Sunday, January 19, 2020

ಗಡ್ಡ ಈಸ್ ಗುಡ್


ಗಡ್ಡ ಈಸ್ ಗುಡ್
ಒಬ್ಬ ಕಾಲೇಜು ಮತ್ತೊಬ್ಬ ಹೈಸ್ಕೂಲ್ ಓದುತ್ತಿರುವ ನಮ್ಮ ಸುಪುತ್ರರರಿಬ್ಬರ ಸ್ವಭಾವದಲ್ಲಿ ಅಜಗಜಾಂತರ ವ್ಯತ್ಯಾಸ  . ಹಿರಿಯವ  ಗಂಭೀರ ಕವಿತೆಗಳಂತೆ , ತಾನಾಯಿತು ತನ್ನ ಅಭ್ಯಾಸವಾಯಿತು  ಎಂದು ತನ್ನ ಕೋಣೆಯ ಬಿಲದಲ್ಲಿ ಸೇರಿಕೊಂಡು ಕೋಶ ಓದು ದೇಶ ಸುತ್ತು ಎಂಬ ಗಾದೆಯಲ್ಲಿ  ಮೊದಲನೆಯದನ್ನು ಅಚ್ಚುಕ್ಕಟ್ಟಾಗಿ ಪಾಲಿಸುವ  ಸಾಧು ಪ್ರಾಣಿ ..ಕಿರಿ ಮಗನಿಗೆ ಪ್ರಿಯವಾದದ್ದು  ಅದರ ಎರಡನೆಯ ಭಾಗ ಮಾತ್ರ . ಹಾಗಾಗಿ ಕೋಶವನ್ನು ಅವನ ಮಸ್ತಕಕ್ಕೆ ಗಮ್ ಹಾಕಿ  ಅಂಟಿಸಿದರೂ ಕೊಡವಿಕೊಂಡು  ಹದಿನಾರರ  ವಯಸ್ಸಿನಲ್ಲಿ ನಾವಿರುವ ದುಬೈ ನಗರದ ಉದ್ದಗಲವನ್ನೂ ಸುತ್ತುತ್ತಾ ಚಟಪಟ ಚುಟುಕಿನಂತೆ ಮಾತಿನ ಮಲ್ಲ .

ಇನ್ನು ಅವರ ಅಭಿರುಚಿಗಳಲ್ಲೂ ಭಿನ್ನಮತೀಯರು. ಹಿರಿ ಮಗ ಕಾಲೇಜಿನಲ್ಲಿದ್ದಾಗ  ಅವನ ಬೆಳ್ಳನೆಯ  ಮುಖದಲ್ಲಿ ಮೀಸೆ ಚಿಗುರೊಡೆದು , ಸಪಾಟಾದ  ನೆಲದಲ್ಲಿ ಅಲ್ಲಲ್ಲಿ ತೆನೆ ಬಂದಂತೆ ಕುರುಚಲು ಗಡ್ಡ ಮೂಡಿ ಬಂದಾಗ ಅವನಿಗೆ ಏನೂ ಕಸಿವಿಸಿ . ತಾಯಿ ಮಗಳಿಗೆ ಅನ್ನ ಮಾಡುವುದನ್ನು ಕಲಿಸಿದಂತೆ ಅವರ ತಂದೆ  ಶೇವಿಂಗ್ ಕಿಟ್ಟಿನ ಪರಿಚಯ ಮಾಡಿಸಿ ಮುಖ ಕ್ಷೌರದ ಬೇಸಿಕ್ ಜ್ನ್ಯಾನವನ್ನು  ಧಾರೆ ಎರೆದಿದ್ದರು  . ಆದರವನಿಗೆ ದಾಡಿ ಮಾಡಿಕೊಳ್ಳುವುದೆಂದರೆ ಮಹಾ ಬೋರು ! ಯಾವ ಆರೈಕೆಯೂ ಇಲ್ಲದೆ ದಿನಬೆಳಗಾದರೆ ಸೊಂಪಾಗಿ ಚಿಗುರುವ ತನ್ನ ದಾಡಿಯನ್ನು ಕಂಡರಂತೂ   ಭಯಂಕರ  ಸಿಟ್ಟು . ಗಂಡಸರಿಗಷ್ಟೇ ಏಕೆ ಈ ದಾಡಿ ಮಾಡಿಕೊಳ್ಳುವ ಸಂಕಷ್ಟ ಎಂದು ಗೊಣಗುತ್ತಲೇ ಆ ಕ್ರಿಯೆಯಿಂದ ತಪ್ಪಿಸಿಕೊಳ್ಳಲು ನಾನಾ  ಸಾಹಸಗಳನ್ನು ಮಾಡುತ್ತಿದ್ದರೆ ಕಿರಿ ಮಗ ಮಾತ್ರ ತನ್ನ ನುಣುಪಾದ ಮುಖದ ಮೇಲೆ ಎಳೆ ಮೀಸೆ /ಎಳೆ ಚಿಗುರಿನ  ಕುರುಹು ಕಂಡಾಕ್ಷಣವೆ ಅಪ್ಪನಿಗೆ ಗೊತ್ತಾಗದಂತೆ ರೇಜರ್ ಪ್ರಯೋಗಗಳನ್ನು ನಡೆಸಿ ಮುಖಕ್ಷೌರದ ಅದ್ಧೂರಿ ಆರಂಭೋತ್ಸವವನ್ನು ಮಾಡಿದ್ದ .ಅಷ್ಟೇ ಅಲ್ಲದೆ ಆಗಲೇ ಫ್ರೆಂಚ್ ಗಡ್ಡದ ಕನಸು ಕಾಣುತಿದ್ದ ದಡ್ಡ ! ..
