Thursday, January 16, 2014

ತೂಕದ ವ್ಯಾಖ್ಯಾನ


 ನನ್ನ ಹಮ್ಮು ಬಿಮ್ಮುಗಳನ್ನಾದರೂ ಬಿಡುವೆ ಆದರೆ ಬಿಡಲಾಗದು ನನ್ನ ಜಿಮ್ಮು ಎನ್ನುವ ಪರಿಸ್ಥಿತಿ ನನ್ನದು . ಕಾರಣ   ನನಗೂ ಜಿಮ್ಮಿಗೂ ಒಂದು ಅವಿನಾಭಾವ  ಸಂಬಂಧ  ಬೆಸೆದು ಕೊಂಡು ಬಿಟ್ಟಿದೆ . ಈ ನಂಟಿಗೆ ಮೂಲ ಕಾರಣವೇ ವರ್ಷವರ್ಷವೂ ಕರೆಯದೆ ವಕ್ಕರಿಸುವ  ಬೇಡದ ಅತಿಥಿಯಂತೆ  ಏರುವ ಈ ನನ್ನ ಹಾಳು ತೂಕ ! ಮೇಲೆ ಹೋಗಿದ್ದು ಕೆಳಗಿಳಿಯಲೇ ಬೇಕು ಎನ್ನುವ ತತ್ವಕ್ಕೆ  ಅಪವಾದ ನನ್ನ ತೂಕವೇ ಎಂದರೆ ತಪ್ಪಾಗಲಾರದು  ! . ಇದನ್ನು ಆಗಾಗ  ಗಮನಿಸಿಕೊಂಡು , ಬೆಚ್ಚಿಬಿದ್ದು  ಜಿಮ್ಮಿನತ್ತ ತ  ಧಾವಿಸದ್ದಿದ್ದರೆ ತನ್ನ ಪಾಡಿಗೆ ತಾನು ಏರುವ ಹಾದಿ ಹಿಡಿದುಕೊಂಡು ಬಿಡುತ್ತದೆ,

ಹಾಗಾಗಿಯೇ  ನನ್ನ ಮತ್ತ್ತು ಜಿಮ್ಮಿನ ನಂಟು  ಶುರುವಾಗಿದ್ದು .  .ನಾವಿರುವ  ಕಟ್ಟಡದಲ್ಲಿ   ಅಗತ್ಯವಾದ ಎಲ್ಲ ಉಪಕರಣಗಳಿರುವ ವ್ಯವಸ್ಥಿತ  ಜಿಮ್ಮು  ಇದ್ದ  ಕಾರಣ  ನನಗೆ  ಸರಿ ಹೊಂದುವ  ವೇಳೆಗೆ  ಅಲ್ಲಿ  ಹೋಗಿ  ವ್ಯಾಯಾಮ ಮಾಡಿಕೊಂಡು  ಬರಲು ಅನುಕೂಲವಾಗಿದೆ .  ಅಂತೂ ದಿನಕೊಮ್ಮೆ  ನಾನು ಜಿಮ್ಮಿನ ಕಡೆ ಹೋಗದ್ದಿದ್ದರೆ ಏನೋ ಬೇಜಾರು  ಏನೂ ಕಳೆದುಕೊಂಡೆ ಇಲ್ಲದಂತೆ !  ನಾನು ಹೇಳ್ತಾ  ಇರೋದು  ಅದೇರಿ ನನ್ನ ಕ್ಯಾಲೋರಿ  !

