Wednesday, August 26, 2015


ಗಾದಿ ಪುರಾಣ 
ದಿನವೂ ಬೇಗನೆ ಎದ್ದು ವಾಕಿಂಗ್ ಹೋಗುತ್ತಿದ್ದ ಇವರು ಅಂದು ಗಂಟೆ ಎಂಟಾದರೂ ಮಲಗೇ ಇದ್ದದ್ದನ್ನು ಕಂಡು ನಾನು ಬೇಡ್ರೂಮಿನತ್ತ ಧಾವಿಸುತ್ತಾ . “ಏನ್ರಿ ಇನ್ನೂ ಮಲಗೇ ಇದೀರಾ ,ವಾಕಿಂಗ್ ಹೋಗಲ್ವಾ “ ಎನ್ನುತ್ತಾ ಒಳಗೆ ಬಂದವಳಿಗೆ ನನ್ನ ಪತಿ ರಾಯರು ಕರಾಗ್ರೆ ವಸತೇ ಲಕ್ಷ್ಮಿ ಎಂದು ಕರ ಜೋಡಿಸುವ ಬದಲು ತಮ್ಮ ಎರಡೂ ಕರಗಳನ್ನು ತಮ್ಮ ಬೆನ್ನ ಹಿಂದೆ ಹಿಡಿದು ನೋವಿನ ಮುಖ ಹೊತ್ತು ಕುಳಿತಿರುವುದು ಕಂಡಿತು .” ಅಯ್ಯೋ ಏನಾಯ್ತು ? ಯಾಕೆ ಹೀಗ್ ಕೂತಿದ್ದೀರಾ” ನನ್ನ ಕಳಕಳಿಯ ಪ್ರಶ್ನೆಗೆ ಇವರು “ ಛೆ ! ಮತ್ತೆ ಬೆನ್ನು ಹಿಡ್ಕೊಂಡು ಬಿಟ್ಟಿದೆ ಕಣೆ , ನಾವು ಈ ಹೊಸ ಗಾದಿ ಬದಲಾಯಿಸಿದಾಗಿನಿಂದ ನನ್ನ ಬೆನ್ನ ನೋವು ಇನ್ನು ಜಾಸ್ತಿ ಆಗಿದೆ , ಯಾಕೋ ಈ ಗಾದಿ ಸರಿಯಿಲ್ಲ ಅನ್ನಿಸ್ತಾ ಇದೆ “ ಎಂದು ತಮ್ಮ ಬೆನ್ನ ನೋವಿನ ವರಾತವನ್ನು ಪುನಹ ಶುರು ಹಚ್ಚಿಕೊಂಡರು .
ಮೊದ ಮೊದಲು ನಸುಕಿನಲ್ಲೆಯೇ ಎದ್ದು ಮಾಡುತ್ತಿದ್ದ ತಮ್ಮ ವಾಕಿಂಗನ್ನು ಕ್ರಮೇಣ ಕಡಿತ ಗೊಳಿಸಿ ಅದನ್ನು ವಾರದ ರಜೆಗಷ್ಟೇ ಸೀಮಿತ ಗೊಳಿಸಿದ್ದರು . ತಿಂಡಿ ಮಾಡಲು ಬೇಸರವಾದಗಾಲ್ಲೆಲ್ಲಾ ನಾನು ಒಮ್ಮೊಮ್ಮೆ ರಜೆಯ ದಿನ ವಾಕಿಂಗ್ ಮಾಡಲು ಇವರ ಜೊತೆ ಕಾಲ್ಜೋಡಿಸುತ್ತಿದ್ದೆ .! ಅಂದು ಪಾರ್ಕಿನ ಸುತ್ತಾ ಹಾಕುತ್ತಿದ್ದ ಇವರ ಮೂರು ರೌಂಡಿನ ವಾಕನ್ನು ಎರೆಡೆ ರೌಂಡಿಗಿಳಿಸಿ “ ರೀ , ಇನ್ನು ನಾವು ತಡ ಮಾಡಿದರೆ ನನ್ನ ಅಚ್ಚುಮೆಚ್ಚಿನ ಪೈನಪ್ಪಾಲ್ ಕೇಸರಿ ಬಾತ್ ಕ್ಲೋಸ್ ಆಗತ್ತೆ ,ಎಂತಲೋ ಇಲ್ಲಾ . ಅಯ್ಯೋ ತಡ ಆದರೆ ಜಾಗ ಸಿಗಲ್ಲ ರೀ “ಎಂದು ಅತುರಾತುರದಿಂದ ಅವರನ್ನು ನಮ್ಮ ಮಾಮೂಲಿ ಹೊಟ ಲಿನತ್ತ ಕರೆದೊಯ್ಯುವಲ್ಲಿ ಯಶಸ್ವಿ ಆಗುತ್ತಿದ್ದೆ .
