Sunday, October 28, 2012

ಹಾಸ್ಯ ಲೇಖನ

ಕಸಾಯಣ


ಸರಸೂ  ..! ಇಲ್ ಕೇಳೆ ಇನ್ನು ಕಸದ ಸಮಸ್ಯೆ  ಪರಿಹಾರವಾಗುತಂತೆ  ಕಣೆ ..! ಇವರು ಕೈಯಲ್ಲಿ ಎರಡು ಕಸದ  ಬುಟ್ಟಿ  ಹಿಡ್ದು ಮನೆ ಒಳಗಡೆ ಅಡಿ ಇಡುತ್ತ  ಹೇಳಿದರು .   ಕಸದ ವಿಷಯ ಬಂದ ತಕ್ಷಣ  ರಸಂ  ಮಾಡು ತ್ತಿದವಳು ಹೊರಗೋಡಿ ಬಂದೆ .
ನಮ್ಮ ಮನೆಯ ಮುಂದಿನ  ರಾಶಿ ಕಸ ವಾರಗಟ್ಟಲೆ ವಿಲೇವಾರಿ   ಆಗದೆ , ಈ ದುರ್ನಾತಕ್ಕೆ  ನಮ್ಮ ಮೂಗು ಒಗ್ಗಿ ಹೋಗುವ ಪರಿಸ್ಥಿ ತಿ ಬಂದಿತ್ತು . ಇನ್ನು ಫಿನಾಯಿಲ್ , ಉಪ್ಪಿನ ಕಾಯಿ , ಪ್ಲಾಸ್ಟಿಕ್ ಡಬ್ಬ ಮಾರೋ  ಸೇಲ್ಸ್ ಹುಡುಗಿಯರು , ಅನಾಥಾಶ್ರಮ , ಮಣ್ಣು ಮಸಿ ಅಂತ  ಚಂದ ಎತ್ತುವವರು  ನಮ್ಮ ಮನೆಯ ಆಲ್ಸ್ಹೆಶಿಯನ್ ನಾಯಿಗೂ ಹೆದರದೆ ,ಆಗಾಗ  ಬಂದು ಕಾಡು ತ್ತಿದ್ದವರು   ಈ  ವಾಕರಿಕೆ ಬರಿಸುವ ಕಸದ ದುರ್ನಾತಕ್ಕೆ   ಹೆದರಿ ನಮ್ಮ ಮನೆ ಕಡೆ ಹಾಯ್ದಿರಲಿಲ್ಲ !  ಇನ್ನು ಇದು ಸಾಲದು ಅಂತ  ನಮ್ಮ ಓಣಿಯ ಎದುರಿನ ಚರಂಡಿಯ  ವಾಲ್ವ್ ಒಡೆದು    ಇದರಿಂದಲೂ  ಒಂದು ಗಬ್ಬು ನಾಥ ಬೇರೆ , ಹೀಗಾಗಿ  ಈ ಕಾಕ್ಟೇಲ್  ವಾಸನೆಗೆ , ನಮಗೆ   ಡ್ರಿಂಕ್ಸ್  ಹಾಕದೆ  ತಲೆ ತಿರುಗಿ ಬೀಳುವಂತೆ  ಅಮಲೇ ರಿರುತ್ತಿತ್ತು  . !  ಇನ್ನ್ನು ಪಾಪ ಓಣಿಯ ಜನರು  ಹೊರತಾಗಿ  ಹೊರಗಿನವರು  ಬರಲೇಬೇಕಾದ  ತುರ್ತು ಪರಿಸ್ತಿತಿ  ಇದ್ದರಷ್ಟೇ  ಈ ಕಡೆ ಹಾಯುವ ಧೈರ್ಯ  ಮಾಡಿಯಾರು .
ನನ್ನ  ಯೋಚನೆಗೆ ಕಡಿವಾಣ ಹಾಕುತ್ತ  “ ಏನ್ರಿ ಅದು  ಏನೋ ಕಸ  ವಿಲೇವಾರಿ ಬಗ್ಗೆ ಹೇಳ್ತಾ ಇದ್ದರಲ್ಲ , ಸ್ವಲ್ಪಾ ಸರಿಯಾಗ ಹೇಳ್ರಿ  ಗೋಗರೆದೆ .  ಇವರು ಬಾಯಿ ತೆರೆಯುವಸ್ತ್ರಲ್ಲಿ  ನನ್ನ  ಫೋನು ರಿಂಗಣಿಸಿತು . ಆ  ಕಡೆ ಯಿಂದ  ನನ್ನ ತಂಗಿ ಮಗ ಶ್ರೀಕಾಂತು ದ್ವನಿ ಗೆ ನನ್ನ ಮುಖದಲ್ಲಿ  70 mm ಸ್ಮೈಲ್ ನೋಡಿಯೇ ಇವರು ಊಹಿಸರಬೇಕು , ನನ್ನ ಆತ್ಮೀಯ ರದೇ   ಕಾಲು ಅಂತ . ಚನ್ನಗಿದ್ದೀರ ಚಿಕ್ಕಮ್ಮ? , ಮಾವ ಹೇಗಿದ್ದಾರೆ ? ಕುಶಲೋಪಚರಿಗಳಾದ  ಮೇಲೆ  ಮುಖ್ಯ ಪ್ರಶ್ನೆ ಗೆ ಬಂದ . ಚಿಕ್ಕಮ್ಮ  ನಿಮ್ಮ ಮನೆ ಎದುರ ಗಡೆ  ಕಸ ಎಲ್ಲ ವಿಲೇವಾರಿ  ಆಯ್ತಾ ?
