Monday, September 8, 2014

ಮಿನಿ ಮನೆ ( ವನ)ವಾಸ


ಮದುವೆ ಮಾಡಿನೋಡು ಮನೆ ಕಟ್ಟಿ ನೋಡು ಎಂದೆಲ್ಲಾ  ಭಯ ಹುಟ್ಟಿಸುವ ಗಾದೆಗಳನ್ನು ಈಗ  ಸೈಟು ಕೊಂಡು ನೋಡು , ಮನೆ ಬಾಡಿಗೆ ಕೊಟ್ಟು ನೋಡು ಎಂದು ಸದ್ಯದ  ಪರಿಸ್ಥಿತಿಯಲ್ಲಿ ವಿಸ್ತರಿಸುವ ಅಗತ್ಯವಿದೆ ಎನ್ನುವುದು ನನ್ನ ಅಭಿಪ್ರಾಯ .ಅದಕ್ಕೆ ಕಾರಣಗಳೂ ಬಹಳಷ್ಟಿವೆ .ಖರೀದಿಸುವ  ಮುನ್ನ ಮೈಯೆಲ್ಲಾ ಕಣ್ಣಾಗಿ ಆ ಕಣ್ಣುಗಳಿಗೂ  ದುರ್ಬೀನು ಹಾಕಿ ಎಲ್ಲ ಧಾಖಲೆಗಳನ್ನು ಪರೀಕ್ಷಿಸಿ ನೋಡಿದರೂ ಕೆಲವೊಮ್ಮೆ ಮೋಸ ಹೋಗಿ ಮಂಗನತಾಗಿರುವವರ ಪಾಡು ನೋಡಿರುತ್ತೇವೆ .
ತೀಕ್ಷಣಮತಿ ಹಾಗು ಜಿಪುಣಾಗ್ರೆಸ  ಹೀಗೆ 2 ಇನ್ 1 ಸ್ವಭಾವದವರಾದ ನನ್ನ ಪತಿರಾಯರು  ಇದ್ಯಾವ   ಗೊಡವೆಯೇ ಬೇಡ ಎಂದು ಸುಮಾರು  20 * 30  ಅಳತೆಗಿಂತಲೂ ಕೊಂಚ   ಸಣ್ಣದಾದ  ಮನೆಯನ್ನು  ನಮ್ಮ ಮದುವೆಯ ಮೊದಲೆ  ಖರೀದಿಸಿ ಇಟ್ಟಿದ್ದರು  . ಈ ಹಿಂದೆ  ಅವರ ಗೆಳೆಯರೊಬ್ಬರ ಸ್ವತ್ತಿಗೆ ಸೇರಿದ ಈ  ಮನೆ ಅವರಿಗೆ   ವರ್ಗವಾದಾಗ ಅದರ ಮೇಲ್ವಿಚಾರಣೆಯ ಭಾರವನ್ನು  ಇವರ ತಲೆಯ ಮೇಲೆ ಹಾಕಿದ್ದರಂತೆ . ನಂತರ  ಆ ಭಾರವನ್ನು ಇವರು ಸಮರ್ಪಕವಾಗಿ ಹೊತ್ತು ಆ ಮನೆಯನ್ನು ತಾವೇ ಅಗ್ಗ ದ ಬೆಲೆಗೆ (ಇವರ ಸೇವೆಯ ಋಣ ದಲ್ಲಿ ಅವರನ್ನು  ಕಟ್ಟಿಹಾಕಿ  )   ಖರೀದಿಸಿ ಕ್ರಮೇಣ ಆ ಭಾರವನ್ನು ಇಳಿಸಿಕೊಂಡಿದ್ದರು .!

