Tuesday, January 21, 2020

ಭಿಶ್ಕಿ ಜೂಸ್


ಪುಟ್ಟ ಮಕ್ಕಳ  ತೊದಲು  ನುಡಿಗಳು   ಪೋಷಕರಿಗೆ ಸದಾ  ಅಪಾರ ಖುಷಿ ಕೊಡುವಂತಾದ್ದು . ಅವರ ಮುದ್ದಾದ ಆಟ ಪಾಟ ಎಲ್ಲವೂ ಕಣ್ಣಿಗೆ ಹಬ್ಬ, ಬೆಲೆ ಕಟ್ಟಲಾಗದಂತ   ಆನಂದವನ್ನು  ಉಂಟು ಮಾಡುತ್ತದೆ .ಆದರೆ ಒಮ್ಮೊಮ್ಮೆ  ಪುಟಾಣಿಗಳು   ಅತಿ ಉತ್ಸಾಹದ ಬುಗ್ಗೆಗಳಾಗಿ  ಚಟಪಟ ಮಾತಾಡುತ್ತಾ   ಬಂದವರ ಮುಂದೆ ನಮ್ಮ ಗುಟ್ಟುಗಳ ಸೈರನ್ ಊದಿ ನಮಗೆ ಫಜೀತಿ ತಂದೊಡ್ಡಿ ಬಿಡುತ್ತವೆ .

 ಈಗ ಕಾಲೇಜು ಮೆಟ್ಟಿಲೇರಿರುವ  ನನ್ನ ಮಗ ಆಗ ನಾಲ್ಕು ವರ್ಷದ ತುಂಟ ಪೋರ ಅವನಿಗೆ ತೊದಲು ಮಾತು ಬಂದಿದ್ದೆ ತಡ ಆಗಾಗ ಮನೆಯಲ್ಲಿ ನಾವು ಮಾತಾಡಿಕೊಂಡ ವಿಷಯಗಳನ್ನು  ಡಿಶ್ ಆಂಟೆನಾದಂತ  ತೆರೆದ ಕಿವಿಯಲ್ಲಿ ಕೇಳಿಸಿಕೊಂಡು ಕಂಪ್ಯೂಟರ್ ಚಿಪ್ಪಿನಂತ  ತನ್ನ ಪುಟ್ಟ ತಲೆಯಲ್ಲಿ ಕಾಪಿಟ್ಟುಕೊಂಡು ಬಿಡುತಿದ್ದ . ಸಾಮಾನ್ಯವಾಗಿ ಪ್ರಶ್ನೆ ಪತ್ರಿಕೆಯಲ್ಲಿ ಬರುವ “ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದ್ದು”  ಎಂಬ ಪ್ರಶ್ನೆಯಂತೆ ಈ  ತುಂಟ ಸಹ ನಾವು ಬಾಯಿತಪ್ಪಿ ಮಾತಾಡಿಕೊಂಡ  ವಿಷಯಗಳನ್ನು ಆ ಸಂಬಂಧಪಟ್ಟವರು  ಎದಿರು ಸಿಕ್ಕಲ್ಲಿ ಅವನ ಮೆಮೊರಿ ಚಿಪ್ಪಿನಿಂದ ಸಕಾಲಕ್ಕೆ ತೆರೆದಿಟ್ಟು  ನಮ್ಮನ್ನು ಮುಜುಗರಕ್ಕೀಡು ಮಾಡಿ ಬಿಡುತ್ತಿದ್ದ .

