಮನೆ ನಿಂತು ಕಾಲಹರಣ ಮಾಡುವ ಬದಲಿಗೆ ಅಲ್ಲಿಗೆ ಬರಲು ಹೇಳಿರುತ್ತೇನೆ .ಇವರ ಅಭಿಪ್ರಾಯವೂ ನನಗೆ ಮುಖ್ಯವಲ್ಲವೆ ? ಸರಿ ಅದೇ ಕೆಲಸಕ್ಕಾಗಿ ಕೆಲವು ಗಂಡಂದಿರು ಆಗಲೇ ಅಲ್ಲಿ ಜಮಾಯಿಸಿರುತ್ತಾರೆ ,ಬಾಗಿಲ ಹೊರಗೆ ತಮ್ಮ ಕಂದಮ್ಮಗಳನ್ನು ಎತ್ತಿಕೊಂಡೋ, ಪ್ರಾಂ ನಲ್ಲಿ ಸುಧಾರಿಸುತ್ತಲೋ ಕಾಲಕಳೆಯುವುದಲ್ಲದೆ ತಮ್ಮ ತುಂಟ ಮಕ್ಕಳ ಮೇಲೊಂದು ಕಣ್ಣಿಡುತ್ತಲೇ ಒಳಗೆ ರೂಪಾಂತರ ಗೊಳ್ಳಲು ಸೇರಿಕೊಂಡ ಮಡದಿಯ ಸಲುವಾಗಿ ಸಹನೆಯಿಂದ ಕಾಯುವ ಗಂಡಂದಿರು , ಸರಿ ಯಾವ ರೂಮಿನ ಬಾಗಿಲು ತೆರೆದರೂ ಆಯಿತು , ಯಾವ ಪಕ್ಷಪಾತವಿಲ್ಲದೆ ಬಂದವಳನ್ನು ಕಣ್ಣುತುಂಬಾ ನೋಡುವಾಗ ಅವರಿಗೂ ಟೈಮ್ ಪಾಸ್!
ಇವರು ಒಮ್ಮೊಮ್ಮೆ ನಾ ಹಾಕಿಕೊಂಡು ಬಂದ ಧಿರಸುಗಳನ್ನೆಲ್ಲಾ, ಬಾಗಿಲ ಮರೆಯಿಂದಲೇ ಇಣುಕಿ ನೋಡಿ “ ಚೆನ್ನಾಗಿಲ್ಲ “ ಎಂದರೆ ಪಾಪ ಅವಕ್ಕೆ ಬೇಸರವಾದೀತು ಎಂಬ ನಿಲುವಿನಲ್ಲಿ ಎಲ್ಲವನ್ನು ಪಾಸ್ ಮಾಡಿದಾಗ ನಾನು ರೇಗಿ ನನಗಿಷ್ಟ ಬಂದದ್ದನ್ನು ಆಯ್ಕೆ ಮಾಡಿ ಹೊರ ನಡೆಯುತ್ತೇನೆ .
