Showing posts with label ಕವನಗಳು. Show all posts
Showing posts with label ಕವನಗಳು. Show all posts

Sunday, May 10, 2015

ಕಡಲ ಹಾಡು

ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ  ಮಲಗಿದೆ  ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು .

ಹೆಜ್ಜೆಗಳು ನೂರಾರು ಸುತ್ತ ಮುತ್ತಲೂ
ಇಣುಕಿ ನೋಡಿವೆ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು  , ತಣೆಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದಾ  ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಎಳೆಯಾಗಿ ಕಟ್ಟಿಟ್ಟ ನೂಲು .

ಹರವಿಕೊಂಡ  ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ  ಕಡಲ ದಿವ್ಯ ಮೌನ ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ   ಲೋಕವೇ  ಮರುಳು
ಹಪಾಹಪಿ ಬಾಳ  ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು - ಬೀಳು ?

ಬೆಳಗುತ್ತಿರುವ ಸಂಜೆ ಸೂರ್ಯನ  ಕದಲಾರತಿ
ಹಾಲ್ಗೆನ್ನೆ  ಚಂದಿರನ  ಮತ್ತೆ ಕಾಣುವಾ ಸರತಿ
ಅವ್ಯಕ್ತ  ಭಾವಸ್ಪುರಣದಾರೋಹ  ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಹೆಪ್ಪುಗಟ್ಟಿದೆದೆಯಲಿ ಕರಗುತಿದೆ  ಪ್ರಶಾಂತ ಕಡಲು .




Saturday, April 4, 2015

ಹಗುರಾಗಬೇಕಿದೆ



ಸರಿಯುತಿವೆ  ದಿನಗಳು
ಚಿಂತೆ ಒತ್ತಡಗಳ
ಹೊತ್ತ
ತೇರಿನಂತೆ  ಕ್ಷಣಗಳು
ಅಮೆಲೇರಿದಂತೆ
ಸಾಗಿವೆ ಭಾರದ  ಹೆಜ್ಜೆಗಳು
ಗುಟುಕು  ಪ್ರೀತಿಯಲೇ
ನೀಗುತಿದೆ  ಹಸಿವು
ಬೀಗುತಿದೆ ಮನವು
ಗೊಂಚಲು ಗೊಂಚಲಾಗಿ
 ಅರಳಿ  ನಿಂತರೂ
ಕೈಗೆಟುಕಲಾರಂತಿದೆ  
ಜೀವನ  ಸೊಬಗು
ಯಾಂತ್ರಿಕತೆಯ  ಸೆರಗಿನಲ್ಲಿ
ಬಚ್ಚಿಟ್ಟ  ಸುಂದರ  ಬೆರಗು
ಕಾಣೆಯಾಗುತಿಹುದೇಕೆ
ಅಪರೂಪವಾಯಿತೇಕೆ
ನಮ್ಮ  ನಿಮ್ಮೆಲ್ಲರಿಗೂ
ತುಟಿ ಮೊಗ್ಗ  ಬಿರಿವ
ಮನವರಳುವ
ಚಿಂತೆ  ಮರೆಸುವ

ಒಂದೇ ಒಂದು  ‘ ನಗು  ‘ !

Friday, October 3, 2014

ಕಾಲ

ಕಾಲ ಎಲ್ಲರಿಗೂ ಸಮಾನವಲ್ಲ  
ಕಾಲದ ಹೊಳೆಯಲಿ
ಮೀಯುವರೆಲ್ಲಾ , ಅಲ್ಲಲ್ಲಿ
ನಿಂತೆ ನಿಲ್ಲುವರು 
ನೋವು ಮಾಗಲೋ , ನೆನಪನಳಿಸಲೋ
ಹೊಸತನದ ಹೂವರಳಲು  .

ಆಗಾಗ ಮತ್ತೆದೇ ಕಾಲದ  ಬಯಕೆ    
ಕಾಲದ  ಸಾಲಕ್ಕೂ   ಹರಕೆ    
ಸಂಭ್ರಮ ಸಿರಿ ಘಳಿಗೆ ಬಾಚಲು
ಅರಿವಿನ ಗರಿ ಬಿಚ್ಚಲು
ಜಿಪುಣ ಕಾಲ , ನೀಡದು ಅರೆಘಳಿಗೆ
ಕಾಲದೋಟಕೆ ನಮ್ಮ ಹತಾಶ ನಡಿಗೆ.

