ವಠಾರ ಮೀಮಾಂಸೆ
ನಮ್ಮ ಬಾಲ್ಯದ ನೆನಪುಗಳು ನಳನಳಿಸುವ ಚಿಗುರಿನಂತೆ ಸದಾ ಕಾಲ ಹಸಿರಾಗೆ ಇರುವಂತವು .ವರ್ಷಾನುಗಟ್ಟಲೆ ಇಟ್ಟರೂ ಹಳಸದೆ ಯಾವತ್ತಿಗೂ ರುಚಿಯಾದ ಘಮಘಮಿಸುವ ರಸಗವಳದ ಮೆಲಕು ಕೊಡುವಂತ ಶಕ್ತಿ ಇದಕ್ಕೆ ಮಾತ್ರಾ ಎನ್ನಬಹುದೇನೋ ! ಇನ್ನು ಆಗಿನ ಅನುಭವಗಳು ಹೊಳೆಯುವ ಮುತ್ತುಗಳಂತಿರದಿದ್ದರೂ ಮರಳ ದಂಡೆಯ ಕಪ್ಪೆ ಚಿಪ್ಪುಗಳಾದರೂ ಸರಿ, ಕಾಗದದ
ದೋಣಿಯಲ್ಲಿ ಇಂಥ ಸರಕುಗಳನಿಟ್ಟು ಕೊಂಡೆ ಮುದ ನೀಡುವ ಪಯಣ ನಮ್ಮದಾಗಬಹುದು . “ಪಟ್ಟ ಪಾಡೆಲ್ಲ ಹುಟ್ಟು ಹಾಡಾಗಲಿ” ಎಂದು ಯುಗದ ಕವಿ ಬೇಂದ್ರೆಯವರು ಹಾಡಿದಂತೆ ಆಗಿನ ಕಾಲದ ಕಷ್ಟ ಕೋಟಲೆಗಳು ,ಈಗ ಕೀಟಲೆ ಮಾಡುತ್ತಾ ರಂಜಿಸುವುದೆ ಹೆಚ್ಚು !
ನನ್ನ ಬಾಲ್ಯ ಕಾಂಡ ವಠಾರದಲ್ಲೆ ಆರಂಭವಾಗಿದ್ದು . ಮನೆ ಮಾಲಿಕರ ಕೃಪಾ ಕಟಾಕ್ಷದಿಂದ ನನ್ನ ಲಘ್ನವಾಗುವವರೆಗೂ ಅಲ್ಲೇ ಬಿಡಾರ
ಹೂಡಿದ್ದೆವು .ಹಾಗಂತ ಇದು “ಗಣೇಶನ ಮದುವೆ “ ಸಿನಿಮಾದಂತೆ ಸಾಲಕೆ ಎಂಟೋ ಹತ್ತು ಮನೆಗಳಿರುವ ವಠಾರವಲ್ಲದೆ ಒಂದು ರೀತಿ ಮಾಡರ್ನ್
ವಠಾರ ಅನ್ನಿ ! ಮೊದಲಿಗೆ ಉದ್ದನೆಯ ಕ್ರಿಕೆಟ್ ಪಿಚ್ಚು ಹೋಲುವಂತ ಕಲ್ಲಿನ ಅಂಗಳದಲ್ಲಿ ಬಲಕ್ಕೆ ತಿರುಗಿದರೆ ಆಗಿನ ಕಾಲಕ್ಕೆ ಲೇಡೀಸ್ ಕ್ಲಬ್ಬಿಗೆ ಪಟ್ಟಾಂಗ ಬಾರಿಸಲು ಹೋಗುತ್ತಿದ್ದ ಶಾಂತಮ್ಮ ,ಆಫೀಸಿನಿಂದ ಬಂದ ಬಳಿಕ ಅಡುಗೆ ಮನೆಯಲ್ಲೆ ಹೆಚ್ಚಾಗಿ
ಕಾಣಿಸಿ ಕೊಳ್ಳುತ್ತಿದ್ದ ರಂಗನಾಥ ರಾಯರು,
ನಾಲ್ಕು ಮಕ್ಕಳ ಕುಟುಂಬ .ಅವರ ಮಹಡಿಯ ಹಂಚಿನ
ಮನೆಯಲ್ಲಿ ಆಗಾಗ ನಾಟಕದಲ್ಲಿ ಅಭಿನಯಿಸುವ ಕಟ್ಟುಮಸ್ತಾದ ಆಳು ಧನಂಜಯ ರಾವ್ ತಮ್ಮ ಭರ್ಜರಿ ಮೀಸೆ ತಿರುವಿಕೊಂಡು “ ಭಲಾ ಭಲಾ ಬಲ ಬುಜಕೆ ಸಾಟಿ ಯಾರೈ ?ದುರುಳ ಕೌರವನ
ಸಮರದಿ ಮೆಟ್ಟಿ ಕುಟ್ಟಿ ಕುಟ್ಟಿ ಪುಡಿಗಟ್ಟಿ
ನೀಚನ , ಭಲಾ ಭಲಾ ಬಲ ಭುಜಕೆ ಸಾಟಿ ಯಾರೈ “ ಎಂದು ಭೀಮಾವೇಶದಲ್ಲಿ ಗಧೆ
ಕುಟ್ಟುವುದು , ರಾವಣನಂತೆ ಗಹಗಹಸಿ ನಗುವುದು ಮಾಡುತ್ತಾ ನಾಟಕದ ತಾಲೀಮು ನಡೆಸುತ್ತಿದ್ದರು .ಸದಾ
ಸ್ವಚ್ಚತಾ ಅಭಿಯಾನದಲ್ಲಿ ಮುಳುಗಿರುವ ಅವರ ಪತ್ನಿ ಗಿರಿಜ ಕನ್ನಡಿಯ ಬದಲು ತಮ್ಮನೆಯ ರೆಡ್ ಆಕ್ಸೈಡ್ ನೆಲದಲ್ಲೆ ಮುಖ ನೋಡಿಕೊಳ್ಳುತ್ತಿದ್ದರು ! ರಾವ್ ಅವರು ಸರ್ಕಲ್ಲಿನಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು,
ಅಲ್ಲಿ ಗಾಜಿನ ಬಾಟಲಿಯಿಂದ ಚಕ್ಲಿ ತೆಗೆಯುವಾಗ, ಬಾಳೆ
ಹಣ್ಣು ಮಾರುವಾಗಲೂ ಗಂಬೀರ ಸ್ವರದಲ್ಲಿ “ಎಷ್ಟು ಬೇಕಿತ್ತು ಮಾಣಿ ? ಚಕ್ಲಿ ಭಾರಿ ಗರಿಗರಿ ಉಂಟು ,
ಬಾಳೆಗೊನೆ ಈಗಷ್ಟೆ ಕಟ್ಟಿದ್ದು ಒಂದು ಡಜನ್ ಕೊಟ್ಟು ಬಿಡ್ತ್ತೇನೆ ಆದೀತಾ? “ ಎಂದು ನಾಟಕದ ಡೈಲಾಗಿನಂತೆ
ಹೇಳುತಿದ್ದದ್ದು ನೆನಪಿದೆ .ಅವರದೆ ಅಭಿನಯ ತಂಡ
ಕಟ್ಟಿಕೊಂಡು ,ಸಭೆ ಸಮಾರಂಭದಲ್ಲಿ ಜರಗುತ್ತಿದ್ದ ನಾಟಕದಲ್ಲಿ ಒಮ್ಮೊಮೆ ಭೀಮಸೇನನಾಗಿ ಮಗದೊಮ್ಮೆ ಕಂಸ ,ರಾವಣ, ಹಿರಣ್ಯಕಶಿಪು ಪಾತ್ರಗಳಲ್ಲಿ
ಮಿಂಚುತ್ತಿದ್ದರು . ಅವರ ಮನೆಗೆ ಬರುತ್ತಿದ್ದ
ಡ್ಯಾನ್ಸ್ ಮಾಸ್ಟರ್ ಮಾಧವಣ್ಣ ಓಣಿಯ ಹುಡುಗರನ್ನೆಲ್ಲ ಕಲೆಹಾಕಿ ಕಾರ್ಯಕ್ರಮ ಏರ್ಪಡಿಸುತ್ತಿದ್ದರೆ
, ನಾವೆಲ್ಲ ಚಿಳ್ಳೆ ಪಿಳ್ಳೆಗಳ ನೃತ್ಯಾಭ್ಯಾಸಕ್ಕೆ ಧನಂಜಯರಾಯರ
ವಿಶಾಲ ಪಡಸಾಲೆಯೆ ವೇದಿಕೆಯಾಗುತಿತ್ತು !