 ಇನ್ನು  ಅಲ್ಲಿ ನನ್ನ ನನ್ನ ಹಾಗೆ ಕೊಂಚ ಗುಂಡು ಗುಂಡಾಗಿರುವ ಮಹಿಳಾ ಮಣಿಗಳನ್ನು ಕಂಡಾಗ  ಇವರಲ್ಲಿ ಕೆಲವರು  ನನಗೆ    ಸಮಾನ ವಯಸ್ಕರು , ಸಮಾನ ಮನಸ್ಕರು ಇಲ್ಲಿದ್ದಿದ್ದರೂ ಸಮಾನ ತೂಕಸ್ಥರು  ಇರುವುದೇ  ನನಗೆ ಎಲ್ಲಿಲ್ಲದ ಸಮಾಧಾನ ! ಆದರೆ ಕೊಂಚ  ತೆಳ್ಳಗಿರುವವರೂ   ಕೂಡ ಜೋರಾಗಿ ಎಕ್ಸರಸೈಜ್  ಮಾಡುವುದನ್ನು ಕಂಡು ನಾನು ” ಅಯ್ಯೋ ನಿಮಗ್ಯಾಕೆ ಬಿಡಿ  ಈ ಪಾಟಿ  ಎಕ್ಸರಸೈಜು , ವ್ಯಾಯಾಮ ಎಲ್ಲಾ   “ ಎಂದು  ಹೊಟ್ಟೆ ಉರಿದುಕೊಂಡು ಪ್ರಶ್ನಿಸಿದಾಗ   ನನಗಿಂಥಾ  ಜೋರಾಗಿ  ಸೈಕಲ್ ಹೊಡೆಯುತ್ತಿರವ ರೀನಾ   ಅಯ್ಯೋ ಹಾಗೇನಿಲ್ಲ ಬಿಡಿ  , ನಮ್ಮ  ವೆಯಿಟ್  ಸರಿಯಾಗಿ  ಮೈನ್ಟೈನ್   ಮಾಡಬೇಕಲ್ಲ  , ಇಲ್ಲದ್ದಿದ್ದರೆ ಏರಿಕೊಂಡು ಹೋಗುತ್ತಪ್ಪ  . ಅಮೇಲೇ ಇಳಿಸೋದು ಎಷ್ಟು ಕಷ್ಟ ಅಲ್ವಾ “ ಎಂದು  ಉಲಿದ್ದಿದ್ದಳು    (ನಿಮ್ಮಹಾಗೆ  ಅನ್ನದ್ದಿದ್ದರ್ರೂ  ನಾನೇ ಅರ್ಥೈಸಿಕೊಂಡೆ  , ಜಾಣೆ  ನಾನು ). ಆಗ ನಾನು  “   ರೀನಾ  ನೀವು ಬಿಡಿ ನಾನು ಕೂಡ  ನಾನು ಕೂಡ ಮೈನ್ಟೈನ್ ಮಾಡ್ತಾ  ಇದ್ದೀನಲ್ಲ್ರಿ,ಅವಳು ಕೊಂಚ ಶಾಕ್  ಆಗುವ ಮುನ್ನವೇ  ಹೇಳಿಬಿಟ್ಟೆ      “ ಅದೇ ನನ್ನ  ಓವರ್  ವೈಟ್ನ ಕಣ್ರೀ  “ ಅಂದೇ ನಗುತ್ತ . ಅವಳೂ ಮರುಕದಿಂದ ನನ್ನತ್ತ ನೋಡಿ “ ಅಯ್ಯೋ ಹಾಗೇನಿಲ್ಲ ಬಿಡಿ ! ದಿನಾಗಲೂ   ಬಿಡದೆ ಮಾಡಿ ಖಂಡಿತ ತೂಕ  ಇಳಸ್ಕೋತೀರಾ   “ ಎಂದು ಸ್ಪೂರ್ತಿ  ತುಂಬಿದಳು  .
ಅವಳ ಮಾತಿನಿಂದ  ನನ್ನಲ್ಲಿ  ಜೋಶ್ ಹಾಗು ಹುಮ್ಮಸ್ಸಿನ  ಸಂಚಲನವೇ  ಹರಿದು  ಅವಳ ಹಾಗೆ ತೆಳ್ಳಗೆ ಆಗುವ ಕನಸಿಗೆ ಚಾಲನೆ ಕೊಡುತ್ತಾ ನಾನೂ ಎಲ್ಲಿಂದ ಶುರುವಿಟ್ಟಕೊಳ್ಳಪ್ಪ  ಎಂದು ಸುತ್ತಲೂ ಕಣ್ಣು   ಹಾಯಿಸಿದಾಗ   “  ಗುಂಡಮ್ಮ   ಇಲ್ಲಿ ಬಾ  “ ಎಂದು ಎಲ್ಲ ಮಶೀನ್ಗಳೂ  ನನ್ನನ್ನೇ  ಕೈ ಬೀಸಿ ಕರೆಯುವಂತೆ ಭಾಸವಾಯಿತು  !   ಇನ್ನು  ನಮ್ಮಂಥ ದಡೂತಿ ಗಳ ಭಾರ  ದಿನವೂ ಹೊತ್ತು  , ನಿರ್ಲಿಪ್ತವಾಗಿ  ನಿಂತ  ಹಲವಾರು ಕೊಬ್ಬು ಕರಗಿಸುವ ಯಂತ್ರಗಳಲ್ಲಿ   ನನಗೆ ಒಗ್ಗುವ ಕ್ರಿಯೆಯನ್ನು  ಆರಿಸಿಕೊಂಡೆ . ಆಗ ನನ್ನ ಅಂಗಾಂಗಾಗಳು ಮೊದಮೊದಲು ಕಿರುಗುಟ್ಟಿ   “ ಅಯ್ಯೋ ಮಹರಾಯ್ತಿ ನಮಗ್ಯಾಕೆ  ಇಷ್ಟೊಂದು  ಕಷ್ಟ ಕೊಡ್ತೀಯಾ  ಕಣೆ   “ ಅಂತ ಕೊಂಚ ಹೊತ್ತು ಮುನಿದು  ಕುಳಿತರೂ  ಕ್ರಮೇಣ   ನನ್ನ ದಾರಿಗೆ ಬಂದವು  .
ಹಾಗೆಯೆ ಜಿಮ್ಮಿನ ಸುತ್ತಲೂ  ಕಣ್ಣು ಹಾಯಿಸಿದಾಗ  ಜಿಮ್ಮಿನ ಗೋಡೆಯ ಉದ್ದಗಲಕ್ಕೂ    ನಮಗೆ   ಶಾಕ್ ಹೊಡೆಸುವ , ನಮ್ಮ  ಗಾತ್ರವನ್ನು   ಅಗಾಧವಾಗಿ ತೋರಿಸುವ  ಬೃಹದಾಕಾರದ  ಕನ್ನಡಿಗಳು ! ಕನ್ನಡಿಪ್ರಿಯ ಳಾದ  ನನಗೆ ಇಲ್ಲೂ  ಆಗಾಗ  ಕಸರತ್ತು ಮಾಡುತ್ತಾ  ನನ್ನನ್ನೇ  ನೋಡಿಕೊಳ್ಳುವ ರೂಡಿ  ,( ಕಸರತ್ತು ಮಾಡುತ್ತಾ ಮಾಡುತ್ತಾ  ಎಳೆ ಸೂರ್ಯನ ಕಿರಣಗಳ ಸ್ಪರ್ಶಕೆ ಕರಗುವ ಇಬ್ಬನಿಯಂತೆ  ನನ್ನ ಕೊಬ್ಬು ಕೂಡ  ಹಾಗೇ  ಕರಗಿ ಹೋಗುವುದೇನೋ ಅನ್ನುವ ಹುಚ್ಚು ಕಲ್ಪನೆ ಇರಬಹುದು ! )  ಇರಲಿ,  ಈ ಕನ್ನಡಿಯಲ್ಲಿ .ಯಾವ  ಕೋನದಿಂದ ನೋಡಿದರೂ  ಅದೇ ಗಾತ್ರ !  ಯಾಕೋ   ನಮ್ಮನೆ ಕನ್ನಡಿಗಿಂತಾ ಇದ್ರಲ್ಲಿ  ದಪ್ಪ  ಕಾಣಸ್ತೀನಪಾ!  ಸರಿಯಿಲ್ಲ ಇವು ಅಂದುಕೊಂಡು  ಕನ್ನಡಿಯನ್ನೇ ಅನುಮಾನಿಸಿದಾಗ  ಮನಸ್ಸು ನಿರಾಳವಾಯಿತು ! .