ಅಂದು ನಮ್ಮ ಪಕ್ಕದ ಮನೆಯ ಪುಟ್ಟ  ಸೂರಜ್ ಹುಟ್ಟು ಹಬ್ಬ ಜೋರಾಗಿ ನಡೆದಿತ್ತು .ಪುಟಾಣಿ ಮಕ್ಕಳ ಚಿಲಿಪಿಲಿ ಗಲಾಟೆ , ಆಟಗಳ ನಡುವೆ ಕೇಕ್ ಕತ್ತರಿಸಿದ ನಂತರ ನಮ್ಮ ಉಡುಗೊರೆ ಸೂರಜನಿಗೆ ಕೊಟ್ಟಿದ್ದೆ ತಡ ನಮ್ಮ ತುಂಟ ಮಗರಾಯ ಎಲ್ಲಿಂದಲೋ ಪ್ರತ್ಯಕ್ಷನಾಗಿ ಸೂರಜ್  ಅಮ್ಮನ ಕೈ ಜಗ್ಗಿ “ಇದು ನಮ್ಮದೇ ಫ್ಲೋರಿನ ಪ್ರೀತಿ ಆಂಟಿ ಕೊಟ್ಟ ಗಿಫ್ಟು “ ಎಂದು ತನ್ನ ತೊದಲು ನುಡಿಯಲ್ಲಿ ಹೇಳಿದಾಗ ನಮ್ಮ ಪುಣ್ಯಕ್ಕೆ  ಆ ಮಕ್ಕಳ ಗಲಾಟೆಯಲ್ಲಿ ಅವನ ಬಾಲ ಭಾಷೆ ಆಕೆಗೆ ಸರಿಯಾಗಿ ಅರ್ಥವಾಗದೆ  ನಾವು ಬಚಾವಾಗಿದ್ದೆವು . (ತಿಂಗಳ ಹಿಂದಷ್ಟೇ ಅವನ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ  ಬಂದ  ಆಟಾಸಾಮನುಗಳಲಿ ಒಂದೆರಡನ್ನು ಮುಂದೆಂದಾರೂ ಉಪಯೋಗಕ್ಕೆ ಬರಬಹುದು ಎಂದು ನಾನು ಎತ್ತಿಟ್ಟಿದ್ದನ್ನು  ನಮ್ಮ ತುಂಟನ  ಸೀಸೀ ಟೀವೀಯಂತ ಕ್ಯಾಮೆರಾ  ಕಣ್ಣುಗಳು ಹಿಡಿದಿಟ್ಟುಕೊಂಡಿದ್ದರ  ಕಿಂಚಿತ್ ಸುಳಿವೂ ಸಹ ನಮಗಿರಲಿಲ್ಲ ) ಅಂತೂ ಪಾರ್ಟಿ ಸಂಪನ್ನವಾಗುವ ತನಕ ಸೂರಜನ ಅಮ್ಮನ ಮುಂದೆ ಇವನು ಸುಳಿದಾಡದಂತೆ  ಎಚ್ಚರವಹಿಸಿ ಉಸ್ಸಪ್ಪ ಎಂದು ನಿಟ್ಟಿಸಿರು ಬಿಟ್ಟೆವು .

