Friday, February 5, 2021

ಚಾರ್ಜಾಯಣ

                                          

                                     

ಮೊಬೈಲಿಗೆ ಹೊಟ್ಟೆ ತುಂಬಾ ಕೂಳು ಅರ್ಥಾತ್ ಬ್ಯಾಟರಿ ಪೂರ್ತಿಯಾಗುವವರೆಗೂ ಚಾರ್ಜ್ ಹರಿಸಿದಲ್ಲಿ  ಹೊಟ್ಟೆ ತುಂಬಾ ಹಾಲು ಕುಡಿದ ಮಕ್ಕಳಂತೆ ಕಿರಿಕಿರಿ ಮಾಡದೆ ಆಡಿಕೊಂಡಿರುತ್ತವೆ ಎನ್ನುವುದು ನನ್ನ ಅನಿಸಿಕೆ  . ಆದರೆ ಇದಕ್ಕೂ ಪರಿಪಾಟಲು ಪಡುವ ನನ್ನ ಮೊಬೈಲನ್ನು ಪಾಪ ಅರೆಹೊಟ್ಟೆಯಲ್ಲೇ ಎಬ್ಬಿಸಿ  ಫೇಸ್ಬುಕ್ -ವಾಟ್ಸಾಪುಗಳಲಿ  ಅರ್ಧಕ್ಕೆ ಬಿಟ್ಟು ಹೋದ ಮುಖ್ಯವಾದ ಕಾಮೆಂಟು , ಸಂದೇಶಗಳನ್ನು ಪೂರ್ಣಗೊಳಿಸಲು ನಾನು ಗಡಿಬಿಡಿ ಗುಂಡಕ್ಕನಾಗಿ ಬಿಡುವುದೇ ಹೆಚ್ಚು ! “ ಛೆ  ! ಬದುಕೋಕೂ  ಬಿಡಲ್ಲ  ಸಾಯಕ್ಕು ಬಿಡಲ್ಲ !  ಎಂತ  ಕೆಟ್ಟ ಜನ “ ಎಂದೇನಾದರೂ ಅದು ಫುಲ್ ಫೀಲಿಂಗಿನಲ್ಲಿ  ಫಿಲ್ಮಿ ಡೈಲಾಗ್ ಹೊಡೆದು ನನ್ನನ್ನು ಬೈಯ್ದು ಕೊಳ್ಳುತ್ತಿರಬಹುದೇ ಎನ್ನುವ ಅನುಮಾನ ಸಹ ಕಾಡುವುದುಂಟು  ! ಈ ಕಾರಣಕ್ಕಾಗೆ  ಮೊಬೈಲ್ ಮಹಾಶಯ ಕಳಿಸುವ “ ಬ್ಯಾಟರಿ ಫುಲ್ , ರೀಮೂವ್ ಚಾರ್ಜರ್ “ ಎನ್ನುವ (ಪ್ರೇಮ)ಸಂದೇಶ ನನಗಂತೂ  ಅಪರೂವೆ ಎನ್ನಬಹುದು  !

 ಉಪ್ಪು ಹುಳಿ ಖಾರವುಂಡ ನಮ್ಮ ನಾಲಿಗೆ ದಿನಕ್ಕೊಂದು ತರಾವರಿ ತಿಂಡಿ ತಿನಿಸು ಬಯಸಿದರೆ   ಈ ಮೊಬೈಲಿಗೆ ಮಾತ್ರ ಕಿಂಚಿತ್ತೂ ಏಕತಾನತೆ  ಕಾಡದೆ ,  ಯಾವುದೇ ಪ್ರವರದ ಮೊಬೈಲಾಗಿರಲಿ , ಶ್ರೀಮಂತರು ಬಡವರದ್ದು ಎಂಬ  ಭೇದವಿಲ್ಲದೆ ದಿನವಿಡಿ ದುಡಿಯಲು ಅದರ ಶಕ್ತಿ ...ವಿದ್ಯುತ್ಚಕ್ತಿ !

