ಬೆಳಗಿನ ಗಡಿಬಿಡಿ ಮುಹೂರ್ತದಲ್ಲಿ ಕಾಯಿರಸ (ಗೊಜ್ಜು ) ಮಾಡಲು ಮಿಕ್ಸಿಯಲ್ಲಿ ಮಸಾಲೆ ತಿರುವುತ್ತಿದ್ದೆ .ಗಂಡ ಮಕ್ಕಳು ಕಚೇರಿ , ಸ್ಕೂಲು ಕಾಲೇಜಿಗೆ ಹೊರಡುವ ಸಮಯ . ಮಿಕ್ಸಿಯ ಗಿರ್ರೆನ್ನುವ ನಿರಂತರ ಶಬ್ದಕ್ಕೆ ರಸ ಭಂಗವಾದಂತೆ ಗಕ್ಕನೆ ಕರೆಂಟು ಹೋಯಿತು . ಜಾರಿನಲ್ಲಿ ಅರ್ದಂಬರ್ಧ ನುಜ್ಜು ಗುಜ್ಜಾದ ಮಸಾಲೆ ಪದಾರ್ಥಗಳನ್ನು ನೋಡಿ ನಿಟ್ಟುಸಿರಿಡುತ್ತ “ ಥೋ ! ಹಾಳಾದ್ದು ಕರೆಂಟು! ಒಳ್ಳೆ ಟೈಮಿಗೆ ಕೈ ಕೊಡುತ್ತೆ , ಇನ್ನು ಇವರೆಲ್ಲಾ ಹೊರಡುವಷ್ಟರಲ್ಲಿ ಗೊಜ್ಜು ಆದಂತೆಯೇ “ ಎನ್ನುವ ಸ್ವಗತದಲ್ಲಿ ಚಪಾತಿ ಹಿಟ್ಟಿನ ಉಂಡೆಗಳನ್ನು ಕೋಪದಿ ಕುಕ್ಕಿ ಲಟ್ಟಣಿಗೆಯಿಂದ ಸಿಟ್ಟಿನಿಂದಲೇ (ಎಣ್ಣೆ )ಮಸಾಜು ಮಾಡಲು ತೊಡಗಿದೆ !
ಏನೇ ಅನ್ನಿ ಮುಂಜಾನೆಯೇ ಸಮಯದಲ್ಲಿ ಗೃಹಿಣಿಯರು ಆದಿ ಶಕ್ತಿ , ಪರಾಶಕ್ತಿಯರ ಹಾಗೆ ಅಷ್ಟಭುಜಾ ದೇವಿಗಳಾಗ ಬಯಸುತ್ತಾರೆ ! ಒಂದು ಕೈಯಲ್ಲಿ ತರಕಾರಿ ಕೊಚ್ಚಿ , ಮತ್ತೊಂದು ಕೈಯಲ್ಲಿ ಪಲ್ಯ ಗೊಜ್ಜು ಏನೋ ಒಂದು ಮಾಡುವಾಗ ಹಿಂದಿನ ಕೈಗಳು ಚಪಾತಿಯೋ ಪೂರಿಯೋ ಲಟ್ಟಿಸಿ ಬಾಕ್ಸಿಗೆ ಹಾಕಿಯಾಗಿರುತ್ತದೆ ! ಅಷ್ಟೇ ಅಲ್ಲ ಒಂದು ಒಂದು ಕಿವಿ ಕುಕ್ಕರ್ ಸೀಟಿ ಆಲಿಸಿದರೆ ಮತ್ತೊಂದು ಕಿವಿ ಎಜಮಾನರ ಮುಖ್ಯ ಫೈಲು , ಕೀ ಗೊಂಚಲು , ಮಕ್ಕಳ ಸಾಕ್ಸಿಗಾಗಿ ಕೊಗಿದ್ದನ್ನು ಕೇಳಿಸಿಕೊಂಡು ಬಾಯಿ ಅವುಗಳಿರುವ ರಹಸ್ಯ ತಾಣವನ್ನು ಜೋರಾಗಿ ಧ್ವನಿಸುತ್ತದೆ .