Monday, June 2, 2014

ಮೈಸೂರು ಪಾಕ್ ‘ನ ಪೀಕಲಾಟ
ಇಂಗು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡೀತು ಎಂಬ ಗಾದೆ ಎಲ್ಲ ಕಾಲಕ್ಕೂ , ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬುದು ನನ್ನ ತರ್ಕ .ಕಾರಣ ಇವೆರಡನ್ನೂ ಯತೇಚ್ಚವಾಗಿ ಬಳಸಿ   ಅಡುಗೆ ಕೆಡಸಿದವರೂ ಉಂಟು ! ಹಾಗಾಗಿ  ಕೊನೆಗೆ ಆ ಅಡುಗೆಯನ್ನು  ಮಂಗನಿಗೇ  ಕೊಡಬೇಕಾದ ಪಾಳಿ ಬಂದರೂ ಬರಬಹುದು .
ನಾನಂತೂ ಇಂಗು ತೆಂಗು  ಹಾಕದೆಯೂ   ರುಚಿಕರ  ಅಡುಗೆ ಮಾಡುತ್ತಿದ್ದರೂ ಸಿಹಿ ತಿನಸುಗಳನು ನನ್ನ ಮದುವೆ  ಅದಮೇಲೆಯೇ  ಸ್ವಲ್ಪ ಮಟ್ಟಿಗೆ ಮಾಡಲು ಕಲಿತದ್ದು .  ಹಾಗೆಯೇ ಅಡುಗೆ ಯಲ್ಲೂ ವಿಶೇಷ ಆಸಕ್ತಿ ಬೆಳೆಸಿಕೊಂಡು ಪಾಕ ಪ್ರವೀಣೆ ಪಟ್ಟವನ್ನು ಗಿಟ್ಟಿಸಲು ಅನೇಕ ಹೊಸ ರುಚಿಗಳನ್ನು  ಅಂತರ್ಜಾಲವನ್ನೆಲ್ಲಾ ತಡಕಾಡಿ  ನೋಡಿ ನಮ್ಮ ಮನೆಯವರ ಮೇಲೆ ಪ್ರಯೋಗಿಸಿದಾಗ  , ಅದರಲ್ಲಿ   ಕೆಲವು ಭಾರಿ ಪ್ರಮಾಣದ ಯಶಸ್ಸು ಪಡೆದು ನನಗೆ “ ವಾಹ್  ಸೂಪರ್  “ ಎಂಬ  ಶಭಾಸಗಿ(ಗ)ರಿ ಜೊತೆಗೆ ನನ್ನ ಮಗರಾಯ ನನ್ನ ಅಡುಗೆಗೆ   ಒಂದ ರಿಂದ .ಹತ್ತರ ಸ್ಕೇಲಿನಲ್ಲಿ   ನನಗೆ ಸೂಕ್ತ ಅಂಕಗಳನ್ನು  ಅಂದರೆ  8, ಅಥವಾ  9  ಅಂಕಗಳನ್ನು ದಯಪಾಲಿಸಿ  ತೀರ್ಪುಗಾರನಾಗಿ ಮರೆಯುತ್ತಿದ್ದ . ನಾನೂ ಕೂಡ ಕಿಚನ್  ಕ್ವೀನ್ ಕಿರೀಟವೇ ಪಡೆದಂತೆ  ಸಂಭ್ರಮಿಸುತ್ತಿದ್ದೆ .