ಅಂಧಕಾರದಲ್ಲಿ ಜಡವಾಗಿ ಬಿದ್ದ ವಸ್ತು (ನನ್ನ ಮೊಬೈಲು ) ಕೆಲವೆ ಸೆಕೆಂಡಿನಲ್ಲಿ ಬೆಳಕಿನ ಹೊನಲಾಗಿ ಸೂರ್ಯನಂತೆ ಪ್ರಕಾಶಮಾನವಾಗಿ ಬೆಳಗುವುದು ಒಂದು ಖುಷಿ ಅನುಭವವೇ ! ಆ ಸೂರ್ಯ ಪ್ರದೀಪನಂತೆ  ಸ್ವಯಂ ಬೆಳಕಾದರೆ ನನ್ನ ಮೊಬೈಲಿಣಿ ಮಾತ್ರ ಎಮೆರ್ಜೆನ್ಸಿ ವೇಳೆಗೆ  ಲಗು ಬಗೆಯಿಂದ ರೋಗಿಗೆ ಡ್ರಿಪ್ಸ್  ಏರಿಸಿದಂತೆ ಚಾರ್ಜ್ ಭಾಗ್ಯಕ್ಕೆ ಒಳಗಾಗುತ್ತದೆ  ! ಆದರೆ ಅದೇ  ಸಮಯಕ್ಕೆ   ನೂರೆಂಟು ಕರೆಗಳ ಕಿರಿಕಿರಿ ಶುರು  ! ಪವರ್ ಆನ್ ಆಗಿದ್ದಾಗ   “ಹಲೋ “ ಎಂದು ಕಿವಿ ಗಿಟ್ಟಿದ್ದೆಯಾದರೆ ಕರೆಂಟು  ಹರಿದು ಮೊಬೈಲ್ ಜೊತೆಗೆ ನನ್ನ ಕಿವಿಯೂ ಡಮಾರ್ ಎಂದರೆ ಎನ್ನುವ ಭಯ !  ಹತ್ತು ನಿಮಿಷ ಮಾತನಾಡುವಷ್ಟು  ಜೀವ ಇದೆಯಲ್ಲ  ಎನ್ನುವ ಉಡಾಫೆಯಿಂದ   ಮಾತಿನಲ್ಲಿ ಮೈ ಮರೆತರೆ  ಮುಖ್ಯ ವಿಷಯ ಬಂದಾಗಲೇ  ಕರೆ ಕಟ್ಟಾಗಿ ಅಭಾಸವಾಗುವುದು ಗ್ಯಾರೆಂಟಿ ಬಿಡಿ !

ದಿನವೂ ಮಲಗುವ ಮುನ್ನ ತಮ್ಮ ಮೊಬೈಲನ್ನು  ಚಾರ್ಜಿಗೆ ಹಾಕಿ  ಶಿಸ್ತು ಬದ್ದ  ಜೀವನ ನಡೆಸುವವರು  , ಹತ್ತು ಪರ್ಸೆಂಟ್  ಚಾರ್ಜ್ ಇರುವಾಗಲೇ  ಎಚ್ಚೆತ್ತುಕೊಂಡು  ಮುಂದಿನ ಕ್ರಮ ಕೈ ಕೊಳ್ಳುವವರು , ಹಣವನ್ನು ಸುಖಾ  ಸುಮ್ಮನೆ ಪೋಲು ಮಾಡದೆ ಜಾಗರೂಕವಾಗಿ ಖರ್ಚು ಮಾಡಿದಂತೆಯೇ , ತಮ್ಮ ಮೊಬೈಲ್ ಬ್ಯಾಟರಿಯನ್ನೂ  ಸಹ ಉಳಿತಾಯ ಮಾಡುವವರ ಮೊಬೈಲ್ಗಳು ನಿಜಕ್ಕೂ ಪುಣ್ಯ ಮಾಡಿರಬೇಕೆನೋ ಎನಿಸುತ್ತದೆ . ನಾನು ಮಾತ್ರ ಆ ಕ್ಯಟಗರಿಯಲ್ಲಿ  ಬರದೆ  ಕೊನೆಯುಸಿರುವವರೆಗೂ ಅದನ್ನು ದುಡಿಸಿಕೊಳ್ಳುವಾಕೆ !

