Wednesday, May 13, 2015

ದುಬೈ ಆಫೀಸಿನಲ್ಲಿ ಹಾಸ್ಯದ ಘ(ಗು)ಳಿಗೆಗಳು 
==========================================

ನಮ್ಮ ಕಂಪನಿಯ ಮುಖ್ಯಸ್ತರು ಲೋಕಲ್ಲು , ಅರ್ಥಾತ್ ಸಂಯುಕ್ತ ಅರಬ್ ಸಂಸ್ಥಾನದವರೇ. ಆಗರ್ಭ ಶ್ರೀಮಂತ ಶೇಕ್ ,  ಆರಡಿಗಿಂತಲೂ ಎತ್ತರದ ಅಜಾನಬಾಹು ವ್ಯಕ್ತಿ . ಇನ್ನು ಅವರ ಹೆಸರೂ ಕೂಡ ಅವರಷ್ಟೇ ಉದ್ದ , ಹೀಗಾಗಿ ನಾನು ಅವರ ರೈಲ್ವೆ ಬೋಗಿಯಂತಹ ಹೆಸರಿನಲ್ಲಿ ಕೊನೆಯ ಒಂದು ಹೆಸರನ್ನು ಮಾತ್ರ ನೆನಪಿಟ್ಟು ಕೊಂಡಿದ್ದೆ ! ಸದಾ ಅವರು ಹಾಲ್ಬಿಳುಪಿನ ಅರಬ್ ಪೋಷಾಕ್ ಆದ “ಕಂದೂರಾ “ ಧರಸಿ ಗಂಬೀರವಾಗಿ ಗತ್ತಿನಿಂದ ನಡೆದು ಕಚೇರಿಯೊಳಗೆ ಬರುತ್ತಿದ್ದರು . ಹೇಗಾಗಿ ನಿತ್ಯವೂ ಆ ದಿರಸಿನಲ್ಲೇ ಅವರನ್ನು ಕಂಡ ನನಗೆ ಎಂದಾದರೊಮ್ಮೆಅವರು ಪ್ಯಾಂಟ್ ಶರ್ಟಿನಲ್ಲಿ ಬಂದಾಗ ಒಮ್ಮೆ ನಾನವರ ಗುರುತು ಹಿಡಿಯದೆ ಯಾರೋ ಅಂದುಕೊಂಡು ಶುಭೋದಯಾ ಕೂಡ ತಿಳಿಸದೆ ಸುಮ್ಮನಾಗಿದ್ದೆ. ಇನ್ನು , ಅವರು ಬರುವಿಕೆಯ ಮುನ್ಸೂಚನೆ ಕೊಡುತ್ತಿದ್ದದ್ದು ಅವರು ಹಾಕುತ್ತಿದ್ದ ಸೆಂಟಿನ ಘಮ ಘಮಿಸುವ ಪರಿಮಳ , ಅದು ಅವರಿಗಿಂತಲೂ ಮುಂಚೆ ನಮ್ಮ ಮೂಗಿಗೆ ಎಂಟ್ರಿ ಕೊಟ್ಟು ನಮ್ಮನ್ನೂ ಒಂದು ಕ್ಷಣ ಆ ಪರಿಮಳದ ಗುಂಗಿನಲ್ಲಿ ತೇಲಾಡಿಸುತ್ತಿತ್ತು . ಸಧ್ಯ ನಾವುಗಳು ಅದೇ ಸ್ಥಿತಿಯಲ್ಲಿರದೆ ಎಚ್ಚೆತ್ತು ಕೊಂಡು ಮರುಕ್ಷಣವೇ ಜಾಗೃತರಾಗುತ್ತಿದ್ದೆವು.  ಅರಬ ಶೇಖ ಎಂದಮೇಲೆ ಕೇಳಬೇಕೆ ? ಅವರ ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆ , ಬಂದ ಮಕ್ಕಳಿಗೆಲ್ಲ ಬೆಲೆ ಬಾಳುವ ಆಟಿಕೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದು ಹೆಚ್ಚುಗಾರಿಕೆಯಲ್ಲ ಬಿಡಿ , ಆದರೆ ಅದರೊಂದಿಗೆ ಎಲ್ಲ ಮಕ್ಕಳಿಗೂಒಂದೊಂದು ಚಿನ್ನದ ಚೈನು ಕೂಡ ಅದರೊಂದಿಗೆ ಕೊಟ್ಟಿದ್ದರು ಎಂದು ,ಒಮ್ಮೆ ನನ್ನ ಅರಬ್ ಸ್ನೇಹಿತರು ಹೇಳಿದಾಗ ನಾನು ಕಣ್ಣರಳಿಸಿ ಆಶ್ಚರ್ಯ ಪಟ್ಟಿದ್ದೆ.

