“ ಗುಡ್ ಮಾರ್ನಿಂಗ್ ಮೇಡಂ “ ಅನ್ನುತ್ತಾ ಹಲ್ಕಿರಿದು ಸರಸರ ಅಡುಗೆಮನೆಗೆ ಎಂಟ್ರಿ ಕೊಟ್ಟು ಪಾತ್ರೆ ತಿಕ್ಕಲು ಶುರುವಿಟ್ಟು ಕೊಂಡವನು ನಮ್ಮ ಮನೆಯ ಕೆಲಸದವ ರಾಜು . ಅವನ ಮಾಮೂಲಿ ಟೈಮು ಹನ್ನೊಂದು ಗಂಟೆಗೆ ಬರದೆ, ಒಮ್ಮೊಮ್ಮೆ ಎರಡು ತಾಸು ಹೀಗೆ ತಡಮಾಡಿ ಮಧ್ಯಾನದ ಒಂದು ಗಂಟೆಗೆ ಬಂದರೂ ಅವನ ಈ ಶುಭೋದಯ ಮಾತ್ರಾ ತಪ್ಪುವುದಿಲ್ಲ . ! ಆದರೂ ರಾಜು ಮುಂಜಾವಿನಂತೆಯೇ ಫ್ರೆಶ್ , ಮುಖದಲ್ಲಿ ಲವಲವಿಕೆಯೇ ಲುಕ್ಕು ! ಸುಮಾರು ೨೫ -೨೬ ರಿನ ಸಣ್ಣ ವಯಸ್ಸು . ಎಣ್ಣೆಗೆಂಪು ಮುಖ , ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು , ಮುಖಕ್ಕೆ ಒಂದು ರೌಂಡ್ ಹೆಚ್ಚು ಎನ್ನಿಸುವಷ್ಟು ಪೌಡರ್ ಬಳಿದು ,ಯಾವುದೊ ನವಿರಾದ ಸೆಂಟು ಪೂಸಿಕೊಂಡು ಬರುವ ಶೋಕಿಲಾಲ !
ಅವನಿಗಾಗಿ ದಾರಿ ಕಾಯ್ದು ತಲೆ ಕೆಟ್ಟ ನಾನು “ ಯಾಕೋ ರಾಜು ಇಷ್ಟು ಲೇಟು , ನೋಡು ಆಗ್ಲೇ ಟೈಮು ಎಷ್ಟಾಗಿದೆ? ಪಾತ್ರೆ , ಕಸ ಇಟ್ಕೊಂಡು ಎಷ್ಟೊತ್ತು ಕಾಯಬೇಕು ನಾನು ! “ ಸಿಟ್ಟಿನಿಂದ ಅವಾಜ್ ಹಾಕಿದೆ ,
“ ಅಯ್ಯೋ ಮೇಡಂ ನೋಡಿ ನಾನಾದರೂ ಒಂದೆರಡು ಗಂಟೆ ಹೀಗೆ ತಡ ಮಾಡಾದ್ರು ಕೆಲಸಕ್ಕೆ ಹಾಜರಾಗ್ತ್ಹೀನಿ , ಆದರೆ ಹಾಳಾದ ನಮ್ಮ ಕೆಲಸದವನು, ಇವತ್ತೂ ಚಕ್ಕರ್ !. ಹೊರಗಡೆ ಡ್ಯುಟಿಗೆ ಹೋಗೋ ನಮಗೆ ಹೀಗೆ ಆಗಾಗ ಕೆಲ್ಸಕ್ಕೆ ಚಕ್ಕರ್ ಹಾಕಿ ಸತಾಯಸ್ತಾನೆ !, ಅಯ್ಯೋ ನೀವು ಮನೇಲೆ ಇರೋರು ನಿಮಗೇನ್ ಗೊತ್ತು ನಮ್ಮ ಕಷ್ಟ ಬಿಡಿ ! ಅದಕ್ಕೆ ಮೇಡಂ ನಮ್ಮ ಮನೆದೂ ಕಸ ಗುಡಿಸಿ , ಮಾಪ್ ಮಾಡಿ ಬರೋ ತನಕ ಇಷ್ಟು ಲೇಟ್ ಆಯಿತು , “ ಎಂದು ತನ್ನ ಕತ್ತೆ ಚಾಕಿರಿ ವೃತಾಂತವನ್ನು ಮನ ಕರಗುವಂತೆ ತೋಡಿಕೊಂಡ .