ತಪಸ್ಸಿನಲ್ಲಿ ನಿರತರಾದ ಮುನಿಗಳಿಗೆ ತಪೋ ಭಂಗವಾದಂತೆ ದಿನದ  ಬಹುಪಾಲು ಸಮಯವನ್ನು ಮೊಬೈಲ್ ಜಗತ್ತಿನಲ್ಲೇ  ಕಳೆಯುವ ನನಗೆ   ಆಸಕ್ತಿದಾಯಕ  ವೀಕ್ಷಣೆ, ಓದಿನಲ್ಲಿ ತೊಡಗಿರುವಾಗಲೇ ಬ್ಯಾಟರಿ ಕೈಕೊಟು ರಸಭಂಗವಾಗುತ್ತದೆ . ಆಗ ಚಾರ್ಜರ್ ಹುಡುಕಲು ಲಗುಬಗೆಯಿಂದ ಪಿ ಟಿ ಉಷಾಳಂತೆ ಓಡುವ ನನ್ನ ಹಪಹಪಿ ಹೇಳತೀರದು  . ಒಮ್ಮೊಮ್ಮೆ ಚಾರ್ಜರ್ ಸಿಕ್ಕರೆ ಮೊಬೈಲ್ ಸಿಗದೆ (ಕಣ್ಣಿಗೆ ಬೀಳದೆ) ನನ್ನ ಹುಡುಕಾಟ ಮನೆಯ ಎಲ್ಲೆ ಮೀರದಂತಿದ್ದರೂ ,ದಿಂಬಿನಡಿಯೋ , ಸೋಫಾ ಸೀಟಿನನೊಳಗೊ ಅಡುಗಿಕೊಂಡು ನನ್ನ ಚಾರ್ಜರ್ ಗಂಟೆಗಟ್ಟಲೆ  ಕಣ್ಣಾ ಮುಚ್ಚಾಲೆ ಆಡುತ್ತಿರುತ್ತದೆ .

ಇನ್ನು ವರ್ಕ್ ಫ್ರಂ ಹೋಂ,  ಆನ್ಲೈನ್  ಶಿಕ್ಷಣ, ಇವುಗಳ ಪರಿಣಾಮ  ಮನೆಯಲ್ಲಿರುವ  ಅಷ್ಟೂ ಚಾರ್ಜಿಂಗ್ ಪಾಯಿಂಟುಗಳನ್ನು ನನ್ನ ಗಂಡ  ಮಕ್ಕಳು ಸ್ವಂತ ಸೈಟಿನಂತೆ ಆಕ್ರಮಿಸಿಕೊಂಡಿದ್ದು  ಆ ಜಾಗದಲ್ಲಿ ಅವರದೆ ಲ್ಯಾಪ್ ಟ್ಯಾಪೋ, ಟ್ಯಾಬೋ ಏನೋ ಒಂದು   ಕುಳಿತಿರುವಾಗ ನನ್ನ ಮೊಬೈಲ್ ಒಮ್ಮೊಮ್ಮೆ ಅಡುಗೆ ಕೋಣೆಯ ಮಿಕ್ಸಿ ಪಾಯಿಂಟಿಗೆ ಯಾವುದೋ ಕೋನದಲ್ಲಿ ಜೋತಾಡಿಕೊಂಡು ಅಡುಗೆ -ತಿಂಡಿಗಳ ಬಿಸಿ ಹಬೆ ಕುಡಿಯುತ್ತ  ವಿದ್ಯುತ್ ಸಂಚಯ ಮಾಡಿಸಿ ಕೊಳ್ಳುತ್ತದೆ . ಆಗೆಲ್ಲ ನನ್ನ ಗೊಣಗಾಟ ನಮ್ಮ ಬಾಡಿಗೆ ಮನೆಯ ಮೇಲೆಯೆ ಹರಿದು   “ ರೀ ! ನಮ್ಮ  ಸ್ವಂತ ಮನೆ ಆದ್ರೆ  ,ಮನೆ ಪೂರ್ತಿ ಚಾರ್ಜಿಂಗ್ ಸಾಕೆಟ್ಗಳನ್ನ  ಇಡಿಸಿಬಿಡೋಣ ಕಣ್ರೀ “ ಎನ್ನುವ ಭೀಷಣ ಪ್ರತಿಜ್ಞೆಯೊಂದಿಗೆ ಕೊನೆಗೊಳ್ಳುತ್ತದೆ . ಒಮ್ಮೊಮ್ಮೆ ಊರಿಂದ ನೆಂಟರು ಬಂದಾಗ ನಮ್ಮನೆಯ ಹೈಫೈ ಅಡಾಪ್ಟರ್ಗಳು ತಮ್ಮ ನವ ರಂದ್ರಗಳಿಗೂ ಸಿಕ್ಕಿಸಿದ ಮೊಬೈಲುಗಳಿಗೆ ವಿದ್ಯುತ್ ಹರಿಸಿ ತಾನೂ ಅತಿಥಿ ಸತ್ಕಾರ ನಡೆಸುತ್ತದೆ !  

