Saturday, May 11, 2013

ನೆಟ್ ರಾಜನ ಸೂಪರ್ ಐಡಿಯಗಳು



ನನ್ನ ಮಗ ರಾಜನಿಗೆ  ಮೊದಲಿನಿಂದಲೂ  ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳ ಬೇಕಿದ್ದರೂ   ಇಂಟರ್ ನೆಟ್ಟಿಗೇ ಹೋಗಿ  ವಿವರವಾಗಿ ಮಾಹಿತಿಗಳನ್ನು ಸಂಗ್ರಹಿಸಿ   ಮುಂದುವರೆಯುವ ಚಾಳಿ .ಉದಾ ಹೊಸ ಫೋನ್ , ಕ್ಯಾಮೆರಾ  , ಟೀವಿ ಹೀಗೆ ಯಾವುದೇ ಹೊಸ ವಸ್ತು ಗಳನ್ನ ಖರೀದಿ ಮಾಡುವಾಗಳೆಲ್ಲಾ , ಅಂತರ್ಜಾಲ ವೆಂಬ ಮಹಾ   ಸಾಗರಕ್ಕೆ ಇಳಿದು ಅಲ್ಲಿ  ಗಂಟೆ ಗಟ್ಟಲೆ  ಈಜಾಡಿ ತಕ್ಕ ಮಾಹಿತಿಗಳೊಂದಿಗೆ ದಡಕ್ಕ ಐ ಮೀನ್ ರೂಮಿನಿಂದ ಹೊರಗೆ ಬರುವ ಅಭ್ಯಾಸ . ಇದು ಹೋಗಲಿ ಬಿಡಿ ,   ತನ್ನ ಫೇಸ್ ಕಟ್ಟಿಗೆ ಯಾವ ಕಟ್ ಒಪ್ಪುತ್ತದೆ ಅಂತಾನೂ ಈ ಇಂಟರ್  ನೆಟ್ಟನಲ್ಲೇ  ನೋಡಿ ನಿರ್ಧರಿಸಿ ಬಿಡುತ್ತಿದ್ದ . .   
ಹೀಗೆ ಅವನು ಎಲ್ಲದ್ದಕ್ಕೋ   ನೆಟ್ಟಗೆ ಇಂಟರ್ ನೆಟ್ಟಿಗೇ ಹೋಗೋದು  ನೋಡಿ ನಾವೆಲ್ಲರೂ ಅವನನ್ನು ರಾಜ ಅನ್ನುವ ಬದಲು ನೆಟ್ ರಾಜ ಅಂತ ಹೊಸ ನಾಮಕರಣ ಮಾಡಿದ್ವಿ . 
ಕೆಲವು ಪುಟ್ಟ ಮಕ್ಕಳು  ಮಲಗೋವಾಗ  ಈ ಬಾರ್ಬಿ ಬೊಂಬೆ , ಟೆಡ್ಡಿ ಬೇರ್ ಗಳನ್ನ್ನ  ಅವಚಿ ಕೊಂಡು ನಿದ್ರೆ ಮಾಡುವುದನ್ನ   ನಾವು ನೋಡಿರುತ್ತೇವೆ ., ಆದರೆ ನಮ್ಮ ನೆಟ್ ರಾಜನಿಗೆ  ಸ್ವಲ್ಪ ಭಿನ್ನ ವಾಗಿ ಮಲಗುವ ರೂಢಿ.   ಚಿಕ್ಕವನಿದ್ದಾಗ  ಅವನ ಮಂಚದ ತುಂಬಾ ರಾಶಿ ಆಟದ  ಕಾರುಗಳನ್ನು   ಹಾಕಿ  ಆ ಟ್ರಾಫಿಕ್ ಜಾಮಿನಲ್ಲೇ  ಹಾಯಾಗಿ  ನಿದ್ರಿಸಿ ಬಿಡುತ್ತಿದ್ದ . ಇನ್ನು ಇತ್ತೀಚಿಗೆ  ಲಾಪ್ ಟಾಪ್ ಕೊಡಸಿದ ಮೇಲೆ ,ಒಮ್ಮೊಮ್ಮೆ  ಅದನ್ನೇ ನೋಡ್ತಾ ನೋಡ್ತಾ ಎದೆ ಮೇಲೆ ಇಟ್ಕೊಂಡೇ ಹಾಗೆ ಮಲಗಿಬಿಟ್ಟಾಗ  .ನಾವೇ  ಅವನ ಕನ್ನಡಕ ತೆಗಿದಿಟ್ಟು, ಲ್ಯಾಪ್ ಟಾಪ್  ಸ್ವಿಚ್ ಆಫ್ ಮಾಡಿ ಅವನ ಪಕ್ಕದಲ್ಲೇ  ಅದನ್ನೂ ಮಲಗಿಸಿ ಬರ್ತಾ ಇದ್ದದ್ದು . . ಏಕೆಂದರೆ  ಅವನ ಸುಪ್ರಭಾತ  ದ ಮಂತ್ರ “ಕರಾಗ್ರೆ ವಸತೇ ಲಕ್ಸ್ಮಿ  ಅನ್ನುವ ಬದಲು ಕರದಲ್ಲಿ ವಸತೇ ಲಾಪ್ ಟಾಪ್  “ ಅನ್ನುವ ಹಾಗೆ  ಕಣ್ಣ ಬಿಟ್ಟ ತಕ್ಷಣ ದೇವರ ಪಟ ಕ್ಕಿಂತ ಮುಂಚೆ  ಲ್ಯಾಪ್ ಟಾಪಿನ  ದರ್ಶನ ಮಾಡ್ತಾ ಇದ್ದ .
ಹೋದ ತಿಂಗಳಿಗೆ  ಇವನಿಗೆ  ಹದಿನೆಂಟು ತುಂಬಿತು. ಚಿಗುರು ಮೀಸೆ ಹುಡುಗ. ಅಂತೂ ಇಲ್ಲಿನ ಡ್ರೈವಿಂಗ್ ಲೈಸನ್ಸನ್ನು ಕಷ್ಟ ಸಂಪಾದಿಸಿ ಬಿಟ್ಟ .   ನಮ್ಮ ಊರಿನಲ್ಲಿ  ಲೈಸೆನ್ಸು ತೊಗೊಳ್ಳೋದು ಅಂದ್ರೆ ಅಂದು ದೊಡ್ಡ ಸಾಹಸ. ಒಂದು ಡಿಗ್ರಿ ಪಡೆದಷ್ಟೇ ಕಷ್ಟ . ಆದಕ್ಕಿಂತ ಕಾರು  ಕೊಂಡುಕೊಳ್ಳುವುದೇ  ಬಹಳ ಸುಲಭ .