ಆಗ ಒಂಟಿ ಕಾಲಲಿ
ಕುಂಟೆಬಿಲ್ಲೆ ಆಡಿದ ಕಾಲವೊಂದಿತ್ತು
ಕೇಕೆಹಾಕಿ ಸೋಲಿಸಲು , ಸವರಲು
ಈಗ ಬರೆ ಚುಚ್ಚುವ  ಗಂಟೆಗಳ ಮುಳ್ಳು .
ಕಾಲದ  ವ್ಯವಹಾರವಿದು  ಅಲ್ಲ ಸುಳ್ಳು
ಕ್ಷಣ ಕಾಲದ ಹೊನ್ನ  ಸರಕುಗಳಿವು
ಕೊಂಡು ಕೂಡಿಡುವ ಹಾಗಿಲ್ಲ !

ಪಂಥಾಹ್ವಾನಕೆ  ನಮ್ಮೆಲ್ಲರನ  ದೂಡಿ
ಮುಗ್ಗರಿಸಿ  ಬಿದ್ದವರ ನೋಡಿ ,ಇವ
ನಗುತಿರುವ , ತನ್ನ ಹುರಿ ಮೀಸೆಯಡಿ
ಗೆಣೆಕಾರನಾದರೂ ನಿಂತು ತಬ್ಬುವ
 ಹಾಗಿಲ್ಲ , ಶರವೇಗದ ಸರದಾರನಿವ
ಶತಮಾನಗಳ ತಿಂದು ತೇಗಿ ,ಓಡುತ್ತಿರುವ
ಕಾಲದೋಟದಲಿ ನನ್ನ ಗೊಂದಲ
ದ   ಹೆಜ್ಜೆ  ಗತಿಗೆ  ತಾಳ ಹಾಕಲಾರದವ  .

Sunday, June 15, 2014

ಅಪ್ಪ ಹೀಗೇನೆ ...

ಅಪ್ಪ' ನ ದಿನಾಚರಣೆ ಯಂದು  , ಕಡಲಾಳದ  ಅಪ್ಪನ ಪ್ರೀತಿ ಯನ್ನು ಕಟ್ಟಿಕೊಳ್ಳುತ್ತಾ ಅಪ್ಪನಿಗಾಗಿ ಒಂದು ಕವನ . .

ಆಗಾಗ ಕೋಪ ಮುನಿಸು
ಮರುಕ್ಷಣವೇ ಕರಗುವ
ಅಪ್ಪನ ಬೆಣ್ಣೆ ಮನಸು ;
ತಿಕ್ಕಾ ಟದ ಬಾಳ ಬವಣೆ
ಬಿರುಗಾಳಿ ಸಿಡಿಲು ಮಳೆ
ಬರಲಿ ಏನೇ , ಅವನದೇ
ಸುಭದ್ರ ಕೋಟೆ ರಕ್ಷಣೆ .

ಎದೆಯ ತುಂಬೆಲ್ಲಾ
ಚಟಪಟಾಯಿಸುವ
ಭಾರ್ಯೆಯ ಚಿಟ್ಟೆ ಕನಸು
ಜಿಗಿದು ಗದ್ದಲವೆಬ್ಬಿಸುವ
ಮಕ್ಕಳ ಆಸೆ ಮನಸು
ನೀಗಿಸಿ , ಅರಳಿಸಿ ಸಾಗಿದ್ದಾನೆ
ಮುಚ್ಚಿಟ್ಟು ತನ್ನ ಕನಸು .

ಸಾಗರದ ಪ್ರೀತಿ ,ಅವನದೇ
ಒಂದು ರೀತಿ
ಒರಟು ಕೈ,ತುತ್ತಿನಲ್ಲೂ
ಹಾಯೆನಿಸುವ ಕಕ್ಕುಲಾತಿ
ಕಥೆ ಹೇಳುವ ಒಂದೊಂದು
ಬೆವರ ಹನಿ , ಅನುಭವ ನೀತಿ .

ನಿಮಗ್ನ ಮನಸು ,ಬಾಳ ನಿರುಕಿಸು
ವ, ಹಾದಿಯಲಿ ಮಾಗುವ ವಯಸು
ಬೇಡುವುದಿಷ್ಟೇ ...
ಇರಳು ಬೆಳಕಿನ ಜಂಜಾಟದಲಿ
ಹೊಯ್ದಾಡುವ ಭವ ಸಾಗರದಲಿ
ಅವನಿಗಿರಲಿ ಸಂತಸ , ಶಾಂತಿ
ಕೆಲವು ತಾಸು .