ಲ್ಯಾಂಡ್ ಲೈನ್ ಫೋನು ಒಂದೇ ಇದ್ದ ಕಾಲದಲ್ಲಿ ಇಂತ  ಚಾರ್ಜಿಂಗ್ ಕಾಟವೆ ಇರುತ್ತಿರಲಿಲ್ಲ  . ಕೂತಲ್ಲೇ ಗಂಬೀರವಾಗಿ  ಕೂರುವ ಅದರ ಮುಂದೆಯೇ ಕೂತು ನಾವು ಕಷ್ಟ ಸುಖ ಮಾತಾಡಿ ಕೊಳ್ಳುತ್ತಿದ್ದೆವು .ನಂತರ ಕಾರ್ಡ್ಲೆಸ್ ರಿಸೀವರ್ ಬಳಕೆಗೆ  ಬಂದರೂ  ಮನೆಯ ಹೊಸ್ತಿಲಿನೊಳಗೇ ಸುತ್ತಾಡಿಕೊಂಡು  ಮಾತಾಡಿದ ನಂತರ ಅದನು    ಸ್ವಸ್ಥಾನಕ್ಕೆ ಸೇರಿಸಿ ಬಿಡುತ್ತಿದ್ದೆವು. ಈಗಿನ ಹಾಗೆ  ಕೈಗೂಸಿನಂತೆ ದಿನಪೂರ್ತಿ ಮೊಬೈಲನ್ನು  ಹಿಡಿದು ಓಡಾಡುತ್ತಿರಲಿಲ್ಲ .

ನಮ್ಮ ಮನೆಯ ನಾಲ್ಕು ಜನ ಸದಸ್ಯರ ನಡುವೆ ಆರು ಮೊಬೈಲುಗಳು , ದಿನ ಬೆಳಗಾದರೆ ಮನೆಯಲ್ಲಿರುವ ಎಲ್ಲ ಕರೆಂಟು ಸಾಕೆಟ್ಗಳಿಗೆ  ಚಾರ್ಜರ್ಗಳು ಕರಿ ನಾಗರಗಳಂತೆ  ನೇತಾಡಿಕೊಂಡಿರುವ ಸೀನು ಮಾಮೂಲಿ .ಪತ್ರಿಕೆಗಳನ್ನು ಹಿಡಿದು ಓದಿದಂತೆಯೇ ಫೀಲ್ ಬರಲು  ಐಪ್ಯಾಡ್ , (ಲೇಖನ )ಬರೆಯಲು ಲ್ಯಾಪ್ ಟಾಪ್ , ವಾಟ್ಸಾಪ್ /ಫೇಸ್ಬುಕ್ ಗಾಗಿ  ಹಾಗು ಮಾತನಾಡಲು ಪ್ರತ್ಯೇಕ ಮೊಬೈಲ್ ಇಟ್ಟುಕೊಂಡ ನನಗೆ  ಅವುಗಳನ್ನು ಒಂದರ ನಂತರ ಮತ್ತೊಂದನ್ನು ಚಾರ್ಜಿಗೆ ಹಾಕುವ ಪರದಾಟ ತಪ್ಪಿದಲ್ಲ .  ದಿನಬೆಳಗಾದರೆ (ಕಾರ್ಪೋರೇಶನ್ ಗಾಡಿಯವರಿಂದಲೂ ಎತ್ತಲಾಗದಂತೆ  ) ಬಂದು ಬೀಳುವ ರಾಶಿ ರಾಶಿ ವಾಟ್ಸಾಪ್ ಕಸವನ್ನು ಗುಡಿಸಿ ಸಾಕಾಗಿ ನನ್ನ ಮೊಬೈಲ್ ಹ್ಯಾಂಗ್ ಆಗತೊಡಗಿದಾಗ ಅದಕ್ಕೆಂದೇ ಹಳೆಯ ಮೊಬೈಲ್ ಮೀಸಲಿಟ್ಟು , ರೆಗ್ಯುಲರ್ ಬಳಕೆಗಾಗಿ ಹೊಸ ಮೊಬೈಲ್ ಖರೀದಿಸಿದ್ದೆ . ಏನೇ ಅನ್ನಿ ತಾಂತ್ರಿಕತೆ ಬೆಳೆದಂತೆಲ್ಲ ಅನುಕೂಲಗಳು ಹೆಚ್ಚಾದರೂ ಮೇಲ್ನೋಟಕ್ಕೆ ಅರವಿಗೆ ಬರಲಾರದಂತ ಸಮಸ್ಯೆಯ ಸುಳಿಗಳೂ ಅಡಗಿಕೊಂಡಿರುತ್ತವೆ.