ನಾನು ,ಯಾಕಪ್ಪ ಶ್ರೀಕಾಂತು  ಹಾಗ ಕೇಳ್ತಾ ಇದ್ದೀಯ  ? ಅಂತ  ಕ(ಸ)ಸಿವಿಸಿ ಯಿಂದಲೇ ಸವಾಲೆಸೆದೆ . ಏನಿಲ್ಲ  ಚಿಕ್ಕಮ್ಮ ನನ್ನ ಮಗನ ಉಪನಯನದ  ಆಮಂತ್ರಣ  ನಿಮಗೆ   ಕೊಟ್ಟು ಹೋಗೋಣ ಅಂತ ಅನ್ನಕೊಂಡಿದ್ದಿವಿ .ಇನ್ನೂ  ಕಸ ಹಾಗೆ ಇದ್ದರೆ ದಯವಿಟ್ಟು ಕ್ಸಮಿಸಿ .ಇಲ್ಲೇ ಫೋನಲ್ಲೇ ಕರೆದು ಬಿಡ್ತೀನಿ , ಯಾಕಂದ್ರೆ  ನಂಗೆ  ಕಸ , ಧೂಳು ಅಂದ್ರೆ ಕೆಮ್ಮು , ಇನ್ನು ನನ್ನ ಹೆಂಡತಿ ಸೀತೆ ಗೆ ನಿಮಗೆ ಗೊತಲ್ಲ  ದಮ್ಮು ,ಹಾಗಾಗಿ ಆಕಡೆ ಬಂದ್ರೆ  ಎರಡು ಜಾಸ್ತಿ ಅಗತ್ತೆ ಅದಕ್ಕೆ ..! ನಾನು  ನಿಟ್ಟುಸಿರು ಬಿಡುತ್ತ  ಆಯ್ತಪ್ಪ ಹಾಗೆ ಮಾಡು , ಕಸ ಎಲ್ಲ  ಖಾಲಿ ಆಗಿ ಕ್ಲೀನ ಮಾಡಿದ್ಮೇಲೆ  ನಾನೇ ಫೋನ್ ಮಾಡ್ತಿನಿ , ಸಂಸಾರ  ಸಮೇತ ಬಂದು ಹೋಗು ಅಂತ ಫೋನ್ ಕುಕ್ಕುತ್ತ  “ ಥೂ ! ಏನ್ರಿ ಇದು ...ಇ ಹಾಳು  ಕಸ ನಮ್ಮ ಮಾನ ಮರ್ಯಾದೆ ಎಲ್ಲಾ  ತಗೀತಾ  ಇದ್ಯಲ್ಲ  ...ಇನ್ನು ಎಷ್ಟು ದಿನ ಅಂತ ಇಂಥ  (ನಾಯಿ) ಪಾಡು , .ಈ ಕಸದ ಸಮಸ್ಯೆ ಬಗೆಹರಸ್ಲಿಕ್ಕೆ ಪಾಲಿಕೆ  ಸೂಕ್ತ ಕ್ರಮ ತೊಗೋತೀವಿ ಅಂತ ಹೇಳ್ತಾ ಇದ್ಯಲ್ಲ ,ಅದೇನ್ ಕ್ರಮಾ ನೋ.. ಕರ್ಮಾನೋ ಗೊತ್ತಿಲ್ಲ , ಈ ಸೂಕ್ತ ಕ್ರಮ ಸೂತಕ ಕ್ರಮ ಆಗಬಾರದು ಅಷ್ಟೇ !. ಇನ್ನು ಈ ಮೇಯರು   /ಕಾರ್ಪೋರೇಟರ ಗಳು ಏನ್ ನಿದ್ದೆ ಮಾಡ್ತಾ ಇದ್ದಾರ ? ತಮ್ಮ  ಏರಿಯಾದ  ಕಾರ್ಪೊರೇಟರ್ ಮನೆ  ಮುಂದೆ ಜನ   ತಮ್ಮ ತಮ್ಮ  ಮನೆಯ ಕಸದ ಬುಟ್ಟಿ (ಕಸದ ಸಮೇತ ) ತಂದು ಇವರ ಮನೆ ಮುಂದೆ  ಸುರಿದು ಪ್ರತಿಭಟನೆ ಮಾಡ್ಬೇಕು  ಕಣ್ರೀ ಆಗ ಗೊತ್ತಾಗತ್ತೆ . ಇನ್ನು ಆ ಮಂಡೂರಿನ ಜನ  ಕಸದ ಲಾರಿ ಕಂಡ್ರೆ ಸಾಕು ಕೆಂಡ ಕಾರಿ  ಲಾರಿಗಳ ಮೇಲೆ ಕಲ್ಲೆಸ್ದು   ಪಾಲಿಕೆ  ನೌಕರರ ಮೇಲೂ ಹಲ್ಲೆ ನಡೆಸಿ  , ಒಡಸ್ತಾ ಇದ್ದಾರಂತೆ   ! ಅದೇನೋ ಈಗ ಮುಂಜಾಗ್ರತೆ ಕ್ರಮ  ಅಂತ ಕಸದ ಲಾರಿಯ ಜೊತೆ ರಕ್ಷಣೆಗೆ ಅಂತ ಪೋಲೀಸ್  ವ್ಯಾನ್ ಬೇರೆ ಕೇಡು !  