Sunday, June 15, 2014

ಅಪ್ಪ ಹೀಗೇನೆ ...

ಅಪ್ಪ' ನ ದಿನಾಚರಣೆ ಯಂದು  , ಕಡಲಾಳದ  ಅಪ್ಪನ ಪ್ರೀತಿ ಯನ್ನು ಕಟ್ಟಿಕೊಳ್ಳುತ್ತಾ ಅಪ್ಪನಿಗಾಗಿ ಒಂದು ಕವನ . .

ಆಗಾಗ ಕೋಪ ಮುನಿಸು
ಮರುಕ್ಷಣವೇ ಕರಗುವ
ಅಪ್ಪನ ಬೆಣ್ಣೆ ಮನಸು ;
ತಿಕ್ಕಾ ಟದ ಬಾಳ ಬವಣೆ
ಬಿರುಗಾಳಿ ಸಿಡಿಲು ಮಳೆ
ಬರಲಿ ಏನೇ , ಅವನದೇ
ಸುಭದ್ರ ಕೋಟೆ ರಕ್ಷಣೆ .

ಎದೆಯ ತುಂಬೆಲ್ಲಾ
ಚಟಪಟಾಯಿಸುವ
ಭಾರ್ಯೆಯ ಚಿಟ್ಟೆ ಕನಸು
ಜಿಗಿದು ಗದ್ದಲವೆಬ್ಬಿಸುವ
ಮಕ್ಕಳ ಆಸೆ ಮನಸು
ನೀಗಿಸಿ , ಅರಳಿಸಿ ಸಾಗಿದ್ದಾನೆ
ಮುಚ್ಚಿಟ್ಟು ತನ್ನ ಕನಸು .

ಸಾಗರದ ಪ್ರೀತಿ ,ಅವನದೇ
ಒಂದು ರೀತಿ
ಒರಟು ಕೈ,ತುತ್ತಿನಲ್ಲೂ
ಹಾಯೆನಿಸುವ ಕಕ್ಕುಲಾತಿ
ಕಥೆ ಹೇಳುವ ಒಂದೊಂದು
ಬೆವರ ಹನಿ , ಅನುಭವ ನೀತಿ .

ನಿಮಗ್ನ ಮನಸು ,ಬಾಳ ನಿರುಕಿಸು
ವ, ಹಾದಿಯಲಿ ಮಾಗುವ ವಯಸು
ಬೇಡುವುದಿಷ್ಟೇ ...
ಇರಳು ಬೆಳಕಿನ ಜಂಜಾಟದಲಿ
ಹೊಯ್ದಾಡುವ ಭವ ಸಾಗರದಲಿ
ಅವನಿಗಿರಲಿ ಸಂತಸ , ಶಾಂತಿ
ಕೆಲವು ತಾಸು .

1 comment :

  1. ಬಹಳ ಹಿಂದೆಯೇ ಕಳೆದುಕೊಂಡ ನನ್ನಪ್ಪನನ್ನು ನಿಮ್ಮ ಕವನದ ಮೂಲಕ ಕಂಡುಕೊಂಡೆ.
    ಬಹಳವೇ ಇಷ್ಟವಾಯಿತು.

    ReplyDelete