ಎಜಮಾನರು  ಅದೇ ಉಪಾಯ ಮಾಡಿದ್ದರು . ಹಿರಿ ಮಗ ಹಾಗು ಕಿರಿ ಕಿರಿಯವನ ಮೊಬೈಲಿನಿಂದ  ಹಿಡಿದು ಟ್ಯಾಬ್ ,   ಲ್ಯಾಪ್ ಟಾಪ್, ಫಿಟ್ ಬಿಟ್ ಕೈಗಡಿಯಾರಗಳು ಅಷ್ಟೇ ಅಲ್ಲದೆ ಅವರ ದಾಡಿ ಮಾಡಿಕೊಳ್ಳುವ ತ್ರಿಮ್ಮರ್ ಗಳನ್ನೂ ಚಾರ್ಜ್ ಮಾಡಿಸುವ ಗೌಜು ಗದ್ದಲದಿಂದಾಗಿ ಸದಾ ನಮ್ಮ ಮನೆಯಲ್ಲಿ  ಅನ್ನ ದಾಸೋಹಕ್ಕೂ ಮುನ್ನ  ಆರಂಭವಾಗುತ್ತಿದ್ದದ್ದು ಚಾರ್ಜ್ ದಾಸೋಹವೆ ಎನ್ನಬಹುದು ! ಅಂತೂ ಇದೆಲ್ಲ ನೋಡಿವಾಗ ಚಾರ್ಜ್ ಮಾಡುತ್ತಲೇ ನಮ್ಮ ಜೀವನದ ಪಯಣ ಮುಗಿಸುತ್ತೆವೇನೋ ಅನಿಸಿ ಬಿಡುತ್ತದೆ !

