Friday, May 9, 2014

ಕರಗುವ ಕಡಲು




ಕರಗುವ ಕಡಲು 
================
ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು.

ಹೆಜ್ಜೆಗಳು ನೂರಾರು ಸುತ್ತಮುತ್ತಲೂ
ಇಣುಕುವ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು ತಣಿಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಯೆಳೆಯಾಗಿ ಕಟ್ಟಿಟ್ಟ ನೂಲು .

ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ  ದಿವ್ಯ  ಮೌನ  ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ  ಬಾಳ  ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು – ಬೀಳು ?

ದಣಿದ ಭುವಿಗೊಮ್ಮೆ ಸೂರ್ಯನಾ ಕದಲಾರತಿ
ಹಾಲ್ಗೆನ್ನೆ  ಚಂದಿರನ ಮತ್ತೆ  ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಕಡಲಗಾನದಿಂಪು ನನ್ನುಸಿರ ಬೆರೆಯಲು
ಕರಗುತ್ತಿದೆ ಹೆಪ್ಪುಗಟ್ಟಿದೆದೆಯಲಿ  ಪ್ರಶಾಂತ ಕಡಲು .  

2 comments :

  1. 'ಕಡಲಗಾನದಿಂಪು ನನ್ನುಸಿರ ಬೆರೆಯಲು’ ಇದು ಪ್ರಾಯಶಃ ಕಡಲ ಮಕ್ಕಳ ಮನದ ಮಾತು.
    ಅತ್ಯುತ್ತಮ visualization ಕವನ.

    ReplyDelete
  2. dhanyavaadagalu badri sir nimma protsaahada nudigalige .

    ReplyDelete