Friday, April 27, 2012

ಲೈಟು ಕಂಬ


 ಲೈಟು  ಕಂಬ

ಸೂರ್ಯ ಮುಳುಗುವ
ಹೊತ್ತಿಗೆಲ್ಲಾ ಆಗಬೇಕು ಹಾಜರು,
ಕೆಲೆಸ ಜಾಸ್ತಿ ಏನಿಲ್ಲ ....
ಬಾಯ್ತೆರೆದು , ಪಕ್ಕನೆ ನಕ್ಕು
ನಿಲ್ಲಬೇಕು
ನೋಡುತ್ತಾ ಎಲ್ಲ ಕಾರುಬಾರು

ಬಂದೊಡನೆಯೇ  ನೋವು ನಲಿವಿನ
ಕಥೆ ಹೇಳಿ ಕಾಡುವ  ಲೈಟ್ ಹುಳಗಳು....
ಇನ್ನು
ನನ್ನ ಬೆಳೆಕಿನ ಕೆಳೆಗೇ
ಗೋಬಿ ಮಂಚೂರಿ , ಪಾನಿ ಪುರಿ ಇನ್ನು ಏನೇನೂ
ಮಾರುವ ಚಿಲ್ಲರೆ ವ್ಯಾಪಾರಿಗಳು
ನನಗೂ ಸವಿಯುವ ಆಸೆ ....
ಎತ್ತರದ  ಮನುಷ್ಯ , ಬಗ್ಗಿ ಕೇಳಲಾರೆ
ದಿನವೂ ಇದೇ ನಿರಾಸೆ .

ನಾನೇನೂ ಬೆಳಗಿನ ನಿದ್ದೆ ಸವಿದೆ
ಆದರೆ ರಾತ್ರಿ ಹಗಲೆನ್ನದೆ ದುಡಿಯುವ
ರಸ್ತೆಗೂ ನಿದ್ದೆ ಬಾರದೇ....?
ಅಲ್ಲೇ
ತನ್ನದೇ ನಾರುವ ವಾಸನೆಯಲ್ಲೂ
ಲೋಕ ಮರೆತು ನಿದ್ರಿಸಿರುವ
ಕಸದ ತೊಟ್ಟಿ ಒಮ್ಮೆ ಬೆಚ್ಚಿದೇ
ನಾಯಿಗಳ  ಕರ್ಕಶ  ಬೊಗಳುವಿಕೆಗೆ .

ಜೊತೆಯಲ್ಲೇ ದುಡಿಯುವ ನನ್ನ ಗೆಳೆಯರು
ಒಮ್ಮೊಮ್ಮೆ ,ನಗದೆ , ಬೆಳಖರಿಸದೆ
ಮಂಕಾಗಿ  .ನಿಂತಿರುವರು ,
ಇವರನ್ನು ಇಲಾಜು ಮಾಡುವ ಮುಲಾಜಿಗೂ 
ಹೋಗದೆ ನಿಂತ ವಿದ್ಯುತ ಮಂಡಳಿಯವರು ,
ನಿಟ್ಟುಸಿರಿಟ್ಟು ಕಣ್ಮುಚ್ಚಿದರೆ 
 ಥೂ ! ನನ್ನೇ ಅರಸಿ ಮೂತ್ರ ಮಾಡುವ
ಹಾಳು ನಾಯಿಗಳ  ಕಾಟ ..
ಇನ್ನು ಮಳೆರಾಯನಿಗೆ  ಕಾಯಬೇಕು
ನನಗೂ ಬೇಡವೇ  ಸ್ನಾನ
ಜೊತೆಗೊಂದಿಷ್ಟು ಕೆಸರಿನ ಓಕಳಿ ಆಟ ..

ಎಲ್ಲೆಲೂ ಗೌವೆನ್ನುವ  ಕರಾಳ ರಾತ್ರಿ
ಆಗೊಮ್ಮೆ – ಈಗೊಮ್ಮೆ ಸ್ಮಶಾನ
ಮೌನ ಸೀಳಿ ಸಾಗುವ ಗಾಡಿಗಳ  ಸರತಿ
ಎಲಿಂದಲೋ ಒಮ್ಮೆ 
ಬೆಚ್ಚಿ ಬೀಳಿಸುವ ಕೂಗು
“ಹೊಡಿ ಮಗ ...ಹೊಡಿ ಮಗ ..., ಹೊಡಿ ಮಗ ,
ಲಾಂಗು , ಮಚ್ಚುಗಳ ಹಾಡು ನೆನಪಿಸಿ    
ನಡೆಯುವ ಕೊಲೆ , ಅನಾಚಾರಗಳಿಗೆ
ಮನದಲ್ಲೇ ನಡುಗಿದ ಮೂಕಪ್ರೇಕ್ಷಕ  ನಾನು .....