ಇರಲಿ , ಅವನು ಲೈಸೆನ್ಸ್ ತೆಗೆದುಕೊಂಡು ಮನೆಗೆ ಎಂಟ್ರಿ ಕೊಟ್ಟಾಗ  ನಾನೂ  ಖುಷೀಲಿ ತೇಲುತ್ತಾ “ ಸದ್ಯ  ಆಯಿತಲ್ಲ ನಿನ್ನ ಲೈಸೆನ್ಸ್ , ಅದನ್ನೂ ಇಂಟರ್ ನೆಟ್ನಲ್ಲೇ  ತೊಗೊಂಡ್ ಬಿಟ್ಟಿದ್ರೆ ಚನ್ನಾಗಿರ್ತ್ತಿತಲ್ಲೋ    ಅಂತ ತಮಾಷೆ ಮಾಡಿದಾಗ ಇವರು ತಕ್ಷಣ “ ಅದೇನು ಇವನು ಆನಲೈನ್ ನಲ್ಲಿ   ಸ್ವಿಮ್ಮಿಂಗ್  ಕಲಿತ ಹಾಗೆ ಅನ್ಕೊಂಡ್ ಬಿಟ್ತ್ಯಾ ! ? “ ಅಂತ ಅವನು ಸ್ವಿಮ್ಮಿಂಗ್ ಕ್ಲಾಸಿಗೆ ಹೋಗ್ತಾ ಇದ್ದಾಗ  ಕಂಪ್ಯೂಟರ್  ಮುಂದೆ ಅದೇನೋ ನೋಡ್ತಾ    ಈಜೂ ಹಾಗೆ ಕೈ ಕಾಲು ಬಡೀತ್ತಿದ್ದದ್ದು  ನೆನಪು ಮಾಡಿ ಕೊಟ್ಟ್ರು . ನಾನು ತಕ್ಷಣ  “ ಅಲ್ವೇ ಮತ್ತೆ  ?  ಸ್ವಿಮ್ಮಿಂಗ್  ಕ್ಲಾಸಿಗೆ  ಹೋಗೋಕೆ ಮುಂಚೆ ಸ್ವಲ್ಪ  ಹೋಂ ವರ್ಕ್ ಮಾಡ್ತಾ ಇದ್ದ ಅನ್ಸತ್ತೆ  , ನೀರು ಇಲ್ಲದ್ದಿದ್ದರೆ ಏನಾಯ್ತು  , ನೀರಿನ ಕಲ್ಪನೆ ಮಾಡಿಕೊಳ್ಳ ಬಹುದಲ್ವಾ  “ ಮಗರಾಯ ನನ್ನು ಸಮರ್ಥ ವಾಗಿ ಸಮರ್ತಿಸಿ ಕೊಂಡೆ !
ಸರಿ  ಲೈಸೆನ್ಸ್  ಸಿಕ್ಕ ಮಾರನೆಯ ದಿನವೇ   ನನ್ನ ಮಗ   ಅವನ ಗೆಳಯ ನೊಬ್ಬನ ಮನೆಗೆ  ಪಾರ್ಟಿಗೆ  ಅಂತ , ಅಪ್ಪನ ಕಾರ್  ತೆಗೆದು ಕೊಂಡು ಹೋಗಲು ನಿರ್ಧರಿಸಿ ಬಿಟ್ಟ . 
ಇವರು ಅವನು ಅಷ್ಟು ದೂರ ಕಾರನಲ್ಲಿ ಹೋಗುವುದು  ತಿಳಿದು  ಅವನಿಗೆ ಆ ಏರಿಯಾದ ರೂಟ್ಗಳ ಬಗ್ಗೆ  ಅವನಿಗೆ ಮಾಹಿತಿ ಖಂಡಿತ ಇರಲಾರ ದೆಂದು  ಕಳವಳ  ವ್ಯಕ್ತ ಪಡಿಸಿದಾಗ  “ ಅಪ್ಪ ಚಿಲ್ ( ಚಿಂತೆ ಮಾಡ್ಬೇಡ  ) , ನಾನು ಹೇಗೂ ಹೊಸ ಜೀಪೀಎಸ್  ಹಾಕ್ಸೀದೀನಲ್ಲ , ಹಾಗಾಗಿ ಏನೂ ಸಮಸ್ಯೆನೇ ಇಲ್ಲ . ಅದಕ್ಕೆ ಮೊದಲೇ ನಾವು ಹೋಗಬೇಕಾಗಿರುವ ಸ್ತಳ ಫೀಡ್ ಮಾಡಿಬಿಟ್ಟ ರಾಯ್ಹ್ತು .  ಅದೇ ದಾರಿ ಉದ್ದಕ್ಕೂ   ಸರಿಯಾಗಿ ರೂಟ್ ತೋರಸತ್ತೆ    ಅಂತ ಹುರುಪಿನಲ್ಲಿ ಉತ್ತಸಿದ  . “ ಸರಿ ಹುಷಾರಾಗಿ ಹೋಗಿ ಬಾ  “ ಅನ್ನದೆ ನಮಗೂ ಬೇರೆ ವಿಧಿ  ಇರಲ್ಲಿಲ್ಲಾ .
ಒಂದು ಗಂಟೆಯ ನಂತರ ಅವನ  ಫೋನ್ ರಿಂಗಣಿಸಿತು   ,  ದ್ವನಿಯಲ್ಲಿ ಗಾಬರಿ ಮನೆ ಮಾಡಿತ್ತು   !  . “ ಅಪ್ಪ  ಇದ್ಯಾವ  ಏರಿಯಾ  ಅಂತ ಗೊತ್ತಾಗ್ತಾನೆ ಇಲ್ಲ , ಸುತ್ತಿ ಸುತ್ತಿ ಸಾಕಾಯಿತು  !  ಹಾಳಾದ್ದು ಈ  ಕಂಪನಿಯ ಜೀಪೀಎಸ್ ಹಾಕ್ಸಾಬಾರ್ದಿತ್ತು  , ಛೆ ! ನನಗೂ ಎಲ್ಲ ಕನ್ ಫ್ಯೂಸ್ ಮಾಡಿಸ್ಬಿಡ್ತು ,  ಬೇಗ ನೀನೆ  ರೂಟ್ ಹೇಳಪ್ಪ ,ಪಾರ್ಟಿ ಗೆ ಲೇಟ ಆಗ್ತಾ ಇದೆ .  “. 