ಸರಿ ನಮ್ಮ ಮದುವೆಯಾದ ನಂತರ ನಮ್ಮ ವಾಸ್ತವ್ಯ ಅಲ್ಲೇ  ಶುರುವಾಯಿತು .ನಮ್ಮ ಏರಿಯಾದಲ್ಲಿ  ಎಲ್ಲವೂ ಇದೆ ಅಳತೆಯ ಚಿಕ್ಕ ಮನೆಗಳೆ  . ಮುದುವೆಯಾದ  ನವಜೋಡಿಗಳಂತೆ ಒಂದ್ದಕ್ಕೊಂದು ಅಂಟಿಕೊಂಡು ಕುಳಿತ್ತಿದ್ದವು ! .ಅರ್ಥಾತ್ ನಮ್ಮ ಮನೆಯ ಹಾಲಿನ ಗೋಡೆಯೇ ಪಕ್ಕದ ಮನೆ ಹಾಲಿಗೂ  ಗೋಡೆಯಾಗಿ ಪ್ರತಿನಿಧಿಸಿ ನೆರೆಮನೆಯವರನ್ನು ಸಿಕ್ಕಾಪಟ್ಟೆ ಹತ್ತಿರವಾಗಿಸಿತ್ತು   .ಎರೆಡು  ದೇಹ ಒಂದೇ ಆತ್ಮವೆಂಬಂತೆ  ಈ ಕಾಮನ್  ಗೋಡೆ ಮಹತ್ವದ  ಪಾತ್ರ ವಹಿಸಿತ್ತು . ಮನೆಯ ಮತ್ತ್ತೊಂದು  ಮಗ್ಗಲಿಗೆ ಒಬ್ಬ  ನರಪೇತಲ ವ್ಯಕ್ತಿ ಅಡ್ಡವಾಗಿ  ತೂರುವಷ್ಟು  ಜಾಗ ಬಿಟ್ಟು ಕಾಪೌಂಡ್ ಕಟ್ಟಿದ್ದ ಧಾರಾಳ ಮನಸ್ಸಿನ ಕೆಲವು ಮನೆ ಮಾಲಿಕರೂ ಇದ್ದರು . ಅಕ್ಕ ಪಕ್ಕ ಹಿಂದೆ ಎಲ್ಲಾ  ಇದೆ ರೀತಿ ಅಂಟಿಸಿದ ಮನೆಗಳೇ .  ಇನ್ನು ನಮ್ಮ ಮನೆಯ  ಮುಂದಿರುವ ರಸ್ತೆಗಳೋ ..ಕೇಳಲೇಬೇಡಿ !,   ಸಣ್ಣದಾಗಿ  ಬಳಕುವ ಜೀರೋ ಸೈಜಿನಂತೆ ಕಿರಿದಾದ  ರಸ್ತೆಗಳು ! . ನಮ್ಮ ಅಕ್ಕಪಕ್ಕದ ಮಹಿಳಾಮಣಿಗಳು ಈ ತಮ್ಮ ಮನೆಯ ಮುಂದಿನ ರೋಡನ್ನೇ   ತಮ್ಮ ಪಾಲಿನ (ವಿಶಾಲ ) ಅಂಗಳವನ್ನಾಗಿಸಿಕೊಂಡು   ಸ್ವಚ್ಚವಾಗಿ   ಗುಡಿಸಿ ತೊಳೆದು  ಅಲ್ಲೇ ರಂಗೋಲಿ ಬಿಡುತ್ತಾ  ,ರೋಡ ಗುಡಿಸುವವರ ಕೆಲಸವನ್ನೂ ಬೆಳಗಿನ ಹೊತ್ತು ತಾವೇ ಪಾರ್ಟ್ ಟೈಮ್ ಮಾಡಿಕೊಂಡಿದ್ದರು !.

ನಾನು ಮೊದಲೇ ಹೇಳಿದಂತೆ ನಮ್ಮ   ಅಕ್ಕ ಪಕ್ಕದ ಮನೆಯ ಗೋಡೆಗಳು ಅಂಟಿಕೊಂಡು ಕುಳಿತ್ತಿದ್ದ ಕಾರಣ ನೆರೆ ಹೊರೆಯವರನ್ನು ಎಷ್ಟು ಹತ್ತಿರವಾಗಿಸಿತ್ತು  ಅಂದ್ರೆ , ಪಕ್ಕದ ಮನೆಯವರು ಜೋರಾಗಿ ಮೊಳೆ ಹೊಡೆದರೆ   ನಮ್ಮ ಗೋಡೆಯ ಮಣ್ಣು   ಉದುರುವಷ್ಟು  ,, ನೆರೆ ಹೊರೆಯ ಮನೆಯ ಕುಕ್ಕರ್ ಸೀಟಿ ಕೂಗಿದಾಗ ನಮ್ಮ ಮನೆಯದೇ  ಎಂದು ನಾನು ಅಡುಗೆ ಮನೆಗೆ ಧಾವಿಸುವಷ್ಟು ! ,  ಹಿಂದಿನ ಮನೆಯ ಸರೋಜಮ್ಮನ ಮನೆಯ    ಕರ್ಕಶ ಅಲಾರಂ ಸದ್ದಿಗೇ  ನನಗೆ  ದಿನವೂ  ಬೆಳ್ಳಿಗ್ಗೆ ಐದಕ್ಕೆ  ಎಚ್ಚರವಾಗುವಷ್ಟು  !, , ಇನ್ನು ಎದಿರು ಮನೆ  ಗೇಟ್  ತೆರೆದ , ಭಯಂಕರ ಸಪ್ಪಳವಾದಾಗಲೆಲ್ಲಾ   ( ಮಧ್ಯಾನವಾಗಿದ್ದಲ್ಲಿ ) ಛೆ ! ಇಷ್ತೋತ್ನಲ್ಲಿ ನಮ್ಮ ಮನೆಗ ಯಾರ ಬಂದ್ರಪ್ಪಾ ಎಂದು ಬೈದುಕೊಳ್ಳುತ್ತಾ  ಮಧ್ಯಾನದ ಸವಿ ನಿದ್ದೆಯಿಂದ್ದೆದ್ದು  ಕಿಟಿಕೀಲಿ  ನೋಡುವಷ್ಟು ,  ಅಂದ್ರೆ ನೀವು ನಂಬ್ತೀರಾ ?