. ಅಂತೂ ಇಂತೂ  ನಾನು ಕೂತಲ್ಲೇ ಸೈಕಲ್ ಹೊಡೆದು , ಅಲ್ಲೇ ಗೂಟಾ  ಹೊಡೆದು  ನಿಂತಿರುವ ಟ್ರೆಡ್ ಮಿಲ್  ಮೇಲೆ ಮೈಲುಗಟ್ಟಲೆ ನಡೆದು , ನಡು ಕರಗಿಸುವ ಯಂತ್ರದ ಮೇಲೆ ಕುಳಿತು ಗಿರ್ರೆಂದು ತಿರುಗಿ , ಕೊಸರಿಗೆ ಕೆಲವು ಸಣ್ಣ ಪುಟ್ಟ ವ್ಯಾಯಾಮಗಳನು ಮಾಡಿ , ಉಸ್ಸಪ್ಪ ಅನ್ನುತ್ತ ಈ  ಕೊಬ್ಬು ಕರಗಿಸುವ ಯಜ್ಞ್ಯಕ್ಕೆ   ಸ್ವಾಹಾ ಎಂದೆ .( ಹೀಗಾಗಿ ಇಷ್ಟೆಲ್ಲಾ ಕಷ್ಟ  ಪಟ್ಟ ಮೇಲೆ ಮನೆಗೆ  ತೆರೆಳಿದ ನಂತರ  ಜಿಡ್ಡಿನ ಪದಾರ್ಥ  , ಕುರುಕಲು ತಿಂಡಿಗಳನು ಸುಖಾ  ಸುಮ್ಮನೆ   ಸ್ವಾಹಾ  ಮಾಡುಲು  ಭಯ ಕಣ್ರೀ   ! ಹಾಗಾಗಿ  ವಾರದ ಐದಾರು  ದಿನಗಳಾದರೂ ನನ್ನ ಜಿವ್ಹಾ ಚಾಪಲ್ಯಕ್ಕೆ  ದಿಗ್ಭಂದನ ಹಾಕಿ ತೆಪ್ಪಗಿರುತ್ತೇನೆ :)   .

ಮೊದ ಮೊದಲು ಟೀವಿಯಲ್ಲಿ ನೋಡಿಕೊಂಡ  ಕೆಲವು ಕಡಿಮೆ  ತೂಕದ    ಡಂಬೆಲ್ಸ್  ಗಳನ್ನು ಹಿಡಿದು ಎಕ್ಸರ್ಸೈಜ್  ಮಾಡುತ್ತಿದ್ದೆ . ಆದರೆ ಇತ್ತೀಚಿಗೆ  ನನಗೆ  ವಿಪರೀತ ಮೊಣಕೈ ನೋವು ಶುರುವಾಗಿ ವೈದ್ಯರ  ಬಳಿ ಹೋದಾಗ ನನಗಾಗಿರುವುದು   “ ಟೆನಿಸ್ ಎಲ್ಬೊ”  ಎಂದು ಘೋಷಿಸಿದರು . ನನಗಾಗ ಆಶ್ಚರ್ಯ  ! ಇದೇನು ನನ್ನ ಜೀವಮಾನದಲ್ಲಿ  ಒಮ್ಮೆಯೂ ಟೆನ್ನಿಸ್ ಆಟ ಅಡಿದವಳಲ್ಲ ,  ಆದರೆ ಟೀವಿಯಲ್ಲಿ ಬರುವ ವಿಮ್ಬಲ್ದನ್  , ಫ್ರೆಂಚ್ ಓಪನ್   ಟೂರ್ನಮೆಂಟ ಗಳನು  ತಪ್ಪದೆ ನೋಡಿದ್ದುಂಟು ! ವೈದ್ಯರ ಮಾತು ಆಲಿಸಿದ   ನನ್ನ ಪತಿ  “ ನೋಡು ಅದಕ್ಕೆ ನಾನು ಹೇಳಿದ್ದು   ತುಂಬಾ ಟೆನಿಸ್ ನೋಡಬೇಡ ಅಂತ  “ ಎಂದು ತಮಾಷೆ ಮಾಡಿದರು   ! ಸುಮ್ಮನಿರದ ನಾನು    ಆಹಾ  ಹಾಗಾದ್ರೆ ನೀವು ೨೪ ಗಂಟೆ ( ಸಿಕ್ಕರೆ )  ಕ್ರಿಕೆಟ್ ನೋಡ್ತಾ ಇರ್ತೀರಲ್ಲ   ,ನಿಮಗೆ  ಇನ್ನೂ ಹೇಗೆ ಕ್ರಿಕೆಟ್  ಪೇನ್ ಬಂದಿಲ್ಲ  ಅನ್ನೋದೇ ನನಗೆ ಆಶ್ಚರ್ಯ ಕಣ್ರೀ  “  ತಿರುಗೇಟು ಕೊಡುತ್ತಾ ನನ್ನ  ಕ್ರಿಕೆಟ್ ಕ್ರೇಜಿ ಪತಿ ಯನ್ನು ಕೊಂಡಾಡಿದೆ ! 