ಅವರ ಗಾಂಭೀರ್ಯ ತುಂಬಿದ ನಡೆ /ನುಡಿಗಳು ನಮ್ಮೆಲ್ಲರಲ್ಲೂ ಅವರ ಬಗ್ಗೆ ಹೆಚ್ಚಿನ ಗೌರವ ಭಾವನೆಗಳನ್ನು ಮೂಡಿಸುತ್ತಿತ್ತು . ಆದರೆ ಅವರು ಹೀಗೆ ಗಂಬೀರವಾಗಿ ನಡೆದುಕೊಂಡು ಕಚೇರಿಗೆ ಬರುತ್ತಿದ್ದದ್ದು ಬರೀ ವಾರಕ್ಕೆರಡು ಅಥವಾ ಮೂರು ದಿನಗಳಷ್ಟೇ.  ಏನಾದರೂ ಮೀಟಂಗು ಇದ್ದಾಗ , ಇಲ್ಲವೇ ಯಾವುದಾದರೂ ಕೆಲವು ಮುಖ್ಯ ಪತ್ರಗಳಿಗೆ ಸಹಿ ಮಾಡಬೇಕಿದ್ದಾಗ ಮಾತ್ರ.
ಏನೇ ಆಗಲಿ ನಾವು ಭಾರತೀಯರು ಯಾವುದೇ ಕಷ್ಟಕರ ಹೆಸರನ್ನು ಸರಾಗವಾಗಿ ಹೇಳುತ್ತೇವೆ , ಆದರೆ ನಮ್ಮ ಹೆಸರಗಳು ಮಾತ್ರ ಇವರುಗಳ ಬಾಯಲ್ಲಿ  ,ಹಲ್ಲಲ್ಲಿ ಸಿಕ್ಕಿಹಾಕಿಕೊಂಡು  ಚಿಂದಿ ಚಿತ್ರಾನ್ನ ಆಗುತ್ತಿದ್ದದ್ದು ಮಾಮೂಲು .  ಅಂಜನ್ ಎನ್ನುವ ಕಾಂಟ್ರಾಕ್ಟರ್ ಆಗಾಗ ನಮ್ಮ ಕಚೇರಿಗೆ ಬರುತ್ತಿದ್ದರು , ಅವನ ಹೆಸರು ಅಜಾನ್ ( azaan ) ಆಗಿತ್ತು .ಇನ್ನು  ಅಕೌಂಟ್ಟೆಂಟ್  ಅಂಜಲಿ  ಮೇಡಂ  ಅಜಾಲಿ  ಆದರೆ   ಪ್ರಶಾಂತ್ ಪಾಪ ಬರಶಾದ್ ಆಗಿದ್ದ !  ಆದರೂ ಬಹಳ ಮಂದಿ ತಮ್ಮ ಹೊಸ ಹೆಸರಿಗೆ ಒಗ್ಗಿ ಕೊಂಡು ಬಿಟ್ಟಿದ್ದರು.


 ನಮ್ಮ ಕಚೇರಿಯಲ್ಲಿ ಲೆಬಿನಾನ್  ದೇಶದ  ಪ್ರಾಜೆಕ್ಟ್ ಮ್ಯಾನೇಜರ್  ನನ್ನನ್ನು ಸಂಭೋದಿಸುವಾಗ ನನ್ನ ಹೆಸರನ್ನು ಅರಾ….ತಿ ಎಂದು ರ ಅಕ್ಷರವನ್ನು ಹೇಗೆ ರಬ್ಬರ್ ಬ್ಯಾಂಡಿನಂತೆ ಎಳೆಯುತ್ತಿದ್ದರು ಅಂದರೆ   ಅದೇ ಸಮಯಕ್ಕೆ   ಅವರ  ಬಾಯಿಗೆ ಒಂದು  ಲಾಡು  ಸಲೀಸಾಗಿ ಹಾಕಬಹುದಾಗಿತ್ತು ! ,

  ನಮ್ಮ ಹೆಸರುಗಳು  ಇವರ ಬಾಯಲ್ಲಿ ಸ್ಪ್ರಿಂಗಿನಂತೆ ಹೇಗೆ  ತಿರುಚಿಕೊಳ್ಳುತ್ತಿದ್ದವು ಎಂಬುದಕ್ಕೆ ಇನ್ನೊಂದು ಉದಾಹರಣೆ . ನಮ್ಮ ಕಚೇರಿಯಯಲ್ಲಿ ಆಫೀಸ್ ಬಾಯ್ ಯಾಗಿ ಒಬ್ಬ ನೇಪಾಳಿ ಹುಡುಗನಿದ್ದ . ಕಚೇರಿಯ ಸಣ್ಣ ಪುಟ್ಟ ಕೆಲಸಗಳು , ಹಾಗು ನಮ್ಮ ಚಿಕ್ಕ ಚೊಕ್ಕ ಅಡುಗೆ ಕೋಣೆ ಯಲ್ಲಿ ಎಲ್ಲರಿಗೂ ಅವರ ಬೇಡಿಕೆಯಂತೆ ಬ್ಲಾಕ್ ಟೀ , ಗ್ರೀನ್ ಟೀ , ಟರ್ಕಿಷ ಕಾಫ್ಫೀ , ನಮ್ಮ ಚೀನೀ ಮೇಡಂ ಗೆ ಅವರೇ ಚೀನಾ ದಿಂದ ತಂದ ಎಂತದ್ದೂ ಸ್ತ್ರಾಂಗ್ ವಾಸನೆಯುಳ್ಳ ಛಾಯ್ ಹೀಗೆ ಮಾಡಿಕೊಂಡಿದ್ದ . ನಮ್ಮ ಸಹದ್ಯೋಗಿಗಳು ಕೆಲವರು ಅವನನ್ನು ಕಿರಬ ಎಂದು ಇನ್ನಿತರು ಕುರುಬ ಎಂದು ಕರೆಯುತ್ತಿದ್ದರು , ಈ ಹೆಸರೇಕೋ ನನಗೆ ಸ್ವಲ್ಪ ವಿಚಿತ್ರವೆನಿಸಿ “ ನಿನ್ನ ನಿಜವಾದ ಹೆಸರೆನಪ್ಪ “ ಎಂದೆ . “ ಮೇಡಂ ನನ್ನ ಹೆಸರು ಕೃಪಾ ಅಂತ , ಇವರುಗಳು ಬಾಯಲ್ಲಿ ಸಿಕ್ಕು ಹೀಗಾಗಿದೆ “ ಅವನೂ ನಗುತ್ತ ಹೇಳಿದಾಗ ಸದ್ಯ ನನ್ನ ಹೆಸರನ್ನು ಇಷ್ಟೊಂದು ವಕ್ರವಾಗಿಸಿಲ್ಲವಲ್ಲ ಎಂದು ಸಮಾಧಾನ ತಂದುಕೊಂಡೆ.  ಆದರೆ ನಮ್ಮ ಆಫೀಸ್ಸಿನ PRO ಪ್ಯಾಲೆಸ್ಟೈನ್ ದೇಶದವನಾದ ಅಬ್ದುಲ್ ಬಾಸಿತ್ ಗೆ ನನ್ನ ಹೆಸರು ಬಾಯಲ್ಲಿ ತಿರಗುತ್ತಲೇ ಇರಲಿಲ್ಲಾ . ಹಾಗಾಗಿ ನನ್ನ ಪತಿಯ ಹೆಸರು ತಿಳಿದುಕೊಂಡು ನನ್ನನ್ನು ರಾ…ವಿ ಮೇಡಂ ಎಂದೆ ಕರೆಯುತ್ತಿದ್ದ ! (ರವಿ ಹೆಸರಿನಲ್ಲೂ ರಾ ಅಕ್ಷರವನ್ನು ತನ್ನೊರಿನ ತನಕ ಎಳೆಯುವುದು ಬಿಟ್ಟಿರಲಿಲ್ಲ )

ಇನ್ನು ಸಣ್ಣ ಪ್ರಾಯದವನು . ಆದರೆ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರಿಂದ ಆಗಲೇ ಮೂರು ಹೆಣ್ಣು ಮಕ್ಕಳ ತಂದೆ ಯಾಗಿದ್ದ . ಅವುಗಳು ನೋಡಲು ಥೇಟ್ ಮುದ್ದಾದ ಬಾರ್ಬಿ ಬೊಂಬೆಗಳು. ಎಂದಾದರು ಕಚೇರಿಗೆ ಆ ಮಕ್ಕಳನ್ನು ಕರೆ ತಂದಾಗ ನಾನಂತೂ ಮುದ್ದಾಡದೆ ಬಿಡುತ್ತಿರಲಿಲ್ಲ , ಆಗೆಲ್ಲಾ “ ರಾ…ವಿ ಮೇಡಂ , ಇವರಲ್ಲಿ ಯಾರನ್ನಾದರು ನಿಮ್ಮ ಸೊಸೆ ಮಾಡಿಕೊಂಡು ಬಿಡಿ , ಈಗಲೇ ಬೇಕಿದ್ದರೆ ನಾನು ಮಾತು ಕೊಟ್ಟ ಬಿಡ್ತೀನಿ ,ಅವಳನ್ನು ನೋಡುವ ನೆಪದಲ್ಲಿ ನಾನು ಭಾರತಕ್ಕೆ ಬಂದು ಇದ್ಬೀಡ್ತೀನಿ “ ಎಂದು ಆಗಾಗ ನನ್ನನ್ನು ಕಿಚಾಯಿಸುತ್ತಿದ್ದ , ಸಧ್ಯ ನನಗೆ, ನನ್ನ ಭಾವಿ ಅರಬ್ ಸೊಸೆ ಯನ್ನು ಕಲ್ಪಿಸಿಕೊಂಡು ನಗು ಬರದೆ ಇರುತ್ತಿರಲಿಲ್ಲ.