ಮನ ಕರಗುವದಿರಲಿ , ಆಶ್ಚರ್ಯ ,ನಗು ಒಟ್ಟಿಗೆ ನನ್ನ ಮುಖದಲ್ಲಿ ಜಮಾಯಿಸಿತು ! ಅಲ್ವೋ ರಾಜು ! ನೀನು, ನಿನ್ನ ರೂಂ ಪಾರ್ಟ್ನರ್ಸ್ ಎಲ್ಲರೂ ಇದೆ ಮನೆ ಕೆಲಸದ ಚಾಕರಿಯಲ್ಲಿ ತೊಡಗಿರೋರು . ನಿಮ್ಮನೆ ಕೆಲಸ ಮಾಡೋಕೆ ನಿಮಗ್ಯಾಕೆ ಇನ್ನೊಂದು ಆಳು ಬೇಕು , ? ನಾಲ್ಕು ಜನ ಇದ್ದೀರಾ .ಎಲ್ಲರೂ ಒಂದೊಂದು ಕೆಲಸ ಮಾಡ್ಬಾರ್ದಾ ? ನಗುತ್ತಲೇ ಕೇಳಿದಾಗ .
ಅವನು ತಡ ಮಾಡದೆ , ತಡವರಿಸದೆ ಥಟ್ ಎಂದು ಉತ್ತರಿಸಿದ “ ಹಾಗಲ್ಲ ಮೇಡಂ ಬೇರೆಯವರ ಮನೆಯಲ್ಲಿ ಡಸ್ಟಿಂಗ್ , ವ್ಯಾಕ್ಯೂಮ್ , ಮಾಪ್ಪಿಂಗ್ ಎಲ್ಲಾ ಮಾಡಿದ್ರೆ ಸಂಬಳ ಸಿಗತ್ತೆ ! ಆದರೆ ನಮ್ಮ ಮನೆಯಲ್ಲಿ ನಾವು ಮಾಡ್ಕೊಂಡ್ರೆ ಯಾರು ನಮಗೆ ದುಡ್ಡು ಕೊಡ್ತಾರೆ ? ಎಂದು ಎಂದು ತನ್ನ ಇಂಗ್ಲಿಷ್ ಪದಗಳ ಹುಚ್ಚು ವ್ಯಾಮೋಹಕ್ಕೆ ಜೋತಾಡಿಕೊಂಡು ಬಹಳ ಲಾಜಿಕಲ್ ಆಗಿ ಸವಾಲ್ ಹಾಕಿದ ! ಈ ಪ್ರಶ್ನೆಗೆ ಉತ್ತರಿಸಲಾಗದೆ ನಾನು ನಿಜಕ್ಕೂ ಮೂಕಳಾದೆ ! ಅದನ್ನು ಕಂಡು ಕಂಡು ಹುರುಪಿನಿಂದ ಮುಂದುವರೆಸಿದ “ ಅಷ್ಕಕ್ಕೂ ನಮಗೆ ಇವೆಲ್ಲ ಮಾಡಕ್ಕೆ ಟೈಮೇ ಇಲ್ಲ ಮೇಡಂ, ನಾವು ಎಲ್ಲರೂ ಬಳಿಗ್ಗೆಯೇ ಒಬ್ಬೊಬ್ಬರೂ ಮನೆ ಕೆಲ್ಸಕ್ಕೆ ಹೊರಡಬೇಕು , ಅದಕ್ಕೆ ನಾವು ನಾಲ್ವರೂ ಸೇರಿ ಒಬ್ಬ ಬೆಂಗಾಲಿ ಹುಡುಗನ್ನ ವಾರಕ್ಕೆ ಮೂರು ದಿನ ಮನೆ ಕೆಲ್ಸಕ್ಕೆ ಇಟ್ಕೊಂಡಿರೋದು ,! “ ಎಂದು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಂಡ , ಆಗ ನನಗಂತೂ ಅಯ್ಯೋ ರಾಮ ! ಏನ್ ಕಾಲಾ ಬಂತಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತಾಯಿತು !
ಈ ರಾಜು ಆಂಧ್ರದ ( ತೆಲಂಗಾಣ ) ಒಂದು ಸಣ್ಣ ಗ್ರಾಮದವನು .ಹತ್ತನೆ ತರಗತಿಯ ವರೆಗೂ ಶಿಕ್ಷಣ ಪೂರೈಸಿರುವುದಾಗಿ ಹೇಳಿದ್ದ , .ಬಡತನ , ಅಪ್ಪನ ಅನಾರೋಗ್ಯದಿಂದಾಗಿ ಅವನ ಮುಂದಿನ ಓದಿಗೆ ಕತ್ರಿ ಬಿದ್ದು ಕಡ್ಡಾಯವಾಗಿ ದಿನಗೂಲಿಗೆ ಸೇರಿಕೊಂಡು ಮುಂದೆ ಸಾಲ ಸೋಲ ಮಾಡಿ ದೂರದ ಬೆಟ್ಟ ಅಲ್ಲ ದೂರದ ಮರುಭೂಮಿ ನುಣ್ಣಗೆ ಅಂತ ದುಬೈ ನಗರಿಗೆ ಬಂದು ಒಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಹೆಲ್ಪರ್ ಆಗಿ ಸೇರಿಕೊಂಡವನು .ಏನೋ, ಇವನ ದುರಾದೃಷ್ಟಕ್ಕೆ ಅಲ್ಲಿ ಮೂರು ತಿಂಗಳಾದರೂ ಸಂಬಳ ಸರಿಯಾಗಿ ಸಿಗದ್ದಿದ್ದಾಗ ಆ ಕೆಲಸ ಬಿಟ್ಟು ತನ್ನ ಜೊತೆಯಲ್ಲಿದ್ದ ಕೆಲವು ಸ್ನೇಹಿತರು, ಮಾಡಿದ ಹಾಗೆ ತಾನೂ ಕೈಯಲ್ಲಿ ಕಸಬರಿಗೆ-ಮಾಪ್ ಹಿಡಿದು ಮನೆ ಕೆಲಸಕ್ಕೆ ಪಾದಾರ್ಪಣೆ ಮಾಡಿದ್ದ .! .ಈ ಕೆಲಸದಲ್ಲಿ ಒಳ್ಳೆಯ ಸಂಪಾದನೆ ಕೂಡ ಇತ್ತು . ಅವನ ಭಾಷೆ ತೆಲಗು ,ನನ್ನದು ಕನ್ನಡ, ಹೀಗಾಗಿ ನಮ್ಮ ಸಂಭಾಷಣೆ ನಮ್ಮ ರಾಷ್ಟ ಭಾಷೆ ಭಾಷೆ ಹಿಂದಿಯಲ್ಲೇ ಸಾಗುತಿತ್ತು !. ಯಾವಾಗಲೂ ಏನಾದರೂ ತಮಾಷೆಯಾಗಿ ಮಾತಾಡಿಕೊಂಡಿರುತ್ತಿದ್ದ . ಕೆಲಸದಲ್ಲೂ ಅಚ್ಚುಕಟ್ಟು .. ಒಟ್ಟಿನಲ್ಲಿ ಆವನ ಈ ಜೋಶ್ ಭರಿತ ವ್ಯಕ್ತಿತ್ವದಿಂದ ತನ್ನ ಕೆಲಸದ ಮನೆಗಳಲ್ಲಿ ಒಳ್ಳೆ ಹೆಸರು ಗಳಿಸಿದ್ದ .
ಸಣ್ಣ ವಯಸ್ಸಿನಲ್ಲೇ ಮದುವೆ ಮಾಡಿದ್ದರಿಂದ ಅವನಿಗಾಗಲೇ ಸಣ್ಣ ವಯ್ಯಸ್ಸಿನ ಮಕ್ಕಳಿದ್ದರು .ತನ್ನ ಪರ್ಸಿನಲ್ಲಿದ್ದ ಅವರ ಫೋಟೋ ತೋರಿಸಿ ಅವರನ್ನು ಆಗಾಗ ನೆನಪಿಸಿಕೊಳ್ಳುತ್ತಿದ್ದ . ತನ್ನ ತಾಯಿಯ ಜವಾಬ್ದಾರಿಯಲ್ಲಿ ಅವರನ್ನಿರಿಸಿ ಇಲ್ಲಿ ಪ್ರಾಮಾಣಿಕ ವಾಗಿ ದುಡಿದು ಮನಗೆ ಇಂತಿಷ್ಟು ಹಣವನ್ನು ತಪ್ಪದೆ ಪ್ರತಿ ತಿಂಗಳೂ ಕಳಿಸುತ್ತಿದ್ದ .