ಇನ್ನು ಇವರಿಗೂ  ಮೋದಿ ,ಜಯಲಲಿತಾರಂತೆ    “ ಜೆಡ್  “ ಕ್ಯಾಟಗರಿ  ರಕ್ಷಣೆ ಕೊಡೋ  ದಿನಗಳು  ಬಂದರೂ ಬರಬಹುದು !! ಕಸ ಹಾಕಲು ಏನ್ ಕಸರತ್ತು ಏನ್ ಕಥೆ .ಛೆ ..! ಆಗ ಬೆಂಗಳೂರು ಅಂದ್ರೆ  ಗಾರ್ಡೆನ್ ಸಿಟಿ ಅಂತಾ ಇದ್ರು , ಈಗ  ಗಾರ್ಬೇಜ್   ಸಿಟಿ ಅನ್ನು ಹಾಗೆ ಆಗ್ಬಿಟ್ಟಿದೆ ....ಅಲ್ಲಾರೀ ಈ ಹಾಳು ಕಸದ ಮೇಲೆ ಮಳೆ ಸುರಿದು ಸೊಳ್ಳೆಗಳು ತಾಂಡವಾಡ್ತಾ   ಇವೆ  .ಇನ್ನು ನಮಗೂ ಡೆಂಗೂ  ಜ್ವರ ಬಂದು ನಮ್ಮ ವಿಲೇವಾರಿ ಆಗ್ಬಿಟ್ರೆ ಅಂತ ಭಯ ಶುರುವಾಗಿ ಬಿಟ್ಟಿದೆ  ರೀ  ..ಅಂತೂ  .ಜನ ಸಾಮಾನ್ಯರ ಸಮಸ್ಯೆ  ಈ ಸರ್ಕಾರಕ್ಕೆ  ಕಾಲು ಕಸ  ಆಗ್ಹೋಗಿದೆ ....
 ನನ್ನ ಕಿರುಚಾಟಕ್ಕೆ ಇವರು ಬ್ರೇಕ್ ಹಾಕಿ  ...” ಅಯ್ಯೋ ಸರಸು  ! ಇದರ ಬಗ್ಗೆನೇ   ನಿನಗೆ ಆಗಲೇ ಹೇಳ್ಬೇಕು ಅಂತ ಇದ್ದಿದ್ದು . ಇಲ್ ನೋಡು ಇನ್ನ್ಮೇಲೆ ಪಾಲಿಕೆ  ಆಧುನಿಕ  ತಂತ್ರಜ್ಞ್ಯಾನ ಬಳಸಿ  ಕಸ  ವಿಲೇವಾರಿನ  ಹೈಟೆಕ್  ಮಾಡ್ತಾರಂತೆ ! .ಪೇಪರನಲ್ಲಿ  ಸುದ್ದಿ ಬಂದಿದೆ ಕಣೆ ! ಬೆಂಗಳೂರಿನ  ಯಾವ ಏರಿಯಾ ದಲ್ಲಿ ಕಸದ ರಾಶಿ ಇದ್ದರೂ ಪಾಲಿಕೆಯ ಅಧಿಕಾರಿಗಳು ಅದನ್ನ ಆನ ಲೈನ್  ಮೂಲಕವೆ  ನೋಡಬಹುದಂತೆ ! ಅವರು ತಕ್ಷಣ  ಅಲ್ಲಿಗೆ ಗಾಡಿ ಕಳಿಸಿ  ಕಸ ಎಲ್ಲಾ ವಿಲೇವಾರಿ ಮಾಡ್ಸಿಬಿಡ್ತಾರಂತೆ !
ನನಗೆ  ಒಟ್ಟಿನಲ್ಲಿ  ಕಸದ  ದುರ್ನಾತಕ್ಕೋ  ಅಥವಾ ಇವರು ಹೇಳಿದನ್ನು ನಂಬಲಾಗದೆ  ಮೂಗಿನ ಮೇಲೆ ಬೆರಳು ಅಲ್ಲ  ಕರ್ಚೀಪ್  ಇಟ್ಟುಕೊಳ್ಳುವಂತಾಯಿತು . ನಾನು “ ಅಯ್ಯೋ  ಬಿಡಿ ಇದೆಲ್ಲ  ಆಗಲ್ಲ  ಬಿಡಲ್ಲ ..ಈ ಅಧಿಕಾರಿಗಳಿಗೆ  ಕಸದ ರಾಶಿ ಯ ಫೋಟೋ ಜೊತೆ ಅದರ ಗಬ್ಬು ನಾತ ಕೂಡ  ಕಂಪ್ಯೂಟರ್ ನಲ್ಲೇ  ಬಂದು ಅವರ ಮೂಗಿಗ್  ಬಡಿಬೇಕು ಕಣ್ರೀ ..ಆಗ ಏನಾದ್ರೂ ಕ್ರಮ ತೊಗೊಳ್ತಾರೆ ಅನ್ಸತ್ತೆ ! ಅಂತ  ಸಿಟ್ಟು ಕಾರಿಕೊಂಡೆ .
ನನ್ನ ಈ ಸೂಪರ್  ಸುಪ್ರೀಂ  ಐಡಿಯಾ ಗೆ ಇವರು ಏನೂ ಹೇಳಲು ತೋಚದೆ  ಬೆಕ್ಕಸ  ಬೆರಗಾಗಿ  ನನ್ನೇ ನೋಡುತ್ತಾ ನಿಂತರು !.  