ಸದ್ಯಕ್ಕೆ ನಮ್ಮ ಸರಸ ಸಂಭಾಷೆನೆಗೆ ವಿರಾಮ ಹಾಡಿ ಕೈಗೆ ಮೆಡಿಕಲ್ ಶಾಪಿನಲ್ಲಿ ಮೊಣಕೈಗೆ ಕೊಂಡ  ಬೆಲ್ಟ್ ಹಾಕಿಕೊಂಡ  ಬರುತ್ತಿದ್ದಾಗ  ಅಕಸ್ಮಾತಾಗಿ ನನ್ನ ಆತ್ಮೀಯ ಗೆಳತಿಯನ್ನು ಕಂಡು ನನಗೆ ಭಾರಿ ಖುಷಿ .  ಅವಳ ಮುಂದೆ ನನ್ನ ವೃತಾಂತಾವನ್ನೆಲ್ಲಾ ಹೇಳಿ ನೋವು ತೋಡಿಕೊಂಡಾಗ      ಅವಳು  " ಅಯ್ಯೋ  ಟೆನಿಸ್ ಎಲ್ಬೋ  ಅಂದ್ರಾ  ! ಹಾಗಾದ್ರೆ ಒಂದ್ ಕೆಲಸ  ಮಾಡು  ಇನ್ನು ನೀನು  ನಿಜವಾಗಲು ಟೆನಿಸ್ ಅಡಕ್ಕೇ ಶುರು ಮಾಡು  ,   ಆಗ ನಿನ್ನ  ಟೆನಿಸ್ ಎಲ್ಬೋ ನೋವು ವಾಸಿ ಅಗಬಹುದು   “ ಎಂದು  ತುಂಟ ಸಲಹೆ ನೀಡ ದಳು ! “  (ನನ್ನ ಸಪ್ಪೆ ಮೋರೆಯಲ್ಲಿ ಕೊಂಚಕಾಲ ನೋವು ಮರೆಯಾಗಿ  ನಾನು  ಅಹಾ !  ಏನ್ ಸೂಪರ್ ಸುಪ್ರೀಂ ಐಡಿಯ ಕಣೆ  ಖಂಡಿತ ಶುರು  ಮಾಡ್ತೀನಿ   , ಎಂದು   ಅರೆ ಕ್ಷಣದಲ್ಲೇ ನನ್ನಂಥಾ ಹೆವಿ ವೈಟು ಗಾತ್ರದವಳನ್ನು   ಬಳಕುವ ಸಾನಿಯ ಮಿರ್ಜಾಳ ಗೆಟಪ್ ನಲ್ಲಿ  ಟೆನಿಸ್  ಆಟಗಾರ್ತಿಯಂತೆ  ಊಹಿಸಿ ಕೊಂಡಾಗ ನಗು ತಡೆಯಲಾಗಲಿಲ್ಲ !  

 ದಿನದಿನಕ್ಕೂ ನನ್ನ ಜಿಮ್ಮಿನ ಒಡನಾಟ  ಹೆಚ್ಚುತ್ತಿದೆ ಎನ್ನಬಲ್ಲೆ  .  ಮೊದಲಿನ ಹಾಗೆ ಜಿಮ್ಮ್ ಈಗ   ,ಬೋರ್ ಹೊಡೆಸುತ್ತಿಲ್ಲ  . ಕಾರಣ  ಅಲ್ಲಿ ನಮ್ಮದೊಂದು ನಿತ್ಯವೂ ಸೇರುವ ಗೆಳತಿಯರ ಗುಂಪೊಂದು ಅರಳಿ ನಿಂತಿದೆ .ಹಾಗಾಗಿ , ಮೊದ ಮೊದಲು  ಮುಕ್ಕಾಲು ಗಂಟೆ ಗಷ್ಟೇ   ಸೀಮಿತವಾಗಿದ್ದ  ನನ್ನ ಜಿಮ್ಮಿನ  ಸಮಯ  ಈಗ ಎರಡು ಗಂಟೆಯವರೆಗೂ  ವಿಸ್ತಾರ ಗೊಂಡಿದೆ . ಹಾಗಂತ ನಾನು  ಎರಡು  ತಾಸು  ವ್ಯಾಯಾಮ ಮಾಡುತ್ತೀನಿ ಅಂತಲ್ಲ   , ಆದರೆ ಹರಟೆಗೂ ಕೊಂಚ ಸಮಯ ಬೇಕಲ್ಲ ! ಈ ಕಾಡು  ಹರಟೆಯೇ  ನನ್ನನ್ನು  ಜಿಮ್ಮ್ ಕಡೆಗೆ ಹೋಗಲು ಪ್ರೆರೇಪಿಸುವುದು ಅಂದರೆ  ತಪ್ಪಾಗಲಾರದು .