ಆದರೆ ಅದು ಕಿಂಚಿತ್ತು ಉಪಯೋಗವಾಗದೆ ಒಂದು ಕಾಲು ಅವುಗಳನ್ನು ಹುಡುಕಿ ಕೊಡಲು ಓಡಿದರೆ ಮತ್ತೊಂದು ಕಾಲು ಹಾಲು ಉಕ್ಕುವು ಕ್ಲಿಮ್ಯಾಕ್ಸ್ ಸೀನಿಗೆ ಸಕಾಲಕ್ಕೆ ಧಾವಿಸಿ ಬರುತ್ತದೆ .! ಹೀಗೆ ನಮ್ಮ ಪಂಚಾಂಗಗಳು ಕಂ ಪಂಚೇಂದ್ರಿಯಗಳು ಗ್ಯಾಸ್ ಒಲೆಯ ಬರ್ನರ್ಗಳಂತೆ ಮುಂಜಾನೆಯ ಗಡಿಬಿಡಿಗೆ ಏಕ ಕಾಲದಲ್ಲಿ ಹುರುಪಿನಲ್ಲಿ ದುಡಿದು (ಉರಿದು ) ಅಂತೂ ಗಂಡ ಮಕ್ಕಳನ್ನು ಕಚೇರಿ ಶಾಲೆಗಳಿಗೆ ಅವರವರ ತಿಂಡಿ /ಊಟದ ದಬ್ಬಿ ಸಮೇತ ಪ್ಯಾಕ್ ಮಾಡಿ ಕಳಿಸಿ ಕೊಟ್ಟ ನಂತರ ನಮ್ಮ ಗೃಹಿಣಿಯರ ಧಾವಂತದ ಮಾರ್ನಿಂಗ್ ಶೋ ಕೆಲಸಗಳಿಗೆ ಒಂದು ಇಂಟರ್ವಲ್ ಸಿಕ್ಕಂತಾಗುವುದು
.
ನಾನು ಸಹ ಅಡುಗೆ ಕೊನೆಯಿಂದ ದೊಡ್ಡ ಕಪ್ಪಿನ ಸಮೇತ ಹೊರ ನಡೆದು ಆರಾಮ ಭಂಗಿಯಲ್ಲಿ ಸೋಫಾಸೀನಳಾಗಿ ಕಾಫೀ ಹೀರುವಾಗ ಮಕ್ಕಳ ರೂಮಿನಲ್ಲಿ ಆಫ್ ಮಾಡದೆ ಹಾಗೆ ಬಿಟ್ಟ ಬಲ್ಬುಗಳು ಧಿಗ್ಗನೆ ಬೆಳಗಿ ಕರೆಂಟು ಬಂದ ಸೂಚನೆ ಕೊಟ್ಟವು .
ಕೆಲಸದ ನಿಂಗಮ್ಮ ಬರುವ ಮುನ್ನಿನ ಈ ಏಕಾಂತ ಸಮಯ ನನಗೆ ಅತ್ಯಮೂಲ್ಯವಾದದ್ದು . ಆಕೆಯ ಪಾದ ಧೂಳಿನಿಂದ ಮನೆಗೆ ದಾಳಿ ಮಾಡಿ , ಧೂಳು ಕಸ ತೆಗೆವುದಿರಲಿ ಅವಳ ವಟ ವಟಕ್ಕೆ ತಲೆ ಚಿಟ್ಟು ಹಿಡಿದು ಹೋಗುತಿತ್ತು ..
ಏನೇ ಅನ್ನಿ ಈ ಪುಟ್ಟ ಕಾಫೀ ಬ್ರೇಕ್ “ ಕಾಫೀ ನಹಿ , ದಿಲ್ ಮಾಂಗೆ ಮೊರ್ “ ಎನ್ನುವ ಭಾವನೆಯೊಂದಿಗೆ ಕರೆಂಟು ಕೈ ಕೊಟ್ಟು ಅಪೂರ್ಣ ವಾದ ಮಿಕ್ಸಿಯ ಕೆಲಸ ಮುಗಿಸಲು ಮಿಕ್ಸಿ ಬಟ್ಟನ್ ಒತ್ತಿದರೆ ಜಾರಿನಲ್ಲಿರುವ ಬ್ಲೆಡ್ ಸ್ವಲ್ಪವೂ ತಿರುಗದೆ ತಟಸ್ತವಾಗಿ ನಿಂತು ಮುಷ್ಕರ ಹೂಡಿತ್ತು .