ಕ್ರಿಕೆಟ್ ಪಿಚ್ ದಾಟಿ ಅಂಗಳದಲ್ಲಿ ಮುಂದೆ ಸಾಗಿದರೆ ಮಾಸಿದ ನೀಲಿ ಬಣ್ಣದ (ಒದ್ದರೆ
ಬೀಳುವ )ವಠಾರದ ಹೆಬ್ಬಾಗಿಲು . ಅಲ್ಲಿ ಎದುರಾಗುವ ಮೆಟ್ಟಿಲು ರೈಲ್ವೆ ಬೋಗಿಯಂತಿದ್ದ ನಮ್ಮ ಹೆಂಚಿನ ಮನೆಗೆ ಕರೆದೊಯ್ಯುತಿತ್ತು . ಅಮ್ಮ ನಾವು ಮೂರು ಹೆಣ್ಣು ಮಕ್ಕಳು ,ಆಡಿಟ್ ಕೆಲಸವೆಂದು ತಿಂಗಳಲ್ಲಿ ಇಪ್ಪತ್ತು ದಿನಗಳು ಟೂರಿನಲ್ಲೇ ಇರುವ ಅಪ್ಪ ಇವಿಷ್ಟು ನಮ್ಮ ಸಂಸಾರ
ಆನಂದ ಸಾಗರ ! ನಮ್ಮನೆಯ ಕೆಳಗಡೆ ಎದುರು ಬದಿರಾಗಿ ಕಟ್ಟಿದ ನಾಲ್ಕೈದು ಚದರದ ಪುಟ್ಟ
ಮನೆಗಳಿರುವ ವಠಾರ ಲೋಕ . ಅಲ್ಲಿದ್ದ ನಾಲ್ಕು ಮನೆಗಳಲ್ಲಿ ಮೊದಲಿಗೆ ಆಗರ್ಭ ಶ್ರೀಮಂತ ಮನೆ ಮಾಲಿಕರ (ದೂರದ) ಪರಿಚಯವೆಂದು
ತೀರ ಅಗ್ಗದ ಬಾಡಿಗೆಗಿರುವ ಪಾರ್ವತಮ್ಮನವರ ಕುಟುಂಬ. ನನಗೀಗಲೂ ನೆನಪಿರುವುದು ಅವರ ಕಿರಿ ಮಗ ಶಂಕರ ಇಟ್ಟಿದ್ದ
(ಆಡಿಯೋ ) ಕ್ಯಾಸೆಟ್ ಲೈಬ್ರರಿ . ಅವನಿಂದ ಆಗಿನ ಕಾಲಕ್ಕೆ ಜನಪ್ರಿಯವಾಗಿದ್ದ ಚಿತ್ರ ಗೀತೆಗಳ ಕ್ಯಾಸೆಟಗಳನ್ನು ಬಿಟ್ಟಿಯಾಗಿ ಪಡೆದು “ ಬಣ್ಣ ಒಲವಿನ ಬಣ್ಣ , ನಮ್ಮೂರ
ಮಂದಾರ ಹೂವೆ , ತೆರೆ ಬಿನಾ ಜಿಂದಗಿ ಸೆ ಕೋಯಿ , ಹಂ ತುಮ್ ಇಕ್ ಕಮರೇ ಮೆ ಬಂದ್ ಹೋ “ ಹಾಡುಗಳನ್ನು
ಮನದಣಿಯ ಆಲಿಸುತ್ತ ಬದುಕಿನಲ್ಲಿ ಉಲ್ಲಾಸದ ಬಣ್ಣ ತುಂಬಿ ಕೊಳ್ಳುತ್ತಿದ್ದೆವು !
ಅವರೆದುರಿಗೆ ನಮಗೆಲ್ಲ
ಡಿಸ್ಕೌಂಟ್ ರೇಟಿನಲ್ಲಿ ತರಕಾರಿ ಕೊಡುತ್ತಿದ್ದ ರಸ್ತೆ ಮೂಲೆಗೆ ಗೂಡಂಗಡಿ ಇಟ್ಟ ಮಂಜಣ್ಣ
,ಮಡದಿ ಚಂದ್ರಿ ಮತ್ತು ಸದಾ ಚಿಲಿಪಿಲಿ ಗದ್ದಲ ಮಾಡಿಕೊಂಡಿದ್ದ ಎರಡು ಪುಟ್ಟ ಹೆಣ್ಣು ಮಕ್ಕಳು ವಾಸವಿದ್ದರು . ಅವರ ಪಕ್ಕ ಶಾಲಾ ಮೇಷ್ಟರಾದ ಪಳನಿ ಸ್ವಾಮಿಯವರ
ಕೂಡು ಕುಟುಂಬ . ನಾನು ಸಣ್ಣವಳಿದ್ದಾಗ ನಾವು ಮೂವರು ಅಕ್ಕ ತಂಗಿಯರ ಗದ್ದಲಕ್ಕೆ ಅಮ್ಮನಿಗೆ ತಲೆ
ಕೆಟ್ಟು ಹೋಂವರ್ಕಾದರೂ ಮಾಡಿ ಬರಲಿ ಎಂದು ನನ್ನನ್ನು
ಪಳನಿ ಮೇಷ್ಟ್ರ ಬಳಿ ಮನೆಪಾಠಕ್ಕೆ ಬಲವಂತವಾಗಿಯೆ
ಸಾಗು ಹಾಕುತ್ತಿದ್ದು , ಗೋಧೂಳಿ ಸಮಯಕ್ಕೆ ಒಂದು ದಂಡು ಹುಡುಗರಿಗೆ ಅವರು ಹೇಳಿ ಕೊಡುತ್ತಿದ್ದ ವ್ಯಾಕರಣ,,
ಗ್ರಾಮರು ,ಆಲ್ಜೀಬ್ರಾ ನನ್ನ ತಲೆಯಲ್ಲಿ ಗೊಬ್ಬರವಾಗಿ ಬೋರಾಗಿ ಎಷ್ಟೋ ಬಾರಿ ಅಲ್ಲೇ ತೂಕಡಿಸಿ ಮಲಗಿದ್ದೂ ಇದೆ ! ಎಚ್ಚರವಾಗಿದ್ದರೆ
ಬಾಯಾರಿಕೆ ,ಹಸಿವು ,ಮೂತ್ರ ಎಲ್ಲ ಏಕ ಕಾಲಕ್ಕೇ ಒಕ್ಕರಿಸಿ ಅವರಿಗೆ ಗೊತ್ತಾಗದಂತೆ ಕಳ್ಳ ಹೆಜ್ಜೆ
ಹಾಕುತ್ತ ಹಿತ್ತಲ ಬಾಗಿಲಿನಿಂದ ಮನೆಗೋಡಿ ಬಿಡುತ್ತಿದ್ದೆ .
ಇನ್ನು ಅವರ ಎಡ ಭಾಗಕ್ಕೆ ನಮ್ಮ ಕಥಾ ನಾಯಕಿ (ಖಳ ನಾಯಕಿ ) ಐವತ್ತರ ಆಸು ಪಾಸಿನ ಮಾಮಿ, ಮಗ (ರೌಡಿ ) ಸ್ವಾಮಿ ಮತ್ತು ವಠಾರದ ಬಾಯಲ್ಲಿ “ತಾತಾ “ ಎಂದು ಕರೆಸಿಕೊಳ್ಳುವ ಆಕೆಯ ಯಜಮಾನರ
ವಾಸ . ಸಾದು ಕಪ್ಪು ಬಣ್ಣ ,ಸಾಧಾರಣ
ಮೈಕಟ್ಟು, ಮೂಗಿನ ಎರಡೂ ಬದಿಗೆ ಹೊಳೆಯುವ ಹರಳಿನ
ಮೂಗುತಿ , ದೈವ ಭಕ್ತಿಯಲ್ಲಿ ಮಿಂದೇಳುವಂತೆ ಬಳಿದ ವಿಭೂತಿಯ ನಡುವೆ ಕಾಸಿನಗಲದ ಕುಂಕುಮ, ಹಚ್ಚೆ ಹಾಕಿಸಿಕೊಂಡ ಕೈಗಳಲ್ಲಿ
ಗಲಗಲ ಸದ್ದು ಮಾಡುವ ದಜನ್ನು ಹಸಿರು ಬಳೆಗಳು . ಮಂಡಿ ನೋವು ಎಂದು ಕಾಲಿಗೆ ಸದಾ
ಸಾಕ್ಸ್ ಹಾಕಿರುತ್ತಿದ್ದ ಮಾಮಿ ತಾತನಿಗೆ ಮೂರನೇ ಹೆಂಡತಿಯಂತೆ , ವಾಹನ ಚಾಲಕರಾಗಿದ್ದ ಅವರು ಕಾಡಿನಲ್ಲಿ ಸೇಂದಿ ಇಳಿಸುವ ಕೆಲಸಕ್ಕೆ
ಹೋಗುತ್ತಿದ್ದಾಗ ಈಕೆಯ ಮೋಹ ಪಾಶಕ್ಕೆ ಬಿದ್ದು ಮದುವೆಯಾದರಂತೆ ಎನ್ನುವ ರೋಚಕ ಕಥೆಗಳು ನಮ್ಮ ವಠಾರದಲ್ಲೆ ಹರಿದಾಡಿ ಮಾಮಿಯ ಭಯಕ್ಕೆ ಅಲ್ಲೇ ಸಾಯುತ್ತಿದ್ದವು !