ನಮ್ಮ ಆಫೀಸ್ಸಿನ estimation ಡಿಪಾರ್ಟ್ಮೆಂಟ್ ನಲ್ಲಿದ್ದ ಚೀನಾ ಮೇಡಂ ಗೆ ನಾನು ಸಸ್ಯ ಹಾರಿ ಎಂಬದು ತಿಳಿದಿತ್ತು . ನಾನು ಅವರೊಂದಿಗೆ ಮಧ್ಯಾನದ ಊಟ ಮಾಡಲು ಅಪ್ಪಿ ತಪ್ಪಿಯೂ ಕುಳಿತು ಕೊಳ್ಳುತ್ತಿರಲ್ಲಿಲ್ಲ.  ಕಾರಣ ಚೀನಾದಲ್ಲಿ ಹಾವು , ಕಪ್ಪೆ ಚೇಳು … ಎಲ್ಲವನ್ನು ತಿಂತಾರೆ ಎಂದು ಒಮ್ಮೆ ಅವರ ಬಾಯಿಂದಲೇ ಕೇಳಿದ್ದರಿಂದ.  ಅವತ್ತಿನ ಮಧ್ಯಾನದ ಊಟಕ್ಕೆ ಕಪ್ಪೆ ಬೋಂಡಾನೋ , ಅಥವಾ ಹಾವಿನ ಸೂಪ್ ತಂದಿರಬಹುದೇ ಎಂಬ ಅನುಮಾನವಷ್ಟೇ! ಆದರೆ ಅವರು ತಾವು ಅದ್ಯಾವುದನ್ನೂ ತಿನ್ನುವುದಿಲ್ಲಾ ಎಂದು ನನಗೆ ಸ್ಪಷ್ಟವಾಗಿ ತಿಳಿಸಿದ್ದರು. ಒಮ್ಮೆ ಅವರು ತಮ್ಮ ಲಂಚ್ ಬಾಕ್ಸಿನಿಂದ ಏನ್ನನ್ನೋ ಒಂದು ಬೌಲ್ ಗೆ ಹಾಕಿ ಕೊಡುತ್ತ ನನ್ನ ಮುಂದೆ ಹಿಡಿದರು .ನಾನು ಅನುಮಾನಿಸಿದಾಗ “ ಅರ್ತಿ ಇದು ವೆಜ್ ಮಂಚೂರಿಯನ್ ಬಾಲ್ಸ್ “ ಪರವಾಗಿಲ್ಲ ತಿನ್ನು ಎಂದು ಮುಗುಳ್ನಕ್ಕಾಗ .. ಆ ಕ್ಷಣಕ್ಕೆ ನನಗೆ ಘಾಬರಿ ಮತ್ತು ಅನುಮಾನ! ಸರಿ ಅವರು ಆ ಕಡೆ ತಿರುಗಿದಾಗ ಆ ಮನ್ಚೂರಿಯನ್ನು ಪರೀಕ್ಷಕ ದೃಷ್ಟಿ ಯಿಂದ ನೋಡುತ್ತಾ ಅದರ ಪೋಸ್ಟ್ ಮಾರ್ಟಂ ಮಾಡಿ, ಅದರೊಳಗೆ ಕಾಬ್ಬೆಜು ಕ್ಯಾರೆಟ್ ಇರುವುದನ್ನು ಖಚಿತ ಪಡಿಸಿಕೊಂಡು ನಿರಾಳವಾಗಿ ಬಾಯಿಗಿಟ್ಟೆ!

ನಾನು ಈ ಹಿಂದೆ ನಮ್ಮ ಲೆಬನೀಸ್ (ಲೆಬಿನಾನ್ ದೇಶದ) ಪ್ರಾಜೆಕ್ಟ್ ಮ್ಯಾನೇಜರ್ ಅವರ ಪರಿಚಯ ಮಾಡಿಕೊಟ್ಟಿದ್ದೆ. ಅವರ ಗುಣ ಸ್ವಭಾವಗಳನ್ನೂ ಹೇಳಿಬಿಡ್ತ್ಹೇನೆ, ಉನ್ನತ ಹುದ್ದೆಯಲ್ಲಿದ್ದರೂ ಯಾವ ಹಮ್ಮು ಬಿಮ್ಮುಗಳಿಲ್ಲದೆ ..ಅವರು ಎಲ್ಲರೊಡನೆ ಸರಾಗವಾಗಿ ಬೆರೆತು, ಆತ್ಮೀಯವಾಗಿ ಸ್ನೇಹಿತರಂತೆ ಮಾತಾಡಿಕೊಂಡಿದ್ದು ಕಚೇರಿಯ ವಾತಾವರಣ ತಿಳಿಯಾಗಿಟ್ಟಿದ್ದರು. ಬಹಳ ಸ್ವಾರಸ್ಯಕರ ವ್ಯಕ್ತಿ, ಜೊತೆಗೆ ಕೂತೂಹಲ ಜೀವಿ ಕೂಡ ಎಂದರೂ ತಪ್ಪಾಗಲಾರದು. ಬಿಡುವಿನ ವೇಳೆಯಲ್ಲಿ ಒಮ್ಮೊಮ್ಮೆ ಅವರೊಂದಿಗೆ ಕಾಡ ಹರಟೆ, ಅಲ್ಲಲ್ಲ ( ಇದು ಮರುಭೂಮಿಯಾಗಿದ್ದರಿಂದ) ಮರಳುಗಾಡು ಹರಟೆಯನ್ನೂ ಹೊಡಿತಿದ್ದದ್ದು ಉಂಟು. ನಮ್ಮ ಹಿಂದೂ ಸಂಸ್ಕೃತಿ /ಪರಂಪರೆಗಳು , ನಮ್ಮ ರೂಢಿಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ.  