 “ನೋಡು ನಿನ್ನ ಮಗನ ಕರಾಮತ್ತು “ (ಆಗ ಮಾತ್ರ  ನನ್ನ ಮಗ ಆಗಿರ್ತಾನೆ  ! )  ಅಂತ  ಇವರು ಬಯ್ದು  ದೂರವಾಣಿ ಮುಖಾಂತರವೇ ಅವನಿಗೆ ಗೆಳಯನ ಮನೆಗೆ ಹೋಗುವ ಮಾರ್ಗ ಗಳನ್ನ ತಿಳಿಸಿ ,   ಪಾರ್ಟಿಗೆ ಸರಿಯಾಗಿ ಮುಟ್ಟಿಸಿದರು .
ಜೀಪೀಎಸ್ ವ್ಯವಸ್ತೆ  ಇದ್ದಾಗ  ನಿಗದಿತ ಸ್ತಳಕ್ಕೆ  ಹೋಗುವ ಮಾರ್ಗಗಳನ್ನು ಅದು ಸರಿಯಾಗಿ ನೀಡಬಲ್ಲದು , ಹೊಸದಾಗಿ ಒಬ್ಬನೇ ಸ್ಟೇರಿಂಗ್ ವೀಲಿನ  ಹಿಂದೆ ಕುಳಿತು ರೋಡಿಗಿಳಿದ ನಮ್ಮ  ರಾಜ  ಅದನ್ನ ಅನುಸರಿಸುವ ವೇಳೆ ಏನಾದರು ತಪ್ಪಿ ಈ ಗದ್ದಲವಾಗಿರಲಿಕ್ಕೂಸಾಕು . ಇರಲಿ ,   ಏನೇ ಆದರೂ ನಮ್ಮ ನೆಟ್ ರಾಜ  ಎಲ್ಲಾ  ತರದ ಆಧುನಿಕ  ಎಲೆಕ್ಟ್ರಾನಿಕ್  ಉಪಕರಣಗಳತ್ತ  ಅವನಿಗಿದ್ದ   ಒಲವನ್ನ   ಹೀಗೆ  ಆಗಾಗ ಅನಾವರಣ ಗೊಳಿಸುತ್ತಿದ್ದ . 
ಮೊನ್ನೆ ನನ್ನ ಗೆಳತಿಯೊಬ್ಬಳು  ತನ್ನ ಪುಟ್ಟ ಮಗಳೊಂದಿಗೆ ನಮ್ಮ ಮನೆಗೆ ಬಂದ್ದಿದ್ದಳು .ತಿಂಡಿ ಹರಟೆಗಳ ನಂತರ ಅವಳು ಹೊರಡುವ ಸಮಯಕ್ಕೆ  ಅವಳ ಮಗಳು ಪಿಂಕಿ  ತನ್ನ ಶೂ ಲೇಸ್ ಕಟ್ಟಲು ಕಷ್ಟ ಪಡುತ್ತಿರುವುದನ್ನ ನಮ್ಮ ನೆಟ್ ರಾಜ ನೋಡಿ  “ಆಂಟಿ  ನೀವು ಯು ಟ್ಯೂಬ್ ಗೆ ಹೋದರೆ ಅಲ್ಲಿ ಈ ಶೂ ಲೇಸನ್ನು   ಮಕ್ಕಳಿಗೆ ಹೇಗೆ  ಸುಲಭವಾಗಿ ಕಟ್ಟಲು ಕಲಿಸಬೇಕು ಅಂತ ಬೇಕಾದಷ್ಟು ರೈಮ್ಸ್ ಗಳಿವೆ. ( ಚಿಕ್ಕ ಪದ್ಯದ ರೂಪದಲ್ಲಿ)  ಅದನ್ನ ಪಿಂಕಿ ಗೆ ಹೇಳಿ   ಕೊಟ್ಟಬಿಡಿ ,ಅವಾಗ ಪ್ರಾಬ್ಲೆಮ್ ಆಗಲ್ಲಾ “  ಅಂತ  ತನ್ನ ಅದ್ಭುತ ಸಹಾಯವಾಣಿ ಯನ್ನು  ಮುಂದಿಟ್ಟ  .
ನಾನು “ ಅಯ್ಯೋ ಇನ್ನೂ ಚಿಕ್ಕ ಹುಡುಗಿ , ತಪ್ಪು ಮಾಡಿದರೂ ಪರವಾಗಿಲ್ಲ  ಹೀಗೇ   ನಿಧಾನವಾಗಿ ಕಲ್ತ್ಕೊತಾಳೆ   ಬಿಡೋ , , ಇನ್ನು ಈ ಶೂ ಲೇಸ್ ಕಟ್ಟಲು , ಸೂಜಿಗೆ ದಾರ ಪೋಣಿಸಲು , ಲಂಗಕ್ಕೆ ಲಾಡಿ ಹಾಕಲು ಎಲ್ಲಾನೂ ಈ ಕಂಪ್ಯೂಟರ್ ನಿಂದಲೇ ಕಲಿಯುವ ಹಾಗಾಯತಲ್ಲ , ನಿನ್ನ (ಹುಟ್ಟೋ) ಮಕ್ಕಳಿಗೆ   ಬೇಕಾದರೆ ಹೀಗೆ  ಕಲಸಪ್ಪ    ಅಂತ ತಮಾಷೆ ಮಾಡ್ದೆ . ಆದರೆ ಪಿಂಕಿಯ ಅಮ್ಮನಿಗೆ ನನ್ನ ಮಗನ  ಐಡಿಯಾ ಬಹಳ ಹಿಡಿಸಿ  “ ಒಹ್ ಹೌದಾ  ! ನೋಡು ನನಗೆ ಗೊತ್ತೇ ಇರ್ಲಿಲ್ಲ , ನಮ್ಮ ಪಿಂಕಿ ಮೊಬೈಲು , ಕಂಪ್ಯೂಟರ್   ಸಲೀಸಾಗಿ  ಆಪರೇಟ ಮಾಡಿಬಿಡ್ತಾಳೆ , ಆದರೆ ಈ  ಶೋ ಲೆಸ್ ಕಟ್ಟೋದು ಎಷ್ಟು ಸಲಿ ಹೇಳಿ ಕೊಟ್ಟರೂ ಇನ್ನೂ  ಬರಲ್ಲ  ! , ಥ್ಯಾಂಕ್ಸ್ ಕಣೋ  ,  ಇವತ್ತೇ ಯು ಟ್ಯೂಬ್ನಲ್ಲಿ  ಚೆಕ್ ಮಾಡ್ತೀನಿ  “ ಅಂತ ಧನ್ಯಳಾಗಿ ಹೊರಟಳು .