ನಾನು ಹೀಗೆ ಹೊಸ ಹೊಸ ಐಟಂ ಗಳನ್ನು ಉತ್ಸಾಹದಿಂದ  ಕಲಿತು ಮಾಡುವುದಕ್ಕೆ ನನ್ನ ಮಗನ ಅತಿಯಾದ ಜಿಹ್ವಾ ಚಾಪಲ್ಯವೂ  ಕಾರಣ ಎನ್ನಬಹುದು .ಇನ್ನು ಸಿಹಿತಿನಸುಗಳಲ್ಲಿ ಕೇಸರಿ ಬಾತ್ , ಹಲ್ವ , ಜಾಮೂನು , ಪಾಯಸಗಳು ಇವೆಲ್ಲಾ  ಕರಗತ ಮಾಡಿಕೊಂಡಿದ್ದರೂ  ನನ್ನ ಪಾಕಶಾಲೆಯಲ್ಲಿ ಮೈಸೂರು ಪಾಕನ್ನು  ಮಾಡಲು  ಕೈಯೇಕೂ ಹಿಂಜರಿಯುತ್ತಿತ್ತು . ಮೊದಲಿಗೆ ,ಅದು ಅಷ್ಟು ಸರಾಗವಾಗಿ ಮಾಡಲು ಬರುವ ತಿನಸಲ್ಲ , ಅಲ್ಲದೆ ಮಾಡುವಾಗ ಸ್ವಲ್ಪ ಏರುಪೇರಾದರೂ ಮೈಸೂರ್ ಪಾಕ್ ಕೈ ಕೊಡುತ್ತದೆ ಎಂದು ಅಮ್ಮನ ಎಚ್ಚರಕೆಯ  ಮಾತುಗಳು ನೆನಪಾಗುತ್ತಿತ್ತು,  ಈ ಬಾರಿ ಅಂಗಡಿಯಿಂದ ಕೊಂಡು ತಂದ  ಮೈಸೂರ್ ಪಾಕ್ ಮೆಲ್ಲುವಾಗಿ ಇದನ್ನು ಹೇಗಾದರಾಗಲಿ ಮಾಡಿ ನೋಡಬೇಕು ಅಂದು ನಿರ್ಧರಿಸಿದೆ .