ಬಟ್ಟನ್ನುಗಳನ್ನೆಲ್ಲ ಮುಂದಕ್ಕೂ -ಹಿಂದಕ್ಕೂ , ಎಲ್ಲ ಗೆರಿನಲ್ಲೂ ತಿರುಗಿಸಿ ಮಿಕ್ಸಿಯನ್ನು ಉಲ್ಟಾ ಮಲಗಿಸಿ ( ಹಿಂಬಾಗಕ್ಕೂ ತಟ್ಟಿ ) , ಲೋಡ್ ಬಟ್ಟನ್ ಕೂಡ ಒತ್ತಿದರೂ ಮಿಕ್ಸಿ ಕೆಟ್ಟು ಕೂತಿತ್ತು .”ಛೆ! ಬೆಳಿಗ್ಗೇನೆ ಇದು ರಿಪೇರಿಗೆ ಬಂತಲ್ಲ “ ಎಂದು ಹಿಂದಿನ ರಾತ್ರಿ ರುಬ್ಬಲು ನೆನೆಸಿಟ್ಟ ಉದ್ದು ಅಕ್ಕಿಯನ್ನು ನೋಡುತ್ತಾ ಬೇಸರ ಉಕ್ಕಿ ಬಂದಿತು .. ಒಂದು ವರ್ಷದಿಂದ ಅಹರ್ನಿಶಿ ಕುಟ್ಟಿ ಪುಡಿ ಮಾಡಿ ರುಬ್ಬಿ ಸಾಕಾಗಿ ಅಂತೂ ಸೋಮುವಾರವೆ ಮಿಕ್ಸಿ ಬ್ರೇಕ್ ತೆಗೆದುಕೊಂಡು ಬಿಟ್ಟಿರಬೇಕು ಎನಿಸಿ ವಿಷಾದದ ನಗೆ ಮೂಡಿತು .
ಅಂದು ಮಿಕ್ಸಿ ಯಂತ್ರದಿಂದ ಶುರುವಾದ ಮುಷ್ಕರ ಮನೆಯ ಇತರ ಯಂತ್ರೋಪಕರಣಗಳಿಗೂ ಹರಡಿ ವಾರವೆಲ್ಲಾ ” ಹೀಗೂ ಉಂಟೆ “ ಎನ್ನುವ ಆಶ್ಚರ್ಯಕರ ಘಟನಾವಳಿಗಳು ನಡೆದು ಬಿಟ್ಟಿದ್ದವು . ಇತಿಹಾಸದ ಪುಟಗಳಿಂದ ಈ ಕಹಿ , ಅಚ್ಚರಿ ಹುಟ್ಟಿಸುವಂಥ ಮಿಶ್ರ ತಳಿ ನೆನಪುಗಳನ್ನು ಮತ್ತೆ ಕೆದಕಿ ನಿಮ್ಮನ್ನೂ ಅಚ್ಚರಿ ಪಡಿಸುವುದೇ ನನ್ನ ಘನ ಉದ್ದೇಶ ಅನ್ನಿ .
ಇರಲಿ , ಮಾರನೆಯ ದಿನ ಮಂಗಳವಾರ ಆಗಷ್ಟೇ ಅರಳಿದ ದಾಸವಾಳವನ್ನು ಗಣಪತಿಗಿಟ್ಟು ಭಕ್ತಿಯಿಂದ ಕೈ ಮುಗಿಯುತಿದ್ದೆ .ಗಣೇಶ ಅಂದಾಕ್ಷಣ ಯಾಕೋ, ಮೂಷಿಕ ಅಷ್ಟೇ ಅಲ್ಲ ಹಿಂದಿನ ಮನೆಯಲ್ಲಿ ವಾಸವಿರುವ ಬ್ರಹ್ಮಚಾರಿ ಹುಡುಗರೂ ಸಹ ನೆನಪಾದರು . ಸಧ್ಯ (ನನ್ನ ) ಮನವೆಂಬೊ ಮರ್ಕಟ ಪೂಜೆ ಮಾಡುವಾಗ ಅಲ್ಲೇ ಅಕ್ಕ ಪಕ್ಕ ಸುತ್ತಾಡುತ್ತದೆ .