ನಮ್ಮದು  talk  while u walk ಅನ್ನುವ ಪಾಲಿಸಿ . ಹಾಗಾಗಿ ನಮ್ಮ ಮಾತುಕತೆ  , ಹರಟೆಗಳು  ಪ್ರಚಲಿತ ವಿದ್ಯಮಾನಗಳ ಸುತ್ತ ಒಮ್ಮೆ ಗಿರಾಕಿ ಹೊಡೆಯುತ್ತಾ , ಮಕ್ಕಳ ಓದಿನ ರಗಳೆಗಳಿಗೂ ಚಾಚಿಕೊಂಡು , ಮಧ್ಯದಲ್ಲಿ ನಮಗೆ ಗೊತ್ತಿರುವ ಲೋ ಕ್ಯಾಲೋರಿ   ಅಡುಗೆ ಗಳನ್ನೂ ವಿನಿಮಯ ಮಾಡಿಕೊಳ್ಳುತ್ತ  ಪುಲಕಿತ ರಾಗುವ ಹೊತ್ತಿಗೆ ನಮ್ಮ  ಗುಂಪಿನಲ್ಲಿ ಒಬ್ಬ ಗೆಳತಿ ಅಕಸ್ಮಾತಾಗಿ  ತಾನು ವಾರಂತ್ಯದಲ್ಲಿ  ಭೇಟಿ ಕೊಟ್ಟ  (ಯಾವುದಾದರೂ  ಹೊಸ ರೆಸ್ತೋರಾಂಟ / ಹೋಟಲಿನ ಬಗ್ಗೆ ಹೇಳಿದರಂತೂ , ನಮ್ಮ  ಆಸಕ್ತಿ ಗಳು ಧಿಡೀರನೆ   ಲೋ ಕ್ಯಾಲೋರಿ   ಅಡುಗೆಗೆ   ಹೋಗೊಲೋ  ಎನ್ನುತ್ತಾ ಅಲ್ಲಿಂದ ಯು  ಟರ್ನ್ ಹೊಡೆದು ಅವಳನ್ನು ಕುರಿತು   “  ಪ್ರೀತಿ  ಈ ಹೊಸ  ರೆಸ್ಟೋರಾಂಟ್    ಎಲ್ಲ ಬರತ್ತೆ ರೀ “  ಅಂತ  ಕೇಳಿಕೊಂಡು ಅದರ ಬಗ್ಗೆ ಹೊಸ ಚರ್ಚೆ  ಶುರುವಿಟ್ಟ ಕೊಂಡ   ಕ್ಷಣಗಳೂ ಬಹಳಷ್ಟಿವೆ ಬಿಡಿ   ! ಹೀಗೆ  ಜಿಮ್ಮಿನಲ್ಲೂ ಆಗಾಗ ಇಣುಕಿ ನೋಡುವ ಅಡುಗೆ ,ಊಟದ  ವಿಷಯಗಳೇ  ನಮ್ಮ ಕಸರತ್ತುಗಳಿಗೆ ತಾಕತ್ತು     .!

ಹಾಗೆಯೇ ಇನ್ನೊಂದು ವಿಚಾರ ಇಲ್ಲಿ ಪ್ರಸ್ತಾಪ ಮಾಡುವುದಾದರೆ  ನನ್ನ  ತೂಕ  ಏರುವುದಕ್ಕೆ , ಪರೋಕ್ಷ  ಕಾರಣ ಇಲ್ಲಿ ನಾವು ಅನುಭವಿಸುತ್ತಿರುವ  ಉತ್ತಮ ದರ್ಜೆ ಮೂಲಭೂತ ಸೌಕರ್ಯಗಳ   ಜೊತೆ ನನ್ನಂಥಹ ಸೋಮಾರಿಗಳಿಗೆ  ಈ ಊರಿನಲ್ಲಿ   ಒದಗಿ ಬಂದಿರುವ ಒಂದು ಅದ್ಭುತ ಸವಲತ್ತು ಎಂಬುದೇ ನನ್ನ ಬಲವಾದ  ಅನಿಸಿಕೆ , . ಅದೇನಪ್ಪಾ ಅಂದ್ರೆ   ದುಬೈ ನಲ್ಲಿ  ಎಲ್ಲ ಅಗತ್ಯದ ಸಾಮನುಗಳನ್ನು   ಸೂಪರ್ ಮಾರ್ಕೆಟ್ಗಳು ಹಾಗು  ಇತರ ವಾಣಿಜ್ಯ ಮುಂಗಟ್ಟುಗಳು ನಮ್ಮ  ಮನೆ ಬಾಗಲಿಗೇ  ತಲುಪಿಸುವ  ಹೋಂ ಡೆಲಿವರಿ  ಎಂಬ ಅದ್ಭುತ ವ್ಯವಸ್ಥೆ .!, ಒಂದು ಫೋನ್ ಮಾಡಿದರೆ ಸಾಕು   ದಿನಸಿ /ತರಕಾರಿ ಯಿಂದ  ಹಿಡಿದು  ಹೋಟೆಲಿನ ಇಡ್ಲಿ , ದೋಸೆ , ಐರನ್ ಬಟ್ಟೆ  ಯವರೆಗೆ  ಎಲ್ಲವೂ ಇಲ್ಲಿ  ಹೋಮ್  ಡೆಲಿವರಿ . ಹೀಗಾಗಿ  ಸಣ್ಣ ಪುಟ್ಟ ಸಾಮಾನಿಗೆ   ನಾವೇ ಓಡಾಡ ಬೇಕೆಂಬುದಿಲ್ಲ  ಕಿರಿ ಕಿರಿ  ! ಈ ಸೌಲಭ್ಯ ನನ್ನ ಹೆಚ್ಚಿನ ಓಡಾಟವನ್ನು ಮೊಟಕುಗೊಳಿಸಿ ಆಕಳಿಸುವವನಿಗೆ ಹಾಸಿಗೆ ಹಾಸಿಕೊಟ್ಟಂತ್ತಾ ಗಿದೆ . ( ನನ್ನ ಅಮ್ಮ ಇಲ್ಲಿಗೆ ಬಂದಾಗ  ಈ ಸೌಕರ್ಯವನ್ನು ಬಾಯಿತುಂಬಾ  ಕೊಂಡಾಡುತ್ತಾ  ಏನೇ  ನಿನ್ನ ಅದೃಷ್ಟ , ಒಲೆ  ಮೇಲೆ ಎಣ್ಣೆ ಇಟ್ಟು   ಸಾಸಿವೆ (ಮುಗಿದಿದ್ರೆ  ) ಕೂಡ ಆರಾಮಾಗಿ  ತರೆಸಿ ಕೊಳ್ಳಬಹುದಪ್ಪ “  ಅನ್ನುತ್ತಾ ನಗಾಡುತ್ತಿದ್ದರು   ) ಹೀಗಾಗಿ ಇಷ್ಟೆಲ್ಲಾ ಸವಲತ್ತು ಒದಗಿ ಬಂದಾಗ ದಿನ ನಿತ್ಯದ ಹಾಲು ತರಕಾರು ಮುಂತಾದುವುಗಳ  ಖರೀದಿಗೆ  ಕಡ್ಡಾಯವಾಗಿ ಅಂಗಡಿ ಮಾರುಕಟ್ಟೆಗಳ ಕಡೆಗೆ ಹೋಗಲೇಬೇಕಾದ  ನನ್ನ  ಸ್ವಲ್ಪವಾದರೂ  ಶ್ರಮದ ತಿರುಗಾಟವನ್ನು   ಉಳಿಸಿ ಕೊಂಡು  ಅದರ ಜೊತೆಗೆ ನನ್ನ ಹೆಚ್ಚಿನ ತೂಕವನ್ನೂ ನನ್ನಲ್ಲೇ ಭದ್ರವಾಗಿ ಉಳಿಸಿಕೊಂಡಿರುವನೇನೋ  ಅನ್ನುವುದು ನನ್ನ ಅನಿಸಿಕೆ .! ( ಹಾಗೆ ತಾವೇ ಹೋಗಿ ಶಾಪಿಂಗ್ ಮಾಡಬೇಕೆನ್ನುವ  ಉತ್ಸಾಹಿ ಮಂದಿ  ಅಗತ್ಯವಾಗಿ ಮಾಡಬಹುದು , ಆದರೆ  ಉತ್ಸಾಹಿತರಲ್ಲಿ   ನನ್ನನ್ನು ನಾನು ಹಿಡಿದುಕೊಂಡಿಲ್ಲ ಅಷ್ಟೇ !  )  
" ನಿನ್ನ ನೋಡಿದರೆ ತೂಕದ  ವಿಷಯದಲ್ಲಿ ನನ್ನೂ ಮೀರಿಸ್ತೀಯ ಕಣೆ " ಎಂದು ಆಗಾಗ   ನನ್ನ ಪತಿಯ ಎಚ್ಚರಿಕೆಯನ್ನು ಗಮನಕ್ಕೆ ತೆಗದುಕೊಳ್ಳದ  ಪರಿಣಾಮ ಇದಾಗಿದ್ದರೂ ನನ್ನ ಮನಸೊಪ್ಪದೆ  ನನ್ನ ಕಪೋಕಲ್ಪಿತ ಉತ್ತರ ಬಾಣಗಳನ್ನು ಅವರತ್ತ ಬಿಡುತ್ತಾ   " ರೀ   ನಾವುಗಳು ಇಲ್ಲಿ ಸದಾ ಕಾಲ ಮಿನರಲ್  ನೀರು ಕುಡಿಯುತ್ತಾ ವರ್ಷಕ್ಕೆ  ಆರೇಳು ತಿಂಗಳಾದರೂ (ಸೆಕೆಗಾಲದಲ್ಲಿ ) ಹವಾ ನಿಯಂತ್ರಿತ  ವಾತವರಣದಲ್ಲಿ    ಇರ್ತೀವಲ್ಲ ,  ತೂಕ ಇದರಿಂದಲೂ ಬೇಗ ಏರುವುದು ಕಣ್ರೀ " ಎಂದು   ಅವರನ್ನು  ಒಮ್ಮೆ  ನಂಬಿಸುವುದರಲ್ಲೂ ಯಶಸ್ವಿ ಆಗಿದ್ದೆ  ! ಆದರೆ ಇವೆಲ್ಲಾ ನನ್ನ  ತೂಕದ ಸಮಸ್ಯೆ ಗೆ ನಾನೇ ಕಂಡುಕೊಂಡ   ಪಲಾಯನ ವಾದದ ಮಂತ್ರದ  ಬಳಕೆ ಅಷ್ಟೇ   