ಹಿಂದೆ ಅಮ್ಮ ಮಾಡುವುದನ್ನು ಒಮ್ಮೆ ನೋಡಿದ್ದೆ  . ಮತ್ತೆ ಅಮ್ಮನಿಗೆ ಫೋನಾಯಿಸಿ . ಅಳತೆ , ಹಾಗು ವಿಧಾನಗಳನ್ನು ದೃಢ ಪಡಸಿಕೊಂಡೆ . ಆದರೆ ನನ್ನ ಸುತ್ತಳತೆ ಗಮನದಲ್ಲಿ ಇಟ್ಟುಕೊಂಡು ಅಮ್ಮ ಹೇಳಿದ ತುಪ್ಪದ ಅಳತೆಯನ್ನು  ಕೊಂಚ ಕಡಿಮೆ ಮಾಡಿದೆ .! ಸರಿ ಕಡಲೆಹಿಟ್ಟು , ಸಕ್ಕರೆ , ತುಪ್ಪ  ಎಲ್ಲವೂ ನನ್ನ ಕೈಯಲ್ಲಿ ಮೈಸೂರ್ ಪಾಕ್ ಆಗಿ ಮಾರ್ಪಾಡಾಗಳು ಕನಸು ಕಾಣ ತೊಡಗಿದವು .
ತಾಯಿ ಅನ್ನಪೂರ್ಣೆಶ್ವರಿಯನ್ನು ಮನದಲ್ಲೇ ನೆನೆಯುತ್ತಾ  ಮೊದಲು ಒಲೆಯ ಮೇಲೆ ಸಕ್ಕರೆ ಪಾಕ ಸಿದ್ದ ಮಾಡಿಕೊಂಡು  ಮೊತ್ತೊಂದು ಕಡೆ ಬಾಣಲೆಯಲ್ಲಿ   ತುಪ್ಪ ಕಾಯಸಲು ಇಟ್ಟೆ  .ಇದನ್ನು ಮಾಡಲು ಪೂರ್ಣ ಪ್ರಮಾಣದ ಏಕಾಗ್ರತೆ ಬೇಕೆಂದು ನನ್ನ ಮೊಬೈಲು ಸ್ವಿಚ್ ಆಫ್ ಮಾಡಿದ್ದೂ ಆಯಿತು . ಕಡಲೆ ಹಿಟ್ಟನ್ನು  ಹದವಾಗಿ ಹುರಿದು  ಪಾಕಕ್ಕೆ ಬೆರೆಸಿದೆ , ಎಡಗಡೆ ಹಬೆಯಾಡುತ್ತಿರುವ ಕಡಲೆಹಿಟ್ಟಿನ  ಮಿಶ್ರಣ , ಬಲಗಡೆ ಚನ್ನಾಗಿ ಕಾದು ಕುದಿಯುತ್ತಿರುವ  ತುಪ್ಪ , ಎರಡೂ ನನ್ನ ಮೇಲೆ ದಾಳಿಗೆ  ಸಿದ್ದವಾಗುತ್ತಿವೆಯೇನೋ   ಎಂಬಂತೆ ತೋರಿತು . ನನ್ನ ಹಣೆಮೇಲೆ ರಾಶಿ ಬೆವರನ್ನು ಒರೆಸುತ್ತಾ ದೇವರು ಕೊಟ್ಟ ಎರೆಡು  ಕೈಗಳಿಗೆ ಧನ್ಯಳಾಗಿ   ಎಡ ಗೈಯಲ್ಲಿ  ಮೊಗಚೋ ಕೈ , ಬಲಗಡೆಗೆ  ಸೌಟು  ಹಿಡಿದು ಯೋಧಳಂತೆ ಸಿದ್ದಳಾಗಿ    ಜೈ ಭವಾನಿ  “ ಎಂದು  ಎರಡೂ ಕೈಯಲ್ಲಿರುವ ಆಯುಧಗಳನ್ನು ಒಮ್ಮೆ ಝೊಳಪಿಸಿ ,ದೈರ್ಯದಿ ಮುನ್ನುಗಲು  ನನಗೆ ನಾನೇ ಹುರಿದುಂಬಿಸಿಕೊಂಡೆ   ! ..
ಅಮ್ಮನ ಆದೇಶದಂತೆ ಕಾಯ್ದ  ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟಿನ ಮಿಶ್ರಣಕ್ಕೆ  “ ಚೊಂಯ್  ಎಂದು ಶಬ್ದ ಬರಿಸುವಂತೆ  ಹಾಕಿ  ಅದನ್ನು ಚನ್ನಾಗಿ ಕಲಕುತ್ತಾ  ಹೋದೆ  . ಈ ಕಡೆ ಕೊತ ಕೊತ ಕುದಿಯುತ್ತಾ ಹೊಗೆಯಾಡುವ . ಆಸೆಬುರುಕ ಕಡಲೆಹಿಟ್ಟು ಹಾಕಿದ ತುಪ್ಪವನ್ನೆಲ್ಲ ನುಂಗುತಿತ್ತು .  “,  ಇದೆಲ್ಲದರ ಮದ್ಯೆ       ತುಪ್ಪ ಚನ್ನಾಗಿ ಬಿಸಿ ಇರಲಿ , ,, ಕಡಲೆಹಿಟ್ಟನ್ನ ಚನ್ನಾಗಿ ಕಲಕ್ತಾ  ಅದು ತಳಾ ಹಿಡೀದ ಹಾಗೆ ನೋಡ್ಕೋ , ಕ್ರಮೇಣ ಅದು ತುಪ್ಪವನ್ನು  ಚನ್ನಾಗಿ ಹೀರಿ  ಹಿಟ್ಟು ಹಗುರವಾಗಿ , ಗೂಡು  ಕಟ್ಟಲು ಶುರು ಆಗುತ್ತೆ , ಆಗ ನಿನ್ನ ಗಮನ ಎಲ್ಲ ಅಲ್ಲೇ ಇರಲಿ “   ಹೀಗೆ ಅಮ್ಮನ ಟಿಪ್ಪಣಿಗಳ ಮಳೆ ನನ್ನ ತಲೆಗೆ  ಟಪ್ ಟಪ್ ಎಂದು ಆಗಾಗ ಬಡಿದು ಎಚ್ಚರಿಸುತ್ತಿತ್ತು . ಹಾಗಾಗಿ ನನ್ನ ಎರಡೂ ಕೈಗಳು ನೋವಿನಿಂದ  ಗೊಣಗುತ್ತಾ  ಅವಿಶ್ರಾಂತವಾಗಿ ದುಡಿಯುತ್ತಿದ್ದವು .