ಇನ್ನು ಹಿರಿಮಗನಿಗೆ ತನ್ನ ಎರಡು ವಾರದ ದಾಡಿ  ತುರಿಸಲು ಶುರುವಾದಾಗ ಅದು  ಕೊಯಲಿಗೆ ಸಿದ್ದವಾದ ಸೂಚನೆಯನ್ನು    ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಿದ್ದ . ಆಗವನ ಬಾತ್ರೂಮಿನಿಂದ  “ ಅಯ್ಯೋ ..ಅಮ್ಮ “ ಎನ್ನುವ ಆರ್ತನಾದ ನನ್ನ ಕಿವಿಗೆ ಅಪ್ಪಳಿಸುತಿತ್ತು ! ಇದರರ್ಥ ಅವನ ಆಪರೇಶನ್ ದಾಡಿ ಕಾರ್ಯಕ್ರಮ  ಜಾರಿಯಲ್ಲಿದೆ ಎಂದು .ಹರಿತವಾದ ಶೇವಿಂಗ್ ಬ್ಲೇಡಿನಿಂದ  ಕೆನ್ನೆಗೆ ಗಾಯ ಮಾಡಿಕೊಳ್ಳದ ಹೊರತಾಗಿ ಅವನ ದಾಡಿ ಬೋಳಿಸಿಕೊಳ್ಳುವ ಪ್ರಕ್ರಿಯೆ ಮುಗಿಯುತ್ತಿರಲಿಲ್ಲ ! ಶುರುವಿನಲ್ಲಿ  ಅವನ ಕೂಗಿಗೆ ಗಾಬರಿಯಾಗಿ ಹೆರಿಗೆ ನೋವು ತಿನ್ನುತ್ತಿದ್ದ ಮಗಳ ಲೇಬರ್ ವಾರ್ಡಿನೆದಿರು ಆತಂಕದಲ್ಲಿ ನಿಂತ ಅಮ್ಮನಂತೆ “ನಿಧಾನ ಕಣೋ,ಹುಷಾರಾಗಿ ಮಾಡ್ಕೊಪ್ಪ “ ಎಂದು ಕೂಗುತ್ತಿದ್ದೆ  .