Friday, May 9, 2014

ಕರಗುವ ಕಡಲು




ಕರಗುವ ಕಡಲು 
================
ತೂಗುವ ತಂಗಾಳಿ ,ಮುಸ್ಸಂಜೆಯ ಹೊನಲು
ತಂಪಾಗಿ ಮಲಗಿದೆ ಬೆಚ್ಚನೆಯ ಮರಳು
ತನ್ನದೇ ಗುಂಗಿನಲಿ ಅವಿಶ್ರಾಂತದಲೆಗಳು
ನಾನಲ್ಲಿ ಮೌನ ಸೇತುವೆ , ಕುದಿವ ಒಡಲು.

ಹೆಜ್ಜೆಗಳು ನೂರಾರು ಸುತ್ತಮುತ್ತಲೂ
ಇಣುಕುವ ಬೆಳ್ಳಿ ಮೋಡಗಳ ಸಾಲು
ಅಲೆಗಳದೆ ಬೆರಗು ತಣಿಯುವವರೆಗೂ
ಹಾಸಿ ಹೊದ್ದಂತೆ ವಿಸ್ಮಯದ ಸೆರಗು
ತುಟಿ ಬಿಚ್ಚದ ಕಡಲಿಗೆ ನನ್ನವೇ ಕಥೆಗಳು
ಬಿಚ್ಚಿಕೊಂಡಂತೆ ಎಳೆಯೆಳೆಯಾಗಿ ಕಟ್ಟಿಟ್ಟ ನೂಲು .

ಹರವಿಕೊಂಡ ರಾಶಿ ಶಂಖಗಳಿಗೊಂದಿಷ್ಟು
ದಕ್ಕೀತೆ ಕಡಲ  ದಿವ್ಯ  ಮೌನ  ?
ಅದಕ್ಕೂ ಕಿವಿಯಾಗುವ ಮರಳ ಕಣ
ಮುತ್ತಿನಾಸೆಗಿಲ್ಲಿ ಲೋಕವೇ ಮರುಳು
ಹಪಾಹಪಿ  ಬಾಳ  ಲೋಹದ ಸರಳು
ತೆರೆಗಳಾಟವಿದು ಯಾರಿಗಿಲ್ಲ ಏಳು – ಬೀಳು ?

ದಣಿದ ಭುವಿಗೊಮ್ಮೆ ಸೂರ್ಯನಾ ಕದಲಾರತಿ
ಹಾಲ್ಗೆನ್ನೆ  ಚಂದಿರನ ಮತ್ತೆ  ಕಾಣುವಾ ಸರತಿ
ಅವ್ಯಕ್ತ ಭಾವಸ್ಪುರಣದಾರೋಹ ನನ್ನಲೂ
ಮೀರುತಾ , ಏಕತಾನತೆಯ ಬಂಜೆ ಬಯಲು
ಕಡಲಗಾನದಿಂಪು ನನ್ನುಸಿರ ಬೆರೆಯಲು
ಕರಗುತ್ತಿದೆ ಹೆಪ್ಪುಗಟ್ಟಿದೆದೆಯಲಿ  ಪ್ರಶಾಂತ ಕಡಲು .  

Friday, December 27, 2013

ಸಾಗುತಿಹುದು ಎಲ್ಲೋ ಏನೋ



ಸಾಗುತಿಹುದು ಎಲ್ಲೋ ಏನೋ 
ಹಿಂದುರಿಗಿ ನೋಡದ ಬದುಕು 
ಮನ ಹುಡುಕುತಿರೆ ಇಂದಿಗೂ 
ಸಿರಿ ಅರ್ಥಗಳ ಬೆಳಕು 

ಬಯಕೆ ಸಾಗರ ವಿಶಾಲ ಹರಿವು 
ಮೋಹದಾಚೆಗಿದೆ ತೆನೆಯು 
ಹಚ್ಚಿಟ್ಟ ಒಲವ ಕಾಣದುದಕೆ
ಬರಿದಾಗಿದೆ ಬಿರಿದೆದೆಯು 

ಮನಸು ಮನಸುಗಳ ದೂರ ಯಾನಕೆ 
ಕೊನೆಯಾಗಲಿ ಅಹಮಿನ ನೆರವು 
ಹೊಂದಿಕೆಯ ಹೊದಿಕೆ ಜಾರುತಲಿರೆ 
ಸುಪ್ಪತ್ತಿಗೆಯಲೂ ಹೊರಳಾಡುತಿದೆ ಕೊರಗು 