ಶುರುವಿನಲ್ಲಿ  ನಾನು ಈ ಸಣ್ಣ ಮನೆಯಲ್ಲಿ ಹೇಗೋ ಅಡ್ಜೆಸ್ಟ್  ಮಾಡಿಕೊಂಡು ಇದ್ದ್ದರೂ ಕ್ರಮೇಣ  ನಮ್ಮ ಸಂಸಾರ ಬೆಳೆದು ಎರಡು ಮಕ್ಕಳಾದ ಬಳಿಕ ಇವರಿಗೆ  ಈ ಮನೆಯನ್ನು ಮಾರಿ ಮೇಲೆ ಸ್ವಲ್ಪ (ಸಾಲ ಮಾಡಿ) ಹಣ ಹಾಕಿ  ಇದಕ್ಕಿಂತಲೂ ಪ್ರಶಸ್ತ ವಾದ  ಮನೆ ಖರೀದಿಸೋಣ ಅಂತ ದೊಂಬಾಲು ಬಿದ್ದಿದೆ . ಆದರೆ ಅದಕ್ಕೆಲ್ಲಾ  ಇವರದು ಸದಾ ನಕಾರತ್ಮಕ ಉತ್ತರವೆ !

ಸಾಲ ಎಂದರೆ ಎಗರಿ ಬೀಳುತ್ತಿದ್ದ  ಇವರು ತಾವೀಗ ಇಬ್ಬರು ಹೆಣ್ಣುಮಕ್ಕಳ   ಕಪಿ ( ಕನ್ಯಾ ಪಿತೃ ) ಆಗಿರುವುದರಿಂದ ಮುಂದೆ ಅವರ ಓದು , ಮದುವೆ  ಖರ್ಚುಗಳ ಬಗ್ಗೆ ಅಪಾರವಾಗಿ ಚಿಂತಿಸುತ್ತಾ  ನನ್ನ ಸಲಹೆಯನ್ನು ಬುಡದ ಸಮೇತ ಕಿತ್ತು ಹಾಕಿದ್ದರು  !  .ನನ್ನ ಕನಸಿನ ಗುಳ್ಳೆ ಒಡೆದ ಹ್ಯಾಪ್  ಮೊರೆಯನ್ನು ನೋಡುತ್ತಾ ಕೊನೆಗೆ ಸಮಾಧಾನಿಸುತ್ತಾ   ಇಲ್ಲಿ ನೋಡು ವಾಣಿ ,  ನಮ್ಮ ಇಬ್ಬರು ಹೆಣ್ಣುಮಕ್ಕಳು    ಮುಂದೆ ಮದುವೆ  ಮಾಡಿಕೊಂಡು ಗಂಡನ  ಮನಯನ್ನ ಸೇರೋರು , ಆಮೇಲೆ ನಾನು ನೀನು ಇಬ್ಬರೇ ,ಆಗ  ನಮಗೆ ಯಾಕೆ  ಅಷ್ಟು ದೊಡ್ಡ ಮನೆ ಬೇಕು ‘” ಎಂದು ತಮ್ಮ ಮುಂದಾ(ಮಂದಾ)ಲೋಚನೆ cum ನಿರ್ಧಾರವನ್ನು ಘೋಷಿಸಿದರು  . ನಾನೂ ಸಿಟ್ಟು ನುಂಗಿ ಕೊಂಡು ಪಾಲಿಗೆ ಬಂದದ್ದು punchಆಮ್ರುತಾ ಎಂದು ಬಗೆದು ಅಲ್ಲ ಜರಿದು ಸುಮ್ಮ ಳಾಗಿದ್ದೆ .!

