Wednesday, April 18, 2012

ಸದ್ದಿಲದೆ

ಸದ್ದಿಲ್ಲದೆ
ಚಿಪ್ಪಿನ್ನಲ್ಲಿ ಹಾರವಾಗಲೆಂದೇ
ಹೊಳಪನ್ನೆಲ್ಲ ತಿದ್ದಿ ತೀಡುತ್ತ
ಕುಳಿತ ಮುತ್ತುಗಳು
ಪ್ರಕೃತಿಯ ಮೆರವಣಿಗೆಯಲ್ಲಿ
ಗಂಭೀರವಾಗಿ ಮುಗಿಲನ್ನು
ಹೊತ್ತು ನಿಂತ ಗಿರಿಗಳು
ರಾತ್ರಿಯೆಲ್ಲ ಚಂದಾಮಾಮನ
ಕಥೆ ಕೇಳುವ ನಕ್ಷತ್ರಗಳ ಸಾಲು ;

ಸದ್ದಿಲ್ಲದೇ ಹಿಂದಿನಿಂದ ಬಂದಪ್ಪಿದ
ಇನಿಯನ ಅಪ್ಪುಗೆ
ಬಂದು ಕಾಲೂರಿದಂತೆ ನಟಿಸಿ
ಕಳೆದು ಹೋಗುವ ಮರೆವಿಗೆ ,
ರಹಸ್ಯ ಹೇಳುವಂತೆ ಮೆಲ್ಲನೆ
ಉಸುರುವ ನೆನಪುಗಳ ಹುಸಿನಗೆ ,

ಮಂಜು ಮುಸುಕಿದ ರಾತ್ರಿಯಲ್ಲಿ
ಸೆರಗು ಹಾಸಿದ ಕರಾಳತೆಯ
ಹಸಿದ ಕಂಗಳು
ತನ್ನದೇ ನೋವಿನ ಸುತ್ತ ಪಶ್ಚತಾಪವಿಲ್ಲದೆ
ಸುತ್ತುವ ಸುಳಿಗಳು
ಕೈ ಬೀಸಿ ಕರೆದು , ಸರ್ರನೆ ವಿದಾಯ
ಹೇಳಿಬಿಡುವ ಒಬ್ಬಂಟಿ ಮೈಲುಗಲ್ಲುಗಳು

ನಿದ್ರೆಯಲ್ಲೂ ಕಾಡುವ
ನನ್ನ ಮುದ್ದು ಭಾವಗಳೇ 
ಈ ಎಲ್ಲ ಪ್ರಕ್ರಿಯೆಗಳನ್ನೋಡಿ
ಕಲಿಯುವಿರೆ ಪಾಠ ?
ಗೊತ್ತು ನನಗೆ ನನ್ನ
ಮನಸ್ಸು ಹೃದಯದ ಬಾಗಿಲ
ತೆರೆದಿರುವವರೆಗೂ ......
ನಿರಂತರ ನಿಮ್ಮ
ಸದ್ದು ಗದ್ದಲದ ಆಟ .

No comments :

Post a Comment