Sunday, May 10, 2015

ಕಡಲ ಹಾಡು

ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ  ಮಲಗಿದೆ  ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು .

ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ
ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು  , ತಣೆಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದಾ  ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಎಳೆಯಾಗಿ ಕಟ್ಟಿಟ್ಟ ನೂಲು .

ಹರವಿಕೊಂಡ  ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ  ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ   ಲೋಕವೇ  ಮರುಳು
ಹಪಾಹಪಿ ಬಾಳ  ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು - ಬೀಳು ?

ಬೆಳಗುತ್ತಿರುವ ಸಂಜೆ ಸೂರ್ಯನ  ಕದಲಾರತಿ
ಹಾಲ್ಗೆನ್ನೆ  ಚಂದಿರನ  ಮತ್ತೆ ಕಾಣುವಾ ಸರತಿ
ಅವ್ಯಕ್ತ  ಭಾವಸ್ಪುರಣದಾರೋಹ  ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ  ಪ್ರಶಾಂತ ಕಡಲು .




3 comments :

  1. ಕಡಲ ಗೀತೆಯು ಅಪರೂಪದ ಕೃತಿಯಾಗುವ ಎಲ್ಲ ಲಕ್ಷಣಗಳನು ಹೊಂದಿದೆ.
    ಕದಲಾರತಿಯ ಕಲ್ಪನೆಯೇ ವಿಶಿಷ್ಟವಾಗಿದೆ.
    ತಟ್ಟನೆ ನೆನಪಾದದ್ದು ಕಾಶಿಯ ಗಂಗಾರತಿ.

    ReplyDelete
  2. ಚ೦ದದ ಭಾವ!ಕಡಲ ತುಡಿತಕೆ ಹೊಯ್ದಾಟ ಚೆನ್ನಾಗಿ ಮೂಡಿದೆ ಆರತಿ.ಅಭಿನ೦ದನೆಗಳು.

    ReplyDelete
  3. thank u badari sir shrinidhi ji ,,nanna kavanakke nimma sundara prathispandane galigaagi ;)

    ReplyDelete