ನಾವು ಆ ಮನೆಗೆ ಬಂದ ಶುರುವಿನಲ್ಲಿ ಅಮ್ಮ ಒಮ್ಮೆ ಬಟ್ಟೆ ಒಗೆದು ಒಣ ಹಾಕಿ ಒಂದು ಸಣ್ಣ ನಿದ್ದೆ ತೆಗೆದು ಹೊರ ಬಂದು ನೋಡಿದರೆ ಆಘಾತವಾಗಿತ್ತು! ತಂದೆಯವರು ಮನೆ ಖರ್ಚಿಗೆಂದು ಕಳಿಸುತ್ತಿದ್ದ ಲಿಮಿಟೆಡ್ ಹಣದಲ್ಲಿ ಕಷ್ಟ ಪಟ್ಟು ಉಳಿಸಿ ತಮ್ಮನ ಮದುವೆಗೆಂದು ಹೊಸದಾಗಿ ಹೊಲೆಸಿದ ಐದು ರೆವಿಕೆಗಳು ತಂತಿಯಿಂದ ಕಾಣೆಯಾಗಿದ್ದವು ! ಆ ಬಿರು ಬೇಸಿಗೆಯಲ್ಲಿ ಬಟ್ಟೆ ಕ್ಲಿಪ್ಪುಗಳ ಸಮೇತ ಹಾರಿಸಿಕೊಂಡು ಹೋಗುವ ಆಷಾಢದ ಗಾಳಿಯೆನಾದರೂ ಅಪ್ಪಿ ತಪ್ಪಿ ಬೀಸಿ ರೆವಿಕೆಗಳು ಕೆಳಕ್ಕೆ ಹಾರಿ ಬಿದ್ದಿರಬಹುದೆ ಎಂದು ಸುತ್ತಲೂ ಕಣ್ಣಾಡಿಸಿದರೂ ಕಣ್ಣಿಗೆ ಬೀಳದೆ ಆಶ್ಚರ್ಯ ಚಿಕಿತರಾದರು !
ಅಕ್ಕಮಹಾದೇವಿ ಮಾಮರ , ಬೆಳದಿಂಗಳು , ಕೋಗಿಲೆಗಳನ್ನು “ ನನ್ನ ಚೆನ್ನಮಲ್ಲಿಕಾರ್ಜುನನ್ನನ್ನು ನೀವು ಕಂಡಿರಾ , ನೀವು ಕಂಡಿರಾ “? ಎಂದು ಮೊರೆಯಿಡುವಂತೆ ಹೆಂಚಿನ ಮೇಲೆ ಬಾಲ ನೆಕ್ಕುತ್ತಿದ್ದ ( ಓಣಿಯ ಹುಡುಗರಿಂದ ಅಶ್ವತ್ ನಾರಾಯಣ ಮೂರ್ತಿ ಎಂದು ನಾಮಕರಣ ಮಾಡಿಸಿಕೊಂಡಿದ್ದ
ಗಡವ ) ಬೆಕ್ಕಣ್ಣ , ಅಂಗಳದಲ್ಲಿ ಮೈ ಮುದುರಿ ಬಿದ್ದುಕೊಂಡ ವಠಾರದ ವಾಚ್ಮೆನ್ ಜಾನಿ ನಾಯಿ , ಹೆಂಚಿನ ಮೇಲಿಟ್ಟ ಅನ್ನದ ಸಂಡಿಗೆಗಾಗಿ ಅಲ್ಲೇ ಹಾರಡಿ ಕೊಂಡಿರುವ ಕಾಗೆ -ಗುಬ್ಬಿ ಬಳಗವನ್ನು “ನನ್ನ ರಂಗು ರಂಗಿನ ರೆವಿಕೆಗಳನ್ನು
ನೀವು ಕಂಡಿರಾ , ನೀವು ಕಂಡಿರಾ ?“ ಎಂದು ದುಃಖದಿಂದ ಅಲವತ್ತು ಕೊಳ್ಳುವಂತಾಗಿತ್ತು ಅಮ್ಮನಿಗೆ ! ಐದು ಅಭಾಗಿನಿಯರನ್ನು ಯಾವ ಖಳ ನಾಯಕ ಅಪಹರಿಸಿದ ಎನ್ನುವ ಯಕ್ಷ ಪ್ರಶ್ನೆ ಕಾಡಿ
ಕಂಗಾಲಾಗಿದ್ದರು .
ಕೆಳಗಡೆ ಮನೆಯ ಪಾರ್ವತಮ್ಮನವರ ಮುಂದೆ ಈ ವಿಷಯ ಹೇಳಿಕೊಂಡಾಗ ಶಾಕ್ ಹೊಡೆಯುವ (ಕಟು)ಸತ್ಯವೊಂದು ಬಯಲಾಗಿತ್ತು .”ಇದೆಲ್ಲ ಕೆಳಗಿನ ಮನೆಯ ಕಳ್ಳ ಮಾಮಿಯದೆ ಕೈ ಚಳಕ ! “ ಎಂದು
ಮೆಲ್ಲನೆ ಉಸರುತ್ತ ವಠಾರದ ಪ್ರತಿಯೊಬ್ಬ ಮನೆಯವರೂ
ಆಕೆಯ ಕಳ್ಳತನದ ಫಲಾನುಭಾವಿಗಳಾಗಿ ಮನೆ ಹೊರಗಿಟ್ಟ
ಕಸಪೂರಕೆ ,ಚಪ್ಪಲಿ , ತಮ್ಮ
ಅಡುಗೆ ಕೋಣೆಯ ತೆರೆದ ಕಿಟಕಿಯಿಂದ ತಟ್ಟೆ, ಸೌಟು ,ಒಣ ಹಾಕಿದ ಬಟ್ಟೆ-ಬರೆ , ಮಕ್ಕಳು ಆಟವಾಡುತ್ತ ಅಂಗಳದಲ್ಲೆ
ಮರೆತ ಆಟಿಕೆಗಳು ಎಲ್ಲವೂ ಅವಳ ಕಳ್ಳತನಕ್ಕೆ
ಆಹುತಿಯಾಗಿದ್ದನ್ನು ಪರಿ ಪರಿಯಾಗಿ ಬಿಚ್ಚಿಟ್ಟು ,ಮಾಮಿ ಮಾಟ ಮಂತ್ರದಲ್ಲಿ ಎತ್ತಿದ ಕೈಯಾದ್ದರಿಂದ
ಅಕೆಯನ್ನು ಎದುರು ಹಾಕಿ ಕೊಳ್ಳಲು ಎಲ್ಲರು ಹೆದರುತ್ತಾರೆ ಎನ್ನುವ
ಸಂಗತಿಯಿಂದ ಅಮ್ಮನನ್ನು ಬೆಚ್ಚಿ ಬೀಳಿಸಿದ್ದರು .
“ ಇನ್ನು ನೀವು ಯಾವದಕ್ಕೂ ಹುಷಾರಾಗಿರಿ “ ಎನ್ನುವ
ಎಚ್ಚರಿಕೆಯ ಗಂಟೆಯನ್ನು ಬಾರಿಸಿ ಬೀಳ್ಕೊಟ್ಟಿದ್ದು ಇನ್ನಷ್ಟು ಚಿಂತೆಗೀಡು ಮಾಡಿತ್ತು .
ಅಂದಿನಿಂದ ಮನೆ ಕೆಲಸದ ಗಂಗಮ್ಮನಿಂದ ಮುಂಜಾನೆ
ಎಂಟಕ್ಕೇ ನಮ್ಮ ಬಟ್ಟೆ ಒಗೆಸಿ , ಮಾಮಿ ಕಾಲು
ನೋವೆಂದು ಒದ್ದಾಡಿಕೊಂಡೆ ಒಂದು ಬುಟ್ಟಿಯಲ್ಲಿ ಹೆಚ್ಚಿನ
ಬಟ್ಟೆ ರಗ್ಗು ಹೊತ್ತು ವಾರದಲ್ಲಿ ಮೂರ್ನಾಲ್ಕು ದಿನ ಮೇಲ್ಹತ್ತಿ ಬರುವುದರೊಳಗೆ ನಮ್ಮ ಬಟ್ಟೆಗಳನ್ನು ಒಣಗಿಸಿ
ತೆಗೆದಿಡುತ್ತಿದ್ದರು . ಆದರೂ ಒಮ್ಮೊಮ್ಮೆ ಭಾನುವಾರಗಳಂದು ಬೆಲೆ ಬಾಳುವ ಸೀರೆ ,ಅಪ್ಪ ಊರಿನಿಂದ
ತಂದ ಕೊಳೆಯಾದ ಡಜನ್ನು ಪ್ಯಾಂಟು ಶರ್ಟುಗಳು , ಬೆಡ್ಶೀಟುಗಳನು ಒಗೆಯುವ ಬೃಹತ್
ಕಾರ್ಯಕ್ರಮ ! ಹಾಗಾಗಿ ಧೋಭಿ ಘಾಟನ್ನೆ ಹೋಲುತ್ತಿದ್ದ ನಮ್ಮ ಮನೆಯಂಗಳದಲ್ಲಿ ಮುಂಜಾಗ್ರತ ಕ್ರಮವಾಗಿ ನಾವು ಮಕ್ಕಳೆ ಬೀಟ್
ಪೋಲಿಸರಂತೆ ಆಗಾಗ ಗಸ್ತು ತಿರುಗಿ ಬಟ್ಟೆಗಳ ಹಾಜಾರತಿ ತೆಗೆದುಕೊಂಡು ಎಲ್ಲ ಸರಿಯಾಗಿದೆ
ಎಂದು ಧೃಡ ಪಡಿಸಿಕೊಳ್ಳುತ್ತಿದ್ದೆವು. ಒಮ್ಮೆ ಕೆಳಗಿನ
ಮನೆಯ ಮಾಮಿಗೆ ಕೇಳಿಸುವಂತೆ ಅಮ್ಮನ ತಂದೆ ಪೋಲೀಸ್
ಇನ್ಸ್ಪೆಕ್ಟರಾಗಿ ರೀಟೈರಾಗಿದ್ದರೂ ಈಗಲೂ ಬೆಂಗಳೂರಿನ ಪೊಲೀಸರೆಲ್ಲರ ಪರಿಚಯವಿದೆಯೆಂದು ,ಅಷ್ಟೇ ಅಲ್ಲದೆ ಅಮ್ಮನ ಅಣ್ಣ ಸುಪ್ರೀಂ ಕೋರ್ಟಿನಲ್ಲಿ ಲಾಯರು ಎಂದೆಲ್ಲ ಕಳ್ಳ-ಕದೀಮರನ್ನು
ಹಿಡಿದ ಉದಾಹರಣೆಗಳೊಂದಿಗೆ ಕೆಲಸದವಳ ಮುಂದೆ (ಕಳ್ಳರನ್ನು ಹೆದರಿಸುವ ಭ್ರಮೆಯಲ್ಲಿ) ಎತ್ತರ
ಧ್ವನಿಯಲ್ಲಿ ಹೇಳಿದ್ದರು !