ಹೇಗೆ ಎರಡು ಮೂರು ವಾರಕೊಮ್ಮೆ ಅವನ ದಾಡಿಯ ಮೇಲೆ ಇದೊಂದು ರೀತಿಯ  ಸರ್ಜಿಕಲ್ ಸ್ಟ್ರಿಕ್  ನಡೆದು  ಶೇವಿಂಗ್  ಆಯುಧ ಹಾಗು ಹುಲುಸಾದ ಬೆಳೆಯ  ಮಧ್ಯೆ ಮಹಾ ಕಾಳಗವೇರ್ಪಟ್ಟು “ ಹಾ! ಅಮ್ಮಾ .ಎನ್ನುವ ಕರುಣಾಜನಕ ಸ್ವರಗಳು ನನ್ನ ಕಿವಿಗಪ್ಪಳಿಸಿ ನನ್ನ ಮಾತೃ ಹೃದಯವನ್ನು ಕಲಕುವುದು ಮಾತ್ರ ತಪ್ಪುತ್ತಿರಲಿಲ್ಲ .ಆದರೆ ಕೆಲ ಸಮಯದ ನಂತರ ಕ್ಲೀನ್ ಶೇವಾದ ನುಣುಪು ಕೆನ್ನೆಯ ಗಾಯಾಳು ಯೋಧನ ಆಗಮನವಾಗಿ   ಕೆನ್ನೆಯ ಗಾಯಗಳಿಗೆ ಬಿರುಸಾದ ಔಷಧೋಪಚಾರಗಳು ನಡೆದ ನಂತರ  ಮತ್ತೊಮ್ಮೆ ನನ್ನ ಮಾತೃ ಹೃದಯ ಮನಸು ಏಕಕಾಲಕ್ಕೆ ಗಡ್ಡ ರಹಿತ ಸುಂದರ ಮಗರಾಯನನ್ನು ಕಂಡು ಖುಷಿಯಿಂದ ಬೀಗುತಿದ್ದದ್ದು ಮಾತ್ರ ಸುಳ್ಳಲ್ಲ !
ಆದರೆ ಇವನ ಶೇವಿಂಗ್ ಸಾಹಸಗಾಥೆಗಳನ್ನು ಆಲಿಸಿದ  ಎಜಮಾನರು ಮಾತ್ರ  ಒಂದಿಷ್ಟೂ ಕರುಣೆಯಿಲ್ಲದೆ  “ ನಿನ್ನ ಮಗನಿಗೆ  ಆಪರೇಷನ್ ಕೋಣೆಯಲ್ಲಿ ಅನೆಶ್ತೀಸಿಯಾ  ಕೊಟ್ಟೆ ದಾಡಿ ಮಾಡಿಸಬೇಕೆನೋ “ ಎಂದು ನಗಾಡುತ್ತಿದ್ದರು . ಹುಸಿ ಕೋಪದಲ್ಲಿ ನಾನು “ ಅಯ್ಯೋ !ನೀವು ಅವನಿಗೆ ರೇಜರ್ನಿಂದ  ಶೇವ್ ಮಾಡೋದನ್ನ ಸರಿಯಾಗಿ ಹೇಳೇ ಕೊಟ್ಟಿಲ್ಲ ಕಣ್ರೀ “ ಎಂದು ಅವರ ಮೇಲೆಯೆ ಗೂಬೆ  ಕೂರಿಸುತ್ತಿದ್ದೆ .” ಒಹ್ ಸ್ವಿಮ್ಮಿಂಗ್  ಕೂಡ ಆನ್ಲೈನ್ ನಲ್ಲಿ ಕಲಿತಂತೆ, ಯೂ ಟ್ಯೂಬಿನಲ್ಲಿ ಶೇವಿಂಗ್ ಮಾಡುವುದನ್ನೂ ಕಲಿಯಬಹುದಿತ್ತಲ್ಲ  ನಮ್ಮ ನೆಟ್ ರಾಜ “ ಎನ್ನುವ ಅವರ ತಮಾಷೆಗೂ  ಕಾರಣವಿತ್ತು . ಹಿರಿ ಮಗ  ಮೊದಲಿನಿಂದಲೂ ಯಾವುದೆ ಹೊಸ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಿದ್ದಲ್ಲಿ  ನೆಟ್ಟಗೆ  ಧಾವಿಸುತ್ತಿದ್ದದ್ದು (ಇಂಟರ್)ನೆಟ್ಟಿನ ಕಡೆಗೆ! ಅರ್ಥಾತ್  ಅಂತರ್ಜಾಲದ ಗುರುಗಳಾದ  ಗೂಗಲ್ಲೂ ,ಯೂ ಟ್ಯುಬಿನ ಬಳಿಗೆ ! ತನ್ನ ತಮ್ಮ ಸಣ್ಣವನಿದ್ದಾಗ ಶೂ ಲೇಸ್ ಕಟ್ಟುವುದನ್ನೂ ಸಹ ಯೂ ಟ್ಯುಬಿನಲ್ಲಿದ್ದ ರೈಮ್ಸ್  ಮುಖಾಂತರವೆ ಕಲಿಸಿಕೊಟ್ಟಿದ್ದ . ಹಾಗಾಗಿ “ ನೆಟ್ ರಾಜ” ನೆಂಬ ಅಡ್ಡ ಹೆಸರಿನಿಂದಲೆ  ನಾವು ಅವನನ್ನು ಕಿಚಾಯಿಸುತ್ತಿದ್ದದ್ದು !