ಕ್ಷಮೆಯ ಭಾವವಿದೆ  ಹೊಸಿಲ ಬಳಿ
ಬರಲಿಲ್ಲವೇಕೋ ಮನೆ ಒಳಗೂ 
ಮೌನದೆದೆಯ ಮೀಟಿ ನಗಲಿ 
ಮುಗ್ಧ ಮಗುವ ಹೂ ನಗೆಯು 

ಹಸಿರು ಪ್ರೀತಿ ಸ್ನೇಹ ಮರುಕ 
ತೇರನ್ನೆಳೆಯಲಿ ಬದುಕು 
ಸಾಲು ಹಣತೆ ದೀಪ ಬೆಳಗಲಿ 
ಭವ ಬಂಧನದಾ ಎದೆಗೂ  .

Saturday, September 14, 2013

ಅಂತರಾಳದ ದನಿಗಳು









ಉಸಿರನೊತ್ತಿ ಗೋಡೆಗೆ ಮೆಲ್ಲನೆ
ಪಿಸುನುಡಿಗಳ ಕಾಡುವ ದಂಡು
ಅಲ್ಲೇ ಕಾರ್ಗತ್ತಲ ಕಿರು ಓಣಿ
ಬೆಳಕ ಚೆಲ್ಲುತ್ತಾ , ಆವರಿಸುತ್ತಾ
ದೂರದೂರಕೂ ಚದುರಿದ ದ್ವನಿಗಳು

ಮನದ ನಿಲ್ಲದ ಹಾವು –ಏಣಿ ಆಟಕೆ
ಅಳಕ್ಕೂ ಬಗೆದು ಕೊರೆವ ಕೀಟಗಳು
ಬೇಗುದಿಗಳ ಮಂಥನದ ಸೀಳು ನೋಟಕೆ
ಎದೆಯಾಗಸದ ಅಹಮಿನ ಹಾರಾಟಕೆ
ತಿದ್ದಿ ತೀಡಿ ಮೆರವ ಒಲ್ಲದ ಪಾಠಗಳು .

ಪ್ರತಿದ್ವನಿಗಳ ಅಲೆ , ಎಡವುತ್ತಲೇ ಅಪ್ಪಳಸಿ
ಅರಿವಿಲ್ಲದ ಹೊಸ ರಾಗ , ಹೃದಯ ತೀರಕೆ.
ನಿಂತಲ್ಲೇ ಚಿಗುರಿ , ಹಬ್ಬಿದ ಎತ್ತರ ಬಳ್ಳಿಗಳು
ಬಣ್ಣವಿಲ್ಲದ ಮುಖಗಳ ನೂರಾರು ಕೂಗು , ಕೇಕೆ
ಮುಚ್ಚುಮರೆಯಿಲ್ಲದ ಆಪ್ತ ದನಿಗಳು ,ಅಂತರಾಳಕೆ

Saturday, November 24, 2012

ಕಡಲ ತೀರದ ಸಂಜೆ



ಬಿಸಿಲ ಬೆವರೊರೆಸಿ  ಕಾದು, ನಿರೀಕ್ಷೆಯಲೇ
ತಣ್ಣನೆ ಕುಳಿತ   ಮರಳುಹಾಸಿನ ಸ್ವಾಗತ
ತೂಗುವ ತಂಗಾಳಿ ,ನೆರಳು -ಬೆಳಕಿನಾಟ  ;
ಬಣ್ಣ  ಚಿತ್ತಾರಗಳನರಳಿಸಿ ,ಮತ್ತೇರಿಸಿ
ಕೆಂಪಿನಾಗಸ  ಸಂದ್ಯಾರಾಗವೇ ಮತ್ತೆ ತಣಿಸಿ ..

ಅಲೆಗಳ ಮೊರೆತಕೆ  , ಮೌನ ಮುರಿದಿದೆ  ಕಡಲು
ಮರಳುಹಾದಿಯ  ತುಂಬೆಲ್ಲಾ  ಹೆಜ್ಜೆಗಳ ಮಧುರಭಾವ
ನಿನ್ನ ಬೆಚ್ಚನೆಯ ಕೈ ಹಿಡಿದು ನಡೆವಾಗ ....
ಪ್ರೇಮದಲೆಗಳ ಪುಳಕಕೆ   ಮಿಂದ ಹೃದಯಗಳು   
ನೀನೊತ್ತಿ  ಕೊಟ್ಟ ಮುತ್ತು  ಇಂದೂ
ಹೊಳಪಾಗಿ  ,ಕಡಲಾಳದ  ಖಜಾನೆಗೆ .