ಈ ಡೈಲಾಗಿಗೆ ಪ್ರತ್ಯುತ್ತರವಾಗಿ ಮುಂದೆ ಕೆಲವು ದಿನಗಳ ನಂತರ ಈ
ಪ್ರಸಂಗ ನಡೆಯಿತು .ನಮ್ಮ ಬಡಾವಣೆಗೆ ಮೂರು ದಿನ ನೀರು ಬರುತಿದ್ದು ನಾನು ಅಕ್ಕ ನಸುಕಿನಲ್ಲೆ ಎದ್ದು ಕೆಳಗಿನ ಕೊಳಾಯಿಯಿಂದ ಹೆಚ್ಚಿನ ಬಳಕೆಗೆಂದು ಇಟ್ಟ ಡ್ರಮ್ಮಿಗೆ ನೀರು
ತುಂಬಿಸುತ್ತಿದ್ದೆವು .ಅಂದು ಅಮ್ಮ ಕೊಟ್ಟ ಬಿಸಿ ಬಿಸಿ ಟೀ ಕುಡಿದು ಹೊರ ಬರುವಷ್ಟರಲ್ಲಿ (ಅಪ್ಪನಿಗೆ ಅವರಮ್ಮನಿಂದ ಉಡುಗೊರೆಯಾಗಿ ಬಂದ )ಕೊಳಾಯಿ ಕೆಳಗಿಟ್ಟ ತುಂಬಿದ ಹಿಂಡಾಲಿಯಂ
ಗುಂಡಿ ಕಾಣೆಯಾಗಿತ್ತು . ಅಂದು ನಸುಕಿನಲ್ಲೆ
ಮಾಮಿಯ ಕೈ ತುರಿಸಿ ತನ್ನ ಚಮತ್ಕಾರವನ್ನು ತೋರಿಸೆ ಬಿಟ್ಟಿದ್ದಳು .
ಅಮ್ಮ ಸಿಟ್ಟಿನಿಂದ ಅಂಗಳದಲ್ಲಿ ನಿಂತು ಹೊಸ ಹೊಸ ಶಬ್ಧಾಲಂಕಾರ
ಪ್ರಯೋಗಗಳಿಂದ (ಪರಿಚಯದ) ಕಳ್ಳರಿಗೆ ಹಿಡಿ ಶಾಪ
ಹಾಕುತ್ತ ಮಾಮಿಯ ಪ್ರಾಥಃಸ್ಮರಣೆ ಮಾಡಿದ್ದರು . ನಮ್ಮ
ಮರೆವಿಗೆ ನಾನು ಅಕ್ಕ ಸಹ ಅಮ್ಮನಿಂದ ಬೈಸಿಕೊಂಡು ಅಪರಾಧಿ ಪ್ರಜ್ಞೆಯಲ್ಲಿ ಬೆಂದು ಬೇಸರದ ಮೂಡಿನಿಂದಲೇ ಶಾಲೆಗೆ ಹೋಗಿದ್ದೆವು . ಇನ್ನು
ಹಿಂಡಾಲಿಯಂ ಗುಂಡಿ ಹುಡುಕಿ ಕೊಡಲು ಸುಪ್ರೀಂ ಕೋರ್ಟ್ ಲಾಯರು ,
ಪೋಲಿಸರಿಗೇನು ಹುಚ್ಚೆ ಎಂದು ಮಾಮಿ ಕಿಸಕಿಸನೆ ನಕ್ಕಿರಬಹುದು ! ಈಗಿನಂತೆ ನಮ್ಮ ವಠಾರದಲ್ಲಿ
ಸಿಸಿಟೀವಿ ಕ್ಯಾಮೆರಾ ಇದ್ದಿದ್ದಿರೆ ಮಾಮಿ ಕಥೆ ಬೇರೆಯೆ ಆಗಿರುತಿತ್ತು ಅನ್ನಿ !
ಅಂತೂ ಕಳ್ಳ ಮಾಮಿ ತನ್ನ (ಕುಲ)ಕಸಬನ್ನು ಆಗಾಗ ಪ್ರದರ್ಶಿಸಿ “ಚೋರಿ
ಚೋರಿ ಚುಪ್ಕೆ ಚುಪ್ಕೆ “ ಆಟವಾಡುವುದು ನಾವು ಬಕರಾ ಆಗುತ್ತಾ ಹಳಹಳಿಸುವುದು ಆಗಾಗ ನಡೆಯುವ ಪ್ರಕ್ರಿಯೆಗಳು !
ಮತ್ತೊಂದು ಭಾನುವಾರ ಬೆಳಿಗ್ಗೆಯೆ ತರಕಾರಿ ಅಂಗಡಿ ಮಂಜುವಿನ ಮಡದಿ ಚಂದ್ರಿಯ ಕೂಗಾಟದ ಧ್ವನಿಗಳು ಕಿವಿಗಪ್ಪಳಿಸಿದ್ದವು . ಮಗಳು
ಪುಟ್ಟಿಯ ಹುಟ್ಟು ಹಬ್ಬಕ್ಕೆ ಕೊಂಡ ಬೆಳ್ಳಿ ಕಾಲ್ಗೆಜ್ಜೆ
ಆಡುವಾಗ ಸಡಿಲವಾಗಿ ಕಳಚಿ ಬಿದ್ದದ್ದು , ದಶ
ದಿಕ್ಕುಗಳಲ್ಲಿ ತನ್ನ ಕಳ್ಳ ದೃಷ್ಟಿಯನ್ನಿಟ್ಟ
ಮಾಮಿಗಂತೂ ಇದು ಹೋಳಿಗೆ ಜಾರಿ ತುಪ್ಪದಲ್ಲಿ ಬಿದ್ದಂತಾಗಿತ್ತು . ಮುಂದಿನ ಸೀನು ಚಂದ್ರಿ ಮಾಮಿಯನ್ನು ಕಳ್ಳಿಯೆಂದು ಜರಿಯುವ ಧೈರ್ಯ
ಮಾಡಿದ್ದೂ ಅಲ್ಲದೆ ಕೂಗಾಡಿ ವಠಾರದಲ್ಲಿ( ನಾವು ಕಂಡರಿಯದ ) ಸಂಚಲನವನ್ನೆ ಸೃಷ್ಟಿಸಿದ್ದಳು .
ವಠಾರದ ಮಾಹಭಾರತ ಯುದ್ದದ ವಾಸನೆ ಸ್ವಾಮಿಗೂ ಬಡಿದು ಯಾವುದೆ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಹೊರಿಸಿದ್ದಕ್ಕಾಗಿ ಚಂದ್ರಿಯ ಜನ್ಮ ಜಾಲಾಡಿ ,” ನಿನ್ನೊಂದು ಕೈ ನೋಡಕೊಳ್ಳದೇ ಬಿಡಲ್ಲ “ ಎಂದು ಅಮ್ಮ ಮಗ ಅವಾಜ್ ಹಾಕಿದ ಪರಿಣಾಮ ಚಂದ್ರಿ ಗಡಗಡ ನಡುಗಿ ಮನೆ
ಸೇರಿಕೊಂಡಳು .ಮಾಮಿಯ ಮಾಟ -ಮಂತ್ರದ ಭಯದ ನೆರಳು ಚಂದ್ರಿಗೆ ಹಗಲು ಇರುಳು ಕಾಡಿತ್ತು ! ಖಳನಾಯಕನಂತೆ
ಮಿಂಚುತ್ತಿದ್ದ ಸ್ವಾಮಿಯನ್ನು ಕಂಡರೆ ಮೊದಲೆ ಅಂಜುತ್ತಿದ್ದ
ಮಂಜಣ್ಣನಿಗೆ ವಿಷಯ ತಿಳಿದು ಚಂದ್ರಿಗೆ ನಾಕು ಏಟು ಹಾಕುವುದರೊಂದಿಗೆ ಈ ಪ್ರಕರಣ ಮುಕ್ತಾಯ
ಗೊಂಡಿತ್ತು . ವಠಾರದ ಕಣ್ಣು ಕಿವಿಗಳು ಈ ದೃಶ್ಯಾವಳಿಗಳ ನೇರ ಪ್ರಸಾರದಿಂದ ಪಾವನಗೊಂಡವು . ಅಲ್ಲಿಗೆ
ನಮಗೆಲ್ಲ ಜ್ಞಾನೋದಯವಾದ ಒಂದು ವಿಷಯ “ ಡಾನ್(ಮಾಮಿ)
ಕೋ ಪಕಡನಾ ಮುಷ್ಕಿಲಿ ನಹಿ ನಾ ಮುಮ್ಕಿನ್ ಹೇ “
ಎನ್ನುವ ಕಹಿ ಸತ್ಯ ! ಏನೆ ಕದ್ದರೂ ಎಂದೂ ರೆಡ್ ಹ್ಯಾಂಡಾಗಿ ಸಿಕ್ಕಿ ಹಾಕಿಕೊಳ್ಳದಂತೆ ನಿಪುಣ
ಕಳ್ಳಿ ಮಾಮಿಯನ್ನು ಎದಿರು ಹಾಕಿಕೊಳ್ಳುವುದು ಅಸಾಧ್ಯ
ಎಂದು ಅರಿವಾಗಿ ನಮ್ಮ ಹುಷಾರಿನಲ್ಲಿ ನಾವಿದ್ದು
ಪರಿಸ್ಥತಿಯೊಂದಿಗೆ ರಾಜಿಯಾಗಿರುವುದೆ ಲೇಸೆಂದು ಮನಗಂಡೆವು !