ಇನ್ನು ಅವನ ಕಾಲೇಜು ದುಬೈ ನಗರದಿಂದ ಮೂವತ್ತು  ಕಿಲೋ ಮೀಟರ್ ದೂರ ಇದ್ದ ಕಾರಣ ದಿನವೂ ಮುಂಜಾನೆ  ಆರಕ್ಕೆಲ್ಲ   ತಯಾರಾಗಿ  ಮನೆ ಬಿಡಬೇಕಾಗುತಿತ್ತು , ಹಾಯಾದ ಸಿಹಿ ನಿದ್ದೆಯಿಂದ ಎಬ್ಬಿಸುವ  ಸಂಗೀತದ ಅಲಾರಾಮು ಇಂಪಾಗಿ ಹೊಡೆದುಕೊಂಡರೂ ಅವನಿಗೆ ಕರ್ಣಕಟೋರವಾಗಿ ನಸುಕಿನಲ್ಲೇ ಏಳಬೇಕಾದ ತನ್ನ ನಿತ್ಯ ಕರ್ಮಕ್ಕೆ ಗೊಣಗಿಕೊಳ್ಳುತ್ತಲೇ  ಸ್ನಾನಾದಿಗಳ ಮುಗಿಸಿ ತಯಾರಾಗುವಾಗ ದಿನಂಪ್ರತಿ ಹುಲುಸಾಗಿ ಬೆಳೆಯುತ್ತಿರುವ ಗಡ್ಡವನ್ನು ಅವನಿಗೆ ತೋರಿಸಿ ಕನ್ನಡಿ ಮುಸಿ ಮುಸಿ ನಗುತ್ತಿತ್ತು . ಆದರೆ ಆ ಗಡ್ಡದ ಭೂತಕ್ಕೆ  ಕ್ಯಾರೆ ಅನ್ನದೆ ಅರ್ಧ ಮುಖವನ್ನು ಆವರಿಸಿದ ಹುಲುಸು ಬೆಳೆಯ ನಡುವೆ ಮುಖದ ನುಣುಪು ಚರ್ಮವನ್ನು ಹುಡುಕಿ ಕ್ರೀಮು ಸವರಿ ನಮ್ಮ “ ನೆಟ್ ರಾಜನ “ ಸವಾರಿ ಕಾಲೇಜಿಗೆ ಹೊರಡುತಿತ್ತು !

ಇನ್ನು ಈ ಅರಬ್ ನಾಡಿನಲ್ಲಿ  ನಮ್ಮ ಮನೆಯ ಸಮೀಪವೇ ಇರುವ “ ಮಂಗಳೂರು ಹೇರ್ ಕಟ್ಟಿಂಗ್ “ ಹೆಸರಿನ  ಕ್ಷೌರದಂಗಡಿಯ  ಕನ್ನಡ ಫಲಕ ನಮ್ಮ ಕನ್ನಡಭಾಷಾಭಿಮಾನವನ್ನು ಉಕ್ಕೆರಿಸುವುದಷ್ಟೇ ಅಲ್ಲದೆ ತಿಂಗಳೋ ಎರಡೋ ತಿಂಗಳಿಗೊಮ್ಮೆ ಮನೆಯ . ಮೂರು ಗಂಡು ಪಡೆಗಳ ಚೌರದ ಕಾರ್ಯಕ್ರಮ ಅಲ್ಲೆ  ನಡೆಯುತ್ತಿತ್ತು .ಸವಿಗನ್ನಡದಲ್ಲೇ ಹರಟುತ್ತ  ಕಾಸಿಂ ಭಾಯಿಯ ಕೈಚಳಕದಲ್ಲಿ ತಲೆಗೆ ಎಣ್ಣೆ ಮಸಾಜು ಹಾಗು ನಮ್ಮ ಕಾಟಕ್ಕೆ ದಾಡಿಯ ಪ್ಯಾಕೇಜ್ ಸೇವೆಗಳನ್ನೂ ಸಹ ಪಡೆದು   ಹಿರಿ ಮಗರಾಯ ಮಾತ್ರ  ಮೂರುಗಂಟೆ ಮಗುವಿನಂತೆ ಪವಡಿಸಿ ಕೊಳ್ಳುತ್ತಿದ್ದ   .