ಇವನ ಅಗಾಧ ಬುದ್ಧಿಮತ್ತೆ ,ನೆನಪಿನ ಶಕ್ತಿ, ವಿಷಯ ಸಂಗ್ರಹಣೆಯ  ಪ್ರದರ್ಶನಗಳು  ನಮ್ಮ ಊಹೆಗೂ ಮೀರಿ ಆಗಾಗ ನಡೆದಾಗ  ನಮಗೂ ಸಹ ಬಿಟ್ಟಿ ಮನರಂಜನೆ  ಈ ತರಲೆ ಪುಟ್ಟನಿಂದ ಗಿಟ್ಟುತ್ತಿತ್ತು.
ಒಮ್ಮೆ ನಮ್ಮ ಫ್ಲೋರಿಗೆ ಹೊಸದಾಗಿ  ವಾಸಕ್ಕೆ  ಬಂದ  ಮೇಘಾ ದಂಪತಿಗೆ   ನಾನು ಕೊಟ್ಟ ಕೋಡುಬಳೆ ಬಹಳ ಇಷ್ಟವಾಗಿ , ಇದೆ ರೀತಿ ಮಾಡುವುದನ್ನು ಕಲಿಸಿಕೊಡಿ ಎಂದು ದೊಂಬಾಲು ಬಿದ್ದಳು . ಅಂದು ನಾನು ಬಿಡುವಾಗಿದ್ದಾಗ  ಅವಳ ಮನೆಯಲ್ಲಿ ಕೋಡುಬಳೆ ಹಿಟ್ಟು ಮಾಡಿ ಒಂದೆರಡನ್ನು ಕರಿದು  ತೋರಿಸಿ ಮಿಕ್ಕಿದ್ದನ್ನು ಪೂರ್ತಿಗೊಳಿಸಲು ಹೇಳಿ ಬಂದಿದ್ದೆ . ಒಂದೆರಡು ಗಂಟೆಯಲ್ಲೇ ಮೇಘಾಳಿಂದ ಒಂದು ಡಬ್ಬಿ ಕೋಡುಬಳೆ ಗುರುದಕ್ಷಿಣೆ ರೂಪದಲ್ಲಿ ಬಂದಿತು. 
ಅದೇ  ಸಂಜೆಗೆ ನಮ್ಮ ನಾದಿನಿ ಕುಟುಂಬ ಅಚನಕ್ಕಾಗಿ ಆಗಮಿಸಿದಾಗ ತಕ್ಷಣಕ್ಕೆ ಅವರಿಗೂ ಕಾಫಿಯ ಜೊತೆ ಕೋಡುಬಳೆ ಕೊಟ್ಟಾಗ “ತುಂಬಾ ಗರಿ ಗರಿಯಾಗಿ ರುಚಿಯಾಗಿದೆ ! ಹೇಗೆ ಮಾಡಿದ್ರಿ “ ಎನ್ನುವ  ನಾದನಿಯ ಹೊಗಳಿಕೆಗೆ ನಾನು ಉಬ್ಬಿ ಇನ್ನೇನು ಅದರ ವಿಧಾನವನ್ನು ಹೇಳಬೇಕೆನ್ನುವಷ್ಟರಲ್ಲಿ ಅಲ್ಲೇ ಆಟವಾಡಿಕೊಂಡಿದ್ದ  ನಮ್ಮ ಪುಟ್ಟ  ಸತ್ಯ ಹರಿಶ್ಚಂದ್ರ  “ ಅತ್ತೆ ! ಇದು ಅಮ್ಮ ಮಾಡಿಲ್ಲ , ಮೇಘಾ ಆಂಟಿ ತಂದು ಕೊಟ್ರು “ ಎನ್ನುವ  ಸತ್ಯ ವಚನೆ  ಪಾಲನೆ ಯಥೋಚಿತವಾಗಿ  ನಡೆದಾಗ  ನಾದಿನಿ  ಸಂಶಯ ದ್ರಿಷ್ಟಿಯಿಂದ ನನ್ನತ್ತ  ತುಂಟ ನಗೆ ಬೀರಿದ್ದರು. ಇಂತ  ಅಚಾನಕ್ಕಾಗಿ ಎದುರಾಗುವ (ಕರೆಂಟ್ ) ಶಾಕ್ ಗಳ  ಅನುಭವ ನನಗೆ ಸಾಕಷ್ಟು ಇದ್ದುದರಿಂದ ಸಾವರಿಸಿಕೊಂಡು ವರದಿಗಾರಳಂತೆ ಮೇಘಾ ಹಾಗು ನನ್ನ ನಡುವೆ ಜರುಗಿದ ಕೋಡುಬಳೆ ತಯಾರಿಕೆಯ  ಇಂಚಿಂಚು ವಿವರಗಳನ್ನು ಅರುಹಿ ಮಗರಾಯ ಹಾಕಿದ ಸತ್ಯದ (ಚಿನಕುರಳಿ ) ಬಾಂಬನ್ನು ನಿಷ್ಕ್ರಿಯ ಗೊಳಿಸಿದಾಗ ನನ್ನ ನಾದಿನಿಯ ಹೊಗಳಿಕೆಗೆ ಮತ್ತೊಮ್ಮೆ ಪಾತ್ರಳಾಗಿ ಅವರಿಗೂ ಒಂದು ಡಬ್ಬಿ ಕೋಡುಬಳೆ ಮಾಡಿಕೊಡುವ ಹೊರೆ ನನ್ನ ಮೇಲೇ ಬಿದ್ದಿತ್ತು   !

ಏನೇ ಅನ್ನಿ   ಪ್ರಚಂಡ ಪುಟಾಣಿಯ ದೆಸೆಯಿಂದ ನಾವು ಮುಜುಗರಕ್ಕೀಡಾಗುವ   ಇಂತ ಅನೇಕ ಪೇಚಿನ ಪ್ರಸಂಗಗಳು ಆಗಾಗ ನಡೆದು ಒಮ್ಮೆಮ್ಮೆ  ಕಾಮೆಡಿ ಶೋಗಳ ರೂಪದಲ್ಲಿ ಮರು ನೆನಪಾಗಿ  ನಗೆ ಉಕ್ಕಿಸುತ್ತಿದ್ದವು .