ಕತ್ತಲು ಗವಿಯಂತಿದ್ದ
ಮಾಮಿಯ ಮನೆಯ ಪಡಸಾಲೆ ಗೋಡೆ ತುಂಬೆಲ್ಲ ದೇವರ ಪಟಗಳು ಆಕೆ ಮಾಡುವ ಅನಾಚಾರಕ್ಕೆ ಮೂಕ ಸಾಕ್ಷಿಯಾಗಿ ನೇತಾಡುತ್ತಿದ್ದವು
. ಒಳಗಿನ ಪುಟ್ಟ ಕೋಣೆಯಲ್ಲಿ ಇವಳ ಕುಕೃತ್ಯಗಳ ಬಗ್ಗೆ
ಕಿಂಚಿತ್ತೂ ಅರಿವಿರದ ಹಾಸಿಗೆ ಹಿಡಿದ ಯಜಮಾನ . ಗಂಡನ ಪೆನ್ಶನ್ ಹಣದಲ್ಲೆ
ಮನೆ ನಡೆಯುತ್ತಿತ್ತು .ಇನ್ನು ಮನೆಯೆ ಮೊದಲ ಪಾಠ ಶಾಲೆಯಾಗಿ ಮಾಮಿಯ ಗರಡಿಯಲ್ಲೆ ಅರಳಿದ ಕಳ್ಳ ಪ್ರತಿಭೆ ಸ್ವಾಮಿ
ಸಣ್ಣವನಿದ್ದಾಗಲೆ ಪ್ರಾಯೋಗಿಕ ನೆಲೆಯಲ್ಲಿಯೂ ಕಳ್ಳತನದ ಅಧ್ಬುತ ತರಬೇತಿ ಪಡೆದು , ಶುರುವಿನಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಹೊಸ ಹೊಸ ಡಿಗ್ರೀಗಳನ್ನು
ಪಡೆಯುವಂತೆ ರೌಡಿತನ , ದರೋಡೆ , ಗುಂಡಾಗಿರಿಯಲ್ಲಿ ತೊಡಗಿಕೊಂಡು ಅಮ್ಮನನ್ನು ಮೀರಿ ಬೆಳೆವ ಎಲ್ಲ ಲಕ್ಷಣಗಳನ್ನೂ ತೋರಿಸಿದ್ದ .
ನಮ್ಮ ಅಂಗಳದಲ್ಲಿ ಪ್ರಕಾಶಮಾನವಾಗಿ
ಬೆಳಗುತ್ತಿದ ಹೊಸ ಬಲ್ಬು ಒಮ್ಮೊಮ್ಮೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದರ ಜಾಗಕೆ ಸುಟ್ಟ ಬಲ್ಬು ಕೂರುವುದು , ಶಾಂತಮ್ಮನವರು ತವರಿಗೆ ಹೋದಾಗ ಅಡುಗೆಯಲ್ಲಿ ಮೈ ಮರೆತ ರಂಗನಾಥ ರಾಯರ ಕಣ್ ತಪ್ಪಿಸಿ ಹಾಲಿನಲ್ಲಿದ್ದ ಗೋಡೆ ಗಡಿಯಾರ ಕದ್ದಿದ್ದು , ಧನಂಜಯರಾಯರ ಸೈಕಲ್ ಬಲ್ಬು , ಅಂಗಳದಲ್ಲಿ ಒಣಹಾಕಿದ್ದ ರಾವಣ ಪಾತ್ರಕ್ಕೆ
ಉಡುತ್ತಿದ್ದ ಗುಲಾಬಿ ರೇಶಿಮೆ ಕಚ್ಚೆ -ಪಂಚೆ ಎಗರಸಿದ್ದು ಸ್ವಾಮಿಯ
ತರಬೇತಿಯ ದಿನಗಳೆ ಆಗಿದ್ದವು ಎನ್ನಬಹುದು !
ರೌಡಿ ಸ್ವಾಮಿಯ ಚರಿತ್ರೆ ಗೊತ್ತಿದ್ದ ನಮಗೆ ಇಂಥ ಸಣ್ಣ ಪುಟ್ಟ ಚೌರ
ಕೃತ್ಯಗಳಿಗೆ ಆಪಾದನೆ ಹೊರಿಸಿ ಅವನ ಕೆಂಗಣ್ಣಿಗೆ
ಗುರಿಯಾಗುವ ಧೈರ್ಯ ಮಾಡಿದ್ದೆ ಇಲ್ಲ .ಕಾರಣ ಆಡಿಟ್
ಕೆಲಸದ ಮೇಲೆ ಸದಾ ಟೂರಿನಲ್ಲೆ ಇರುತ್ತಿದ್ದ ನಮ್ಮ
ತಂದೆಯ ಗೈರು ಹಾಜರಿಯಲ್ಲಿ ಅಮ್ಮ ನಾವು ಮೂರು ಹೆಣ್ಣು ಮಕ್ಕಳ ಪ್ರಮೀಳಾ ರಾಜ್ಯ ನಮ್ಮದು .ಅವನೂ ಸಹ
ಅಮ್ಮನನ್ನು ‘ ಏನಕ್ಕಾ ! ಚೆನ್ನಾಗಿದ್ದೀರಾ,ಊಟ ಆಯ್ತಾ ? “ಎಂದು ಗೌರವದಿಂದ
ಮಾತಾಡಿಸುತ್ತ , ರಸ್ತೆಯಲ್ಲಿ ಓಡಾಡುವ ಹುಡುಗಿಯರನ್ನು ಚುಡಾಯಿಸಿದರೂ ನಮ್ಮ ವಠಾರದ ನಾವು
ಐದಾರು ಹೆಣ್ಣು ಮಕ್ಕಳ ತಂಟೆಗೆ ಎಂದಿಗೂ ಬರುತ್ತಿರಲಿಲ್ಲ ! ಇದೊಂದು ರೀತಿ ನಾವೆಲ್ಲ ಸಿನಿಮಾದಲ್ಲಿ ವಿಲ್ಲನ್ /ಖಳನಾಯಕನ ತಂಗಿಯರಂತಿದ್ದು ನಮ್ಮ ಬಡಾವಣೆಯಲ್ಲಿ ರೌಡಿ ಸ್ವಾಮಿ ವಠಾರದ ಹೆಣ್ಣು ಮಕ್ಕಳು ಎನ್ನುವ ಸುರಕ್ಷಿತ ಭಾವವೂ
ನಮ್ಮದಾಗಿತ್ತು ಅನ್ನಿ !
ಇನ್ನು ಒಂದೆರಡು ಬಾರಿ ಸ್ವತಃ ಪೊಲೀಸರೆ ವಠಾರಕ್ಕೆ ಬಂದು ಸ್ವಾಮಿಯನ್ನು ಯಾವುದೋ ಕಳ್ಳತನದ ಕೇಸಿನಲ್ಲಿ ಎತ್ತಾಕಿ ಕೊಂಡು ಹೋಗಿದ್ದು ಒಂದೆ ವಾರಕ್ಕೆ ಆವ ಹೊರಬಂದು ಮೀಸೆ ತಿರುವಿದ ಘಟನೆಗಳು ನಡೆದು ಮೇಲಂತೂ ನಮ್ಮ ವಠಾರದ ಸ್ಟೇಟಸ್ಸೆ ಬದಲಾಗಿ ಸ್ವಾಮಿ
ಬಗೆಗಿನ ಗೌರವ ಭಯಗಳು ಇಮ್ಮಡಿಗೊಂಡಿವು !