ಅಂದೊಮ್ಮೆ ನಮ್ಮ ವಾರದ ರಜೆಯ ನಿಮಿತ್ತ ನನ್ನ ಅಡುಗೆಗೆ ವಿರಾಮವನ್ನು ನೀಡಿ ಹೊರಗಡೆಯೇ ಹೊಟ್ಟೆ ಪೂಜೆ ಮುಗಿಸಿ ನಾನಿವರಿಗೆ “ ರೀ ಮುಂದೆ lulu hyper market ನಲ್ಲಿ ನನ್ನ ಬಟ್ಟೆ ಶಾಪಿಂಗ್ ಇದೆ ,ಸ್ವಲ್ಪ ಹೊತ್ತು ಅಷ್ಟೇ ಮುಗಿಸಿ ಹೊರಟು ಬಿಡೋಣ “ ಅಂದಾಗ ಆಷ್ಟೂ ಹೊತ್ತು ಕಾರಿನಲ್ಲಿ ನಗಾಡಿಕೊಂಡಿದ್ದ ಮಕ್ಕಳಿಬ್ಬರೂ ಗಂಭೀರವದನರಾದರು, ಮುಖಭಾವದಲ್ಲಿ ಏನೋ ಬದಲಾವಣೆ . ಅಣ್ಣ ತಮ್ಮನ್ದಿರಿಬ್ಬರೂ ಏನೋ ಕಣ್ಣ ಸನ್ನೆಯೆಲ್ಲೇ ಮಹತ್ವದ ನಿರ್ಧಾರ ಕೈಗೊಂಡು “ ಅಪ್ಪ ಪ್ಲೀಜ್ ನಮ್ಮನ್ನು ಇಲ್ಲೇ ಇಳಿಸಿ ಬಿಡು ನಾವು ಟ್ಯಾಕ್ಸಿ ನೋ ಬಸ್ಸೋ ಹಿಡಿದು ಮನೆಗೋಕ್ತೀವಿ“ ಒಕ್ಕೊರಲಿನಿಂದ ಕೂಗಿದರು .  ನನಗೂ ರೇಗಿಹೋಯ್ತು “ ಆಹಾ ಎಷ್ಟು ಸ್ವಾರ್ಥಿಗಳೋ ನೀವಿಬ್ರು ,ನಿಮ್ಮ ಗೇಮು , ಸಿಡಿ ಗಳು ಮಣ್ಣು ಮಸಿ ಇದ್ದಾಗಲೆಲ್ಲಾ ನಮ್ಮ ಜೊತೆ ಬರ್ತೀರಾ ಅಲ್ಲ “ ನನ್ನ ರೇಗಾಟ ಅವರ ಮೇಲೆ ಕಿಂಚಿತ್ ಪ್ರಭಾವವೂ ಬೀಳದೆ , ಅವರ ತಂದೆ ಅವರಿಗೆ ಅನುಮತಿ ಕೊಟ್ಟಾ ಕ್ಷಣ ಪಂಜರದೊಳಗಿನ ಗಿಣಿಯನ್ನು ಸ್ವತಂತ್ರವಾಗಿ ಹಾರಿ ಬಿಟ್ಟಂತೆ ಸಂತಸದಿಂದ “ ಬೈ ಅಮ್ಮ “ ಎನ್ನುತ್ತಾ ಧಾಪುಗಾಲಿಕ್ಕಿದರು.
ಅವರು ಹೋದ ದಾರಿಯನ್ನೇ “ ನನಗಾ ಭಾಗ್ಯ ವಿಲ್ಲವೆ ? “ ಎನ್ನುವ ಮುಖಭಾವದಿಂದ ನಿರುಕಿಸುತ್ತಿದ್ದ ಪತಿಯ ಕಡೆಗೆ ತಿರುಗಿ “ ಆಹಾ ನೋಡಿದ್ರೆನ್ರಿ ಇಬ್ಬರೂ ಹೇಗೆ ಓಡಿದರೂ -ಅಂತ , ಅವರ ಖರೀದಿಗೆ ನಾನು ಎಷ್ಟು ಉತ್ಸಾಹ ತೋರಿಸಲ್ವ , ಅದು ಬಿಡಿ ನಿಮ್ಮ ಬಟ್ಟೆ- ಬರೆ ಖರೀದಿ ಇದ್ದಾಗ ಎಷು ಆಸಕ್ತಿ ಯಂದ ಹೆಲ್ಪ್ ಮಾಡಲ್ವಾ “ ಎಂದು ನನ್ನ ಸೇವೆಯನ್ನು ಅವರಿಗೆ ನೆನಪು ಮಾಡಿಕೊಟ್ಟಾಗ ,ಗಂಡ ತಕ್ಷಣ ಉತ್ತರದ ಕಡೆ ಅಂದರೆ ನನ್ನ ಕಡೆ ತಿರುಗಿ ಉತ್ತರ ಮುಖಿಯಾದರು “ಅಯ್ಯೋ ನೀನಿಲ್ಲದೆ ನನ್ನ ಶಾಪಿಂಗ್ ಸಾಧ್ಯವೇ ? ನಾನು ಕಾಲು ಘಂಟೆಯಲ್ಲೇ ಮುಗಿಸೋಣ ಅಂದು ಕೊಂಡರೂ ನೀನು ಬಿಡ ಬೇಕಲ್ಲ,  ನಾ ಆರಿಸಿದ ಶರ್ಟು , ಪ್ಯಾಂಟು , ಟೀ ಶರ್ಟುಗಳಿಗೆಲ್ಲಾ ನಿನ್ನ expert commentry ಇರಲೇಬೇಕು , ಅಯ್ಯೋ ಈ ಬಣ್ಣದ್ದು ನಿಮ್ಮ ಹತ್ತಿರ ಇನ್ನು ಮೂರಿದೆ, ಈ ಚೆಕ್ಸು ನಿಮಗೆ ಒಪ್ಪಲ್ಲ , ಅಯ್ಯೋ ಈ ಶರ್ಟ್ನಲ್ಲಿ ನಿಮ್ಮ ಹೊಟ್ಟೆ ತುಂಬಾ ಕಾಣಸತ್ತೆ , ಒಂದೇ ಎರಡೇ  “ ಎಂದು ತಮ್ಮ ಅಂತರಾಳವನ್ನು ನನ್ನೆದುರಿಗೆ ಅಪ್ಪಿ ತಪ್ಪಿ ತೋಡಿಕೊಂಡಾಗ ನಾನು ಕ್ಷಣ ಕಾಲ ಕಕ್ಕಾಬಿಕ್ಕಿ ಯಾದೆ , ಆದರು ಸಾವರಿಸಿಕೊಂಡು “ ಆಹಾ ನೀವು ಮಹಾ selfish , ಕಣ್ರೀ , ನನ್ನ ಆಯ್ಕೆ ತುಂಬಾ ಚೆನ್ನಾಗಿದೆ ಅಂತ ನಾನು ಆರಿಸಿದ ಶರ್ಟ್ ತಾನೇ ನೀವು ಹಾಕೋದು , ಮತ್ತೆ …” ನನ್ನ ಮಾತನ್ನು ಅರ್ಧಕ್ಕೋ , ಮುಕ್ಕಾಲಿಗೋ ತುಂಡರಿಸಿ ಇವರು ನಗುತ್ತಾ “ ಆದರೆ ಏನೇ ಅನ್ನು ನೀನಿಲ್ಲದ್ದಿದ್ರೆ ನನಗೆ ಯಾವ್ದು ತೊಗೋಬೇಕು ಯಾವ್ದು ಬಿಡಬೇಕು ಅಂತ ಒಂಥರಾ confusion ಕಣೆ “ ಎಂದು ನನ್ನ ನಿಸ್ವಾರ್ಥ ಸಹಾಯವನ್ನು ಸ್ಮರಸಿಕೊಂಡರು .
ಆಗ ನಾನು ಹಲ್ಕಿರಿಯುತ್ತಾ “ ನೋಡಿ ಮತ್ತೆ ಈಗ ನನ್ನ ಚೂಡಿದಾರ್ ಆಯ್ಕೆಯಲಿ ನನ್ನ ಹಾಗೆ ನೀವು ಕೂಡಾ ನನಗೆ ಹೆಲ್ಪ್ ಮಾಡ್ಬೇಕು ಆಯ್ತಾ “ ಎಂದು ಪ್ರೀತಿಯಿಂದ ಇವರ ಕೈ ಹಿಡಿದು ಮಾಲ್ ನತ್ತ ನಡೆದೆ .

  • facebookಅವಧಿ   ಹಾಗು ಅಪರಂಜಿ  ಆನ್ಲೈನ್  ಪತ್ರಿಕೆಯಲ್ಲಿ  ಪ್ರಕಟವಾದ  ಲೇಖನ 

1 comment :

  1. ನಮ್ಮ ಮನೆಯಲೊಂದು ಉಪಾಯ ಕಂಡು ಹಿಡಿದಿದ್ದೇವೆ.
    ಶಾಪಿಂಗ್ ಹೋಗಲು ಮನೆಯಾಕೆ...
    ಹೊರಗಡೆ ಚಾಟ್ಸ್ ಹತ್ರ ನನ್ನ ಕಾಯುವಿಕೆ!

    ReplyDelete