ನಮ್ಮ ಅಗತ್ಯಕ್ಕೂ ಮೀರಿದ ವಸ್ತುಗಳನ್ನು ಕೊಳ್ಳುವ ಮೋಹ ನಮ್ಮನ್ನು ಬಾಳಿನುದ್ದಕ್ಕೂ ಆವರಿಸಿ ನಮಗರಿವಿಲ್ಲದಂತೆ ಆ ಬಂಧನದಲ್ಲಿ ಸಿಲುಕಿ ಕೊಂಡು ಬಿಡುತ್ತೇವೆ .ಈ ಅಧುನಿಕ ಜೀವನ ಶೈಲಿಗೆ ಎಲೆಕ್ಟ್ರಾನಿಕ್ ಉಪಕರಣಗಳ  ಮೇಲಿನ ನಮ್ಮ ಮೋಹವನ್ನು ಇದಕ್ಕೆ ತಳಕು ಹಾಕಿ ನೋಡಬಹುದು . ಕಾರ್ಡ್ಲೆಸ್ಸ್ ಹೆಡಫೋನು , ಬ್ಲೂಟೂತು, ಟ್ಯಾಬು , ಐಪೋಡು ,ಲ್ಯಾಪ್ ಟಾಪ್ ...ಅಬ್ಬಬ್ಬ  ಗ್ಯಾಡ್ಜೆಟ್ ಗಳ ಸಂತೆ  !  ಒಬ್ಬೊಬ್ಬರಿಗೂ ಎಷ್ಟೆಲ್ಲಾ ವಿದ್ಯುನ್ಮಾನ  ಉಪಕರಣಗಳು, ಬಾಲಂಗೋಚಿಯಾಗಿ  ಬರುವ ಅವುಗಳ ಚಾರ್ಜರಗಳು ! ಜೀವನದ ಸಂಗಾತಿಗಳಂತೆಯೆ ಇವುಗಳನ್ನು ಸಹ  ಸಂಭಾಳಿಸುವುದು ಎಷ್ಟು ಕಷ್ಟ ಎಂದು ನಿಮಗೂ ಅನುಭವಕ್ಕೂ  ಬಂದಿರಬೇಕು  ! ನಮ್ಮನೆಯ ಆರು ಮೊಬೈಲುಗಳ  ಚಾರ್ಜರ್ಗಳು  ಆಗಾಗ ಅದಲು ಬದಲಾಗಿ , ಯಾರದೋ ಅಡಾಪ್ಟ್ ರಿಗೆ ಮತ್ಯಾರದ್ದೋ ವೈರು ಹೊಂದಾಣಿಕೆ ಮಾಡಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತವೆ . ಈ ಚಮತ್ಕಾರಗಳಲ್ಲಿ ನನ್ನ ಕೊಡುಗೆಯೆ ಹೆಚ್ಚಾಗಿದ್ದರಿಂದ  ಚಾರ್ಜರ್ ಗಳನ್ನು  ಅದಲು ಬದಲು ಮಾಡುವ ಆರೋಪ ನನ್ನ ಮೇಲೆಯೆ ಹರಿದು ಬರುವುದು ಮಾಮೂಲು !

 ಏನೇ ಅನ್ನಿ ಈ ಪರದಾಟಗಳಿಂದ ರೋಸಿ , ನನ್ನ ಹಳೆಯ ಮೊಬೈಲುಗಳನ್ನು ವಿಲೇವಾರಿ ಮಾಡಿದ್ದರೂ ಸಹ ಅವುಗಳ ಚಾರ್ಜರ್ ವೈರು, ಅಡಾಪ್ಟರ್ ಸಮೇತ  ( ತಾಯಿಯನ್ನು ಕರುಳು  ಬಳ್ಳಿಯ ಜೊತೆಯಲ್ಲೇ ) ಮೆಂದೆಂದಾದರೂ ಉಪಯೋಗಕ್ಕೆ ಬಂದೆ ಬರುವುದೆಂದು  ಕಾಪಿಟ್ಟು ಕೊಂಡಿರುತ್ತಿದ್ದೆ . ಹಾಗಾಗಿ ನನ್ನ ಮೇಜಿನ ಡ್ರಾಯರ್ ತೆರೆದರೆ ಸಾಕು ಬಿದಿರಿನ ಟ್ರೇ (ಬುಟ್ಟಿಯಲ್ಲಿ) ಈ ವೈಯರುಗಳೆಲ್ಲ ಒಂದಕೊಂದು ಸುತ್ತಿಕೊಂಡು ಶೇಷಶಯನದ ಭಂಗಿಯಲ್ಲಿ ಬಿದ್ದುಕೊಂಡು (ನಿಮ್ಮನ್ನು ) ಬಿಚ್ಚಿ ಬೀಳಿಸಿ ಬಿಡುತ್ತವೆ   !

