Saturday, November 24, 2012

ಕಡಲ ತೀರದ ಸಂಜೆ



ಬಿಸಿಲ ಬೆವರೊರೆಸಿ  ಕಾದು, ನಿರೀಕ್ಷೆಯಲೇ
ತಣ್ಣನೆ ಕುಳಿತ   ಮರಳುಹಾಸಿನ ಸ್ವಾಗತ
ತೂಗುವ ತಂಗಾಳಿ ,ನೆರಳು -ಬೆಳಕಿನಾಟ  ;
ಬಣ್ಣ  ಚಿತ್ತಾರಗಳನರಳಿಸಿ ,ಮತ್ತೇರಿಸಿ
ಕೆಂಪಿನಾಗಸ  ಸಂದ್ಯಾರಾಗವೇ ಮತ್ತೆ ತಣಿಸಿ ..

ಅಲೆಗಳ ಮೊರೆತಕೆ  , ಮೌನ ಮುರಿದಿದೆ  ಕಡಲು
ಮರಳುಹಾದಿಯ  ತುಂಬೆಲ್ಲಾ  ಹೆಜ್ಜೆಗಳ ಮಧುರಭಾವ
ನಿನ್ನ ಬೆಚ್ಚನೆಯ ಕೈ ಹಿಡಿದು ನಡೆವಾಗ ....
ಪ್ರೇಮದಲೆಗಳ ಪುಳಕಕೆ   ಮಿಂದ ಹೃದಯಗಳು   
ನೀನೊತ್ತಿ  ಕೊಟ್ಟ ಮುತ್ತು  ಇಂದೂ
ಹೊಳಪಾಗಿ  ,ಕಡಲಾಳದ  ಖಜಾನೆಗೆ .

ಮೆಲ್ಲನೆ ಅಪ್ಪಲು ಕಾಯುವ  ಕತ್ತಲ   ಬಯಕೆಗೆ  
ನಗುವ ಚಂದಿರ  ,ಬೆರೆತು  ಇಳಿಯಬೇಕಿದೆ ಇನ್ನೂ
ಬದುಕಿನ ನಾಳೆಗೆ , ಅಲೆಗಳ್ಹೊತ್ತ   ಬಾಳ ನೌಕೆ
ತಂಗಾಳಿಯ  ಒಲೈಕೆಗೂ  ಹುಸಿಮುನಿದ   ತೆಂಗು ಸಿರಿ
ಸಾಕು ,ಬಿಚ್ಚು ಚಿಪ್ಪಿನೆದೆಯ ಕಾಣು ಪ್ರೀತಿ ಹೊಳಪಸಿರಿ  
ಕಾಣೆ ,ಕಾಲ ಮುಡಿಗೇರಿಸುವ ಹಂಬಲದ ಹೂವುಗಳೆಷ್ಟೂ
ಅರ್ಥಯಾತ್ರೆಗೆ  ಕಾಡುವ ದ್ವಂದ್ವಗಳ ಬಂಡೆಗಳೆಷ್ಟೋ
ಜೀವ ಜಾಲವನ್ಹೊತ್ತು  ನಿಂತ  ಕಡಲಾಗಬೇಕು  
ಮೇಲ್ನೋಡಲು .....
ಮತ್ತೆ ಒದ್ದೆ ಮೋಡಗಳ ಹರವಿ ಕೂತ  ಬಾನು
ದೂರ ತೀರಕೂ ಸಾಗಬೇಕಿದೆ ನಾನು – ನೀನು .

2 comments :

  1. ತೇಲಿಬಿಡಬೇಕು ಮನವ ತೇಲ್ವ ನೌಕೆಯಂದದಿ, ಮುಳುಗು ಸೂರ್ಯನ ರಸಿಕ ರಂಗಿನ ಕಂಪಿಗೆ..
    ಅಲೆಗಳ ಅಬ್ಬರದ ಹಾಡಿಗೆ ಮರಳ ತೀರದ ಮಧುರಾಲಾಪ!

    ReplyDelete
  2. ಇಂತಹ ಮಧುರಾನುಭೂತಿ ನನಗೂ ಸಿಗಲಿ ಎಂದು ನೀವು ಹಾರೈಸಿ.

    ಒಲುಮೆಯನ್ನು ಇಷ್ಟು ಮುದವಾಗಿ ಕಟ್ಟಿಕೊಟ್ಟ ನಿಮಗೆ ಶರಣು.

    ReplyDelete