ಇಲಿಯೊಂದು ಅವರ ಮನೆಯಲ್ಲಿ ಸೇರಿಕೊಂಡಿದ್ದು ಮೊನ್ನೆ ರಾತ್ರಿ ಆ ಹುಡುಗರು ಇಲಿ ಓಡಿಸಲು ಹೆದರಿ ಕೊಗಾಡುತ್ತಿರುವುದರಿಂದ ಗೊತ್ತಾಯಿತು . ಆಗಾಗ ಅವರ ಮನೆಗೆ ಎಂಟ್ರಿ ಪಡೆಯುತ್ತಿದ್ದ ಪಿಜ್ಜಾ , ನೂಡಲ್ಸ್ ಬರ್ಗರಗಳ ಸೇವನೆಯಾದ ನಂತರ ಅಡುಗೆಮನೆ ಸ್ವಚ್ಛವಾಗಿಟ್ಟು ಕೊಳ್ಳದ ಕಾರಣಕ್ಕೂ ಈ ಮೂಷಿಕ ಅಲ್ಲಿ ಸೇರಿಕೊಂಡಿರಬೇಕು ಎಂದು ಕೊಂಡರೆ ಆ ಕಿಲಾಡಿ ಮೂಷಿಕ ಸ್ವಚ್ಚತಾ ಅಭಿಯಾನದಲ್ಲಿ ದಿನವೆಲ್ಲ ತೊಡಗಿ ಕೊಂಡಿರುವ ನಮ್ಮ ಮನೆಗೂ ನುಗ್ಗಿ ದಾಂದಲೆ ನಡೆಸಿತ್ತು . ನೆನ್ನೆ ನಿಂಗಮ್ಮ ಅದನ್ನು ಓಡಿಸಿ ಉಪಕಾರ ಮಾಡಿದ್ದೇನೋ ಸರಿ ಆದರೆ “ ನಾಳೆಯಿಂದ ಮೂರು ದಿನ ಬರಾಕಿಲ್ಲ , ಅಣ್ಣನ ಮಗನ ಮದ್ವೆ ನಮ್ಮ ಊರಲ್ಲಿ “ ಎನ್ನುವ ಶಾಕ್ ಕೂಡ ಕೊಟ್ಟು ನಡೆದ್ದಿದ್ದಳು .ವಿಧಿಯಿಲ್ಲದೇ ರಾಶಿ ಬಟ್ಟೆಗಳನ್ನು ವಾಶಿಂಗ್ ಮಶೀನಿನಲ್ಲಿ ತುರುಕಿ ಸೋಪಿನ ಪುಡಿ ಹಾಕಿ ಆನ್ ಮಾಡಿದರೆ ನೀರು ಎಳೆದುಕೊಳ್ಳಲು ತಕರಾರು ನಡೆಸಿತು . ನೀರಿನ ವಾಲ್ವ್ವನ್ನು ಗರ ಗರ ತಿರುಗಿಸಿ , ಮಶೀನನ್ನು ಎರಡು ಮೂರು ಬಾರಿ ಆನ್ ಆಫ್ ಮಾಡುವ , ಮಷೀನ ಮಹಾ ದ್ವಾರವನ್ನು ಜೋರಾಗಿ ಹಾಕುವ ಪ್ರಥಮ ಚಿಕಿತ್ಸೆಯ ಪ್ರಯೋಗಗಳು ನಡೆದರೂ ಮಶೀನು ಗರ ಬಡಿದವರಂತೆ ನಿಂತು ಬಿಟ್ಟಿತು .
“ ಇದೇನು ಬಂತಪ್ಪ ಗ್ರಹಚಾರ “ ಎಂದುಕೊಳ್ಳುತ್ತ ನಮ್ಮ ಫ್ಯಾಮಿಲಿ ಪ್ಲಂಬರ್ ಕಂ ಎಲೆಕ್ಟ್ರಿಷಿಯನ್ ಗೆ ಆತಂಕದಲ್ಲಿ ಕರೆ ಮಾಡಿದೆ .ಮೂರು ನಾಲ್ಕು ಗಂಟೆಯಲ್ಲೇ ಅವ ಧಾವಿಸಿ ಬಂದು ಮಶೀನಿಗೆ ಅಳವಡಿಸಿರುವ ನೀರಿನ ಪೈಪುಗಳನ್ನು ಪರೀಕ್ಷಿಸಿ ಅವೆಲ್ಲ ಸರಿಯಿರುವುದಾಗಿ ಹೇಳಿ ಆ ಕ್ಷಣಕ್ಕೆ ಪ್ಲಂಬಿಂಗ್ ಕಾರ್ಯ ಕ್ಷೇತ್ರದಿಂದ ವಾಶಿಂಗ್ ಮಶೀನಿನ ರೀಪೈರಿಗೂ ಜಿಗಿದು ಮಶೀನನ್ನು ಪೂರ್ತಿಯಾಗಿ ಬಿಚ್ಚಿಟ್ಟ . ಆ ಭ್ರಮ್ಹಾಂಡದ ಬಾಯೊಳಗೆ ನೂರಾರು ಸಂಕೀರ್ಣ ವೈರು ಜೋಡಣೆಗಳು , ಯಂತ್ರದ ನಾನಾ ಭಾಗಗಳನ್ನು ಕೂತೂಹಲದಿಂದ ಪರೀಕ್ಷಿಸಿ “ ನೋಡಿ ಈ ನೀರು ಎಳೆದು ಕೊಳ್ಳುವ ವೈರು ಕಟ್ ಆಗಿದೆ, ಸರ್ವೀಸ್ ಸೆಂಟರಿಗೆ ಕರೆ ಮಾಡಿ ಬಿಡಿ, ಅವರು ಹೊಸದು ಹಾಕ್ತಾರೆ “ ಎನ್ನುವ ಮಹಾ ತೀರ್ಪು ಕೊಟ್ಟು ಈ ಘನ ಸೇವೆಗಾಗಿ ನಾನು ಕೊಟ್ಟ ಫೀಸನ್ನು ಹಲ್ಲು ಗಿಂಜಿ ಜೋಬಿಗಿಳಿಸಿದ !