ಯಾವ ದುಶ್ಚಟಕ್ಕೂ ಇವನು ದಾಸನಾಗಿರದ್ದಿದ್ದರೂ ಅವನ ಹಣ ಪೋಲಾಗುತ್ತಿದ್ದದ್ದು ಆವನಿಗಿದ್ದ ಕೆಲವು ಆಧುನಿಕ ಶೋಕಿಗಳಿಗೆ .! ತಿಂಗಳಿಗೆರಡು ಬಾರಿ ತೆಲಗು ,ಹಿಂದಿ ಯಾವುದೇ ಡಬ್ಬ ಸಿನಿಮಾಗಳಾಗಿದ್ರು ಸರಿ ,ನೋಡಿಕೊಂಡು ಮನೆ ಕೆಲಸಕ್ಕೆ ರೀಚಾರ್ಜ್ ಆಗಿ ಬರುತ್ತಿದ್ದ.! ಆದರ್ಶ ಗಂಡನಂತೆ ದಿನಕೊಮ್ಮೆ ಊರಿಗೆ ಫೋನಾಯಿಸಿ ಕೆಲವೊಮ್ಮೆ, ತನ್ನ ಹೆಂಡತಿ ಅಲ್ಲಿಂದಲೇ ವಟ ವಟ ಅನ್ನುವುದನ್ನು ಪಾಪ ಇವನ ಕರ್ರೆನ್ಸಿ ಖಾಲಿ ಆಗುವವರೆಗೂ ಆಲಿಸುವ ಚಟ !.ಕಷ್ಟ ಪಟ್ಟು ಮಗನನ್ನು ಆಂಗ್ಲ ಮಾಧ್ಯಮದ ಶಾಲೆಗೆ ಸೇರಿಸಿದ್ದ .ಅವನ ಇಂಗ್ಲಿಷ್ ವ್ಯಾಮೋಹ ಎಷ್ಟೆಂದರೆ ನನ್ನ ಮಗರಾಯನನ್ನು ಕಂಡೊಡನೆಯೇ ತನ್ನ ಹರಕು ಮುರುಕು ಇಂಗ್ಲಿಷ್ನಲ್ಲಿ ಅವನನ್ನು ಮಾತನಾಡಿಸುವ ಖಯಾಲಿಗೆ, ನಾವುಗಳು ನಕ್ಕು ನಕ್ಕು ಸುಸ್ತು !ಇನ್ನು ತನ್ನ ಮಕ್ಕಳ ಹುಟ್ಟು ಹಬ್ಬ, ಮದುವೆ ವಾರ್ಷಿಕೋತ್ಸವ ,ವ್ಯಾಲೆಂಟೈನ್ ದಿನ (ಈ ವಿಷಯದಲ್ಲಂತೂ ರಸಿಕರ ರಾಜನಾಗಿ ಮರೆದು ) ಗಳಲ್ಲಿ ಮರೆಯದೆ ಸಂಭ್ರಮದಿಂದ ತನ್ನ ರೂಮಿನಲ್ಲಿ ಗೆಳೆಯರೊಂದಿಗೆ ಕೇಕ್ ಕತ್ತರಿಸಿ ಕೆಲಸದ ಮನೆಯವರಿಗೆಲ್ಲಾ ತಪ್ಪದೆ ಹಂಚಿದಾಗ ಅವನ ಈ ಹುರುಪಿಗೆ ನಾನು ಭೇಷ್ ಎನ್ನದೆ ವಿಧಿ ಇರಲಿಲ್ಲ .! ಇಷ್ಟೇ ಅಲ್ಲದೆ ತಾನು ಕೆಲಸ ಮಾಡುವ ಮನೆಯ, ಪ್ರತಿಯೊಬ್ಬ ಸದಸ್ಯರ ಹುಟ್ಟು ಹಬ್ಬವನ್ನೂ ತಿಳಿದುಕೊಂಡು ಮರೆಯದೆ ಶುಭಾಶಯಗಳನ್ನು ತಿಳಿಸುತ್ತಿದ್ದ .! ಅವನ ಇನ್ನಷ್ಟು ಹಣ ಖರ್ಚಾಗುತ್ತಿದ್ದದ್ದು ಸೆಂಟು , ಬಟ್ಟೆ ಹೀಗೆ ಅವನಿಗಿದ್ದ ಆಧುನಿಕ ಶೋಕಿಗಳಿಗೆ ! .
ಅಂದು ಕೆಲಸಕ್ಕೆ ಬಂದವನೇ ಪಾತ್ರೆ ತೊಳೆಯುವುದು ಬಿಟ್ಟು ಅವನು ಹೊಸದಾಗಿ ಕೊಂಡಿದ್ದ ಸ್ಮಾರ್ಟ್ ಮೊಬೈಲ್ ವೀಕ್ಷಣೆಗೆ ತೊಡಗಿದ . ಏನೋ ಪಟ ಪಟ ಟೈಪ್ ಮಾಡುವುದನ್ನ ಗಮನಿಸಿ , ನಾನು . “ ಲೋ ರಾಜು ಬೇಗ ಪಾತ್ರೆ ತೊಳೆದು ಮುಗಿಸು , ಇನ್ನು ಮಿಕ್ಕ ಕೆಲಸ ರಾಶಿ ಇದೆ , ಆಮೇಲೆ ಏನ್ ಬೇಕಾದ್ರೂ ನೋಡ್ಕೋ , “ ಎಂದವನ ಬೆನ್ನ ಹತ್ತಿದ್ದಾಗ ಅವನ ಮೊಬೈಲಿನ ಫೇಸ್ ಬುಕ್ ನಲ್ಲಿ ತನ್ನ ಮಕ್ಕಳ ಫೋಟೋ ತೋರಿಸಿ “ ನೋಡಿ ಮೇಡಂ ನನ್ನ ಮಕ್ಕಳು ಕೇಕ್ ಕಟ್ ಮಾಡ್ತಾ ಇರೋ ಫೋಟೋ ನಮ್ಮಣ್ಣ ಕಳಿಸಿದ್ದಾನೆ, ಅವನ ಜೊತೇನೆ ಚಾಟ ಮಾಡ್ತಾ ಇದ್ದೆ “ ಎಂದು ಹಿಗ್ಗಿನಿಂದ ತೋರಿಸಿ , ಮೇಡಂ ನೀವೂ ಫೇಸ್ ಬುಕ್ ನಲ್ಲಿ ಇದ್ದೀರಾ ? ಅನುಮಾನ ದಿಂದ ಕೇಳಿದಾಗ ನನಗೂ ರೇಗಿತು “ ಹೌದು ಕಣೋ ಇದ್ದೀನಿ !ನಾನು ಅಕೌಂಟ್ ಮಾಡಿ ಬಹಳ ವರ್ಷ ಆಯಿತು “ ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಅಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಾನು ಅವಿನಿಗಿಂತಲೂ ಮುಂದಿರುವುದನ್ನು ಅವನಿಗೆ ಮನದಟ್ಟು ಮಾಡಿದೆ ! ಹಾಗಾದ್ರೆ ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಲಾ ಮೇಡಂ ?“ ಎಂದು ತರ್ಲೆ ಪ್ರಶ್ನೆಯೊಂದನ್ನು ನನ್ನೆಡೆಗೆ ಎಸೆದಾಗ ನಾನು ಕೊಂಚ ಕಸಿವಿಸಿಗೊಂಡು “ ಏ ಹೋಗೋ ನಿನ್ನ ಮಾತ್ರ ನಾನು ಖಂಡಿತಾ ಆಡ್ ಮಾಡಿಕೊಳ್ಳಲ್ಲ “ .(ಸದ್ಯ ಇವನು ನನ್ನ ವಾಲ್ ಮೇಲೂ “ ಮೇಡಂ ನಾನು ನಾಳೆ ಕೆಲ್ಸಕ್ಕೆ ಬರಲ್ಲಾ , ನನಗೆ ಮುಂದಿನ ತಿಂಗಳು ಸಂಬಳ ಜಾಸ್ತಿ ಮಾಡಿ ಎಂದೆಲ್ಲ ಬರೆದು ತಮಾಷೆ ಮಾಡಿದ್ರೆ ನನ್ನ ಫೇಸ್ ಬುಕ್ ಸ್ನೇಹಿತರ ಮುಂದೆ ನನ್ನ ಪ್ರತಿಷ್ಠೆ ಏನಾಗಬೇಡ ! “ ) , “ ಹೇಗೆ ಅವನ ಮನವಿಯನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿದ್ದು ಕಂಡು “ ಅಯ್ಯೋ ಹೋಗ್ಲಿ ಬಿಡಿ , ಸುಮ್ನೆ ನಿಮ್ಮ ಪ್ರೊಫೈಲು ಹೇಗಿದೆ ಅಂತ ನೋಡ್ತೀನಿ “ ಕೆಳಗೆ ಬಿದ್ದರೂ ಮೀಸೆ ಮಣ್ಣಾಗದಂತೆ , ಅಲ್ಲ ಕೆಳಗೆ ಬಿದ್ದರೂ ಒಡೆಯದunbreakable ಪಾತ್ರೆಯೆಂತೆ , ಹಲ್ಕಿರಿಯುತ್ತಾ ಹಾಸ್ಯದ ಕಿಡಿ ಹಾರಿಸಿದ !
ಇಷ್ಟು ವರ್ಷಗಳಿಂದ ಫೇಸ್ಬುಕ್ ಬಳಸುತ್ತಿದ್ದ ನಾನು ಅವನಿಗೊಂದಿಷ್ಟು ಬಿಟ್ಟಿ ಉಪದೇಶ cum ಖಾರದ ನುಡಿಗಳನ್ನು ಕೇಳಿಸಲು ಮುಂದಾದೆ “ ರಾಜು ! ನಿನಗೆ ಅದೆಲ್ಲ ಸುಲಭವಾಗಿ ಸಿಗಲ್ಲ , ಅಷ್ಟಕ್ಕೂ ನನ್ನ ಪ್ರೊಫೈಲ್ ಕಟ್ಟಗೊಂಡು ನಿನಗೇನಾಗ್ಬೇಕಾಗಿದೆ ,? ಈ ಫೇಸ್ ಬುಕ್ನಿಂದ ಸುಮ್ನೆ ಸಮಯ ಹಾಳು , ನಿನಗೇನು ಮಾಡಕ್ಕೆ ಬೇರೆ ಕೆಲಸ ಇಲ್ವಾ ? ಮೊದ್ಲು ಬೇಗ ಮನೆ ಕೆಲಸ ಮುಗ್ಸೋದು ನೋಡು “ ) ನನ್ನ ಕಠಿಣ ಮುಖ ಭಾವವನ್ನು ಇನ್ನಷ್ಟು ವಕ್ರವಾಗಿಸಿ ರೇಗಿದಾಗ, ಮೇಡಂ ಇನ್ನು ಹೆಚ್ಚು ರಾಂಗ್ ಆಗುವ ಮುಂಚೆಯೇ ಎಚ್ಚತ್ತುಕೊಂಡು “ ಓಕೆ ಓಕೆ , ಆಯಿತು ಮೇಡಂ , ನಿಮ್ಮ ಪ್ರೊಫೈಲ್ ನೋಡಲ್ಲ ಬಿಡಿ , ಸುಮ್ನೆ ಕೇಳಿದೆ ಅಷ್ಟೇ “ ಎಂದು ನಕ್ಕು “ಚಾಟಿಂಗು ಮನೆಗೊದ್ಮೇಲೆ ಮಾಡ್ತೀನಿ , ಹೆಂಗೂ ಇವತ್ತು ಎರಡು ಮನೆ ಕೆಲಸ ಇಲ್ಲ “ ಎನ್ನುತ್ತಾ ಲಗು ಬಗೆ ಯಿಂದ ಕೆಲಸಕ್ಕೆ ಕೈ ಹಚ್ಚಿದ ,
“ ನೋಡು ಮೊದಲೇ ನೀನಿವತ್ತು ಲೇಟು , ಅದರ ಮೇಲೆ ಇದೆಲ್ಲ ಕಾರು ಬಾರು ಬೇರೆ “ ಎಂದು ನನ್ನ ಕೊನೆಯ ಒಗ್ಗರಣೆ ಸಿಡಿಸಿ ಫೇಸ್ಬುಕ್ ನಲ್ಲಿ ನನ್ನ ಸ್ಟೇಟಸ್ಸಿಗೆ ಬಂದ ಕಾಮೆಂಟುಗಳ ವೀಕ್ಷಣೆಗೆ ಸರ ಸರ ಹೊರ ನಡೆದೆ ! .
ಸ್ವಲ್ಪ ಸಮಯದ ನಂತರ ನನ್ನ ರೂಮಿನಿಂದಲೆ ಅವನ ದ್ವನಿ ನನ್ನ ಕಿವಿಗೆ ಬಡಿಯಿತು “ ಮೇಡಂ ಇವತ್ತು ಭಗವಾನ್ ಕಾ ಕಚರಾ ನೂ ಕೊಟ್ಟು ಬಿಡಿ ನಾನುcorniche (ಸಮುದ್ರದ ದಂಡೆ ) ಕಡೆಗೆ ಹೋಗ್ತಾ ಇದ್ದೀನಿ “ ಅಂದಾಗ ನಾನು ತಲೆ ಚಚ್ಚಿಕೊಳ್ಳುವುದೊಂದೆ ಬಾಕಿ “ ಅಯ್ಯೋ ರಾಜು ! ಅದು ಭಗವಾನ್ ಕಾ ಕಚರಾ ಅಲ್ಲ ಮಾರಾಯ , ( ಆಗಾಗ ಅವನಿಗೆ ಕಸದ ಡಬ್ಬಿಯ ಕಸ ಎತ್ತಿಕೊಳ್ಳುವಾಗ ಕಿಚನ್ ಕಾ ಕಚರಾ , ಬಾತ್ ರೂಮ್ ಕಾ ಕಚರಾ ಅಂದು ರೂಢಿ ಆಗಿದ್ದರಿಂದ ! ) ಅದು ದೇವರ ಮೇಲಿನ ಬಾಡಿರುವ ಹೂವು ಅಷ್ಟೇ!. ಅದಕ್ಕೆ ನಾವು ನಿರ್ಮಾಲ್ಯ ಅಂತೀವಿ , ಅಲ್ಲ ಕಣೋ ನಮ್ಮೆಲ್ಲರ ಕ್ಲೇಶ ಕಲ್ಮಷಗಳನ್ನು ಕಳೆಯುವ ಆ ಭಗವಂತನಿಗೆ ಯಾವ ಕಚರಾ ಇರತ್ತೆ ? ನಿಂದೊಳ್ಳೆ ಕಥೆ ಆಯಿತು “ ಅವನು ಪಾಪ ನಿನ್ನ ಡೈಲಾಗು ಕೇಳಿಸ್ಕೊಂಡು ಎಷ್ಟು ನಗ್ತಾನೆ ಏನೋ “ ನನ್ನ ಜೋಕಿಗೆ ,ರಾಜು ಹಲ್ಕಿರಿಯುತ್ತಾ “ ಸಾರಿ ಮೇಡಂ “ ಅನ್ನುತ್ತಾ , ಭಾಗವನ್ ಕಾ …ಅಲ್ಲ ನಿರ್ಮಾಲ್ಯ, ಹಾಕಿದ ಕವರನ್ನು ಹಿಡಿದು “ ಬೈ ಮೇಡಂ “ ಎಂದು ಹೊರ ನಡೆದ . ಹೀಗೆ ಅವನ ತರಲೆ ಮಾತುಗಳಿಗೆ ಆಗಾಗ ನನ್ನ ತಲೆ ಕೆಟ್ಟರೂ ಮುಗುಳ್ನಗೆ ತರಸುತ್ತಿದ್ದವು .