ಏನೇ ಇರಲಿ ಇದೆ ಕಾರಣಕ್ಕಾಗಿ  ವರ್ಷವೆಲ್ಲಾ ಜಿಮ್ಮಿನಲ್ಲಿ ಕಷ್ಟಪಟ್ಟು ಬೆವೆರು ಸುರಿಸಿ  ಕೊಂಚ ತೆಳ್ಳಗಾಗುವಷ್ಟರಲ್ಲಿ  ನಮ್ಮ ವಾರ್ಷಿಕ ರಜೆ ಬಂದು ಬಿಡುತ್ತದೆ , ಆಗ ಸ್ಕೂಲು  ಕಾಲೇಜುಗಳಿಗೆ   ಬೇಸಿಗೆ ರಜೆಯಿದ್ದ  ಕಾರಣ  ಸಾಮಾನ್ಯವಾಗಿ ಎಲ್ಲರೂ  ತಮ್ಮ ತಮ್ಮ ತಾಯಿನಾಡಿಗೆ ತೆರೆಳುತ್ತಾರೆ , ನಾವುಗಳು ಕೂಡ  ಬೆಂಗಳೂರಿಗೆ  ಬಂದಾಗ ನನ್ನನ್ನು  ನೋಡಿದ ನನ್ನ ಕೆಲವು ಪರಿಚಯಸ್ತರು    “ ಏನ್ರಿ  ಸ್ವಲ್ಪ  ತೂಕ ಇಳಿಸಿ  ಕೊಂಚ ಸಣ್ಣ ಆದಹಾಗ್ ಇದೆ   ಎಂದು  ದೊಡ್ಡ  ಮನಸ್ಸಿನ ಮಹಾನುಭಾವರು  ಹೇಳಿದಾಗ    ಆ ಕೊಂಚ “ ಅನ್ನುವುದು ನನ್ನ ಕಿವಿಗೆ ಆಪ್ಯಯಮಾನವಾಗಿ ಹಾಗು  ಅತ್ಯಂತ  ಹಿತವಾಗಿ ಕೇಳಿಸಿ  ನನ್ನ ಜಿಮ್ಮಿನ್ನಲ್ಲಿ ಮಾಡಿದ  ಕಸರತ್ತಿನ  ಪರಿಗಳೆಲ್ಲಾ   ಫ್ಲಾಶ  ಬ್ಯಾಕಿನಂತೆ ಕಣ್ಣ ಮುಂದೆ ನುಗ್ಗಿ  , ಆ ಪದವನ್ನೇ ಕೊಂಚ ಹೊತ್ತು (ನನ್ನ ತೂಕ ಹೊರುವ ! ) ಟೊಂಗೆಯನ್ನಾಗಿಸಿಕೊಂಡು  ಜೀಕುತ್ತಾ ಇರಲು  ನನ್ನಲ್ಲಿ ಏನೋ ಸಾರ್ಥಕ್ಯ ಭಾವ,! ಸ್ವಲ್ಪ ಹೊತ್ತಿನಲ್ಲೇ ಎಚ್ಚೆತ್ತುಕೊಂಡು  ನನಗಾದ ಸಿಕ್ಕಾಪಟ್ಟೆ ಖುಷಿ ಯನ್ನು ತಡೆಯಲಾರದೆ   , ಪದಗಳು ಬಾಯಿಂದ ತಕ್ಷಣ ಹೊರಡದೆ ಅವರತ್ತ ಕೃತಜ್ಞತೆಯಿಂದ  ನೋಡುತ್ತೇನೆ.!