ಯಾರು ಸತ್ತರೇನು .... ಯಾರು ಬದುಕಿದರೇನು
ಆಗಬೇಕು ನಾನು
ನನ್ನ ಚೌಕಟ್ಟಿನಲ್ಲೇ  ನಿಂತು ಬೆಳೆಕು ನೀಡುವ
ಗಟ್ಟಿ ಕಾಂಕ್ರೀಟ್  ಹೃದಯದವನು  ....:





12 comments :

  1. ಅದೊಂದು ಅದ್ಭುತ ಅಭೂತ ಪೂರ್ವ ಕವನ. ಒಂದು ಲೈಟ್ ಕಂಬಕ್ಕೆ ಒಂದು ಮನಸ್ಸು ಕೊಟ್ಟು, ಆ ಮನಸ್ಸಿನೊಳಗೆ ಹೊಕ್ಕು, ಭಾವಿಸಿ ಅದರ ಆಸೆ ಆಕಾಂಕ್ಷೆ ಅವಸ್ಥೆ ನೋವು ನಲಿವುಗಳ ಸುಂದರ ಚಿತ್ರಣ ನಿಮ್ಮ ಕವಿತೆ.
    ಕೆಲಸ ಜಾಸ್ತಿ ಏನಿಲ್ಲ ....
    ಬಾಯ್ತೆರೆದು , ಪಕ್ಕನೆ ನಕ್ಕು
    ನಿಲ್ಲಬೇಕು....... ಇಲ್ಲಿ ಒಂದು ವಾಸ್ತವಿಕತೆ.

    ಥೂ ! ನನ್ನೇ ಅರಸಿ ಮೂತ್ರ ಮಾಡುವ
    ಹಾಳು ನಾಯಿಗಳ ಕಾಟ ........ಇಲ್ಲಿ ಒಂದು ಹಾಸ್ಯ

    ಯಾರು ಸತ್ತರೇನು .... ಯಾರು ಬದುಕಿದರೇನು
    ಆಗಬೇಕು ನಾನು
    ನನ್ನ ಚೌಕಟ್ಟಿನಲ್ಲೇ ನಿಂತು ಬೆಳೆಕು ನೀಡುವ
    ಗಟ್ಟಿ ಕಾಂಕ್ರೀಟ್ ಹೃದಯದವನು ....:... ಇಲ್ಲಿ ಒಂದು ನಿರ್ಲಿಪ್ತತೆ.

    ವಾಹ್ ಒಟ್ಟಾರೆ ಒಂದು ಸುಂದರ ಕವನ . ಒಂದು ಒಳ್ಳೆಯ ವಾರ ಪತ್ರಿಕೆಯಲ್ಲಿ ಪ್ರಕಟಗೊಳ್ಳಲು ಅತೀ ಅರ್ಹ ಕವನ.

    ReplyDelete
  2. ಅನಂತ ಧನ್ಯವಾದಗಳು ತಿರುಮಲೈ ಸರ್ ! ಹಾಗೇನೆ ಅತ್ಯಂತ ಸಂತಸ ಕೂಡ ಆಗ್ತಿದೆ ,ನನ್ನ ಬ್ಲಾಗಿಗೆ ಬಂದು ಈ ಕವನಕ್ಕೆ ಕೊಟ್ಟ ನಿಮ್ಮ ಅನಿಸಿಕೆ ಹಾಗು ಪ್ರೋತ್ಸಾಹಕ್ಕೆ !

    ReplyDelete
  3. ಗಟ್ಟಿ ಕಂಬದಂತೆ ನಿಂತ ಪ್ರತಿಮೆ. ಆ ಪ್ರತಿಮೆಯ ಬೆಳಕ ತಪ್ಪಲಲ್ಲಿ ಕ್ಷಣಕ್ಕೊಂದು ಭಾವ ಭಂಗಿಗಳು ಮಿಂಚಿನಂತೆ. ಚೆನ್ನಾಗಿದೆ ಆರತಿಯಕ್ಕ.

    ReplyDelete
    Replies
    1. This comment has been removed by the author.

      Delete
  4. ಧನ್ಯವಾದಗಳು ಪುಷ್ಪರಾಜ್ ,ನಿಮ್ಮ ಮೆಚ್ಚುಗೆಯ ನುಡಿಗಳಿಗೆ .

    ReplyDelete
  5. ನಿಮಗೆ ಶುಭವಾಗಲಿ.... ಆರತಿಯವರೇ...

    ReplyDelete
  6. ಆರತಿ.. ಲೈಟ್ ಕಂಬ ದಿನ ಮತ್ತು ರಾತ್ರಿ ಎರಡರಲ್ಲೂ ನಿದ್ದೆ ಮಾಡದೆ ನೋಡಿ ಅರಗಿಸಿಕೊಳ್ಳಬಲ್ಲುದು...ಬಹಳ ಸುಂದರ ಭಾವನಿವೇದನೆ ಲೈಟ್ ಕಂಬ ನೀವೇ ಆದಂತೆ ಕವನಿಸಿದ್ದೀರಿ. ಶುಭವಾಗಲಿ.

    ReplyDelete
  7. ಧನ್ಯವಾದಗಳು ರಾಘವೇಂದ್ರ , ಅಜಾದ ಅವರೆ ನಿಮ್ಮ ಪ್ರೋತಸಾಹಕ್ಕೆ !