ಈಗೀಗ ಇವರಿಗೆ ಕಾಡುವ ಬೆನ್ನು ನೋವಿನಿಂದಾಗಿ ಅವರ ವಾಕಿಂಗು ಹಾಗು ನನ್ನ ವೀಕೆಂಡಿನ ತಿಂಡಿ ಕಾರ್ಯಕ್ರಮ ಅಪರೂಪವಾಗ ತೊಡಗಿತ್ತು . “ ಛೆ ! ಈ ಹೊಸ ಗಾದಿಯದೆ ಸಮಸ್ಯೆ “ ಇವರು ಪುನಃ ಮುಖ ಕಿವುಚಿದಾಗ , ನಾನು ಕೈ ತಿರುಗಿಸುತ್ತಾ “ ಆಹಾ ! ಈ ಹೊಸ ಗಾದಿಯಿಂದಲೇ ನನಗೂ ಸಾಕಷ್ಟು ಬಾರಿ ಬೆನ್ನು ನೋವು ಬಂದ್ದಿದ್ದು ಎಂದು ನಿಮ್ಮ ಅಲವತ್ತು ಕೊಂಡಾಗಲ್ಲೆಲ್ಲಾ ನನ್ನ ಮಾತಿಗೆ ಒಂಚೂರಾದರೂ ಗಮನ ಕೊಟ್ರಾ ? , ಈಗ ನೋಡಿ ನೀವೇ ಅನುಭವಿಸಿದಾಗ ಗೊತ್ತಾಯ್ತು ! “ ಮುಂಜಾನೆಯ ಬಿಸಿ ಕಾಫಿಯ ಬದಲು ನನ್ನ ಬಿಸಿ ಮಾತುಗಳಿಂದ ಸುಪ್ರಭಾತ ಆರಂಭಿಸಿದೆ .
ನನ್ನ ಬೆನ್ನು ನೋವಿಗೆ ಕಾರಣ ಈ ಹಾಳು ಗಾದಿಯೆ ಇರಬೇಕೆಂದು ಇವರ ಕಿವಿ ಚುಚ್ಚಿದಾಗ , ಆರು ತಿಂಗಳ ಕೆಳಗಷ್ಟೇ ಹಳೆಯ ಗಾದಿ ಬದಲಾಯಿಸಿ ತಂದ ಈ ಹೊಸ ದುಬಾರಿ ಗಾದಿ ಯ ಬಗ್ಗೆ ಇವರು ಎಳ್ಳಷ್ಟು ದೂರನ್ನ ಕಿವಿ ಮೇಲೆ ಹಾಕಿ ಕೊಳ್ಳಲು ತಯಾರಿರಲಿಲ್ಲ, ಅದರ ಬದಲು ನಾನು ಮಲಗುವ ಜಾಗದಲ್ಲೆ ನನ್ನ ಭಾರಕ್ಕೆ ಈ ಸುಕೋಮಲ ಗಾದಿ ಕುಸಿದು ಒಳಗಿಳಿದು ಹಾಗಾಗುತ್ತಿರಬಹುದು ಎಂದು ನನ್ನನ್ನೆ ರೇಗಿಸಿದ್ದನ್ನು ಸಕಾಲಿಕವಾಗಿ ನಾನು ನೆನಪು ಮಾಡಿಕೊಂಡು ನನ್ನ ಈ ಗಾದಿಯ ಬಗ್ಗೆ ನನಗಿದ್ದ ಕೋಪವನ್ನು ಕಾರಿಕೊಂಡೆ .
