Tuesday, June 12, 2012

ಭಾವದ ಹಕ್ಕಿ


 ಕೊಕ್ಕು  ಚಾಚಿ , ಮನವ ಮೀಟಿ
ಮಾರ್ದನಿಸಿ ಗೆಜ್ಜೆ ನಾದದಲಿ  
ಲೋಕ  ಮರೆತ ತನ್ಮಯಕೆ 
ರೆಕ್ಕೆ ಬಿಚ್ಚಿದೆ ಬಣ್ಣ  ಚಿತ್ತಾರದಲಿ !

ಎದೆಯ ಕೋಣೆಗೆ ಹೆಣೆದ ಕಥೆ
ಬೆಚ್ಚನೆ ಗೂಡಿನ ಗರ್ಭದಲಿ   
ಅನಂತದುಸಿರಿನ ಮೌನಗೀತೆಗೆ
ಮೂಕ ಹಕ್ಕಿಯ ಮುಕ್ತಿ ಯೋಗಕೆ  
ಅಂತರಗಂಗೆಯ ಓಘದಲಿ   !

ನೆನಪನಳಿಸಿ..,ಒಲವ ಮೆರೆಸಿ
ಆಲಾಪದ ಮಂಜುಳ ನಾದದಲಿ
ಅಂತರಂಗದೇಕಾಂತದಲಿ  
ಮುಗಿಲೆತ್ತರದ ಭಾವಯಾನಕೆ
ಹೊಂಗನಸಿನ ಹೊಸ ಬೆಳಕಿನಲಿ
ಬತ್ತದ ಸೊಬಗಿದೆ ಸೃಷ್ಟಿಯಲಿ !

  
ನನ್ನೊಳು ನಾ,ನನ್ನೊಳು ನೀ,
ಮಾಧುರ್ಯ ಬೆರೆತ ಇಂಪಿನಲಿ 
ನಲಿದಿದೆ ಧನ್ಯದ ಭಾವದಲಿ
ಅಕ್ಕರೆಯಿಂದೆಬ್ಬಿಸಿ ಕರೆವ ಚಿಲಿಪಿಲಿ
ಚಿಗುರಿದೆ ಕಾವ್ಯದ ತೃಪ್ತಿಯಲಿ   !

ಬಾಳ ಪಥದಿ, ಭಾವ ತತ್ವಕೆ 
ಬಂಧನ ಮೀರಲಿ ,ನೋವನು ತಡುವಲಿ 
ಮನವನು ತಣಿಸಲಿ ನೆರಳಾಗಿ
ಕೂಡಿ ಆಡುವ ಗೆಣೆಕಾರನಾಗಲಿ  
ಮರೆಯಿಲ್ಲದೆ ಸಾಗುತಾ ಗಮ್ಯದಲಿ
ಭಾವದ ಹಕ್ಕಿ ತಾ ಮುಗಿಲಿನಲಿ !  

8 comments :

 1. ಮನಸಿನಾಳಕ್ಕೆ ಕೊಂಡೋಯ್ಯುವ ರಸವತ್ತಾದ ಭಾವಧಾರೆ ಈ ಕವಿತೆ.ಒಲವು ಚೆಲುವು ಮಿಳಿತಗೊಂಡು ಹೊಸ ಭಾಷ್ಯ ಬರೆದ ಭಾವದ ಹಕ್ಕಿಯ ಕರುಳಿನ ಕರೆಯು ಚಿತ್ತಾಕರ್ಷಕವಾಗಿದ್ದು ಅನುಕರಣೀಯವಾಗಿದೆ.ಸರ್ವಕಾಲಕ್ಕೂ ಅನ್ವಯವಾಗುವ ಮುದ್ದಾದ ಆಶಯ ಹೊತ್ತ ಕವಿತೆ.ಶುಭವಾಗಲಿ.

  ReplyDelete
 2. vandanegalu somshekhar ..nimma amoolya aniseke bahala isthvaayithu !

  ReplyDelete
 3. ಲಯ ಕಂಡುಕೊಂಡ ಕವಿತೆ,ಭಾವದ ಹಕ್ಕಿ ಎಂದು ಹೇಳ ಹೊರಟಾಗ ಭಾವಗೀತೆಯ೦ತೆ ತೇಲಿಸುವುದು. ಕೊಕ್ಕು ಚಾಚಿ ಮಾನವ ಮೀಟಿ ಅಂತ ಕಾವ್ಯದ ಲಯ ಪ್ರಾರಂಭದ ಹಂತದ ನಡೆ ಅಂತ್ಯದವರೆಗೆ ಸಾಗಿದೆ. ಭಾವಗೀತೆ ಹೀಗೆ ಬರಬೇಕು. ಇನ್ನಷ್ಟು ಭಾವ ಸ್ಪೋಟಗೊಳ್ಳಬೇಕು. ಮತ್ತೆ ಪದಗಳು ಸಮರ್ಥವಾಗಿ ಬಳಕೆಯಾಗಬೇಕು. ಆಗ ಕಾವ್ಯ ಸಾರ್ವಕಾಲಿಕವಾಗುವುದು. ವಂದನೆಗಳು.