 ಅಂದು ಡಿಸೆಂಬರ್ ಮೂವತ್ತೊಂದರ ವರ್ಷದ ಕೊನೆಯ ದಿನ .  ಎಲ್ಲೆಲ್ಲೂ ಹೊಸ ವರ್ಷದ ಆಗಮನವನ್ನು ಎದಿರು ನೋಡುವ   ಸಂಭ್ರಮ ಮನೆ ಮಾಡಿತ್ತು . ಅಂದು ನಮ್ಮ ಮನೆಯಲ್ಲಿ ಹೊಸ ವರ್ಷದ ಪಾರ್ಟಿಯೊಂದನ್ನು  ಹಮ್ಮಿಕೊಂಡು  ಅಕ್ಕ ಭಾವ ಒಂದಿಷ್ಟು  ಆಪ್ತ  ಗೆಳೆಯರ ಬಳಗವನ್ನು ಊಟಕ್ಕೆ ಆಹ್ವಾನಿಸಿದ್ದೆವು .ಮುಂಜಾನೆಯಿಂದಲೇ ಔತಣಕೂಟದ  ಏರ್ಪಾಡು ಭರದಿಂದ ಸಾಗಿತ್ತು .
ಇಳಿ ಸಂಜೆಯ ಹೊತ್ತಿಗೆ  ಮೊದಲು  ಗಂಡಸರ ಗುಂಡು ಪಾರ್ಟಿ  ನಂತರ ವಿಶೇಷ ಅಡುಗೆ ಕಾರ್ಯಕ್ರಮ ಎಂಬ ಯೋಜನೆ ಹಾಕಿಕೊಂಡು  ಮಾರ್ಕೆಟ್ಟಿಗೆ  ಹೋಗಿ ಬೇಕಾಗುವ ಸಾಮನು ದಿನಸಿಗಳನ್ನು ತರಲು ಹೊರೆಟೆವು. ನಮ್ಮ ಮುದ್ದು ಪುಟಾಣಿ ಕೂಡ ನಮ್ಮ ಜೊತೆಯಲ್ಲಿ ಇದ್ದ .

ಪಾರ್ಟಿಯ ಸಲುವಾಗಿ ಒಂದಿಷ್ಟು  ಬೀರ್ ಕ್ಯಾನುಗಳು ಜೊತೆಗೆ ತಿನ್ನಲು ಚಿಪ್ಸ್ ಕುರುಕಲು ತಿಂಡಿ ತಿನಸುಗಳು ಹಾಗೂ ಇತರ ಅವಶ್ಯಕ  ಸಾಮಾನುಗಳನ್ನೆಲ್ಲ  ಖರೀದಿಸಿದೆವು . ತುಂಟ ಮಗ ಕೂತೂಹಲದಿಂದ  ಎಲ್ಲವನ್ನೂ  ಗಮನಿಸುತ್ತಾ   ನಮ್ಮ ಹಿಂದೆಯೆ ಸುತ್ತುತ್ತಿದ್ದ .  . ಹಿಂದೊಮ್ಮೆ ಸ್ನೇಹಿತರ  ಮನೆಗೆ  ಪಾರ್ಟಿ ಗೆಂದು ಹೋದಾಗ  ಎಜಮಾನರು ಹಾಗೂ ಅವರ ಇತರ  ಗೆಳೆಯರ ಮುಂದಿದ್ದ  ಬೀರ್ ಕ್ಯಾನು ವಿಸ್ಕಿ ಬಾಟಲ್ಲು ಕಂಡು ಮಗ ಕೂತೂಹಲದಿಂದ " ಅಪ್ಪ ಅದೇನು ಕುಡೀತಾ ಇದ್ದೀಯಾ ,ನಂಗೂ ಕೊಡು  " ಎಂದು  ದೊಂಬಾಲು ಬಿದ್ದಾಗ  ಇವರು ಅದು ವಿಷ್ಕಿ  ಅಲ್ಲಲ್ಲ  ಜೂಸು ಪುಟ್ಟಾ ! ತುಂಬಾ  ತಣ್ಣಗಿದೆ ,ಕುಡಿದರೆ ನಿನಗೆ ಕೆಮ್ಮು ಬರುತ್ತೆ  , ಹೊರಗೆ  ಆಟ ಆಡ್ಕೊ ಹೋಗು ಮರಿ “ ಎಂದು  ಅವನ ಮುಗ್ಧ  ಪ್ರಶ್ನೆಗೆ  ಹಾರಿಕೆಯ ಉತ್ತರ ನೀಡಿ  ತಪ್ಪಿಸಿಕೊಂಡಿದ್ದರು . ದೊಡ್ಡವರು ನೀಡುವ ಈ ಉತ್ತರಗಳೆ ಮುಂದೆ ಯಾವುದೋ ಸಂದರ್ಭದಲ್ಲಿ ಎಳ್ಳಷ್ಟೂ ಸೂಚನೆಯಿಲ್ಲದೆ ಮೋಜಿನ (ತಿರುಗು ) ಬಾಣಗಳಂತೆ ನಮಗೇ  ಚುಚ್ಚುಬಹುದು .
ಇನ್ನು ಪೆಪ್ಸ್ಸಿ ಕೋಲಾಗಳ ರುಚಿ ನೋಡಿದ್ದ ನಮ್ಮ ತುಂಟ  ಪುಟಾಣಿಗೆ ಅಂದು ಈ  ಕ್ಯಾನುಗಳಲ್ಲಿರುವ  ಭಿಷ್ಕಿ ಜೂಸು ತಲೆಯಲ್ಲಿ ಕೂತೂಹಲದ ತರಂಗಗಳನ್ನೆ ಹುಟ್ಟು ಹಾಕಿರಬಹುದು .ಅಂತೂ ನಮ್ಮ ಖರೀದಿಯೆಲ್ಲಾ  ಮುಗಿದು  ಇವರು ಹೊಸ ವರ್ಷದ ಪಾರ್ಟಿಗೆ ಜೋರಾದ ತಯಾರಿ ನಡೆಸಿ ಒಂದೆರಡು  ಕ್ರೇಟು ಬೀರ್ ಕ್ಯಾನುಗಳನ್ನು ಹಿಡಿದು ಹೊರ ಬಂದರು  .