ನನ್ನ  ಚಾರ್ಜರ್ ಮೋಹಿ ಚಟಕ್ಕೆ  ಮನೆಯ ಸದಸ್ಯರೆಲ್ಲಾ ತಮ್ಮ ಚಾರ್ಜರ್ಗಳನ್ನು ನನ್ನ ಕಣ್ಣಿಗೆ ಬೀಳದಂತೆ ಎಚ್ಚರಿಕೆ ವಹಿಸುತ್ತಾರೆ.  ಮಗರಾಯನಂತೂ  ಗುರುತಿಗಾಗಿ ಅವನ ಬಿಳಿ ಬಣ್ಣದ ಅಡಾಪ್ಟ್ ರಿನ ಮೇಲೆ ತನ್ನ ಹೆಸರು  ಅಚ್ಚು ಹಾಕಿಸುವುದೊಂದೇ ಬಾಕಿ ! ಈ ಚಾರ್ಜಿಂಗ್ ಗದ್ದಲಕ್ಕೆ ನಾನಂತೂ ಬೇಸತ್ತು ವೈಯರ್ಲೆಸ್ಸ್  ಹೆಡ್ಫೋನ್ , ಕೀ ಬೋರ್ಡ್ , ಇದ್ದಂತೆ  ಚಾರ್ಜೆಲೆಸ್ಸ್ ಮೊಬೈಲ್ ಸಹ ಬರಬಹುದೇ ಎಂದು ಬಕಪಕ್ಷಿಯಂತೆ ಎದುರು  ನೋಡುತ್ತಿದ್ದೇನೆ .

  ನಿಮಗೆ ನೆನಪಿರಬಹುದು ಹೊಸದಾಗಿ ಮಾರುಕಟ್ಟೆಗೆ ಬಂದ ಪೂರ್ವಸೂರಿಗಳಾಗಿದ್ದ ನೋಕಿಯ ೩೩ ೧೦  ಮೊಬೈಲ್ ಹ್ಯಾಂಡ್ಸೆಟ್ಗಳು ಇಟ್ಟಿಗೆಗಳಂತೆ ಗಟ್ಟಿಮುಟ್ಟಗಿರುತ್ತಿದ್ದವು . ಆ ಫೀಚರ್  ಫೋನುಗಳಲ್ಲಿ ಈಗಿನಂತೆ  ಬೆರಳಲ್ಲಿ ಮಾತಾಡಿಕೊಂಡು , ಮೊಬೈಲ್ ಸ್ಕ್ರೀನಿನಲ್ಲೇ ಸ್ನೇಹಿತರ ಗುಂಪು ಕಟ್ಟಿ ಹರಟುತ್ತ  ಘಳಿಗೊಮ್ಮೆ ಅಪ್ಳೋಡು ಡೌನ್ಲೋಡು  , ಮಾಡಿಕೊಳ್ಳಲು ಅನುಕೂಲವಾಗಿರುವ ಇಂಟರ್ನೆಟ್ಟು , ವಾಟ್ಸಾಪ್, ಫೇಸ್ಬುಕ್  ಯೂ ಟ್ಯೂಬ್ ಅಂತೆಲ್ಲ ಈ ಚಾರ್ಜ್ ಹೀರಿಬಿಡುವ ಅಪ್ಲಿಕೇಶನ್ ಗಳಿಲ್ಲದೆ   ಪಾಪ  ಸಾದಾ ಸೀದಾ ಹ್ಯಾಂಡ್ ಸೆಟ್ ಆಗಿದ್ದರಿಂದ ಒಮ್ಮೆ  ವಿದ್ಯುತ್  ಶಕ್ತಿ ಹರಿಸಿದರೆ ಸಾಕು  ತೃಪ್ತಿಯಿಂದ ಒಂದು ವಾರ  ಕಿರಿಕಿರಿಯಿಲ್ಲದೆ ದುಡಿಯುತ್ತಿದ್ದವು  . ಸೈಕಲ್ ಪೆಡಲ್ ತುಳಿಯುತ್ತಲೇ  ಚಾರ್ಜ ಆಗುವಂತ ಬೈಸಿಕಲ್ ಕೂಡ ಮಾರುಕಟ್ಟೆಗೆ ಬಂದಿತ್ತು . ಅದರಂತೆ ನಮ್ಮಂತ

 “ ಮಾತೆ”ಯರಿಗೆ ಮಾತಾಡುತ್ತಲೇ  ಮೊಬೈಲ್ ಚಾರ್ಜ್  ಆಗುವ ತಂತ್ರಜ್ನ್ಯಾನವುಳ್ಳ  ಮಹಿಳಾ ಸ್ನೇಹಿ ಮೊಬೈಲ್ಗಳು ಅವಿಷ್ಕಾರವಾಗಲಿ ಎನ್ನುವುದು ನನ್ನ ಹೆಬ್ಬಯಕೆ. ಮುಂದಿನ ದಿನಗಳಲ್ಲಿ ಈ  ಬಹುಶ್ರುತ ಸ್ಮಾರ್ಟ್ ಫೋನ್ಗಳಲಿ  ಈ ಸೌಲಭ್ಯವೂ ಬಂದರೆ ಅಚ್ಚರಿಯಿಲ್ಲ ಬಿಡಿ !