ಹೊರಗಡೆ ವಿಲ್ಲನಾಗಿದ್ದರೂ ನಮ್ಮ ವಠಾರದಲ್ಲಿ ಏನೆ ಸಮಸ್ಯೆ ಕಷ್ಟ ಎದುರಾದಾಗ ಇವ ಹೀರೋ ಆದದ್ದೂ ಇದೆ . ಒಮ್ಮೆ ನಾವು ಮನೆ ಮಂದಿಯೆಲ್ಲ ನೆಂಟರ ಮದುವೆಯಿಂದ ವಾಪಸ್ಸಾಗಿ ಮನೆ ಬೀಗ ತೆಗೆಯಲು ಹೋದರೆ ಒಳಗಿನಿಂದ ಚಿಲಕ ಬಿದ್ದು ಮುಂಬಾಗಿಲು ಲಾಕಾಗಿ ಬಿಟ್ಟಿತ್ತು . ಅಮ್ಮನ ಪೇಚಾಟ ಹೇಳತೀರದು
! ಆಗ ಸ್ವಾಮೀಗೇ ನಾವು ಶರಣು ಹೋಗಬೇಕಾದ ಪರಿಸ್ಥಿತಿ ಉಂಟಾದಾಗ ಅವ ಸಿನಿಮಾ ನಾಯಕನಂತೆ ಸರಸರನೆ ನಮ್ಮನೆ ಮೇಲೆ ಹತ್ತಿ ನಾಲ್ಕು
ಹೆಂಚುಗಳನ್ನು (ಎಕ್ಸ್ಪರ್ಟ್ ಕಳ್ಳನಂತೆ) ಎತ್ತಿ ನೇರವಾಗಿ ಮನೆಯೊಳಗೆ ಹಾಯ್ ಜಂಪ್ ಹೊಡೆದು “ ತೆರೆದಿದೆ ಮನೆ ಬನ್ನಿರೈ ಓ ಸತಿ-ಪತಿ “ ಎಂದು ಮುಖ್ಯ ದ್ವಾರದಿಂದ ನಮಗೆಲ್ಲ ಸ್ವಾಗತ
ಕೋರಿದ್ದ ! ಇದೆ ರೀತಿ ಫಜೀತಿ ನಮ್ಮ ಅಕ್ಕ ಪಕ್ಕದ ಮನೆಗಳಿಗೂ ಆಗಾದಾಗ ಕೀಲಿ ಕೈ ಇಲ್ಲದೆ (ಹೆಂಚಿನ)
ಮನೆಯೊಳಗೆ ತೂರಿಕೊಳ್ಳುವ ನಿಪುಣ ಸ್ವಾಮಿಗೇ
ಸುದ್ದಿ ಹೋಗುತಿತ್ತು .
ಏನೇ ಅನ್ನಿ ಮಾಮಿ ಕಳವು ಮಾಡುತ್ತಿದ್ದ ವಸ್ತುಗಳು ಎಲ್ಲಿ ಹೋಗುತ್ತವೆ
ಎನ್ನುವ ರಹಸ್ಯ ಒಮ್ಮೆ ಅವಳ ಮನೆಗೆ ಕೆಲಸಕ್ಕೆಂದು
ಬಂದ ರಾಜಿಯಿಂದ ತಿಳಿದಿತ್ತು . ಈಕೆ ಥೇಟ್ ರಾಬಿನ್ ಹುಡ್(robbin hood) ನಂತೆ ವಠಾರದ ಮಕ್ಕಳ ಬಟ್ಟೆ ಬರೆ, ಆಟದ ಸಾಮಾನುಗಳನ್ನು ಕದ್ದು ತನ್ನ ಹಳ್ಳಿಯಲ್ಲಿದ್ದ ಕೇರಿಯ ಬಡ ಮಕ್ಕಳಿಗೆ ಹಂಚುತ್ತಿದ್ದಳಂತೆ
! ಆದರೆ ರಾಬಿನ್ ಹುಡ್ ಶ್ರೀಮಂತರರಿಂದ ಕದ್ದು ಬಡ
ಜನರಿಗೆ ಹಂಚಿದರೆ ಮಧ್ಯಮ ವರ್ಗ , ಬಡವರಿಂದಲೇ ಕದಿಯುವ ಕೆಲಸಕ್ಕಿಳಿದ ಮಾಮಿಯದು ಮಾತ್ರ rob ಮಾಡಲೆಂದೆ ಇರುವ ಭಯಂಕರ headಉ ! ಹಳ್ಳಿಯಲ್ಲಿ
ಸುಭಗಳಂತೆ ಸೋಗು ಹಾಕಿ ಕದ್ದ ಮಾಲಿನಿಂದ
ಮಕ್ಕಳನ್ನು ಸಂತೋಷಗೊಳಿಸುವ ಆಕೆಯ ಕಳ್ಳ ಧರ್ಮ , ನೀತಿ (ಅನೀತಿ) ಸಂಹಿತೆ ನಮಗೆ ವಿಚಿತ್ರವೆನಿಸಿ
ತರ್ಕಕ್ಕೆ ನಿಲುಕದಾಗಿತ್ತು .
ಇನ್ನು
ಮನೆ ಹೊರಗಿಟ್ಟ ವಸ್ತುಗಳ ಮೇಲಷ್ಟೇ ಮಾಮಿ ಕಣ್ಣು ಹಾಕ ಬಹುದಾಗಿದ್ದರಿಂದ ಪೊರಕೆ , ಬಕೀಟು ಬಿಡಿ ಕಸದ ಡಬ್ಬಿಗಳು ಸಹ ಕೆಲಸವಾದ ಬಳಿಕ ಪಟಪಟನೆ ಮನೆ
ಸೇರಿಕೊಳ್ಳುತ್ತಿದ್ದವು .ಆದರೂ ಒಂದೆರಡು ಬಾರಿ ನಮ್ಮ ಅಲಕ್ಷ್ಯದಿಂದಾಗಿ ಊರಿಂದ
ಬಂದ ನೆಂಟರ ಶೂ ,ಚಪ್ಪಲಿಗಳು ಕಳುವಾಗಿ ನಮ್ಮನ್ನು
ಅತಿಯಾದ ಮುಜುಗರಕ್ಕೀಡು ಮಾಡಿತ್ತು .ಅಂದಿನಿಂದ ನಮ್ಮನೆಗೆ ಬರುವ ಅತಿಥಿ ಅಭ್ಯಾಗತರು (ಹರಟೆಯಲ್ಲಿ
ಮುಳುಗಿದ್ದಾಗ ) ಅವರ ಜೋಡುಗಳನ್ನು ಒಳಗೆ ಸಾಗಿಸುವ
ಕೆಲಸ ನನ್ನದೆ ಆಗಿತ್ತು !
ಹೀಗೆ
ನಾವೆಷ್ಟೆ ಜಾಗರೂಕವಾಗಿದ್ದು ಚಾಪೆಯ ಕೆಳಗೆ ತೂರಿದರೆ ಆಕೆ ಅದಕ್ಕೆಲ್ಲ ಗೋಲಿ ಮಾರೋ ಎಂದು ರಂಗೋಲಿ
ಕೆಳಗೆ ತೂರುವುದರಲ್ಲಿ ಎತ್ತಿದ ಕೈ .ಇನ್ನು ಈ ಚಿಲ್ಲರೆ ಕಳ್ಳಿಯಿಂದಾಗಿ ಕಿರಿ ಕಿರಿಯಾದರೂ ಅದೆಂದೂ ನಮಗೆ ದೊಡ್ಡ
ಪ್ರಮಾಣದ ನಷ್ಟವಾಗಿದ್ದಿಲ್ಲ . ಆದರೆ ಅವಳ ನೈತಿಕ
ದಿವಾಳಿತನಕ್ಕೆ ಸಾಕ್ಷಿಯಾದ ಈ ಘಟನೆಯನ್ನೂ ನಿಮಗೆ ಒಪ್ಪಿಸಿ ಬಿಡುತ್ತೇನೆ ! ಒಮ್ಮೆ ಬೇಸಿಗೆ
ರಜದಲ್ಲಿ ನಾವು ವಾರಿಗೆಯ ಮಕ್ಕಳು ರಾಶಿ ಮನೆಯಾಟದ ಆಟಿಕೆಗಳನ್ನು ಹರವಿಕೊಂಡು ಆಡುತ್ತಿದ್ದಾಗ ” ತಾತ ಮಲಗಿದ್ದಾರೆ ಗೊತ್ತಾಗಲ್ವಾ ? ಎಷ್ಟು ಗಲಾಟೆ
ಮಾಡ್ತಾ ಇದ್ದೀರಾ, ಬರ್ತ್ತೀನಿ ಇರಿ “ ಎನ್ನುವ
ಮಾಮಿಯ ಕರ್ಕಶ ಧ್ವನಿಗೆ ಬೆಚ್ಚಿ ರಣ ರಂಗದಿಂದ ಸೈನಿಕರು ಪಲಾಯನ ಮಾಡಿದಂತೆ ನಾವೆಲ್ಲ ಒಂದೇ
ಉಸುರಿಗೆ ಓಡಿ ಅಂಗಳದಲ್ಲಿದ್ದ ನಮ್ಮ ಬಚ್ಚಲು ಕೋಣೆಯಲ್ಲಿ
ಅಡಗಿಕೊಂಡೆವು. ಮೆಲ್ಲನೆ ಬಾಗಿಲ ಸಂದಿಯಲ್ಲಿ ಕಣ್ಣು ತೂರಿಸಿ ಇಣುಕಿ ನೋಡುವಾಗ ನಮ್ಮ
ಅಚ್ಚುಮೆಚ್ಚಿನ ಮನೆಯಾಟದ ಇಕ್ಕಳ , ಒಲೆ ,ಸ್ಪೂನುಗಳು, ಕೈ ಕಾಲು ನೆಟ್ಟಗಿದ್ದ
ಒಂದೆರಡು ಚಂದದ ಬೊಂಬೆಗಳು ಅವಳ ಸೆರೆಗಿನಲ್ಲಿ ಮರೆಯಾದ ದೃಶ್ಯಕ್ಕೆ ನಮ್ಮೆಲ್ಲರ ಮುಖ ಸಪ್ಪೆಯಾಗಿ ಹೃದಯ ವಿಲವಿಲ ಒದ್ದಾಡಿತ್ತು
. ಆದರೆ ಈ ಪ್ರಕರಣಕ್ಕೆ ವಠಾರದ ತಾಯಿಂದೆರೆಲ್ಲ ಮಾಮಿಯ ವಿರುದ್ದ ಉಸಿರೆತ್ತದೆ ಇರುವುದು ನಮ್ಮ ಮುಗ್ಧ
ಮನಸುಗಳ ತಿಳುವಳಿಕೆಗೆ ಮೀರಿದ ವಿಷಯವಾಗಿತ್ತು .