images
ಅಲ್ಲೇ ದಿಂಬಿಗೆ ಒರಗಿ ಕೊಳ್ಳುತ್ತಾ ಅವರು “ ಅಲ್ವೇ ವಾಣಿ ನೀನು ಬೆನ್ನ ನೋವು ಅಂತ ಹೇಳಿ ಹೊದ್ದಕೊಂಡು ಮಲಗಿ ಅಡುಗೆಗೆ ಕೊಕ್ ಕೊಟ್ಟಾಗ ನಾನೇ ಅಲ್ವಾ ಚಪಾತಿ , ಪಲ್ಯ ಅಷ್ಟೇ ಯಾಕೆ ಪುಲಾವು , ಮೊಸರನ್ನಾ …. ಎಲ್ಲ ಹೋಟಲಿನಿಂದಾನೆ ತರಿಸಿ ಬಿಡ್ತಿದ್ನಲ್ಲ ಮಾರಾಯತಿ “ ಎಂದು ತಮ್ಮ ಘನ ಸೇವೆಯನ್ನು ಲಜ್ಜೆಯಿಲ್ಲದೆ ತೆರೆದಿಟ್ಟರು ! . ಮದುವೆಯಾಗಿ ಇಷ್ಟು ವರ್ಷದಲ್ಲಿ ಇವರಿಗೆ ಕೊಂಚ ಅಡುಗೆ ಕಲಿಸುವ ನನ್ನ ಶತ ಪ್ರಯತ್ನಕ್ಕೆ ಇವರು ತೋರುತಿದ್ದ ನಿರುತ್ಸಾಹ ಕಂಡು ನನಗೆ ಒಲೆಯ ಮೇಲೆ ಉಕ್ಕುವ ಹಾಲಿನಂತೆ ನಗು – ಸಿಟ್ಟು ಸಮಾನವಾಗಿ ಉಕ್ಕಿ ಹರಿದು ಬಂದು “ ಅಯ್ಯೋ ನಿಮಗೆ ನನ್ನ ಮೇಲೆ ಎಷ್ಟು ಪ್ರೀತಿ ಕಣ್ರೀ ! ಎಷ್ಟೆಲ್ಲಾ ಕತ್ತೆ ಚಾಕರಿ ಮಾಡಿದ್ರೀ , ” ಎನ್ನುತ್ತಾ ಆ ಹೋಟಲಿನ ರಟ್ಟಿನಂತಾ ಚಪಾತಿಗಳನ್ನು ತಿಂದರೂ ಇನ್ನೂ ಗಟ್ಟಿ ಮುಟ್ಟಾಗಿರುವ ನನ್ನ ಹೊಟ್ಟೆಯನ್ನು ಒಮ್ಮೆ ಮುಟ್ಟಿ ನೋಡಿಕೊಂಡೆ “ ಏನೇ ಆಗಲಿ ಇದನ್ನು olx ನಲ್ಲಿ ಮಾರಿ ಬಿಡೋಣ ರೀ “ ನನ್ನ ಸಲಹ ಕಂ ನಿರ್ಧಾರಕ್ಕೆ ಇವರು ತಕ್ಷಣ ಗಾಬರಿಯಾಗಿ ಹುಬ್ಬೇರಿಸಿದರೂ ಆಗಾಗ ಬೆನ್ನು ಹಿಡಿದು ಬೆಂಡಾ ಗುವಂತೆ ಮಾಡುವ ಈ ಗಾದಿಯನ್ನು ಕೊನೆಯ ಬಾರಿ ಮರುಕ ದಿಂದ ನೋಡಿ ಅಸ್ತು ಎಂದರು .