ನಮ್ಮಲ್ಲಿ ಭಾನುವಾರ ಬಂತೆಂದರೆ ಮತ್ತೊಂದು ಕಿರಿಕಿರಿ .ನಮ್ಮ ಅಕ್ಕ ಪಕ್ಕದ ಮನೆಗೆ ಬರುವ ಅಪರೂಪದ ಅತಿಥಿಗಳು ಹಾಗು ಅವರನ್ನು ಹೊತ್ತು ತರುವ ದೊಡ್ಡ ಗಾಡಿಗಳ ಹಾವಳಿ ! ನಾನು ಮೊದಲೇ ಗೋಳಾಡಿದಂತೆ  ನಮ್ಮ  ರೋಡುಗಳು ಕರೀನಾ ಕಪೂರ ಸೊಂಟದಂತೆ  ಜೀರೋ ಸೈಜಿನವು .ಬಹಳ ಇಕ್ಕಟ್ಟು ! ಆದರೂ  ನಾವು ಆ ರೋಡುಗಳನ್ನೇ ನಮ್ಮ ನಮ್ಮ ಗಾಡಿಗಳಿಗೆ  ಪಾರ್ಕಿಂಗ್ ಜಾಗವನ್ನಾಗಿ ಮಾಡಿಕೊಂಡು ಹಾಯಾಗಿದ್ದವರು .ರಜಾ  ದಿನಗಳಲ್ಲಿ  ಇಂತಹ  ರೋಡಿಗಿಳಿಯುವ ದೈತ್ಯ ವಾಹನಗಳು ಕರ್ಕಶವಾಗಿ ಹಾರನ್ನ ಮಾಡುತ್ತಾ ವಕ್ಕರಸಿದಾಗಲಂತೂ ನಾವುಗಳು ಮನದಲ್ಲೇ ಹಿಡಿ ಶಾಪ ಹಾಕುತ್ತಾ  ಮಾಡುತ್ತಿದ್ದ ಕೆಲಸವನ್ನು  ಅಲ್ಲಿಗೇ ಬಿಟ್ಟೋಡಿ ಬಂದು  ,  ಬೀದಿಯಲ್ಲೇ ಬಿಂದಾಸಾಗಿ ಆಡುವ ಮಕ್ಕಳಾಟವನ್ನು ಸವಿಯುತ್ತಾ ತಮ್ಮ ವ್ಯವಸ್ತಿತ   ಪಾರ್ಕಿಂಗ್ ತಾಣದಲ್ಲಿ ನಿಂತಿರುವ  ನಮ್ಮ ಎರಡು ಟೈರಿನ  ಗಾಡಿಗಳನ್ನು , ಹಾಗು ಇನ್ನು ಕೆಲವು ಅಟೋ  ರಾಜರ ಆಟೋಳನ್ನು ಪಕ್ಕಕ್ಕೆ ತಂದು  ನಿಲ್ಲಿಸಿ ಹಲ್ಕಿರಿದು   ಆ ದೈತ್ಯ  ವಾಹನಕ್ಕೆ ದಾರಿ ಮಾಡಿ ಕೊಡಬೇಕಾಗುತಿತ್ತು .!