ಈ ಪ್ರಸಂಗ ನಡೆದ ವರ್ಷದಲ್ಲಿ ಎಂದಿನಂತೆ ಮಾಮಿ
ನವರಾತ್ರಿಯಲ್ಲಿ ಗೊಂಬೆ ಕೂಡಿಸಿ ವಠಾರದ ಮಕ್ಕಳನ್ನೆಲ್ಲ ಕರೆದು ಸಿಹಿ ತಿನಸು ಕೊಡುವಾಗ ಆ ಗೊಂಬೆಗಳ ಮಧ್ಯ ನನ್ನ ಕೆಂಪು ಫ್ರಾಕ್ ಹಾಕಿದ್ದ ಬೊಂಬೆಗಾಗಿ ನಾನು ಆಸೆಯಿಂದ ಹುಡುಕಿದ್ದ ನೆನಪು ಇನ್ನು
ಹಸಿಯಾಗಿದೆ !
ಅಪರೂಪಕ್ಕೆ
ಇಂಥ ಚಿಕ್ಕ ಪುಟ್ಟ ರಗಳೆಗಳಾದಾಗ ತಪ್ಪಿತಸ್ಥ ಭಾವದಿಂದ ನಮ್ಮನ್ನು ನಾವು ಶಪಿಸಿಕೊಂಡಿದ್ದೆ
ಹೆಚ್ಚು ! ಮಾಮಿ ಇಂಥ ಕಲ್ಯಾಣ ಗುಣಗಳು
ಮಾಡುತ್ತಿದ್ದರೂ ಹೊರಗಿನ ಕಳ್ಳ ಬಾರದಂತೆ ವಠಾರದ ಹೆಬ್ಬಾಗಿಲಿಗೆ ರಾತ್ರಿಯಾದರೆ ದೊಡ್ಡದಾದ ಬೀಗ ಜಡೆಯುವುದು
ಕಂಡಾಗ ” ಒಳಗೇ ಇಂಥ ಕಳ್ಳರಿರುವಾಗ ಹೊರಗಿನ ಕಳ್ಳರ್ಯಾರು ಬರ್ತ್ತಾರೆ “ ಎಂದು ನಾವೆಲ್ಲ ನಗೆಯಾಡುತ್ತಿದ್ದೆವು .
ಒಂದಿಷ್ಟೂ
ಶುದ್ದವಿಲ್ಲದ ಕೈಯಾದರೂ ತನ್ನ ಮನೆ, ಪಾತ್ರೆ - ಪಗಡ ಲಕ ಲಕ ಹೊಳೆಯುವಂತೆ ಶುದ್ಧವಾಗಿಟ್ಟಿರುತ್ತಿದ್ದ ಮಾಮಿ ವಠಾರವನ್ನೂ
ಸಹ ರಾಜಿಯಿಂದ ಗುಡಿಸಿಸಿ ತೊಳೆದು , ಕೆಳಗಿನ ಐದು ಮನೆಗಳಿಗಿದ್ದ ಎರಡು ಲೇಟ್ರೀನುಗಳನ್ನು
ರಸ್ತೆ ಗುಡಿಸುವವರಿಗೆ ಕೈಯಲ್ಲಿ ಸ್ವಚ್ಛ ಮಾಡಿಸುವ ಎಲ್ಲ ಜವಾಬ್ದಾರಿಗಳನ್ನು ಸಮರ್ಥವಾಗಿ
ನಿಭಾಯಿಸುತ್ತಿದ್ದದ್ದು ಕೆಳಗಿನ ಮನೆಯವರಿಗೆಲ್ಲ ಅನುಕೂಲವಾಗಿತ್ತು . ಇದಕ್ಕಾಗಿ ಪ್ರತಿ ಮನೆಗೆ ಎರಡು ರೂಪಾಯಿಗಳಂತೆ ಮೈಂಟೆನೆನ್ಸ್
ಶುಲ್ಕ ಸಹ ವಸೂಲಿ ಮಾಡುತ್ತಿದ್ದಳು !
ಇವೆಲ್ಲ
ಒಂದು ಕಡೆಗಾದರೆ ನಾವು ಅಕ್ಕ ಪಕ್ಕದ ಮನೆಯವರೆಲ್ಲ ಬಂಧುಗಳಂತೆ ಕಷ್ಟದಲ್ಲಿ ಒಬ್ಬರಿಗೊಬ್ಬರು
ಸ್ಪಂಧಿಸುತ್ತ ,ಒಗ್ಗಟ್ಟಿನಿಂದ ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸುತ್ತ , ಸಮರಸವೆ ವಠಾರ ಜೀವನ ಎಂದು ನಂಬಿಕೊಂಡು ತುಂಬು ಉತ್ಸಾಹ, ಜೀವನ
ಪ್ರೀತಿಯಿಂದ ಹಾಯಾಗಿದ್ದೆವು . ಅಮ್ಮನ ಬರವಣಿಗೆ
ನಿರಂತರವಾಗಿ ಸಾಗುತ್ತ ಸಾಹಿತ್ಯಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು
. ನಾವು ಮಕ್ಕಳು ನೃತ್ಯ ಸಂಗೀತಾಭ್ಯಾಸ ಮಾಡುತ್ತಾ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುವ ಮೂಲಕ ನಮ್ಮ ಹವ್ಯಾಸಗಳಲ್ಲಿ ಕ್ರಿಯಾಶೀಲರಾಗಿದ್ದು “ನಮ್ಮ ವಠಾರ ನಮ್ಮ ಹೆಮ್ಮೆ “ ಎನ್ನುವ
ಘೋಷವಾಕ್ಯವೆ ನಮ್ಮದಾಗಿತ್ತು ! ಎಡವಿ
ಬಿದ್ದರೆ ಮಾರ್ಕೆಟು , ದಿನಸಿ ಅಂಗಡಿ , ದೇವಸ್ಥಾನ .ಕ್ಲಿನಿಕ್ಕು ಎಲ್ಲ ಅನುಕೂಲವಿರುವ ಬಡಾವಣೆ
ಅಷ್ಟೆ ಅಲ್ಲ ತೊಂಬತ್ತು ರುಪಾಯಿ ಬಾಡಿಗೆಗೆ ನಾಲ್ಕು ಕೋಣೆಗಳ ವಿಶಾಲ ಮನೆಯನ್ನು ಯಾವುದೇ ಕಾರಣಕ್ಕೂ ಬಿಡಲಿಚ್ಚಿಸದೆ ಅಕ್ಕಪಕ್ಕದವರಂತೆ ಸ್ಥಾವರ ಜೀವಿಗಳಾಗಿ ಇದ್ದು ಬಿಟ್ಟಿದ್ದೆವು !
ಇನ್ನು
ಹವ್ಯಾಸ ಅಂದಾಕ್ಷಣ ನಮ್ಮ ಖಳ ನಾಯಕಿ ಮಾಮಿ ರಾಜ್ಕುಮಾರ್ ಚಿತ್ರಗಳನ್ನು ಒಂದು ಬಿಡದಂತೆ ನೋಡುವ ಸಿನಿಮಾ
ಹುಚ್ಚು ನೆನಪಾಗುತ್ತದೆ .”ನಾ ನಿನ್ನ ಮರೆಯಲಾರೆ” ಸಿನಿಮಾ ಮನೆ ಹತ್ತಿರವಿದ್ದ ಶಾಂತಿ ಚಿತ್ರ ಮಂದಿರದಲ್ಲಿ ಭರ್ಜರಿ ಹೌಸ್ ಫುಲ್ಲಾಗಿ ಓಡುತ್ತಿದ್ದಾಗ ರೌಡಿ ಸ್ವಾಮಿ ನಾವೆಷ್ಟೇ ಬೇಡವೆಂದರೂ ನಮ್ಮ ವಠಾರದ
ಮಹಿಳಾ ಮಣಿಗಳಿಗೆ ಪುಕ್ಕಟೆಯಾಗಿ ಸಿನಿಮಾ
ತೋರಿಸಿದ್ದ ! ಟಿಕೆಟ್ ಕೊಡುವವನ ಬಳಿ ಇವನದೇನು ವ್ಯವಹಾರವೂ ಏನೋ , ಒಟ್ಟಿನಲ್ಲಿ ಆ ಮಟ್ಟದ್ದಲ್ಲಿತ್ತು
ಅವನ ಪವರು, ಪ್ರಭಾವ !