ಆದರವನಿಗೆ  ಪ್ರತಿಬಾರಿ ತನ್ನ ಕೈಚಳಕದ ಮುಖಕ್ಹೌರದ ಕೆಟ್ಟ ಅನುಭವವನ್ನೇ ನೀಡಿದಾಗ ಶೇವಿಂಗ ಬ್ಲೇಡಿನ ಹಳೆ ವಿಧಾವನ್ನು ತಿರಸ್ಕರಿಸಿ , ಕೆನ್ನೆ ಕೊಯ್ದುಕೊಳ್ಳುವ ಅಪಾಯವಿಲ್ಲದ ಎಲೆಕ್ಟ್ರಿಕ್  ಟ್ರಿಮ್ಮರ್ ಉಪಕರಣದಿಂದ ಗಡ್ಡ ಟ್ರಿಮ್ ಮಾಡಿಕೊಳ್ಳುವತ್ತ ಪಾದಾರ್ಪಣೆ ಮಾಡಿದ .ಅದಕ್ಕೂ ಮೊಬೈಲಿನಂತೆ ಚಾರ್ಜಿಗಾಕುವ ಕರ್ಮ ,ಮನೆ ಮುಂದೇ ಅಡ್ಡಾದಿಡ್ಡಿ ಬೆಳೆದ  ಹಸಿರು ಲಾನನ್ನು  ನೀಟಾಗಿ ಒಂದೇ ಲೆವಲ್ಲಿಗೆ ಕತ್ತರಿಸಿ ಟ್ರಿಮ್ ಮಾಡುವಂತೆ ಟ್ರಿಮ್ಮರಿನಿಂದ ಅವನ ಒರಟಾದ ದಾಡಿಯನ್ನು ಬರೀ ಟ್ರಿಮ್ಮಿಂಗ್  ಮಾಡುತ್ತಿದ್ದ ಪರಿಗೆ ನೌಕರಿಯ ಸಲುವಾಗಿ ನಸುಕಿನ ಐದಕ್ಕೆ ದಾಡಿ ಮುಗಿಸಿ ತಯಾರಾಗುತ್ತಿದ್ದ  ಸದಾ ಕ್ಲೀನ್ ಶೇವ್ ಅಪ್ಪನಿಗೆ ಆ  ಟ್ರೀಮ್ಮರ್ ಮೇಲೆ ಎಲ್ಲಿಲ್ಲಿದ ಮುನಿಸು .”  ನುಣ್ಣಗೆ ದಾಡಿ ಮಾಡ್ಕೊಳ್ಳೋ ಬದಲು ನಿಮ್ಮಗಳದ್ದು ಏನು ಹುಚ್ಚಾಟವೋ ಏನೋ “ ಎಂದು ಸದಾ ರೇಗುತ್ತಿದ್ದರು !

 ನಾವೆಲ್ಲಾ ಕುಟುಂಬ ಸಮೇತವಾಗಿ ಹೋಗಲೆಬೇಕಾಗುತ್ತಿದ್ದ ಪಾರ್ಟಿ , ಸಮಾರಂಭಗಳಿಗೆ ಮಗರಾಯನ ಸೋಮಾರಿತನವೋ (ಅಥವಾ ಕಿಲಾಡಿತನವೋ ) ಮೆರೆದು ಟ್ರಿಮ್ಮರ್ ಚಾರ್ಜ್ ಇಲ್ಲ ಎನ್ನುವ ಸಕಾರಣದಿಂದ ಮತ್ತೆ ತನ್ನ  ಮಾಮೂಲು  ಗಡ್ಡಧಾರಿ ವೇಷದಲ್ಲೇ ಹೊರಟು ನಿಂತಾಗ   ನಮ್ಮ ತೀವ್ರ ಪ್ರತಿಭಟನೆಗೆ ಇರುತಿತ್ತು. ಆಗೆಲ್ಲ ಹೆಮ್ಮೆಯಿಂದ ತನ್ನ ದಾಡಿಯನ್ನು ನೀವುತ್ತಾ  “ ಅಮ್ಮ ಈಗೇನಾಯಿತು !? ಐ ಯಾಮ್  ಲೂಕಿಂಗ್ ಕೂಲ್ ಇನ್ ದಿಸ್ ಬೀಯರ್ಡ್  !  