ಆ ಕಚೇರಿಯಲ್ಲಿ ನಾನೇ ಹಿಂದೂ ಆದ್ದರಿಂದ ಒಂದು ಹೊಸ ಧರ್ಮದ ಬಗ್ಗೆ ಕೇಳಿ ತಿಳಿಯುವ ಆಸಕ್ತಿ ಕೂತೂಹಲ ವಷ್ಟೇ , ಗಾಂಧೀಜಿಯನ್ನು ಓದಿಕೊಂಡಿದ್ದರು . ಅವರ ಅಹಿಂಸಾವಾದವನ್ನು ಬಹಳ ಮೆಚ್ಚಿ ಕೊಳ್ಳುತ್ತಾ ನಮ್ಮ ದೇಶದ ಬಗ್ಗೆಯೂ ಅಪಾರ ಗೌರವವನ್ನಿಟ್ಟು ಕೊಂಡಿದ್ದರು . ಅವರ ಅಣ್ಣನ ಮಗ ಬೆಂಗಳೂರಿನಲ್ಲಿಯೇ ತಾಂತ್ರಿಕ ಶಿಕ್ಷಣ ಪೂರೈಸಿದ್ದಾಗಿ , ಹಾಗು ತಾವು ಹಿಂದೆಲ್ಲಾ ಜೈಪುರ , ಹೈದರ್ರಾಬಾದ ನಲ್ಲಿ ಸುತ್ತಾಡಿದ್ದು ನನ್ನೊಂದಿಗೆ ನೆನಪು ಮಾಡಿಕೊಂಡು ನಾನು ಆ ಊರಿಗೆಲ್ಲಾ ಹೋಗಿಲ್ಲ ಅಂದಾಗ ಪೆಚ್ಚಾದರು.

ಇನ್ನು ತಮ್ಮ ದೇಶದ ಸಂಸ್ಕೃತಿ , ವಿಚಾರಗಳನ್ನು ,ಅವರ ದೇಶದ ಆಂತರೀಕ ಸಮಸ್ಯೆಗಳನ್ನೆಲ್ಲಾ ನನ್ನೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಲೂ ಇದ್ದರು . ನಮ್ಮ ಹಿಂದಿ ಸಿನೆಮ ಗಳನ್ನೂ ಇಷ್ಟಪಟ್ಟು ನೋಡುತ್ತಿದ್ದರು. ಇಲ್ಲಿ ಚಿತ್ರ ಮಂದಿರಗಳಲ್ಲಿ ಅನ್ಯ ಭಾಷೆಯ ಸಿನೆಮಾಗಳಿಗೆ ಅರೇಬಿಕ್ ಭಾಷೆಯ sub titles ತೋರಿಸುತ್ತಾರೆ.
ಇಲ್ಲಿಯ ಮಂದಿಗೆ ವರ್ಷಕ್ಕೆ ಎರಡು ದೊಡ್ಡ ಹಬ್ಬಗಳು , ಒಂದು ರಮದಾನ್ (ರಂಜಾನ್) ಈದ್, ಅಂದರೆ “ಈದ್ ಅಲ್ ಅದಾ “ ಮತ್ತು ಇನ್ನೊಂದು “ಈದ್ ಅಲ್ ಫಿತರ್ “. ನಮಗೋ ನೂರೆಂಟು ಈದ್ ಗಳು ಆಯಿ ಮೀನ್ ಹಬ್ಬಗಳು.  ಹಾಗಾಗಿ ನಾನು ದೀಪಾವಳಿ,  ಗೌರಿ/ಗಣಪತಿ, ಹೋಳಿ, ದಸರಾ ಹಬ್ಬಗಳಿಗೆ , ಯಾವಾಗಲಾದರೂ ಒಮ್ಮೊಮ್ಮೆ ಅನುಮತಿ ದೊರೆತರೆ ಅರ್ಧ ದಿನ ಆಫೀಸಿಗೆ ಚಕ್ಕರ್ ಹಾಕುತ್ತ್ತಿದ್ದೆ.  ಈ ಹಬ್ಬಗಳ ವಿಶೇಷತೆಗಳ ಬಗ್ಗೆಯೂ ಅವರಿಗೆ ಹೇಳಿದಾಗ , ಒಹ್ ನಿಮ್ಮ ಹಬ್ಬಗಳೂ ತುಂಬಾ ಸ್ವಾರಸ್ಯಕರವಾಗಿದೆ ಎಂದು ಅವರು ಹುಬ್ಬೆರಿಸುವುದನ್ನ ನೋಡಲಿಕ್ಕೆ ಒಂದು ಮೋಜು!