ಹೀಗಾಗಿ  ನಾವು ನಮ್ಮ ನೆಂಟರು , ಸ್ನೇಹಿತರನ್ನು ಮನೆಗೆ ಆಹ್ವಾನಿಸುವ ಮುಂಚೆ ಅವರ ದೊಡ್ಡ  ಗಾಡಿಯ ಪಾರ್ಕಿಂಗ್ ಬಗ್ಗೆ ನಮ್ಮ ಪೀಕಲಾಟ ಶುರುವಾಗುತಿತ್ತು ! .
 ನಮ್ಮ ನೆರೆಮನೆಯವರು ಕೊಂಚ ಎತ್ತರದ ದನಿಯಲ್ಲಿ  ಮಾತಾಡಿದ್ರೂ ನಮ್ಮ ತೆರೆದ ಕಿಟಿಕಿ , ಗೋಡೆಗಳು ತಮ್ಮ ಇರುವನ್ನೇ ಮರೆತು ಎಲ್ಲ ದ್ವನಿಗಳನ್ನು ನಮಗೆ ಸರಾಗವಾಗಿ ಕೆಳಿಸೋಹಾಗೆ  ಮಾಡಿಬಿಡುತ್ತದೆ ! .ಅಂತಾದ್ರಲ್ಲಿ ನನ್ನ ಕಿವಿಯೂ ಬಹಳ   ಚುರುಕು ಎಂದು ಹೇಳಿಕೊಳ್ಳಲು ನನಗಂತೂ  ಎಲ್ಲಿಲ್ಲದ ಹೆಮ್ಮೆ ..  ಹೀಗೆ ಅಂದು ಲಗುಬಗೆಯಿಂದ ಬೆಳಗಿನ  ಕೆಲಸಗಳನ್ನು  ಮುಗಿಸಿ ಟೀವೀಯಲ್ಲಿ ಬರುವ ದಿನ ಭವಿಷ್ಯವನ್ನು ಕೇಳುತ್ತಾ  ಕುಳಿತಿದ್ದೆ . ಆಗ ಪಕ್ಕದಮನೆ ಪಂಕಜಮ್ಮನವರ   ಮಗಳ ಜೊತೆಗಿನ ಸಂಭಾಷಣೆ  ನಾನು ಬೇಡವೆಂದರೂ ನನ್ನ ಕಿವಿಯಲ್ಲಿ   ತೂರಿ ಬಂತು  “  ಪ್ರೀತಿ ನೀನು   ಏನು  ಯೋಚನೆ ಮಾಡಬೇಡ,ಕಣೆ ,   ಅಳಿಯಂದ್ರು ಊರಲ್ಲಿ ಇಲ್ಲ ಅಂದ್ರೆ ಏನಾಯ್ತು , ನಾವಿಲ್ವಾ , ಈ ಭಾನುವಾರ ನಮ್ಮ ಪಿಂಕಿ ಬರ್ತಡೆ  ನಮ್ಮ ಮನೇಲೆ ಮಾಡೋಣ  ಬಿಡು  , ನಮ್ಮ ಅಕ್ಕ ಪಕ್ಕದ ಜನ, ಹಾಗೇನೆ , ಒಂದಿಷ್ಟು  ನಿನ್ನ ಕ್ಲೋಸ್ ಫ್ರೆಂಡ್ಸು ಅಷ್ಟೇ ಕಣೆ  “.ಪಂಕಜಮ್ಮ   ಮಗಳಿಗೆ ಆಶ್ವಾಸನೆ ನೀಡುತ್ತಿದ್ದರು .   ಅ ಕಡೆ ಯಿಂದ ಮೆನು ಬಗ್ಗೆ ಅವರ ಮಗಳು ಪ್ರೀತಿ ವಿಚಾರಿಸಿರುತ್ತಿರಬೇಕು  .ಆಯಿತು ಕಣೆ ನಿನ್ನ ಅಚ್ಚುಮೆಚ್ಚಿನ ಬಾದುಷಾ , ಆಲೂಗಡ್ಡೆ ಬೋಂಡ , ವೆಜ್  ಪುಲಾವ್  ಹಾ !  ಏನಂದೆ ಸರಿ ಐಸ್ಕ್ರೀಮು , ಆಗಲಿ  ಅಡುಗೆಯವರಿಗೆ ಹೇಳ್ತಿನಿ   ಮಾತಿಗೆ ಮಂಗಳ ಹಾಡಿದರು . ನನಗೂ ಬಾದುಶಾ  ಅಂದ್ರೆ ಪಂಚ ಪ್ರಾಣ . ಅಕ್ಕ ಪಕ್ಕ ಅಂದ್ರೆ ನನಗೂ ಔತಣ ಇದ್ದೆ ಇರುತ್ತೆ !  . ನನ್ನ ಆಲೋಚನೆ  ಸರಿ ದಾರಿಯಲ್ಲೇ ಧಾಪುಗಾಲು ಅಲ್ಲ (ನನ್ನ ಹಾಗೆ )ದಪ್ಪ ಗಾಲು ಹಾಕುತ್ತಾ ಓಡಿದವು !  ಸರಿ ಪಂಕಜಮ್ಮನ  ಮೊಮ್ಮಗಳು  ಪಿಂಕಿ ಬರ್ತಡೆಗೆ   ಅವತ್ತೆ ಸಂಜೆ ತರಕಾರಿಗೆ ಎಂದು   ಹೋದಾಗ ಒಂದೊಳ್ಳೆ  ಉಡುಗೊರೆ ತಂದಿಟ್ಟು ಭಾನುವಾರದ ಹುಟ್ಟು ಹಬ್ಬಕ್ಕೆ ತಯಾರಾದೆ  . ಆದರೆ  ಭಾನುವಾರದವರೆಗೂ  ಕಾದರೂ  ಔತಣದ ಸುಳಿವೇ ಇಲ್ಲ  .! ನಂತರ  ಬಲ್ಲ ಮೂಲಗಳಿಂದ ತಿಳಿದು ಬಂದದ್ದು ,  ಪ್ರೀತಿ  , ಪಿಂಕಿಯ ಹುಟ್ಟಿದ ಹಬ್ಬವನ್ನು   ಅದ್ಯಾವುದೋ ರೆಸಾರ್ಟ್ನಲ್ಲಿ ಗ್ರಾಂಡಾಗಿ ಆಚರಿಸಿದಳು ಅಂಥಾ  !, .ಅಂತೂ ನನ್ನ   ಚುರುಕು ಕಿವಿಗಳು ನನಗೆ ಸರಿಯಾಗಿ ಚುರುಕು ಮುಟ್ಟಿಸಿದ್ದವು !