ಮೆಲ್ಲನೆ ಅಪ್ಪಲು ಕಾಯುವ  ಕತ್ತಲ   ಬಯಕೆಗೆ  
ನಗುವ ಚಂದಿರ  ,ಬೆರೆತು  ಇಳಿಯಬೇಕಿದೆ ಇನ್ನೂ
ಬದುಕಿನ ನಾಳೆಗೆ , ಅಲೆಗಳ್ಹೊತ್ತ   ಬಾಳ ನೌಕೆ
ತಂಗಾಳಿಯ  ಒಲೈಕೆಗೂ  ಹುಸಿಮುನಿದ   ತೆಂಗು ಸಿರಿ
ಸಾಕು ,ಬಿಚ್ಚು ಚಿಪ್ಪಿನೆದೆಯ ಕಾಣು ಪ್ರೀತಿ ಹೊಳಪಸಿರಿ  
ಕಾಣೆ ,ಕಾಲ ಮುಡಿಗೇರಿಸುವ ಹಂಬಲದ ಹೂವುಗಳೆಷ್ಟೂ
ಅರ್ಥಯಾತ್ರೆಗೆ  ಕಾಡುವ ದ್ವಂದ್ವಗಳ ಬಂಡೆಗಳೆಷ್ಟೋ
ಜೀವ ಜಾಲವನ್ಹೊತ್ತು  ನಿಂತ  ಕಡಲಾಗಬೇಕು  
ಮೇಲ್ನೋಡಲು .....
ಮತ್ತೆ ಒದ್ದೆ ಮೋಡಗಳ ಹರವಿ ಕೂತ  ಬಾನು
ದೂರ ತೀರಕೂ ಸಾಗಬೇಕಿದೆ ನಾನು – ನೀನು .

Friday, September 21, 2012

ಕವಿತೆ ಕರೆಯಲಿ


ನವಿರು  ಭಾವಗಳ ಹೂ ಹಾಸು
ಪದ ಪುಂಜಗಳ ನಕ್ಷತ್ರ  ಮಿನಗು
ಸ್ವಗತ –ಸ್ವಾಗತವ ಕೂಡಿ ಹಾಡಿ
ಪ್ರತಿಮೆಗಳು ಮುತ್ತಿಕ್ಕಿ  ಗಗನವ
ಮಳೆಬಿಲ್ಲಿನೋಕುಳಿಯ  ರಂಗು  ಚೆಲ್ಲುತಾ  
ಕವಿತೆ ಕರೆಯಲಿ .

ಎದೆಯಾಳವ  ಬಗೆದು  ತಡುಕಿ
ಅಪ್ಪಿ  ಮನವ,  ಹನಿ ಮಳೆಗರಿಸಿ
ಉಕ್ಕುವ  ಅಲೆಗಳ  ನೋವ ಕಥೆ
ಒದ್ದೆ  ದಡದಂಚಿಗೆ  , ನೆನಪ ಮತ್ತೆ
ತಡವುತಾ,   ತಂಪನೀವುತಾ  ...

ಕವಿತೆ ಕರೆಯಲಿ .
ಒಲವ ಬನಸಿರಿ , ಚಿಟ್ಟೆ  ಹೂಗಳ
ರಂಗೋಲಿ , ಪ್ರೇಮಾಂಕುರವೇ  ಕೈಬೀಸಿ
ಚಿಗುರಿಸಿ ಸುಪ್ತ ಮನಗಳ ಕನಸ
ಹರ್ಷ ದೀಪ್ತಿಗೆ ತುಟಿ ಮೊಗ್ಗ ಬಿರಿದು
ಭೂರಮೆಯ  ದಣಿವಾರಿಸುತ್ತಾ ...
ಕವಿತೆ ಕರೆಯಲಿ .

ಸ್ಫೂರ್ತಿ  ಸೆಲೆಯ  ಸುಂದರ  ತಾಣ
ಹೊನ್ನ ಸಂದೇಶಗಳ  ಭಾವತರ್ಪಣ
ಹಚ್ಚಿಟ್ಟ ಹಣತೆಗಳೆಲ್ಲಾ  ಗುರಿಯ ಮುಟ್ಟಿ   
ಎದೆಯ ಹಕ್ಕಿ  ಆಗಸದ ತುಂಬೆಲ್ಲಾ
ಚಿಲಿಪಿಲಿ  ನಾದವ ಹರಿಸುತಾ ....
ಕವಿತೆ ಕರೆಯಲಿ .