ಹೀಗೆ ಒಮ್ಮೆ ಗಣಪತಿ ಹಬ್ಬ ದ ಬಗ್ಗೆ ಹೇಳುತ್ತಾ ಹೇಗೆ ಗಣಪನ ಮೂರ್ತಿಯನ್ನು ತಂದು ವಿಜ್ರಂಭಣೆಯಿಂದ ಸ್ಥಾಪಿಸಿ , ಪೂಜೆ ಸಲ್ಲಿಸಿ ನಂತರ ನೀರಿನಲ್ಲಿ ವಿಸರ್ಜನೆ ಮಾಡುವ ಬಗ್ಗೆ ವಿವರಿಸಿದಾಗ , ಅವರು ಅತ್ಯಾಶ್ಚರ್ಯ “ oh soo sad , ಹಾಗಾದ್ರೆ ಪಾಪ ಮೂರ್ತಿಯನ್ನು ನೀರಿನಲ್ಲಿ ಹಾಕ್ಬಿಡ್ತೀರಾ ? ಸುಮ್ನೆ ತಂದು ವೇಸ್ಟ್ ಮಾಡ್ಬಿಟ್ರಲ್ಲಾ ಆನ್ನುವಂತೆ ಕೇಳಿದಾಗ ನನಗೂ ನಗು.  ಇನ್ನು ಇವುಗಳ ಬಗ್ಗೆ ನನಗಿರುವ ತಿಳಿವಳಿಕೆ, ಜ್ಞಾನ ಬಂಡಾರ ಅವರ ಮುಂದೆ ಪ್ರದರ್ಶಿಸಿ ನನ್ನ ಬೆನ್ನನ್ನು ಸ್ವತಹ ನಾನೇ ತಟ್ಟಿ ಕೊಳ್ಳುವ ಅವಕಾಶ ನನಗೆ.
ಒಮ್ಮೊಮ್ಮೆ ನನಗೆ “ಅದೇನು ನಿಮ್ಮ ದೇಶದಲ್ಲಿ ಪವಿತ್ರ ನದಿಯಂತೆ ಗ್ಯಾನ್ಜಸ್ (ಗಂಗಾ ನದಿ ) ಅದರಲ್ಲಿ ಮನುಷ್ಯರ ಅಸ್ತಿಗಳನ್ನು ಹಾಕುತ್ತೀರಂತೆ, ಏಕೆ ಹಾಗೆ? ನಿಮ್ಮ ಸಾಧುಗಳು ಏಕೆ ಮೈಯಲ್ಲಾ ಬೂದಿ ಬಳಿದುಕೊಂಡು , ಇಷ್ಟುದ್ದಾ ಕೂದಲು ಬಿಟ್ಟ ಕೊಂಡಿರ್ತಾರಲ್ಲ ….ಎಂದೆಲ್ಲಾ ತಾವೆಲ್ಲೋ ಓದಿದ ವಿಚಾರಗಳು ಬಗ್ಗೆ ನನ್ನನು ಕೆದಕಿ ಕೇಳುತ್ತ ನನ್ನ ತಲೆಯಲ್ಲಿ ಹುಳ ಬಿಡುತ್ತಿದ್ದರು !  ಅವರು ಯಾವದೋ ಕುಂಭ ಮೇಳದ ಸಾಕ್ಷ್ಯ ಚಿತ್ರಗಳನ್ನ ನೋಡಿರಬೇಕು,  ಅವರಿಗೆ ನನಗೆ ತಿಳಿದ ಮಟ್ಟಿಗೆ ಸಮರ್ಪಕವಾದ ಉತ್ತರಗಳನ್ನು ಕೊಡುತ್ತಾ ಅವರು ಬಿಟ್ಟ ಹುಳಾನಾ ಅವರ ತಲೆಗೆ ಬಿಡ್ತಾ ಇದ್ದದ್ದು ಬೇರೆ ವಿಷಯ ಬಿಡಿ!