ನೆನ್ನೆ ದಿನ ಅನುಮಾನಸ್ಪದವಾಗಿ ನಮ್ಮ ಹಿತ್ತಲಿನಲ್ಲಿ ಓಡಾಡುತಿದ್ದ ಆ ಪಕ್ಕದ ಮನೆಯ ಇಲಿರಾಯನೆ ಈ ವೈರ್ ಕಡಿದಿರಬೇಕು ಎಂದು ನಾನು ಕೋಪದಿಂದ ಹಲ್ಲು ಕಡಿದೆ. ಆದರೆ ಈ ಬಡವಿಯ ಸಿಟ್ಟು ದವಡೆಯ ಮೇಲೆ ಮಾಡುವ ಹಾಗು ಇರಲಿಲ್ಲ ! ಕಾರಣ ಕಳೆದ ವಾರವಷ್ಟೇ ನನ್ನ ಹುಳುಕು ದವಡೆ ಕ್ಯಾಪ್ ಏರಿಸಿಕೊಂಡು ಕುಳಿತಿತ್ತು . ಗತ್ಯಂತರವಿಲ್ಲದೆ ವಾಶಿಂಗ್ ಮಶೀನು ಸರ್ವೀಸ್ ಸೆಂಟರ್ ದೂರವಾಣಿ ಸಂಖ್ಯೆಗಾಗಿ ಗೂಗಲ್ ಅಂಕಲ್ ಮೊರೆ ಹೋದೆ .
ಅಂತೂ ಮಿಕ್ಸಿಯಿಂದ ಶುರುವಾದ ರಿಪೇರಿ ಯಜ್ಞ್ಯಕ್ಕೆ ಇಂದು ವಾಶಿಂಗ್ ಮಶೀನು ಬಲಿಯಾಯಿತು .ಇನ್ನು ನಿಂಗಮ್ಮ ಬರುವವರೆಗೂ ನನ್ನ ಭುಜದ ನೋವು ಇಟ್ಟುಕೊಂಡು ಬಟ್ಟೆ ಒಗೆಯುವುದು ಹೇಗಪ್ಪ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತೆ. ನಮ್ಮನೆಯ ಯಂತ್ರೋಪಕರಣ ಗಳೆಲ್ಲ ನನ್ನ ವಿರುದ್ಧ ಪಿತೂರಿನಡೆಸುತ್ತಿವೆಯೇನೋ ಎನ್ನುವ ಅನುಮಾನ ಕಾಡಿ ಟೀವೀ ಫ್ಯಾನು ಎಲ್ಲವನ್ನು ಒಂದು ಬಾರಿ ಆನ್ ಮಾಡಿ ಅವು ಸುಸ್ತಿತಿಯಲ್ಲಿದದ್ದು ಕೊಂಚ ಸಮಾಧಾನವಾಯಿತು .ಆದರೂ ನೆನ್ನೆ ಮಿಕ್ಸಿ , ಇಂದು ವಾಶಿಂಗ್ ಮಶೀನುಗಳ ಕೈ ಕೊಟ್ಟ ಬಗ್ಗೆ ಎಜಮಾನರಿಗೆ ಹೇಳಿದಾಗ ಅವರು ತಲೆ ಕೆಟ್ಟು “ ಯಂತ್ರೋದ್ಧಾರಕ ಮಂತ್ರ “ ಪಟಿಸುವುದೊಂದೇ ಬಾಕಿ !