ಅಷ್ಟರಲ್ಲೇ  ನಮ್ಮ ಅತ್ತೆಯ ದ್ವನಿ ಒಳಗಿನಿಂದ  “ ಸರಸು  ಕುಕ್ಕರ್  ವೇಟ್ ಸಿಕ್ತಾ ಇಲ್ಲ ಕಣೆ , ಎಲ್ಲಾ ಕಡೆ ಹುಡುಕಿದೆ ,ನೀನೆ ಸ್ವಲ್ಪ ಬರ್ತೀಯ    ಸರಿ ನಾನು ಅಡುಗೆ ಮನೆಗೆ ದೌಡಾಯಿಸಿ  ಆಪರೇಶನ್  ಹುಡುಕಾಟದಲ್ಲಿ ಪಾಲ್ಗೊಂಡೆ .
ಇಷ್ಟೇ ಸಣ್ಣ ಗಾತ್ರದ ವೈಟು ಎಲ್ಲೋ ಪಾತ್ರೆಯೊಳಗೆ  ಸೇರಿಕೊಂಡು  ನಮ್ಮಂಥಹ ಹೆವಿ ವೈಟ್ಸ್ ಗೇ ಆಟ ಆಡಿಸ ತೊಡಗಿತ್ತು
ಅಲ್ಲಿ ನನ್ನ ಮಗ ಅಪ್ಪನಿಗೆ  “ಅಪ್ಪ ಯಾಕ್ ವರಿ ಮಾಡ್ಕೋತಿಯ , ನಿನಗೆ ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದ ರೂ  ಗೂಗಲ್ ಗೆ ಹೋಗಿ  ಟೈಪ್ ಮಾಡಿಬಿಡು,ಕ್ಷಣದಲ್ಲಿ ಹುಡುಕಿ ಕೊಟ್ಟಬಿಡತ್ತೆ “  ಅಂತ ಹೇಳ್ತಾ ಇರೋದ್ ಕೇಳಿಸಿಕೊಂಡ   ಅತ್ತೆ  “ ಲೋ ರಾಜ  ನಿಮ್ಮ ಆ ಗೂಗಲ್ಗೆ  ನಮ್ಮ ಕುಕ್ಕರ್ ವೇಟ್ ಎಲ್ಲಿದೆ ಅಂತ ಬೇಗ ಕೇಳಪ್ಪ  , ಹಾಳಾದ್ದು ನಾನು ನಿಮ್ಮಮ್ಮ್ಮ ಎಷ್ಟು ಹುಡುಕಿದರೂ ಸಿಗ್ತಾ ಇಲ್ಲಾ “ ಅಂತ ಕೂಗಿ ಹೇಳಿದರು  .
ನಮ್ಮ  ನೆಟ್ ರಾಜ  ನಗುತ್ತ    “ ಅಯ್ಯೋ ಅಜ್ಜಿ  ! ನಿಂದು ಅಮ್ಮಂದು  ದಿನ ಬೆಳಗಾದ್ರೆ  ಇದೇ ಗೋಳು  , ಸಮಾನುಗಳನ್ನ  ಎಲ್ಲೆಲ್ಲೋ  (ಜೋಪಾನವಾಗಿ ) ಇಟ್ಟು ಮರೆತು  ಬಿಡ್ತೀರಾ  ಆಮೇಲೆ ಎಡೆಬಿಡದೆ  ಹುಡುಕಾಟ,  ಯೋಚನೆ ಮಾಡ್ಬೇಡಿ  , ಅದಕ್ಕೆ ನನ್ನ ಹತ್ತಿರ ಒಂದು ಸೂಪರ್ ಉಪಾಯ ಇದೆ  !  ಅಡುಗೆಮನೆಯಲ್ಲಿ ಒಂದು  ಸಿಸಿಟೀವಿ  (cctv) ಕ್ಯಾಮೆರ ಹಾಕಿಸ್ಬಿಡ್ತೀನಿ  , ನೀವುಗಳು ಹೀಗೆ ಅಡುಗೆ ಮನೆಯಲ್ಲಿ  ಕೆಲಸ ಮಾಡ್ತಾ   ಸಾಮಾನುಗಳನ್ನು   ಎಲ್ಲೇ ಇಟ್ಟು ಮರೆತರೂ  ಕ್ಯಾಮೆರಾ   ರೀವೈಂಡ್  ಮಾಡಿ ನೋಡಿದರಾಯ್ತು “  ಅಂತ ನಮ್ಮ ಬೃಹದಾಕರದ ಸಮಸ್ಯೆಗೆ ಕ್ಷಣಾರ್ಧದಲ್ಲೇ  ಪರಿಹಾರ ಅನ್ನೌನ್ಸ ಮಾಡಿದ !