ಕಾಲೇಜಿನಲ್ಲಿ ನನ್ನ ಗೆಳೆಯರೆಲ್ಲ  ಸೂಪರ್ ಲುಕ್ ನಿಂದು ಮಗ ಅಂತ ಹೊಗಳ್ತಾರೆ.  ದಾಡಿ ಇಟ್ಟುಕೊಳ್ಳೋದು ಈಗಿನ ಹುಡುಗರ ಹೊಸ ಫ್ಯಾಶನ್ ! ವೀರಾಟ್ ಕೊಹ್ಲಿ , ಜಡೇಜಾ ಅವರನ್ನೆಲ್ಲ ನೋಡು ,ದಾಡಿಯಲ್ಲಿ ಏನ್ ಸಕ್ಕತ್ತಾಗಿ ಮಿಂಚ್ತ್ತಾರೆ !  ಅವರ ಮನೆಯವರಾರು  ನಿನ್ನ ಹಾಗೆ ತಕರಾರು ಮಾಡಲ್ಲ ಸದ್ಯ    “ ಎನ್ನುವ ಸಮಜಾಯಷಿಯಿಂದ ನಮ್ಮ ಬಾಯಿ ಮುಚ್ಚಿಸುವುದಷ್ಟೇ ಅಲ್ಲದೆ ನನ್ನ ಕಿವಿ ಬಳಿಯೇ   “ಗಡ್ಡ ಈಸ್ ಗುಡ್” ಎಂದು  ಘೋಷ ವಾಕ್ಯ ಸಹ ಕೂಗುತ್ತಿದ್ದ .

ಒಮ್ಮೆ  ಕಾಲೇಜಿಗೆ ಕೊಡಲು  ಪಾಸ್ಪೋರ್ಟ್ ಅಳತೆಯ ಪಟ ತುರ್ತಾಗಿ ಬೇಕಿದ್ದರಿಂದ   “ಗಡ್ಡಕ್ಕೆ  ಬೆಂಕಿ ಹತ್ತಿದ್ದಾಗ ಭಾವಿ ತೊಡಿಸಿದಂತೆ “ ಎಂಬ ಗಾದೆಯಂತೆ ಲಗುಬಗನೆ  ತನ್ನ ಟ್ರಿಮ್ಮರನ್ನನ್ನು  ಚಾರ್ಜಿಗೆ ಹಾಕಿದಾಗ ಅವನ ಕೆನ್ನೆಗಂದು ಡಬಲ್ ಧಮಾಕ ! ,ಕಾರಣ ಟ್ರಿಮ್ಮರ್ನಿಂದ ಕೆತ್ತಿದ ಮೇಲೂ ಉಳಿದ ಕುರುಚಲು ಗಡ್ಡದ ಅವಶೇಷಗಳನ್ನು ರೇಜರ್ ಬ್ಲೇಡಿನಿಂದ ನುಣ್ಣಗಾಗಿಸಿ ಪಟ ತೆಗೆಸಿಕೊಂಡು ಬಂದಾಗ “ ಅಯ್ಯೋ ನನ್ನ  ಕಣ್ಣೆ ದೃಷ್ಟಿಯೇ ಅವನಿಗೆ ತಾಕುವುದೇನೊ “ ಎನ್ನುವ ಗಾಬರಿ ನನ್ನದಾಗಿತ್ತು  !

