Tuesday, May 19, 2015

ಸಾಗುತಿಹದು ಎಲ್ಲೋ ಏನೋ



ಸಾಗುತಿಹುದು ಎಲ್ಲೋ ಏನೋ 
ಹಿಂದುರಿಗಿ ನೋಡದ ಬದುಕು 
ಮನ ಹುಡುಕುತಿರೆ ಇಂದಿಗೂ 
ಸಿರಿ ಅರ್ಥಗಳ ಬೆಳಕು 

ಬಯಕೆ ಸಾಗರ ವಿಶಾಲ ಹರಿವು 
ಮೋಹದಾಚೆಗಿದೆ ತೆನೆಯು 
ಹಚ್ಚಿಟ್ಟ ಒಲವ ಕಾಣದುದಕೆ
ಬರಿದಾಗಿದೆ ಬಿರಿದೆದೆಯು 

ಮನಸು ಮನಸುಗಳ ದೂರ ಯಾನಕೆ 
ಕೊನೆಯಾಗಲಿ ಅಹಮಿನ ನೆರವು 
ಹೊಂದಿಕೆಯ ಹೊದಿಕೆ ಜಾರುತಲಿರೆ 
ಸುಪ್ಪತ್ತಿಗೆಯಲೂ ಹೊರಳಾಡುತಿದೆ ಕೊರಗು 

ಕ್ಷಮೆಯ ಭಾವವಿದೆ  ಹೊಸಿಲ ಬಳಿ
ಬರಲಿಲ್ಲವೇಕೋ ಮನೆ ಒಳಗೂ 
ಮೌನದೆದೆಯ ಮೀಟಿ ನಗಲಿ 
ಮುಗ್ಧ ಮಗುವ ಹೂ ನಗೆಯು 

ಹಸಿರು ಪ್ರೀತಿ ಸ್ನೇಹ ಮರುಕ 
ತೇರನ್ನೆಳೆಯಲಿ ಬದುಕು 
ಸಾಲು ಹಣತೆ ದೀಪ ಬೆಳಗಲಿ 
ಭವ ಬಂಧನದಾ ಎದೆಗೂ  .

No comments :

Post a Comment