ಇತ್ತೀಚಿಗೆ  ಮರೆಗುಳಿತನ  ನನ್ನಲ್ಲಿ  ಹೆಚ್ಚಾಗಿ  , ದಿನಸಿ  ಸಾಮಾನುಗಳನ್ನು  ಅದರ ಅವಶ್ಯಕತೆ ಇದ್ದಾಗಲೇ  ಅವುಗಳನ್ನಿಟ್ಟ ಜಾಗ  ನೆನಪಾಗದೆ  ಒದ್ದಾಡಿಕೊಂಡು , ಕೊನೆಗೆ ಹರ ಸಾಹಸ ಮಾಡಿ ಪತ್ತೆ  ಮಾಡಿದ್ದಾಗ  ನಾನು ಇದನ್ನು ಏನು ಮಾಡಲು ಹುಡುಕಾಡುತ್ತಿದೆ ಅಂತ ನೆನಪು ಮಾಡಿಕೊಳ್ಳ ಬೇಕಾಗುತ್ತಿತ್ತು  . ಇಂತಹ ಪ್ರಸಂಗ ಗಳನ್ನು ಸಾಕಷ್ಟು ಅನುಭವಿಸಿದ್ದರಿಂದ   ನನಗಂತೂ ನಮ್ಮ  ರಾಜನ  ಉಪಾಯ  ಮರಳುಗಾಡಿನಲ್ಲಿ  ಓಯಸಿಸ್ ನಂತೆ  ಅನಿಸಿತು . 