ಅಂತೂ ನಮ್ಮ ಹೊಸ ಗಾದಿ ಬೆನ್ನು ನೋವು ತರಿಸಿದ ದೋಷ ಹೊತ್ತು ಕೊಂಡು ಮಲಗಿದಲ್ಲಿಯೇ ಮಮ್ಮುಲ ಮಲಗಿತು ಐ ಮೀನ್ ಮರುಗಿತು .! ಇವರೂ ಸುಮ್ನಿರಲಾರದೆ ಪಲಂಗಗಳೆಲ್ಲಾ ಪಾಪ “ಪುಲ್ಲಿಂಗ “ ವೆ ಇರಬೇಕೆಂದು , ಅರ್ಥಾತ್ ಸಂಸಾರದ ಭಾರ ಹೊತ್ತ ಮನೆ ಯಜಮಾನನಿಗೆ ಹೋಲಿಸುತ್ತಾ , ನಮ್ಮ ರಜಾ ದಿನದ ಮಜವಾದ some –ವಾದಕ್ಕೆ ನನ್ನನ್ನು ಪುಲ್ ಮಾಡಲು ನೋಡಿದರು ! ಆದರೆ ನನ್ನ ಖಾಲಿ ಹೊಟ್ಟೆ ತಾಳ ಹಾಕುತ್ತಿದ್ದರಿಂದ ತಿಂಡಿಯ ಕಾರ್ಯಕ್ರಮದತ್ತ ಗಮನ ಹರಿಸಿಲು ಒಳ ನಡೆದೆ . .
ನಮ್ಮ ಮನೆಯಲ್ಲಿ ಕೆಲವು ಆಟಕುಂಟು .ಯಾವ ಲೆಕ್ಕಕ್ಕೂ ಇಲ್ಲದ ಸುಖಾ ಸುಮ್ಮನೆ ಜಾಗ ಆಕ್ರಮಿಸಿಕೊಂಡು ಮುದಿಯೆದ್ದು ಹೋದ ಅನೇಕ ವಸ್ತುಗಳಿದ್ದವು .ಒಂದು ಕಾಲದಲ್ಲಿ ನನ್ನ ಸತತ ಪರಿಶ್ರಮದಿಂದ ( ನಿಂತಲ್ಲೇ ಮೈಲುಗಟ್ಟಲೆ ನಡೆದು ) ಎರೆಡು ಕೆಜಿ ತೂಕ ಇಳಿಸಿದ ನನ್ನ ಮೆಚ್ಚಿನ ಟ್ರೇಡ್ ಮಿಲ್ಲು ಪ್ರಸ್ತುತ ನನ್ನ ಕಾಲು ನೋವಿನ ಪರಿಣಾಮವಾಗಿ ಮೂಲೆ ಹಿಡಿದು ಮುಂಜಾನೆಯ ಹೊತ್ತು ನನ್ನ ಪತಿರಾಯರ ಟವಲ್ ಸ್ತ್ಯಾಂಡಾಗಿ , ಸಂಜೆಗೆ ಶಾಪಿಂಗ್ ನಿಂದ ಹೊತ್ತು ತಂದ ಚೀಲಗಳನ್ನಿಡುವ ಸ್ಥಳವಾಗಿ ಮಾರ್ಪಾಡುಗೊಂಡಿತ್ತು !