ಸಂಜೆಗೆ ನಾನು ರಾತ್ರಿಯ ವಿಶೇಷ ಭೋಜನದ ತಯಾರಿಯಲ್ಲಿದ್ದಾಗ  ನಮ್ಮ ಮನೆಗೆ ಪೂಜೆ ಪುನಸ್ಕಾರಗಳನ್ನು ಮಾಡಿಸುವ ಕೃಷ್ಣ  ಶಾಸ್ತ್ರಿಗಳು  ಅಕಸ್ಮಾತಾಗಿ ಬಂದರು  . ಸರಿ ಉಭಯ ಕುಶಲೊಪರಿಗಳೆಲ್ಲ ಮುಗಿದ ನಂತರ “ ಶಾಸ್ತ್ರಿಗಳೆ ಅಪರೂಪಕ್ಕೆ ಬಂದಿದ್ದೀರಿ ಒಂಚೂರು ಹಾಲು ಕುಡೀರಿ  ಇಲ್ಲಾ ಹಣ್ಣಾದರೂ ತಿನ್ನಿ ,  “ ಎಂದವರ  ಉಪಚಾರದಲ್ಲಿ ತೊಡಗಿದ್ದಾಗ ಅಯ್ಯೊಮಠದಲ್ಲಿ ಮಧ್ಯಾಹ್ನ ಊಟ ತುಂಬಾ ತಡ ಆಯಿತು ಅದೇ ಕರಗಿಲ್ಲ ಏನೂ ಬೇಡ ಬಿಡಮ್ಮ “ ಎಂದು ಹೊರಗೆ ಯಾರ  ಮನೆಯಲ್ಲೂ  ಏನನ್ನೂ ತಿನ್ನದ  ಶಾಸ್ತ್ರಿಗಳು ಸಂಕೋಚದಿಂದ ನುಡಿದರು  .