ಬುಧುವಾರ ಯಾವ ಎಡವಟ್ಟು
ನಡೆಯದೆ ಐದು ದಿನಗಳ ಕ್ರಿಕೆಟ್ ಮ್ಯಾಚಿನ ಮಧ್ಯದ ವಿರಾಮ ದಿನದಂತೆ ಮನೆಯ ಎಲೆಕ್ಟ್ರಿಕ್ /ಎಲೆಕ್ಟ್ರಾನಿಕ್ ಉಪಕರಣಗಳು ರಿಪೇರಿ ಅಭಿಯಾನದಿಂದ ದೂರವುಳಿದು ನೆಮ್ಮದಿ ತರಿಸಿದವು.
ಗಾಜಿನ ಮನೆಯಲ್ಲಿ
ವಾಸ ಮಾಡುವವರು ಬೇರೆಯವರಿಗೆ ಕಲ್ಲೇಟು ಹೊಡೆಯಬಾರದು ಎನ್ನುವುದಿದೆ . ಆದರೆ ನಮ್ಮನೆಯ ಗಾಜೇ (
ಸಾಮಾನು ) ನಾನಾರಿಗೂ ಕಲ್ಲೇಟು ಹೊಡೆಯದ್ದಿದ್ದರೂ
ನನ್ನ ಮೇಲೆ ಸೇಡು ತೀರಿಸ್ಕೊಂಡಿದ್ದು ಹೇಗೆ ಎಂದು ತಲೆಕೆಡಿಸಿಕೊಳ್ಳುವ ಪ್ರಸಂಗ ಗುರುವಾರ ನಡೆಯಿತು .. ನಮ್ಮ ಅಪಾರ್ಟ್ಮೆಂಟಿನ
ಅಕ್ಕ ಪಕ್ಕದವರು ಅಕಸ್ಮಾತಾಗಿ ಹರಟೆ ಕೊಚ್ಚಲು ಧಿಡೀರೆಂದು ವಕ್ಕರಿಸಿದಾಗ ಜೂಸಿಗೆ ಏಕೆ ಕಂಜೂಸು ಮಾಡಬೇಕೆಂದು ಅಡುಗೆ
ಮನೆಯ ಸೇಲ್ಫಿನ ಮೇಲಿದ್ದ ಗಾಜಿನ ಲೋಟಗಳ ಟ್ರೇಯನ್ನು ಜಾಗ್ರತೆಯಿಂದ ಮೆಲ್ಲನೆ ಎಳೆದಿದ್ದಷ್ಟೆ . ಅದೇ ಸಮಯಯಕ್ಕೆ ಭುಜದ ನೋವು ಬಲವಾಗಿ ಜಾರುಗಳು (ಕೈ )ಜಾರಿ ಚೂರು ಚೂರಾಗಿ ಧರಾಶಾಯಿಯಾಗಿ ಬಿದ್ದವು . ಈ ಶಬ್ದಕ್ಕೆ ಪಡಸಾಲೆಯಲ್ಲಿ ಸೋಫಾಸೀನರಾಗಿದ್ದ ಉತ್ಸಾಹಿ ಮಾತೆಯರು ಗಾಜಿನ ಚೂರಗಳ
ಮಧ್ಯೆ ಚೂರೇ ಪಾದವೂರಿ ಯೋಗ ಭಂಗಿಯಲ್ಲಿ ಮುಖ ಕಿವುಚಿ ನಿಂತ ನನ್ನನ್ನು ಕಂಡು ಲೋಚಗುಟ್ಟುತ್ತಾ “ “ಅಯ್ಯೋ ! ಹೋಗಲಿ ಬಿಡಿ .ಇವು ಒಡೆದರೆ ಒಡೆಯಲಿ ,
ನೀವು ಜಾಗ್ರತೆ “ ಎನ್ನುವ ಸಾಂತ್ವನ ವಚನಗಳೊಂದಿಗೆ ಮರೆಯಾದರು . ಬೇಸರದ ಮೂಡಿನಲ್ಲಿ ಇವುಗಳನ್ನು ಸ್ವಚ್ಹಗೊಳಿಸುವ ವೇಳೆಗೆ “ ತ್ಥತ್ತೇರಿಕಿ “ ಎನ್ನುವ ಮಗನ ಉದ್ಘಾರ ಕೇಳಿಸಿತು .