ಏನೇ ಅನ್ನಿ ನಮ್ಮ ಕಾಲದಲ್ಲಿ  ಪ್ರೀತಿಯಲ್ಲಿ ಕೈ ಸುಟ್ಟುಕೊಂಡ ಭಗ್ನ ಪ್ರೇಮಿಗಳು  ದಾಡಿ  ಬಿಟ್ಟು ದೇವದಾಸರಂತಾಗುತ್ತಿದ್ದರು . ,ಆದರೆ ಈಗಿನ ಹೊಸ ಟ್ರೆಂಡಿನ ಪ್ರಕಾರ ಹುಡುಗರಿಗೆ ಗಡ್ಡವೇ ಭೂಷಣ .ತಮ್ಮ ಮುಖಕ್ಕೆ ಹೊಂದುವ  ಫ್ರೆಂಚ್ ಗಡ್ಡ ,ಸ್ಟೇಬಲ್ ,  ಗೋಟಿ ಎಂದೆಲ್ಲ ಮಾಡರ್ನ್ ಲುಕ್ಕಿನಿಂದ ಮಿಂಚುತ್ತ    ಅಪಾರವಾದ ಗಡ್ಡ ಪ್ರಜ್ಞ್ಯೆಯಿರುವ ಹುಡುಗರನ್ನೇ  ಈಗಿನ ಹುಡುಗಿಯರು ಮೆಚ್ಚುವುದಂತೆ  ! ಬುದ್ಧಿಜೀವಿ, ತತ್ವಜ್ಯಾನಿ , ಸನ್ಯಾಸಿಗಳ ಸಂಕೇತವಾಗಿರುತ್ತಿದ್ದ  ದಾಡಿ ಈಗ ಯುವ ಜನಾಂಗದ , ಕ್ರೀಡಾಪಟುಗಳ ಸಿನಿಮ ಹೀರೋಗಳ ಮುಖಗಳನ್ನು ಆವರಿಸಿ  ಆಧುನಿಕ್ ಫ್ಯಾಶನ್ ಟ್ರೆಂಡಾಗಿ ಬದಲಾಗಿದೆ . ಮುಖ ಕ್ಷೌರ ಮಾಡಿದ ನುಣುಪಾದ ಕೆನ್ನೆಯ ಹುಡುಗರನ್ನು ಅಪರೂಪಕ್ಕೆ ಕಂಡಾಗಲಂತೂ   ನನಗೆ ಬಯಲು ದಾರಿ ಸಿನಿಮಾದಲ್ಲಿ  ಮೀಸೆ ಗಡ್ದಗಳನ್ನು ಬೋಳಿಸಿದ ಅನಂತ ನಾಗ್ ಅವರೇ ನೆನಪಿಗೆ ಬರುತ್ತಾರೆ . ಆಗ ನಾರಿಯರು ಇಷ್ಟಪಡುವ ಪುರುಷರ ಮುಖ ಲಕ್ಷಣಗಳು  “ಬಯಲು ದಾರಿ” ಯಾದರೆ ಈಗಿನದು ಗಡ್ಡ ದಾರಿ ಎನ್ನಬಹುದು !
ಫ್ಲ್ಯಾಶ್ ಬ್ಯಾಕಿಗೆ ಇಣುಕಿದರೆ ನಾ  ಸಣ್ಣವಳಿದ್ದಾಗ ಅಮ್ಮ ಹಾಗು ನಾವು ಮೂವರು ಅಕ್ಕತಂಗಿಯರಿದ್ದ  ನಮ್ಮದು ಪ್ರಮೀಳಾ ರಾಜ್ಯ, ಆದರೆ ಮನೆಯಲ್ಲಿದ್ದ ನಮ್ಮ ತಂದೆಯವರ ಏಕೈಕ ದಾಡಿ ಕಿಟ್ಟು ನನ್ನ ಪ್ರೈಮರಿ ಶಾಲಾ ದಿನಗಳಲಿ ನನಗೆ  ಆಪತ್ಕಾಲದ ಬಂಧುವಾಗುತಿತ್ತು !ಹೇಗೆ ಅಂತೀರಾ ?  ನನ್ನಬಳಿ ಇದ್ದ ಒಂದೇ ಒಂದು  ಮೆಂಡರ್ ಕಳೆದು ಪೆನ್ಸಿಲ್ ಚೂಪು ಮಾಡಲು  ಕಿಟ್ಟಿನಲ್ಲಿದ್ದ  ಸೆವೆನೋ ಕ್ಲಾಕ್ ಬ್ರ್ಯಾಂಡಿನ ರೇಜರ್ ಬ್ಲೇಡನ್ನು ಪ್ಯಾಕೆಟ್ಟಿನಿಂದ ಒಂದೆರಡನ್ನು   ಮೆಲ್ಲನೆ ಎಗರಿಸಿಬಿಡುತಿದ್ದೆ .ಈ ಘನ ಚೌ(ಕಾ)ರ್ಯಕ್ಕೆ   ಅಪ್ಪನಿಂದ ಬೈಗುಳವನ್ನೂ ತಿಂದದ್ದುಂಟು   !