ಕೊನೆಗೆ ತುಪ್ಪ  ಎಲ್ಲ ಖಾಲಿ ಯಾಗಿ ಈಕಡೆ ಹಿಟ್ಟು ಕೂಡ ಹೊಂಬಣ್ಣಕ್ಕೆ   ತಿರುಗಿ , ದೊಡ್ಡ ಗುಳ್ಳೆ ಗಳಾಗಿ ಕುದ್ದು , ಗೂಡು  ಕಟ್ಟು ತಿವೆಯೇನೋ ಎಂಬಂತೆ ಭಾಸವಾಯಿತು .ನಾನು ಏಕಾಗ್ರಚಿತ್ತದಿಂದ ಬಿಟ್ಟ ಕಣ್ಣು ಮುಚ್ಚದೇ ಅದನ್ನೇ ನೋಡುತ್ತಿದ್ದೆ .ಆದರೂ ಗೂಡು ಅರ್ಥಾತ್  ಗುಡಿಸಲು ಕೊಂಚ ಚನ್ನಾಗಿ ಆಗಲಿ ಎಂದು ಒಂದು ನಿಮಿಷ ಚನ್ನಾಗಿ  ಕಲಕಿ  ಒಲೆ ಮೇಲಿಂದ ಇಳಿಸಿ ತುಪ್ಪ  ಸವರಿದ ತಟ್ಟೆ ಗೆ ಹಾಕಿದೆ . ಅದನ್ನು ತಣ್ಣಗಾಗಲು ಬಿಟ್ಟು  ಆ ಹಬೆಗೆ ಬೆವರಿದ್ದ ನಾನೂ  ತಂಗಾಳಿಗೆ ಮೈಯೊಡ್ಡಿದೆ .!

ಸ್ವಲ್ಪ ಸಮಯದ ನಂತರ  ಮೈಸೂರ್ ಪಾಕಿನ ರುಚಿ ನೋಡುವ ಸಂಭ್ರಮದಲ್ಲಿ ತೇಲಾಡುತ್ತಾ ತಟ್ಟೆ ಯಲಿದ್ದದನ್ನು  ಎತ್ತಿ ಕೊಳ್ಳಲು ಹೋದರೆ ಎಲ್ಲ ಪುಡಿ ಪುಡಿಯಾಗಿ ಬರುತ್ತಿವೆ   . ಮೊದಲಿಗೆ  ಅದನ್ನು  ಬರ್ಫಿ ಆಕಾರಕ್ಕೆ  ಕತ್ತರಿಸಲು ಮರೆತಿದ್ದು  , ಇನ್ನು  ನಾನು ಪಾಕವನ್ನು   , ಗೂಡು ಕಟ್ಟುವ ಸಲುವಾಗಿ ಕಾಯುತ್ತಾ ಕುಳಿತಾಗ  ಅದು ಗೂಡು ಕಟ್ಟಿದ್ದು ಅರಿವಿಗೆ ಬರಲಿಲ್ಲ !  ಹಾಗಾಗಿ ಅದು ತೆಗೆಯುವಷ್ಟರಲ್ಲಿ  building ಆಗಿಹೋಗಿತ್ತು ಅನಿಸುತ್ತೆ ..  
ಆ ಮೈಸೂರ್ ಪಾಕಿನ ಪುಡಿಯನ್ನು ಕಂಡಾಗ ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದು ನಾ ಪಟ್ಟ ಶ್ರಮವೆಲ್ಲಾ  ಕುಹಕವಾಡಿ  ಕುಣಿದು  ಕುಪ್ಪಳಿಸಿತು !
ಸಪ್ಪೆ ಮುಖ ಹೊತ್ತು ಮುಂದೇನು ಎಂದು ಯೋಚಿಸುತ್ತಿರುವಾಗ , ಈ  ಘಮ್ಮನ್ನುವ  ವಾಸನೆಯ ಜಾಡು ಹಿಡಿದು ನಾಯಿ ಮೂಗಿಗಿಂತಲೂ ಚುರುಕುಗಾಗಿರುವ  ನನ್ನ ಮಗನ ಮೂಗಿಗೆ ಬಡಿದು ತಟ್ಟನೆ ನನ್ನ ಮುಂದೆ ಪ್ರತ್ಯಕ್ಷನಾದ !  .ಆಸೆಯಿಂದ “ ಅಮ್ಮ  ಏನೋ ಸ್ವೀಟ್ ಮಾಡಿದ್ಯಾ ಅಲ್ವಾ “ ಅಂದಾಗ ನಾನು  ಆ ಪುಡಿಯನ್ನೇ  ಬಟ್ಟಲಲ್ಲಿ  ಹಾಕಿ ಜೊತೆಗೆ ಸ್ಪೂನ್ ಇಟ್ಟು  ಕೊಟ್ಟಾಗ  ಆವಾ ಮುಖ ಕಿವಚುತ್ತಾ  “ ಅಮ್ಮ ಮೈಸೂರ್ ಪಾಕ್  ಬರ್ಫಿ ತರಾ ಇರತಲ್ಲ ಅದು ಕೊಡು, ಈ ಪುಡಿಯೆಲ್ಲಾ ಬೇಡ “ ಎಂದಾಗ ನಾನು ನನ್ನನ್ನು ಸ್ವಲ್ಪವಾದರೋ ಸಮರ್ಥಿಸಬೇಕಲ್ಲ  “ ಅಯ್ಯೋ ಈ ಸಲ  ಸ್ವಲ್ಪ ಪುಡಿ  ಆಯಿತು ಕಣೋ  ಫಸ್ಟ್ ಟೈಮ್ ಅಲ್ವಾ  ತಿನ್ನೋ ಮರಿ “  ಗೋಗರೆದೆ . ಸರಿ ಅದರಲ್ಲಿ ಒಂದು ಕಣದಷ್ಟು  ಬಾಯಿಗೆ ಹಾಕಿ “ ಅಮ್ಮ ಟೆಸ್ಟ್ ಚೆನ್ನಾಗಿದೆ,  ಮುಂದಿನ ಸಲ ಸರಿಯಾಗ ಮಾಡಮ್ಮ “  ಎಂದು  ಈ ಬಾರಿ ಯಾವುದೇ ಅಂಕ ಕೊಡದೆ   ಗ್ರೌಂಡ್ ಜೀರೋಗೆ ಇಳಿದಿದ್ದ ನನ್ನ  ಮೂಡನ್ನು ಕೊಂಚ ಲಿಫ್ಟ್ನಲ್ಲಿ ಹತ್ತಿಸಿ  ಹೊರಗೊಡಿದ .