ಅವನ ಕೈ ಗಡಿಯಾರ ತೆಗೆದಿಡುವಾಗ
ಕೈ ಜಾರಿ ಬಿದ್ದು ಗ್ಲಾಸ್ ಒಡೆದು “ ನಿಮ್ಮ ಟೈಮೆ ಸರಿ ಇಲ್ಲ “ ಎಂದು ಕೆಣಕಿ ಅಂದಿನ ಗಾಜು ಮುರಿತ ಮೇಳದಲ್ಲಿ ತಾನು ಸಹ ಯಥಾ ಶಕ್ತಿ ಭಾಗವಹಿಸಿತು . “ ಅಯ್ಯೋ ನನ್ನ
ಹೊಸ ವಾಚು “ಹಳಹಳಿಸುತ್ತಿದ್ದ ಮಗರಾಯನಿಗೆ “
ಇರಲಿ ಹೊಸ ಡೈಯಲ್ ಹಾಕಿಸಿದರಾಯಿತು “ ಎಂದು ಸಮಾಧಾನಿಸಿ ಆ ಚೂರುಗಳಿಗೂ ಪೊರಕೆ ಸೇವೆ ಮಾಡಿದ್ದಾಯಿತು .
ಮಾರನೆಯ ದಿನ ಶುಕ್ರವಾರ
ಲಕ್ಷ್ಮಿ ಕಟಕ್ಷಕ್ಕಾಗಿ ದೇವಿ ಸ್ತುತಿ ಮಾಡಲು ಸ್ನಾನಾದಿಗಳನ್ನು ಮುಗಿಸಿ ತಯಾರಾಗುತ್ತಿದ್ದೆ . ಆದರೆ ಕೆಇಬಿಯವರ ಕೃಪಾ ಕಟಾಕ್ಷದಲ್ಲಿ
ಏರುಪೇರಾಗಿ ಕರೆಂಟು ಹೋಗಿತ್ತು . ಇಂತ ಸಮಯಕ್ಕೆ
ಮಾಮೂಲಾಗಿ ಹೊತ್ತಿಕೊಳ್ಳುವ ಯುಪೀಎಸ್ ಆನ್ ಆಗದೆ ನಾನು ಕಂಗಾಲಾದೆ . ಅದು ಸಹ ಮನೆಯಲ್ಲಿ
ನಡೆಯುತ್ತಿರುವ ಯಂತ್ರ ಮುಷ್ಕರ ಪರ್ವದಲ್ಲೆ ತನ್ನ ಬ್ಯಾಟರಿ ಬದಲಾಯಿಸ್ಕೊಳ್ಳುವ ಮುಹೂರ್ತವನ್ನು
ಇಟ್ಟುಕೊಂಡಿದ್ದು ಮಾತ್ರ ಸೋಜಿಗವಾಗಿತ್ತು !
ನಮ್ಮ ಮನೆಯ ಯಂತ್ರಾತ್ಮಗಳೇಕೆ
ಅತೃಪ್ತ ಆತ್ಮಗಳಂತೆ ವರ್ತಿಸುತ್ತಿವೆ ಎನ್ನುವ ಚಿಂತೆಗೆ ಬಿದ್ದೆ . ಸತತವಾಗಿ ಮೂರು ದಿನಗಳಿಂದ ನಡೆಯುತ್ತಿರುವ ಎಡವಟ್ಟುಗಳಿಂದಾಗಿ
ಮನಸು ಖಿನ್ನವಾಗಿತ್ತು .ಸೂಕ್ಷ್ಮವಾಗಿ ಅವಲೋಕಿಸಿದಾಗ ಅದು ಬರೀ ಕಾಕತಾಳೀಯವಾಗಿರಬಹುದೆಂದು ಅನಿಸಿದರೂ ಯಾಕೊ ಆ ಕ್ಷಣದಲ್ಲಿ ಭೂತ ಚೇಷ್ಟೆಯ ಸಣ್ಣ ಭಯ ಆವರಿಸಿದರೂ
ಇಂತ ಮೂಢ ನಂಬಿಕೆಗಳನ್ನು ಮನಸ್ಸು ತಳ್ಳಿ ಹಾಕಿತು ! ಆದರೆ ಮಾರನೆಯ ದಿನಕ್ಕೆ ಮತ್ಯಾವ ವಸ್ತು ಕೆಟ್ಟು ರಿಪೇರಿಗೆ ಬರುವುದೋ ಎನ್ನುವ ಆತಂಕದ ಮಂಜು ಕವಿದ ವಾತಾವರಣ ಮಾತ್ರ ಮನೆಮಾಡಿತ್ತು .
