Wednesday, April 25, 2012

ಪುಟ್ಟ ನೀಲಿ ನಕ್ಷತ್ರ



ಪುಟ್ಟ ನೀಲಿ ನಕ್ಷತ್ರ 
 
ನನ್ನಂಗಳದಲ್ಲಿ ಝಗಮಗಿಸುವ 
ಪುಟ್ಟ ನೀಲಿ ನಕ್ಷತ್ರ .
ಕಣ್ತಪ್ಪಿಸಿ ನೀಲಿ ನೀರಸ ಲೋಕ
ಕೈ ಜಗ್ಗಿ ಕೇಳಿತೆನಗೆ
ತೋರಿಸುವೆಯ ನೀನಿರುವ ಮಾಯಾಲೋಕ ?

ಸೂರ್ಯನ ಕೋಲ್ಮಿಂಚಿನ ಮೆರುಗಿನಲ್ಲಿ
ಕಂಡರಿಯದ ಬೆರಗಿನಲ್ಲಿ
ಕಣ್ಣಗಲಿಸಿ ಕೇಕೆ ಹಾಕಿ ನಕ್ಕಿತೊಮ್ಮೆ
ಪುಟ್ಟ ಆಗುಂತಕನ ಹೊಂಬೆಳಕಿಗೆ
ಮೊಗ್ಗೊಂದು ನಾಚಿ ಕೆಂಪಾಯಿತು
ಘಳಿಗೊಮ್ಮೆ !


ಚೆಲುವಿನ ಸೀರೆಯುಟ್ಟ ಪ್ರಕೃತಿಯ ಅನುಭೂತಿ
ಕತ್ತಲಿನ ರೇಖಾ ಚಿತ್ರವೊಂದಕ್ಕೆ
ಹಾಲ್ಬೇಳಕಿನ ಬಣ್ಣ ಬಳಿದಂತೆ
ಇಂದೇನೋ ಎಲ್ಲವೂ ತೊರುತಿದೆ ಹೊಸ ರೀತಿ ,
ಕಾಡು, ಗುಡ್ಡ , ನದಿ ಸಾಗರ , ದಣಿಯಿತು, ಸುತ್ತಿ ಸುತ್ತಿ
ಮಂಜಿನ ಪರ್ವತಕ್ಕೋ ,ಇದ್ನ್ನೆಲ್ಲೋ ನೋಡಿದ ನೆನಪಾಗಿ
ತುಂಟ ,ಕಣ್ತಪ್ಪಿಸಿ ಓಡಿತಲ್ಲ
ಹಿಡಿಯಲಾಗದ ಬೆಳಕಾಗಿ

ಒಮ್ಮೆಯೂ ಕಂಡಿಲ್ಲ ಮೋಜಿನ ಬೆಳಕಿನೂರು
ಬಚ್ಚಿಟ್ಟ ಬಣ್ಣದಾಸೆಯ ಕೂಗು ಕೇಳುವರಾರು
ಇದುವೆ ಜೀವನವೆಂಬ ಭ್ರಾಂತು...
ಕತ್ತಲಿನ ರಹಸ್ಯ ಸಾಕೆಂಬಂತೆ
ಗುಹೆಯೊಂದು ಮಲಗಿದೆ ಅತ್ತು
ಕೈ ಬೀಸಿ ಕರೆದರೂ ,
ಹಿಂತಿರುಗಿ ನೋಡದ , ನಡೆದಿದೆ
ಮರೀಚಿಕೆಯಲ್ಲೇ ಹೊಸೆದ ಕನಸಿನೆಡೆಗೆ .

ನನ್ನ ಬಾಳಿನಲ್ಲಿ ಮರೆಯಲಾಗದ ಅಮೃತ ಘಳಿಗೆಯಾಗಿ
ಹೃದಯದಲ್ಲೊಂದು ಸುಂದರ ಪ್ರಶ್ನೆಯಾಗಿ
ನನ್ನ ಪುಟ್ಟ ಗೆಳೆಯ ,
ಹೂ ಮುತ್ತೊಂದನ್ನಿತ್ತು
ಮರಳಿ ಬರುವೇನೆಂದು, ಮಾಯವಾಗಿದೆ !
ಇದು ನನ್ನ ಹುಚ್ಚ ಮನಸೇ ..ಹಗಲು ಕನಸೇ ..
ತಿಳಿಯದಾಗಿದೆ !


·

No comments :

Post a Comment