ಈ ಬಾದೂಷಾ  ದಂಥಹಾ ಸಿಹಿ ತಿನಸುಗಳ  ಮೋಹದಿಂದಲೇ ನನ್ನ ತೂಕವೂ  ಇತಿಮಿತಿಗಳನ್ನು ಮೀರಲು ಪ್ರಾರಂಭಿಸಿದ್ದು ! ಅಂದು  ಶಾಪಿಂಗಿಗೆ ಹೋದಾಗ ಗೆಳತಿಯೊಬ್ಬಳು  ಸಿಕ್ಕು . ಏನ್ರಿ ವಾಣಿ ಸಣ್ಣ ಆದ ಹಾಗೆ ಕಾಣ್ತೀರಲ್ಲ   ! ಏನು ಜಿಮ್ಮು ವಾಕಿಂಗು ಜೋರಾಗಿ ನಡೀತಿರೋಹಾಗಿದೆ     ? “ಕೇಳಿದಾಗ , ನನ್ನ ಖುಷಿ ಹೇಳತೀರದು . ಸಂತಸದ ಬಲೂನಿನಂತೆ ಉಬ್ಬಿಹೋದೆ !  ಆಗ ನನ್ನ ಇಳಿದ ತೂಕದ  ?  ಗುಟ್ಟು ನನ್ನ ಮಂಡೆಗೆ  ತಕ್ಷಣ ಹೊಳೆದು ಬಿಟ್ಟಿತು  ! ಮೊದಲೇ ಹೇಳಿದಂತೆ .ನಮ್ಮ ನಿವಾಸ  ಇಕ್ಕಟ್ಟಾಗಿದ್ದಿದ್ದರಿಂದ   ಕಳೆದ ವರುಷ ನಮ್ಮ ಮನೆಯ ಮೇಲೆ   ಒಂದು ಮಹಡಿ ಏರಿಸಿಕೊಂಡಿದ್ದೆವು   . ಮೇಲೆ ಮಕ್ಕಳ ಕೋಣೆ  , ದೇವರ ಮನೆ ಮಾಡಿಕೊಂಡು , ಅದರ ಮೇಲೆ ಬಟ್ಟೆ ಒಣಗಿ ಹಾಕಿಕೊಳ್ಳುವ ಟೆರ್ರೇಸು  . ಹಾಗಾಗಿ ನಾನು ದಿನಕ್ಕೆ ಒಂದು ಐವತ್ತು ಬಾರಿಯಾದರೂ  ಮೇಲೆ ಕೆಳಗೆ ಹತ್ತಿ ಇಳಿದು   , ಕೊಂಚ ನನ್ನ ಭಾರ ಇಳಿಸಲು  ಸಹಾಯ ಮಾಡಿದ್ದ ನಮ್ಮ  ಮಿನಿ ಮನೆಗೆ ನಾನು ಆಭಾರಿಯಾಗಿದ್ದೆ ! .

