Thursday, April 19, 2012

ದಿನ ಕಳೆಯುವ ಹೊತ್ತಿಗೆ

ದಿನ ಕಳೆಯುವ ಹೊತ್ತಿಗೆ

ಪೈರಿಗೂ ತಾನೊಮ್ಮೆ ಪುಟ್ಟ ಬೀಜವಾಗಿದ್ದ ನೆನಪು
ಪ್ರಕೃತಿಗೂ ತಾನೇ ಪ್ರೀತಿಯ ತುತ್ತಿಡುವ ಹುರುಪು
ತೃಪ್ತಿಯ ಭಾವವೊಂದು ಬಟ್ಟ ಬಯಲಾಗಿ
ಮೂಡಿಸುವ ಅನನ್ಯ ಛಾಪು ;

ಪ್ರಶಾಂತ ನದಿಯೂ ಸಿಟ್ಟೇರಿ ಹರಿಯುವಂತೆ
ನಡುಗಡ್ಡೆಯ ಮೇಲೆ ಕುಳಿತ ಒಂಟಿ ಹೂ ನಿನಗೆಷ್ಟು ಚಿಂತೆ
ಸಂಜೆಗೆ ಹಚ್ಚಿಟ್ಟ ಹಣತೆಯಲ್ಲಿ ಆತ್ಮಸಾಕ್ಷಿಯ ಬಿಂಬವೇ ಕಂಡಂತೆ
ಚಂದಿರನ ಆಗಮನಕ್ಕೆ ಇಳೆಯೂ ಚಡಪಡಿಸಿದಂತೆ ,

ದಿನವೆಲ್ಲ ದುಡಿದು ಮುಷ್ಕರ ಹೂಡುವ ಚೇತನಗಳಿಗೂ
ಬೇಕು ,ಬಾಳಿನುದ್ದಕ್ಕೂ ಪ್ರೀತಿಯ ಸನ್ಮಾನ .
ದುಃಖವನ್ನೆಲ್ಲಾ ಸೆರೆಮನೆಗೆ ತಳ್ಳಲು ಬಯಸಿತೇ ಮನ ?
ಕಾಲದ ಎದೆ ಬಡಿತವನನ್ನೆಣಿಸಿಸುವ ಆತುರಕ್ಕೆ
ಅಂದೇ ಹುಟ್ಟಿ ಬಾಳ ಹಾದಿಯೂಳು ಕಾಲೂರಲು
ಅನುಭವಗಳು ಮಾಡುವ ಸಮರಗಳ ಯಾನ .

ಜಗದ ಸುದ್ದಿಯನ್ನೆಲ್ಲ ನಿರ್ಲಪ್ತ ವಾಗಿ ತಿಂದು ತೇಗುವ
ಬಾನು , ಬಿಡಲೊಲ್ಲದು ಭುವಿಯ ಮೋಹ ;
ಅಂತೂ
ದಿನ ಕಳೆಯುವ ಹೊತ್ತಿಗೆ
ನವರಸಗಳೆಲ್ಲ ಒಮ್ಮೆ ಕೈ ಕುಲುಕಿ
ಹೇಳಿ ಹೋಗುವವು ವಿದಾಯ !



No comments :

Post a Comment