ಇನ್ನು ಗೋಡೆಯ ಮೇಲು ನೇತು ಹಾಕಿದ ನನ್ನ ಹಿರಿ ಮಗನ ಒಂದು ತಂತಿ ಕಿತ್ತು ಹೋದ ಗಿಟಾರು ರಿಪೇರಿಗಾಗಿ ಶಬರಿಯಂತೆ ಕಾಯಿತ್ತಿತ್ತು , ಸುಖವಾಗಿ ಯಾವ ಕಸರತ್ತೂ ಇಲ್ಲದೆ ಬೆಳಸಿದ ತಮ್ಮ ಹೊಟ್ಟೆಯನ್ನು ಸಪಾಟು ಮಾಡಿಕೊಳ್ಳುವ ಕನಸಿನಲ್ಲಿ ನನ್ನ ಪತಿರಾಯರು ಅತೀ ಉತ್ಸಾಹದಿಂದ ಕೊಂಡು ತಂದಿದ್ದ ಹೊಟ್ಟೆ ಕರಗಿಸುವ ಯಂತ್ರವನ್ನು , ಸತತವಾಗಿ ಒಂದು ತಿಂಗಳು ಮಾಡಿ ಸಿಕ್ಕಾಪಟ್ಟೆ ಮಂಡಿ ನೋವು ಶುರುವಿಟ್ಟುಕೊಂಡಾಗ ಅದು ಮೂಲೆಯಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡಿತ್ತು .ಆದರೆ ನಮ್ಮೆಲ್ಲರ ಏರುತ್ತಿರುವ ಹೊಟ್ಟೆ/ಸುತ್ತಳತೆಯನ್ನು ಗಮನದಲ್ಲಿಟ್ಟು ಕೊಂಡು ಅದನ್ನು ವಿಲೇವಾರಿ ಮಾಡದೆ ಹಾಗೆ ಇಟ್ಟಿದ್ದೆವು .
ಹಾಗೆಯೆ ಮಕ್ಕಳ ರೂಮಿನ ಒಂದು ಮೂಲೆಯಲ್ಲಿ ,ಅಣ್ಣ ಓಡಿಸಿದ ನಂತರ ತಮ್ಮನ ಪಾಲಿಗೆ ಬಂದ ಗಟ್ಟಿ ಮುಟ್ಟದ ಚೆಂದದ ಸೈಕಲ್ಲು ಈಗ ಸ್ಟಾಂಡ್ ಹಾಕಿಕೊಂಡು ಒಂಟಿಯಾಗಿ ಗೋಡೆಗೊರಗಿ ತಪಸ್ಸು ಮಾಡುತ್ತಾ . ನಾಕು ವಾರ್ಷದ ತಂಗಿ ಮಗ ಚಿಂಟುವಿಗೆ ಆರಾಗಲಿ ಎಂದು ಕಾಯುತ್ತಿತ್ತು .
ಅಗೋ ಆ ರೂಮಿನ ಇನ್ನೊಂದು ಮೂಲೆಯಲ್ಲಿ ಅಮ್ಮ ಕೊಟ್ಟ ಹೋಲಿಗೆ ಯಂತ್ರ ತುಟಿ ಹೊಲೆದುಕೊಂಡು ಮೌನವಾಗಿ ನಿಂತಿದೆ . ವಯಸ್ಸಾಗಿ ಅದರ ಕಣ್ಣಿಗೂ ಪೊರೆ ಬಂದಿರಬಹುದೆ ! ಎನ್ನುವ ಅನುಮಾನ ನನಗೆ !ಏನೋ ಅಮ್ಮನ ನೆನಪಿನ ಕಾಣಿಕೆ , ಕೊಡಲು ಮನಸಾಗದೆ ಆಯುದ ಪೂಜೆಯ ದಿನದಂದು ಅದರ (ಕಿವಿ) ಮೇಲೆ ತಪ್ಪದೆ ಹೂವಿಡುತ್ತಿದ್ದೆ .