ಆದರೆ ಇದು ನಾ ರಜಕ್ಕೆ  ಬಂದ ಹೊಸದರಲ್ಲಿ   ಇರುವ ಸೀನು  .  ಆದರೆ ಕ್ರಮೇಣ ೧ ಅಥವಾ ಕೆಲವೊಮ್ಮೆ ಎರಡು ತಿಂಗಳು ನನ್ನ ರಜೆ ಕಳೆಯುವಷ್ಟರಲ್ಲಿ   ಅರ್ಥಾತ   ನಾನು ವಾಪಸ್ಸ್ ಹೊರಡುವ ಸಮಯಕ್ಕೆ  ನಾ ಬೆವರು ಸುರಿಸಿ   ಜಿಮ್ಮಿನಲ್ಲಿ  ಮಾಡಿದ ಕಸರತ್ತೆಲ್ಲಾ ಹೊಳೆಯಲ್ಲಿ  ಹುಣಸೆಹಣ್ಣು ತೊಳೆದ ಹಾಗೆ  , ಮತ್ತೆ ೨  ರಿಂದ ೪  ಕೆಜಿ ತೂಕ   ಸ್ವಲ್ಪವೂ ನನ್ನ ಮೇಲೆ ಕರುಣೆ ತೋರದೆ  ಏರಿ ಬಿಡುತ್ತದೆ   ! ಕಾರಣಗಳ ಪಟ್ಟಿ ಬಿಚ್ಚಿಡುತ್ತಾ ಹೋದರೆ ...ನಮಗೆ     ವರ್ಷಕೊಮ್ಮೆ  ಭೇಟಿಯಾಗುವ ನೆಂಟರಿಷ್ಟರ  ಮನೆಯ  ಆದರದ  ಅತಿಥಿ ಸತ್ಕಾರ ಒಂದು ಕಡೆಯಾದರೆ , ನಮಗೆ ಅಪರೂಪಕ್ಕೆ ಸಿಗುವ ಮದುವೆ  ಮುಂಜಿ ಸಮಾರಂಭಗಳ ಭಾರಿ ಬೋಜನ , ಇನ್ನು  ಸಾಮನ್ಯವಾಗಿ  ನಾನು ಬಂದಾಗ ಶ್ರಾವಣ ಮಾಸದ ಭರ್ತಿ  ಹಬ್ಬಗಳ ಸೀಸನ್ನು ! ., ಹೀಗಾಗಿ  ವಾರಕೊಮ್ಮೆ ಹಬ್ಬದ  ಸಿಹಿ ಊಟ  ಚಪ್ಪರಿಸುವ  ಅವಕಾಶ , ಇಷ್ಟೇ ಅಲ್ಲದೆ  ಆಗಾಗ ಪಾರ್ಟಿ ಅದು ಇದು ಅನ್ನುತ್ತಾ ಹೊರಗಡೆ ತಿನ್ನುವುದು  ಅಬ್ಬಾ   ಒಂದೇ ಎರಡೇ ! ಇದಕ್ಕಿಂತ ಮತ್ತೇನು ಬೇಕು ಬಿಡಿ  ನನ್ನನ್ನು  ಮತ್ತೆ ಮೊದಲಿನಕಿಂತಾ ಕೊಂಚ ಹೆಚ್ಚೇ ಗುಂಡಾಗಿಸಲು. ! ಇನ್ನು  ಇಷ್ಟೆಲ್ಲಾ   ನಡೆಯುವಾಗ   ವ್ಯಾಯಾಮ ,  ವಾಕಿಂಗ್   ಮಾಡುವ  ಮೂಡು ಅಪ್ಪಿ ತಪ್ಪಿಯೂ ಕೂಡ ನನ್ನತ್ತ ಸುಳಿಯದೇ ಎಲ್ಲೋ ಕಾಲು   ಮುರಿದುಕೊಂಡು ಮಲಗಿರುತ್ತದೆ   ! ಇನ್ನೂ ರೌಂಡಾಗುವ ಮುನ್ನ ಎರೆಡು  ರೌಂಡಾದರೂ   ಪಾರ್ಕಿನಲ್ಲಿ ನಡೆಯುವ ಪರಿಜ್ನ್ಯಾನ ಮಂಡೆಗೆ ಬರವುದೇ ಇಲ್ಲ .
 , ,ಸರಿ ನಾನು ಮರಳುವ ಸಮಯಕ್ಕೆ ಎಂದಿನಂತೆ   ಸಿಕ್ಕಾ  ಪಟ್ಟೆ  ಶಾಪಿಂಗ್ ಮಾಡಿ ನನ್ನ ಲಗ್ಗೇಜಿನ  ಭಾರ ವಿಪರೀತವಾದಂತೆ ಕಂಡರೂ ಅದು ಎಂದಿಗೂ ನನ್ನ ಏರ್ ಲೈನ್ಸ್ ನಿಗದಿ ಪಡಿಸಿದ  ಲಗ್ಗೇಜಿನ ಗರಿಷ್ಟ  ಮಿತಿಯನ್ನು ಮೀರುವುದಿಲ್ಲ ಆದರೆ ನನಗೆ ಈ ಯಾವುದೇ  ಕಾಯಿದೆ ಕಾನೂನಗಳು ಅನ್ವಯಿಸುವುದಿಲ್ಲ ವಾದ ಕಾರಣ   ನಾನು  ಭಾರ ಏರಿಸಿಕೊಂಡೇ ಊರಿಗೆ  ವಾಪಾಸಾಗುವುದು !   
  , ಇನ್ನು  ನಾನು (ಪೆ) ಸೇರಿಸಿ ಕೊಂಡು  ಬಂದ ಈ ಎಕ್ಸಟ್ರಾ ತೂಕ ,ವನ್ನು  ಇಳಿಸಲು ಮತ್ತೆ ಮುಂದಿನ ಬಾರಿ ಭಾರತಕ್ಕೆ ರಜೆ ಗೆ ಹೋಗುವವರೆಗೂ  ಜಿಮ್ಮಿನಲ್ಲಿ ಶುರು ನನ್ನ ಯಥಾ ಪ್ರಕಾರದ ಕಸರತ್ತು . ಒಮ್ಮೊಮ್ಮೆ   ಕಾಲೇಜು ವಿದ್ಯಾರ್ಥಿಗಳು   ಹಿಂದಿನ ಒಂದೆರಡು ವರ್ಷದ ಸಬ್ಜೆಕ್ಟ್ ಗಳನು ಪಾಸು ಮಾಡದೆ  ಉಳಿಸಿಕೊಂಡಿರುವ ಕ್ಯಾರಿ  ಓವರ್ ಸಿಸ್ಟಮ್ ನಂತೆ ನನ್ನದೂ  ಎರೆಡು ಮೂರು ವರ್ಷದ  ಬ್ಯಾಕ್ ಲಾಗಿನಂತೆ  ತೂಕ ಉಳಿದು  ಬಿಟ್ಟಿರುತ್ತದೆ . ಹಾಗಾಗಿ  ಆರಕ್ಕೆ ಏರದೆ  ಮೂರಕ್ಕೆ ಇಳಿಯದೆ  ನಾನು ಕೂಡ ಮೈನ್ಟೈನ್ ಮಾಡ್ತಾ ಇದ್ದೀನಿ  . ಅರರೆ ಮೆರೆತು ಬಿಟ್ರಾ   ? ಅದೇ ನನ್ನ ಓವರ್ ವೈಟು ರೀ !