ಅಷ್ಟರಲ್ಲಿ  ನಮ್ಮ ಈ ಸಂಭಾಷಣೆಗಳನ್ನೆಲ್ಲಾ  ಚಾಚು ತಪ್ಪದೆ ಕೇಳಿಸಿಕೊಂಡ  ನಮ್ಮ ಮನೆಯವರು  ದ್ವನಿ  ಹಾಲಿನಿಂದಲೇ ತೇಲಿ  ಬಂದಿತು  “ ಅಯ್ಯೋ  ರಾಜ  , ಸದ್ಯ ಹಾಗೇನಾದ್ರೂ  ನೀನು ಸಿಸಿಟೀವಿ ಕ್ಯಾಮೆರ ಹಾಕಿಸ ಬಿಟ್ರೆ ನಿಮ್ಮಮ್ಮ ಅಲ್ಲೇ ಪೋಸ್ ಕೊಡ್ತಾ ನಿಂತು ಬಿಟ್ಟರೆ ಕಷ್ಟ !  ಮೊದಲೇ ನಿಮ್ಮ ಅಮ್ಮನಿಗೆ   ಫೋಟೋ ತೆಗೆಸಿಕೊಳ್ಳುವುದೆಂದರೆ  ಪಂಚ ಪ್ರಾಣ !  ,ಆಮೇಲೆ ಅಡುಗೆ ಮಾಡೋರು  ಯಾರು “  ? ನಗುತ್ತಾ ನನ್ನನ್ನು  (ಸಿಕ್ಕಾಪಟ್ಟೆ ) ರೇಗಿಸಿದಾಗ , ಅತ್ತೆ  ಅಲ್ಲೇ ಇದ್ದದ್ದು ನೋಡಿ ನನ್ನ ಸಿಟ್ಟು ನಗುವಿನಲ್ಲೇ ತಿರುಗಿದ್ದು ಇವರ ಪುಣ್ಯ.!