ಮೈಸೂರ್ ಪಾಕ್  ತಟ್ಟೆ , ಯಾರು ಕೈ ಬಿಟ್ಟರೂ ನೀ ಎನ್ನ   ಜೊತೆಗಿರು ಎಂಬಂತೆ ನನ್ನನ್ನೇ  ನೋಡಿತು . .ನಾನು ಒಂದು ಹಿಡಿ ಬಾಯಿಗೆ ಹಾಕಿಕೊಂಡೆ . ಅಷ್ಟರಲ್ಲಿ  ನನ್ನ ಪತಿಯ ಆಗಮನ . (ಅಂದು)  ತಡಮಾಡದೆ ತಿಂಡಿ ಕೊಟ್ಟುಬಿಟ್ಟೆ . ಒಂದು ಬೌಲಿನಲ್ಲಿ ಇದೆ  ಮೈಸೂರ್ ಪಾಕ್ ಪುಡಿ   ಕೊಟ್ಟು ಬೋನಸ್ ರೂಪದಲ್ಲಿ ನಾಲ್ಕು  ಕೋಡುಬಳೆ  ಕೊಡುತ್ತಾ “ ಮೈಸೂರ್ ಪಾಕ್ ಮಾಡ್ತೀನಿ ಅಂತ ಹೇಳಿದ್ನಲ್ಲ , ಸ್ವಲ್ಪ  ತೆಗ್ಯೋವಾಗ  ಕೈ ಕೊಡ್ತು ರೀ “  ಎಂದು ನನ್ನ ಶ್ರಮದ ವೃತಾಂತವನ್ನೆಲ್ಲಾ ಅರುಹಿದೆ . ಆಗ ಇವರು ನನ್ನನ್ನು ಪಾಪದ ಪ್ರಾಣಿಯಂತೆ ನೋಡಿ ನಾನು ಕೊಟ್ಟದ್ದರಲ್ಲಿಯೇ ಒಂದು ಅಡುಕೆ ಗಾತ್ರದಷ್ಟು ಮೈಸೂರ್ ಪಾಕಿನ  ತುಣುಕನ್ನು ಹುಡುಕಿ   ಬಾಯಿಗಿಟ್ಟು   “ “ ವಾಣಿ ಪರವಾಗಿಲ್ಲ ಟೆಸ್ಟ್ ಚೆನ್ನಾಗಿದೆ ಕಣೆ , ನೀನು ಒಂದು  ಕೆಲಸ ಮಾಡು ಇದನ್ನೇ  ಮತ್ತೆ ಮಿಕ್ಸಿ ಗೆ ಹಾಕಿ ಇನ್ನೂ ಚೆನ್ನಾಗಿ ಪುಡಿ ಮಾಡಿ ಬೇಸನ್ ಲಾಡು ಮಾಡಿಬಿಡು “ ಎಂದು ನನಗೆ  ರೀಸೈಕಲ್ , ರೀಮಿಕ್ಸ್  ನೀತಿಯನ್ನು ಬೋಧಿಸಿದರು  !