  ReplyDelete
 4. ರೆಕ್ಕೆ ಬಿಚ್ಛಿ ಹಾರುವ ಭಾವದ ಹಕ್ಕಿಗೆ ಹೀಗೆ ಕವಿತೆಯೊಳಗೆ ಕಾಳು ಹಾಕಿದ್ದು ಖುಷಿ ಕೊಟ್ಟಿತು. ಭಾವಗೀತೆ ಇದು.

  ReplyDelete
 5. ನಿಮ್ಮ ಮೊದಲ ಶಕ್ತಿಯೇ ಸರಾಗವಾಗಿ ಓದಿಸಿಕೊಳ್ಳ ಬಲ್ಲ ಕಾವ್ಯ ಸೃಷ್ಟಿ. ನೀವು ತುಂಬುವ ಹೂರಣದಲ್ಲೂ ಪ್ರಾಮಾಣಿಕತೆ ಮತ್ತು ಶಿಸ್ತು ಕಾಣುತ್ತದೆ.

  ಮತ್ತೊಂದು ಭಾವ ತೀವ್ರ ಕವನಕ್ಕಾಗಿ ಅಭಿನಂದನೆಗಳು.

  ReplyDelete
 6. ಮಾನ್ಯ ಪುಷ್ಪರಾಜ್ ,ರವಿ ,ಬದರಿನಾಥ ಅವರೆ ...ಭಾವದ ಹಕ್ಕಿಗೆ ನೀವು ಕೊಟ್ಟ ಅಮೂಲ್ಯ ಅನಿಸಿಕೆಗೆ ಹೃತ್ಪೂರ್ವಕ ಧನ್ಯವಾದಗಳು .ರವಿ ಅವರು ಅಭಿಪ್ರಾಯಪಟ್ಟಂತೆ ಇನ್ನಸ್ತು ಭಾವಗಳ ವೈಭವ ಮೆರಯಬೇಕು ,
  ಪದಗಳು ದಂಡು ಸರಾಗವಾಗಿ ಚಲಿಸಬೇಕು ..ಈ ಅಂಶಗಳನ್ನು ಕಟ್ಟಿಕೊಳ್ಳುತಿದ್ದೇನೆ .ನಿಮ್ಮ ಅನಿಸಿಕೆಗಳಿಗೆ ಬದ್ದಳಾಗಿದ್ದೇನೆ .ಪ್ರೋತ್ಸಾಹ ಹೇಗೆ ಇರಲಿ ...

  ReplyDelete
 7. ಮನವೆಂಬ ಹಕ್ಕಿಯ ನೂರಾರು ಬಣ್ಣಗಳು, ಭಾವಗಳು ಬಂಧಗಳು ಮತ್ತು ಸಂಬಂಧಗಳ ಸೂಕ್ಷ್ಮ ಮತ್ತು ವಿಸ್ತಾರವಾದ ವರ್ಣನೆ, ಮನದ ಆಶಯ, ಆಶಯದ ಹಿಂದಿರುವ ಧನ್ಯತೆಯ ಭಾವ ಎಲ್ಲವೂ ಸುಂದರವಾಗಿ ಮೂಡಿಬಂದಿದೆ ನಿಮ್ಮ ಕವನದಲ್ಲಿ. ಅಷ್ಟೇ ಅಲ್ಲ, ಒಂದು ಸುಂದರ ಭಾವಕ್ಕೆ ಪರತತ್ವದ ಲೇಪನವೂ ಸುಂದರವಾಗಿದೆ. ನಿಮ್ಮ ಹೃದಯ ಬಹಳ ಸುಂದರ, ಬಾಳ ನಿಕೃಷ್ಟ ಘೋರತೆಗಳು ಅದನ್ನು ತಟ್ಟದಿರಲಿ, ನಿರ್ಮಲ ತಟಾಕವನ್ನು ಕದಡದಿರಲಿ.

  ReplyDelete
 8. ananta dhanyavadagalau tirumalai sir ! nimma amoolya anisikegalaige .

  ReplyDelete