    ReplyDelete
  8. ಮೊದಲಿಗೆ ಒಂದು ಬ್ಲಾಗನ್ನು ಸುಂದರವಾಗಿ ರೂಪಿಸಿ ಅದಕ್ಕೆ ಒಳ್ಳೆಯ ಮುನ್ನಿಡಿ ಬರೆದಿದ್ದೀರಿ ಮೇಡಂ, ಶುಭಾಶಯಗಳು.

    ಇಲ್ಲಿರುವ ಎಲ್ಲ ಕವನಗಳನ್ನು ಓದಿದೆ ಮತ್ತು ಇಲ್ಲಿ ಕಾಮೆಂಟಿಸುತ್ತಿದ್ದೇನೆ.

    ನೀವು ಸೂಕ್ಷ್ಮ ಮನಸ್ಸಿನ ಕವಿಯತ್ರಿ, ಭಾವಗಳ ತೋರಣವನ್ನು ಹಸನಾಗಿ ಕಟ್ಟಿಕೊಡುವ ಕಲೆ ನಿಮಗೆ ಸಿದ್ಧಿಸಿದೆ.

    ಲೈಟು ಕಂಬ ಕವನದಲ್ಲಿ ಘಟನೆಗಳಿಗೆ ಸಾಕ್ಷಿಯಾಗುವ ಅದರ ನೈಜತೆಯು ತುಂಬಾ ಚೆನ್ನಾಗಿ ಬಿಂಬಿತವಾಗಿದೆ.

    ಇನ್ನು ಮೇಲೆ ನಾನೂ ನಿಮ್ಮ ಗ್ರೇಟ್ ಫಾಲೋವರ್...

    ReplyDelete
  9. ಓದುಗರ ಆಸ್ವಾಧನೆಗೆ ಸಿಕ್ಕಂತೆ ಇದೊಂದು ಲೈಟು ಕಂಬ..ಸೂಕ್ತ ವಸ್ತುವಿಷಯ.ಕೆಲವಷ್ಟು ಗಟ್ಟಿತನವನ್ನು ಕೆಲವು ಪ್ರತಿಕ್ರಿಯೆಗಳು ನೀಡಿವೆ. ನನಗೆ ಎಲ್ಲಕ್ಕಿಂತ ಹೆಚ್ಚಾಗಿ ಖುಷಿ ಆಗಿದ್ದು ನಿಮ್ಮ ಆಸಕ್ತಿ ಮತ್ತು ಅದರ ಪ್ರಯತ್ನ. ಕವಿತೆ ಚೆನ್ನಾಗಿದೆ. ಯಾಕೆ ಇಷ್ಟವಾಗುತ್ತದೆ ಅಂದರೆ ನೋಡಿದಂತೆ ಒಳಗಣ್ಣು ತೆರೆದು ಬರೆದಿದ್ದೀರಿ. ಅದು ನಿಜವಾಗಿಯೇ ಇದೆ. ವ್ಯಾಚ್ಯಾರ್ಥ ಅಂದರೆ ಸಾಮಾನ್ಯ ಮಾತಿನಂತೆ ಓದಿಸುವ ಈ ಕೆಳಗಿನ ಸಾಲನ್ನು ಇನ್ನಷ್ಟು ತಿದ್ದಬೇಕಾಗಿ ಪ್ರಾರ್ಥನೆ.
    “ಹೊಡಿ ಮಗ ...ಹೊಡಿ ಮಗ ..., ಹೊಡಿ ಮಗ ,
    ಲಾಂಗು , ಮಚ್ಚುಗಳ ಹಾಡು ನೆನಪಿಸಿ
    ನಡೆಯುವ ಕೊಲೆ , ಅನಾಚಾರಗಳಿಗೆ
    ಮನದಲ್ಲೇ ನಡುಗಿದ ಮೂಕಪ್ರೇಕ್ಷಕ ನಾನು .....
    : ಇದನ್ನು ಹರಿತಗೊಳಿಸಿದರೆ ಕವಿತೆ ಸಂಪೂರ್ಣ... ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಪ್ರತೀ ನಿಮ್ಮ ಪ್ರಕಟಣೆಯನ್ನು ನನ್ನ mail ID : rbn045@gmail.com ಗೆ ಕಳುಹಿಸಿಕೊಡಿ.

    ReplyDelete
  10. ರವಿ ಅವರೆ ! ಎಸ್ತ್ಹೋ ದಿನಗಳ ನಂತರ ನಿಮ್ಮ ಅಭಿಪ್ರಾಯ ನನಗೆ ಸಿಕ್ಕಿದ್ದು ಅತ್ಯಂತ ಸಂತೋಷ ! ಖಂಡಿತ ನಿಮ್ಮ ಸಲಹೆ ಯನ್ನು ಗಮನ ದಲ್ಲಿ ಈಟ್ಟುಕೊಳ್ತ್ತೇನೆ. ನೀವು ನನ್ನ ಕವನದ ಪ್ರಯತ್ನಕ್ಕೆ ಕೊಟ್ಟ ಪ್ರೋತಸಾಹದ ನುಡಿಗೆ ವಂದನೆಗಳು .

    ReplyDelete