ಇನ್ನು ಸಣ್ಣ ಮನೆಯ ವಾಸ ದಂಪತಿಗಳ ಅನ್ನೋನ್ಯತೆಗೂ  ಸಹಾಯ ಮಾಡುತ್ತೆ  ಅಂದ್ರೆ ನೀವು ನಂಬ್ತೀರಾ ? ಹೇಗೆ ಅಂತೀರಾ ,? ಹೇಳ್ತ್ಜೀನಿ ಕೇಳಿ .
ಮೊನ್ನೆ ಭಾನುವಾರ ಇವರಿಗೂ  ಬಿಡುವಿದ್ದ ಕಾರಣ ನಮ್ಮ ಮನೆಯಲ್ಲಿ ವೆಂಕಟೇಶ್ ಸುಪ್ರಭಾತದ ಬದಲಿಗೆ ಅಂದು  ಪ್ರಭಾತಕ್ಕೇ  ನನ್ನ ಇವರ ಮಧ್ಯೆ ವಾದ ವಿವಾದಗಳು ಮಿಂಚು ಗುಡುಗುಗಳಂತೆ   ಪ್ರಾರಂಭ ವಾಗಿದ್ದವು .ವಿಷಯ ಇಷ್ಟೆ,    ನಾನು ನಮ್ಮ ಹಳೆ ಓಬಿರಾಯನ ಕಾಲದ ಸೋಫಾ ಸೆಟ್ಟನ್ನು ಎಸೆದು ( ಇವರು ಬಿಟ್ಟರೆ !) ನವೀನ ಮಾದರಿಯ ಸೋಫಾ ಸೆಟ್ಟನ್ನು ಖರೀದಿಸುವುದು  ಎಂಬ  ನನ್ನ ವಾದವನ್ನು ಮಂಡಿಸಿದ್ದೆ .ಆದರೆ ನನ್ನ ಜಿಪುಣ ಪತಿರಾಯರು ಎಂದಿನಂತೆ  ತಮ್ಮ ನಕಾರದ ಹಾಡನ್ನು ಇನ್ನಷ್ಟು ಖಾರವಾಗಿ ಹಾಡುತ್ತಾ ಅದರ ಅವಶ್ಯಕತೆ ಎಳ್ಳಷ್ಟೂ ಇಲ್ಲವೆಂದು ತಮ್ಮ ಪ್ರತಿವಾದವನ್ನು , ಓಬಿರಾಯನ ತಮ್ಮನ  ಕಾಲದಿಂದಲೂ ಬಳಸುತ್ತಿದ್ದ ನಮ್ಮ ಡೈನಿಂಗ್ ಟೇಬಲ್ಲನ್ನು  ಗುದ್ದಿ ಮಂಡಿಸಿದರು .
ಆಗ ನನ್ನ ಸಿಟ್ಟು ತಾರಕಕ್ಕೇರಿ  ಬಾಯಿ ತನ್ನಿಂದ ತಾನೇ ಕೂಗಾಡಲು ಪ್ರಾರಂಭಿಸಿತು .ತಾಳ ತಮೆಟೆಗಳ  ಸೌಂಡ್ ಎಫೆಕ್ಟ್ ನಲ್ಲಿ ಸಾಗುತ್ತಿದ ನಮ್ಮ ಜಗಳಕ್ಕೆ  ನಾನು ಏನೋ ಶಾಕ್ ಹೊಡೆದವಳಂತೆ ಎಚ್ಚೆತ್ತು ಕೊಂಡು ಬ್ರೇಕ್ ಹಾಕಿ ನನ್ನ ದನಿಯನು ಪಿಸುನುಡಿಯ  ಗೇರಿಗೆ ಬದಲಾಯಿಸಿ   ಇವರನ್ನೂ ಎಚ್ಚರಿಸಿದೆ  ! ರೀ ಮೆಲ್ಲಗೆ ಮಾತಾಡಿ ಅಂತ ಎಷ್ಟು ಸಲ ಬಡಕೊಂಡ್ರೂ  ನಿಮ್ಮ ತಲೆಗೆ ಹೋಗಲ್ಲ ,  ಯಾಕೆ ಅಂತ  ನಿಮಗೆ ಗೊತ್ತಲ್ಲಾ  ಎಂದು ಪಿಸುನುಡಿಯಲ್ಲೇ ರೇಗಿದಾಗ  ಇವರೂ ತಮ್ಮ ದನಿಯನ್ನು  ಕೊಂಚ ಇಳಿಸಿ ಅದನ್ನು ಮೊದಲು ನೀನು ಮಾಡು ಮಹರಾಯ್ತಿ , ಪಕ್ಕದ  ಮನೆ ಪಂಕಜಮ್ಮ  , ಎದಿರು ಮನೆ ಮೀನಾಕ್ಷಮ್ಮ ಎಲ್ಲರೂ  ನಿನ್ನನ್ನೇ ವಿಚಾರಿಸಿಕೊಳೋದು ಎಂದು ವಕ್ರವಾಗಿ ನಕ್ಕರು .
ಹೌದು  ಇವರಿಬ್ಬರೂ  ನಮ್ಮ ಆಕ್ಕ ಪಕ್ಕ  ಮನೆಗಳನ್ನು ಖರೀದಿಸಿ ಬಂದಾಗಿನಿಂದ ನಾವು  ಎಂದಿನಂತೆ ಹುಮ್ಮಸ್ಸಿನಿಂದ ಜಗಳ ಕಾಯುವಂತಿಲ್ಲ  ! ಹಾಗೇನಾದ್ರೂ ಆಡಿದ ಪಕ್ಷದಲ್ಲಿ ಮಾರನೇ ದಿನವೇ ಅದನು ಪೂರ್ತಿಯಾಗಿ ಆಲಿಸಿದ  ಅವರ ಡಿಶ್ ಆಂಟೆನಾದಂತಾ  ಕಿವಿಗಳು   ಅವುಗಳನ್ನು  ಬೇರೆ ಬೇರೆ ಮನೆಗಳಿಗೆ ಪ್ರಸಾರ ಮಾಡುವ ಭಯ ಒಂದು ಕಡೆಯಾದರೆ , “ ನನ್ನನ್ನು  ಕಂಡೊಡನೆ ಏನ್ರಿ ವಾಣಿ ನೆನ್ನೆ ನಿಮ್ಮನೇಲಿ ಏನೋ ಜೋರಾಗಿ ಮಾತು ಕೇಳ್ತಾ ಇತ್ತಲ್ಲ   ಏನ್ ಸಮಾಚಾರ  ?”“ ಎಂದು ನನ್ನನು ಬಹಳ ಆತ್ಮೀಯವಾಗಿ ವಿಚಾರಿಸಿಕೊಂಡು   ಮೈ ಪರಚಿಕೊಳ್ಳುವಂತೆ ಮಾಡುತಿದ್ದರು .!  ಆಗ ನನಗೂ ಅನಿಸೋದು ,  ನಮ್ಮ ಅಕ್ಕ ಪಕ್ಕ ಮನೆಗಳು ಎಷ್ಟು ಹತ್ತ್ರಿರವೋ ಅಷ್ಟೇ ಮನಸುಗಳು ದೂರ ದೂರ ಅಂತಾ   !
ಅಂತೂ  ಈ ಆತಂಕ್ಕಕ್ಕೋ ಏನೋ  ಈಗ ನಮ್ಮಲ್ಲಿ ಜಗಳಗಳು ಕಡಿಮೆಯಾಗಿವೆ  , ಇನ್ನು ಒಂದು ಪಕ್ಷ ಆಡಬೇಕಾದ ಪ್ರಸಂಗ ಬಂದರೂ ಮೆಲು  ದನಿಯಲಿ ಆಡಲು ಪ್ರಯತ್ನಿಸಿ  , ನಮ್ಮ ಜಾಯಮಾನಕ್ಕೆ ಹಾಗೆ ಆಡಲು ಜೋಶ್   ಬಾರದೆ , ಜಗಳವನ್ನೇ ರದ್ದು ಪಡಿಸಿ ತಣ್ಣಗಾಗಿ ಕೊಂಚ ಅನೋನ್ಯತೆ ಬೆಳೆಸಿಕೊಂಡಿದ್ದೇವೆ .