ಮಾರನೆಯ ದಿನ ನಮಗೆ ವಾರದ ರಜೆ , ಹಾಗಾಗಿ ನಾನು ಅಂದು ನನ್ನ ತಿಂಡಿ ಅಡುಗೆ ಎಲ್ಲದಕ್ಕೂ ರಜಾ ಘೋಷಿಸಿದ್ದೆ . ಮಕ್ಕಳೂ ಸ್ಕೂಲಿಗಾಗಿ ದಿನವೂ ಐದಕ್ಕೆ ಏಳುವ ಶಿಕ್ಷೆಗೆ ಅಂದು ಮಾತ್ರ ಹತ್ತು ಗಂಟೆಗೆ ಕಡಿಮೆ ಅಪ್ಪಿ ತಪ್ಪಿಯೂ ಏಳುತ್ತಿರಲಿಲ್ಲ . ಹಾಗಾಗಿ ನಮ್ಮ ದೇವರಿಗೂ ಅಂದು ನಾವೇ ತಡವಾಗಿ ಎಬ್ಬಿಸಿ ಪೂಜೆ ಮುಗಿಸಿ , ನಮ್ಮ ಹೊಟ್ಟೆ ಪೂಜೆ , ಶಾಪಿಂಗು , ಎಲ್ಲದರ ಕಾರ್ಯಕ್ರಮ ಹಾಕಿಕೊಂಡು ಹೊರ ನಡೆದೆವು .ಮಾರನೆಯ ದಿನ ಹೊಸ ವರ್ಷ, ಹಾಗಾಗಿ ನಮ್ಮ ರಜೆಯ ಮೂಡು ಮುಂದುವರೆದಿತ್ತು . ರಾಜು ಕೂಡಾ ಹೊಸ ವರ್ಷದ ಆಚರಣೆಗಾಗಿ ತನ್ನ ಗೆಳೆಯರೊಡನೆ ಬೀಚಿನಲ್ಲಿ ಕಳೆಯುವುದಾಗಿ ಹೇಳಿ ಮಾರನೆ ದಿನದ ಕೆಲ್ಸಕ್ಕೆ ರಜೆಯನ್ನು ತಾನೇ ಸ್ವಯಂ ಘೋಷಿಸಿಕೊಂಡಿದ್ದ ! ನಮ್ಮ ಶಾಪಿಂಗ್ ನಿಂದ ಮನೆಗೆ ಬಂದವಳೇ ನಾನು ನನ್ನ whats appಸಂದೇಶಗಳನ್ನು ವೀಕ್ಷಿಸುತ್ತಿದ್ದಾಗ “ ಎರಡು ನವೀನ ಮಾದರಿ ನೆಲ ಒರೆಸುವ ಕೋಲುಗಳ ಫೋಟೋ ನನ್ನ ಸ್ಕ್ರೀನ್ ಮೇಲೆ ತೇಲಿ ಬಂದವು “ ನಮ್ಮ ರಾಜುವಿನದೇ ಸಂದೇಶ ! ನಾನು ತಂದ ನೆಲ ಒರೆಸೋ ಕೋಲುಗಳು ಸರಿಯಿಲ್ಲ ಎಂದು ಈ ಹಿಂದೆ ತಕರಾರು ತೆಗೆದ್ದಿದ್ದಾಗ , ನಿನಗೆ ಸರಿ ಹೊಂದುವ ಕೋಲು ನೀನೇ ತಂದು ಬಿಡು ಮಾರಾಯಾ “ ಎಂದಿದ್ದು ಅಗ ನೆನಪಾಯಿತು .ಹಾಗಾಗಿ ನನ್ನ ಕಣ್ಣಿಗೆ ಹಾಕಲು ಸೂಪರ್ ಮಾರುಕಟ್ಟೆ ಯಿದಂದಲೇ ಅವುಗಳ ಫೋಟೋ ರವಾನಿಸಿ ಕೆಳಗೆ “ i take this “ ಎಂದು ಹೈ ಟೆಕ್ ಮಾದರಿಯಲ್ಲಿ ತನ್ನ ನಿರ್ಧಾರವನ್ನು ತಿಳಿಸಿದ್ದ ! “ ಓಕೆ “ ಎಂದು ಮರು ಸಂದೇಶ ರವಾನಿಸಿದೆ . ಆಗ ಹಿಂದೊಮ್ಮೆ ಅವನು ತನ್ನ ಸ್ನೇಹಿತನ್ನನ್ನು ವಿಮಾನ ನಿಲ್ದಾಣಕ್ಕೆ ಬೀಳ್ಕೊಡುವ ಸಂದರ್ಭದಲ್ಲಿ ಅವನು ನನಗೆ ಕಳಸಿದ ಮೊಬೈಲ್ ಸಂದೇಶ ನೆನಪಾಯಿತು “ medam frend india going, i airport going, no work comming “ ಹೀಗೆ ಕೆಲಸಕ್ಕೆ ಚಕ್ಕರ ಹಾಕುವುದಕ್ಕೆ ಮುನ್ನ ಮುನ್ನೆಚೆರಿಕೆಯ ಕ್ರಮಗಳನ್ನು ಕ್ರಮಬದ್ಧವಾಗಿ ತೆಗೆದು ಕೊಳ್ಳುವುದು ಇವನು ಎಂದೂ ಮರೆಯುತ್ತಿರಲಿಲ್ಲ . .