9 comments :

  1. ನಿಮ್ಮ 'ಸಮತೂಕ'ದ ಗುಟ್ಟು - ಇಳಿಸಿದಷ್ಟು ಏರಿಸುವುದು ಹಾಗು ಕಳೆದಷ್ಟು ಕೂಡಿಸುವುದು. ಖುಷಿಯಾಯ್ತು ಓದಿ... :)

    ReplyDelete
  2. This comment has been removed by the author.

    ReplyDelete
  3. nice :) Anitha Naresh

    ReplyDelete
  4. ಹಹಹ... ಆರತಿಯವರೇ...ಬಹಳ ಚನ್ನಾಗಿದೆ ನಿಮ್ಮ ಕಸರತ್ತಿನ ನಿಯತ್ತಿನ ಪ್ರಯತ್ನದ ಲೇಖನ...

    ReplyDelete
  5. ಧನ್ಯವಾದಗಳು ಉಪೇಂದ್ರ ಪ್ರಭು ಅವರೇ, ಅನಿತಾ , ಆಜಾದ್ ಭಾಯಿ ನಿಮ್ಮ ಸ್ಪಂದನಕ್ಕಾಗಿ :)

    ReplyDelete
  6. thnks girsh jamadagni avare for stopping by and appreciating my article.

    ReplyDelete
  7. ಮೇಡಂ ನಾನೂ ಒಸೀ.
    ಡುಮ್ಮನೇ, ಆದ್ದರಿಂದ ನನಗೂ ಜಿಮ್ಮು ಅವಶ್ಯ ಅನಿಸುತಿದೆ. ಒಳ್ಳೆಯ ಬರಹ.

    ReplyDelete
  8. ಜಿಮ್ಮಿಗೂ, ಜಿಮ್ಮಿಗೂ ಒಳ್ಳೇ ನಂಟಿದೆ ಅಂತ ಕೇಳ್ಪಟ್ಟಿದ್ದೀನಿ ... ಖಂಡಿತ ನೀವು ಓದುತ್ತಿರೋದು ಸರಿಯೇ ... ಕಾಪಿ-ಪೇಸ್ಟ್ ತರಳೆ ಇಲ್ಲ .. ಈಗ ಬಿಡಿಸಿ ಹೇಳುತ್ತೇನೆ
    ಜಿಮ್ಮಿಗೆ ಹೋಗಲು ಇಷ್ಟಪಡದೇ ಇರುವವರು 'ಜಿಮ್ಮಿ'ಯನ್ನು ಸಾಕುತ್ತಾರೆ ... ಆಗ ಇಷ್ಟವಿದೆಯೋ ಇಲ್ಲವೋ ದಿನವೋ ನಿಮ್ಮನ್ನು ಆ ಜಿಮ್ಮಿ ಹೊರಗೆ ಎಳೆದುಕೊಂಡು ಹೋಗೋದು ಗ್ಯಾರಂಟಿ !!!

    ReplyDelete