  ಅಲ್ಲೇ ಕಿವಿ ನಿಮಿರಿಸಿಕೊಂಡು ಶಾಸ್ತ್ರಿಗಳಿಗೆ  ನಾನು ಮಾಡುವ ಆದರಾತಿಥ್ಯವನ್ನೆಲ್ಲ ಗಮನಿಸುತ್ತಿದ್ದ ನನ್ನ ತುಂಟ ಮಗ ತಕ್ಷಣ “ ಅಮ್ಮ ಭಿಷ್ಕಿ  (bhishky ) ಕೊಡಮ್ಮ ಭಿಷ್ಕಿ “ ಎನ್ನುವ ವರಾತ ಶುರು ಮಾಡಿದ .  ಶಾಸ್ತ್ರಿಗಳು  ನನ್ನ ಮಗನ ತೊದಲು  ಭಾಷೆಯನ್ನು ತಮಗೆ ತೋಚಿದಂತೆ ಅರ್ಥೈಸಿಕೊಂಡು   “ ಅಯ್ಯೋ! ಪಾಪ ಮಗು ಬಿಶ್ಕೀಟ್ ( ಬಿಸ್ಕೆಟ್ ) ಕೇಳ್ತಾ ಇದೆ ನೋಡಿ ನಾನು ಕೂಡ ನಿನಗೆ ಏನೂ ತರಲಿಲ್ವವಲ್ಲೋ ಮರಿ  “ ಎಂದು ಮುದ್ದು ಮಾಡಿದಾಗ ಮಗ ಅವರ ಕೈ ಕೊಸರಿಕೊಂಡು “ ಇಲ್ಲಾ ಭಿಷ್ಕಿ ಜೂಸ್ ತೊಗೋ ಬತ್ತೀನಿ ನಿಮಗೆ ಒಲಗದೆ ತುಂಬಾ  ಇದೆ “ ಎಂದು  ಒಳಗೋಡಿಯೇ ಬಿಟ್ಟ .! ನಾನಾಗ ಗಾಬರಿಯಿಂದ ಪೀಟಿ ಉಷಾಳಂತೆ ಅವನ ಹಿಂದೆ ಸ್ಪೀಡಿನಲ್ಲಿ ಓಡಿ  ಅವನನ್ನು ಹಿಡಿದು (ತಡೆದು ) “ ಪುಟ್ಟಾ ! ನಿನಗೆ ಬಿಷ್ಕೆಟ್ ಬೇಕಾ ಇರು ಕೊಡ್ತೀನಿ “ ಎಂದು ಅಡುಗೆ ಕೋಣೆಗೆ  ಧಾವಿಸಿ ಬಂದೆ . ಅವನು  “ ಅಮ್ಮ ಇದಲ್ಲ ಅದು   “ ಎಂದು ಒಳಗಡೆ ಕೈ ತೋರಿಸಿ ಅಲ್ಲಗೆಳಿಯುತ್ತಿರುವಾಗಲೇ   ಅವನ ಬಾಯಿಗೆ ಬಲವಂತವಾಗಿ   ಒಂದು ಬಿಸ್ಕೆಟ್ ತುರುಕಿ “ ಪಕ್ಕದ ಮನೆ ಪುಟ್ಟಿ ಬಂದಿದ್ದಾಳೆ ನೋಡು ಆಡ್ಕೊ ಹೋಗು ಮರಿ “  ಎಂದು ಅವನನ್ನು ಹೊರಗೆ  ಸಾಗು ಹಾಕಿ “ ಅಬ್ಬಾ ಸಧ್ಯಈ ತುಂಟ ಮಗನಿಂದ ಈ ಶಾಸ್ತ್ರಿಗಳ ಮುಂದಾಗುವ ಫಜೀತಿ ಹೇಗೂ ತಪ್ಪಿತಲ್ಲ “ ಎಂದು ಸಮಾಧಾನದ  ನಿಟ್ಟಿಸುರು ಬಿಟ್ಟಿದ್ದಾಯಿತು . ಏನೇ ಅನ್ನಿ ಈ ಮೋಜಿನ ಪ್ರಸಂಗ ನೆನಪಾದಾಗಲ್ಲೆಲ್ಲ  ನಗು ಉಕ್ಕಿ ಬರುತ್ತದೆ .


ಆರತಿ ಘಟಿಕಾರ್

ಜೂನ್ ೨೦೨೦೨  ಮಂಗಳ  ಪತ್ರಿಕೆಯಲ್ಲಿ ಬಂದ ಹಾಸ್ಯ ಲೇಖನ 

.


3 comments :

  1. ಒಂದು large ಭಿಶ್ಕಿ ಕುಡಿದಷ್ಟು ಖುಶಿಯಾಯಿತು. ನಿಮ್ಮ ಪುಟ್ಟನಿಗೆ ಧನ್ಯವಾದಗಳು.

    ReplyDelete
  2. ಧನ್ಯವಾದಗಳು ಸರ್ 🙏

    ReplyDelete