ಕರಗುವ ಕಡಲು
================
ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
================
ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು.
ಹೆಜ್ಜೆಗಳು ನೂರಾರು ಸುತ್ತಮುತ್ತಲೂ
ಇಣುಕುವ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು ತಣಿಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಯೆಳೆಯಾಗಿ ಕಟ್ಟಿಟ್ಟ ನೂಲು .
ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ ಬಾಳ ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು – ಬೀಳು ?
ದಣಿದ ಭುವಿಗೊಮ್ಮೆ ಸೂರ್ಯನಾ ಕದಲಾರತಿ
ಹಾಲ್ಗೆನ್ನೆ ಚಂದಿರನ ಮತ್ತೆ ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಕಡಲಗಾನದಿಂಪು ನನ್ನುಸಿರ ಬೆರೆಯಲು
ಕರಗುತ್ತಿದೆ ಹೆಪ್ಪುಗಟ್ಟಿದೆದೆಯಲಿ
ಪ್ರಶಾಂತ ಕಡಲು .
'ಕಡಲಗಾನದಿಂಪು ನನ್ನುಸಿರ ಬೆರೆಯಲು’ ಇದು ಪ್ರಾಯಶಃ ಕಡಲ ಮಕ್ಕಳ ಮನದ ಮಾತು.
ReplyDeleteಅತ್ಯುತ್ತಮ visualization ಕವನ.
dhanyavaadagalu badri sir nimma protsaahada nudigalige .
ReplyDelete