ಬರೆದಷ್ಟೂ
ಹಿಗ್ಗುವ ಮಾಮಿಯ ಕಳ್ಳ ಪುರಾಣಕ್ಕೆ ಬ್ರೇಕ್ ಬೀಳುವ ಘಳಿಗೆ ಕೆಲ ವರ್ಷದ ನಂತರ ಕೂಡಿ ಬಂದಿತ್ತು. “ಮಂಡಿ
ನೋವೆಂದು ಒದ್ದಾಡಿಕೊಂಡೆ ಮೇಲ್ಹತ್ತಿ ಇಳಿದು ಕೊಂಚ ಯಾಮಾರಿದರೂ ಸಾಕು ಸಾಮಾನುಗಳನ್ನು ಗುಳುಂ ಮಾಡುತ್ತಾ
ಇದ್ದ ಮಾಮಿಯ ಕಾಲು ನೋವು ಇನ್ನು ಹೆಚ್ಚಾಗಿ ಅವಳನ್ನು ಮನೆಯಲ್ಲೇ ಕುಕ್ಕುರು ಬಡಿವಂತೆ ಮಾಡಪ್ಪ
ದೇವರೆ ಎನ್ನುವ ವಠಾರದ ಸಾಮೂಹಿಕ ಪ್ರಾರ್ಥನೆ
ಕೊನೆಗೊಮ್ಮೆ ಫಲಿಸಿತ್ತು .
ಪ್ರಜ್ಞ್ಯಾಪೂರ್ವಕವಾಗಿ ಅವಳು ಮಾಡಿದ ಕುಕೃತ್ಯಗಳನ್ನು ಕ್ಷಮಿಸುವಷ್ಟು ದೇವತಾ ಮನುಷ್ಯರು
ನಾವಾಗಿರದೆ ಭಗವಂತ ಅವಳಿಗೇನು ಶಿಕ್ಷೆ ವಿಧಿಸುತ್ತಾನೆ ಎಂದು ಕುತೂಹಲದಿಂದ ಕಾಯುತ್ತಿದ್ದೆವು “
ನಿಮಿತ್ತ ಮಾತ್ರಂ ತವ ಸವ್ಯಸಾಚಿ “ ಎನ್ನುವಂತೆ ಏನಾಗಬೇಕೋ
ಅದು ಆಗೇ ಆಗುತ್ತದೆ . ಮುಂದೆ ಎರಡೂ ಕಾಲಿನ ಮಂಡಿ
ಸಂಪೂರ್ಣ ಸವಿದು ಮಾಮಿ ವಿಪರೀತ ನೋವು ಅನುಭವಿಸುವುದು ಕಂಡು “ ಛೆ! ಹೀಗಾಗ ಬಾರದಿತ್ತು ! ಮನೆಯಲ್ಲೆ ರೆಸ್ಟ್ ತೊಗೊಳ್ಳಿ
ಮಾಮಿ , ಆಚೆ ಓಡಾಡಲೆ ಬೇಡಿ , ಮೇಲೆ ಹತ್ತಿದರೆ ಮಂಡಿ ಇನ್ನೂ ಹೆಚ್ಚು ಸವಿಯುತ್ತೆ ಹುಷಾರು “ ಎಂದು ತಮ್ಮ ಸಂತಸವನ್ನು ಹತ್ತಿಕ್ಕಿಕೊಂಡು ವಠಾರದ ಮಾತೆಯೆರೆಲ್ಲ ಸಮಾಧಾನ ಹೇಳಿ
ಬಂದಿದ್ದರು .
ನಮಗೂ
ವಠಾರಕ್ಕೂ ಇದ್ದ ಅವಿನಾಭಾವ ಸಂಬಂಧ ಹೆಮ್ಮರವಾಗಿ ಬೆಳೆದು ನಿಂತಿತ್ತು . ನಮಗೂ ರೆಕ್ಕೆ ಪುಕ್ಕ ಬಲಿತು ವಠಾರವೆಂಬ ನಮ್ಮದೇ ಪುಟ್ಟ ಪ್ರಪಂಚದಲ್ಲಿ ಭೌತಿಕವಾಗಿ,
ಬೌದ್ಧಿಕವಾಗಿ ಆಟ ತರಲೆ ಮಾಡಿಕೊಂಡೆ ಬೆಳೆದು ಓದು ಶಿಕ್ಷಣ ಪೂರೈಸಿದ್ದೆವು . ನನಗಿಂತ ವಯಸ್ಸಿನಲ್ಲಿ ಹಿರಿಯ ಹೆಣ್ಣು ಮಕ್ಕಳಿಗೆ ಮದುವೆ
ಬಾಣಂತನಗಳೂ ನಡೆದವು . ಒಂದು ವರ್ಷದ ಮಗುವಿದ್ದಾಗಿನಿಂದಲೂ
ವಠಾರ ಜೀವನ ರೂಢಿಯಾದ ನನಗೆ ಲಗ್ನವಾಗಿ ಪತಿಯ ಮನೆಗೆ ಹೊರಟಾಗ ಮನಸ್ಸು ಮೂಕವಾಗಿತ್ತು .ಅಲ್ಲಿ
ಕಳೆದ ಬಾಲ್ಯ , ಹುಡುಗಾಟಗಳ ಸವಿ ನೆನಪು ಎದೆಯಲ್ಲಿ
ಆದ್ರವಾಗಿ ಉಳಿದಿತ್ತು . ಮಾಮಿ ಎಂಬ ಖಳ ನಾಯಕಿಯ ನೆನಪು ಅವಳ ಧೈರ್ಯ ,ಹೊಂಚು
ಹಾಕಿ ಕದಿಯುವ ಚಾಕಚಕ್ಯತೆ, ಅಕೆಯಿಂದಾಗಿ ನಾವು ಪಟ್ಟ ಪರಿಪಾಟಲು ಈಗ ತಮಾಷೆ ಪ್ರಸಂಗವಾಗಿ ಬಡ್ತಿ ಹೊಂದಿದರೂ
ಕಾಲಾಂತರದಲ್ಲಿ ಒಬ್ಬ ವ್ಯಕ್ತಿಯನ್ನು ನೆನಪಿಸಿಕೊಳ್ಳುವುದು ಅವರು ಮಾಡಿದ ಕೆಲಸಗಳು , ಅವರು
ನಡೆದು ಕೊಂಡ ರೀತಿಯಿಂದಲೇ ಅಲ್ಲವೇ? ಈಗ ಮಾಮಿ ಎಲ್ಲಿದ್ದಾಳೋ ತಿಳಿಯದು .ವೃದ್ಧಾಪ್ಯದಲ್ಲಾದರೂ ಆತ್ಮಾವಲೋಕನ ಮಾಡಿಕೊಂಡು
ತನ್ನ ಕೆಟ್ಟ ಕೆಲಸಗಳಿಗೆ ಒಂದಿಷ್ಟಾದರೂ ಪಶ್ಚಾತಾಪ
ಪಟ್ಟಿರಬಹುದೇ ಎನ್ನುವ ಪ್ರಶ್ನೆ ಈಗಲೂ ನನ್ನನ್ನು ಕಾಡುತ್ತದೆ . ಆಕೆಯ ಮಗ ಸ್ವಾಮಿ ಯಾವುದೋ ದರೋಡೆ ಕೇಸಿನಲ್ಲಿ ಸಿಕ್ಕು ಬೆಂಗಳೂರು ಜೈಲಿನಲ್ಲಿ ಕಂಬಿ
ಎಣಿಸುತ್ತಿದ್ದಾನೆ ಎನ್ನುವ ಸುದ್ದಿಯೂ ನಮ್ಮ ಕಿವಿಗೆ ಬಿತ್ತು .ಮಾಡಿದ್ದರ ಪ್ರತಿಫಲವನ್ನು ತಾವೇ
ಉಣ್ಣಬೇಕು ಎಂದು ಕರ್ಮ ಸಿದ್ದಾಂತ ಹೇಳುತ್ತದಲ್ಲ !
ಇನ್ನು
ಆಗಿನ ನಮ್ಮ ವಿಶಾಲ ವಠಾರವಿದ್ದ ಜಾಗದಲ್ಲೀಗ ಆಧುನಿಕ
ವಿನ್ಯಾಸದ ಬಹು ಮಹಡಿ ಕಟ್ಟಡವೆದ್ದು ನಿಂತಿದೆ . ನಮ್ಮ ಹಳೆಯ ಹಂಚಿನ ಮನೆಯ ನೆನಪು ಹೃದಯದಲ್ಲೇ
ಆಪ್ತವಾಗಿ ಉಳಿಯುತ್ತ ಯಾವ ಕಾಲಕ್ಕಾದರೂ ಸರಿ “ನೆನೆವುದೆನ್ನ್ ಮನಂ ನಮ್ಮ ವಠಾರ ಜೀವನಂ “ ಎನ್ನುವ
ಭಾವನೆಯೆ ಮೇಳೈಸುತ್ತದೆ .
ಆರತಿ
ಘಟಿಕಾರ್