ಆದರೆ ಈ ಎಲ್ಲಾ ಹಳೆ ಸಾಮಾನುಗಳು ಜಾಗ ಆಕ್ರಮಿಸಿಕೊಂಡದ್ದು ಬಿಟ್ಟರೆ ಅವುಗಳಿಂದ ನಮಗಾವ ತೊಂದರೆಯೂ ಆಗಿದ್ದಿಲ್ಲ . ಆದರೆ ಈ ಹೊಸ ಗಾದಿಯ ಕಥೆ ಹಾಗಲ್ಲ , ಯಾರೋ ಅವರ ಗೆಳಯರ ಮಾತಿನಂತೆ ಮೆತ್ತನೆಯ ಗಾದಿಯ ಮೇಲೆ ಮಲಗಿದರೆ ಬೆನ್ನಗೂ ಆರಾಮು , ಸುಖ ನಿದ್ರೆಯೂ ಬರವುದು “ ಎಂಬ ಬಿಟ್ಟಿ ಉಪದೇಶದ ಫಲವಾಗಿ ಈ ದುಬಾರಿ ಮೊತ್ತದ, ಮೆತ್ತನೆಯ ಹೊಸ ಗಾದಿ ನಮ್ಮ ಗೃಹ ಪ್ರವೇಶ ಮಾಡಿತ್ತು .ಮೊದ ಮೊದಲು ಇದರ ಮೇಲೆ ಮಲಗಿದಾಗ ಹಾಯೆನಿಸುವ ಹಂಸ ತೂಲಿಕಾದಂತಾ ಅನುಭವವನ್ನು ಕೊಟ್ಟಿದ್ದು ನಿಜ . ಆದರೆ ಕ್ರಮೇಣ ಅದರ ಬಣ್ಣ ಬಯಲಾಗಿದ್ದು ಅದರಿಂದಲೇ ನಮ್ಮ ಬೆನ್ನು ಬೆಂಡಾಗುತ್ತಿರುವುದು ಖಾತ್ರಿ ಆಯಿತು!
ಇದನ್ನು ಮಾರಲು ನನ್ನ ಪತಿರಾಯರು ಅಸ್ತು ಎಂದಾಗ , ದಿನಪತ್ರಿಕೆಯಲ್ಲಿ ಅದರ ವಿವರಗಳ ಜೊತೆ ಜಾಹಿರಾತು ಕೊಟ್ಟಿದ್ದು ಆಯಿತು . ದಿನಕೊಬ್ಬರು ನಮ್ಮ ಗಾದಿಯನ್ನು ನಾವು ನಮೂದಿಸಿದ ಬೆಲೆಗಿಂತಾ ಅರ್ದಾ ರೇಟಿಗೆ ಚೌಕಾಸಿ ಮಾಡುವುದಲ್ಲದೆ , ಅದನ್ನು ಹೊಸ ಮದುವಣಗಿತ್ತಿಯಂತೆ ನೋಡಲು ಬರುವ ಸಂಖ್ಯೆಯೇ ಹೆಚ್ಚಾಯಿತು.
ನೋಡಲು ಬರಬೇಕೆಂದು ಕೊಂಡವರು ಹೊತ್ತಲ್ಲದ ಹೊತ್ತಿನಲ್ಲಿ ಫೋನಾಯಿಸಿ ತಲೆ ತಿನ್ನತೊಡಗಿದರು .”ಯಾಕ್ ಮಾರತಾ ಇದ್ದ್ದೀರಾ ಮೇಡಂ ? ಕೆಲವರು ಅನುಮಾನದಿಂದ ಸವಾಲಿಸಿದರೆ , ಈ ಹಾಸಿಗೆ ಜೊತೆ ಮಂಚಾನೂ ಕೊಡ್ತೀರಾ ? ಕೆಲವರ ತರಲೆ ಪ್ರಶ್ನೆ . ಇನ್ನು ಕೆಲವರು ಗಾದಿ ನೋಡಲು ಬಂದವರು ಅದನ್ನು ಪರೀಕ್ಷಿಸುವ ನೆಪದಲ್ಲಿ ತಮ್ಮ ಮಕ್ಕಳನ್ನು ಆದರ ಮೇಲೆ ಕುಣಿಸಿ ,ತಾವು ಆರಾಮವಾಗಿ ಕಾಲು ಚಾಚಿ ನಾನಾ ಭಂಗಿಗಳಲ್ಲಿ ಮಲಗಿ ನಮ್ಮ ಪಾಪದ ಗಾದಿಯನ್ನು ಅಗ್ನಿಪರೀಕ್ಷೆಗೆ ಒಳ ಪಡಿಸುತ್ತಿದ್ದರು .