ನನಗೂ ರೇಗಿ “ ಅಯ್ಯೋ ಇದೆನ್ನೇನು  ಹಳೆ ಹಾಡು  ಅನ್ಕೊಂಡ್ರಾ  ಕಲಬೆರಕೆ ಮಾಡಿ ರೀಮಿಕ್ಸ್  ಮಾಡೋಕೆ ,  ಅಥವಾ ಹಳೆ ಪೆಪ್ಸಿ , ಕೋಲಾ ಕ್ಯಾನ್ಗಳಂತೆ  ಮತ್ತೆ  ರೀಸೈಕಲ್  ಮಾಡೋಕೆ !  , ಅವೆಲ್ಲ ಆಗಲ್ಲ ರೀ  ,  ನೀವು  ಹೇಗಾದ್ರು  ಮಾಡಿ ಈ ಬಟ್ಟಲು ಖಾಲಿ ಮಾಡಿಪ್ಪಾ ಪ್ಲೀಸ್  , ”   ನನ್ನ ಮೂಡ ಆಫ್ ಆದ ಕಾರಣ ತಣ್ಣಗೆ ನುಡಿದೆ .  “ಅಷ್ಟರಲ್ಲಿ ಕರಗಂಟೆಯ ಸದ್ದು  , ನಮ್ಮ ಕೆಲಸದವನು ಅಂದು ಎರೆಡು  ಘಂಟೆ  ತಡವಾಗಿ ಬಂದ್ದಿದ್ದರಿಂದ
 “ ಮನ್ನಿಸು ತಾಯೆ “  ಎಂಬ ಮುಖಭಾವ ಹೊತ್ತು ಒಳಗೆ ಎಂಟ್ರಿ ಕೊಟ್ಟ .  ನಾನಂದು  ಎಂದಿನಂತೆ ಸಿಟ್ಟಾಗದೆ   ಅಬ್ಬಾ ಸದ್ಯ !  ಎಂದು ತಕ್ಷಣ ಒಳಗೊಡಿ   ಒಳ್ಳೆಯ ಜಿಪ್ಲಾಕ್ ಕವರಿನಲ್ಲಿ ಈ ಮೈಸೂರ್ ಪಾಕ್ ಪುಡಿಯನ್ನು ಧಾರಾಳವಾಗಿ  ಹಾಕಿ , ಜೊತೆಗೆ ಒಂದು ಕುಂಕುಮದ  ಚೀಟಿ ಇಟ್ಟು    ದೇವರ ಪ್ರಸಾದ ಕಣೋ ರಾಜು , ತೊಗೊಪ್ಪಾ “ ಎಂದು ಕೊಟ್ಟೆ ,   ಅವನೂ ಅದನ್ನು ಭಕ್ತಿಯಿಂದ ಕಣ್ಣಿಗೊತ್ತಿಕೊಂಡು  ಸ್ವೀಕರಿಸಿದ .ಸದ್ಯ ಯಾವ ದೇವರ ಪ್ರಸಾದ ಎಂದು ಕೇಳಲ್ಲಿಲ್ಲ  !
ಏನೇ ಅನ್ನಿ ಅದಾದ ಬಳಿಕ ನನ್ನ ಮೈಸೂರ್ ಪಾಕಿನ ಪ್ರಯೋಗ ಸಾಕಷ್ಟು ಬಾರಿ ನಡೆದು . ನಾನೀಗ   ರುಚಿಯಾದ , ಹದವಾದ , ಬಾಯಲ್ಲಿಟ್ಟರೆ ಕರಗುವ  , ಮೈಸೂರ್ ಪಾಕ್ ಮಾಡಬಲ್ಲೆ  ಎಂದು   ಈಗಲೂ  ಹೇಳಲಾರೆ  !   

ಆರತಿ ಘಟಿಕಾರ್
ದುಬೈ

2 comments :

  1. ಅದ್ಸರಿ ಈ ಸರ್ತಿ ಬೆಂಗಳೂರಿಗೆ ಬಂದಾಗ, ಒಂದೆರಡು ಟ್ರೇ ಮೈಸೂರು ಪಾಕು - ಬೆಂಗಳೂರಿನಲ್ಲೇ ಕೊಡ್ರೀ!!! :)

    ReplyDelete
  2. Thanks badari sir nimage mathe kododu first haha

    ReplyDelete