ಎಲ್ಲಾ  ನಮ್ಮ ಮಿನಿ ಮನೆಯ ಪ್ರಭಾವ , ಹಾಗಾಗಿ ಈ  ಮಿನಿ ಮನೆಗೆ ಮೆನಿ ಮೆನಿ ಯಾಗಿ  ಥಾಂಕ್ಸ್ ಹೇಳಲೇಬೇಕು    ಏನಂತೀರಾ ? .
ಅವಧಿ   ಹಾಗು ಅಪರಂಜಿ  ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

2 comments :

  1. ಒತ್ತೊತ್ತಾಗಿ ಕಟ್ಟಲ್ಪಟ್ಟ ಪುಟ್ಟ ಮನೆಗಳ ಅನಿವಾರ್ಯ low volume ಪರಿಸ್ಥಿತಿಯನ್ನು ಸಮರ್ಥವಾಗಿ ಚಿತ್ರಿಸಿದ್ದೀರಿ.
    ಒಮ್ಮೊಮ್ಮೆ ವಿಶಾಲ ಅಪಾರ್ಟ್ಮೆಂಟ್ ಸಹ ಒಬ್ಬಂಟಿತನ ಕಾಡಿಸುವ ಕೂಪಗಳಾಗಬಹುದು. But, ಈ ಪುಟ್ಟ ಮನೆಗಳ ಸಮೂಹ ಪರಿಚಿತ ಸಮಾಜ ಅಲ್ಲವೇ?

    ReplyDelete
  2. ಹೌದು ಖಂಡಿತ . ಬದರಿ ಸರ್ . ಇನ್ನು ಈ ಚಿಕ್ಕ ಅಳತೆಯ, ನವ ಜೋಡಿಗಳಂತೆ ಒಂದಕ್ಕೊಂದು ಬೆಸೆದಿರುವ ಮನೆಗಳ ವಾಸದ ಅನುಭವ ನನಗಿದ್ದು ಅದರಲ್ಲಿ ಎದುರಾಗುವ ಕೆಲವು ಅಡಚಣೆಗಳನ್ನು ಹಾಸ್ಯದ ಪರಧಿಯಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದೇನೆ ಅಷ್ಟೇ . ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕಾಗಿ .:)

    ReplyDelete