ರಾತ್ರಿ ನಿದ್ದೆಯಲ್ಲೂ ಕೂಡ ಇಂತಾ
ಎಡವಟ್ಟುಗಳದೆ ಕನಸು/ಕನವರಿಕೆ
!.ಆದರೆ ಶನಿವಾರ ,ಭಾನುವಾರ ಯಾವ ಅವಘಡವೂ ಘಟಿಸದೆ
ಸಾಂಗವಾಗಿ ಕಳೆದು ಸೋಮುವಾರ ನಗು ನಗುತ್ತ ಕಾಲಿಟ್ಟಾಗ
ನೆಮ್ಮದಿಯ ಉಸಿರು ಬಿಟ್ಟೆ ರಿಪೇರಿಯಾದ ಯುಪೀಎಸ್
, ವಾಶಿಂಗ್ ಮಶೀನು , ಮಿಕ್ಸಿ ಸಹಜ ಸ್ಥಿತಿಗೆ ಮರಳಿದವು.
ಮನೆಯ ಇತರ ಉಪಕರಣಗಳು ಸಹ ಯಾವ ಕಪಿ
ಚೇಷ್ಟೆಯನ್ನು ಮಾಡದೆ ಸುಸ್ಥಿತಿಯಲ್ಲಿದ್ದು ಕಳೆದ ವಾರದ ಯಂತ್ರ ಮುಷ್ಕರ ಚಳುವಳಿಯ ಕಹಿ ನೆನಪುಗಳನ್ನು
ಕ್ರಮೇಣ ಅಳಸಿ ಹಾಕಿದವು .
“ ಮನೆಯ ವಸ್ತುಗಳಿಗೂ ವಾಸ್ತು ದೋಷ ಆಗಿರಬಹುದು “ ಎನ್ನುವ ತುಂಟ ಯೋಚನೆ ವಾರಗಟ್ಟಲೆ ನಡೆದ ಆ ರಿಪೇರಿ ಅಭಿಯಾನದ ಘಟನೆಯನ್ನು ನೆನಸಿ ಕೊಂಡಾಗಲ್ಲೆಲ್ಲ ಕೆಣಕಿ ಈಗಲೂ ನಗು, ಅಚ್ಚರಿ ಹುಟ್ಟಿಸುತ್ತದೆ !
ಆರತಿ ಘಟಿಕಾರ್
“ ಮನೆಯ ವಸ್ತುಗಳಿಗೂ ವಾಸ್ತು ದೋಷ ಆಗಿರಬಹುದು “ ಎನ್ನುವ ತುಂಟ ಯೋಚನೆ ವಾರಗಟ್ಟಲೆ ನಡೆದ ಆ ರಿಪೇರಿ ಅಭಿಯಾನದ ಘಟನೆಯನ್ನು ನೆನಸಿ ಕೊಂಡಾಗಲ್ಲೆಲ್ಲ ಕೆಣಕಿ ಈಗಲೂ ನಗು, ಅಚ್ಚರಿ ಹುಟ್ಟಿಸುತ್ತದೆ !
ಆರತಿ ಘಟಿಕಾರ್
ಮೇಡಮ್, ಇತಿಹಾಸದ ಪುಟಗಳಿಂದ ನೀವು ಹೊರಗೆಳೆದು ತೋರಿಸಿದ ಯಂತ್ರಯುದ್ಧದ ಬಣ್ಣನೆಯು ನಿಮ್ಮ ಬಗ್ಗೆ ಅನುಕಂಪವನ್ನೇನೊ ಉಂಟು ಮಾಡಿತು. ಜೊತೆಗೇ ನಗುವನ್ನೂ ತರಿಸಿತು ಎಂದು ಹೇಳಿದರೆ, ನೀವು ಸಿಟ್ಟಾಗಲಿಕ್ಕಿಲ್ಲ ತಾನೆ? ನಿಮ್ಮ ಇತಿಹಾಸ ಪುಸ್ತಕವು ಸ್ವಾರಸ್ಯಕರವಾಗಿರುವಂತೆ ತೋರುತ್ತದೆ. ಮತ್ತೆ ಮತ್ತೆ ಮತ್ತಿಷ್ಟು ಪುಟಗಳನ್ನು ತೋರುತ್ತಿರಿ. Carry on, ma'm!
ReplyDeleteನನಗೂ ಸಹ ಈಗ ನಗುವನ್ನೆ ತರಿಸುತ್ತದೆ ಸುನಾತ್ ಕಾಕಾ 😊 ನಿಮ್ಮ ನಂ ಕೊಡಿ..ನಾನು ಜಯಶ್ರಿ ದೇಶಪಾಂಡೆಯವ ಅಕ್ಕನ ಮಗಳು..😊
ReplyDelete9902669214
ReplyDelete