ಈಗೀಗ ಮನೆಗೆ ವಿಶೇಷ ಅತಿಥಿ ಅಭ್ಯಾಗತರು ಆಗಮಿಸಿದರೆ  ಟೀ ಕಾಫೀಗೂ ಮುನ್ನ  ಮನೆಯ ವೈಫೈ  ಪಾಸ್ವರ್ಡ್  ಕೊಡುವುದು , ಅವರ ಚಾರ್ಜರ್ ಮರೆತಿದ್ದರೆ ನಮ್ಮದೇ ಒಂದನ್ನು ಅಡ್ಜಸ್ಟ್ ಮಾಡಿಸುವುದು , ಕೊಂಚ ಎತ್ತರವಿದ್ದವರ ಕೈಯಲ್ಲಿ  ಮೊಬೈಲ್ಕೊಟ್ಟು  ಗ್ರೂಪ್ ಸೆಲ್ಫಿಗೆ ಹಲ್ ಕಿರಿದು ನಿಲ್ಲುವುದು , ಈ ರೀತಿ ಘನ ಸೇವೆಗಳು ನಡೆಯುವುದು ಸಾಮನ್ಯವಾಗಿದೆ .ಇನ್ನು ಮದುವೆ ಇತರ ಸಮಾರಂಭಗಳಿಗೆ ಊರಿಗೆ ಹೋದಾಗ ಗಡಿಬಿಡಿಯಲ್ಲಿ ನಮ್ಮ ಉಡುಪು ವಸ್ತ್ರ ಮರೆತರೂ ಅಷ್ಟಾಗಿ  ತಲೆ  ಕೆಡೆಸಿಕೊಳ್ಳದ  ನನಗೆ ಅಕಸ್ಮಾತ್ ನನ್ನ ಚಾರ್ಜರ್ ಮರೆತ್ತಿದ್ದರಂತೂ ಮೂಡೆ  ಆಫ್ ಆಗಿ ಬಿಡುತ್ತದೆ !

ಏನೇ ಅನ್ನಿ ನಾವು ನಮ್ಮ ಮೊಬೈಲುಗಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದರೂ  ಒಂದು ದಿನವೂ ಬಿಟ್ಟರಲಾರದಂತೆ ಅದರ   ಮೊದಲ ಪ್ರೇಮ ಮಾತ್ರ ಚಾರ್ಜರ್ ಅಲ್ಲವೇ ! ಸೂಜಿ ಹಿಂದೆ ದಾರ ಓಡಿದಂತೆ ನೀನಿಲ್ಲದೆ ನಾನಿಲ್ಲ ಎಂದು ಜೀವ ಕಳೆ ತುಂಬುವ ಜೀವ ಭಾವದ ಗೆಳೆಯರಂತೆ ಜೊತೆಯಾಗಿರುತ್ತವೆ . ಅದರಂತೆ ನಮ್ಮೊಂದಿಗೆ ಒಡನಾಡುವ  ಸಂಬಂಧಗಳು ಕಳೆಗುಂದ ತೊಡಗಿದಾಗಲ್ಲೆಲ್ಲ ಒಂದಿಷ್ಟು ಲವಲವಿಕೆಯ ಚಾರ್ಜ್ ಹರಿಸಿ ನಳನಳಿಸುವಂತೆ ಮಾಡುವಂತಿದ್ದರೆ   ಜೀವನವೂ  ಸುಂದರ ಹೂ ಬನದಂತೆ ಅರಳಬಹುದು ಎನ್ನುವುದು ನನ್ನ ಭಾವನೆ .ಏನಂತೀರಿ ?

ಆರತಿ ಘಟಿಕಾರ್

 

No comments :

Post a Comment