ಆಗ ಜುಲೈ ತಿಂಗಳು, ಆ ವರ್ಷ ಕಾರಣಾತರಗಳಿಂದ ನಾವು ನಮ್ಮ ವಾರ್ಷಿಕ ರಜೆಗೆ ಭಾರತಕ್ಕೆ ಹೋಗಲಾಗಲಿಲ್ಲ . ಶ್ರಾವಣ ಮಾಸ ಆರಂಭ ವಾಗಿತ್ತು , ಅಂದು ನಾಗರ ಪಂಚಮಿ ಹಬ್ಬ . ಈ ಹಬ್ಬಕ್ಕೆ ನನಗೆ ಪ್ರತಿ ಬಾರಿಯೂ ತವರಿಗೆ ಹೋಗುವ ರೂಡಿ. ಹೀಗಾಗಿ ಅಮ್ಮನ ನೆನಪಾಗಿ ಯಾಕೋ ಮನಸ್ಸಿಗೆ ಬೇಸರವಾಗಿ ತಾಯಿನಾಡಿನ ಸೆಳೆತ ತೀವ್ರವಾಗಿ ಕಾಡಿತ್ತು . ಈ ದೇಶಕ್ಕೆ ಬಂದ ನಂತರವೂ ನಾನು ನಮ್ಮ ಸಂಪ್ರದಾಯಗಳು , ಪಾರಂಪರಿಕ ಹಬ್ಬಗಳ ಆಚರಣೆ ಯನ್ನು ಯಥಾಶಕ್ತಿ ಆಚರಸಿಕೊಂಡು ಬಂದಿದ್ದೆ. ಸರಿ ಅಂದು ನಾಗರ ಪಂಚಮಿಯಾದ್ದರಿಂದ ನಾನೂ ಸಹ ಭಕ್ತಿಯಿಂದ ನಾಗಪ್ಪನಿಗೆ ಹಾಲೆರೆದು , ತಂಬಿಟ್ಟು ಉಂಡೆಗಳನ್ನು ಅರ್ಪಿಸಿ , ಪೂಜೆ ಮುಗಿಸಿ ಆಫೀಸಿಗೆ ಹೊರಟೆ . ಆಗ ನನ್ನ ಲೆಬನೀಸ್ ಮಿತ್ರರು,  ನನ್ನನ್ನು ಕುರಿತು “ ಒಹ್ ಅರ್ರಾ ….ತೀ ,ಏನು ಇವತ್ತು ಭಾರತೀಯ ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ! ತುಂಬಾ ಚನ್ನಾಗಿದೆ,  ಇದು ನಿಮಗೆ ಯಾವ ಈದ್ ? ಎಂದು ತಮಾಷೆ ಮಾಡಿದಾಗ , ನನಗೂ ಇವರಿಗೆ ಸ್ವಲ್ಪ ತಮಾಷೆ ಮಾಡಿನೋಡೋಣಾ ಅಂತನಿಸಿತು. ನಾನು “ ಸರ್ ಇವತ್ತು snake god  ಹಬ್ಬ ಅಂದಾಗ ಅವರಿಗೆ ಒಂದು ರೀತಿಯ ಶಾಕ್! ಆಗವರು “ ಏನು,  ನಿಮಗೆ ಹಾವೂ ಕೊಡಾ ದೇವರೇ “ ? ಎಂದು ಭಯ ಮಿಶ್ರಿತ ಆಶ್ಚರ್ಯದ ಕಣ್ಣುಗಳನ್ನು ದೊಡ್ಡದಾಗಿ ಹಿಗ್ಗಿಸಿ ಪ್ರಶ್ನೆಯ ಬಾಣ ನನ್ನೆಡೆಗೆ ಬಿಟ್ಟಾಗ,  ನಾನು ವಿನಮ್ರವಾಗಿ “ ಹೌ ದು ಸರ್ , ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಈ ಹಬ್ಬ ವನ್ನ ಆಚರಿಸ್ತಾರೆ . ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೆಲವು ಪ್ರಾಣಿಗಳು ವಿಶೇಷವಾದವು , ಅವುಗಳು ನಮಗೆ ದೇವರ ಸ್ವರೂಪ “ ಅಂದೆ .
ಅವರಷ್ಟಕ್ಕೆ ಸುಮ್ಮನ್ನಾಗದೆ ತಮ್ಮ ಎಂದಿನ ಕೂತೂಹಲ ಬುದ್ದಿಯನ್ನು ಪ್ರದರ್ಶಿಸುತ್ತಾ,  “ ಒಹ್ ನಿಜಕ್ಕೂ ನಿಮಗೆ ಸ್ನೇಕ್ ಹಬ್ಬ ಇದೆಯೇ? ಇದನ್ನ ಹೇಗೆ ಆಚರಸ್ತೀರಾ ? “ಕಣ್ಣರಳಿಸಿ ಕೇಳಿದಾಗ ನಾನು ಇದೆಲ್ಲ ನಮಗೆ ಮಾಮೂಲು ಎನ್ನುವಂತೆ .“ ಸರ್ ನಾವು ಸ್ನೇಕ ಗಾಡ್ ನನ್ನು ಭಕ್ತಿಯಿಂದ ಪೂಜಿಸಿ , ಹಾಲೆರದು , ಸ್ವೀಟ್ ಗಳನ್ನೆಲ್ಲ ಅರ್ಪಿಸ್ತೇವೆ ಅಂದೆ !” ನನ್ನ ವಿವರಣೆಗೆ ಅವರು ಜೀವಂತ ಹಾವನ್ನೇ ಕಲ್ಪಿಸಿಕೊಂಡು , ನನ್ನನ್ನು ಕಾಡಿನಲ್ಲಿ ಬೇಟೆಗಾರನ ರೂಪದಲ್ಲಿ ಚಿತ್ರಿಸಿಕೊಂಡರೇನೂ ಅನಿಸಿತು! ಅವರಿಗೇಕೂ ನಾನು ಹೇಳುತ್ತಿರುವುದು ಸ್ವಲ್ಪವೂ ಮನದಟ್ಟಾಗಲಿಲ್ಲ .  ಅದರ ಬದಲಿಗೆ ಅವರ ಮನವೇ ದಟ್ಟ ಕಾಡಾಗಿ ಅಲ್ಲಲ್ಲಿ ಆಶ್ಚರ್ಯದ ಮುಳ್ಳುಗಳೇ ಎದ್ದು ನಿಂತ ಹಾಗೆ ನನಗೆ ಕಂಡಿತು.
