Sunday, May 20, 2012

ಮೌನಿ

ನಿರೀಕ್ಷೆಯಲ್ಲೇ ಕಾಯುವ ಕಂಗಳು ,
ಕತ್ತಲು ಕಣಿವೆಯ ಇಳಿ ಜಾರು , ಭ್ರಮೆಯ
ತೆಕ್ಕೆಗಂಟಿದ ಕಣ್ಣೀರು ಹರಿಯಲಿಲ್ಲ ,
ಸ್ವರದ ಎದೆಬಡಿತವಿಲ್ಲ ,ಸ್ಥಿರವಾಗಿ
ನಿಂತಿದೆ ಪ್ರಶಾಂತ  ಮೌನ .

ಇಂದೇಕೋ ಕಾರ್ಮೋಡದ ಮರೆಯಲ್ಲಿ
ರವಿ ಮೂಡಲಿಲ್ಲ , ಚುಕ್ಕಿಗಳ
ಮಿನುಗಿಗೆ ನೆನಪು ಸಂಭ್ರಮಿಸಲಿಲ್ಲ..
ಶಶಿಯ ಜೋಗುಳ ಗಾನವಿಲ್ಲ
ಇನಿಯನಾ ಅಪ್ಪುಗೆಯ ಕನಸಿಗೆ
ಇಳೆ ಸಾಕ್ಷಿಯಾಗಲಿಲ್ಲ ...

ಧಮನಿಯೊಳ್ಘರಿದ ನೋವ ಹನಿ ,ಒಡಲ
ಕೆಂಡ ಚಿತೆಯನ್ನೇರಿ ನಕ್ಕು ತಣ್ಣಗಾಗಿದೆ ..
ನಿಶಬ್ಧ ವಾಗಿ ತುಳಿಯುತ್ತಿರುವ ಮುಳ್ಳು ಹೆಜ್ಜೆಗೆ
ನಿರ್ಲಿಪ್ತ ಭಾವದುಸಿರ ಬಿತ್ತಿ , ಇನ್ನೂ ಅರಳದ
ಬಾಳಲಿ ಅಪಶ್ರುತಿಯೇ , ಮೈ ನೆರೆದಿದೆ .

ಮೊಗ್ಗಾಗಿ ನಲಿದ ನೆನಪ ಮಳೆಗೆ
ಸಿಕ್ಕ ಬೊಗಸೆ ಖುಷಿ ,ಮುಷ್ಟಿಯೊಳಗಿನ ಉಸುಕು ,
ಆದರೀಗ ವಿರಹದ ಹಂಗಿಲ್ಲ , ಮೋಹದ ಸುಳಿಯಿಲ್ಲ
ದಿಗಂತದ ಮೌನವೆಲ್ಲಾ ಎದೆಯೊಳಗೆ ಹರಿದಿದೆ
ಹಸಿದ ಮನಕ್ಕೆ ಮಾತನುಣಿಸಿದೆ.

3 comments :

  1. "ನಿಂತಿದೆ ಪ್ರಶಾಂತ ಮೌನ"

    ಈ ರೀತಿಯ ಭಾವ ಬರಬೇಕಾದರೆ ಅನುಭವದ ಮೂಸೆಯಲ್ಲಿ ಕಾದು, ಕುದ್ದು, ತಣ್ಣಗಾದರೆ ಮಾತ್ರ ಸಾಧ್ಯ. ಎಷ್ಟೊಂದು ಆಸೆಗಳು, ಆಶಯಗಳು, ನೆರವೇರಿದ ಕೆಲವು, ನಿರಾಶೆಯನ್ನು ತಂದವು ಕೆಲವು.

    ಆದರೀಗ ವಿರಹದ ಹಂಗಿಲ್ಲ , ಮೋಹದ ಸುಳಿಯಿಲ್ಲ
    ದಿಗಂತದ ಮೌನವೆಲ್ಲಾ ಎದೆಯೊಳಗೆ ಹರಿದಿದೆ
    ಹಸಿದ ಮನಕ್ಕೆ ಮಾತನುಣಿಸಿದೆ. ................ಈ ಸಾಲುಗಳು ಅತೀ ಸುಂದರವಾಗಿವೆ. ತುಂಬಾ ಚೆನ್ನಾಗಿ ಬರೆಯುತ್ತೀರಿ. ಸುಂದರ ಮನದ ಭಾವ ಇದೆ. ದನ್ಯವಾದಗಳು. ನಮಸ್ಕಾರ.

    ReplyDelete
  2. ಮೌನಿ ಎನ್ನುವ ಶೀರ್ಷಿಕೆಯೇ ಕವನಕ್ಕೆ ಬಹಳ ಒಪ್ಪಿದೆ.

    ಪದ ಬಳಕೆಯಲ್ಲಿ ಒಂದು ತಾದಾತ್ಮ್ಯತೆ ಮತ್ತು ಲಾಲಿತ್ಯತೆ ಇದೆ.

    ಬಹಳ ಖುಷಿಯಾದದದ್ದು ಕವನ ಕಟ್ಟುವ ನೆಪದಲ್ಲಿ ಭೂ ರಮೆಯ ವರ್ಣನೆಯನ್ನೂ ತಂದು ಅದನ್ನು ಮನಸ್ಸಿನ ಭಾವನಾ ಲೋಕಕ್ಕೆ ಗಂಟು ಹಾಕಿದ್ದು.

    ReplyDelete
  3. ಹುರ್ತ್ಪೂರ್ವಕ ಧನ್ಯವಾದಗಳು ಮಾನ್ಯರೇ ನಿಮ್ಮ ಅನಿಸಿಕೆಗಳಿಗೆ .

    ReplyDelete