 ನೀವೇನೆ ಅನ್ನಿ  ಈ ಗಂಡಸರಗೆ ನಮ್ಮ ಸಮಸ್ಯೆ  /ಕಷ್ಟ  ಕಾಣಿಸೋದೆ  ಇಲ್ಲಾ  !  ಪಾಪ ನಮ್ಮ ನೆಟ್ ರಾಜ  ನಮ್ಮ ಸಮಸ್ಯೆ ಗಳನ್ನೆಲ್ಲಾ  ಎಷ್ಟು  ಚನ್ನಾಗಿ ಅರ್ಥ ಮಾಡಿಕೊಂಡು  ಇಂಥ ಒಳ್ಳೆ  ಐ ಡಿಯಾ ಕೊಡ್ತಾ ಇರಬೇಕಾದ್ರೆ ಇವರಿಗೆ ಸದಾ ತಮಾಷೇನೆ ಅಂತ ಮನಸಿನ್ನಲ್ಲೇ  ಬೈದುಕೊಂಡರೂ , ಸದ್ಯ  ನಮ್ಮ ರಾಜ ಇರೋವಾಗ  ಈ ಚಿಂತೆ ಎಲ್ಲಾ  ಯಾಕೆ  ? , ಅಂದುಕೊಂಡು ಸಮಾದಾನದ ಉಸಿರು ಬಿಡುತ್ತಾ ನನ್ನ  ಸುಪುತ್ರನೆಡೆಗೆ ಹೆಮ್ಮೆಯ ನೋಟ ಬೀರಿದೆ !  ಅಂತೂ  ಅವತ್ತು ರಾತ್ರಿಯೆಲ್ಲಾ   ನನಗೆ ನಮ್ಮ ಹೈಟೆಕ್ ಅಡುಗೆಮನೆಯಲ್ಲಿ  ಕ್ಯಾಮೆರಾ ಮುಂದೆ ನಿಂತು  ಅಡುಗೆ ಮಾಡುತ್ತಿವಂತೆಯೇ  ಕನಸು .!  ಶೀಘ್ರದಲ್ಲೇ ನಮ್ಮ ರಾಜ  ನನ್ನ ಕನಸನ್ನು  ಸಾಕಾರ ಗೊಳಿಸುತ್ತಾನೆ   ಅನ್ನುವ  ನಂಬಿಕೆಯೂ  ನನಗಿದೆ ! ಏನಂತೀರಾ ?

ಸಖಿ  ಪತ್ರಿಕೆಯಲ್ಲಿ ಬಂದ ಲಘು ಹಾಸ್ಯ ಲೇಖನ 
===============================@@@@@@@@@@@@@@===============================
ಆರತಿ ಘಟಿಕಾರ್
ದುಬೈ

11 comments :

  1. ನೆಟ್ ರಾಜನ ಆಡಳಿತದ ವೈಖರಿಯಲ್ಲಿ ಪ್ರಜಾಪರಮುಖರಿಗಿಂತ ಅರಮನೆಯ ರಾಜಮಾತಾ. ರಾಜಮಹಾಮಾತಾ ಗೇ ಹೆಚ್ಚು ಅನುಕೂಲ ಆಯ್ತು ಅನಿಸುತ್ತೆ...ಅಂತೂ ಗೂಗಲ್ ಒಂದು ಕೆಲ್ಸ ಮಾತ್ರ ಮಾಡಲಾರದು ಅನ್ನೋದು ಖಾತ್ರಿಯಾಯಿತು...
    ನಿಮ್ಮ ಮನೆಯ ಕುಕರ್ ನ ಸೀಟಿ-ತೂಕ....!!!
    ಬಹಳ ಚನ್ನಾಗಿದೆ ಲೇಖನ/ಪ್ರಹಸನ ಆರತಿ.

    ReplyDelete
  2. ಒಮ್ಮೆ ನನ್ನ ಕ್ಯಾಬ್ ಡ್ರೈವರ್ ..."ಸರ್ ಅದೇನೋ ಗೂಗಲ್ ಅಂತ ಇದೆಯಲ್ಲ ಅದರಲ್ಲಿ ಎಲ್ಲಾ ಸಿಗುತ್ತೆ ಅಂತ ಹೇಳ್ತಾರೆ ಹೌದಾ ಸರ್?" ಅಂತ ಕೇಳಿದಾಗ "ಹೌದು.. ಅಪ್ಪ ಅಮ್ಮನನ್ನು ಬಿಟ್ಟು ಮಿಕ್ಕೆಲ್ಲ ಸಿಗುತ್ತೆ ಅಂದೇ" ಇವಾಗ ಅದಕ್ಕೆ ಕೆಲವು ಇತರೆ ಪರಿಕರಗಳನ್ನು ಸೇರಿಸಬೇಕು. ನಗೆ ಉಕ್ಕಿಸುತ್ತಲೇ ನಾವು ಹೇಗೆ ನಮ್ಮ ಜೀವನದಲ್ಲಿ ಒಂದು ಸಂಕೋಲೆಯಲ್ಲಿ ಬಂಧಿತರಾಗುತಿದ್ದೇವೆ ಎನ್ನುವುದನ್ನು ಹಾಸ್ಯಮಯವಾಗಿ ಬರೆದಿದ್ದೀರ. ಇಷ್ಟವಾಯಿತು ಬರಹ.

    ReplyDelete
  3. ಅಡುಗೆ ಮನೆಯಲ್ಲಿ cctv ಯೇ, ಭೋ ಬುಧ್ಧಿವಂತ! ಅದೇನೋ ಹೇಳ್ತಾರಲ್ಲ 'ಅಂಚೆ ಮೂಲಕ ಕರಾಟೆ' ಅಂತ ಹಂಗಾಯ್ತು ನಮ್ಮ ರಾಜನ ಐಡಿಯಾಗಳು. ಹ್ಹಹ್ಹಹ್ಹ...