ಅವರು ಆಶ್ಚರ್ಯದ ಕಣ್ಣುಗಳು, ಅವರ ಮುಖ ಭಾವ, ನಂಬಲಾಗದ ಶಾಕ್ ನಿಂದ ತತ್ತರಸಿ ಹೋದ ಹಾಗಿತ್ತು. ನಾನು ಒಳಗೊಳಗೇ ನಗು ತಡೆದು ಕೊಂಡು ಮುಂದುವರಿಸುತ್ತಾ “ ಸರ್ ಪೂಜೆ ಎಲ್ಲಾ ಮುಗಿಸಿ ನ್ಯೈವೇದ್ಯಾ ( ಈ ಶಬ್ದ ಅವರಿಗೆ ವೇದ್ಯ ವಾಗುವ ಹಾಗೆ ವಿವರಿಸಿ ) ವಾದ ನಂತರ ನಾವೂ ಸ್ವೀಕರಸ್ತೀವಿ .” ಅಂದೆ . ಆಗವರು ಇನ್ನು ತಡೆಯಲಾಗದೆ ತಮ್ಮ ಸೀಟಿನಿಂದ ಚಂಗನೆ ಮೇಲೆದ್ದು “ you u mean the snake ? “ ಎಂದು ಘಾಬರಿಯಿಂದ ಕೇಳಿದ್ರು,  ಅವರಿಗೆ ಚೀನಾ ದೇಶವೇ ನೆನಪಾಗಿರಬೇಕು.  ಆಗ ನನಗೆ ನಗು ತಡೆಯಲು ಆಗಲೇ ಇಲ್ಲ “ ಸರ್ ಅಲ್ಲ ! ದೇವರಿಗೆ ಅರ್ಪಿತವಾಗಿರುವ ಸ್ವೀಟ್ಸ್ ತಿಂತೀವಿ “ ಎಂದೆ,  ನನ್ನ ತಮಾಷೆ ಹೀಗೆ ಕ್ಲಾಮಾಕ್ಸ್ (climax) ಹಂತಕ್ಕ ತಲುಪಿದ್ದು ಕಂಡು ನನಗೆ ಆಶ್ಚರ್ಯ ಒಂದು ಕಡೆಯಾದರೆ ಉಕ್ಕಿ ಬರುತ್ತಿರುವ ನಗು ಇನ್ನೊಂದೆಡೆ! ಆಗವರೂ ಜೋರಾಗಿ ನಗುತ್ತಾ “ ಓಹೋ ಅರ್ರಾ ….ತಿ ನನಗೆ ತಮಾಷೆ ಮಾಡ್ತಾ ಇದ್ದೀರಾ, ನಾನಷ್ಟು ಮುಗ್ಧ ಅಲ್ಲ ಬಿಡಿ. ನೀವು ನಿಮ್ಮ ಎಲ್ಲಾ ದೇವರಗಳನ್ನು ಮೂರ್ತಿಗಳ ರೂಪದಲ್ಲಿ ಪೂಜಿಸ್ತೀರಾ ಅಲ್ವಾ , ? ನನಗೆ ಗೊತ್ತು , ನೀವು ಮೊದಲೇ ನನಗಿದರ ಬಗ್ಗೆ ಹೇಳಿದ್ದು ನೆನಪಿದೆ , ನಾನೂ ನಿಮಗೆ ಸ್ವಲ್ಪ ತಮಾಷೆ ಮಾಡಿ ನೋಡ್ತಾ ಇದ್ದೆ ಅಷ್ಟೇ “,  ಎಂದು ತಿರುಗಿ ನನಗೇ ಕಿಚಾಯಿಸಿದಾಗ ಇಬ್ಬರೂ ಮನಸಾರೆ ನಕ್ಕು ಬಿಟ್ಟೆವು !
ಹೀಗೇ ಮನದ ಖಜಾನೆಯಿಂದ ನೆನಪುಗಳನ್ನ ಕೆದಕುತ್ತಾ ಹೋದಾಗ , ಅವುಗಳ ಜೊತೆಯಲ್ಲೇ ಈ ಸ್ವಾರಸ್ಯ ಕರ ಅನುಭವಗಳೂ ಮುತ್ತುಗಳಂತೆ ಒಂದೊಂದೇ ಹೊಳೆಯುತ್ತಾ ನನ್ನ ಕೆಣಕಲು, ನನ್ನ ತುಟಿಯ ಮೇಲೆ ಮಂದಹಾಸ, ಮೂಡಿ ,ಮನಸ್ಸಿಗೆ ಮಾತ್ರ ಕಚಗುಳಿ ಇಟ್ಟ ಅನುಭವ.


No comments :

Post a Comment