ಇದಲ್ಲದೆ ಆಗಷ್ಟೇ ಹೊಸ ಸಂಸಾರ ಹೂಡಿದ ದಂಪತಿಗಳು “ಮೇಡಂ ಈ ಹಾಸಿಗೆ ಜೊತೆ ಮತ್ತೇನು ಗೃಹಪಯೋಗಿ ಸಾಮನುಗಳಿವೆ ಹೇಳಿ ಎಲ್ಲಾ ಒಟ್ಟಿಗೆ ಒಂದು ರೇಟ್ ಹಾಕಿ ಬಿಡೋಣ ಎಂದು ದೊಂಬಾಲು ಬಿದ್ದರು “ !
ನೋಡಲು ಬಂದವರಿಗೆ ಅನುಕೂಲವಾಗಲಿ ಎಂದು ನಮ್ಮ ಯಮ ಭಾರದ ಗಾದಿಯನ್ನು ನಮ್ಮ ಪಡಸಾಲೆಗೆ ತಂದು ಹಾಕಿ ಅವರ ಹೋದ ಬಳಿಕ ನಾವೇ ಅದರ ಮೇಲೆ ಪವಡಿಸಿ ಕೊಳ್ಳುತ್ತಿದ್ದೆವು . ಹಾಗಾಗಿ ಇದನ್ನು ದಿನವೂ ಇಳಿಸಿ ಮಲಗಿಸಿ ಮತ್ತೆ ಮುಂಜಾನೆಯೆಂದರೆ ಗೋಡೆಗೆ ಒರಗಿಸುವ ಸಾಹಸಕ್ಕೆ ನಮ್ಮ ಬೆನ್ನು ಇನ್ನಷ್ಟು ಬಾಡಿ ಬೆಂಡಾಗಿ ನನ್ನ ಯೆಜಮಾನರಿಗೆ ಮೊದಲೇ ಕಾಡುತ್ತಿದ್ದ ಬೆನ್ನು ನೋವಿನ ಜೊತೆ ಈಗ ಕತ್ತೂ ಕೂಡಾ ಉಳುಕಿ ಕುತ್ತಿಗೆಗೆ ಬೆಲ್ಟ್ ಹಾಕೋ ಪರಿಸ್ಥಿತಿ ಉಂಟಾಯಿತು !
ಇಷ್ಟೆಲ್ಲಾ ಆದರೂ ನಮ್ಮ ಜೊತೆಗಿನ ಋಣಾನುಸಂಬಂಧವನ್ನು ಕಳಚಿಕೊಳ್ಳದೆ (ಮಾರಾಟವಾಗದೆ) ಉಳಿದ ನಮ್ಮ ಗಾದಿಯನ್ನು ಕಂಡು ನಮಗೂ “ ಅಯ್ಯೋ ಪಾಪದ್ದು “ ಅನಿಸಿ ಅದನ್ನು ಊರಿಂದ ಬರುವ ನೆಂಟರಿಗೇ ಮೀಸಲಿಟ್ಟು , ಈಗ ನಾವು ಹೊಸ ಗಾದಿಯ ಅನ್ವೇಷಣೆಯಲ್ಲಿ ತೊಡಗಿದ್ದೇವೆ .
ಅವಧಿ ಪತ್ರಿಕೆಯಲ್ಲಿ ಬಂದ  ಲಘು  ಲೇಖನ 
  • facebook

No comments :

Post a Comment