    ReplyDelete
  4. dhanyavaadagalu azad avare :) namma maneya cooker seeti hudakaliike google ge aagilla , nijakku ade bejaaru nodi . :) nanna lekhana odi mecchiddakkaki dhanayvaadaglu

    ReplyDelete
  5. howdu nodi mooraneya aayama , adhunika gadjet lokadalli makkaloo teera internet , haagu tech saavy aagtha iddare ansatte alwa :) shrikant manjunath avare nanna blaagige bandu lekhana mecchiddakkagi tamage hrupoorvaka dhanyavaadagalu .

    ReplyDelete
  6. badri avare nanna kalpaneya kelavu haasyada tunukugalu nimage nage taresiddare nanagoo khushi .nimma protsaahakke mattomme dhanyavaadagalu . nanna google kannada tranasalater wrk aaghta illa . so ella englishnalle . :)

    ReplyDelete
  7. ಹೌದು, ಮೂರು ನಾಲ್ಕು ವರ್ಷದ ಮಕ್ಕಳು ಯುಟ್ಯೂಬು, ಡೌನ್ಲೋಡು ಅಂತ ಮಾತಾಡ್ತಾರೆ
    ಸರ್ವಂ ಗಣಕ ಮಯಂ (ಮಾಯಂ)

    ReplyDelete
  8. ವಾಸ್ತವತೆಯ ಸಮಸ್ಯೆಗಳನ್ನಿಟ್ಟು ಕೊಂಡು ಚೆಂದದ ಸಾಲುಗಳಿಂದ ಅವಕ್ಕೆ ರೆಕ್ಕೆ ಪುಕ್ಕ ಹಚ್ಚಿ, ಬಣ್ಣ ಬಣ್ಣದ ಕನಸುಗಳ ತುಂಬಿ ರಸಮಯ ಕ್ಷಣಗಳಿಗೂ ಹಾಸ್ಯದ ಲೇಪನದ ಮೆರುಗಿನಿಂದ ಹಾರಿ ಬಿಡುತ್ತಿದ್ದ ಕವನಗಳ ಹಕ್ಕಿ, ಎಲ್ಲರ ಹೃದಯದೊಳಗೂ ಸ್ನೇಹದ ಗೂಡು ಕಟ್ಟಿ ಆತ್ಮೀಯರನ್ನಾಗಿಸಿದ್ದು ನಿಮ್ಮ ಬರವಣಿಗೆಯ ಶೈಲಿ.ಈಗ ತಾಂತ್ರಿಕ ವಿಷಯಗಳನ್ನಿಟ್ಟುಕೊಂಡು ವಿಮರ್ಶಿಸುವಂತ ಕಥಾ ರಸಧಾರೆಯನ್ನು ನಗುವಿನ ಕಚಗುಳಿಯನಿಟ್ಟು ಎಲ್ಲರೂ ಮನ ಮುಟ್ಟುವಂತೆ ಬರೆದು ನಿರೂಪಿಸಿದ್ದೀರಿ ಆರತಿಯವರೇ, ಮತ್ತಷ್ಟು ನಿಮ್ಮಿಂದ ವೈವಿದ್ಯಮಯ ಲೇಖನಗಳು ಬರುತ್ತಿರಲಿ, ಶುಭವಾಗಲಿ.

    ReplyDelete
  9. ಸ್ವರ್ಣ ಅವರೇ ಹೌದು ಈಗಿನ ಮಕ್ಕಳು ನಮಗಿಂತಾ ಹತ್ತು ಹೆಜ್ಜೆ ಮುಂದೆ ಇರುತ್ತಾರೆ . ನನ್ನ ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು .

    ಶಿವಚೆನ್ನ ನಿಮ್ಮ ಸುಂದರ ಅನಿಸಿಕೆಗಳು ಓದಿ ಸಂತಸ ವಾಯಿತು ,ನಿಮ್ಮ ಮೆಚ್ಚುಗೆ ಹಾಗು ಸ್ಪೂರ್ತಿಯ ನುಡಿಗಳಿಗೆ ನಾ ಅಭಾರಿ :)

    ReplyDelete
  10. Like it.
    ವಿಷಯಾ ಏನಪ್ಪಾ ಅಂತಂದ್ರೆ, ಬೆಡ್ ರೂಮ್ನಲ್ಲಿ ಹೆಗ್ಣ ಬಂದ್ರೆ ಇಂಟರ್ನೆಟ್ ಲಿ ದೊಣ್ಣೆ ಹುಡುಕು, ಲೈಫು ಇಷ್ಟೇನೆ
    - ಯೋಗರಾಜ್ ಭಟ್ಟರ ಸಾಲುಗಳು ನೆನಪಾದವು

    ReplyDelete
  11. howdu tantragnyaanada naagalotadalli saamaanya gnyaana ello kaledu hogtha idya anisbidutte :)

    ReplyDelete