ಏನೇ ಅನ್ನಿ, ಅವನ ತಮಾಷೆ , ತರ್ಲೆ ಮಾತುಗಳು ಈಗ ನನಗೆ ಚೆನ್ನಾಗಿ ರೂಡಿ ಆಗಿವೆ , ಕೆಲವೊಮ್ಮೆ ಸಿಟ್ಟು ಬಂದು ಖಾರವಾಗಿ ರೇಗಿದರೂ ಅವನದನು ಸಕಾರಾತ್ಮವಾಗಿ ಸ್ವೀಕರಿಸಿ ನಗುತ್ತಲೇ “ ಮೇಡಂ ಯಾಕಿಷ್ಟು ರಾಂಗ್ ಆಗಿದ್ದೀರಾ ? ನಿಮ್ಮ ಗ್ರೀನ್ ಟೀ ಮಾಡ್ಕೊಂಡು ಇನ್ನು ಕುಡಿದಿಲ್ಲ ಅನ್ಸತ್ತೆ , ಮೊದಲು ಕುಡೀರಿ “ ಎಂದು ನನ್ನ ಸಿಟ್ಟಿಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವನ ಕಾರ್ಯ ವೈಖರಿಗೆ ವೈ ವರಿ ಮಾಡಿ ಕೊಳ್ಳಬೇಕು ಎಂದು ನಕ್ಕು ಸುಮ್ಮನಾಗಿ ಬಿಡುತ್ತೇನೆ ! .
ಅವಧಿ ಹಾಗು ಅಪರಂಜಿ ಯುಗಾದಿ ವಿಶೇಷಾಂಕದಲ್ಲಿ ದಲ್ಲಿ ಬಂದ ಲೇಖನ :)
ರಸಿಕರ ರಾಜ, ಬಹು ಮುಖ ಪ್ರತಿಭೆ, ಇಂಗ್ಲೀಷ್ ಪಂಡಿತ ಶ್ರೀ ಶ್ರೀ ಶ್ರೀ ಶೋಕಿಲಾಲೋತ್ತಮ ರಾಜೇಂದ್ರ ಭೂಪನಿಗಿದೋ ಬಹುಪರಾಕ್ ಬಹುಪರಾಕ್... :-D
ReplyDeleteಛೇ ನಾನು ರಾಜು ನ ನೋಡಲಿಲ್ಲ..ಅಲ್ಲಿ ಬಂದಾಗ...ನೋಡಿದ್ದಿದ್ರೆ ತೆಲುಗಲ್ಲಿ ಸ್ವಲ್ಪ ಮಾತನಾಡಿಸಿ ನೀಕು ಬದರಿಗಾರು ತೆಲುಸಾ ಅಂತ ಕೇಳಿ ಅವನಿಗೂ ತಿಕ್ಕಲು ಹಿಡಿಸಿಬಿಡ್ತಿದ್ದೆ... ನಿಮ್ಮ ನವಿರು ಹಾಸ್ಯದಲ್ಲಿ ವಿಚಾರ ಮಂಡಿಸುವ ಗಾಂಭೀರ್ಯ ಬಹಳ ಇಷ್ಟ ಆಯ್ತು ಆರತಿ... ಮೇಡಮ್ಮೋರು ರಾಂಗ್ ಆದಾಗ ಗ್ರೀನ್ ಟೀ ಗುತುಕಿಸುವುದು ಸಕ್ಕತ್ ಟ್ರಿಕ್ಕು ಹಂಗಾರೆ...
ReplyDeletedhanyavadagalu azad bhai haagu badari sir . nanna blaogige bheti needi pratikriye nediddakkaagi .
ReplyDelete