ಇನ್ನು ಅಮೇರಿಕದಲ್ಲಿ  ಆರಂಭವಾದ   “ ನೋ ಶೇವ್ ನವೆಂಬರ್ “  ಅಭಿಯಾನ ಇಡಿ ನವೆಂಬರ ತಿಂಗಳು ಮುಖ ಕ್ಷೌರದಿಂದ ದೂರವುಳಿದು ಕ್ಯಾನ್ಸರ್ ರೋಗಕ್ಕೆ ತುತ್ತಾದದವರು  ಕೂದಲು ಕಳೆದುಕೊಳ್ಳುವ ಸಂಕಷ್ಟದ ಬಗ್ಗೆ ಅರಿವು ತಿಳುವಳಿಕೆ ಮೂಡಿಸುವ ಅಭಿಯಾನವಾಗಿದೆಯಂತೆ  . ಅಂತೆಯೇ ತಮ್ಮ ಕ್ಷೌರಕ್ಕೆ  ತಗಲುವ ವೆಚ್ಚವನ್ನು ಉಳಿಸಿ ಆ ಹಣವನ್ನು ಕ್ಯಾನ್ಸರ್  ರೋಗಿಗಳ ಸಹಾಯಕ್ಕೆ ನಿಂತ ಸಂಸ್ಥೆಗಳಿಗೆ ಸಹಾಯಾರ್ಥವಾಗಿ ನೀಡಲು ಪ್ರೇರೇಪಿಸುತ್ತದೆ . ಆದರೆ ಈಗಿನ ಹೈಕಳುಗಳನ್ನು ಕಂಡಾಗ ವರ್ಷವಿಡಿ ನೊ ಶೇವ್ ನವೆಂಬರ್ ಆಚರಿಸುತ್ತಿದ್ದಾರೆನೋ ಎನಿಸುತ್ತದೆ .
ತಮ್ಮ ತಲೆಕೂದಲಿಗೆ ಬೆಳ್ಳಿ , ಹೊಂಬಣ್ಣಗಳನ್ನು ಬಳಿದುಕೊಳ್ಳುವುದಷ್ಟೇ ಅಲ್ಲದೆ  ರೈನ್ಬೋ ಬಣ್ಣಗಳಿಂದ ತಮ್ಮ ಗಡ್ಡ ಮೀಸೆಗಳನ್ನು ಅಲಂಕರಿಸಿಕೊಳ್ಳುವ ಪಾಶ್ಚಾತ್ಯ ದೇಶದ ಮಹಾನುಭಾವರ  ಕುರಿತಾದ ಸಚಿತ್ರ ಲೇಖನಗಳನ್ನು ಓದಿದಾಗ ನಗು ಉಕ್ಕಿ ಬಂದಿತ್ತು  .ಏನೇ ಅನ್ನಿ ಈ ಗಡ್ಡದ ಪುರಾಣ ಗುಡ್ಡದಂತಾಗುವ ಮುನ್ನ ನನ್ನ ಲೇಖನವನ್ನು ಇಲ್ಲಿಗೇ ಟ್ರಿಮ್ ಮಾಡುತ್ತೇನೆ .

ಆರತಿ ಘಟಿಕಾರ್



2 comments :

  1. ಪ್ರತಿಯೊಂದು ಪರಿಚ್ಛೇದವು ನಗೆಯ ಬುಗ್ಗೆಯಾಗಿದೆ. ಹಬ್ಬದ ಹೋಳಿಗೆಯನ್ನು ತಿಂದಷ್ಟು ಸಂತೋಷವಾಯಿತು. ಇದಕ್ಕೆ ಕಾರಣನಾದ ನಿಮ್ಮ ‘ಗಡ್ಡವೀರ’ಪುತ್ರನಿಗೂ ಹಾಗು ನಿಮಗೂ ನನ್ನ ಅನೇಕ ಧನ್ಯವಾದಗಳು. ನಿಮ್ಮ ಲೇಖನಗಳನ್ನು ಇಷ್ಟಕ್ಕೇ ನಿಲ್ಲಿಸಬೇಡಿ; keep us laughing ಎನ್ನುವುದೊಂದೇ ನನ್ನ ವಿನಂತಿ.

    ReplyDelete
  2. ಖಂಡಿತ ಸರ್ . ಅಕ್ಷರಗಳ ಮೂಲಕ ಹಾಸ್ಯವನ್ನು ಹುಟ್ಟುಹಾಕುವ ನಗೆ ಧರ್ಮದತ್ತವೆ ನನ್ನ ಆಸಕ್ತಿ ಒಲವು .ನಿಮ್ಮ ಅನಿಸಿಕೆಗಳಿಗೆ ನನ್ನ ಬರವಣಿಗೆಯ ಜೋಶ ಇಮ್ಮದಿಯಾಗುವುದಂತೂ ಸತ್ಯ .ಧನ್ಯವಾದಗಳು ಸರ್ .

    ReplyDelete