Arathi Ghatikar

4 comments :

 1. ಚೆನಾಗಿದೆ ಕಸಾಯಣ...ನಿಜವಾಗಿಯೂ ಗಂಭೀರವಾದ ಸಮಸ್ಯೆಯನ್ನು ಹಾಸ್ಯದೊಂದಿಗೆ ಹೇಳಿದ್ದೀರಿ...ಚಿಕ್ಕದಾಗಿ ಚೊಕ್ಕದಾಗಿದೆ,...ಓದಲು ಇಷ್ಟವಾಯ್ತು... .

  ಬರೆಯುತ್ತಿರಿ..
  ನಮಸ್ತೆ..

  ReplyDelete
 2. ನಮ್ಮ ದಿನ ನಿತ್ಯದ ಬೆಂಗಳೂರಿಗರ ಗೋಳಿಗೆ ಅಮೋಘವಾಗಿ ಹಾಸ್ಯ ಲೇಪಿತ.

  ReplyDelete
 3. ಧನ್ಯವಾದಗಳು ಚಿನ್ಮಯ್ , ಬದರಿನಾಥ ಅವರೆ ನಿಮ್ಮ ಅನಿಸಿಕೆ ಗಾಗಿ ,ಅಗಾಗ್ಗ ಬರ್ತಾ ಇರ್ರಿ :)

  ReplyDelete